ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅರ್ಚನಾ ಎಚ್ ಕವಿತೆ- ಅವನು ದೂರವಾದ್ದರ ಕಾರಣ..!?

ಅರ್ಚನಾ ಎಚ್

ಇಂದಿಗೂ ಇಂಗಿತಕೆ ಸಿಗದ
ಒಳಹೊರಗುಗಳ ಬೆರಗುಗಣ್ಣಲ್ಲೇ
ನೋಡುವ ಚಿನಕುರಳಿ ಚಿಟ್ಟೆ ..
ಬೊಗಸೆ ಕಣ್ಗಳಲಿ ಅವನ ಬಿಂಬವಷ್ಟೇ
ಇಳಿಸಿದ್ದು..,
ಮತ್ಯಾರ ನೆರಳ ಸೋಕದಷ್ಟು..!
ಪ್ರೀತಿ ಕೊಟ್ಟದ್ದು ಅಕ್ಷಯಪಾತ್ರೆ
ದಕ್ಕಿದ್ದು ಮಾತ್ರ ಅರೆಹೊಟ್ಟೆ..!

ಕ್ರಯ ವಿಕ್ರಯಗಳಿದ್ದರೆ ತಾನೇ ಬಂಧ
ಹಮ್ಮು ಬಿಮ್ಮು ಬಿಗುಮಾನಗಳ
ಕಡಲ ದಾಡಿದರಷ್ಟೇ ಗಮ್ಯ…
ಬಣ್ಣ ಮಾಸಿದ್ದಿರಬಹುದು
ಒಳಗಣ್ಣ ಅರಿವು ಅಗ್ನಿದಿವ್ಯ…
ನೆರೆ ಕೂದಲಿಗಷ್ಟೇ ಕಾಲ ಮನಸ್ಸಿಗಲ್ಲ
ಕಪ್ಪುಮೋಡಗಳ ದಟ್ಟ ಹರವಿನಲಿ
ರಜತ ಕಾಂತಿಯ ಅಂಚಿಟ್ಟ ಕಾವ್ಯ..

ನೀನೊಂದು ಹೆಮ್ಮರವೆನ್ನಲೇ..!?
ಲತೆಗಳ ಬಹುತ್ವವನ್ನೂ ಸಂಭಾಳಿಸುವಿ..
ನಿನ್ನಾತ್ಮಕ್ಕಂಟಿದ ಉಸಿರೆಂದೆಣಿಸಿದ್ದೆ..
ಅನಿಸಿಕೆ ಅಭಿವ್ಯಕ್ತಿಗಳೆಲ್ಲವೂ‌ ನನ್ನದಷ್ಟೇ..
ಮಣಭಾರ ಹೊತ್ತು ತಿರುಗುವ ಪುರುಸೊತ್ತಿಲ್ಲ
ಭಾವನೆಗಳಿಗೂ ಭರವಸೆಯ ನಾಳೆಗಳಿಗೂ..
ಮಂಕರಿಯ ಜೋಳ ಇನ್ನು ಬತ್ತಿಲ್ಲ..!
ಇಂದೋ ನಾಳೆಯೋ ಮಾರುವಷ್ಟು‌ ಹಸಿ..!

ಕೋಶದಲಿ ಸಿಗದ ಭಾಷೆಗೊಲಿಯದ ನೋವು
ಉತ್ತಿಬಿತ್ತಿ ಬೆವರಿಳಿಸಿ ಬೆಳೆದ ಬೆಳೆ
ಅತಿವೃಷ್ಟಿಯಲಡರಿ ನೆಲಕಚ್ಚಿದಂತೆ..
ವಾರಪೂರ್ತಿ ಹಸಿದು ತತ್ತರಿಸಿದವಗೆ
ದೊರೆತ ಕೂಳ ಸೊಣಗ ತಿಂದಂತೆ..
ನಂಬಿ ಕೆಟ್ಟೆನೆಂಬ ದಾರ್ಷ್ಟ್ಯ ಸ್ವೀಕೃತವಲ್ಲ..
ಮನಸ್ಸು ವಯಸ್ಸು ಕಟ್ಟುಪಾಡಿನ ಪರ್ವವಲ್ಲ..!
ಅಂತರ್ಮುಖಿಯಾದರೂ
ಬಲಾಢ್ಯಳು‌ ನಾನು..!!

ಒಳಗಣ್ಣು ಮತ್ತೆ ತೆರೆಯಬಹುದು
ತೆರೆಮರೆಯ ನಿನ್ನಾಟಗಳೆಲ್ಲಾ ಸಾಕ್ಷ್ಯ ಸ್ಪಷ್ಟ ..
ಪುರಾವೆಗಳ ಹೆಕ್ಕಿ ತೆಗೆಯಲೇನು ಕಷ್ಟದ ಮಾತಲ್ಲ
ಮುಗಿಲ ಹಕ್ಕಿಗೆ
ತೇಲುವ, ನಡೆವ, ಹಾರುವ
ಹಾಡುವ, ಬೇಟೆಯಾಡುವ ಕಲೆಯೂ ಕರಗತ..!
ಪಾತ್ರೆಯಲಿಟ್ಟ ಹಾಲು ಖುಲಾಸೆಯಾಗಿದ್ದು
ಕೆಲಸದವಳ ತಪ್ಪೋ ಬೆಕ್ಕಿನದ್ದೋ
ಅಸ್ಪಷ್ಟ ಮಾತ್ರ..!!

‍ಲೇಖಕರು avadhi

24 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading