ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಸುತ್ತಾ ಸುಗಂಧದ ಬಲೆ..

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಇಂದಿನಿಂದ ಅವರ ಹೊಸ ಕಾದಂಬರಿ ಅಂಕಣವಾಗಿ ಆರಂಭ. ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

14

ಕಣ್ಣಲ್ಲಿ ಮೂಡಿದ ಹನಿ ಪುಸ್ತಕದ ಮೇಲೆ ಬೀಳದಂತೆ ಒರೆಸಿಕೊಂಡೆ. ಅಷ್ಟು ಎಚ್ಚರ ಬೇಕಲ್ಲವೇ? ಕಡೇಪಕ್ಷ ಅವನ ಬರೆದ ಅಕ್ಷರವನ್ನು ಕಡೆಯ ತನಕ ಉಳಿಸಿಕೊಳ್ಳಲು, ಅದನ್ನು ಕಲಕುವ ಯಾವುದೂ ಸುಳಿಯಬಾರದು. ಅತ್ತೆ ಅದನ್ನು ತಮ್ಮೆದೆಯಲ್ಲಿ ಶಾಶ್ವತವಾಗಿ ಉಳಿಸಿಕೊಂಡು ಬಿಟ್ಟಿದ್ದಾರೆ. ಅವರಿಗೆ ಈ ದ್ವಂದ್ವವೇ ಇಲ್ಲ. ಹೀಗೇ… ಹೀಗೇ… ಸಂಬಂಧಗಳ ಆಳ-ಅಗಲಗಳು ಗೊತ್ತಾಗಲಾಗದ ಸ್ಥಿತಿಯಲ್ಲಿ ಪ್ರತಿಸಲವೂ ಕಂಗಾಲಾಗಿ ಹೋಗುತ್ತೇನೆ. ಈ ಪುಸ್ತಕಗಳನ್ನು ನನ್ನೊಂದಿಗೆ ಒಯ್ಯಬೇಕು ಎಂದುಕೊಂಡೆ. ಅತ್ತೆ ತೀರಾ ಸಹಜವಾಗಿ. ʻಹುಂ ಅದನ್ನ ಓದುವವರು ಯಾರೂ ಇಲ್ಲ, ನಿಮ್ಮ ಮಾವನಿಗೆ ಇದೆಲ್ಲಾ ಬೇಕಿಲ್ಲ. ನನಗೂ ಅರ್ಥ ಆಗಲ್ಲ. ಹಾಗಾಗಿ ಅವನ ನೆನಪಾದಾಗಲೆಲ್ಲಾ ಈ ಪುಸ್ತಕಗಳನ್ನು ತೆಗೆಯುತ್ತೇನೆ. ಇದರಲ್ಲಿ ವಾಸನೆ ಹಾಗೇ ಇದೆ. ಅವನ ಕೈ ಬೆರಳುಗಳ ಸ್ಪರ್ಶ ಅವಕ್ಕೆ ಅಂಟಿಕೊಂಡಂತೆ ಭಾಸವಾಗುತ್ತದೆ. ಅರ್ಥ ಮಾಡಿಕೊಳ್ಳಲು ಸಾಧ್ಯ ಆಗಿದ್ದಿದ್ದರೆ ನಾನೂ ಓದುತ್ತಾ ಇದ್ದೆ. ಅವನಿಗೆ ಅಕ್ಷರ ಕಲಿಸಿದೆ, ಅಷ್ಟುಮಾತ್ರ ನನಗೆ ಗೊತ್ತಿತ್ತು. ಅವನು ಆ ಅಕ್ಷರಗಳನ್ನೇ ಮೆಟ್ಟಿಲು ಮಾಡಿಕೊಂಡು ಜನರನ್ನು, ಅವರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ಹೋದ. ಎಷ್ಟೋ ಸಲ ಅವನಿಗೆ ನಾನು ಅಕ್ಷರವನ್ನೇ ಹೇಳಿಕೊಡಬಾರದಿತ್ತು ಅನ್ನಿಸುತ್ತೆ. ಯಾವುದಕ್ಕೆ ಯಾವುದನ್ನೋ ತಾಳೆ ಹಾಕುವುದು ಹೇಳು. ಮುದಿವಯಸ್ಸು, ಏನೋ ಯೋಚಿಸುತ್ತೆʼ ಎಂದು. ಪುಸ್ತಕವನ್ನು ಮುಚ್ಚಿದೆ. ಇನ್ನು ಇದನ್ನು ತೆಗೆದುಕೊಂಡು ಹೋಗುವ ಮಾತಿರಲಿ ಯೋಚನೆಯನ್ನೂ ಮಾಡಬಾರದು, ಸತೀಶನ ಅಸ್ತಿತ್ವವನ್ನು ಅತ್ತೆ ಹೇಗೆ ಹೇಗೋ ಉಳಿಸಿಕೊಂಡುಬಿಟ್ಟಿದ್ದಾರೆ. ಅಳೆದೂ ತೂಗಿ ಮಾತಾಡುತ್ತಾ ʻನನ್ನ ಮಾತು ಬಿಡು ಮಗೂ. ಅಲ್ಲಿ ನೀನು ಚೆನ್ನಾಗಿದ್ದೀಯಾ? ಅದನ್ನು ಹೇಳುʼ ಎಂದರು. ನಾನು ಯಾವುದರಿಂದ ತಪ್ಪಿಸಿಕೊಳ್ಳಲು ಇಷ್ಟೆಲ್ಲಾ ಪ್ರಯತ್ನ ಮಾಡುತ್ತಿದ್ದೆನೋ ಅದು ವ್ಯರ್ಥವಾಗಿತ್ತು. ಎದುರಿದ್ದವರು ತಾಯಾಗಿದ್ದಿದ್ದರೆ ಕಷ್ಟಗಳ ಸರಮಾಲೆಯನ್ನು ಬಿಚ್ಚಿಕೊಳ್ಳಬಹುದಿತ್ತು, ಇಲ್ಲ ಹೆಮ್ಮೆಯಿಂದ ತನ್ನನ್ನು ಅವರು ಸುಖದ ಸುಪ್ಪತ್ತಿಗೆಯಲ್ಲಿ ತೇಲಿಸುತ್ತಿದ್ದಾರೆ ಎನ್ನಬಹುದಿತ್ತು. ಮಗನ ಹೆಂಡತಿ, ಈಗ ಇನ್ನೊಬ್ಬರ ಸಖ್ಯವನ್ನು ಬಯಸಿ ಹೊರಟು ಬಿಟ್ಟಿದ್ದೇನೆ. ಆ ಇನ್ನೊಬ್ಬರ ಸಖ್ಯವನ್ನು ಕುರಿತು ಇವರಿಗೆ ಏನು ಹೇಳಲಿ? ನಾನು ಅಡಕತ್ತರಿಯಲ್ಲಿ ಸಿಕ್ಕಿಕೊಂಡೆ, ಉತ್ತರಿಸಲು ಈಗ ನನ್ನಲ್ಲಿ ಏನೂ ಉಳಿದಿಲ್ಲ.

ಮನಸು ದ್ವಂದ್ವದಲ್ಲಿ ಸಿಲುಕುವಾಗಲೇ, ಅತ್ತೆ ನಿಧಾನವಾಗಿ, ʻಆಶಾ ಎಲ್ಲಾ ಹೇಳಿದಳು. ಅವಳನ್ನ ಸಹದೇವ ಚೆನ್ನಾಗಿ ನೋಡಿಕೊಳ್ಳುತ್ತಾರಂತೆ. ಈಗ ಅವರ ಮನೆಯ ಕಡೆಯಿಂದಲೂ ವಿರೋಧ ಇಲ್ಲವಂತೆ. ಎಲ್ಲ ಬಂದು ಹೋಗ್ತಾ ಇದಾರಂತಲ್ಲಾʼ ಎಂದರು. ಎಲ್ಲಕ್ಕೂ ಹುಂ, ಹುಂ ಎಂದೆ. ʻಏನೋ ನೀನು ನೆಮ್ಮದಿಯಾಗಿದ್ದರೆ ನನಗೆ ಅಷ್ಟೇ ಸಾಕು. ಮಗ ಹಾಗೆ ಆದ, ಮಗಳಾಗಿ ನೀನು ಅಲ್ಲಾದರೂ ಸುಖವಾಗಿದ್ದೀಯಲ್ಲಾ, ಅದೇ ದೊಡ್ಡ ಸಮಾಧಾನ. ಈಗೀಗ ನಿನಗೆ ತುಂಬಾ ದೊಡ್ದ ಹೆಸರೂ ಬಂದಿದೆಯಂತೆ, ಅವರಿವರು ಹೇಳಿದಾಗ ಹೆಮ್ಮೆಯಾಗುತ್ತೆ. ನಮ್ಮ ಸೊಸೆ ಎಷ್ಟು ಎತ್ತರಕ್ಕೆ ಬೆಳೆಯುತ್ತಿದ್ದಾಳೆ ಅಂತ ಪೇಪರ್‌ನಲ್ಲಿ ಕೂಡ ನಿನ್ನ ಫೋಟೋ ನೋಡಿದ್ದೀನಿ ಮಗೂʼ. ನನಗೆ ಹೇಳಲು ಏನೂ ಇರಲಿಲ್ಲ. ಅತ್ತೆ ಅವರ ಪಾಡಿಗೆ ಅವರು ಮಾತಾಡುತ್ತಲೇ ಇದ್ದರು, ʻಇನ್ನು ನಮ್ಮ ಜೀವನ ಇಲ್ಲಿಯೇ ಮುಗಿಯುತ್ತೆ. ಬದುಕಿರುವವರೆಗೂ ಈ ಮಣ್ಣು ಈ ಗಾಳಿ ನಮ್ಮನ್ನ ಬೇಡ ಅನ್ನಲ್ಲ. ಆದರೆ ನಿಮ್ಮ ಮಾವ ಮತ್ತು ನನಗೆ ಇರೋದು ಒಂದೇ ಕೊರಗು ನಿನಗೆ, ನಮ್ಮ ಮೊಮ್ಮಗಳಿಗೆ ನಾವು ಏನನ್ನೂ ಮಾಡಲಾಗಲಿಲ್ಲ ಅನ್ನುವುದುʼ. ಸಂಬಂಧಕ್ಕೆ ಪ್ರೀತಿಯಿಂದ ಏನನ್ನೋ ಕೊಡುವ ಅರ್ಥಕ್ಕೆ ಬಿದ್ದಿದ್ದಾರೆ, ನಾನಿಲ್ಲಿ ನಿರುತ್ತರಳಾಗಿದ್ದೀನಿ. ಇವರ್ಯಾಕೆ ರಕ್ತ ಮಾಂಸ ಇರುವ ಮನುಷ್ಯರ ಹಾಗೇ ನಡೆದುಕೊಳ್ಳುತ್ತಿಲ್ಲ. ಈ ಥರದ ಮಾತುಗಳನ್ನು ಪಕ್ಕಕ್ಕಿಟ್ಟು, ಒಂದೇ ಒಂದು ಕ್ಷಣ ನನ್ನ ಬೈದು, ʻಇಷ್ಟು ದಿನ ಎಲ್ಲೇ ಹೋಗಿದ್ದೆ? ಈಗ ಯಾಕೇ ಬಂದೆ? ಇಷ್ಟು ವರ್ಷಗಳಲ್ಲಿ ಕಡೇ ಪಕ್ಷ ನಮ್ಮ ನೆನಪೂ ಆಗಲಿಲ್ಲವಲ್ಲಾ? ಬದುಕಿದ್ದೀವಾ, ಸತ್ತಿದ್ದೀವಾ ಅಂತ ವಿಚಾರಿಸಲಿಲ್ಲವಲ್ಲ. ಒಂದು ಕಾಗದ ಊಹುಂ ಅದೂ ಇಲ್ಲ. ಎಲ್ಲ ಅಷ್ಟೇ ಕಣೆ. ನಿನ್ನದು ಎನ್ನುವ ವಸ್ತು ಇಲ್ಲಿ ಇಲ್ಲವಲ್ಲ ನಿಂಗೆ ಇಲ್ಲೇನು ಕೆಲಸ?ʼ ಎಂದೆಲ್ಲಾ ಎನ್ನಬಹುದಿತ್ತು, ಅನ್ನಬೇಕಿತ್ತು. ಆದರೆ ಈ ಯಾವ ಮಾತನ್ನೂ ಅವರು ಅನ್ನಲಿಲ್ಲ. ಬದಲಿಗೆ ವರ್ಷಗಳ ನಂತರ ಬಂದ ನನ್ನ ಇಷ್ಟು ವಿಶ್ವಾಸದಿಂದ ಮಾತಾಡಿಸಿ ನನ್ನನ್ನು ಕುಬ್ಜಳನ್ನಾಗಿಸುತ್ತಿದ್ದಾರೆ. ಸಹಾರ ಜೊತೆ ಹೋದ ಹೊಸದರಲ್ಲಿ ಅತ್ತೆ ಮಾವರನ್ನ ನೋಡಬೇಕು ಎಂದು ಹಟ ಹಿಡಿದು ಬರುತ್ತಿದ್ದೆ. ಈಚೆಗೆ ಸಹಾ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದರೆ, ಅವರ ಜೊತೆ ನಾನು ಹಾಡುಗಾರಳಾಗಿ ನನ್ನ ಜರ್ನಿಯನ್ನು ಮಾಡಲೇಬೇಕು. ಇನ್ನು ಆಶಾಳದ್ದು ಸೆಕೆಂಡ್ ಪಿಯುಸಿ, ಜೀವನದ ಟರ್ನಿಂಗ್ ಪಾಯಿಂಟ್. ನಾನಾಗಿ ಏನನ್ನೂ ಹೇಳಲಿಲ್ಲ. ಇವೆಲ್ಲಾ ಅತ್ತೆ ಮಾವರಿಗೆ ಗೊತ್ತಿಲ್ಲವೆಂತಲ್ಲ. ಈಗಲಾದರೂ ಸರಿ ಬಂದಳಲ್ಲಾ ಎನ್ನುವ ತೃಪ್ತಿಯಲ್ಲಿದ್ದಾರೆ. ಈ ಔದಾರ್ಯದ ಉರುಲಲ್ಲಿ ನಾನು ಸಿಕ್ಕಿಕೊಳ್ಳುತ್ತಿದ್ದೇನೇಯೇ?

ಅಷ್ಟರಲ್ಲಿ ಚಿಕ್ಕೋಳಿ ಓಡಿ ಬಂದಳು, ʻಯವ್ವಾ ಕಾರಲ್ಲಿ ಬಂದಿದ್ನ ನೋಡಿ ನೀವು ಬಂದಿದ್ದೀರಿ ಅಂತ ಕಾಟ್ರಿ ಯೇಳ್ದ. ಎಂಗಿದ್ದೀರ?ʼ ಎಂದು ಮಾತು ಮುಗಿಸುವ ಮೊದಲೇ ಆಶಾನ್ನ ನೋಡಿ ʻಮಗಾನಾ? ಅಯ್ಯ ಎಲ್ಲಾ ನಮ್ಮ್ ಸತೀಸಪ್ಪನಂಗೆ ಇದೆʼ ಎನ್ನುತ್ತಾ ಅವಳಿಗೆ ದೃಷ್ಟಿ ತೆಗೆಯುವಂತೆ ಮುಖಕ್ಕೆ ಕೈ ಆಡಿಸಿ ಲಟಿಗೆ ತೆಗೆದಳು. ʻಹುಂ ಈಗ ಕಾಲೇಜು ಓದ್ತಾ ಇದಾಳೆ. ಮಕ್ಕಳು ಬೆಳೀದೇ ಇರ್ತಾವಾ? ಜೊತೆಗೆ ನಮಗೂ ವಯಸ್ಸಾಗ್ತಾ ಇರುತ್ತೆʼ ಎಂದು ನಕ್ಕೆ. ʻಹುನವ್ವಾ ದಿನ ಎಂಗ್ ಓಗೇ ಬಿಡ್ತದಲ್ಲವ್ವಾ?! ಸತೀಸಪ್ಪ ಓಗಿ ಅಷ್ಟ್ ವರ್ಸ ಆಯ್ತ ಅಂತ ಈ ಮಗೀನ್ ನೋಡ್ದಾಗ್ಲೇ ಗೊತ್ತಾದದ್ದು. ಆಚ್ಚರ್ಯ ಆಯ್ತದೆ, ಆದ್ರೂ ನಾನವತ್ತು ಸುಮ್ಕೆ ಇರಬೇಕಿತ್ತು. ನನ್ನಿಂದಲೇ ಎಲ್ಲ ಆಗಿದ್ದುʼ ಎಂದು ಕಣ್ಣೀರು ಹಾಕಿದ್ದಳು. ʻಹಿಂದಿದ್ದನ್ನೆಲ್ಲಾ ಕೆದಕಿ ಏನ್ ಮಾಡ್ತೀಯ ಸುಮ್ನಿರುʼ ಎಂದು ಅತ್ತೆ ಬೈದರೂ ಚಿಕ್ಕೋಳು ಬಿಡುವುದಕ್ಕೆ ತಯಾರಿರಲಿಲ್ಲ. ಒಂದಿಷ್ಟು ಅಳು, ಒಂದಿಷ್ಟು ಹಳೆಯ ನೆನಪುಗಳು ಹೀಗೆ. ನನಗೆ ತಲೆಚಿಟ್ಟೆನ್ನುತ್ತಿತ್ತು. ಎಲ್ಲ ಮಾತುಗಳನ್ನು ಮುಗಿಸಿದ ಮೇಲೆ ಚಿಕ್ಕೋಳು ಹೊರಟಳು. ಆಶಾ, ʻಅದೇನಮ್ಮಾ ಅಷ್ಟು ಮಾತಾಡ್ತಾರೆ ಅವ್ರು. ಅಪ್ಪನಿಗೆ ಏನು ಮಾಡಿದ್ರು?ʼ ಎಂದಳು. ಅದಕ್ಕೆ ಅತ್ತೆ, ʻಹೂನಮ್ಮಾ. ನಿಮ್ಮಪ್ಪನ್ನ ಚಿಕ್ಕವಯಸ್ಸಿನಿಂದ ಎತ್ತಿ ಆಡಿಸಿದವಳಲ್ವಾ, ತನ್ನ ಮಕ್ಕಳಿಗಿಂತ ನಿನಪ್ಪನ್ನ ನೋಡಿದ್ರೇನೆ ತುಂಬಾ ಪ್ರೀತಿ. ಅದಕ್ಕೆ ಅವನ್ನ ಕಳಕೊಂಡು ನನಗಿಂತ ಪಾಪ ಅವಳೇ ಜಾಸ್ತಿ ನೋವನ್ನು ಅನುಭವಿಸ್ತಾ ಇದಾಳೆʼ ಎಂದಿದ್ದರು. ಮಾವ ಮಾತ್ರ ತಮ್ಮ ಕಾಲನ್ನು ನೀವಿಕೊಳ್ಳುತ್ತಾ, ʻಆಶಮ್ಮಾ ಅವಳು ಹಾಗೆಲ್ಲಾ ಮಾತಾಡಿದ್ಲು ಅಂತ ಅದೆಲ್ಲಾ ನಿಜಾ ಅಂದ್ಕೋಬೇಡ- ಎಲ್ಲಾ ನಾಟಕ, ಇವಳದ್ದೂ, ಇವಳ ಮಗನದ್ದೂ ಎಲ್ಲಾ ಒಂದೇ. ಹೀಗೆಲ್ಲಾ ಮಾತಾಡಿದ್ರೆ ನಿಮ್ಮತ್ತೆ ಮನೇಲಿ ಇರೋ ಚೂರೋ ಪಾರು ತಿಂಡಿನೋ, ಅಕ್ಕೀನೋ ಕೊಡ್ತಾಳಲ್ಲ ಅದಕ್ಕೆʼ ಎಂದಾಗ ಅತ್ತೆ, ʻನೀವು ಸುಮ್ಮನಿರಿ. ಸರಾಯಿ ಇಳಿಸಲಿಕ್ಕೆ ಅವಳ ಮಗ ಬರಲಿಲ್ಲ ಅಂತ ನಿಮಗೆ ಕೋಪ. ಅದೇ ಇಳಿಸಿ ತಂದುಕೊಟ್ಟಾಗ ತೆಪ್ಪಗೆ ಕುಡುದು ಮಲಗಿಬಿಡ್ತೀರಿ. ಈಗ ಏನಾದರೂ ಬೇಕು ಅಂದ್ರೆ ಅವಳು, ಅವಳ ಮಗ ತಾನೇ ನಮಗೆ ದಿಕ್ಕು. ಪಾಪ ತನ್ನಿಂದಾನೇ ಸತೀಶನಿಗೆ ಹಂಗಾಗಿದ್ದು ಅಂತ ಎಷ್ಟು ನೊಂದ್ಕೊಂಡಿದ್ದಾಳೆ ಗೊತ್ತಾ? ಬಾಯಿದೆ ಅಂತ ಏನೇನೋ ಮಾತಾಡಬೇಡಿʼ ಎಂದು ಬೈದಿದ್ದಕ್ಕೆ, ʻಹೂ ಕಣೇ. ನಾನು ಎಲ್ಲರಿಗೂ ಸದರ ಆಗಿಬಿಟ್ಟಿದ್ದೀನಿ. ಕಾಲು ಮುರಕೊಂಡು ಮೂಲೇಲಿ ಕೂತಿದ್ದೀನಿ ನೋಡು, ನನ್ನ ಕೈಲಿ ಏನೂ ಆಗಲ್ಲ ಅಂತ ಮಾತಾಡ್ತಾ ಇದೀಯಾ?ʼ ಎಂದರು. ಅದಕ್ಕೆ ಅತ್ತೆ, ʻಕಾಲು ಮುರಕೊಂಡದ್ದು ಮೊನ್ನೆ ಮೊನ್ನೆ. ಅದಕ್ಕೂ ಮುಂಚಿನಿದ್ದು ನಾನು ಹೀಗೇ ಮಾತಾಡ್ತಾ ಇರೋದು, ನಡ್ಕೋತಾ ಇರೋದುʼ ಎಂದರು. ʻಇರ್ಲಿ ಬಿಡು ನಿನ್ನ ಜೊತೆ ಮಾತಾಡಕ್ಕೆ ನನಗೆ ಮನಸ್ಸಿಲ್ಲ. ಇವತ್ತು ನನ್ನ ಮೊಮ್ಮಗಳು ಬಂದಿರಲಿಲ್ಲ ಅಂದಿದ್ರೆ ಕಥೆ ಬೇರೆ ಇರ್ತಾ ಇತ್ತು. ಬಾ ಆಶಮ್ಮಾ ನಾವಿಬ್ರೂ ಚೌಕಾಬಾರ ಆಡೋಣʼ ಎಂದಿದ್ದರು ಮಾವ. ʻಹಾ ಹಾ… ಕಾಲ ಕಳ್ಯೋಕ್ಕೆ ಯಾರಾದ್ರೂ ಸಿಕ್ರೆ ನಿಮಗೆ ಆನಂದವೋ ಆನಂದ. ಇನ್ನು ಮೊಮ್ಮಗಳು ಅಂದ್ರೆ ಕೇಳ್ಬೇಕಾ?ʼ ಎಂದು ಅತ್ತೆ ದೂರಿದರು. ದೊಡ್ಡ ಜಗಳ ಆಗುವ ಕಡೆ ಹುಸಿಮುನಿಸು ನಗು ತುಂಬಿತು. ಹೀಗೆ ಬದುಕಲಿಕ್ಕೆ ಸಾಧ್ಯ ಆಗಿದ್ದಾದರೂ ಹೇಗೆ? ಯೋಚನೆಗೆ ಬಿದ್ದೆ. ತಾತ ಮೊಮ್ಮಗಳು ಖುಷಿಯಲ್ಲಿ ಆಟದಲ್ಲಿ ತೊಡಗಿದ್ದನ್ನ ನೋಡ್ತಾ ಅತ್ತೆ, ʻಈ ಮನೆ ಹೀಗೇ ತುಂಬಿರಬಾರ್ದಾ ಅನ್ನಿಸುತ್ತೆʼ ಎಂದರು. ತಕ್ಷಣವೇ ನನ್ನ ಮುಖಚರ್ಯೆಯನ್ನು ಗಮನಿಸುತ್ತಾ, ʻಹಾ ನನ್ನ ಆಸೆಗೇನು? ಈ ಊರಲ್ಲಿ ಕಾಲೇಜಾ? ಇನ್ನೊಂದಾ? ಪಾಪ, ಮಗೂ ಚೆನ್ನಾಗಿ ಓದಲಿ, ದೊಡ್ಡ ಆಫೀಸರ್ ಆಗಲಿʼ ಎಂದರು.    

ಆಶಾ ತಾತನ ಜೊತೆ ಚೌಕಬಾರ ಆಡುತ್ತಾ, ʻಎರಡು ಗರಾ ಬೀಳು ಬೀಳು…ʼ ಎನ್ನುತ್ತಾ ಕಣ್ಣುಮುಚ್ಚಿ ಯಾರಲ್ಲೋ ಬೇಡಿಕೊಳ್ಳುವಂತೆ ಉಜ್ಜಿ ಒಂದು ಕಡೆ ಬೆಳ್ಳಗಾದ ಹುಣಸೇ ಬೀಜಗಳನ್ನು ನೆಲಕ್ಕೆ ಚೆಲ್ಲಿದಾಗ ಅದು ಎರಡೇ ಆಗಿತ್ತು. ಕಾಯನ್ನು ಮತ್ತೆ ಮನೆಗೆ ಸೇರಿಸುತ್ತಾ ಆಶಾ, ʻತಾತಾ ನಾ ನಿನ್ನ ಕೊಂದೆʼ ಎಂದು ಸಣ್ಣ ಹುಡುಗಿಯ ಹಾಗೆ ಸಂಭ್ರ‍್ರಮಿಸುತ್ತಿದ್ದಳು. ʻನನ್ನೇ ಕೊಲ್ತೀಯಾ ಕಳ್ಳಿ… ನಾನು ನಿನ್ನ ಬಿಡಲ್ಲ, ನಿನ್ನನ್ನೂ ಕೊಂದೇ ಕೊಲ್ತೀನಿʼ ಎಂದು ಮಾವ ಕೂಡಾ ಅವಳ ಸಮಕ್ಕೆ ಆಡುತ್ತಿದ್ದರು. ಕೊಲ್ಲುವುದು ಆಟವಾಗಿ, ಸಾಯುವುದನ್ನು ಸಂಭ್ರಮವಾಗಿ ಈ ಆಟದಲ್ಲಿ ಮಾತ್ರ ತೆಗೆದುಕೊಳ್ಳಲು ಸಾಧ್ಯ. ಜಗತ್ತಿನ ಸಂತೋಷವೆಲ್ಲಾ ಆ ಪುಟ್ಟ ಗುಡಿಸಿಲ ಒಳಗೆ ಇದೆ ಎನ್ನುವಂತೆ ಭಾಸವಾಗುತ್ತಿತ್ತು. ನಾನು ತಪ್ಪು  ಮಾಡಿದೆನಾ? ನನ್ನ ಜೀವನದ ಭರವಸೆಗಾಗಿ ಈ ಮುದಿಜೀವಗಳಿಗಿದ್ದ ಒಂದೇ ಒಂದು ಆಸರೆ ಆಶಾ. ಅವಳನ್ನೂ ನಾನು ಕಸಿದುಕೊಂಡೆನಲ್ಲಾ… ಎಂದು ಕೊರಗಿದೆ. ಅತ್ತೆ ಒಳಗೆ ಅಡುಗೆ ಮಾಡಲಿಕ್ಕೆ ಹೋದರು. ಬೀರುವಿನಲ್ಲಿಟ್ಟಿದ್ದ ಪುಸ್ತಕಗಳನ್ನು ಒಂದೊಂದಾಗಿ ತೆಗೆಯುತ್ತಾ ಹೋದೆ. ಮಾರ್ಕ್ಸ್‌, ಲೆನಿನ್, ಗಾಂಧಿ, ಅಂಬೇಡ್ಕರ್, ಲೋಹಿಯಾರ ಸಾಲು ಸಾಲು ಪುಸ್ತಕಗಳು. ಸತೀಶ ಎಲ್ಲವನ್ನು ಓದುತ್ತಿದ್ದ, ನನಗೆ ವಿವರಿಸಲು ಯತ್ನಿಸುತ್ತಿದ್ದ. ನನಗೆ ಕೊಡುವ ಪ್ರತಿ ಪುಸ್ತಕದ ಮೇಲೆ, ʻಉಸಿರಲ್ಲಿ ಉಸಿರಾದ ಲಕ್ಷ್ಮೀಗೆʼ ಎಂದು ಪ್ರೀತಿಯ ಷರಾ ಹಾಕಿ ಕೊಡುತ್ತಿದ್ದ. ಆ ಪುಸ್ತಕಗಳನ್ನು ತೆಗೆಯುತ್ತಾ ಹೋದಂತೆ ನನ್ನ ಸುತ್ತಾ ಸುಗಂಧದ ಬಲೆಯೊಂದು ಸುತ್ತಿಕೊಳ್ಳುತ್ತಿದೆ ಅನ್ನಿಸತೊಡಗಿತು. ಅದರ ಘಾಟು ಕ್ಷಣಕ್ಷಣಕ್ಕೂ ಗಾಢವಾಗುತ್ತಾ ಹೋಯಿತು. ತಡೆಯಲಾಗದೆ ಹೊರಗೆ ಬಂದೆ.

ಸೋಗೆ ಚಪ್ಪರದ ಸಂದಿಯಿಂದ ಚಂದ್ರನ ಬೆಳಕು ತೂರಿ ನೆಲದ ತುಂಬಾ ಚಿತ್ರಗಳನ್ನು ಬಿಡಿಸಿತ್ತು. ಇಂಥದೇ ರಾತ್ರಿಗಳಲ್ಲಿ ಹೊರಗಿನ ಜಗುಲಿಯ ಕಂಬಕ್ಕೆ ಒರಗಿ ಸತೀಶನನ್ನು ಕಾಯುತ್ತಿದ್ದ ದಿನಗಳು ಎಲ್ಲಿ ಹೋದವು?

ಬರೀ ಆಸರೆಗೇ ಆಗಿದ್ದರೆ ನಾನ್ಯಾಕೆ ಸಹಾರ ಜೊತೆ ಸಂಬಂಧವನ್ನು ಇಟ್ಟುಕೊಳ್ಳಬೇಕಿತ್ತು? ನನ್ನ ಕಾಡುತ್ತಿರುವ ಸಂಗತಿ ಆದರೂ ಯಾವುವು? ಸತೀಶ ನನ್ನಿಂದ ದೂರವಾಗಿ ಸರಿಯಾಗಿ ಹದಿನೆಂಟು ವರ್ಷಗಳ ನಂತರ ನಾನು ಈ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿದ್ದೇನೆ. ಮನಸ್ಸು ಭಾರವಾಗಿ ಜಗುಲಿಗೆ ಕುಳಿತೆ, ಮಸುಕು, ಮಸುಕಿನ ಮಬ್ಬನ್ನು ದಾಟಿಕೊಂಡು ಒಂದು ಆಕೃತಿ ನನ್ನ ಮುಂದೆ ನಿಂತಂತಾಯಿತು ಕಣ್ಣುಜ್ಜಿಕೊಂಡೆ. ಚಿತ್ತ ವಿಕಾರವಾ? ಇಲ್ಲ, ಹೌದು ಸಂಶಯವೇ ಇಲ್ಲ, ಸತೀಶ ನಗುತ್ತಾ ನಿಂತಿದ್ದಾನೆ. ʻನನ್ನ ಎಲ್ಲ ಆದರ್ಶಗಳನ್ನೂ ನಿನ್ನ ಮಡಿಲಿಗೆ ಎಳೆದುಕೊಂಡು ಸಾಗುತ್ತಿದ್ದೀಯೇ ಚೈತನ್ಯ, ನನಗೆ ನಿನ್ನ ಬಗ್ಗೆ ಹೆಮ್ಮೆ ಇದೆʼ ಎಂದ. ಅದು ಪ್ರತಿಧ್ವನಿಸುತ್ತಲೇ ನನ್ನ ಕಿವಿಗಳಲ್ಲಿ ತಾಳಲಾರದ ನೋವನ್ನು ತುಂಬಿಬಿಟ್ಟಿತು. ʻಇಲ್ಲ ಸತೀಶ ನಾನು ಅಸಹಾಯಕಳಾಗಿದ್ದೇನೆ. ನಿನ್ನ ಯಾವ ಆದರ್ಶವೂ ನನ್ನ ಎದೆಯಲ್ಲಿ ಉಳಿದಿಲ್ಲ. ನಾನು ಎಲ್ಲಾ ಕಡೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇನೆ, ಸೋತಿದ್ದೇನೆ, ನನ್ನ ಕ್ಷಮಿಸಿ ಬಿಡು…ʼ ಕಣ್ಣ ತುಂಬಾ ನೀರು ತುಂಬಿಕೊಂಡು ಕುಸಿದು ಕುಳಿತೆ.

। ಇನ್ನು ಮುಂದಿನ ವಾರಕ್ಕೆ ।         

‍ಲೇಖಕರು avadhi

May 9, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: