‘ಈ ಹೊತ್ತಿಗೆ’ ಕಥಾ ಸ್ಪರ್ಧೆ: ಬಿಸಿಲು

‘ಈ ಹೊತ್ತಿಗೆ’ಯ ಪ್ರತಿಷ್ಠಿತ ಕಥಾ ಸ್ಪರ್ಧೆಯ ಬಹುಮಾನ ವಿಜೇತ ಎಲ್ಲಾ ಕಥೆಗಳನ್ನೂ ‘ಅವಧಿ’ ಪ್ರಕಟಿಸುತ್ತಿದೆ.

ಈ ನಿಟ್ಟಿನಲ್ಲಿ ಎರಡನೆಯ ಬಹುಮಾನ ಪಡೆದ ಕಥೆ ‘ಬಿಸಿಲು’ ಇಲ್ಲಿದೆ.

ಈ ಕಥೆಯನ್ನು ಬರೆದವರು ಕಲಬುರ್ಗಿ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕನ್ನಡ ವಿಭಾಗದ ವಿದ್ಯಾರ್ಥಿ ಕಪಿಲಾ ಪಿ ಹುಮನಾಬಾದೆ 

ಕಪಿಲಾ ಪಿ ಹುಮನಾಬಾದೆ 

ತಣ್ಣನೆಯ ಕೈಯೊಂದು ಚಂಡಕ್ಯಾನ ಹಣೆ ಮೇಲೆ ಕೈಯಾಡಿಸಿ ಎಚ್ಚರಿಸಿದಂತಾಯ್ತು. ಆಗತಾನೆ ಒದ್ದಾಡಿ ಒದ್ದಾಡಿ ಮಲಗಿದ್ದ ಚಂಡಕ್ಯಾನ ಇನ್ನೂ ಹದವಾಗದ ನಿದ್ದೆ ತಟ್ಟನೆ ಎಚ್ಚರಗೊಳಿಸಿತು. ಆ ಗಾಢ ಕತ್ತಲಿನೊಳಗೆ ಅವ ಆ ತಣ್ಣನೆಯ ಕೈ ಹುಡಕಲು ಹೋಗಲಿಲ್ಲ. ಗಾಳಿ ಇಲ್ಲದಿದ್ದರೂ ಮುಖ ಕೌದಿಯೊಳಗೆ ತುರುಕಿ ಮಲಗಿದ, ಕೈಕಾಲು ಗಡಗಡ ನಡುಗುತ್ತಿದ್ದವು. ಜೋರಾಗಿ ಉಚ್ಚೆ ಬಂದಂತಾಯ್ತು, ಎದ್ದು ಹೊರಗಡೆ ಹೋಗಬೇಕಂದ ಧೈರ್ಯ ಸಾಲಲಿಲ್ಲ. ಇಲ್ಲೇ ಉಚ್ಚೆ ಮಾಡಿಕೊಂಡರೆ?, ಹಾಸಿಗೆ ಹಸಿಯಾದ್ರೆ? ಅವ್ವ ಮುಂಜಾನೆ ಒದಿಯೊಂದು ಗ್ಯಾರಂಟಿ ಅಂದಕೊಂಡ ಆದರೂ ಅವನಿಗೆ ತಡಕೊಳ್ಳಕ್ಕೆ ಆಗಲಿಲ್ಲ. ಮೆಲ್ಲಗೆ ಮುಖದ ಮೇಲಿನ ಕೌದಿ ಸರಿಸುತ್ತ ಮುಚ್ಚಿದ ಕಣ್ಣು ಇನ್ನೂ ಜೋರಾಗಿ ಮುಚ್ಚಲು ಪ್ರಯತ್ನಿಸುತ್ತಿದ್ದ. ಅವನಿಗೆ ಕಣ್ಣು ತೆರೆಯಲು ಕತ್ತಲು ಬಿಡಲಿಲ್ಲ. ಮತ್ತೇ ಮಲಗಿ ಉಚ್ಚೆ ತಾಳಿಕೊಳ್ಳಲು ಪ್ರಯತ್ನಿಸಿದ ಆಗಲಿಲ್ಲ, ಅವನಿಗೆ ಗೊತ್ತಿಲ್ಲದೆ ಕೌದಿಯೆಲ್ಲ ಹಸಿ ಆಯ್ತು. ಮುಂಜಾನೆ ಏಳುವುದು ಹೇಗೆ ಅನ್ನುವ ಚಿಂತೆಯಲ್ಲಿದ್ದವನಿಗೆ ನಿದ್ದೆ ಬಂದು ಕಣ್ಣಲ್ಲಿ ಬಿದ್ದದ್ದು ತಿಳಿಯಲಿಲ್ಲ. ಅವನ ಈ ಒದ್ದಾಟಗಳಿಗೂ, ನಿದ್ದೆಗೂ ಸಂಬಂಧವಿಲ್ಲದೆ ರಾತ್ರಿ ನಕ್ಷತ್ರಗಳುಟ್ಟು ಕಂಗೊಳಿಸುತ್ತ ಸಿಂಗರಿಸಿಕೊಂಡಿತ್ತು.

ಚಂಡಕ್ಯಾ ಪ್ರತಿರಾತ್ರಿಯೂ ಹೀಗೆ ಭಯಗೊಳ್ಳುತ್ತಿದ್ದ. ಹೀಗೆ ಭಯಗೊಂಡು ಹಾಸಿಗೆಯಲ್ಲಿ ಕಣ್ಣು ಮುಚ್ಚಿ ಎಚ್ಚರದಿಂದಿರುತ್ತಿದ್ದ ಅವನು ಪ್ರತಿದಿನವು ಮಲಗೋದು ತಡವಾಗುತ್ತಿತ್ತು. ಚಂಡಕ್ಯಾನ ಅವ್ವ ಬೆನ್ನಿಗೆ ಗುಮ್ಮಿದಾಗಲೇ ಹಾಸಿಗೆ ಬಿಟ್ಟು ಠಣ್ ಅಂತಿದ್ದ. ಪ್ರತಿನಿತ್ಯದಂತೆ ಇವತ್ತು ಅವನವ್ವ ಹಾಸಿಗೆ ಮೂಸಿ ನೋಡಿದಳು. ಉಚ್ಚೆ ವಾಸನೆಯಿಂದ ಹಾಸಿಗೆ ಗಬ್ಬೆದ್ದು ಹೋಗಿತ್ತು. ಪ್ರತಿನಿತ್ಯದಂತೆ ಅವನಿಗೊಂದಿಷ್ಟು ಬೈಗುಳಗಳ ಸುರಿಮಳೆ ಸುರಿಸಿ ಸ್ನಾನ ಮಾಡಿಸಿ ನೀಟಾಗಿ ತಲೆ ಹಿಕ್ಕಿ ಸ್ಕೂಲಿಗೆ ಓಡಿಸಿದಳು.

ಹತ್ತಾರು ದೇವರುಗಳ ಹರಕೆ ಹೊತ್ತು ಹಡೆದ ಈ ಗಂಡು ಹೀಗೆ ದಿನ ರಾತ್ರಿ ಹಾಸಿಗೆಯಲ್ಲಿ ಉಚ್ಚೆ ಮಾಡೊದು ನೋಡಿ, ನಾ ಊರ ದೇವರಿಗಿ ಬೇಡಿ ಇಂಥ ಗಂಡಸ ಹಡದೇನೆ ಯವ್ವ ಅಂತ ಹಣೆಗೆ ಕೈಹಚ್ಚಿ ಕೂರುತ್ತಿದ್ದಳು. ಚಂಡಕ್ಯಾನ ಕಂಡು ಅವರಪ್ಪ ಸಹ ಚಿಂತೆಯಲ್ಲಿದ್ದ. ಈ ಚಿಂತೆಗೆ ಮೂಲ ಕೆದಕುತ್ತ ಹೋದರ ದೊಡ್ಡದಿದೆ. ಆಗಷ್ಟೇ ಬಿಸಿಲೇರಿ ನಿಂತ ಮುಗಿಲು ಮಿರಿ ಮಿರಿ ಮಿಂಚುತ್ತಿತ್ತು. ಚಂಡಕ್ಯಾನ ಅಪ್ಪ ಬಿಸಿಲಿನತ್ತ ನೋಡಿ ಥೂ ಅಂತ ಉಗುಳಿದ.

ಚಂಡಕ್ಯಾ ಸ್ಕೂಲ್ ಬಿಟ್ಟ ಮೇಲೆ ಎಲ್ಲಾ ಹುಡುಗರಂತೆ ಆಟಕ್ಕೆ ಹೋಗುತ್ತಿರಲಿಲ್ಲ. ಸೀದಾ ಮನೆಗೆ ಬರುತ್ತಿದ್ದ. ಅಜ್ಜಿಯೆದುರು ಕೈಕಾಲು ಮುಖ ತೊಳದುಕೊಂಡು ಕೂರುತಿದ್ದ. ಕೆಲಸಕ್ಕೆ ಹೋದ ಅವ್ವ ಅಪ್ಪ ಮನೆಯಲ್ಲಿ ಇರುತ್ತಿರಲಿಲ,್ಲ ಅಜ್ಜಿಯೊಬ್ಬಳೆ ಇರುತ್ತಿದ್ದಳು. ದೇವರ ಕೋಣೆಯಲ್ಲಿಯೇ ಇರುತ್ತಿದ್ದ ಅವಳು. ಚಂಡಕ್ಯಾನಿಗೆ ಕಾಯುತ್ತಿದ್ದಳು. ಸದಾ ಕತ್ತಲು ತುಂಬಿರುತ್ತಿದ್ದ ಆ ಕೋಣೆಯಲ್ಲಿ ಅಜ್ಜಿ ಒಂದು ವಸ್ತುವೆಂಬಂತೆ ಲೀನವಾಗಿ ಹೋಗಿರುತ್ತಿದ್ದಳು. ಯಾರಾದರೂ ಬಂದು ಒಂದೆರೆಡು ಮಾತಾಡಿದರೆ ಅವರು ಕೇಳಿದ್ದಕ್ಕೆ ಬೇಕಾದಷ್ಟೇ ಮಾತು ಸೇರಿಸಿ ಸುಮ್ಮನಾಗುತ್ತಿದ್ದಳು. ಮೊಮ್ಮಗ ಚಂಡಕ್ಯಾ ಮಾತ್ರ ಅವಳ ಜೀವವಾಗಿದ್ದ. ಚಂಡು ಚಂಡು ಅಂತ ಕರೆಯುತ್ತ, ಅವನ ತಲೆ ಸವರಿ ಕಣ್ಣು ಮಂಜಾಗಿದ್ದರೂ ಹೇನು ತೆಗೆಯುತ್ತ, ಗದರುತ್ತ ಅವನೊಂದಿಗೆ ಮಗುವಾಗಿರುತ್ತಿದ್ದಳು. ಅವಳೊಳಗಿನ ಮೌನ ಯಾರೂ ಕೇಳಿಸಿಕೊಳ್ಳುತ್ತಿರಲಿಲ್ಲ. ವಯಸ್ಸಾದ ಮುದುಕಿ ಅರುಳು ಮರಳು ಅಂತ ಸುಮ್ಮನಾಗುತ್ತಿದ್ದರು. ಒಮ್ಮೊಮ್ಮೆ ಅಜ್ಜಿ ಹೇಳುವ ಕಥೆಗಳಿಗಿಂತ ಅವಳೆ ಮತ್ತಷ್ಟು ನಿಗೂಢವಾಗಿ ಅವನಿಗೆ ಕಾಣುತ್ತಿದ್ದಳು.

ಚಂಡಕ್ಯಾನ ತಲೆತುಂಬಾ ದಟ್ಟ ಕೂದಲು, ಕೈಕಾಲು ಸಣ್ಣಗಿದ್ದವು, ಕಣ್ಣು ಗುಂಡಗೆ ಅಗಲವಾಗಿ ನೋಡುವವರಿಗೆ ಕಣ್ಣೊಳಗೆ ಬಿದ್ದು ಹೋಗುತ್ತೇವೇನೋ ಅನ್ನುವಂತಿದ್ದವು. ಜೇಬು ಬಿಚ್ಚಿದ ಅಂಗಿ, ಆಗಾಗ ಕೈಕೊಡುವ ಚೆಡ್ಡಿಯ ಚೈನು, ಅವನ ಸ್ಕೂಲ್ ಬ್ಯಾಗಿನ ಹೆಗಲಿಗೆರಿಸುವ ಒಂದು ಪಟ್ಟಿ ಕಡಿದು ಹೋಗಿತ್ತು. ಚಂಡಕ್ಯಾನಿಗೆ ಇದು ಅತ್ಯಂತ ಕಿರಿಕಿರಿ ಕೊಡುವ ಸಂಗತಿ. ಒಂದು ಕೈಯಲ್ಲಿ ಅದನ್ನು ಎಳೆದುಕೊಂಡು ಹಿಡಿದೆ ನಡೆಯಬೇಕಿತ್ತು, ಇವುಗಳನ್ನು ಸಂಭಾಳಿಸಿಕೊಳ್ಳುತ್ತ ಸ್ಕೂಲಿಗೆ ಹೇಗೊ ಹೋಗಿ ಬರುತ್ತಿದ್ದ.

ಚಂಡಕ್ಯಾನಿಗೆ ಬಿಸಿಲಂದ್ರೆ ತುಂಬಾ ಇಷ್ಟ. ಅವನಿಗೆ ರಾತ್ರಿಗಳು ಪ್ರತಿದಿನದ ವನವಾಸದಂತೆ ಇದ್ವು. ಸ್ಕೂಲಲ್ಲಿ ಯಾರೊಂದಿಗೂ ಬೆರಿತಾ ಇರಲಿಲ್ಲ. ತನ್ನ ಪಾಡಿಗೆ ತಾನಿರೋ ಹುಡುಗ. ಸದಾ ಮುಗಿಲು ನೋಡ್ತಿದ. ಅವನಿಗೆ ಬಿಸಿಲಲ್ಲಿ ಮಿರಿಮಿರಿ ಮಿಂಚುವ ಮುಗಿಲಂದ್ರೆ ತುಂಬಾ ಇಷ್ಟ. ಆ ಗಾಢಾವಾದ ಮುಗಿಲಲ್ಲಿ ಬಿಳಿಮೋಡದ ಆಕಾರಗಳು ಅವನಿಗೆ ವಿಚಿತ್ರವಾಗಿ ಕಾಣುತ್ತಿದ್ವು. ನೀಲಿ ಕಾಗದದ ಮೇಲೆ ಯಾರೋ ಬಿಳಿ ಉಂಡೆಗಳ ಚಿತ್ರ ಬಿಡಿಸಿದಂತೆ ಅವನಿಗೆ ಕಾಣಿಸುತ್ತಿದ್ದವು. ಕ್ಲಾಸಿನಲ್ಲಿಯು ಕಿಟಕಿ ಪಕ್ಕವೆ ಕೂರುತಿದ್ದೆ ಅವನಿಗೆ ನೀಲಿ ಮುಗಿಲಲ್ಲಿ ಸಂಚರಿಸುವ ಆ ಬಿಳಿಮೋಡಗಳ ಆಕಾರಗಳ ಬಗ್ಗೆ ವಿಚಿತ್ರ ಸೆಳೆತವಿತ್ತು. ಅವುಗಳನ್ನು ದಿಟ್ಟಿಸುತ್ತ ಕೂರುತಿದ್ದ. ಆ ಬಿಳಿ ಮೋಡಗಳು ಒಮ್ಮೊಮ್ಮೆ ಚದುರುತ್ತಿದ್ದವು ಮತ್ತು ಒಂದಕ್ಕೊಂದು ಡಿಕ್ಕಿ ಹೊಡೆದು ದೊಡ್ಡದಾಗುತ್ತಿದ್ದವು ಮುಗಿಲು ತುಂಬಾ ಮೆತ್ತಿಕೊಂಡ ಈ ಬಿಳಿಮೋಡಗಳು ಅವನಿಗೆ ಪುಸ್ತಕದಲ್ಲಿ ನೋಡಿದ ಹಿಮಾಲಯ ಪರ್ವತಗಳೇನೋ ಅನಿಸುತ್ತಿತ್ತು. ಅಜ್ಜಿ ಹೇಳುವ ಸ್ವರ್ಗ ಈ ಬಿಳಿಬಂಡೆಗಳಲ್ಲಿಯೇ ಇರಬಹುದೇ ? ದೇವರುಗಳೆಲ್ಲ ಇದರೊಳಗೆ ಅರಮನೆ ಕಟ್ಟಿಕೊಂಡಿರಬಹುದೆ? ಇವೆ ಪ್ರಶ್ನೆಗಳು ಅವನ ತಲೆ ಕುಕ್ಕುತ್ತಿದ್ದವು.
ಬರುಬರುತ್ತ ಅವನ ಆಸಕ್ತಿ ಇನ್ನಷ್ಟು ಕೆರಳಿಹೊಯ್ತು. ರಸ್ತೆಯಲ್ಲಿ ನಡೆದುಕೊಂಡ ಹೋಗುವಾಗಲು ಅವನ ಮುಖ ಮೇಲೆ ಇರತಿತ್ತು. ಮೋಡಗಳು ಅವನ ಕಣ್ಣೆದುರೆ ಒಮ್ಮೊಮ್ಮೆ ದೊಡ್ಡದಾಗುತ್ತ ಒಂದರಿಂದ ಒಂದು ಬಿಡಿಸಿಕೊಂಡು ಸಣ್ಣದಾಗುತ್ತ ಆಟ ಆಡುತ್ತಿವೆ ಏನೋ ಅನಿಸುತ್ತಿತ್ತು. ವಿಜ್ಞಾನದ ಮೇಸ್ಟ್ರು ಹೇಳುವ ಮುಗಿಲಿನ ಕುರಿತು ಅವರ ಮಾತುಗಳು ಅವನಿಗೆ ಎಲ್ಲಾ ಕಲ್ಪಿತ ಅನ್ನಿಸುತ್ತಿದ್ದವು. ಅವನು ಒಳಗೊಳಗೆ ಈ ಮಾಸ್ತರಗ ಒಯ್ದು ಅಜ್ಜಿಗಿ ಒಂದು ಸಲ ಭೇಟಿ ಮಡಸಬೇಕು ಅನ್ಕೊತಿದ್ದ.

ಅವನಿಗೆ ಚಳಿಗಾಲ, ಮಳೆಗಾಲ ಅಂದ್ರೆ ಸಾಕು ಅಷ್ಟಾಗಿ ಮುಗಿಲು ರುಚಿಸುತ್ತಿರಲಿಲ್ಲ. ಬರೀ ಹೆಪ್ಪುಗಟ್ಟಿದ ಕಪ್ಪು ಮೋಡಗಳು ಕಪ್ಪುಮೋಡಗಳು, ಒಮ್ಮೊಮ್ಮೆ ಚಳಿಗಾಲದಲ್ಲಿ ಬರಿಮೈ ಮುಗಿಲು ನೋಡಿ, ಬೆತ್ತಲೆ ಮುಗಿಲು ಥೋ! ಅಸಹ್ಯ ಅಂತಿದ್ದ. ಅವನಿಗೆ ಬಿಸಿಲು ಬೇಕು. ಮೈ ಅರಳಸೋಕೆ, ಮುಗಿಲು ನೋಡಿ ಚಿತ್ರ ಕಲ್ಪಿಸಿಕೊಳ್ಳುವುದಕ್ಕೆ. ಅವನ ನೋಟಬುಕೊಂದರಲ್ಲಿ ಬರೀ ಮೋಡ ತುಂಬಿದ ಮುಗಿಲಿನದೆ ಚಿತ್ರಗಳು, ಒಂದು ಕಡೆ ಸುಡುತ್ತಿರುವ ಸೂರ್ಯ,ನೀಲಿ ಮುಗಿಲು ಅದರೊಳಗೆ ಬಿಳಿ ಆಕಾರಗಳು ಒಂದೊಂದು ವಿಚಿತ್ರವಾಗಿರುತ್ತಿದ್ದವು. ನಿನ್ನೆ ನೋಡಿದ ಜಾಗದಲ್ಲಿ ಇವತ್ತು ಆ ಮೋಡ ಇರತಿರಲಿಲ್ಲ. ಅವನಿಗೆ ಬಹಳ ಬೇಜಾರಾಗುತ್ತಿತ್ತು.

ಒಮ್ಮೊಮ್ಮೆ ಕಿಟಕಿಯಿಂದ ಹಾರಿ ಹೋಗಿ ಮೋಡಗಳು ನಿಂದರಸಬೇಕು ಅನಕೊತಿದ್ದ. ಅವನು ಬೆಳೆಯುತ್ತ ಹೋದಂತೆ ಅವನಿಗೆ ಈ ಬಿಳಿ ಆಕಾರಗಳು ನೋಡಿ ಸುಮ್ಮನೆ ಇರೋಕೆ ಆಗಲಿಲ್ಲ. ಇವುಗಳು ಯಾಕೆ ಹೀಗಿವೆ ? ಇವುಗಳು ಎಲ್ಲಿಗೆ ಹೋಗ್ತವೆ? ದಿನಾಲು ಮುಗಿಲಲ್ಲಿ ಇವು ಎಲ್ಲಿಂದ ಬಂದು ಸೇರತವೆ? ಅಂತ ತಲೆಕೇಡಿಸಿಕೊಳ್ಳುತ್ತಿದ್ದ. ಸೈನ್ಸ್ ಟೀಚರಿಗೆ ಕೇಳಿದರೆ ಅದು ಅನಿಲ, ಆವಿ, ಗಾಳಿ ಅದು ಇದು ಅಂತ ಪುರಾಣ ಬಿಗಿತಾರೆ ಅಂತ ಗೊತ್ತಾಗಿತ್ತು ಅವನಿಗೆ. ಇವುಗಳ ಬಗ್ಗೆ ಸರಿಯಾದ ವಿವರಣೆ ಕೊಡಲು ಅಜ್ಜಿಯಿಂದ ಮಾತ್ರ ಸಾಧ್ಯವೆಂದು ತಿಳಿದುಕೊಂಡಿದ್ದ.

ದಿನಾಲು ತಾನು ನೋಡಿದ ವಿಶಿಷ್ಟ ಆಕಾರಗಳು ಅಜ್ಜಿಗೆ ಒಂದು ಇಂಚೂ ಬಿಡದೆ ವಿವರಿಸುತ್ತಿದ್ದ. ಅಜ್ಜಿ ಒಂದೊಂದು ಬಿಳಿ ಆಕಾರಕ್ಕೂ ಒಂದೊಂದು ಕಥೆ ಕಟ್ಟುತ್ತಿದ್ದಳು. ಬರುಬರುತ್ತ ಅವನಿಗೆ ಅಜ್ಜಿ ಕಥೆಗಳೆಲ್ಲ ನಿಜಾ ಅನ್ಸೊಕೆ ಶುರುವಾಯ್ತು.
ಅಜ್ಜಿ ದೊಡ್ಡ ಬಂಡೆಗಲ್ಲಿನಂತ ಬಿಳಿ ಮೋಡ ಕೂಂತಿತ್ತು ಇವತ್ತು ಮುಗಿಲಲ್ಲಿ. ಅದಕ್ಕೆ ಎರಡು ಚೂಪಾದ ಕೊಂಬುಗಳಿದ್ವು ಮತ್ತೆ ಅದು ಮುಂದೆ ಮುಂದೆ ಹೋಗತ್ತಿತ್ತು. ಅದರ ಮೇಲೆ ಹಾರಾಡೋ ಬಿಳಿ ಬೂದಿಯಂತಹದು ಕಾಣಸತ್ತಿತ್ತು ಅಂತ ಹೇಳಿದ. ಅಜ್ಜಿಗೆ ಅವನು ಹೇಳಿದ ಆಕಾರ ಸರಿ ಅನಿಸಲಿಲ್ಲ. ನೊಟಬುಕ್ಕಿನಲ್ಲಿ ಬಿಡಿಸಿದ ಚಿತ್ರ ತೀರಾ ಕಣ್ಣೆದುರು ಸಮೀಪ ತಂದು ದಿಟ್ಟಿಸಿ ನೋಡಿದಳು. ಅದೊಂದು ವಿಚಿತ್ರಕಾರದ ಮೋಡ ಹೀಗೆ ಅಂತ ಹೇಳೊಕೆ ಬತರ್ಿರಲಿಲ್ಲ. ಚಲಿಸೋ ಮೋಡನೇ ಆ ಪೇಪರಿನೊಳಗೆ ಇಟ್ಟಂತೆ ಅದ್ಭುತವಾಗಿ ಚಿತ್ರ ಬಿಡಿಸಿದ್ದ. ಅಜ್ಜಿ ಅದಕ್ಕೊಂದು ಕಥೆ ಕಟ್ಟಿ ಹೇಳಿದಳು…

ಚಂಡಕ್ಯಾಗೆ ಅಜ್ಜಿ ಪ್ರೀತಿಯಿಂದ ಚಂಡು ಅಂತ ಕರಿತ್ತಿತ್ತು. ಊರ ಹೊರಗಿನ ಹುಡುಗರು ಕರೆದರೆ ಸಿಡಿಮಿಡಿಗೊಳ್ಳುವ ಅವನು. ಹಲ್ಲಿಲ್ಲದ ಬಾಯಲ್ಲಿ ಅಜ್ಜಿ ಚಂಡು ಎಂದಾಗಲೊಮ್ಮೆ ಕಿವಿ ಬಿಚ್ಚಿ ಕುಳಿತಿಕೊಳ್ಳುತ್ತಿದ್ದ.

ಆ ಬಿಳಿಕೊಡುಗಳ ಮೇಲೆ ಯಮ ಕೂತು ಸವಾರಿ ಮಾಡ್ತಿದಾನೆ ಚಂಡು, ಆ ಬಂಡೆಗಲ್ಲುಗಳ ಹಿಂದೆ ಹುಲಿ ಅಡಕೊಂಡಿದೆ ಅದಕ್ಕೆ ಹೊರಗೆ ಬರೋಕೆ ಅಂಜಿಕೆ, ಆ ಬೂದಿ ತರಹ ಹಾರತ ಇದೆಯಲ್ಲ ಅದು ಮುಗಿಯದ ದೊಡ್ಡ ದೆವ್ವ. ಹುಲಿ,ಸಿಂಹ, ನರಿ ತಿಂದು ಬದೋಕೋ ದೆವ್ವ ಕಣೋ ಅದು ಚಂಡು. ನೀ ಬರದಿರೋ ಚಿತ್ರದಲ್ಲಿ ನೋಡು. ಇಡೀ ಮೋಡ ಮುಂದೆ ಮುಂದೆ ಹೋದಂಗೆ ಆಗ್ತಿದೆಯಲ್ಲ, ಆ ರಾಕ್ಷಸಿ ಬಂಡೆಗಲ್ಲು ಸರಸಿ ಯಾವುದಾದರೂ ಪ್ರಾಣಿ ತಿನ್ನೋಕೆ ಸಿಗುತ್ತಾ ಅಂತ ಹುಡುಕತಿದೆ. ಮೋಡಕೆ ಎದುರಾಗಿ ಇನ್ನೊಂದು ಮೋಡ ಬರತಿದೆ ನೋಡು ಅದರೊಳಗೆ ಈ ಬಂಡೆಗಲ್ಲು ಹಿಂದಿರೋ ಯಾವುದೋ ಪ್ರಾಣಿಯ ತಾಯಿ ಇರಬಹುದು. ತನ್ನ ಬಳಗವೆಲ್ಲ ಆ ಹುಲಿ ರಕ್ಷಣೆಗೆ ಕರಕೊಂಡ ಬತರ್ಿದೆ. ಮುಗಿಲಲ್ಲಿ ಈ ರಾಕ್ಷಸ ಇರೋ ಮೋಡ ಫಳಾರನೆ ಒಡದ ಹೋಯಿತು ನೋಡು. ಯಾವುದೇ ಆಹಾರ ಸಿಗಲಿಲ್ಲಂದ್ರೆ ಸಿಟ್ಟಿಗೆದ್ದು ಆ ರಾಕ್ಷಸ ಹಿಂಗೆ ಮಾಡುತ್ತೆ. ಅಂತ ಅಜ್ಜಿ ಕಥೆ ಮುಗಿಸಿ ಮೌನವಾದಳು. ಜನ ಹಾಸಿಗೆಯಿಂದ ಎದ್ದು ಸೂರ್ಯನಿಗೆ ಭಯ ಭಕ್ತಿಯಿಂದ ಯಾಕೆ ಸಮಸ್ಕಾರೆ ಮಾಡುತ್ತಾರೆ ಅಂತ ಈಗ ಅವನಿಗೆ ಗೊತ್ತಾಯ್ತು. ಮುಗಿಲಿನಲ್ಲಿ ಏನೋ ಶಕ್ತಿಯಿದೆ ರಾತ್ರಿ ನಕ್ಷತ್ರಗಳು, ಹಗಲಲ್ಲಿ ನೀಲಿ ಮುಗಿಲು, ಸುಡುವ ಸೂರ್ಯ, ಯಾರೋ ಹೋಗಿ ಮುಗಿಲಿಗೆ ನೇತುಹಾಕಿದಂತಿರುವ ಕಂದೀಲಿನಂತಹ ಚಂದ್ರ ಇವೆಲ್ಲ ಒಂದೇ ಮುಗಿಲಲ್ಲಿ ಹೇಗೆ ಎಂಬ ಅಚ್ಚರಿ ಪಡುತ್ತಿದ್ದ…

ದಿನ ಹೀಗೆ ಒಂದೊಂದು ಮೋಡದ ಚಿತ್ರಕ್ಕೂ ಒಂದೊಂದು ಕಥೆ ಅಜ್ಜಿ ಕಟ್ಟುತ್ತಿದ್ದಳು. ಒಂದಿನ ವಿಚಿತ್ರ ಮೋಡದ ಚಿತ್ರ ತಂದು ಅಜ್ಜಿಗೊಪ್ಪಿಸಿದ ಚಂಡಕ್ಯಾ ಉದ್ದವಾಗಿದ್ದ ಮೋಡ ಮಂಚದ ತರಹ ಇತ್ತು. ಅದರ ಮೇಲೆ ಯಾರೋ ಮಲಗಿದಂತೆ ಕಾಣುತ್ತಿತ್ತು. ಮೋಡಕ್ಕೆ ಕಾಲು ಮೂಡಿದಂತೆ. ಆ ಮೋಡ ಯಾರೋ ಹೊತ್ತು ಸಾಗಿಸುತ್ತಿದ್ದರು. ಮಂಚದ ಮೇಲೆ ಮಲಗಿದ್ದಂತೆ ಇದ್ದ ಯಾವುದೋ ಪ್ರಾಣಿ ಒಮ್ಮಿಂದೊಮ್ಮೆಲೆ ಅವನ ಕಣ್ಣೆದುರೆ ಛಿದ್ರವಾಗಿ ಒಡೆದು ಹೊಯ್ತು.

ಚಂಡು ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿ ಸಾಯಲೆಬೇಕಪ್ಪ, ನಾಯಿ ಬೆಕ್ಕು, ಕುರಿ ಸಾಯೋ ಹಂಗೆ ನಮಗೂ ಕೊನೆ ಅಂತ ಇರುತ್ತೆ. ನಾನು ಒಂದಿನ ಸಾಯ್ತೆನೆ. ಸತ್ತು ಆ ಮೋಡಗಳ ಮೇಲೆ ಮಲಗ್ತೇನೆ. ನಾವು ಕೆಟ್ಟವರಾಗಿದ್ರೆ ದೇವರು ಮೋಡ ಒಡೆದು ನಮಗೆ ಚೂರು ಚೂರು ಮಾಡುತ್ತಾನೆ. ನಾವು ಒಳ್ಳೆಯವರಾಗಿದ್ರೆ. ಮೋಡದ ಮೇಲೆ ಒಯ್ದು ಮುಗಿಲು ತುದಿ ಮುಟ್ಟಿಸುತ್ತಾನೆ ಅಂತ ಹೇಳಿ ಅಜ್ಜಿ ಕಣ್ಣು ಮುಚ್ಚಿ ಕೂತಳು.

ಮರುದಿನ ಯಾವ ಮೋಡ ಒಡೆದರು ತೀವ್ರ ದುಃಖಕ್ಕೆ ಒಳಗಾಗ್ತಿದ್ದ. ಅಜ್ಜಿ ಹೇಳಿದ ಕಥೆ ಅವನೊಳಗೆ ಹೊಸ ಗದ್ದಲವೆ ಎಬ್ಬಿಸಿತು. ಒಡೆದ ಪ್ರತಿ ಮೋಡಕ್ಕೂ ಯಾವುದೋ ವ್ಯಕ್ತಿ ಇವತ್ತು ಸತ್ತಿರಬಹುದು ಅದಕ್ಕೆ ಮೋಡ ಒಡದು ಹೋಯಿತು ಅನ್ಕೊತಿದ್ದ. ಅವನೊಳಗೆ ಸಾವಂದರೆ ಗೊತ್ತಿದದ್ದು ಒಂದೇ ಸಂಗತಿ, ಅವನು ಪ್ರೀತಿಯಿಂದ ಸಾಕಿದ ನಾಯಿಮರಿಯೊಂದು ಒಂದು ಮುಂಜಾನೆ ಅವನು ಹಾಸಿಗೆಯಿಂದ ಎದ್ದಾಗ ಸುಮ್ಮನೆ ಅಂಗಳದಲ್ಲಿ ಬಿದ್ದುಕೊಂಡಿತು. ಅದರ ಬಾಯತುದಿಯಲ್ಲಿ ಇರುವೆಗಳು ಒಡಾಡುತ್ತಿದ್ದವು, ಅದರ ಹೊಟ್ಟೆ ಮೇಲಿಂದೆಲ್ಲ ಓಡಾಡುತ್ತಿದ್ದವು. ಇರುವೆಗಳು ಜಾಡಿಸಿ ತೆಗೆದ, ನಾಯಿಮರಿ ಎತ್ತಿ ಅದರ ನಾಲ್ಕು ಕಾಲುಗಳ ಮೇಲೆ ನಿಲ್ಲಿಸಲು ನೋಡಿದ ನಿಲ್ಲಲಿಲ್ಲ. ಪುಸಕ್ಕನೆ ಬೀಳುತಿತ್ತು. ಆಗ ಅವನಪ್ಪ ಸತ್ತ ನಾಯಿ ಹೆಂಗ ಕಾಲ ಮ್ಯಾಲ ನಿಂದರತದೋ ಒಯ್ದು ದೂರ ಬೀಸಾಕಿ ಬಾ ಅಂತ ಅಂದಾಗಲೇ ಅವನಿಗೆ ಗೊತ್ತಾಯ್ತು, ಸಾವಂದರೆ ನಮ್ಮ ಸಮೀಸ ಇದ್ದವರನ್ನೂ ಒಯ್ದು ದೂರ ಬಿಟ್ಟು ಬರುವುದು. ಅವನು ಆ ನಾಯಿ ಸತ್ತ ದಿನ ಅದನ್ನು ಮೋಡದಲ್ಲಿ ಹುಡುಕುತ್ತಿದ್ದ. ಅದು ಅಲ್ಲಿ ಕಾಣದಕ್ಕೆ ಭಯಗೊಂಡಿದ್ದ. ಎಲ್ಲಿ ಹೊಯಿತೋ ಏನೋ ? ಪುಟ್ಟ ನಾಯಿಮರಿ, ಅಜ್ಜಿ ಹೇಳೊ ಹಂಗೆ ಅದಕ್ಕೆ ಮುಗಿಲು ತುದಿಯವರೆಗೂ ಮೋಡದ ಮೇಲೆ ನಡೆಯೋಕೆ ಸಾಧ್ಯನಾ ? ಹೀಗೆ ಯೋಚಿಸಿ ಯೋಚಿಸಿ ಮೆತ್ತಗಾದ.

ಮೂರನೇ ಕ್ಲಾಸಿನಲ್ಲಿ ಓದುವ ಚಂಡಕ್ಯಾನಿಗೆ ಅಜ್ಜಿ ಸಂಜೆ ಹೇಳುತ್ತಿದ್ದ ಕಥೆಗಳು. ರಾತ್ರಿ ಮಲಗಿದ್ದಾಗ ಸಿನಿಮಾದಂತೆ ಚಿತ್ರರೂಪ ತಾಳಿ ಕಣ್ಮುಂದೆ ಬರುತ್ತಿದ್ದವು. ಅವನು ಅದರಿಂದ ಭಯಗೊಳುತ್ತಿದ್ದ. ಅಜ್ಜಿ ಕಲ್ಪನೆಯಲ್ಲಿ ಅರಳಿದ ದೆವ್ವಗಳೆಲ್ಲ ರಾತ್ರಿ ಅವನಿಗೆ ನಿದ್ದೆ ಮಾಡಲು ಬಿಡುತ್ತಿರಲಿಲ್ಲ. ಚಂಡಕ್ಯಾನಿಗೆ ಬಿಳಿಮೋಡಗಳ ಕುರಿತು ಇಷ್ಟು ಆಸಕ್ತಿ ಕೆರಳಲು ಕಾರಣವಾದ ಘಟನೆಗಳ ಬಗ್ಗೆ ಅಜ್ಜಿ ಹೇಳುವ ಕಥೆಯೊಂದಿದೆ.

ಚಂಡಕ್ಯಾ ಹುಟ್ಟಿದಾಗ, ಅವರವ್ವ ಹೊಲಕ್ಕೆ ಸೇದಿ ಕಳೆಯೋಕೆ, ಅಲ್ಲಿನ ಸಣ್ಣ ಪುಟ್ಟ ಕೆಲಸ ಮಾಡೋಕೆ ಹೋಗಬೇಕಾಗಿತ್ತು. ಆಳುಗಳಿಗೆ ಕೂಲಿ ಕೊಟ್ಟು ಸೇದಿ ಕಳಿಸುವಷ್ಟು ಶಕ್ತಿ ಇರಲಿಲ್ಲ. ಇವರ ಹೊಲದಲ್ಲಿ ಒಂದು ಮರವಿತ್ತು ಅಲ್ಲಿ ಸೀರೆಯಿಂದ ಜೋಳಿಗೆ ಕಟ್ಟಿ ಕೂಸಿಗೆ ಮಲಗಿಸುತ್ತಿದ್ದಳು. ಮಧ್ಯಾನ ಕಿರ್ ಅನ್ನುವ ಬಿಸಿಲಲ್ಲಿ ಕೂಸು ಅಳುವಾಗ ಹಾಲು ಕುಡಿಸಿ ಮತ್ತೆ ಕೆಲಸಕ್ಕಿಳಿಯುತ್ತಿದ್ದಳು, ಕೂಸು ಹೊಟ್ಟೆ ತುಂಬಿದ ಮೇಲೆ ಕೈಕಾಲು ಬಡಿಯುತ್ತ ಆಡುತ್ತಿತ್ತು. ಬರುಬರುತ್ತ ಆ ತೆಳುವಾದ ಸೀರೆ ಪರದೆಯಾಚೆ ಮುಗಿಲಲ್ಲಿ ಕಾಣುವ ಬಿಳಿ ಮೋಡಗಳ ಅತ್ತಿಂದಿತ್ತ ಓಟ ನೋಡಿ ಖುಷಿಗೊಂಡು ದಿಟ್ಟಿಸುತ್ತ ಮಲಗುತ್ತಿತ್ತು. ಮುಂದೆ ಬೆಳೆಯುತ್ತ ಹೋದಂತೆ ಆ ಗಿಡದ ಕೆಳಗೆ ಕೂತು, ಮಲಗಿ ಮುಗಿಲು ದಿಟ್ಟಿಸುತ್ತಿದ್ದ. ಅವನವ್ವ ಇವನ ಈ ಏಕಾಗ್ರತೆ, ಮುಗಿಲನತ್ತ ಬೀರುತ್ತಿರುವ ಅವನ ಶೂನ್ಯ ದೃಷ್ಠಿ ನೋಡಿ ಎಲ್ಲಿ ನನ್ನ ಮಗ ಸನ್ಯಾಸಿ ಆಗ್ತದೋ ಅನ್ಕೊತಿದ್ದಳು. ಅಜ್ಜಿ ಹೇಳುವ ಈ ಕಥೆಯೊಳಗೆ ನಿಜವೆಷ್ಟೋ ? ಗೊತ್ತಿಲ್ಲ.

ಊರಿನ ವಿಶಾಲವಾದ ಬಯಲಿನ ಒಂದು ಮೂಲೆಯಲ್ಲಿ ಅವನ ಸ್ಕೂಲಿತ್ತು. ಬೀಸಿ ಬರುವ ಗಾಳಿಗೆ ಅಲ್ಲಿದ್ದ ಗಿಡಮರಗಳ ತಲೆತೂಗಿ ತಂಪನ್ನು ನೀಡುತ್ತಿದ್ದವು. ಮಧ್ಯಾನ ಬಿಸಿ ಊಟವಾದ ಮೇಲೆ ಎಲ್ಲ ಹುಡುಗರು ಆಟ ಆಡುತ್ತಿದ್ದರೆ ಇವನು ಯಾವುದೋ ಒಂದು ಮರ ಹಿಡಿದು ಅದರ ಕೆಳಗೆ ಕೂತು ಬಿಡುತ್ತಿದ್ದ. ಕೈಯಲ್ಲಿ ಬಿಳಿ ಹಾಳೆಯ ಡ್ರಾಯಿಂಗ್ ಬುಕ್, ಒಂದಿಷ್ಟು ಬಣ್ಣದ ಸ್ಕೇಚುಗಳು ಹಾಗೇ ಮುಗಿಲನ್ನು ದಿಟ್ಟಿಸುವುದು ಚಿತ್ರ ಬಿಡಿಸುವುದು ಮಾಡುತ್ತಿದ್ದ. ಅವನ ಸರೀಕರೆಲ್ಲ ಇವನ ಈ ಚಿತ್ರಗಳ ಬಗ್ಗೆ ಯಾವುದೇ ಆಸಕ್ತಿ ತೋರಿಸುತ್ತಿರಲಿಲ್ಲ. ಎಲ್ಲಾ ಹಾಳೆಗಳ ಮೇಲು ಬರೀ ಮೋಡದ ಚಿತ್ರಗಳು. ಅವ ಬಳಸುತ್ತಿದ್ದ ಬಣ್ಣಗಳು ಸಹ ಕೆಲವೆ ಕೆಲವು. ಉಳಿದವುಗಳ ಕ್ಯಾಪ್ ಸಹ ಅವ ತೆಗೆದಿರಲಿಲ್ಲ.

ಒಮ್ಮೊಮ್ಮೆ ಮುಗಿಲು ದಿಟ್ಟಿಸುತ್ತ ನೋಡುವಾಗ ಛಿದ್ರವಾದ ಮೋಡಗಳು ಅವನ ಮೈಮೇಲೆ ಬಿದ್ದಂತೆ ನಡುಗಿ ಹೋಗುತ್ತಿದ್ದ. ಹೀಗೆ ಒಂದಿನ ಮುಗಿಲು ನೋಡುವಾಗ ಯಾವುದೋ ಪುಟ್ಟ ಪ್ರಾಣಿಯ ಆಕಾರದಲ್ಲಿದ್ದ ಮೋಡ ನೋಡಿ ಅದರ ಚಿತ್ರ ಬಿಡಿಸಿದ. ಅದು ಅಜ್ಜಿಗೆ ತೋರಸಿಬೇಕೆಂಬ ಅವಸರದಲ್ಲಿದ್ದ. ಆವತ್ತು ಮುಗಿಲಲ್ಲಿ ಕಿರ್ ಎನ್ನುವ ಬಿಸಿಲು ಬಿದ್ದಿತ್ತು. ಆ ಗಾಢ ನೀಲಾಕಾಶದ ಕಡಲಿನ ಮಧ್ಯೆ ಆ ಪುಟ್ಟ ಪ್ರಾಣಿ ಆಕಾರದ ಬಿಳಿ ಚಿತ್ರ ಯಾರೋ ಬಿಡಿಸಿಟ್ಟಂತಿತ್ತು.

ಇವನ ಮೋಡಗಳ ಆಸಕ್ತಿ ನೋಡಿ ಮೆಸ್ಟ್ರೊಬ್ಬರು ಲೇ ಚಂಡಕ್ಯಾ ಅವು ಒಬ್ಬೊಬ್ಬರ ಕಣ್ಣಿಗಿ ಒಂದೊಂದು ತರಹ ಕಾಣ್ತವ. ಅವು ತಲಿಗಿ ಹಚ್ಚಿಕೊಂಡು ಯಾರ ತಿರುಗಾಡತಾರೋ? ನಿನ್ನ ತಲಿಯೊಳಗ ಏನಿರತದ ಅದೇ ಮಾಡದಾಗ ಇರ್ತದ ಅಂದರು. ಅವರ ಈ ಮಾತು ಅಜ್ಜಿ ಕಥೆಗಳ ಮುಂದೆ ಚಂಡಕ್ಯಾನಿಗೆ ನಿರಾಸೆ ಹುಟ್ಟಿಸಿದ್ದವು ಮತ್ತು ಒಂದಿಂಚೂ ಸಹ ಅವನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ಪುಟ್ಟ ಪ್ರಾಣಿಯ ಮೋಡದ ಚಿತ್ರ ಹಿಡಿದುಕೊಂಡು ಬರುತ್ತಿದ್ದ ಚಂಡಕ್ಯಾನೊಳಗೆ, ಆ ಪ್ರಾಣಿ ನನ್ನ ನಾಯಿಮರಿಯೇ ಆಗಿರಲಿ ಎಂದು ಮನಸ್ಸಿನೊಳಗೆ ಬೇಡಿಕೊಳ್ಳುತ್ತಿದ್ದ. ಅಜ್ಜಿ ನನ್ನ ನಾಯಿಮರಿಯದೇ ಕಥೆ ಹೇಳಲೆಂದು, ಪಟಪಟನೆ ಅಂಗಳದಲ್ಲಿ ಕೈಕಾಲು ತೊಳೆದುಕೊಂಡ, ಹಿಮ್ಮಡಿ ಸಹ ತೊಯ್ದಿರಲಿಲ್ಲ. ಪಡಸಾಲಿಯ ಮೂಲೆಯಲ್ಲಿ ಬ್ಯಾಗಿಟ್ಟು ಅವಸರ ಮಾಡಿ ಡ್ರಾಯಿಂಗ್ ಬುಕ್ ತೆಗೆದ. ದೇವರ ಕೋಣೆಯೊಳಗೆ ಕಾಲಿಟ್ಟದೆ ತಡ ಅವನ ಪಾದ ತಣ್ಣಗಾಗಿ ಮೈಯಲ್ಲ ಚಳಿ ಹೊಕ್ಕಿದಂತಾಯ್ತು. ಒಳಗೊಳಗೆ ನಡುಕಿದ. ಅವನಿಗೆ ಮೊದಲ ಸಲ ಹೀಗಾಯ್ತು. ಒಂದು ಸಣ್ಣ ಬೆಳಕಿಂಡಿಯೂ ಇಲ್ಲದ ಆ ಕೋಣೆಯಲ್ಲಿ ಅಜ್ಜಿ ಕಾಣಿಸಲಿಲ್ಲ. ಇನ್ನಷ್ಟು ಕತ್ತಲನ್ನು ದಿಟ್ಟಿಸಿ ನೋಡಿದ, ದೇವರ ಜಗುಲಿಯೆದುರು ಅಜ್ಜಿ ಮಲಗಿದ್ದಳು. ಸದಾ ಗೋಡೆಗೆ ಬೆನ್ನು ತಾಕಿಸಿ ಕುಳಿತಿಕೊಳ್ಳುವ ಅಜ್ಜಿ ಮಲಗಿದ್ದನ್ನು ನೋಡಿ ದೂರದಿಂದಲೇ’ ಯವ್ವ ಮಲಕೊಂಡಿ? ಅಂತ ಧ್ವನಿ ತೆಗದ. ಪ್ರತಿಕ್ರಿಯೆ ಬರಲಿಲ್ಲ. ಗಾಢ ನಿದ್ದೆ ಹತ್ತಿರಬೇಕಂತ ಸುಮ್ಮನಾದ. ಅಜ್ಜಿಗೆ ಮೊದಲೆ ಕಿವಿ ಕೇಳಿಸಲ್ಲ ನಾ ಅಂದಿದ್ದು ಎಲ್ಲಿ ಕೇಳಸಬೇಕು ಆಕಿಗಿ ಅಂದು ‘ ಅವಳ ಮೈಅಲುಗಾಡಿಸಿ ಯವ್ವ ನಿದ್ದಿ ಜೋರೆ ಹತ್ಯಾದೇನ? ಅಂತ ಕೇಳಿದ. ಯಾವುದೇ ಉತ್ತರ ಬರಲಿಲ್ಲ. ಅವನ ಕೈಯೊಳಗಿನ ಚಿತ್ರ ಅವನಂತೆ ಕಥೆಗಾಗಿ ಕಾಯುತಿತ್ತು. ಅಜ್ಜಿ ಏಳಲಿಲ್ಲ. ಅವಳ ಮೂಗಿನಲ್ಲಿ ಓಡಾಡುವ ನೋಣಗಳು ನೊಡಿದ, ದೂರ ಹೋಗಿ ಬಿದ್ದಿದ್ದ ಅವಳ ಬಡಗಿ ನೋಡಿದ ಯಾಕೋ ವಿಚಿತ್ರ ಅನಿಸಿತು. ಒಮ್ಮಿಂದೊಮ್ಮೆಲೆ ಸತ್ತ ನಾಯಿ ಮರಿ ನೆನಪಿಗೆ ಬಂತು. ಅಜ್ಜಿ ಬಗ್ಗೆ ಹಾಗೆಲ್ಲ ಊಹಿಸುವುದು ತಪ್ಪೆಂದು ಎರಡು ಗಲ್ಲ ಹಿಡಿದು ತಪ್ಪು ತಪ್ಪು ಮಾಡಿಕೊಂಡು ಜಗುಲಿಗೆ ನಮಸ್ಕಾರ ಮಾಡಿದ. ಏನೋ ಭಯ ಆದಂತಾಗಿ ಜೋರಾಗಿ ಓಡುತ್ತಾ ರೂಮಿನಾಚೆ ಬಂದ.

ಮನೆಯೆದುರಿನ ಬೀದಿ ಅನಾಥವಾಗಿತ್ತು. ಅಂಗಳದಲ್ಲಿ ಯಾವ ಪಕ್ಷಿಗಳು ಸಹ ಅಲ್ಲಿಟ್ಟ ನೀರು ಕಾಳಿಗೆ ಕೆಳಗಿಳಿಯುತ್ತಿರಲಿಲ್ಲ. ಸುಮ್ಮನೆ ಅಡ್ಡಾದಿಡ್ಡಿ ಬೀಸುತ್ತಿದ್ದ ಬಿಸಿ ಗಾಳಿ ಒಮ್ಮೊಮ್ಮೆ ಮೌನವಾಗುತ್ತಿತ್ತು. ಕೈಯೊಳಗಿನ ಚಿತ್ರ ಮತ್ತೆ ಮತ್ತೆ ನೋಡಿದ ಅಜ್ಜಿ ನೆನಪಾದಳು. ಹೋಗಿ ಮತ್ತೊಮ್ಮೆ ಎದಿರಬಹುದೆ ನೋಡಿಕೊಂಡು ಬಂದ, ಮಲಗಿದ್ದಳು. ಹೊರಗೆ ಬಂದು ಕಟ್ಟೆ ಮೇಲೆ ಕೂತು ಕಾಲು ಅಲುಗಾಡಿಸುತ್ತಿದ್ದ. ಅಲ್ಲೇ ಬಿಡಿ ಸೇದುತ್ತ ಕೂತಿದ್ದ ಸೂರಪ್ಪ ಯಾಕಲೇ ಚಂಡಕ್ಯಾ ಈ ಹೊತ್ತನಾಗ ಬಂದು ಕಟ್ಟಿಗಿ ಕುಂತಿದ್ದಿ, ನಿಮ್ಮ ಆಯಿ ಇಲ್ಲೇನ? ಅಂತ ಕೇಳಿದ.
ಚಂಡಕ್ಯಾ ಮರು ಉತ್ತರಿಸಲಿಲ್ಲ. ಸುಮ್ಮನಾಗಿದ್ದ. ಸೂರಪ್ಪ ನಾ ಏನಾದರೂ ಕೇಳಬಾರದ ಕೇಳದಾನ? ಅಂತ ಬೀಡಿ ಬಾಯೊಳಗಿಟ್ಟುಕೊಂಡು ಹೊಗೆ ಮುಗಿಲಿಗೆ ಬೀಡುತ್ತ ಎತ್ತಲೋ ಹೊರಟು ಹೋದ. ಆಗಾಗ ಬಂದು ಮುದುಕಿಗೆ ಮಾತಾಡಿಸುವ ಇನ್ನೊಂದು ಮುದುಕಿ ಸಂಗವ್ವ ಬರುತ್ತಿದ್ದಳು, ಚಂಡಕ್ಯಾ ಅವಳಿಗೆ ನೋಡಿ ಖುಷಿ ಪಟ್ಟು ಮನೆಯೊಳಗೆ ಕರೆದ. ಸಂಗವ್ವ ಮೆಲ್ಲಗೆ ಅಂದಾಜಿಸುತ್ತ ನೆಲದ ಮೇಲೆ ಹೆಜ್ಜೆ ಎತ್ತಿ ಇಡುತ್ತಿದ್ದಳು, ಒಳಗೆ ಹೋಗಿ ಮಲಗಿದ ಮುದುಕಿಯನ್ನು ನೋಡಿದವಳೆ. ಅವಳಿಗೆ ಎಲ್ಲಾ ಅರ್ಥವಾಯಿತು. ಸತ್ತ ಮುದುಕಿಯ ಸುದ್ಧಿ ಪಾರಾಗ ಹೆಂಗ ತಿಳಸಬೇಕಪ್ಪ ಅಂತ ಯೋಚಿಸುತ್ತಿದ್ದ ಮುದುಕಿ ಚಂಡಕ್ಯಾ ಹೋಗಿ ಸೂರಪ್ಪಗ ಕರಕೊಂಡ ಬಾ ಅಂದಳು. ಊರೊಳಗೆ ಯಾರೆ ಸಾಯಲಿ ಇವನಿಗಿ ಮೊದಲ ಸುದ್ಧಿ ಹೋಗಬೇಕು. ಜನರಿಗೆ ಸೇರಿಸಿ ಮುಂದಿನ ಕಾರ್ಯಗಳು ಮಾಡುತ್ತಿದದ್ದು ಇವನೆ.
ಚಂಡಕ್ಯಾ ಸೂರಪ್ಪನ ಮನೆಯ ಹೊಸ್ತಿಲೊಳಗೆ ಇನ್ನೂ ಕಾಲಿಟ್ಟರಲಿಲ್ಲ. ಬೀಡಿ ಸೇದುತ್ತ ಕೂತಿದ್ದ ಸೂರಪ್ಪ ಎದುರಾದ. ಸಂಗವ್ವ ನಿನಗ ನಮ್ಮ ಮನಿಗಿ ಬರಲಕ ಹೇಳ ಅಂದಾಳ ಅಂತ ಚಂಡಕ್ಯಾ ಅನ್ನುವುದೆ ತಡ, ಚಂಡಕ್ಯಾ ಸಣ್ಣವನೆದು ಸಹ ನೋಡದೆ ಸೂರಪ್ಪ ಇದು ಅಜ್ಜಿಯದೆ ಸಾವಿನ ಸುದ್ಧಿಯಂದು ಖಾತ್ರಿಗೊಂಡು ಮಾತಿಗಿಳಿದ.

ತುಂಬು ಜೀವ ನಡಿಸಿ ಹೊಗ್ಯಾಳ ಬಿಡು, ಮನಿಮಂದಿ ಕೈಲಿಂದ ಸಾಯೋ ಟೈಮನಾಗ ಬ್ಯಾನಿ ಬಿದ್ದು ಅನಸಕೊಳ್ಳಲಾರದೆ ಕಣ್ಣು ಮುಚ್ಚಿ ಮುದುಕಿ ಪುಣ್ಯ ಕಟ್ಟಕೊಂಡಳ ಬಿಡು ಅಂತ ಗೊಣಗುತ್ತಲೇ ಮಾತು ಮುಂದುವರೆಸಿದ. ಮನುಷ್ಯನ ಜೀವಕ ಗ್ಯಾರಂಟಿ ಅನ್ನೋದೆ ಇರಲ್ಲ. ಯಾವಾಗ ಹೋಗ್ತದ ಗೊತ್ತೇ ಆಗಲ್ಲ ನೋಡ ಚಂಡಕ್ಯಾ ಅಂದ.

ಅಜ್ಜಿ ಸತ್ತು ಹೋಗಿದ್ದಾಳೆಂದು ಅವನಿಗೆ ಈಗ ಗೊತ್ತಾಯಿತು. ಅವನ ನೋಟಬುಕ್ಕಿನೊಳಗಿನ ಮೋಡದ ಚಿತ್ರ ಬರೀ ಚಿತ್ರವಾಗಿಯೇ ಉಳಿಯಿತು. ಅದಕ್ಕೊಂದು ಕಥೆ ಕಟ್ಟಿ ಜೀವ ತುಂಬಬೇಕಿದ್ದ ಜೀವವೆ ಸತ್ತು ಹೋಗಿತ್ತು.

ಅಜ್ಜಿ ಮುಗಿಲು ತುದಿಗೊಂಟ ನಡೆದು ಹೋಗಬೇಕಲ್ಲ?. ವಯಸ್ಸಾದವಳು ಹೇಗೆ ಹೊಗುತ್ತಾಳೋ ಏನೋ? ಅನ್ನುವ ದುಃಖದ ಜೊತೆ ಇನ್ನೂ ಮುಂದೆ ಕಥೆ ಇಲ್ಲದೆ ತೇಲುವ ಮೋಡಗಳು ನೋಡುವುದು ಹೇಗೆ, ಉಗುಳಿನುಂಗಿದ. ತಲೆ ಎತ್ತಿ ಖಾಲಿ ಮುಗಿಲು ನೋಡಿದವನಿಗೆ ಅಳು ಒಮ್ಮಿಂದೊಮ್ಮೆಲೆ ಬಂತು. ಪಾರ ಮುದುಕಿಗಿ ಭಾಳ ಹಚ್ಚಕೊಂಡ ಇತ್ತ ಅನಸ್ತದ ಅಂದುಕೊಂಡ ಸೂರಪ್ಪ. ಚಂಡಕ್ಯಾನಿಗೆ ನಾಯಿ ಮರಿ ಸತ್ತ ದಿನದ ನೆನಪು ಬಂತು. ಅವನಿಗೆ ಸಾವಂದರೆ ಹತ್ತಿರ ಇದ್ದವರನ್ನೂ ಒಯ್ದು ದೂರ ಬಿಟ್ಟು ಬರುವುದೆಂದು ಆವತ್ತು ನಾಯಿ ಮರಿ ಬಿಟ್ಟು ಬರುವಾಗಲೆ ಅರ್ಥ ಮಾಡಿಕೊಂಡಿದ್ದ. ಅಜ್ಜಿ ಯಾಕೆ ಸತ್ತಳು ? ಮನುಷ್ಯ ಯಾಕೆ ಸಾಯಬೇಕು? ಅಜ್ಜಿ ಇನ್ನೂ ಹೇಳಬೇಕಾಗಿದ್ದ ಕಥೆಗಳು ಅವಳಿಂದ ಕೇಳುವುದು ಹೇಗೆ ? ಹೀಗೆ ಅವನೊಳಗಿನ ಪ್ರಶ್ನೆಗಳ ತಂತು ಬೆಳೆಯುತ್ತಲೆ ನಡೆಯುತ್ತಿದ್ದವನಿಗೆ ಗೊತ್ತೆ ಇಲ್ಲದಂತೆ ಮನೆ ಬಂದು ಬಿಟ್ಟಿತ್ತು. ಮನೆಯೆದುರು ನಿಂತ ಜನ ನೋಡಿ, ಅವನ ಮೊದಲಿನ ಮೌನಕ್ಕೆ ಮತ್ತಷ್ಟು ಮುಗಿಲಿನ ಒಣ ಮೌನ ಬೆರೆತು, ಗಂಟಲೊಳಗಿನ ಹಸಿ ಮಾತುಗಳು ಮರೆತ…

‍ಲೇಖಕರು avadhi

February 7, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಆದಿ

    ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಕಪಿಲ್ ಹುಮನಾಬಾದ್ ಅವರ ಕಥೆ.ಅಭಿನಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: