ಕತ್ತಲಿನಿಂದ ಬೆಳಕಿನೆಡೆಗೆ

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು.

ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ.

ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ ಮಾಡುತ್ತಿದ್ದಾರೆ.

ಸಂಚಯ, ಸಂಚಿ, ಕಿಂದರಿಜೋಗಿ ಹೀಗೆ ನಾನಾ ಮುಖಗಳಲ್ಲಿ ಅವರ ಪ್ರತಿಭೆ ಪ್ರಕಟವಾಗಿದೆ.

ಬ್ಲೀಪ್‌

(ಅಂತರಿಕ್ಷದಲ್ಲಿ)

ಹೀಗೊಂದು ಸಣ್ಣ ದನಿಯಿಂದ ಇಡೀ ವಿಶ್ವದ ಉಗಮವಾಗಿರಬೇಕು.

ರೋಬೋಟ್ / ಬಾಟ್‌ಗಳ ಇದೇ ರೀತಿಯ ದನಿ ಮುಂದಿನ ದಿನಗಳಲ್ಲಿ ನಮಗೆ ಪ್ರತಿಕ್ಷಣದ ಉತ್ತರವೋ, ಪ್ರತಿಕ್ರಿಯೆಯೋ ಆಗಿರಬಹುದು.

‍ಶತಮಾನಗಳ ಹಿಂದೆ ನಾವು ಮಂಗನಿಂದ ಮಾನವನಾದ ಕತೆಯನ್ನು ಕೇಳೀಯೇ ಇರುತ್ತೇವೆ. ಆ ಮೊದಲ ಮಾನವ ಭೇಟೆ ಆಡುತ್ತಿದ್ದ, ವ್ಯವಸಾಯ ಮಾಡುತ್ತಿದ್ದ, ‌ಕಲ್ಲಿನ ಕಿಡಿಯ ಸಹಾಯದಿಂದ ಬೆಂಕಿ ಹಚ್ಚಿ ಬಿಸಿಬಿಸಿ ಆಹಾರದ ರುಚಿ ಸವಿಯುತ್ತಿದ್ದ ಎನ್ನುವುದನ್ನು ನಾವು ಅರಿತಿದ್ದು ಹೇಗೆ? ನಂತರದ ದಿನಗಳಲ್ಲಿ, ಅವನ ಕೈಚಳಕದಲ್ಲಿ ರೂಪುಗೊಂಡ ಆ ಗವಿಗಳ ಚಿತ್ರಗಳು, ಕಟೆದ ಶಿಲೆಗಳು, ಶಾಸನಗಳು, ತಾಳೆಗರಿಗಳು, ಉಕ್ಕಿನ ಕತ್ತಿ, ಗುರಾಣಿ, ತುಕ್ಕು ಹಿಡಿಯದ ಆಶೋಕ ಚಕ್ರವಿರುವ ಸ್ತಂಭ – ಇವೆಲ್ಲವೂ ೨೧ನೆಯ ಶತಮಾನದಲ್ಲೂ ಕೂಡ ಮಾನವ ತನ್ನದೇ ಇತಿಹಾಸ ಹುಡುಕುವ, ಜ್ಞಾನದ ಆಗರಕ್ಕೆ ಕೈಚಾಚುವ ಸಾಹಸಗಳಿಗೆ ಹೊಸ ಅರ್ಥಗಳನ್ನೂ, ಉತ್ತರಗಳನ್ನೂ, ಪೂರ್ವಜರ ದೃಷ್ಟಿಕೋಣದಿಂದ ನೋಡುವ ಅವಕಾಶ ಕಲ್ಪಿಸಿಕೊಡುತ್ತಿವೆ.

ನಿಮ್ಮ ಅಜ್ಜಿ ತಾತಂದಿರು, ಅಪ್ಪ ಅಮ್ಮ ತಮ್ಮೂರಿನ ಬಗ್ಗೆ, ತಮ್ಮವರ ಬಗ್ಗೆ ಹೇಳಿದ ಮಾತುಗಳನ್ನೂ, ಅದು ನಿಮ್ಮ ಸ್ಮೃತಿಪಟಲದಲ್ಲಿ ಚಾಪು ಒತ್ತಿದ ಚಿತ್ರಣಗಳನ್ನೂ ನೆನಪಿಸಿಕೊಳ್ಳಿ. ಅದರಲ್ಲಿ ನೀವು ಕಲಿತ ವಿಷಯಗಳ ಪಟ್ಟಿ ಮಾಡಿಕೊಳ್ಳಿ.

ಈ ಕ್ರಿಯೆ ಕಂಪ್ಯೂಟರಿನ ಹಾಗೂ ಮೊಬೈಲ್‌ನ ಪರದೆಯ ಮೇಲೆ ಕೈ ‍ಆಡಿಸುವವರಿಗೂ ಅನ್ವಯಿಸುತ್ತದೆ. ಸ್ವಲ್ಪ ಸಮಯದ ರೆಕ್ಕೆ ಹಿಡಿದು ಮುಂದಿನ ಶತಮಾನಗಳಿಗೆ ಹೋಗಿ ಬರೋಣವೇ?

ಹೌದು ಟೈಮ್ ಟ್ರಾವೆಲ್-ನಮ್ಮ ಮುಂದಿನ ತಲೆಮಾರುಗಳು ತಮ್ಮ ಪೂರ್ವಜರ ಇತಿಹಾಸ ತಿಳಿಯಲು ಏನು ಮಾಡಿಯಾರು ಎಂದು ಇಣುಕಿ ನೋಡಲು. ಅವರಿಗೆ ನಮ್ಮ ಬದುಕಿನ ಬಗ್ಗೆ ತಿಳಿಯಲು ನಾವು ಚಿಕ್ಕವರಿಂದ ಕೇಳುತ್ತಾ ಬಂದ ಕತೆ ಕೇಳಲು, ನಮ್ಮ ಕಲೆ, ಸಂಸ್ಕೃತಿ, ವಿವಿಧ ವಿಷಯಗಳಲ್ಲಿರುವ ಕುಶಲತೆ ಇತ್ಯಾದಿಗಳನ್ನು ಕಲಿಯಲು ನಮಗೆ ಲಭ್ಯವಿರುವ ಮುಕ್ತ ವಾತಾವರಣ, ಸ್ವಾತಂತ್ರ್ಯ ಇರುತ್ತದೆಯೇ? ಅದೂ ಇಂಟರ್ನೆಟ್ ಯುಗದಲ್ಲಿ ಈ ಮುಕ್ತತೆಯ ಸ್ವಾತಂತ್ರ್ಯವನ್ನು ನಾವು ಉಳಿಸಿಕೊಂಡು ಹೋಗಲು ಸಾಧ್ಯವಿದೆಯೇ? ಅಥವಾ ಎಲ್ಲದಕ್ಕೂ ಪೇ-ವಾಲ್/ಹಣಕೊಟ್ಟು ಬಾಳ್ವೆ ಮಾಡುವ-ಉಸಿರಾಡಲೂ ಅನುಮತಿ ಪಡೆಯಬೇಕಾದ ಪ್ರಪಂಚದ ಸೃಷ್ಟಿಯ ಎಡೆತಾಗುತ್ತಿದ್ದೇವೆಯೇ? ಈ ಎಲ್ಲ ಪ್ರಶ್ನೆಗಳನ್ನು ಒಮ್ಮೆ ಕೇಳಿ ಉತ್ತರವನ್ನೂ ತಿಳಿದುಕೊಳ್ಳುವ ತವಕ ನನ್ನಲ್ಲಂತೂ ಇದೆ. ನಿಮಗೆ?

‍ನಾನು ಬ್ಲಾಗ್/ಕನ್ನಡದಲ್ಲಿ ಮುಕ್ತವಾಗಿ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ಶುರುವಿಟ್ಟುಕೊಂಡದ್ದು ೨೦೦೬ರ ಆಸುಪಾಸಿನಲ್ಲಿ. ಅದಕ್ಕಿಂತ ಮೊದಲು ಇಂಟರ್ನೆಟ್ ಬಳಸಿಯೂ ತಂತ್ರಜ್ಞಾನ ಮನಸ್ಸಿಗೆ ಪರಕೀಯವಾಗಿತ್ತು. ಕಂಪ್ಯೂಟರ್ ಕಲಿತದ್ದು ಆಕರ್ಷಣೆ ಮತ್ತು ಅದೊಂದು ಆಯ್ಕೆ, ಜೊತೆಗೆ ಬದುಕು ಕಟ್ಟಿಕೊಳ್ಳಲು ಕನಸು ಕಾಣುವಂತೆ ಮಾಡಿದ ವಿಷಯ.

ಈ ರೀತಿ ಕಾಡಿದ್ದು ಬಿಟ್ಟರೆ, ಪರದೆಯಲ್ಲಿ ಕನ್ನಡ ಮೂಡಿಸಲು ಸಾಧ್ಯ ಎಂದು ತೋರಿಸಿಕೊಟ್ಟು, ಅದು ನನ್ನ ಮತ್ತು ಜಗತ್ತಿನೊಡನೆ ನನ್ನದೇ ಭಾಷೆಯ ಸೇತುವೆಯಾಗಿ ಮಾರ್ಪಾಡಾಗಲು ಕಾರಣರಾದ ಅಂದಿನ ಗೆಳೆಯರು, ನಮ್ಮೆಲ್ಲರ ಚರ್ಚೆಗಳು, ಪ್ರಶ್ನೆಗಳು ಹಾಗೂ ಜೊತೆಜೊತೆಗೆ ಕಂಡುಕೊಂಡ ಉತ್ತರಗಳು.

ಮುಂದಿನ ದಿನಗಳಲ್ಲಿ ತಂತ್ರಜ್ಞಾನ, ತಂತ್ರಾಂಶಗಳ ಸಾಮುದಾಯಿಕ ಬಳಕೆ, ಬದಲಾವಣೆ ಸಾಧ್ಯತೆಗಳು ಇತ್ಯಾದಿಯ ಚರ್ಚೆಯ ಜೊತೆ ಅವುಗಳ ಇತಿಹಾಸ, ಪರವಾನಗಿಗಳು (ಲೈಸೆನ್ಸ್‌ಗಳು), ಅದನ್ನು ತನ್ನದಾಗಿಸಲು ಬೇಕಾದ ಖರ್ಚಿನ ಬಾಬ್ತು, ಪರ್ಯಾಯಗಳ ಹುಡುಕಾಟ – ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ (Free and Open Source Software) ಸಮುದಾಯ, ಚಳುವಳಿ ಹಾಗೂ ಮುಕ್ತ ಹಾಗೂ ಸ್ವತಂತ್ರ ಸಂಸ್ಕೃತಿಗೆ (Free Culture) ನನ್ನನ್ನು ಪರಿಚಯಿಸಿತು.

ವರ್ಷ ೨೦೦೦ದಲ್ಲೇ ಕಂಪ್ಯೂಟರ್ ಲೋಕ ಕದ ತಟ್ಟಿದ್ದೆ. ಆದರೆ, ಈ ಲೋಕದ ಇತಿಹಾಸ, ಸಾಮಾಜಿಕ ಹಾಗೂ ಸಮುದಾಯಿಕ ಭಾಗವಹಿಸುವಿಕೆ ಇತ್ಯಾದಿ ವಿಷಯಗಳ ಆಳಕ್ಕೆ ಇಳಿಯಲು ಸಾಧ್ಯವಾಗಿದ್ದು ಕನ್ನಡವನ್ನು ಕೀಬೋರ್ಡ್ ಮೂಲಕ ಕೀಲಿಸು‍ವುಕ್ಕಿದ್ದ ಅಡತಡೆಗಳನ್ನು ದಾಟುವ ಮೂಲಕ.

ಮುಕ್ತವಾಗಿ ಒದಗಿ ಬಂದ ಮಾಹಿತಿ, ಇಂಟರ್ನೆಟ್‌ನಲ್ಲೂ ಅದರ ಚಾಪು, ತಂತ್ರಜ್ಞಾನದ ಬೆಳವಣಿಗೆಯಲ್ಲಿ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಸಮುದಾಯಗಳ ಪಾತ್ರ, ಮುಕ್ತ ಶಿಷ್ಟತೆಗಳು (‌Open Standards) ನಮ್ಮ ಎಲೆಕ್ಟ್ರಾನಿಕ್/ಸೊನ್ನೆ ಹಾಗೂ ಒಂದರ ಬೈನರಿ ಬದುಕಿನ ಮೇಲೆ ಬೀರಿರುವ ಪರಿಣಾಮಗಳು ಕ್ರಮೇಣ ನನ್ನನ್ನು ಆವರಿಸಿಕೊಂಡು ಬಿಟ್ಟವು. ‍

ಸಾಫ್ಟ್ವೇರ್ ಉದ್ಯೋಗ ಕಿಸೆ ತುಂಬುವ ಆಸರೆಯಾಗಿ ನಂತರ ನನ್ನ ಇತರೆ ಆಸಕ್ತಿಗಳನ್ನು ಬೆಳೆಸಿಕೊಳ್ಳುವ ನೀರೆರೆದ ನಂತರ ಎಲ್ಲರಂತೆ ನಾನೇನು ಬೇರೆ ಮಾಡಲು ಸಾಧ್ಯ ಎಂದುಕೊಂಡಾಗ ಬರೆಯಲು ಕುಳಿತೆ. ಬರೆಯುವುದಾದರೂ ಏನನ್ನು ಎನ್ನುವ ಪ್ರಶ್ನೆ ಅಷ್ಟಾಗಿ ಕಾಡಲಿಲ್ಲವೆನ್ನಿ.

ಕಂಪ್ಯೂಟರ್ ಕೊಳ್ಳುವುದು ಹೇಗೆ ಎಂದು ನನ್ನ ಲಿನಕ್ಸಾಯಣ ಬ್ಲಾಗ್‌ನಲ್ಲಿ ಆರಂಭಿಸಿದ ಮಾತುಕತೆ, ನನಗೇ ಮಾಹಿತಿಯ ಮುಕ್ತ ಕಣಗಳ ಪರಿಚಯ ಮಾಡಿಕೊಳ್ಳಲು ವೇದಿಕೆ ಆಗಿ ಬದಲಾಗಬಹುದು ಎಂದು ಅರಿತುಕೊಳ್ಳುವಷ್ಟರಲ್ಲಿ, ಹತ್ತಾರು ಮುಕ್ತ ಸಮುದಾಯಗಳಲ್ಲಿ ಪಾಲುದಾರನಾಗಿ ಹೋಗಿದ್ದೆ.

ಇಂಟರ್ನೆಟ್‌ನ ತುಂಬ ಇದ್ದ ಮುಕ್ತ ವೇದಿಕೆಗಳು, ತಂತ್ರಾಂಶಗಳು (Software) ನನ್ನ ಬಿಡುವಿನ ಸಮಯದ ಸಂಗಾತಿಗಳಾದವು. ವಿಕಿಪೀಡಿಯಾ ಸಮುದಾಯ, ಅಲ್ಲಿ ಬಳಸುತ್ತಿದ್ದ ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್, ಗೂಗಲ್‌ ಸರ್ಚ್‌ನಲ್ಲಿ ಬರುವ ಅದರ ಮೊದಲ ಕೊಂಡಿ, ಆ ಹೊತ್ತಿಗಾಗಲೇ ಅದರಲ್ಲಿ ನಾನು ಎಡತಾಕಿದ್ದ ವಿಷಯಗಳು ಇತ್ಯಾದಿ ನಿಧಾನವಾಗಿ ಅಲ್ಲಿನ ಸಮುದಾಯದತ್ತ, ಅವು ಕೆಲಸ ಮಾಡುವ ಪರಿಯನ್ನು ಅರ್ಥ ಮಾಡಿಕೊಳ್ಳುವತ್ತ ಆಕರ್ಷಿಸಿದವು.

Tim berners lee, Free Software Movement, Richard Stallman, Linus Torvalds, Lawrence Lessig ಹೀಗೆ ಹತ್ತು ಹಲವು ‍ಕಂಪ್ಯೂಟರ್ ಲೋಕದ ತಾರೆಗಳ, ‌ಅವರು ಕಟ್ಟಿದ ಇಂಟರ್ನೆಟ್ ಲೋಕದ ಅದ್ಭುತಗಳ ಫಿಲಾಸಫಿಯನ್ನು ತಿಳಿದುಕೊಳ್ಳುವತ್ತ ನನ್ನ ಪಯಣ ಸಾಗಿತು.

ಚಿಕ್ಕವರಿದ್ದಾಗ ಪ್ರಶ್ನೆ ಕೇಳಿ ಉತ್ತರ ಪಡೆದದ್ದಕ್ಕೂ, ರೇಡಿಯೋ, ಪತ್ರಿಕೆ, ಪುಸ್ತಕಗಳಿಂದ ಉತ್ತರ ಪಡೆದದ್ದಕ್ಕೂ ವ್ಯತ್ಯಾಸವಿರಲಿಲ್ಲ. ಆದರೆ ಬೆಳೆಯುತ್ತಾ ಬಂದಂತೆ, ಬದುಕು ಮೆಕ್ಯಾನಿಕಲ್ ಆಗುತ್ತಿದ್ದಂತೆ ತಂತ್ರಜ್ಞಾನ ನಮ್ಮಿಂದ ಬಹಳಷ್ಟನ್ನು ಕಸಿದಿದೆ ಎನ್ನುವ ಜಾಗೃತ ಭಾವನೆ ಹೆಚ್ಚಿತು.

ವಿಕಿಪೀಡಿಯಾದ ಲೇಖನಗಳಲ್ಲಿ ಮಾಹಿತಿ ತುಂಬುವಾಗ, ಅಲ್ಲಿ ನಾನು ಹಂಚಿಕೊಳ್ಳುವ ಮಾಹಿತಿಗೆ ಉಲ್ಲೇಖ ನೀಡಬೇಕು, ಆ ಉಲ್ಲೇಖ ಎಲ್ಲಿದೆ, ಇಲ್ಲದಿದ್ದರೆ ಏನು ಮಾಡುವುದು, ಆನ್‌ಲೈನ್ ಮಾಹಿತಿ ಇಲ್ಲದಿದ್ದರೆ ಏನು ಮಾಡುವುದು? ಪುಸ್ತಕಗಳನ್ನು ನಾವೇ ಸೇರಿಸಬಹುದೇ? ಇದರಿಂದ ಮತ್ತಷ್ಟು ಜನರಿಗೆ ಮಾಹಿತಿ ಸಿಕ್ಕರೆ ಉಪಯೋಗವಾಗಬಹುದು.

ಜೊತೆಗೆ ಇವೆಲ್ಲವನ್ನೂ ಅವರೂ ಮುಕ್ತವಾಗಿಯೇ ಇಡಬೇಕು, ಮುಂದಿನ ತಲೆಮಾರಿಗೂ ಇದು ಸಿಗುವಂತಾಗಬೇಕು ಎಂದ ವಿಕಿಪೀಡಿಯ ನಿರ್ಮಾತೃಗಳಲ್ಲೊಬ್ಬನಾದ ಜಿಮ್ಮಿ ವೇಲ್ಸ್‌ನ (‌J‌immy Wales) ಮಾತು ನಿಜ ಎನಿಸಿದ್ದು, ಮುಂದೆ ನಮ್ಮ ವಿಜಯನಗರ ಸಾಮ್ರ್ಯಾಜ್ಯದ ನೆನಪಾಗಿರುವ ಹಂಪಿಗೆ ಭೇಟಿ ಕೊಟ್ಟಾಗ ಸಿಕ್ಕ ಹಂಪಿಯ ಮುಕ್ತ ಸಂಸ್ಕೃತಿಗೆ ಸಂಬಂಧಿಸಿದ ಪುಸ್ತಕ ಸಮುದಾಯಿಕ ಪಾಲ್ಗೊಳ್ಳುವಿಕೆ ಹಾಗೂ ಜ್ಞಾನದ ಹಂಚಿಕೆಯ ದಾಹವನ್ನು ನನ್ನಲ್ಲಿ ಜೀವಿತಾವಧಿಗೆ ಹಸಿರಾಗಿಸಿವೆ.

ಒಂದು ಕಾಲದಲ್ಲಿ ಪುಸ್ತಕಗಳನ್ನು ಕೊಳ್ಳಲು ಆಗದೆ, ಲೈಬ್ರರಿಗೆ ಎಡತಾಕುತ್ತಿದ್ದ ಕಾಲುಗಳು, ಸಾಮಾನ್ಯನಿಗೂ ಮುಕ್ತ ಜ್ಞಾನದ ಹಂಚಿಕೆಯ, ಸಂಶೋಧನೆಯ ಸಾಧ್ಯತೆಗಳನ್ನು ತೋರಿಸಿಕೊಡುವ ಚಳುವಳಿಯ ಕಡೆ ನಡೆದಿವೆ. ಇಂದಿಗೂ ಪ್ರತಿ ಕ್ಷಣವೂ ಹೊಸ ವಿಷಯವನ್ನು ನಾನು ಕಲಿಯುತ್ತಿರುವುದು ನಿಜವೇ ಆದರೆ, ಮುಕ್ತವಾಗಿ ಆ ವಿಷಯಗಳ ಲಭ್ಯತೆ ಹಾಗೂ ಅದನ್ನು ಕೇಳುವ, ನನ್ನದೇ ದಾಟಿಯಲ್ಲಿ ಅರ್ಥೈಸಿಕೊಳ್ಳುವ, ನನ್ನ ಅವಶ್ಯಕತೆಗೆ ಬಳಸಿಕೊಳ್ಳುವ ಸ್ವಾತಂತ್ರ್ಯ ನನಗೆ ಇರುವುದನ್ನು ಸೂಚಿಸುತ್ತದೆ. ಇದೇ ಸ್ವಾತಂತ್ರ್ಯ ನನ್ನಲ್ಲಿನ ಜ್ಞಾನವನ್ನು ಇತರರಿಗೆ ಹಂಚಿಕೊಳ್ಳಲೂ ಪ್ರೇರೇಪಿಸುತ್ತದೆ.

ಮುಕ್ತ – ಉಚಿತ – ಸ್ವಾತಂತ್ರ್ಯ (Open – Free – Freedom) ಈ ಪದಗಳು ಹಾಗೂ ತಂತ್ರಾಂಶ ಸಾಮ್ರಾಜ್ಯದ ಸುತ್ತ ಇವುಗಳ ಅರಿವಿನ ಗೋಜಲು ಬಿಡಿಸಲು ಹವಣಿಸಿದಷ್ಟೂ ಮಾಹಿತಿ ತಂತ್ರಜ್ಞಾನ ಲೋಕದ ಪೂರ್ಣ ಚಿತ್ರಣ ನಮ್ಮ ಮುಂದೆ ಬರುತ್ತದೆ. ಉಚಿತ ಎನ್ನುವುದನ್ನು ಮಾತ್ರ ಸುಲಭವಾಗಿ ಅರ್ಥೈಸಿಕೊಳ್ಳುವ ನಾವು – Free/Freedom ಎನ್ನುವಲ್ಲಿ ಮನುಷ್ಯರಾಗಿ ನಾವು ಇದುವರೆಗೆ ನಡೆದು ಬಂದಿರುವ ದಾರಿ ಹಾಗೂ ಇಲೆಕ್ಟ್ರಾನಿಕ್ ಯುಗದಲ್ಲಿ ನಡೆದುಕೊಳ್ಳುತ್ತಿರುವ ರೀತಿ-ನೀತಿಯ ಗ್ರಹಿಕೆ‍ಯ ಕನವರಿಗೆ ದಾರಿ ಆಗುವಂತ ಚರ್ಚೆಗೆ ‘ಮುಕ್ತ ಕಣ’ದಲ್ಲಿ ಈ ಮೂಲಕ ಮುನ್ನುಡಿ ಬರೆಯುತ್ತಿದ್ದೇನೆ.

ರಿಚರ್ಡ್ ಸ್ಟಾಲ್ಮನ್‌ನ ಸ್ವತಂತ್ರ ತಂತ್ರಾಂಶ ಚಳುವಳಿಯ ಉದ್ದೇಶವನ್ನು ಅರಿಯುವುದರೊಂದಿಗೆ ಮುಂದಿನ ವಾರ ಮತ್ತೆ ಸಿಗೋಣ.

‍ಲೇಖಕರು ಓಂಶಿವಪ್ರಕಾಶ್

August 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vasudeva Sharma

    ಆಸಕ್ತಿದಾಯಕ ತಂತ್ರಜ್ಞಾನದ ವಿಚಾರಗಳು.‌

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: