ಅರ್ಚನಾ ಆರ್ ಓದಿದ ‘ವೈಜಯಂತಿಪುರ’

ಡಾ ಅರ್ಚನಾ ಆರ್ 

ವೈಜಯಂತಿಪುರ ಮಯೂರವರ್ಮನ ವೈಭವದ ರೋಚಕ ಕಥಾನಕ…

ಕನ್ನಡದ ಪ್ರಮುಖ ಕಾದಂಬರಿಕಾರರು, ಅಂಕಣಕಾರರು ಮತ್ತು ಕಥೆಗಾರರಾದ ಸಂತೋಷ್‌ಕುಮಾರ್ ಮೆಹಂದಳೆ ಅವರು ಪ್ರತಿಬಾರಿ ಓದುಗರ ಮುಂದಿಡುವ ಕೃತಿಗಳು ವಿಭಿನ್ನವಾದವುಗಳು. ಅವರ ಒಟ್ಟೂ ಸಾಹಿತ್ಯ ಸೃಷ್ಟಿಯನ್ನು ಗಮನಿಸಿದಾಗ ಅವರ ಎಲ್ಲಾ ಕೃತಿಗಳು ಒಂದಕ್ಕಿಂತ ಮತ್ತೊಂದು ಭಿನ್ನವಾದ ಲೋಕವನ್ನು ಓದುಗರ ಮುಂದಿಟ್ಟಿವೆ. ನಿಮಗೆ ನನ್ನ ಕೃತಿಗಳು ಹಿಡಿಸದಿದ್ದರೆ ಹಣವನ್ನು ವಾಪಸು ಮಾಡುವುದಾಗಿ ಹೇಳುವ ಅವರ ಮಾತಿನಲ್ಲಿ ಬೆಟ್ಟದಷ್ಟು ಆತ್ಮವಿಶ್ವಾಸವಿದೆ. ಇಂತಹ ಅಪರೂಪದ ಲೇಖಕರು ಈ ಬಾರಿ ʻವೈಜಯಂತಿಪುರʼ ಎಂಬ ಐತಿಹಾಸಿಕ ಕಾದಂಬರಿಯನ್ನು ಕನ್ನಡ ಸಾರಸ್ವತ ಲೋಕದ ಮುಂದಿಟ್ಟಿದ್ದಾರೆ. ಬಿಡುಗಡೆಯಾಗದೆ ನಾಲ್ಕನೇ ಮುದ್ರಣದ ಹಂತದಲ್ಲಿರುವ ʻವೈಜಯಂತಿಪುರʼದ ವೈಶಿಷ್ಟ್ಯತೆಗಳನ್ನ ಈ ಲೇಖನದ ಮೂಲಕ ತಮ್ಮ ಮುಂದಿಡುವ ಪ್ರಯತ್ನ ಮಾಡುತ್ತೇನೆ.

ಸಹಜವಾಗಿ ಜನಪ್ರಿಯ ಲೇಖಕರ ಯಾವುದೇ ಸಾಹಿತ್ಯ ಕೃತಿಗಳು ಬಿಡುಗಡೆಯಾದಾಗ ಅದನ್ನು ಓದಿ ವಿಮರ್ಶಿಸುವ ವರ್ಗ ಆ ಕೃತಿಯನ್ನು ಹೊಗಳುವ ಅಥವಾ ಲೇಖಕರ ಮೇಲಿನ ಪೂರ್ವಗ್ರಹದಿಂದ ತೆಗೆಯುವ, ಕುಹಕವಾಡುವ ಪ್ರತಿಕ್ರಿಯೆಗಳನ್ನು ನೀಡಲು ಪೈಪೋಟಿಯಲ್ಲಿರುತ್ತವೆ. ಆದರೆ ನನ್ನಮಟ್ಟಿಗೆ ಒಂದು ಉತ್ತಮ ಕೃತಿಯ ಹಿಂದಿರುವ ಆ ಲೇಖಕನ ಶ್ರಮ, ಶ್ರದ್ಧೆ, ನಿರೀಕ್ಷೆಗಳಿಗೆ ಬೆಲೆ ಕಟ್ಟಲಾಗದು. ಆ ದೃಷ್ಟಿಯಲ್ಲಿ ʻವೈಜಯಂತಿಪುರʼದಂತಹ ಕಾದಂಬರಿ ಕನ್ನಡ ಸಾಹಿತ್ಯದ ಮಟ್ಟಿಗೆ ನಿಜಕ್ಕೂ ಹೆಮ್ಮೆಯ ಕೃತಿಯಾಗಿದ್ದು ಅದಕ್ಕಾಗಿ ನಾನು ಆರಂಭದಲ್ಲೇ ಇದರ ವೈಶಿಷ್ಟ್ಯಗಳನ್ನು ಹೇಳಬಯಸುತ್ತೇನೆ ಎಂದು ಪ್ರಸ್ತಾಪಿಸಿದ್ದು. ಕನ್ನಡ ನಾಡು-ನುಡಿಯ ಬಗ್ಗೆ ನಿಜವಾದ ಹೆಮ್ಮೆ ಇರುವ ಯಾರಿಗಾದರೂ ಹೀಗೆಯೇ ಅನಿಸುತ್ತದೆ. ಕಾದಂಬರಿಯ ಆರಂಭದಲ್ಲಿಯೇ ಮಹಂದಳೆಯವರು ಯಾಕೆ ಈ ಕಾದಂಬರಿ ಮುಖ್ಯ ಎಂಬ ಪ್ರಶ್ನೆಯನ್ನು ಓದುಗರ ಮುಂದಿಟ್ಟು ಅದನ್ನು ಸಮರ್ಥಿಸಿಕೊಂಡಿರುವುದು ನನ್ನ ಹೇಳಿಕೆಗೆ ಪುಷ್ಟಿ ನೀಡುತ್ತದೆ.

ಕನ್ನಡದಲ್ಲಿ ಐತಿಹಾಸಿಕ ಕಾದಂಬರಿಗಳು ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರೂ ಮೆಹಂದಳೆ ಅವರು ಆರಿಸಿಕೊಂಡಿರುವ ಮಯೂರವರ್ಮನ ಕಥಾಹಂದರ ಅಪೂರ್ವವಾಗಿದೆ. ಏಕೆಂದರೆ ಕನ್ನಡ ನಾಡಿನ ಮೊದಲ ಸಾಮ್ರಾಜ್ಯ ಸ್ಥಾಪಕರಾದ ಕದಂಬರ ಕುರಿತು ಇತಿಹಾಸವಾಗಲಿ, ಸಾಹಿತ್ಯ ವಲಯವಾಗಲಿ ಹೆಚ್ಚು ಹೇಳದೆ ಮೌನವಹಿಸಿದ್ದು ನಿಜಕ್ಕೂ ಆಶ್ಚರ್ಯವೇ ಸರಿ. ಕ್ರಿ.ಶ. 316ರಿಂದ 355ರವರೆಗೆ ಅಂದಾಜು ನಾಲ್ಕರಿಂದ ಐದು ದಶಕಗಳವರೆಗೆ ಆಳ್ವಿಕೆ ನಡೆಸಿದ ಮಯೂರವರ್ಮ ಅಂದಿನಿಂದ ಮುಂದಿನ 500 ವರ್ಷಗಳ ಕಾಲ ಕದಂಬರ ಸಾಮ್ರಾಜ್ಯ ಜೀವಂತವಾಗಿರುವಂತೆ ಭದ್ರವಾದ ಬುನಾದಿ ಹಾಕಿದ್ದರೂ ಶಾಸನಗಳ, ಸಾಧನೆಗಳ ಉಲ್ಲೇಖವಿದ್ದರೂ, ‘ವೈಜಯಂತಿಪುರ’ ಕಾದಂಬರಿ ಪ್ರಕಟವಾಗುವವರೆಗೆ ಮನ್ನಣೆ ಸಿಗದೆ ಮಯೂರವರ್ಮ ಹೆಚ್ಚೂಕಡಿಮೆ ಅಜ್ಞಾತವಾಗಿಯೇ ಉಳಿದದ್ದು ಸುಳ್ಳಲ್ಲ. ಇತಿಹಾಸದಲ್ಲಿ ಎಲ್ಲಾ ಮೊದಲುಗಳು ಮೈಲುಗಲ್ಲುಗಳೇ. ಆಗ ಮೈಲುಗಲ್ಲು ಆಗಿದ್ದರೂ ಕನ್ನಡ ನೆಲದ ಮೊದಲ ಬ್ರಾಹ್ಮಣ ರಾಜವಂಶ ಎಂದು ಗುರುತಿಸಿಕೊಳ್ಳಲು ಇಷ್ಟು ಶತಮಾನಗಳು ಬೇಕಾದವು. ಈ ನೆಲವನ್ನಾಳಿದ ಸಾಮಾನ್ಯ ದಂಡನಾಯಕರು, ಪಾಳೆಗಾರರು, ಸಣ್ಣಪುಟ್ಟ ಸಾಮಂತರನ್ನು ಕುರಿತು ಮಾಹಿತಿಗಳು ಸಮೃದ್ಧವಾಗಿವೆ. ಆದರೆ ಕನ್ನಡದ ಮೊದಲ ಸಾಮ್ರಾಟನ ಸಾಧನೆ ಸಮುದ್ರದಷ್ಟಿದ್ದರೂ ಆತನಿಗೆ ದಕ್ಕಿರುವ ಮನ್ನಣೆ, ಗೌರವಾದರಗಳು ಮಾತ್ರ ನ್ಯಾಯಯುತವಾದದ್ದಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಇದುವರೆಗಿನ ಕದಂಬರ ಇತಿಹಾಸವನ್ನು ಒರೆಗೆ ಹಚ್ಚುವಂತೆ ವೈಜಯಂತಿಪುರ ಕಾದಂಬರಿ ರಚನೆಯಾಗಿದೆ.

ದಕ್ಷಿಣದಲ್ಲಿ ಪಲ್ಲವರು, ಉತ್ತರದಲ್ಲಿ ಗುಪ್ತರು ಇಡೀ ಭಾರತವನ್ನೇ ಅನಭಿಷಿಕ್ತ ದೊರೆಗಳ ಹಾಗೆ ಆಳುತ್ತಿದ್ದ ಸಂದರ್ಭದಲ್ಲಿ ಸಾಮಾನ್ಯ ಬಡ ಬ್ರಾಹ್ಮಣ ವಿದ್ಯಾರ್ಥಿ ತೀವ್ರ ವಿದ್ಯಾಕಾಂಕ್ಷಿಯಾಗಿ ಕಂಚಿಗೆ ತನ್ನ ತಾತನೊಂದಿಗೆ ಹೋದವನು, ತನಗಾದ ಅವಮಾನದಿಂದ ಮಹಾವೀರನಾಗಿ ಬದಲಾದ ರಣರೋಚಕ ಕಥೆಯನ್ನ ಕಾದಂಬರಿಯು ಅದ್ಭುತವಾಗಿ ಕಟ್ಟಿಕೊಟ್ಟಿದೆ. ಅವಮಾನವನ್ನೇ ಸಾಧನೆಯನ್ನಾಗಿ ಬದಲಾಯಿಸಿಕೊಂಡ ಮಯೂರವರ್ಮನ ಯಶೋಗಾಥೆ ಕನ್ನಡಿಗರ ಹೆಮ್ಮೆಗೆ ಕಾರಣವಾಗಿ ಈ ನೆಲಕ್ಕೊಂದು ಚಾರಿತ್ರಿಕ ಮೌಲ್ಯವನ್ನು ತಂದುಕೊಟ್ಟ ಕಾದಂಬರಿಯಾಗಿದೆ.

ʻವೈಜಯಂತಿಪುರʼ ಕಾದಂಬರಿಯ ಕಥಾನಕ, ವಸ್ತುವಿಷಯ, ವಸ್ತುನಿರ್ಮಾಣ, ಕಾಲ್ಪನಿಕ ಹರವು, ನಿರೂಪಣಾಶೈಲಿ ಆಕರ್ಷಕವಾಗಿದ್ದು. ಶತಮಾನಗಳ ಹಿಂದಿನ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ, ಮಯೂರವರ್ಮನು ಶೌರ್ಯ, ಸಾಹಸ, ವಿದ್ವತ್ತು, ಪಾಂಡಿತ್ಯ ಎಲ್ಲವೂ ಮೇಳೈವಿಸಿರುವ ಪರಿಪೂರ್ಣ ಸಾಮ್ರಾಟ. ಅದಕ್ಕೆ ಪೂರಕವೆಂಬಂತೆ ಕಾದಂಬರಿಯ ಪುಟಪುಟದಲ್ಲೂ ಎದ್ದುಕಾಣುವ ಅವನ ರಾಜತಾಂತ್ರಿಕ ನೀತಿ, ರಣನೀತಿಯ ನಿರೂಪಣೆ, ರಣತಂತ್ರಗಾರಿಕೆ, ಗೆರಿಲ್ಲಾ ಯುದ್ಧತಂತ್ರ, ಅಗಾಧವಾದ ಸೈನ್ಯದ ನಿರ್ವಹಣೆ, ಸೋತ ಸೈನ್ಯಗಳನ್ನ ಮುಂದಿಟ್ಟುಕೊಂಡು ಸಾಮ್ರಾಜ್ಯವನ್ನು ವಿಸ್ತರಿಸುವ ಚಾಣಾಕ್ಷತನ ಓದುಗರನ್ನ ಮೂಕವಿಸ್ಮಿತರನ್ನಾಗಿಸುತ್ತದೆ.

ʻವೈಜಯಂತಿಪುರʼ ಕಾದಂಬರಿಯ ಪ್ರತಿ ಪುಟಪುಟದಲ್ಲೂ ಮಯೂರವರ್ಮನ ವೈಭವವೇ ಎದ್ದು ಕಾಣುತ್ತದೆ. ಕಥಾನಕಕ್ಕೆ ಪೂರಕವಾಗುವಂತೆ ವೀರ ಶರ್ಮ, ಬಂಧುಸೇನಾ, ಚಂಡಸೇನ, ವೆಂಗಿರಸ ಮುಂತಾದ ಪಾತ್ರಗಳು ಮಯೂರನ ಪಾತ್ರಕ್ಕೆ ಮತ್ತಷ್ಟು ಮೆರುಗನ್ನು ನೀಡಿವೆ. ಕಾದಂಬರಿಯ ಪ್ರತಿಪುಟದ ಕೊನೆಯಲ್ಲಿ ಉಲ್ಲೇಖವಾಗಿರುವ ಶಾಸನಗಳು, ಮಹತ್ವದ ಉಲ್ಲೇಖಗಳು, ದಾಖಲೆಗಳು ಈ ಕೃತಿಗೆ ಮೂಲ ಪರಿಕರವನ್ನು ಒದಗಿಸಿವೆ. ಇತಿಹಾಸದ ವಸ್ತುನಿಷ್ಠತೆಯ ಜೊತೆಗೆ ಕಲ್ಪನೆಗಳ ಹೂರಣ, ಶಾಸನಗಳು, ದಾಖಲೆಗಳ ಪುಷ್ಠಿಯಿಂದಾಗಿ ಮರೆತು ಹೋದ ಕದಂಬರ ಇತಿಹಾಸದ ಅಸ್ಥಿಪಂಜರಕ್ಕೆ ಸೃಜನಶೀಲತೆಯ ರಕ್ತ, ಮಾಂಸಗಳನ್ನು ಸೇರಿಸಿ ಐತಿಹಾಸಿಕ ಕಾದಂಬರಿಗಳ ಪರಂಪರೆಗೆ ಉತ್ತಮ ಕೊಡುಗೆಯನ್ನು ಮೆಹಂದಳೆ ಅವರು ನೀಡಿದ್ದಾರೆ.

ಏಕಕಾಲದಲ್ಲಿ ಇತಿಹಾಸಕ್ಕೂ ನಿಷ್ಠರಾಗಿದ್ದುಕೊಂಡು, ರೋಚಕತೆಗೂ ಕೊರತೆಯಾಗದಂತೆ ಇಂತಹದೊಂದು ಮಹಾನ್ ಕೃತಿ ಬರೆಯಲಿಕ್ಕೆ ಅಗಾಧವಾದ ಪರಿಶ್ರಮ, ಪ್ರತಿಭೆ, ತಾಳ್ಮೆ, ಅಧ್ಯಯನಶೀಲತೆ ಬೇಕು. ಸಂತೋಷ್‌ಕುಮಾರ್ ಮೆಹಂದಳೆ ಅವರಿಗೆ ಅದು ಸಿದ್ಧಿಸಿದೆ.

ಮಯೂರವರ್ಮ ಪಲ್ಲವರ ಬೆನ್ನುಹತ್ತಿದಂತೆ ಮೆಹಂದಳೆಯವರು ಚರಿತ್ರೆಯ ಬೆನ್ನುಹತ್ತಿ, ಮಯೂರ ಶರ್ಮ ಮಯೂರ ವರ್ಮನಾಗುವ ತನಕ ಘಟಿಸಿದ ಬದುಕಿನ ಅಪರೂಪದ ಘಟನೆಗಳನ್ನು ಕಾದಂಬರಿಯ ರೂಪಕ್ಕೆ ತಂದು ನಮ್ಮ ಮುಂದಿಟ್ಟಿದ್ದಾರೆ. ಪ್ರತಿಪುಟವು ರಕ್ತಸಿಕ್ತ ಕಥಾನಕ ಮಾತ್ರವಾಗದೆ, ಮೊದಲ ಕನ್ನಡ ಶಾಸನ ಬರೆಸಿ ದಾಖಲಿಸಿದ ಕ್ಷಣ, ಕನ್ನಡದ ನೆಲದಲ್ಲಿ ಕಾಳಿದಾಸ ಕಾಲಿಟ್ಟನೆಂಬ ಹೆಗ್ಗಳಿಕೆಯ ಘಟನೆಯ ದಾಖಲೆ, ಹೀಗೆ ಮಯೂರ ವರ್ಮನ ಬದುಕಿನ ಅನೇಕ ಕುತೂಹಲಕರ ಐತಿಹಾಸಿಕ ಘಟನೆಗಳೆಲ್ಲವೂ ಅವಿಸ್ಮರಣೀಯವಾಗಿವೆ. ಕ್ರಿ.ಶ. ೪ನೇ ಶತಮಾನದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಅಂತಃಸತ್ವವನ್ನು ತೆರೆದಿಡುವ ಅಮೂಲ್ಯವಾದ ಚಾರಿತ್ರಿಕ ಕಥನ ಇದಾಗಿದೆ. ಓದಿದ ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆಪಡುವ ಕಲಾ ಸೃಷ್ಟಿಯನ್ನು ನೀಡಿರುವ ಮೆಹಂದಳೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

‍ಲೇಖಕರು avadhi

May 8, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: