ಸೆಣ್ಣಮ್ಮ ಮತ್ತು “ಹವಾಯ್ ರೋಡು”

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ಬಂದು ದಡ ಮುಟ್ಟಿದಂತೆ.

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.

ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

ಪನವೇಲ್ ಕೊಚ್ಚಿ ಕನ್ಯಾಕುಮಾರಿ ಎನ್ ಎಚ್ ಸಿಕ್ಸ್ಟಿ ಸಿಕ್ಸ್ ಹೈವೇ… ಎಂದರೆ ಈ ‘ಆಂದ್ಲೆ’ ಊರಿನ ಇಳಿಜಾರ ಗುಂಟ ಸುಮಾರು ಒಂದು ಕಿ.ಮೀ. ಹರಿದಿರೋ ಒಂದು ಬಾರೀಕು ರಸ್ತೆಯ ಕೆಳಗೆ ಧಬಕ್ಕನೆ ಬಿದ್ದುಕೊಂಡ ಹೆದ್ದಾರಿಯ ಅಸಲಿ ಹೆಸರು ಅಂತ ಇದೇ ಊರಿನ ಸೆಣ್ಣಮ್ಮನಿಗೆ ಗೊತ್ತಿಲ್ಲ… ಬರೀ ಸೆಣ್ಣಮ್ಮ ಯಾಕೆ ಹೈವೇ ಪಕ್ಕವೇ ಮನೆಯಿರುವ ಇಂತಹುದೇ ಚಿಕ್ಕಪುಟ್ಟ ಸೀದ ಸಾದಾ ಊರುಗಳ ಯಾವ ಜನಕ್ಕೂ ಬಹುತೇಕ ಅದು ಗೊತ್ತಿಲ್ಲ… 

ಹಿಂದೊಮ್ಮೆ ಶಾಲೆಯ ಮಕ್ಕಳು ಈ ಹೆಸರು ಅರಿತು ಮನೆಯಲ್ಲಿ ಹೇಳಿಕೊಡಲು ಹೋದರೆ ಸಾಯಲಿ ನಿಮ್ಮ ಹಾದಿಯ ಹೆಸರು ಅಂದಿದ್ದರು ಅವರು. ಮಿಗಿಲಾಗಿ “ಅಂಕೋಲೆಯಿಂದ ಕಣಗೀಲು, ಬೇಲೇಕೇರಿ, ಹಿಲ್ಲೂರು ಊರಿಗೆ ಹೋಗುವ ಹಾದಿ… ಅಂತ ಚಂದಗೆ ಕರೆವ ಬದ್ಲಿಗೆ ಇದೆಂಥ ಹಾಳಿಬಿದ್ದ್ ಹೆಸರಿಟ್ಟೀರಿ ಅಕ್ಕೋರೆ… ಮಕ್ಕಳಿಗೆಲ್ಲ ಹೇಳ್ಕೊಟ್ಟು ಅವು ನಮ್ಗೆಲ್ಲ ಕವಳ ತಿಂಬು ಬಾಯಲ್ಲಿ ಇವೆಲ್ಲ ಅಪ್ರತಪ್ರ ಹೇಳ್ಸಿ ನೆಗ್ಯಾಡ್‌ತವೆ… ಕೋಡಗನಂಥವು” ಅಂತ ಬಾವಿಯ ಕಟ್ಟೆಯ ತಿರುವಲ್ಲಿ ನಾಕಾರು ಹೆಂಗಸರು ನನ್ನ ತರುಬಿ ಚೂರೂ ಬಿಸಾದಿ ಇಲ್ಲದೇ ಒಂದು ನಮೂನಿ ಅವ್ರ ಮಕ್ಕಳಂಗೇ ನೆಗಾಡಿ… ನನ್ನಿಂದ “ಎಂಥ ಕಿಸಿತೀರೇ, ಹೆಸ್ರಿಟ್ಟದ್ದು ನಾನಾ..? ಅದ್ರಲ್ಲೆಂತ ಇದೆ..? ಹೊಸ್ತೇನಾರೂ ಕಲ್ತಕಂಡು ಹುಷಾರಿ ಆಗು ಮನ್ಸೇ ಇಲ್ವಲೇ ನಿಮ್ಗೆ” ಅಂತ ಬಯ್ಸಿಕೊಂಡಿದ್ದರು.

ಮತ್ತೆ ಹೆದ್ದಾರಿ ಮತ್ತು ಸೆಣ್ಣಮ್ಮ ಹಾಗೂ ಊರವರ ವಿಷಯಕ್ಕೆ ಬಂದರೆ ಅವರೆಲ್ಲ ಅದಕ್ಕೆ ಹೇಳುವುದು “ಹವಾಯ್ ರೋಡು” ಅಂತ.

ಸೆಣ್ಣಮ್ಮನ ಗಂಡ ಬೀರ. ಅವನಿಗೆ ಒಂದು ಸುತ್ತು ಕಡಿಮೆ… ಎರಡು ಹೊತ್ತು ಗಂಜಿ ಕುಡಿದು ಊರ ಸುತ್ತ ಇರುವ ಒಂದು ದಾರಿಯನ್ನು ಬೆಳಿಗ್ಗಿನಿಂದ ಸಂಜೆ ತನಕ ನೂರಿಪ್ಪತ್ತು ರವಂಡು ಹಾಕುವ ಆತ ಅಲ್ಲಲ್ಲಿ ನಿಲ್ಲುವ, ಹೇನು ಇಲ್ಲದಿದ್ದರೂ ತಲೆ ಸೀಟಿ ಉಗುರಿಗಿಟ್ಟಂತೆ ಮಾಡಿ ಒರೆಯುವ… ಯಾರಿಗೋ ಶಾಪ ಹಾಕುವ… ಹಾಗಂತ ಹೇಳಿ ಯಾರನ್ನೂ ಅಟ್ಟಿಸಿಕೊಂಡು ಹೋದದ್ದು ಕಲ್ಲು ಹೊಡೆದದ್ದು ಇದುವರೆಗೆ ಇಲ್ಲ.

ಸೆಣ್ಣಮ್ಮನ ಮಗ ದೇವುವಿಗಂತೂ ಹಗಲಿಡೀ ಅವರಿವರ ಬಾವಿಗೆ ಬಿದ್ದ ಕೊಡಪಾನ ತೆಗೆ, ಗೋಡೆಗೆ ಮೊಳೆ ಹೊಡೆದು ಕೊಡು, ಯುವಕಮಂಡಲದ ಶಾರದಾ ಪೂಜೆಗೆ ಪರಪರೆ ಕತ್ತರಿಸು, ಅನ್ನ ನುರಿದು ಅಂಟು ಮಾಡು, ಪವಿತ್ರತ್ತೆಗೆ ಇಪ್ಪತ್ತು, ಕುಸುಮಕ್ಕಗೆ ಐವತ್ತು ಇತ್ಯಾದಿಯಾಗಿ ಹತ್ತಾರು ಮನೆಗೆ ದುಡ್ಡು, ಕೊಟ್ಟೆ ಇಸಿದುಕೊಂಡು ಹೋಗಿ ಅಟಾಕುಟಿ ಮೀನು ತಂದುಕೊಡು, ಕುಂಟ ಯಮುನಪ್ಪನ ಮನೆಯ ಮಣ್ಣಿನ ಮೂರು ಅಡಕಲಕ್ಕೆ ಬಾವಿಯಿಂದ ನೀರು ತುಂಬಿಸು… ಇದೇ ಕೆಲಸ.

ಪ್ರತಿಯಾಗಿ ಒಂದು ಹಾಲಿಲ್ಲದ ಕರಿ ಚಪ್ಪೆ ಚಾ, ಎರಡು ನೌದಿಯಾದ ಟೋಸ್ಟು ಕೊಟ್ಟರೂ ಸಾಕು ಅವನಿಗೆ. ಹಾಗಂತ ಹೇಳಿ ಊರವರು ಪಾಪಿಗಳಲ್ಲ ಅವರ ಹತ್ರ ಇರುದೇ ಹತ್ತೋ ಇಪ್ಪತ್ತೋ. ಅದರಲ್ಲೇ ಅವನಿಗೆ ಚೂರುಪಾರು ಕೊಡುತ್ತಾರೆ. ದೇವುವಿಗೂ ಜರ್ದಾ, ಗುಟಕಾ ಚಟವಿಲ್ಲ; ಸರಾಯಿ ಕುಡಿಯುವುದಿಲ್ಲ.

“ಪಾಪ ನಮ್ ದೇವು..!” ಅಂತ ಅಂಗಡಿಯ ದಿನೇಶ ನಾಯ್ಕರು ಹನ್ನೆರಡ ಮ್ಯಾಗಿ ಪ್ಯಾಕೆಟ್ಟನ್ನು ಹತ್ತು ರೂಪಾಯಿಗೆ ಕೊಡುತ್ತಾರಲ್ಲ ಅದನ್ನು ತಂದು ಒಲೆ ಕೆಂಡ ಊಬಿ ‘ಆಲಿಮಿನ್ ‘ಪಾತ್ರೆಯಲ್ಲಿ ಪರಮಾನಂದದಿಂದ ಮಾಡಿಕೊಂಡು ತಿನ್ನುತ್ತಾನೆ, ಅಷ್ಟೇ.

ಸೆಣ್ಣಮ್ಮನ ಒಂದು ಕಣ್ಣಿಗೆ ಹೂ ಬಿದ್ದು ಅಷ್ಟಾಗಿ ನೆದರು ಕಾಣಿಸದು. ಕಾಲು ಉರಕಿಸುತ್ತ ನಡೆಯುತ್ತಾಳೆ. ನಮ್ಮ ಶಾಲೆಯ ಹಿಂದೇ ಮನೆ. ಆಗಾಗ ಗಾಂಡಿಯಲ್ಲಿ ಕಪಡ ತುರುಕಿಕೊಂಡು ಬಾಗಿಲಿಗೆ ಅರ್ಧ ಮರೆಯಾಗಿ ನಾನು ಕಲಿಸುವುದನ್ನು ನೋಡುತ್ತ ನಿಲ್ಲುತ್ತಾಳೆ. “ಬಾರೇ ಸೆಣ್ಣಮ್ಮ ಒಳಗೆ” ಅಂದರೆ ಬರಳು. ಹಾಡು ಕಲಿಸುತ್ತ ನಾನು ಎರಡು ಹೆಜ್ಜೆ ಕುಣಿದರೆ ಮುಖ ಮರೆ ಮಾಡಿಕೊಂಡು ನಾಚಿಕೊಳ್ಳುತ್ತಾಳೆ. ಸಣ್ಣಗೆ ನಗುತ್ತಾಳೆ.

ಅವಳದೊಂದು ಬಿ ಪಿ ಎಲ್ ಕಾರ್ಡಿದೆ..ಅದಕ್ಕೆ ಹದಿನೈದು ಕೆಜಿ ಅಕ್ಕಿ ಬರುತ್ತದೆ. ಅದಿಷ್ಟನ್ನು ತಂದಿಟ್ಟುಕೊಂಡು ಎರಡೂ ಹೊತ್ತು ಗಂಜಿ ಮಾಡುತ್ತಾಳೆ ಸೆಣ್ಣಮ್ಮ. ಸಮುದ್ರಕ್ಕೆ ನಾಕು ಫರ್ಲಾಂಗು ದೂರದ ಮನೆಯಾದ್ದರಿಂದ ಬೇಸಿಗೆಯಲ್ಲಿ ಉಪ್ಪುನೀರು ಕೊಡದಲ್ಲಿ ತಂದು ಅಡಿಕೆ ಹಾಳೆಕೊಟ್ಟೆಗೆ ಹೊಯ್ದು ಬಿಸಿಲಿಗಿಟ್ಟು ಒಣಗಿಸಿ ಮಾಡಿಕೊಂಡ ಉಪ್ಪಿದೆ. ಊರು ಬಿಟ್ಟು ಮುಂಬೈ ಪಾಲಾದ ನಾಗರಾಜ್ ಕಮ್ತೀರು ಕೇಶವ್ ಕಮ್ತೀರ ಪಾಳು ಬಿದ್ದ ಜಮೀನಿನಲ್ಲಿ ಸೊಪ್ಪು ಸದೆ ಮಧ್ಯೆ ಬೆಳೆವ ಚುರುಕು ಉರಿ ಮೆಣಸಿನ ಗಿಡವಿದೆ. ಈ ಉಪ್ಪು ಮೆಣಸನ್ನು ಗಂಜಿಗೆ ನುರಿದುಕೊಂಡು ಉಣ್ಣುತ್ತಾರೆ ಸೆಣ್ಣಮ್ಮ ದೇವು ಮತ್ತು ಬೀರ.

“ಆಸಿಗೆ ಏನೇ ಸೆಣ್ಣಮ್ಮ..?” ಅಂತ ಕುಶಾಲು ಮಾಡಿದರೆ, 

“ಅದೇ ಹವಾಯ್ ಹಾದಿಗೆ ಹೋತಿ ಈಗ. ಮಗ ಬತ್ಯಾ” ಅನ್ನುತ್ತಾಳೆ.

ಮಗನೆಂದರೆ ಈ ದೇವುವಲ್ಲ. ಇನ್ನೂ ಒಬ್ಬ. ಹತ್ತೋ ಹದಿನೈದೋ ವರ್ಷದ ಹಿಂದೆ ಯಾರದ್ದೋ ಟ್ರಕ್ಕಿಗೆ “ಕೀಲೀನರ್ಕಿ” ಮಾಡಲು ಹೋದವ ಮ್ಯಾಂಗನೀಸ್ ಭರಾಟೆಯ ಕಾಲದಲ್ಲಿ ಮನೆಗೆ ಬರಲೇ ಇಲ್ಲದ ಮಗ. ಹೆಸರು “ರಾಕು”

ಕೊಂದೇ ಹಾಕಿರಬೇಕು ಯಾರಾದರೂ.

ಇಲ್ಲದಿದ್ದರೆ ಊರು. ಗುಮಟೆ ಪಾಂಗು, ಬಯಲಾಟ, ಹುಲಿದ್ಯಾವ್ರ ಭಜನೆ ಎಲ್ಲ ನೆನಪಾಗಿ ಊರಿಗೆ ಬರದೆ ಇರುವವನೇ ಅಲ್ಲ ಅವನು. ಆದರೆ ಈ ಸೆಣ್ಣಮ್ಮನಿಗೆ ಮಳ್ಳು. ಹೈವೇ ಪಕ್ಕ ನಿಂತ ಲಾರಿ ಡ್ರೈವರಗಳು, ಕ್ಲೀನರುಗಳಲ್ಲೆಲ್ಲ ಮಗನ ಹಾಗೆಯೇ ಕಾಣುತ್ತಾರೆ ಇವಳಿಗೆ.

ಎಲ್ಲಿಂದಲೋ ಬರುವ ಇನ್ನೆಲ್ಲಿಗೋ ಹೊರಡುವ ನಡುಮಧ್ಯ ಗುರುತರವಾದ ಅಂಗಡಿ ಹೋಟಲ್ಲು ಎಂಥದ್ದೂ ಇಲ್ಲದ ಈ ಊರಪಕ್ಕ ಯಾಕವರು ಆರು, ಎಂಟು, ಹನ್ನೆರಡು ಚಕ್ರದ ಲಾರಿ ನಿಲ್ಲಿಸಿ ಇಳಿಯುತ್ತಾರೆ ಎಂಬುದಕ್ಕೆ ನಮ್ಮೂರ ಹೆದ್ದಾರಿಯ ಎರಡೂ ಅಂಚಿನ ಗುಡ್ಡದ ತುಂಬ “ಆಯ್ ಆರ್ ಬಿ” ಯ ‘ಫೋರ್ ವೇ’ ರೋಡು ಮಾಡುವ ಜೆಸಿಬಿಗಳು ಬರೆ ಎಳೆದು ಮಾಡಿದ ಮಣ್ಣಿನ ಸೆಲೆಯೊಳಗಿಂದ ಜಲಪಾತದ್ದೇ ತರಹ ನೀರುಕ್ಕುವ ಸ್ವಚ್ಛ ಉತ್ತರಗಳಿವೆ. ಮೂಲದಲ್ಲೂ ಒಂದ್ನಾಲ್ಕು ಇದ್ದವು ಕಲ್ಲಿನಂಚಿನ ಧಾರೆಗಳು. ಜಲ್ಲಾಜಲ್ಲಾನೆ ಪ್ರೋಕ್ಷಿಸಿ  “ಕೀ…” ಅನ್ನಿಸುವ ಝರಿಯ ಮಲ್ಲಿಗೆಧಾರೆಗಳು ಇವು. ಯಾವ ಲಾರಿಯವ ನಿಲ್ಲದೇ ಇರಲಾರ ಇದರಪಕ್ಕ ಹೇಳಿ ನೀವು..? 

ನಿಂತವರು ಬರೀ ನಿಲ್ಲಲ್ಲ. ಒಂದಿಡೀ ದಿನ ಇದ್ದೇ ಹೋಗುತ್ತಾರೆ ಇಲ್ಲಿ.

ಮೊದಲಿಗೆ ಅವರು ಲಾರಿ ಇಳಿದು ಭರಪೂರ ಮೈ ಮುರಿದುಕೊಂಡು ಹಗುರಾಗುತ್ತಾರೆ. ನಂತರ ಉಸ್ ಬಸ್ ಹುಷ್ ಅನ್ನುತ್ತ ಅರ್ಧ ತಾಸಾದರೂ ಉಸಿರು ಬಿಡುವುದ ನಿಲ್ಲಿಸದ ಲಾರಿಯ ಸುತ್ತು ಹೊಡೆಯುತ್ತ ಅಲ್ಲಲ್ಲಿ ಕುಟ್ಟಿ ಮುಟ್ಟಿ ತಟ್ಟಿ ಬಡಿದು ತಿರುಪಿ ಅದನ್ನು ಥಂಡು ಮಾಡುತ್ತಾರೆ ನಂತರ ಸೋಪಿನ ಪುಡಿಯ ನೊರೆಯ ನೀರಿನಲ್ಲಿ ತಾಸೆರಡು ತಾಸು ಅದನ್ನು ಉಜ್ಜೀ ಉಜ್ಜೀ ಸಾಫು ಮಾಡುತ್ತಾರೆ.

ಅದಾದ ಮೇಲೆ ಈ ನೀರಧಾರೆಗೆ ಒಂದು ಉದ್ದಾನುದ್ದ ಬಾರೀಕು ಪೈಪು ಸಿಕ್ಕಿಸಿ ನೇರ ತಲೆಗೇ ನೀರು ಬೀಳುವ ಹಾಗೆ ಮಾಡಿಕೊಂಡು ತಾವೂ ನೀಲಿ ನಿಕ್ಕರಿನಲ್ಲಿ ನೊರೆನೊರೆ ಮೀಯುತ್ತಾರೆ. ಗಸಗಸ ತಿಕ್ಕಿಕೊಳ್ಳುತ್ತಾರೆ. ಯಕ್ಷಗಾನದ ಭಸ್ಮಾಸುರ ಪಾತ್ರ ರಸ್ತೆಯಂಚಿಗೆ ಬಂದು ತಲೆಯ ಮೇಲಿನ ಬೂದಿಯನ್ನು ಊರಿಗೆಲ್ಲ ಸುರಿಯುತ್ತ ನಿಂತಂತೆ ಅವರ ಮೈ ಮೇಲಿನ ಬಸಬಸ ನೀರೂ, ಸೋಪು ನೊರೆಯೂ ಮೋಟು ಚಾದಂಗಡಿಯ ಬಾಂಕಿನ ಮೇಲೆ ಕುಳಿತು ಸಿಂಗಲ್ ಚಾ ಕುಡಿವ ಊರವರಿಗೆ ಕಾಣಿಸಿ ಅವರು ತಮ್ಮಷ್ಟಕ್ಕೆ ತಾವು ಮುಗುಳುನಕ್ಕು ಮುಖಮುಖ ನೋಡಿಕೊಂಡು ಆರಾಮಾಗುತ್ತಾರೆ.

ಕಪ್ಪು ಮೈಯಿನ ಡೊಳ್ಳು ಹೊಟ್ಟೆಯ ಅಗಲ ಹೊಕ್ಕಳಿನ ಅಣ್ಣಾಚಿಗಳಿಗೆ ಈ ಮೀವ ಸುಖದ ಮುಂದೆ ಜಗದ ಎಲ್ಲ ಸುಖಗಳೂ ತೃಣ ಸಮಾನವಿರಬಹುದೇ? ಅನಿಸುತ್ತದೆ ನನಗೆ ಬಹಳ ಬಾರಿ. ಇವರದ್ದೇ ಮನೆಯ ಇಕ್ಕಟ್ಟಿನ ಸಣ್ಣ ಬಚ್ಚಲಿನ ಮೂರು ಚಂಬು ನೀರು ಸಾಕಾದೀತ ಇವರಿಗೆ..?

ಮಿಂದು ಮುಗಿಸಿದ ಅವರು ಸೀಮೆಯೆಣ್ಣೆಯ ಬದಲು ಟ್ರಕ್ಕಿನದೇ ಪೆಟ್ರೋಲು ತುಂಬಿಸಿದ ಸ್ಟೌ ಹಚ್ಚಿ ಲಾರಿ ಮರೆಯಲ್ಲಿ ಅಡುಗೆ ಶುರು ಮಾಡಲಾರಂಭಿಸಿದ ಸರಿ ಹೊತ್ತಿಗೆ ಸೆಣ್ಣಮ್ಮ ಅಲ್ಲಿ ಹಾಜರಾಗುತ್ತಾಳೆ. ಹಳೇ ಪರಿಚಯದವರ ಹಾಗೆ ಅವರನ್ನು ಮಾತಾಡಿಸುತ್ತಾಳೆ. ಸಮಾ ಕಣ್ಣು ಕಾಣದಿದ್ದರೂ “ಇಲ್ತರಿ ನಾ ತೊಳೆದುಕೊಡ್ತೆ” ಎಂದು ಬೋಗುಣಿಯನ್ನೂ, “ಇಲ್ತರಿ ನಾ ಕೊಯ್ದುಕೊಡ್ತೆ” ಅಂತ ಈರುಳ್ಳಿ ಬದನೆ ನವಿಲುಕೋಸು ಮೂಲಂಗಿ ಇತ್ಯಾದಿಯನ್ನೂ ಕಸಿದೇ ಕೊಳ್ಳುತ್ತಾಳೆ. ಅಕ್ಕಿ ತೊಳೆದು ಅನ್ನಕ್ಕಿಡಲು ನೆರವಾಗುತ್ತಾಳೆ.

ಅವಳ ಸಲಿಗೆಗೆ, ಗನಾತನಕ್ಕೆ ಅವರ ಬಾಯಿ ಕಟ್ಟಿದಂತಾಗುತ್ತದೆ. ತಮ್ಮದೇ ಅವ್ವಿ ಇಲ್ಲಿ ಹೀಗೆ ಬಂದು ಜಬರದಸ್ತಿ ಆರೈಕೆ ಮಾಡುತ್ತಿರುವಂತೆ ಅನಿಸುತ್ತದೆ ಅವರಿಗೆ. ಅವಳು ಹೇಳಿದಂತೆ ಕೇಳುತ್ತಾರೆ. ತೊಳೆದು ಕೊಚ್ಚಿ ಕತ್ತರಿಸಿ ಕೊಟ್ಟಂತೆಲ್ಲ ಚಂದಗೆ ಅಡುಗೆ ಮಾಡುತ್ತಾರೆ. ಉಂಡು ಬಾಕಿ ಇದ್ದದ್ದನ್ನು ಮತ್ತೆ ರಾತ್ರಿಗೆಂದು ಇಡಿಸಿ ತಾಟು ಪಾಟು ಎಲ್ಲ ತೊಳೆದು ಕೊಡುತ್ತಾಳೆ ಸೆಣ್ಣಮ್ಮ. ‘ಊಟ ಮಾಡಮ್ಮ ನೀನೂ’ ಎಂದರೆ ಛೆ..! ಛೆ..! ಬೇಡ ನಿಮಗೆ ರಾತ್ರಿಗೆ ಬೇಕು. ಎಂದು ನಿರಾಕರಿಸಿ. ಬಹಳ ಹೆಚ್ಚಿದ್ದರೆ ಸೊಲಿಗೆ ಸಾರನ್ನು ಕಟ್ಟಿಕೊಂಡು ಬರುತ್ತಾಳೆ ಅಷ್ಟೇ.

ಕಳೆದು ಹೋದ ಮಗ ರಾಕುವಿನ ಕುರಿತಾಗಿ ಅಪ್ಪಿತಪ್ಪಿಯೂ ಲಾರಿಯವರನ್ನು ಕೇಳದ ಸೆಣ್ಣಮ್ಮ ಇವರಲ್ಲೇ ಯಾರಾದರೊಬ್ಬ ತನ್ನ ರಾಕುವಾಗಿರಬಹುದೇ ಎಂಬ ಕಾರಣವೊಂದು ಒಳಗೇ ಇದ್ದರೂ ಅವರನ್ನು ನೆಟ್ಟಗೆ ದೃಷ್ಟಿಸಿಯೂ ನೋಡುವುದಿಲ್ಲ. “ನಿಮ್ಮದು ಎಂತ ಹೆಸರು..?” ಎಂದು ಕೇಳಿದ್ದಿಲ್ಲ.

ಆದರೆ ಮರಳಿ ಬರುವಾಗ ಯಾರಾದರು ಸಿಕ್ಕಿ “ಎಲ್ಲಿ ಹೋಗಿದ್ದೆಯೇ ಸೆಣ್ಣಮ್ಮ?” ಎಂದರೆ “ರಾಕುವಿನ ಟ್ರಕ್ಕು ಬಂದಿತ್ತು. ಅವನಿಗೆ ಬಡಿಸಿ ಬಂದೆ. ಇದೆ ಇಲ್ನೋಡಿ… ತೊಟಕು ಸಾರೂ ತಂದೆ” ಎಂದು ತೋರಿಸುತ್ತಾಳೆ.

ಊರಲ್ಲಿ ನಿಲ್ಲುವ ಎಲ್ಲ ಲಾರಿಯವರಿಗೂ ಸೆಣ್ಣಮ್ಮ ಈಗೊಂದಿಷ್ಟು ವರ್ಷದಲ್ಲಿ ಆಪ್ತ. ಸಂಕ್ರಾಂತಿ, ರಂಜಾನ್, ಕ್ರಿಸಮಸ್ ಸಮಯದಲ್ಲಿ ಅವಳಿಗಾಗಿ ಒಂದು ಹತ್ತಿಯ ಸಾದಾ ಸೀರೆಯೋ, ಖರ್ಜೂರದ ಬಾಕ್ಸೋ, ತಿಂಡಿ ಪೊಟ್ಟಣವೋ ಬರುತ್ತದೆ.

ಲಾರಿ ಏರಿ ಅದ್ಯಾವುದೋ ಊರಿಂದ. ನೋಡುವುದಿರಲಿ ಹೆಸರು ಹೇಳಲೂ ಬರದ ಪನವೇಲೋ, ಕೊಚ್ಚಿಯೋ, ಕನ್ಯಾಕುಮಾರಿಯೋ ಅಥವಾ ಸಾವಿರಾರು ಕಿ.ಮೀ. ಉದ್ದದ ಈ ಹೈವೇ ಗುಂಟ ಇರುವ ಮತ್ಯಾವುದೋ ಊರುಗಳಿಂದಲೋ ಬರುತ್ತಾರೆ. ಟ್ರಕ್ಕು ಏರಿ ಈ ಊರಿನಲ್ಲಿ ನಿಂತು ಬಸಬಸ ಮಿಂದು ಹೋಗಲು ಲಾರಿಕಾರರು. ರಾಕುವಂತಹುದೇ ಮುಖದ ಹುಲುಬಿನ ಸೆಣ್ಣಮ್ಮನಂತಹುದೇ ಯಾವುದೋ ಅವ್ವಿಯ ಮಕ್ಕಳು.

August 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. ಶಿವಕುಮಾರ ಮಾವಲಿ

    ತುಂಬಾ ಹಿಡಿಸಿತು ಬರಹ … ಉತ್ತರ ಕನ್ನಡದ ಭಾಷೆಯ ಬಳಕೆ‌ ಸೊಗಸಾಗಿದೆ. ರಾಕು ವಿಗಾಗಿ ನನ್ನ ಮನಸ್ಸೂ ತಹತಹಿಸುತ್ತಿದೆ ಮೇಡಂ… Good Start

    ಪ್ರತಿಕ್ರಿಯೆ
  2. Chandrakala Mariyappa

    ಬಹಳ ಚಿಕ್ಕ ಸಂಗತಿ ಸುಂದರ ವಾಗಿ ಬಣ್ಣಿಸಿದ್ದಾರೆ… ಭಾಷೆಯೊಂದು ಬಲು ಸೊಗಸು.

    ಪ್ರತಿಕ್ರಿಯೆ
  3. Vasudeva Sharma

    ಬಹಳ ಆಪ್ತವಾದಳು ಸೆಣ್ಣಮ್ಮ. ಅವಳ ರಾಕು ಸಿಗುವಂತಾದರೆ… ಬೇಡ ಬಿಡಿ, ಅವನು ಬಂದಾನು, ಕಂಡಾನು ಎನ್ನುವ ಸುಖವೇ ಲೇಸು.

    ಪ್ರತಿಕ್ರಿಯೆ
  4. Smitha Amrithraj.

    ಬಹಳ chendide ಬರಹ.ಮತ್ತೊಂದು ವಾರಕ್ಕೆ ಕಾಯುವಂತೆ ಮಾಡಿದೆ ರೇಣಕ್ಕ

    ಪ್ರತಿಕ್ರಿಯೆ
  5. ರೇಣುಕಾ ರಮಾನಂದ

    ಶಿವಕುಮಾರ ಮಾವಲಿ ಸರ್,ಚಂದ್ರಕಲಾ ಮರಿಯಪ್ಪ ಮೇಡಂ,ವಾಸುದೇವ ಶರ್ಮಾ ಸರ್,ಸ್ಮಿತಾ ಅಮೃತರಾಜ್ ಎಲ್ಲರಿಗೂ ನನ್ನ ಪ್ರೀತಿ..ಲೇಖನ ಓದಿ ಪ್ರೋತ್ಸಾಹಿಸುವ ನಿಮ್ಮ ಗುಣಕ್ಕೆ ಶರಣು

    ಪ್ರತಿಕ್ರಿಯೆ
  6. ಚೈತ್ರಾ ಶಿವಯೋಗಿಮಠ

    ಬರಹ ತುಂಬಾ ಆಪ್ತವಾಗಿದೆ ಮೇಡಂ.. ಉತ್ತರ ಕನ್ನಡ ಭಾಷೆಯ ಸೊಗಡ ಮೈದುಂಬಿಕೊಂಡ ಬರಹ‌‌..

    ಪ್ರತಿಕ್ರಿಯೆ
  7. ರೇಣುಕಾ ರಮಾನಂದ

    ಥ್ಯಾಂಕ್ಯೂ ಚೈತ್ರಾ,ಸುಧಾ ನಿಮ್ಮ ಪ್ರೀತಿಗೆ ನನ್ನ ಶರಣು

    ಪ್ರತಿಕ್ರಿಯೆ
  8. Nagashree S

    ಬಹಳ ಸೊಗಸಾದ ಬರಹ… ಇದುವರೆಗೂ ನಿಮ್ಮ ಕವಿತೆಗಳ ಅಭಿಮಾನಿ ನಾನು. ಇನ್ನು ಮುಂದೆ ಅಂಕಣದ್ದೂ ಕೂಡ. ಪ್ರತಿವಾರ ಕಾಯುವೆ ಶಾಲ್ಮಲೆಗಾಗಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: