ಅಷ್ಟು ಸುಲಭವಾಗಿ ರೂಪುಗೊಂಡದ್ದಲ್ಲ ‘ನಾತಿಚರಾಮಿ’

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. 

ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು ಹಾಕಿದ್ದಾರೆ.

ಇವರ ಮೊದಲ ಚಿತ್ರ ‘ಹರಿವು’ ನಿರ್ಮಾಣಗೊಂಡ ಕಥನವೂ ‘ಅವಧಿ’ಯಲ್ಲಿಯೇ ಪ್ರಕಟವಾಗಿತ್ತು. 

 
ಮೊದಲಿಗೆ, ಒಂದು ಸಣ್ಣ ಪೀಠಿಕೆಯೊಂದಿಗೆ ಪ್ರಾರಂಭಿಸಿ, ನಂತರ ‘ನಾತಿಚರಾಮಿ’ಯ ಪಯಣದ ವಿವರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಸ್ನೇಹಿತರೇ, ಹಿರಿಯರೇ, ಮಾರ್ಗದರ್ಶಕರೇ ನಾನು ಮಂಸೋರೆ (ಮಂ-ಮಂಜುನಾಥ, ಸೋ-ಸೋಮಕೇಶವ, ರೆ-ರೆಡ್ಡಿ. ಸೋಮಕೇಶವ ರೆಡ್ಡಿ ಅಪ್ಪನ ಹೆಸರು). ವೃತ್ತಿಪರವಾಗಿ ಚಿತ್ರಕಲಾವಿದ, ಕಲಾ ನಿರ್ದೇಶಕ ಹಾಗೂ ಸಿನೆಮಾ ನಿರ್ದೇಶಕ. ವೃತ್ತಿಯ ಆಚೆಗೆ ನಾನೊಬ್ಬ ಸಾಮಾನ್ಯ ಮನುಷ್ಯ.

ನನ್ನ ಸುತ್ತಮುತ್ತಲಿನ ಜಗತ್ತಿನ ಬಗ್ಗೆ ಆಸಕ್ತಿ, ಅಕ್ಕರೆ, ಚಿಕ್ಕಂದಿನಿಂದಲೂ ಬೆಳೆದು ಬಂದ ಓದುವ ಅಭ್ಯಾಸ ನನ್ನನ್ನು ಇಂದು ಇಲ್ಲಿ ಅಂಕಣ ಬರೆಯುವವರೆಗೂ ತಂದು ನಿಲ್ಲಿಸಿದೆ. ಇಲ್ಲಿಯವರೆಗೂ ಮೂರು ಸಿನೆಮಾಗಳನ್ನು ನಿರ್ದೇಶಿಸಿದ್ದೇನೆ. ಮೊದಲ ಸಿನೆಮಾ ‘ಹರಿವು’ ಎರಡನೆಯದು ‘ನಾತಿಚರಾಮಿ’ ಮೂರನೆಯ ಸಿನೆಮಾ ‘ಆಕ್ಟ್ 1978’ ಸಿದ್ಧವಾಗಿದೆ.

ಕೊರೊನಾದ ಮುಂದಿನ ದಿನಗಳ ಪರಿಣಾಮವನ್ನು ಅವಲೋಕಿಸಿ ಬಿಡುಗಡೆಯ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇದಿಷ್ಟೂ ನನ್ನ ಸಂಕ್ಷಿಪ್ತ ಹಿನ್ನೆಲೆ. 

ಮೊದಲ ಬಾರಿಗೆ ಅಂಕಣ ಬರೆಯುವ ಜವಾಬ್ದಾರಿಯನ್ನು ಜಿ ಎನ್ ಮೋಹನ್ ಸರ್ ನನ್ನ ಹೆಗಲಿಗೇರಿಸಿದ್ದಾರೆ. ಈ ಹಿಂದೆ ಅಲ್ಪ ಕಾಲ ‘ಸಂಯುಕ್ತ ಕರ್ನಾಟಕ’ದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡುತ್ತಿದ್ದಾಗ ‘ಕರ್ಮವೀರ’ದಲ್ಲಿ ಸಣ್ಣಪುಟ್ಟ ವಿಷಯಗಳ ಬಗ್ಗೆ ಪ್ರತೀವಾರ ಬರೆದದ್ದು ಹೊರತು ಪಡಿಸಿ ಬರವಣಿಗೆಯಲ್ಲಿ ನನಗೆ ಅಷ್ಟಾದ ಅನುಭವವಿಲ್ಲ.

2009ರಿಂದ ಶುರುವಾದ ಬರವಣಿಗೆ, ಮನಸಿಗೆ ತುಂಬಾ ಬರೆಯಲೇಬೇಕೆಂಬ ಒತ್ತಡ ಉಂಟಾದಾಗ ಬ್ಲಾಗ್ ಬರೆಯುತ್ತಿದ್ದೆ. ಹಾಗೂ ‘ಸಂಪದ’ ಎಂಬ ಕನ್ನಡ ವೆಬ್ ತಾಣದಲ್ಲಿ ಬರೆದಿದ್ದಷ್ಟೇ ಉಳಿದದ್ದೆಲ್ಲಾ ಫೇಸ್ ಬುಕ್ ಬರವಣಿಗೆಯೇ ಹೆಚ್ಚಾಗಿದೆ.

ಸಾಕಷ್ಟು ಅಂಕಣಗಳನ್ನು ನಿಯಮಿತವಾಗಿ ಓದುವ ಅಭ್ಯಾಸವಿರುವ ನನಗೆ, ಮೋಹನ್ ಸರ್ ವಹಿಸಿರುವ ಜವಾಬ್ದಾರಿಯ ಬಗ್ಗೆ ಸಣ್ಣ ಆತಂಕದಿಂದಲೇ ನಮ್ಮ ‘ನಾತಿಚರಾಮಿ’ ಸಿನೆಮಾ ಆರಂಭದಿಂದ ನಡೆದು ಬಂದ ಹಾದಿಯ ಬಗ್ಗೆ ಬರೆಯಲು ಒಪ್ಪಿಕೊಂಡಿದ್ದೇನೆ.

ಇದನ್ನು ಬರೆಯಲು ಮೊದಲಿಗೆ ಅಳುಕಿದಾಗ ಮೋಹನ್ ಸರ್ ಹೇಳಿದ ಮಾತೊಂದು ನನಗೆ ತುಂಬಾ ಮುಖ್ಯವೆನಿಸಿತು. ‘ಎಲ್ಲರೂ ತಾವು ನೋಡಿದ ಸಿನೆಮಾ ಬಗ್ಗೆ ಬರೆಯುತ್ತಾರೆ, ಸಿನೆಮಾ ಎಂಬ ಕಲಾಕೃತಿಯ ಬಗ್ಗೆ ನಡೆಯುವ ಚರ್ಚೆಗಳಷ್ಟೇ ಮುಖ್ಯವಾಗಿ, ಅದು ತಯಾರಾಗುವ ಹಂತದ ಪ್ರಕ್ರಿಯೆಗಳು ದಾಖಲೀಕರಣವಾಗಬೇಕು’ ಎಂಬುದು.

ಇದರ ಬಗ್ಗೆ ನಾನೂ ಯೋಚಿಸಿದಾಗ ‘ಹೌದಲ್ಲವೇ’ ಎಂದೆನಿಸಿತು. ಎಲ್ಲರಿಗೂ ವಿಭಿನ್ನವಾದ ಸಿನೆಮಾ ‘ನಾತಿಚರಾಮಿ’ ಎಂದಷ್ಟೇ ಗೊತ್ತು, ಆದರೆ ಆ ವಿಭಿನ್ನತೆ ಪಡೆಯುವ ಹಾದಿಯಲ್ಲಿ ನಾತಿಚರಾಮಿ ಕಥೆ ರೂಪುಗೊಂಡಿದ್ದು, ಸಣ್ಣ ಹನಿಯಾಗಿ ಆರಂಭಗೊಂಡು ಝರಿಯಾಗಿ, ಹೊಳೆಯಾಗಿ, ನದಿಯಾಗಿ ಹಲವಾರು ತಿರುವುಗಳ ಪಡೆದು ಪ್ರೇಕ್ಷಕನೆಂಬೋ ಸಾಗರವ ಸೇರುವವರೆಗಿನ ಪಯಣವೂ ಮುಖ್ಯವಲ್ಲವೇ. 

ಈ ಪಯಣ ಇದು ನಿಮಗೆಲ್ಲರಿಗೂ ಹೇಳುವುದಕ್ಕಿಂತ ಹೆಚ್ಚಾಗಿ, ಮುಂದೊಂದು ದಿನ ನಾನು ನಡೆದು ಬಂದ ಹಾದಿಯ ಬಗ್ಗೆ ನನ್ನನ್ನು ನಾನೇ ಎಚ್ಚರಿಸಿಕೊಳ್ಳಲು ಇದು ಸಹಾಯವಾಗಬಹುದು ಎಂಬ ಸಣ್ಣ ಸ್ವಾರ್ಥವೂ ಇದರಲ್ಲಿ ಸೇರಿಕೊಂಡಿದೆ.

ಆದರೆ ಈ ಪಯಣದ ಅಷ್ಟೂ ವಿವರಗಳನ್ನು ದಾಖಲಿಸಲು ಸಾಧ್ಯವೇ? ಇದನ್ನು ಬರೆಯಲು ಪ್ರಾರಂಭಿಸುವ ಮೊದಲು ಹಲವು ಬಾರಿ ನನ್ನ ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೇನೆ. ನಾತಿಚರಾಮಿ ಸಿನೆಮಾ ಅಷ್ಟು ಸುಲಭವಾಗಿ ರೂಪುಗೊಂಡಿದ್ದಲ್ಲ.

ಆರಂಭದಿಂದ ಇಲ್ಲಿಯವರೆಗೂ ಈ ಸಿನೆಮಾ, ಅದರ ಜೊತೆಗೆ ಬೆಸೆದಿರುವ, ಘಟಿಸಿರುವ, ನಡುಗಿಸಿರುವ, ಆತಂಕವೊಡ್ಡಿದ, ಧೈರ್ಯ ತುಂಬಿದ, ಖುಷಿ ನೀಡಿದ ತಲ್ಲಣಗೊಳಿಸಿದ ಹಲವಾರು ವಿಷಯಗಳಿವೆ.

ಅದರಲ್ಲಿ ಎಷ್ಟನ್ನು ನಾನು ಮುಕ್ತವಾಗಿ ಹೇಳಿಕೊಳ್ಳಬಹುದೋ, ಹೇಳಬಾರದೋ ನನಗೆ ಗೊಂದಲವಿದೆ. ಎಷ್ಟೋ Autobiography ಗಳನ್ನು ಓದುವಾಗ ಅದರಲ್ಲಿ ಬರೆದವರು ಸಾಧ್ಯವಾದಷ್ಟೂ ತಮ್ಮನ್ನು ತಾವು victim ಎಂದು ತೋರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿರುವುದನ್ನು ನಾನು ಗಮನಿಸಿದ್ದೇನೆ.

ಅಲ್ಲಿ ಅನುಕಂಪ ಗಿಟ್ಟಿಸಿಕೊಳ್ಳುವುದಕ್ಕೇ ಹೆಚ್ಚು ಒತ್ತು ಕೊಡಲಾಗಿರುತ್ತದೆ. ಅಂತಹ ಅಪಾಯಕ್ಕೆ ಸಿಲುಕದಂತೆ ನನ್ನ ಅನುಭವಗಳನ್ನು ದಾಖಲಿಸುವ ಸವಾಲು ನನ್ನ ಮುಂದಿದೆ. 

ಎಷ್ಟೇ ಆದರೂ ಇದು ನನ್ನ ಅನುಭವ ದೃಷ್ಟಿಕೋನದಲ್ಲಿ ದಾಖಲಿಸಲು ಹೊರಟಿರುವುದರಿಂದ, ಈ ಬರಹಗಳಿಗೆ ಬಹುತ್ವದ ಆಯಾಮ ದೊರಕಲು ಸಾಧ್ಯವಾಗುವುದಿಲ್ಲ. ಆದರೂ ಇದರಲ್ಲಿ ನನ್ನಿಂದ ಸಾಧ್ಯವಿರುವಷ್ಟೂ ವಾಸ್ತವತೆಯನ್ನೇ ನಿಮ್ಮ ಮುಂದಿಡಲು ಪ್ರಯತ್ನಿಸುತ್ತೇನೆ.

ಹೇಳದೆ ಉಳಿದುಕೊಂಡರೆ ಬಹುಶಃ ಅದಕ್ಕೆ ಎರಡು ಕಾರಣಗಳಿರಬಹುದು, ಒಂದು ಇನ್ನೂ ಚಿತ್ರರಂಗದಲ್ಲಿ ಯಾವ ಗಾಡ್ ಫಾದರ್ ಬೆಂಬಲವೂ ಇಲ್ಲದೇ ನನ್ನ ಅಸ್ತಿತ್ವವನ್ನು ಕಟ್ಟಿಕೊಳ್ಳುತ್ತಿರುವ ಕಾರಣದಿಂದಾಗಿ ಮುಂದಿನ ಜೀವನ ಹಾಗೂ ವೃತ್ತಿಯ ಭವಿಷ್ಯ ಕೆಲವೊಂದನ್ನು ಹೇಳದೇ ಮೌನವಾಗಿಸಬಹುದು, ಮತ್ತೊಂದು ಅತೀ ಎನಿಸುವಷ್ಟು ವಿಚಾರ, ವಿಷಯ ಹಾಗೂ ದೃಶ್ಯ ಮಾಲಿನ್ಯದ ಪರಿಣಾಮವಾಗಿ ಕೆಲವೊಂದು ಸ್ಮೃತಿಯಲ್ಲಿ ಮರೆಯಾಗಿರಬಹುದು ಅಥವಾ ಧೂಳು ಹಿಡಿದು ಮೂಲೆ ಸೇರಿರಬಹುದು.

ಆದರೆ ಸಿನೆಮಾ ಕತೆ ಬರಿಸಲು ಕೈನೆಟಿಕ್ ಗಾಡಿಯಲ್ಲಿ ಸಂಧ್ಯಾ ಮೇಡಂ ಮನೆಗೆ ಹೋಗಿ ಬರುತ್ತಿದ್ದ ದಿನಗಳಿಂದ ಆರಂಭಿಸಿ ಇತ್ತೀಚೆಗೆ ಜಾವಾ ಗಾಡಿಯಲ್ಲಿ ಕೋರ್ಟಿಗೆ ಅಲೆದಾಡುತ್ತಾ ಕೋರ್ಟಿನ ಆವರಣದಲ್ಲಿ ಒಂಟಿಯಾಗಿ ಕೂತು ಬಿಕ್ಕಳಿಸಿದ ದಿನದವರೆಗೂ ಎಲ್ಲಾ ಹಂತಗಳಿಗೂ ನಾನೊಬ್ಬನೇ ಸಾಕ್ಷಿಯಾಗಿರುವುದರಿಂದ ಸಾಧ್ಯವಾದಷ್ಟೂ ಎಲ್ಲವನ್ನೂ ನಿಮ್ಮ ಮುಂದಿರಿಸುತ್ತೇನೆ.

ಎಂದಿನಿಂತೆ ನಿಮ್ಮ ಪ್ರೋತ್ಸಾಹ, ಬೆಂಬಲ, ಪ್ರೀತಿ ಇರಲಿ.

ನಿಮ್ಮ

ಮಂಸೋರೆ

‍ಲೇಖಕರು ಮಂಸೋರೆ

August 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vasudeva Sharma

    ಬರೆಯಿರಿ ಮಂಸೋರೆ. ನಿಮ್ಮ ಪಯಣದ ಜೊತೆ ನಾವು ನೂರಾರು ಓದುಗರು ಜೊತೆಯಾಗಿದ್ದೇವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: