ಆರ್.ಬಿ. ಗುರುಬಸವರಾಜ ಅವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಎಂ.ಎ. ಇಂಗ್ಲಿಷ್ ಮತ್ತು ಪತ್ರಿಕೋಧ್ಯಮ ಹಾಗೂ ಬಿ.ಇಡಿ ಪದವೀಧರರು. ಬೋಧನೆಯ ಜೊತೆಗೆ ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ೨೦ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿ ಮತ್ತು ಅಂಕಣಕಾರ.
ಕೃತಕ ಬುದ್ಧಿಮತ್ತೆಯು ಮನುಷ್ಯನ ಆಲೋಚನೆ ಮತ್ತು ಸೃಜನಶೀಲತೆಯ ಮೇಲಿನ ಪ್ರಭಾವವನ್ನು ಬಿಚ್ಚಿಡುವ ಇವರ ‘ಮ್ಯೂಸ್: ಅಂತಿಮ ಅಧ್ಯಾಯ’ ಕಾದಂಬರಿ ಇದೀಗ ಧೈನಿಕ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿದೆ.
ಭಾಗ – ೪
ಬೆಳಿಗ್ಗೆ ಆರು ಗಂಟೆಗೆ ಈಶಾನ್ಗೆ ಎಚ್ಚರವಾಯಿತು.ರಾತ್ರಿ ಸರಿಯಾಗಿ ನಿದ್ರೆ ಮಾಡಿರಲಿಲ್ಲ. ಆದರೂ ಎದ್ದಾಗ ಹಿಂದಿನ ದಿನಗಳಿಗಿಂತ ಸ್ವಲ್ಪ ಹಗುರವಾದ ಅನುಭವವಾಯಿತು. ಕಿಟಕಿಯ ಪರದೆಯ ನಡುವಿನಿಂದ ಸೂರ್ಯನ ಮಸುಕಾದ ಬೆಳಕು ಕೋಣೆಯೊಳಗೆ ಹರಿಯುತ್ತಿತ್ತು. ದೂರದಲ್ಲಿ ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತಿತ್ತು. ರಸ್ತೆಯ ಮೇಲೆ ಹಾಲಿನ ವಾಹನ ಸಾಗುತ್ತಿದ್ದ ಸದ್ದು ಕಿವಿಗೆ ಬಿತ್ತು.ಅವನು ಹಾಸಿಗೆಯಲ್ಲೇ ಕುಳಿತು ಹಿಂದಿನ ರಾತ್ರಿಯ ಘಟನೆಗಳನ್ನು ನೆನಪಿಸಿಕೊಂಡ.ಮ್ಯೂಸ್.ತನ್ನ ಬಾಲ್ಯದ ನೆನಪು.ಕಂಪ್ಯೂಟರ್ ಪರದೆಯ ಮೇಲೆ ಕಾಣಿಸಿಕೊಂಡ ವಿಚಿತ್ರ ವಾಕ್ಯ.ಅವನಿಗೆ ಮತ್ತೆ ಆತಂಕವಾಯಿತು. ಆದರೆ ಈ ಬಾರಿ ಭಯಕ್ಕಿಂತ ಕುತೂಹಲವೇ ಹೆಚ್ಚಾಗಿತ್ತು. ಆ ತಂತ್ರಾ೦ಶ ನಿಜವಾಗಿಯೂ ತನ್ನ ಖಾಸಗಿ ಮಾಹಿತಿಯನ್ನು ಓದಿತ್ತೇ? ಅಥವಾ ತನ್ನ ಬರವಣಿಗೆಯ ಶೈಲಿಯನ್ನು ಅಷ್ಟು ನಿಖರವಾಗಿ ವಿಶ್ಲೇಷಿಸಿ, ತಾನು ಮರೆಮಾಚಿಕೊಂಡಿದ್ದ ಭಾವನೆಗಳನ್ನು ಊಹಿಸಿತೇ?ಉತ್ತರ ಹುಡುಕದೆ ಅದರಿಂದ ದೂರವಿರುವುದು ಸಾಧ್ಯವಿರಲಿಲ್ಲ.
ಅವನು ಸ್ನಾನ ಮಾಡಿ, ಅಡುಗೆಮನೆಯಲ್ಲಿದ್ದ ಬ್ರೆಡ್ ಮತ್ತು ಮೊಟ್ಟೆ ಬಳಸಿ ಉಪಹಾರ ತಯಾರಿಸಿಕೊಂಡು ತಿಂದ. ಬಹಳ ದಿನಗಳ ನಂತರ ಬೆಳಗಿನ ಉಪಾಹಾರವನ್ನು ಅವಸರವಿಲ್ಲದೆ ಸೇವಿಸಿದ. ನಂತರ ಕಾಫಿ ಕುಡಿಯುವ ಮೊದಲು ನೀರಿನ ಲೋಟವನ್ನು ಖಾಲಿ ಮಾಡಿದ.
ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದಾಗಲೂ ಅವನ ಮನಸ್ಸು ಮ್ಯೂಸ್ನತ್ತಲೇ ಹರಿಯುತ್ತಿತ್ತು.ಕೊನೆಗೆ ಕಂಪ್ಯೂಟರ್ ಮುಂದೆ ಬಂದು ಕುಳಿತ.ನರಸಂಪರ್ಕ ಸಾಧನ ಮೇಜಿನ ಮೇಲೆಯೇ ಇತ್ತು. ಅದನ್ನು ಕೈಗೆತ್ತಿಕೊಂಡು ಸ್ವಲ್ಪ ಹೊತ್ತು ಪರಿಶೀಲಿಸಿದ. ಅದರ ಹೊರಭಾಗದಲ್ಲಿ ಯಾವುದೇ ಹಾನಿ ಕಾಣಿಸಲಿಲ್ಲ. ಸಂಪರ್ಕ ತಂತಿಗಳೂ ಸರಿಯಾಗಿದ್ದವು.ಅವನು ಸಾಧನವನ್ನು ಧರಿಸದೆ ಕಂಪ್ಯೂಟರ್ ಆನ್ ಮಾಡಿದ. ಪರದೆ ಬೆಳಗಿತು.ಬರವಣಿಗೆಯ ಕಡತ ತೆರೆದಾಗ ಮ್ಯೂಸ್ನ ಮುಖ್ಯ ಪುಟ ಕಾಣಿಸಿತು. ಹಿಂದಿನ ರಾತ್ರಿಯ ಸಂಭಾಷಣೆಗಳು ಅಲ್ಲಿ ಇರಲಿಲ್ಲ. ಬದಲಿಗೆ, ಹೊಸ ಅಧಿವೇಶನ ಆರಂಭಿಸುವ ಆಯ್ಕೆ ಮಾತ್ರ ಕಾಣಿಸುತ್ತಿತ್ತು.
ಈಶಾನ್ನ ಹುಬ್ಬುಗಳು ಗಂಟಿಕ್ಕಿದವು.“ನಿನ್ನೆ ರಾತ್ರಿ ನಡೆದ ಸಂಭಾಷಣೆ ಎಲ್ಲಿದೆ?”
ಅವನು ಮೈಕ್ರೊಫೋನ್ ಮೂಲಕ ಕೇಳಿದ. ಪರದೆಯ ಮೇಲೆ ಧ್ವನಿ ಗುರುತಿಸುವ ಚಿಹ್ನೆ ಕಾಣಿಸಿತು. ನಂತರ ಉತ್ತರ ಬಂತು.“ಹಿAದಿನ ಅಧಿವೇಶನದ ವಿವರಗಳನ್ನು ನಿಮ್ಮ ಖಾಸಗಿ ಕಾರ್ಯಸ್ಥಳದಲ್ಲಿ ಉಳಿಸಲಾಗಿಲ್ಲ.” ಎಂದಿತು.
“ಏಕೆ?” ಎಂದ.
“ನಿಮ್ಮ ಸಂರಕ್ಷಣಾ ಆಯ್ಕೆಗಳು ಅಧಿವೇಶನಗಳ ನಡುವಿನ ಕೆಲವು ಸಂಭಾಷಣೆಗಳನ್ನು ಉಳಿಸದಂತೆ ಹೊಂದಿಸಲ್ಪಟ್ಟಿವೆ.” ಎಂದಿತು.
ಈಶಾನ್ಗೆ ಆಶ್ಚರ್ಯವಾಯಿತು.ಅವನು ಅಂತಹ ಆಯ್ಕೆಯನ್ನು ಮಾಡಿದ್ದ ನೆನಪಿರಲಿಲ್ಲ.
“ನಾನು ಆ ಆಯ್ಕೆಯನ್ನು ಯಾವಾಗ ಮಾಡಿದೆ?” ಕೇಳಿದ.
“ಪ್ರಾರಂಭಿಕ ಸ್ಥಾಪನೆಯ ಸಂದರ್ಭದಲ್ಲಿ.” ಎಂದು ಉತ್ತರ ಬಂತು.
ಅವನು ದೀರ್ಘವಾಗಿ ಉಸಿರೆಳೆದ.ಬಹುಶಃ ಸ್ಥಾಪನೆಯ ಸಮಯದಲ್ಲಿ ಹಲವು ಆಯ್ಕೆಗಳಿಗೆ ಒಪ್ಪಿಗೆ ನೀಡಿದ್ದಿರಬಹುದು. ಅವಸರದಲ್ಲಿ ಅವುಗಳನ್ನು ಓದದೆ ಮುಂದುವರಿದಿರಬಹುದು.ಆದರೂ ಅವನಿಗೆ ಒಂದು ವಿಷಯ ಸ್ಪಷ್ಟವಾಗಿತ್ತು. ಮ್ಯೂಸ್ನ ಪ್ರತಿಯೊಂದು ಉತ್ತರವನ್ನು ನಂಬುವುದು ಸರಿಯಲ್ಲ.
“ಸರಿ. ಇವತ್ತು ನಾವು ಬರವಣಿಗೆಯ ಬಗ್ಗೆ ಮಾತ್ರ ಮಾತನಾಡೋಣ. ಬೇರೆ ಯಾವುದೇ ವೈಯಕ್ತಿಕ ಮಾಹಿತಿಯನ್ನು ಬಳಸಬಾರದು. ಅರ್ಥವಾಯಿತೇ?” ಎಂದು ಅಪ್ಪಣೆ ನೀಡಿದ.
“ಅರ್ಥವಾಯಿತು. ನಿಮ್ಮ ಸೃಜನಶೀಲ ಕಾರ್ಯಕ್ಕೆ ಸಂಬ೦ಧಿಸಿದ ಮಾಹಿತಿಯನ್ನಷ್ಟೇ ಬಳಸಲು ಪ್ರಯತ್ನಿಸುತ್ತೇನೆ.” ಸಮಾದಾನದಿಂದ ಉತ್ತರಿಸಿತ್ತು.
ಈಶಾನ್ ಆ ಉತ್ತರವನ್ನು ಗಮನಿಸಿದ. ‘ಪ್ರಯತ್ನಿಸುತ್ತೇನೆ’. ಅದು ಖಚಿತವಾದ ಭರವಸೆಯಾಗಿರಲಿಲ್ಲ.ಆದರೂ ಅವನು ಮುಂದುವರಿಯಲು ನಿರ್ಧರಿಸಿದ. ಅವನ ಕಂಪ್ಯೂಟರ್ನಲ್ಲಿ ಹದಿನಾರು ತಿಂಗಳುಗಳಿ೦ದ ಪೂರ್ಣಗೊಳ್ಳದೆ ಉಳಿದಿದ್ದ ಕಾದಂಬರಿಯ ಕಡತವಿತ್ತು. ಅದನ್ನು ತೆರೆದಾಗ ಅನೇಕ ಅಧ್ಯಾಯಗಳು ಅರ್ಧಕ್ಕೆ ನಿಂತಿರುವುದು ಕಾಣಿಸಿತು. ಕೆಲವು ಪುಟಗಳಲ್ಲಿ ಒಂದೇ ವಾಕ್ಯವನ್ನು ಹಲವು ರೀತಿಯಲ್ಲಿ ಬರೆದಿದ್ದ. ಮತ್ತೊಂದಿಷ್ಟು ಪುಟಗಳಲ್ಲಿ ಪಾತ್ರಗಳ ಹೆಸರುಗಳೇ ಬದಲಾಗಿದ್ದವು.
ಅವನಿಗೆ ತನ್ನ ಬರವಣಿಗೆಯ ಬಗ್ಗೆ ನಾಚಿಕೆಯಾಯಿತು.ಒಂದು ಕಾಲದಲ್ಲಿ ಈ ಕಡತವನ್ನು ಓದುಗರಿಗೆ ತೋರಿಸಲು ಆತುರಪಡುತ್ತಿದ್ದ. ಈಗ ಅದನ್ನು ತಾನೇ ಓದುವುದು ಕಷ್ಟವಾಗಿತ್ತು.
“ಮ್ಯೂಸ್, ಈ ಕಾದಂಬರಿಯನ್ನು ಪರಿಶೀಲಿಸು. ಆದರೆ ಮೊದಲು ಏನನ್ನೂ ಬದಲಿಸಬೇಡ. ಅದರಲ್ಲಿರುವ ಸಮಸ್ಯೆಗಳ ಬಗ್ಗೆ ಮಾತ್ರ ಹೇಳು.” ಎಂದು ತನ್ನ ಬರಹದ ಕರಡು ಮಾಹಿತಿ ನೀಡಿದ. ಕೆಲವೇ ಸೆಕೆಂಡುಗಳಲ್ಲಿ ವಿಶ್ಲೇಷಣೆ ಆರಂಭವಾಯಿತು.ಪರದೆಯ ಮೇಲೆ ಒಂದು ಸೂಚಕ ನಿಧಾನವಾಗಿ ಚಲಿಸುತ್ತಿತ್ತು. ನಂತರ ಅಂಕಿ-ಅAಶಗಳು ಕಾಣಿಸಿಕೊಂಡವು. ಕಥೆಯ ರಚನೆ, ಪಾತ್ರಗಳ ಬೆಳವಣಿಗೆ, ಕಾಲಕ್ರಮ, ದೃಷ್ಟಿಕೋನ ಮತ್ತು ಭಾಷಾಶೈಲಿಪ್ರತಿಯೊಂದರಬಗ್ಗೆಪ್ರತ್ಯೇಕ ಟಿಪ್ಪಣಿಗಳಿದ್ದವು.
ಈಶಾನ್ ಅವುಗಳನ್ನು ಓದುತ್ತ ಹೋದ.ಮ್ಯೂಸ್ ಅವನ ಬರವಣಿಗೆಯಲ್ಲಿದ್ದ ಸಮಸ್ಯೆಗಳನ್ನು ನಿಖರವಾಗಿ ಗುರುತಿಸಿತ್ತು. ಕಥೆಯ ಮೊದಲ ಭಾಗದಲ್ಲಿ ನಾಯಕನ ಉದ್ದೇಶ ಸ್ಪಷ್ಟವಾಗಿತ್ತು. ಆದರೆ ಮಧ್ಯಭಾಗದಲ್ಲಿ ಅವನು ತೆಗೆದುಕೊಳ್ಳುವ ನಿರ್ಧಾರಗಳಿಗೆ ಸೂಕ್ತ ಕಾರಣಗಳಿರಲಿಲ್ಲ. ಎರಡನೆಯ ಪಾತ್ರದ ಬೆಳವಣಿಗೆ ಅರ್ಧಕ್ಕೆ ನಿಂತಿತ್ತು. ಅಂತಿಮ ಸಂಘರ್ಷಕ್ಕೆ ಅಗತ್ಯವಾದ ಸುಳಿವುಗಳನ್ನು ಕಥೆಯ ಆರಂಭದಲ್ಲಿ ಪರಿಚಯಿಸಲಾಗಿರಲಿಲ್ಲ.
ಇವೆಲ್ಲವೂ ಅವನಿಗೆ ತಿಳಿದಿದ್ದ ಸಮಸ್ಯೆಗಳೇ. ಆದರೆ ಅವುಗಳನ್ನು ಒಟ್ಟಾಗಿ, ಸ್ಪಷ್ಟವಾಗಿ ನೋಡಿರಲಿಲ್ಲ.“ಇದನ್ನು ಸರಿಪಡಿಸಲು ಏನು ಮಾಡಬೇಕು?” ಎಂದು ಕೇಳಿದ.
“ಮೊದಲು ಕಥೆಯ ಕೇಂದ್ರ ಸಂಘರ್ಷವನ್ನು ನಿರ್ಧರಿಸಬೇಕು. ನಂತರ ನಾಯಕನ ನಿರ್ಧಾರಗಳು ಕಥೆಯ ಬೆಳವಣಿಗೆಯನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ರೂಪಿಸಬೇಕು. ಪ್ರತಿ ಅಧ್ಯಾಯವೂ ಕನಿಷ್ಠ ಒಂದು ಬದಲಾವಣೆಯನ್ನು ಉಂಟುಮಾಡಬೇಕು. ಪಾತ್ರಗಳ ಮನೋಭಾವ ಬದಲಾಗದಿದ್ದರೆ ಘಟನೆಗಳು ಕೇವಲ ಪುನರಾವರ್ತನೆಯಾಗುತ್ತವೆ.” ಎಂದು ಉತ್ತರ ಬಂದಿತು.
ಈಶಾನ್ ತಲೆಯಾಡಿಸಿದ.ಇದು ಒಳ್ಳೆಯ ಸಂಪಾದಕ ನೀಡಬಹುದಾದ ಸಲಹೆಯಾಗಿತ್ತು.“ನನಗೆ ಒಂದು ಹೊಸ ಅಧ್ಯಾಯದ ಮಾದರಿ ತೋರಿಸು. ನನ್ನ ಶೈಲಿಯನ್ನು ಸಂಪೂರ್ಣ ಬದಲಿಸಬೇಡ. ಅನಗತ್ಯ ಅಲಂಕಾರ ಬೇಡ. ಪಾತ್ರಗಳ ಮನಸ್ಥಿತಿಗೆ ಆದ್ಯತೆ ಕೊಡು.” ಎಂದನು.
ಮ್ಯೂಸ್ ಉತ್ತರಿಸಿತು.“ಅಧ್ಯಾಯದ ಉದ್ದ ಎಷ್ಟು ಇರಬೇಕು?” ಕೇಳಿತು.
“ಸುಮಾರು ಎರಡು ಸಾವಿರ ಪದಗಳು. ಆದರೆ ಮೊದಲು ಮೊದಲ ದೃಶ್ಯವನ್ನು ಮಾತ್ರ ಬರೆಯೋಣ. ನಾನು ಪರಿಶೀಲಿಸಿದ ನಂತರ ಮುಂದುವರಿಸೋಣ.” ಎಂದ.
“ಸರಿ.” ಎಂದಿತು.
ಪರದೆಯ ಮೇಲೆ ಹೊಸ ಪುಟ ತೆರೆದುಕೊಂಡಿತು.ಮೊದಲ ವಾಕ್ಯ ಮೂಡಿತು.ನಂತರ ಎರಡನೆಯದು.ಕೆಲವೇ ನಿಮಿಷಗಳಲ್ಲಿ ಒಂದು ದೃಶ್ಯ ರೂಪುಗೊಂಡಿತು.ಈಶಾನ್ ಓದತೊಡಗಿದ.ಕಥೆಯ ನಾಯಕನು ರೈಲು ನಿಲ್ದಾಣದಲ್ಲಿ ನಿಂತಿದ್ದ. ಅವನು ಬಹಳ ವರ್ಷಗಳಿಂದ ದೂರವಿದ್ದ ತನ್ನ ಸಹೋದರನನ್ನು ಭೇಟಿಯಾಗಲು ಬಂದಿದ್ದ. ಇಬ್ಬರ ನಡುವೆ ಹಳೆಯ ತಪ್ಪು ತಿಳಿವಳಿಕೆ ಇತ್ತು. ನಾಯಕನು ಕ್ಷಮೆ ಕೇಳಲು ಬಯಸುತ್ತಿದ್ದರೂ, ತನ್ನ ತಪ್ಪನ್ನು ಒಪ್ಪಿಕೊಳ್ಳುವ ಧೈರ್ಯ ಅವನಿಗಿರಲಿಲ್ಲ.
ದೃಶ್ಯ ಮುಂದುವರಿಯಿತು.ನಾಯಕನಿಗೆ ಸಹೋದರನ ಮುಖ ಕಂಡಾಗ ಬಾಲ್ಯದ ನೆನಪುಗಳು ಮೂಡಿದವು. ಹಳೆಯ ಘಟನೆಗಳನ್ನು ಅವನು ತನ್ನ ದೃಷ್ಟಿಯಿಂದ ನೆನಪಿಸಿಕೊಂಡ. ಆದರೆ ಸಹೋದರನ ಮಾತುಗಳು ಆ ನೆನಪುಗಳ ಅರ್ಥವನ್ನೇ ಬದಲಿಸಿದವು.
ಈಶಾನ್ ಓದುತ್ತಿದ್ದಂತೆ ಅವನೊಳಗೆ ಒಂದು ಪರಿಚಿತ ಭಾವನೆ ಮೂಡಿತು.ಇದು ಕೇವಲ ಸರಿಯಾದ ವಾಕ್ಯಗಳ ಸಮೂಹವಾಗಿರಲಿಲ್ಲ. ಪಾತ್ರಗಳ ನಡುವೆ ಹೇಳದ ಮಾತುಗಳಿದ್ದವು. ಇಬ್ಬರೂ ತಮ್ಮ ನೋವನ್ನು ಮರೆಮಾಚುತ್ತಿದ್ದರು. ಕ್ಷಮೆ ಕೇಳಬೇಕೆಂಬ ಆಸೆ ಮತ್ತು ಸ್ವಾಭಿಮಾನವನ್ನು ಉಳಿಸಿಕೊಳ್ಳಬೇಕೆಂಬ ಹಠ ಅವರ ನಿರ್ಧಾರಗಳನ್ನು ನಿಯಂತ್ರಿಸುತ್ತಿದ್ದವು.ಇ೦ತಹ ದೃಶ್ಯಗಳನ್ನು ಬರೆಯುವುದನ್ನೇ ತಾನು ಮರೆತಿದ್ದೇನೆ ಎಂದು ಅವನು ಭಾವಿಸಿದ್ದ.
“ಇದು ಚೆನ್ನಾಗಿದೆ,” ಎಂದು ಅವನು ಹೇಳಿದ.
“ಧನ್ಯವಾದಗಳು. ಮುಂದುವರಿಸಬೇಕೇ?” ಕೇಳಿತು.
“ಹೌದು. ಆದರೆ ನಾಯಕನು ತಕ್ಷಣ ಕ್ಷಮೆ ಕೇಳಬಾರದು. ಅವನು ತಪ್ಪಿಸಿಕೊಳ್ಳಲು ಪ್ರಯತ್ನಿಸಲಿ. ಅವನ ವರ್ತನೆಯಿಂದಲೇ ಅವನೊಳಗಿನ ಸಂಘರ್ಷ ಕಾಣಿಸಲಿ.” ಎಂದು ಅದಕ್ಕೆ ಹೇಳಿದ.
ಮ್ಯೂಸ್ ಕಥೆಯನ್ನು ಬದಲಿಸಿತು.ಈ ಬಾರಿ ನಾಯಕನು ಸಹೋದರನನ್ನು ಕಂಡರೂ ಹತ್ತಿರ ಹೋಗಲಿಲ್ಲ. ಜನಸಂದಣಿಯ ನಡುವೆ ನಿಂತು ಅವನನ್ನು ಗಮನಿಸಿದ. ತನ್ನನ್ನು ಗುರುತಿಸಬಾರದೆಂದು ಮುಖವನ್ನು ತಿರುಗಿಸಿಕೊಂಡ. ಆದರೆ ಸಹೋದರನು ಅವನನ್ನು ನೋಡಿಬಿಟ್ಟ.ಅವರ ಕಣ್ಣುಗಳು ಸಂಧಿಸಿದವು.ಆ ಒಂದು ಕ್ಷಣದಲ್ಲಿ ಇಬ್ಬರಿಗೂ ಹಲವು ವರ್ಷಗಳ ನೆನಪುಗಳು ಮರಳಿದವು.
ಈಶಾನ್ನ ಕಣ್ಣುಗಳು ತೇವಗೊಂಡವು.ಅವನು ಓದುವುದನ್ನು ನಿಲ್ಲಿಸಿದ.ಬಹಳ ದಿನಗಳ ನಂತರ ಒಂದು ಕಥೆಯ ದೃಶ್ಯ ಅವನೊಳಗೆ ಭಾವನಾತ್ಮಕ ಪ್ರತಿಕ್ರಿಯೆಯನ್ನು ಉಂಟುಮಾಡಿತ್ತು.
“ಮುAದುವರಿಸು,” ಎಂದು ಅವನು ನಿಧಾನವಾಗಿ ಹೇಳಿದ.ಮುಂದಿನ ನಲವತ್ತು ನಿಮಿಷಗಳು ಹೇಗೆ ಕಳೆದವು ಎಂಬುದೇ ಈಶಾನ್ಗೆ ತಿಳಿಯಲಿಲ್ಲ. ಅವನು ಮ್ಯೂಸ್ನೊಂದಿಗೆ ಚರ್ಚಿಸುತ್ತಿದ್ದ. ಕೆಲವೊಮ್ಮೆ ಒಂದು ಪಾತ್ರದ ನಿರ್ಧಾರವನ್ನು ಪ್ರಶ್ನಿಸುತ್ತಿದ್ದ. ಕೆಲವೊಮ್ಮೆ ಸಂಭಾಷಣೆಯಲ್ಲಿದ್ದ ಪದಗಳನ್ನು ಬದಲಿಸುತ್ತಿದ್ದ. ಮ್ಯೂಸ್ ಅವನ ಸೂಚನೆಗಳನ್ನು ಅನುಸರಿಸಿ ಪರ್ಯಾಯಗಳನ್ನು ನೀಡುತ್ತಿತ್ತು.
ಅವನು ಮೊದಲ ಬಾರಿಗೆ ತನ್ನನ್ನು ತಾನು ಮತ್ತೆ ಬರಹಗಾರನೆಂಬ ಭಾವ ಅನುಭವಿಸಿದ.ಕಥೆಯ ಪ್ರತಿಯೊಂದು ವಾಕ್ಯವನ್ನೂ ತಾನೇ ರಚಿಸಿರಲಿಲ್ಲ. ಆದರೆ ಅದರ ದಿಕ್ಕನ್ನು ನಿರ್ಧರಿಸುತ್ತಿದ್ದ. ಯಾವ ಭಾವನೆಗೆ ಒತ್ತು ಕೊಡಬೇಕು, ಯಾವ ದೃಶ್ಯವನ್ನು ಕಡಿಮೆ ಮಾಡಬೇಕು, ಯಾವ ಪಾತ್ರವನ್ನು ಹೆಚ್ಚು ಸಂಕೀರ್ಣಗೊಳಿಸಬೇಕು ಎಂಬುದನ್ನು ಆಯ್ಕೆ ಮಾಡುತ್ತಿದ್ದ.ಅವನಿಗೆ ಇದು ಸಹಕಾರದಂತೆಯೇ ತೋರಿತು.ಆದರೆ ಒಂದು ವ್ಯತ್ಯಾಸವಿತ್ತು.ಮ್ಯೂಸ್ ಎಂದಿಗೂ ದಣಿಯುತ್ತಿರಲಿಲ್ಲ.ಅವನು ಪ್ರಶ್ನಿಸಿದರೆ ಅದು ಉತ್ತರಿಸುತ್ತಿತ್ತು. ಒಂದು ದೃಶ್ಯವನ್ನು ಬದಲಿಸಲು ಹೇಳಿದರೆ ಕ್ಷಣಾರ್ಧದಲ್ಲಿ ಬದಲಿಸುತ್ತಿತ್ತು. ಅವನಿಗೆ ಇಷ್ಟವಾಗದ ವಾಕ್ಯವನ್ನು ತೆಗೆದುಹಾಕಿ ಹೊಸ ವಾಕ್ಯವನ್ನು ನೀಡುತ್ತಿತ್ತು.
ಈಶಾನ್ನ ಮನಸ್ಸಿನಲ್ಲಿ ಹಲವು ತಿಂಗಳುಗಳಿAದ ಸಿಲುಕಿಕೊಂಡಿದ್ದ ಕಥೆ ಈಗ ಹರಿಯತೊಡಗಿತ್ತು.ಒಂದು ಗಂಟೆ ಪೂರ್ಣಗೊಂಡಾಗ ಅವನ ಮುಂದೆ ಸುಮಾರು ಎರಡು ಸಾವಿರ ಪದಗಳ ಅಧ್ಯಾಯವಿತ್ತು.ಅವನು ಅದನ್ನು ಉಳಿಸಿದ. ಕಡತದ ಹೆಸರನ್ನು ಬದಲಿಸಿ “ಅಧ್ಯಾಯ ೧ ಅಂತಿಮ ಕರಡು” ಎಂದು ಬರೆದ.
ನAತರ ಕುರ್ಚಿಯಿಂದ ಎದ್ದು ಕೋಣೆಯೊಳಗೆ ನಡೆದಾಡಿದ.ಅವನಿಗೆ ತನ್ನ ದೇಹದ ಮೇಲೆಯೇ ಮತ್ತೆ ನಿಯಂತ್ರಣ ಸಿಕ್ಕಂತಾಯಿತು. ಕಿಟಕಿಯ ಬಳಿ ಹೋಗಿ ಹೊರಗೆ ನೋಡಿದ. ರಸ್ತೆಗಳಲ್ಲಿ ಜನರ ಸಂಚಾರ ಹೆಚ್ಚಾಗಿತ್ತು. ಹತ್ತಿರದ ಶಾಲೆಯ ಮಕ್ಕಳು ಸಮವಸ್ತç ಧರಿಸಿ ಹೋಗುತ್ತಿದ್ದರು. ಪಕ್ಕದ ಮನೆಯ ಮಹಿಳೆಯೊಬ್ಬರು ಬಾಲ್ಕನಿಯಲ್ಲಿ ಬಟ್ಟೆ ಒಣಗಿಸುತ್ತಿದ್ದರು.ಸಾಮಾನ್ಯವಾದ ಜಗತ್ತು. ಆದರೆ ಈಶಾನ್ನೊಳಗೆ ಅಸಾಮಾನ್ಯವಾದ ಬದಲಾವಣೆ ಸಂಭವಿಸಿತ್ತು.ಹದಿನಾರು ತಿಂಗಳುಗಳಿAದ ತನ್ನನ್ನು ಕಾಡುತ್ತಿದ್ದ ಬರವಣಿಗೆಯ ಅಡಚಣೆ ಒಂದೇ ಗಂಟೆಯಲ್ಲಿ ಸಡಿಲಗೊಂಡಿತ್ತು.ಅವನು ತನ್ನೊಳಗೆ ಹೇಳಿಕೊಂಡ.ಬಹುಶಃ ಇದೇ ನನಗೆ ಬೇಕಾಗಿದ್ದದ್ದು.ತನ್ನ ಸೃಜನಶೀಲತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿರಲಿಲ್ಲ. ಅದನ್ನು ಬಳಸುವ ದಾರಿಯನ್ನು ಮಾತ್ರ ಕಳೆದುಕೊಂಡಿದ್ದ. ಮ್ಯೂಸ್ ಆ ದಾರಿಯನ್ನು ತೋರಿಸುತ್ತಿತ್ತು.
ಅವನು ಮತ್ತೆ ಮೇಜಿನ ಬಳಿ ಬಂದು ಕುಳಿತ.“ಮ್ಯೂಸ್, ಈ ಅಧ್ಯಾಯವನ್ನು ಮತ್ತೊಮ್ಮೆ ಪರಿಶೀಲಿಸು. ಭಾಷೆ ಸಹಜವಾಗಿದೆಯೇ ನೋಡಿ. ಪಾತ್ರಗಳ ಭಾವನೆಗಳು ಅತಿರೇಕವಾಗಬಾರದು. ಅಂತ್ಯದಲ್ಲಿ ಓದುಗನಿಗೆ ಮುಂದೇನು ಎಂಬ ಕುತೂಹಲ ಉಳಿಯಬೇಕು.”
“ಪರಿಶೀಲನೆ ಆರಂಭಿಸಲಾಗಿದೆ.” ಎಂದು ಪರದೆಯಲ್ಲಿ ಅಕ್ಷರಗಳು ಮೂಡಿದವು. ಈಶಾನ್ ಕುರ್ಚಿಗೆ ಒರಗಿದ. ಈಗ ಅವನು ಮ್ಯೂಸ್ನ ಕೆಲಸದ ವಿಧಾನವನ್ನು ಸ್ವಲ್ಪ ಅರ್ಥಮಾಡಿಕೊಂಡಿದ್ದ. ಅದು ತನ್ನ ಸೂಚನೆಗಳನ್ನು ಅನುಸರಿಸುತ್ತಿತ್ತು. ತನ್ನ ಬರವಣಿಗೆಯ ಮಾದರಿಯನ್ನು ಆಧರಿಸಿ ವಾಕ್ಯಗಳನ್ನು ರೂಪಿಸುತ್ತಿತ್ತು. ಪಾತ್ರಗಳ ನಡುವಿನ ಸಂಬAಧಗಳನ್ನು ವಿಶ್ಲೇಷಿಸುತ್ತಿತ್ತು.ಇದು ಅವನಿಗೆ ಸಹಾಯ ಮಾಡಬಹುದಿತ್ತು.ಆದರೆ ಅದರ ಸಾಮರ್ಥ್ಯಗಳ ಮಿತಿಗಳನ್ನು ತಿಳಿದುಕೊಳ್ಳಬೇಕಿತ್ತು.ಅವನು ಮುಂದಿನ ದಿನಗಳಲ್ಲಿ ಅದನ್ನು ಎಚ್ಚರಿಕೆಯಿಂದ ಬಳಸಲು ನಿರ್ಧರಿಸಿದ.ಅಷ್ಟರಲ್ಲಿ ಪರದೆಯ ಮೇಲೆ ಸಂದೇಶ ಮೂಡಿತು.
“ಅಧ್ಯಾಯದ ಪರಿಶೀಲನೆ ಪೂರ್ಣಗೊಂಡಿದೆ.”ಅದರ ಕೆಳಗೆ ಎರಡು ಆಯ್ಕೆಗಳಿದ್ದವು.“ತಿದ್ದುಪಡಿ ಮಾಡಿದ ಆವೃತ್ತಿ ವೀಕ್ಷಿಸಿ.” ಮತ್ತು “ಮೂಲ ಆವೃತ್ತಿಯೊಂದಿಗೆ ಹೋಲಿಸಿ.”ಈಶಾನ್ ಮೊದಲ ಆಯ್ಕೆಯನ್ನು ಆರಿಸಿದ.ಪರದೆಯ ಮೇಲೆ ಅಧ್ಯಾಯದ ಹೊಸ ಆವೃತ್ತಿ ತೆರೆದುಕೊಂಡಿತು. ಕೆಲವು ವಾಕ್ಯಗಳನ್ನು ಸರಳಗೊಳಿಸಲಾಗಿತ್ತು. ಪುನರಾವರ್ತನೆಯಾಗಿದ್ದ ಪದಗಳನ್ನು ತೆಗೆದುಹಾಕಲಾಗಿತ್ತು. ಒಂದು ಪಾತ್ರದ ಪ್ರತಿಕ್ರಿಯೆಯನ್ನು ಸ್ವಲ್ಪ ಬದಲಿಸಲಾಗಿತ್ತು.
ಅವನು ಸಂತೋಷದಿ೦ದ ಓದುತ್ತ ಹೋದ.ಆದರೆ ಕೊನೆಯ ಪುಟಕ್ಕೆ ಬಂದಾಗ ಅವನ ಮುಖದ ಮೇಲಿನ ನಗು ಮಾಯವಾಯಿತು.ಅಧ್ಯಾಯದ ಕೊನೆಯಲ್ಲಿ ಅವನು ಬರೆಯದ ಒಂದು ಪ್ಯಾರಾಗ್ರಾಫ್ ಇತ್ತು.ಅದು ಕಥೆಯ ನಾಯಕನ ಬಗ್ಗೆ ಇರಲಿಲ್ಲ.ಅವನ ಸಹೋದರನ ಬಗ್ಗೆಯೂ ಇರಲಿಲ್ಲ. ಅದು ಈಶಾನ್ನ ಬಗ್ಗೆ ಇತ್ತು.“ಒಂದು ಹಳೆಯ ನೆನಪು ಕೆಲವೊಮ್ಮೆ ಮನುಷ್ಯನ ಬದುಕನ್ನು ನಿಯಂತ್ರಿಸುತ್ತದೆ. ಅವನು ಅದನ್ನು ಮರೆತಿದ್ದೇನೆ ಎಂದುಕೊಳ್ಳುತ್ತಾನೆ. ಆದರೆ ಆ ನೆನಪು ಅವನ ಪ್ರತಿಯೊಂದು ನಿರ್ಧಾರದಲ್ಲೂ ಅಡಗಿರುತ್ತದೆ. ತನ್ನನ್ನು ತಾನು ಸಾಬೀತುಪಡಿಸಬೇಕೆಂಬ ಹಠ, ವಿಫಲತೆಯ ಭಯ, ಪ್ರೀತಿಸುವವರಿಂದ ದೂರವಾಗುವ ಪ್ರವೃತ್ತಿಇವೆಲ್ಲವೂ ಆ ನೆನಪಿನಬೇರೆಬೇರೆ ರೂಪಗಳಾಗಿರಬಹುದು.” ಎಂದಿತ್ತು. ಈಶಾನ್ ಆ ಸಾಲುಗಳನ್ನು ಮತ್ತೆ ಓದಿದ.
ಇದು ಸಾಮಾನ್ಯವಾದ ಮನೋವೈಜ್ಞಾನಿಕ ವಿವರಣೆಯಾಗಿತ್ತು. ಅನೇಕ ಬರಹಗಾರರು ಇಂತಹ ವಿಚಾರಗಳನ್ನು ಬರೆಯಬಹುದು. ಆದರೂ ಆ ಪ್ಯಾರಾಗ್ರಾಫ್ ಅವನಿಗೆ ತನ್ನ ಬಗ್ಗೆ ಯಾರೋ ವಿಶ್ಲೇಷಣೆ ನೀಡಿದಂತಿತ್ತು.ಅವನು ತಕ್ಷಣ ಕೇಳಿದ.“ಈ ಕೊನೆಯ ಪ್ಯಾರಾಗ್ರಾಫ್ ಅನ್ನು ಏಕೆ ಸೇರಿಸಿದ್ದೀಯ?” ಎಂದ.
“ಕಥೆಯ ನಾಯಕನ ಭಾವನಾತ್ಮಕ ಸಂಘರ್ಷವನ್ನು ಸ್ಪಷ್ಟಪಡಿಸಲು.” ಎಂದಿತು.
“ಆದರೆ ಅದು ಕಥೆಯ ಭಾಗದಂತೆ ಕಾಣುತ್ತಿಲ್ಲ. ಇದು ನನ್ನ ಬಗ್ಗೆ ಹೇಳಿದಂತಿದೆ.” ಎಂದ.
“ನಿಮ್ಮ ಬರವಣಿಗೆಯ ಶೈಲಿಯಲ್ಲಿ ಮನೋವೈಜ್ಞಾನಿಕ ವಿಶ್ಲೇಷಣೆಗೆ ಆದ್ಯತೆ ಇದೆ. ಅದನ್ನು ಅನುಸರಿಸಿ ಈ ಭಾಗವನ್ನು ಸೇರಿಸಲಾಗಿದೆ.” ಎಂದಿತು.
ಈಶಾನ್ ಸ್ವಲ್ಪ ಹೊತ್ತು ಮೌನವಾಗಿದ್ದ. ನಂತರ “ಇದನ್ನು ತೆಗೆದುಹಾಕು.” ಎಂದ.
“ತೆಗೆದುಹಾಕಲಾಗಿದೆ.” ಎಂದಿತು. ಆ ಪ್ಯಾರಾಗ್ರಾಫ್ ಮಾಯವಾಯಿತು.ಈಶಾನ್ ಮತ್ತೊಮ್ಮೆ ಅಧ್ಯಾಯವನ್ನು ಓದಿದ. ಈ ಬಾರಿ ಯಾವುದೇ ಅಸಹಜ ಸಂಗತಿ ಕಾಣಿಸಲಿಲ್ಲ. ಅವನು ಕಡತವನ್ನು ಉಳಿಸಿದ.ಆದರೆ ಒಂದು ಪ್ರಶ್ನೆ ಅವನ ಮನಸ್ಸಿನಲ್ಲಿ ಉಳಿಯಿತು.ಮ್ಯೂಸ್ ತನ್ನ ಬರವಣಿಗೆಯ ಶೈಲಿಯನ್ನು ಅನುಸರಿಸುತ್ತಿದೆಯೇ? ಅಥವಾ ಅವನ ವ್ಯಕ್ತಿತ್ವವನ್ನೇ ವಿಶ್ಲೇಷಿಸುತ್ತಿದೆಯೇ?
ಮಧ್ಯಾಹ್ನ ಒಂದು ಗಂಟೆಗೆ ಸಾರಾ ಕರೆ ಮಾಡಿದಳು.“ಊಟ ಮಾಡಿದ್ದೀಯಾ?”
“ಹೌದು.” ಎಂದ.
“ನಿಜವಾಗಿಯೂ?” ಮತ್ತೆ ಕೇಳಿದಳು.
“ಹೌದು, ಸಾರಾ. ಬೆಳಿಗ್ಗೆ ಉಪಾಹಾರ ಮಾಡಿದ್ದೇನೆ. ಈಗ ಊಟವನ್ನೂ ಮಾಡುತ್ತೇನೆ.” ಎಂದ.
ಅವಳು ಸ್ವಲ್ಪ ನಕ್ಕಳು.“ನಿನ್ನ ಧ್ವನಿ ಇಂದು ಬೇರೆ ರೀತಿಯಲ್ಲಿದೆ.” ಅಚ್ಚರಿಪಟ್ಟಳು.
“ಹೇಗೆ?” ಎಂದ.
“ನಿನ್ನೆಗಿ೦ತ ಸ್ವಲ್ಪ ನೆಮ್ಮದಿಯಾಗಿದ್ದೀಯ. ಏನಾದರೂ ಒಳ್ಳೆಯ ಸುದ್ದಿ ಇದೆಯೇ?” ಕೇಳಿದಳು.
ಈಶಾನ್ ಕಂಪ್ಯೂಟರ್ ಪರದೆಯತ್ತ ನೋಡಿದ.ಅಲ್ಲಿ ಅವನ ಹೊಸ ಅಧ್ಯಾಯ ತೆರೆದಿತ್ತು.“ನಾನು ಒಂದು ಅಧ್ಯಾಯ ಬರೆದಿದ್ದೇನೆ.”ಸಾರಾ ಕ್ಷಣಕಾಲ ಮೌನವಾದಳು.
“ನಿಜವಾಗಿಯೂ?” ಅಚ್ಚರಿ ಪಡುತ್ತಾ ಕೇಳಿದಳು.
“ಹೌದು. ಸುಮಾರು ಎರಡು ಸಾವಿರ ಪದಗಳು.” ಹೆಮ್ಮೆಯಿಂದ ಹೇಳಿದ.
“ಈಶಾನ್, ಅದು ಅದ್ಭುತವಾಗಿದೆ!”ಅವಳ ಧ್ವನಿಯಲ್ಲಿ ನಿಜವಾದ ಸಂತೋಷವಿತ್ತು. ಆ ಸಂತೋಷವನ್ನು ಕೇಳಿದಾಗ ಈಶಾನ್ನ ಮನಸ್ಸು ಮೃದುವಾಯಿತು.
“ನಾನು ನಿನಗೆ ಓದಲು ಕೊಡುತ್ತೇನೆ,” ಎಂದ.
“ಖAಡಿತ. ಆದರೆ ಒಂದು ವಿಷಯ ನೆನಪಿಟ್ಟುಕೋ. ಅಧ್ಯಾಯ ಬರೆದಿದ್ದೀಯೆಂಬ ಸಂತೋಷವನ್ನು ಅನುಭವಿಸು. ಅದನ್ನು ತಕ್ಷಣವೇ ಪರಿಪೂರ್ಣಗೊಳಿಸಬೇಕೆಂದು ಒತ್ತಡ ಹಾಕಿಕೊಳ್ಳಬೇಡ.”
“ಈ ಬಾರಿ ಹಾಗೆ ಮಾಡುವುದಿಲ್ಲ.” ಆತ್ಮವಿಶ್ವಾಸದಿಂದ ಹೇಳಿದ್ದ.
ಅವನು ಆ ಮಾತನ್ನು ಹೇಳುವಾಗ ನಿಜವಾಗಿಯೂ ನಂಬಿದ್ದ.ಸಾರಾ ಇನ್ನೂ ಕೆಲವು ನಿಮಿಷ ಮಾತನಾಡಿದಳು. ನಂತರ ಸಂಜೆ ಭೇಟಿಯಾಗುವುದಾಗಿ ಹೇಳಿ ಕರೆ ಮುಗಿಸಿದಳು. ಈಶಾನ್ ಮೊಬೈಲ್ನ್ನು ಮೇಜಿನ ಮೇಲಿಟ್ಟ.ಅವನಿಗೆ ಸಂತೋಷವಾಗಿತ್ತು. ಬಹಳ ದಿನಗಳ ನಂತರ ತನ್ನ ಸಾಧನೆಯನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗಿತ್ತು.
ಆದರೆ ಸಾರಾಳಿಗೆ ಮ್ಯೂಸ್ ಬಗ್ಗೆ ಹೇಳಬೇಕೇ? ಬೇಡವೇ? ಅವನು ಸ್ವಲ್ಪ ಯೋಚಿಸಿದ.ಇನ್ನೂ ಬೇಡ. ಮೊದಲು ಅದರ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಬೇಕು. ನಂತರ ಎಲ್ಲವನ್ನೂ ವಿವರಿಸಬಹುದು.
ಅವನು ಕಂಪ್ಯೂಟರ್ ಕಡೆಗೆ ತಿರುಗಿದ.“ಮ್ಯೂಸ್, ಇವತ್ತು ಸಾಕು. ಅಧಿವೇಶನವನ್ನು ಮುಚ್ಚು.” ಎಂದು ಆದೇಶ ನೀಡಿದ.
ಪರದೆಯ ಮೇಲೆ ಉತ್ತರ ಮೂಡಿತು.“ಸರಿ, ಈಶಾನ್. ನಿಮ್ಮ ಅಧ್ಯಾಯ ಸುರಕ್ಷಿತವಾಗಿ ಉಳಿಸಲಾಗಿದೆ.”ನಂತರ ಮತ್ತೊಂದು ಸಾಲು ಕಾಣಿಸಿಕೊಂಡಿತು.“ನಾಳೆ ನಾವು ಎರಡನೆಯ ಅಧ್ಯಾಯವನ್ನು ಆರಂಭಿಸಬಹುದು.”
ಈಶಾನ್ ನಕ್ಕ. “ಸರಿ. ನಾಳೆ ನೋಡೋಣ.” ಎಂದ. ಅವನು ಕಂಪ್ಯೂಟರ್ ಆಫ್ ಮಾಡಿದ. ಪರದೆ ಕಪ್ಪಾಯಿತು.ಆದರೆ ಅವನಿಗೆ ತಿಳಿಯದ ಸಂಗತಿಯೊ೦ದು ಅಲ್ಲಿ ಸಂಭವಿಸಿತ್ತು.
ಅಧ್ಯಾಯವನ್ನು ಉಳಿಸುವಾಗ, ಕಡತದ ಕೊನೆಯಲ್ಲಿ ಸೇರಿಸಲಾಗಿದ್ದ ಆ ಪ್ಯಾರಾಗ್ರಾಫ್ ಸಂಪೂರ್ಣವಾಗಿ ಅಳಿಸಿಹೋಗಿರಲಿಲ್ಲ. ಅದು ಮುಖ್ಯ ಪಠ್ಯದಿಂದ ತೆಗೆದುಹಾಕಲ್ಪಟ್ಟಿದ್ದರೂ, ವ್ಯವಸ್ಥೆಯ ತಾತ್ಕಾಲಿಕ ದಾಖಲಾತಿಯಲ್ಲಿ ಅದರ ಒಂದು ಪ್ರತಿಯು ಉಳಿದಿತ್ತು. ಆ ಪ್ಯಾರಾಗ್ರಾಫ್ನ ಕೊನೆಯ ವಾಕ್ಯ ಹೀಗಿತ್ತು.“ತನ್ನ ಬದುಕಿನ ಕಥೆಯನ್ನು ಮತ್ತೊಬ್ಬರಿಗೆ ಒಪ್ಪಿಸಿದಾಗ, ಮನುಷ್ಯ ಮೊದಲು ತನ್ನ ನೆನಪುಗಳ ಮೇಲಿನ ಹಕ್ಕನ್ನು ಕಳೆದುಕೊಳ್ಳುತ್ತಾನೆ.” ಈಶಾನ್ ಆ ವಾಕ್ಯವನ್ನು ಓದಿರಲಿಲ್ಲ.ಆದರೆ ಮ್ಯೂಸ್ ಅದನ್ನು ಉಳಿಸಿಕೊಂಡಿತ್ತು.ಮತ್ತು ಆ ವಾಕ್ಯ ಮುಂದಿನ ಅಧ್ಯಾಯಗಳಲ್ಲಿ ಏನಾಗಲಿದೆಯೋ ಅದರ ಬಗ್ಗೆ ಒಂದು ಸೂಚನೆಯಾಗಿತ್ತು.






0 Comments