ಅರುಣ್ ಪ್ರಸಾದ್ ಅವರ ‘ಬೆಸ್ತರರಾಣಿ ಚಂಪಕಾ’

ಪ್ರಸನ್ನ ಸಂತೇಕಡೂರು

ಇದು ಕೆಳದಿ ಸಂಸ್ಥಾನದ ಪ್ರಖ್ಯಾತ ಅರಸರಲೊಬ್ಬರಾಗಿದ್ದ ರಾಜಾ ವೆಂಕಟಪ್ಪ ನಾಯಕ ಮತ್ತು ಚಂಪಕಾ ಎಂಬ ಯುವತಿಯ ದುರಂತ ಪ್ರೇಮ ಕಥೆಯ ಮೇಲೆ ಬೆಳಕು ಚೆಲ್ಲುವ ಕಿರು ಕಾದಂಬರಿ. ಈ ಪ್ರೇಮ ಕತೆಯ ಬಗ್ಗೆ ಬೆಳಕು ಚೆಲ್ಲುವಂತಹ ಯಾವುದೇ ಪುಸ್ತಕಗಳು ಮತ್ತು ಮಹತ್ತರವಾದ ಶಾಸನಗಳು ಸಿಕ್ಕಿಲ್ಲ. ಆದರೆ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಮತ್ತು ಸಾಗರ ಪಟ್ಟಣಗಳ ಮಧ್ಯ ಇರುವ ಆನಂದಪುರದ ಸಮೀಪ ಮಲಂದೂರು ಎಂಬ ಚಿಕ್ಕ ಹಳ್ಳಿ ಇದೆ. ಆ ಚಿಕ್ಕ ಹಳ್ಳಿಯಲ್ಲಿ ಒಂದು ಸುಂದರವಾದ ಕಲ್ಯಾಣಿ ಅಥವಾ ಕೊಳವಿದೆ. ಆ ಕೊಳದ ಹೆಸರು ಚಂಪಕ ಸರಸು.

ಅದೊಂದು ಹದಿನೇಳನೇ ಶತಮಾನಕ್ಕೆ ಸೇರಿದ ಐತಿಹಾಸಿಕ ಸ್ಮಾರಕ. ಈ ಸ್ಮಾರಕದ ಜೊತೆಗೆ ಹದಿನೇಳನೇ ಶತಮಾನದಲ್ಲಿ ಕನ್ನಡದ ಕರಾವಳಿಯ ಬಸರೂರು (ಶಿವರಾಮ ಕಾರಂತರ ಮೈಮನಗಳ ಸುಳಿಯಲ್ಲಿ ಬರುವ ಊರು) ಬಂದರಿನ ಮೂಲಕ ಕೆಳದಿ ಸಂಸ್ಥಾನಕ್ಕೆ ಬಂದಿದ್ದ ಇಟಲಿಯ ಪ್ರವಾಸಿ ಪಿಯೆಟ್ರೊ ಡೆಲ್ಲಾ ವಲ್ಲೆಯ ಪ್ರವಾಸದ ದಾಖಲೆಯಲ್ಲಿ ಈ ಚಂಪಕಾ ರಾಣಿಯ ಬಗ್ಗೆ ಸ್ವಲ್ಪ ವಿಷಯ ಸಿಗುತ್ತದೆ.

ಈ ಪ್ರವಾಸಿಯನ್ನು ವಿಠಲ್ ಶೆಣೈ ಎಂಬುವ ಆ ಕಾಲದ ಅಧಿಕಾರಿ ರಾಜಾ ವೆಂಕಟಪ್ಪ ನಾಯಕನಿಗೆ ಪರಿಚಯ ಮಾಡಿ ಕೊಡುತ್ತಾನೆ. ಪ್ರವಾಸಿ ಪಿಯೆಟ್ರೊ ಡೆಲ್ಲಾ ವಲ್ಲೆ ತನ್ನ ದಿನಚರಿಯಲ್ಲಿ ಆ ಕಾಲದಲ್ಲಿ ಕೆಳದಿ ಸಂಸ್ಥಾನದಲ್ಲಿದ್ದ ಸತಿ ಪದ್ಧತಿ ಮತ್ತು ಚಂಪಕ ರಾಣಿಯ ಬಗ್ಗೆ ಪ್ರಸ್ತಾಪಿಸಿದ್ದಾನೆ. ಆ ಕಾರಣದಿಂದ ಕೆ. ಅರುಣ್ ಪ್ರಸಾದ್ ಅವರ ಬೆಸ್ತರರಾಣಿ ಚಂಪಕಾ ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ರಚಿಸಿರುವ ಕಾಲ್ಪನಿಕ ಕಾದಂಬರಿ ಎಂದು ಹೇಳಬಹುದು.  

ಕೆಳದಿ ಅರಸರು ಮೂಲತಃ ವಿಜಯನಗರದ ಸಾಮಂತರಾಗಿದ್ದವರು. ಇವರು ಸಂಗಮವಂಶದ ಕಾಲದಲ್ಲಿಯೇ ಇದ್ದರೂ ಕೂಡ ಹೆಚ್ಚು ಪ್ರಾಬಲ್ಯಕ್ಕೆ ಬರುವುದು ವಿಜಯನಗರ ಸಾಮ್ರಾಜ್ಯದ ಪತನದ ನಂತರ ಎಂದು ಹೇಳಬಹುದು. ಕೆಳದಿ ಸಂಸ್ಥಾನವೆಂದರೆ ನಮಗೆ ಜ್ಞಾಪಕಕ್ಕೆ ಬರುವದು ಒಂದು ಶಿಸ್ತಿನ ಶಿವಪ್ಪನಾಯಕ ಮತ್ತು ಕೆಳದಿ ಚೆನ್ನಮ್ಮ ಸಾಹಿತ್ಯವನ್ನು ಹೆಚ್ಚು ಓದಿಕೊಂಡವರಿಗೆ ಮಾಸ್ತಿಯವರ ಕಾದಂಬರಿ ಚೆನ್ನಬಸವ ನಾಯಕನ ಬಗ್ಗೆ ಸ್ವಲ್ಪ ವಿಷಯ ಸಿಗಬಹುದು. ಅದಕ್ಕಿಂತ ಹೆಚ್ಚು ವಿಷಯ ಸಾಮಾನ್ಯರಿಗೆ ತಿಳಿದಿಲ್ಲ.

ಇಂದಿಗೂ ಕೆಳದಿ ಅರಸರ ನೂರಾರು ಸ್ಮಾರಕಗಳು ನಮ್ಮ ಮುಂದೆ ಜೀವಂತವಾಗಿವೆ. ಅವುಗಳ ಬಗ್ಗೆ ಹೆಚ್ಚು ಅಧ್ಯಯನ ಮಾಡಿದರೆ ನಮಗೆ ನಮ್ಮದೇ ಆಗಿರುವ ಅರಸು ಮನೆತನದ ಬಗ್ಗೆ ಹೆಚ್ಚು ಮಾಹಿತಿ ಸಿಗುತ್ತದೆ.

ಇವುಗಳಲ್ಲಿ ಕೆಳದಿ, ಇಕ್ಕೇರಿ, ಆನಂದಪುರದ ದೇವಾಲಯಗಳು, ಶಿವಮೊಗ್ಗದ ಶಿವಪ್ಪ ನಾಯಕ ಅರಮನೆ, ಬಿದನೂರು ನಗರ(ಹೊಸ ನಗರ ತಾಲ್ಲೂಕಿನ ನಗರ), ಬೇಕಲ್ (ಕೇರಳ), ಕುಂಬ್ಳೆ(ಕೇರಳ), ಬಲ್ಲಾಳರಾಯನ ದುರ್ಗ(ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟಿಯ ಮೇಲಿರುವ ಊರು), ಕವಲೇ ದುರ್ಗ(ತೀರ್ಥಹಳ್ಳಿ ತಾಲ್ಲೂಕು), ಚನ್ನಗಿರಿಯ ಕೋಟೆಗಳು. ಈ ಕೋಟೆಗಳಲ್ಲಿ ಓಡಾಡಿದರೆ ಇಂತಹ ಅಜ್ಞಾತ ಚಂಪಕಳ ಕತೆಯಂತಹ ನೂರಾರು ಕತೆಗಳು ಸಿಗಬಹುದು.

ಕೆಳದಿ ಸಂಸ್ಥಾನ ಆ ಕಾಲಕ್ಕೆ ಇಂದಿನ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ದಾವಣಗೆರೆ, ಉಡುಪಿ, ದಕ್ಷಿಣ ಕನ್ನಡ, ಕೊಡಗು ಮತ್ತು ಕೇರಳದ ಕಾಸರಗೋಡು ಜಿಲ್ಲೆಯನ್ನು ಒಳಗೊಂಡಿತ್ತು. ಬೇಕಲ್ ಕೋಟೆಯನ್ನು ಹಲವಾರು ಚಲನ ಚಿತ್ರಗಳಲ್ಲಿ ನೋಡಬಹುದು. ಕೆಳದಿ ಅರಸರ ಲಾಂಛನವಾಗಿದ್ದ ಗಂಡಭೇರುಂಡ ಕರ್ನಾಟಕ ಸರ್ಕಾರದ ಲಾಂಛನವಾಗಿದೆ. 

ಕೆಳದಿಯನ್ನು ಆಳಿದವರಲ್ಲಿ ಮೊದಲಿಗೆ  ಚೌಡಪ್ಪ ನಾಯಕ, ಸದಾಶಿವ ನಾಯಕ (ಇದೆ ಸದಾ ಶಿವನಾಯಕನ ಹೆಸರಿನಲ್ಲಿಯೇ ಸದಾಶಿವ ಸಾಗರ ಎಂಬ ಊರನ್ನು ನಿರ್ಮಿಸಿರುವುದು, ಇದೆ ಇಂದಿನ ಸಾಗರ), ಹಿರಿಯ ವೆಂಕಟಪ್ಪ ನಾಯಕ, ವೀರಭದ್ರ ನಾಯಕ, ಶಿವಪ್ಪ ನಾಯಕ (ಇದೆ ಶಿವಪ್ಪ ನಾಯಕ ಕಂದಾಯ ವ್ಯವಸ್ಥೆಯನ್ನು ಜಾರಿಗೆ ತಂದವನು), ಸೋಮಶೇಖರ ನಾಯಕ I, ಕೆಳದಿ ಚೆನ್ನಮ್ಮ, ಚೆನ್ನಬಸವ ನಾಯಕ (ಮಾಸ್ತಿಯವರ ಕಾದಂಬರಿ), ರಾಣಿ ವಿರುಮ್ಮಾಜಿ (ಕುವೆಂಪುರವರ  ರಕ್ತಾಕ್ಷಿ) ಹೆಸರುಗಳು ತುಂಬಾ ಪ್ರಖ್ಯಾತವಾದವುಗಳು ಎಂದು ಹೇಳಬಹುದು.

ಹಾಗಾದರೆ ಈ ಚಂಪಕಾ ರಾಣಿ ಯಾರು? ಚಂಪಕಾ ಸರಸ್ಸು ಎಂದರೇನು? ಎಂದು ನಿಮಗೆ ಕುತೂಹಲ ಮೂಡಬಹುದು.

ಚಂಪಕಾ ರಾಣಿ ಈ ಕಾದಂಬರಿಯ ನಾಯಕಿ. ಅವಳು ಇಂದಿನ ಶಿವಮೊಗ್ಗ ಜಿಲ್ಲೆಯ ಆನಂದಪುರದಲ್ಲಿದ್ದಳು. ಚಿಕ್ಕವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ತಂದೆಯ ಆಸರೆಯಲ್ಲಿ ಬೆಳೆದವಳು. ಆ ಕಾಲಕ್ಕೆ ಆನಂದಪುರ ಒಂದು ದೊಡ್ಡ ಊರಾಗಿತ್ತು. ಅಲ್ಲಿ ಕೋಟೆಯಿತ್ತು, ಹಲವಾರು ಮಠಗಳಿದ್ದವು. ಈ ಆನಂದಪುರ ಮತ್ತು ಲಾರ್ಡ್ ರಿಪ್ಪನ್ ಪೇಟೆಗಳು ಸುಂಕದಕಟ್ಟೆಳಾಗಿದ್ದವು. ಆ ಕಾರಣದಿಂದ ಕೆಳದಿ ಅರಸರು ಈ ಆನಂದಪುರದಲ್ಲಿ ಆಗಾಗ ತಂಗುತ್ತಿದ್ದರು. ಇದು ಒಂದು ರೀತಿ ತಂಗುದಾಣವೂ ಆಗಿತ್ತು.

ಈ ರೀತಿ ತಂಗುದಾಣವಾಗಿದ್ದ ಆನಂದಪುರದಲ್ಲಿ ರಾಜಾ ವೆಂಕಟಪ್ಪ ನಾಯಕ ಆಗಾಗ ಬಂದು ತಂಗುತ್ತಿದ್ದ. ಆಗ ಆ ಊರಿನ ಮಠ ಒಂದರ ಮುಂದಿನ ಮನೆಯ ಮುಂದೆ ಅಪರೂಪದ ರಂಗೋಲಿಗಳು ಅವನ ಕಣ್ಣಿಗೆ ಬೀಳುತ್ತವೆ. ಆ ರಂಗೋಲಿಯನ್ನು ಬಿಡುತ್ತಿದ್ದ ಯುವತಿ ಯಾರಿರ ಬಹುದು ಎಂದು ಹುಡುಕುತಿರುತ್ತಾನೆ. ಕೊನೆಗೆ ಒಂದು ದಿನ ಆ ಯುವತಿ ಅವನ ಕಣ್ಣಿಗೆ ಬೀಳುತ್ತಾಳೆ. ಅವಳ ಸೌಂದರ್ಯಕ್ಕೆ ಅವನು ಮಾರು ಹೋಗುತ್ತಾನೆ. ಆದರೆ, ಅಲ್ಲಿ ಜಾತಿಯ ಸಮಸ್ಯೆ ಬರುತ್ತದೆ. ರಾಜನಾದವನಿಗೆ ಅವು ಯಾವುದು ಸಮಸ್ಯೆಯಲ್ಲದಿದ್ದರೂ ಇಲ್ಲಿ ಇದು ಸಮಸ್ಯೆಯಾಗುತ್ತದೆ.

ಈ ಸಮಸ್ಯೆಯ ಪ್ರೇಮಕತೆಯನ್ನ ಆಧಾರವಾಗಿಟ್ಟು ಕೊಂಡು ಅರುಣ್ ಪ್ರಸಾದ್ ಅವರು ಈ ಕಾದಂಬರಿಯನ್ನ ಬರೆದಿದ್ದಾರೆ. ಮುಂದೆ ಏನಾಗುತ್ತದೆ ಆಗಲೇ ಮದುವೆಯಾಗಿದ್ದ ರಾಜಾ ವೆಂಕಟಪ್ಪ ನಾಯಕನ ರಾಣಿ ಇವಳನ್ನು ಒಪ್ಪುತ್ತಾಳೆಯೇ? ಅವನು ಚಂಪಕಳನ್ನು ಮದುವೆಯಾಗುವನೇ? ಚಂಪಕಳ ತಂದೆ ಏನಾಗುತ್ತಾನೆ?

ಚಂಪಕಾ ಸರಸ್ಸು ಎಂಬ ಅಪರೂಪದ ಸ್ಮಾರಕವನ್ನು ಅವನು ಕಟ್ಟಿಸುವುದು ಏಕೆ ಎಂದು ತಿಳಿಯಲು ಕಾದಂಬರಿಯನ್ನು ಓದಲೇ ಬೇಕು. ಅದೇ ರೀತಿಯ ಸ್ಮಾರಕ ಕೂಡ ಕೇರಳದಲ್ಲಿಯೂ ಇದೆ. ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕುಂಬ್ಳೆ ಸಮೀಪ ಅನಂತಪುರ ಎಂಬ ಊರು ಇದೆ.

 ಅಲ್ಲಿ ವಿಶಾಲವಾದ ಪ್ರದೇಶದಲ್ಲಿ ಸರೋವರದ ನಡುವೆ ದೇವಸ್ಥಾನವಿದೆ. ಅದನ್ನು ಅನಂತಪುರ ಕ್ಷೇತ್ರ ಎಂದು ಕರೆಯುತ್ತಾರೆ. ಜನರು ಅದನ್ನು ಸರೋವರ ಕ್ಷೇತ್ರ ಅನಂತಪುರ ಎಂದೂ ಕೂಡ ಕರೆಯುತ್ತಾರೆ. ಈ ದೇವಸ್ಥಾನವೂ ಕೂಡ ಕೆಳದಿ ಅರಸರಿಗೆ ಸೇರಿತ್ತು.  ಕೆಲವು ಮಾಹಿತಿಯ ಪ್ರಕಾರ ಮತ್ತು ಅರುಣ್ ಪ್ರಸಾದ್ ಅವರು ಹೇಳುವ ಪ್ರಕಾರ ಇದಕ್ಕೆ ಕನ್ನಡ ನಾಡಿನ ಆನಂದಪುರದ ಸಂಬಂಧವಿದೆ. 

ಇದೆ ಕ್ಷೇತ್ರವೇ ಕೇರಳದ ತಿರುವಂತಪುರದಲ್ಲಿರುವ ಪ್ರಖ್ಯಾತ ಅನಂತಪದ್ಮನಾಭ ಸ್ವಾಮಿಯ ಮೂಲ ಸ್ಥಾನ ಎಂದು ಕೆಲವರು ಹೇಳುತ್ತಾರೆ. ಇದೆ ದೇವಾಲಯದ ಸರೋವರದಲ್ಲಿ ಸಸ್ಯಾಹಾರಿ ಮೊಸಳೆಯೊಂದು ಇಂದಿಗೂ ಇದೆ. ಇದಕ್ಕೆ ಪ್ರತಿನಿತ್ಯ ಆಹಾರ ಹಾಲು ಅನ್ನ ಎಂದು ಹೇಳುತ್ತಾರೆ.

ಇಲ್ಲಿರುವ ಶ್ರೀ ಅನಂತಪದ್ಮನಾಭಸ್ವಾಮಿಯ ದೇವಾಲಯದ ರೀತಿಯೇ ಒಂದು ಸ್ಮಾರಕವನ್ನು ಕಟ್ಟಬೇಕು ಎಂದು ರಾಜಾ ವೆಂಕಟಪ್ಪ ನಾಯಕ ಮಲಂದೂರಿನ ಸ್ಮಾರಕ ಕಟ್ಟಿಸಿರುವುದು ಎಂದು ತಿಳಿದುಬರುತ್ತದೆ. ರಾಜನಿಗೂ ಆ ಯುವತಿಗೂ ಮದುವೆ ನಡೆಯಿತೇ? ಅಥವಾ ಜಾತಿ ಅಡ್ಡ ಬಂದಿತೇ? ಆ ಇಟಲಿಯ ಪ್ರವಾಸಿ ಏಕೆ ಇದನ್ನೆಲ್ಲಾ ತನ್ನ ದಿನಚರಿಯಲ್ಲಿ ದಾಖಲಿಸದ? ಸಾಮಾನ್ಯವಾಗಿ ಕೆಳದಿ ಅರಸರ ಸಮಾಧಿಗಳೆಲ್ಲಾ ಬಿದನೂರು ನಗರ ಸಮೀಪವೇ ಇವೆ.  ಸೋಮಶೇಖರ ನಾಯಕನ ಸಮಾಧಿ ಶಿವಮೊಗ್ಗದಲ್ಲಿದೆ. ಹಾಗಾದರೆ ಈ ಸ್ಮಾರಕ ಏನು?

ಕೆ. ಅರುಣ್ ಪ್ರಸಾದ್ ಅವರು ಇಲ್ಲಿ ಚಿಕ್ಕ ಚಿಕ್ಕ ೫೮ ಅಧ್ಯಾಯಗಳಲ್ಲಿ ಈ ಕಾದಂಬರಿಯನ್ನು ಬರೆದಿದ್ದಾರೆ. ಈ ಕತೆ ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುತ್ತದೆ. ನಿರೂಪಣೆಯೂ ಸ್ವಲ್ಪ ಆಧುನಿಕ ಅನಿಸಿದರೂ ಚೆನ್ನಾಗಿದೆ. ಇನ್ನಷ್ಟು ಕಾದಂಬರಿಗೆ ರೋಚಕತೆಯನ್ನು ತುಂಬಬಹುದಿತ್ತು ಎಂದು ಅನಿಸಿತು. ಕೆಳದಿ ಇತಿಹಾಸದ ಬಗ್ಗೆ ಸದಾ ಕುತೂಹಲಿಯಾಗಿರುವ ನನಗೆ ಇದು ತೀರಾ ಆಪ್ತವೆನಿಸಿತು.

ಇದೆ ಕಾದಂಬರಿಯ ವಸ್ತುವನ್ನು ತುಂಬಾ ದೊಡ್ಡದಾದ ಬೃಹತ್ ಕಾದಂಬರಿಯಾಗಿ ಬರೆಯಬಹುದಿತ್ತು ಎಂದು ಅನಿಸಿತು. ತರಾಸು ಅವರಿಗೆ ಇದೆ ವಸ್ತು ಸಿಕ್ಕಿದ್ದರೆ ಏನು ಮಾಡುತ್ತಿದ್ದರು ಎಂದು ತುಂಬಾ ಕುತೂಹಲವಿದೆ. ಇನ್ನೊಂದು ಹಂಸಗೀತೆಯೋ ದುರ್ಗಾಸ್ತಮಾನವೋ ಹೊರಹೊಮ್ಮುತಿತ್ತೇ? ಅರುಣ್ ಪ್ರಸಾದ್ ಅವರೇ ಸ್ವಲ್ಪ ಪ್ರಯತ್ನ ಪಟ್ಟಿದ್ದರೆ ಆ ರೀತಿ ಚಿತ್ರಿಸಬಹುದಿತ್ತೇ? ಇದಕ್ಕೆ ಅವರೇ ಉತ್ತರ ಹೇಳಬೇಕು.

ಒಟ್ಟಿನಲ್ಲಿ ಇದೊಂದು ಒಳ್ಳೆಯ ಪ್ರಯತ್ನ ಮತ್ತು ಕನ್ನಡಿಗರಿಗೆ ಹೊಸ ಕತೆಯನ್ನು ತಿಳಿಸುವಲ್ಲಿ ಅರುಣ್ ಪ್ರಸಾದ್ ಅವರು ಇಲ್ಲಿ ಯಶಸ್ವಿಯಾಗಿದ್ದಾರೆ. ಈ ಕಥಾನಾಯಕಿಯನ್ನ ಕೆಲವು ಪತ್ರಿಕೆಗಳು ವೇಶ್ಯೆ ಎಂದು ಕರೆದದ್ದನ್ನು ತೀವ್ರವಾಗಿ ಖಂಡಿಸಿ ಅವರಿಗೆ ಸವಾಲು ಎಂಬಂತೆ ಮಾಹಿತಿಗಳನ್ನು ಸಂಗ್ರಹಿಸಿ ಅವಳು ವೇಶ್ಯಾ ಸ್ತ್ರೀ ಯಲ್ಲ ಅವಳೊಬ್ಬಳು ಅಮರ ಪ್ರೇಮಿ ಎಂದು ಸಾಧಿಸುವುದಕ್ಕೋಸಕರ ಈ ಕಾದಂಬರಿ ಬರೆಯಬೇಕಾಯಿತು ಎಂದು ಅರುಣ್ ಅವರು ತಿಳಿಸುತ್ತಾರೆ.

ಅರುಣ್ ಅವರು ಮೂಲತಃ ಅದೇ ಊರಿನವರು. ತಮ್ಮ ಊರಿನ ಐತಿಹಾಸಿಕ ಸ್ಮಾರಕದ ಬಗ್ಗೆ ಜಗತ್ತಿಗೆ ತಿಳಿಸಬೇಕೆಂಬ ಅವರ ಆಸೆಯೂ ಸಹಜವಾದದ್ದು ಅದರಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ. ಮೂಲತಃ ರಾಜಕಾರಣಿಯಾಗಿದ್ದ ಅರುಣ್ ಪ್ರಸಾದ್ ಅವರು ಈಗ ಸಂಪೂರ್ಣ ಸಮಾಜ ಸೇವೆಗೆ ತಮ್ಮನ್ನ ತೊಡಗಿಸಿಕೊಂಡು ಬರವಣಿಗೆಯನ್ನು ಮುಂದುವರೆಸಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳು ಅವರಿಂದ ಇನ್ನು ಹೆಚ್ಚು ಕೃತಿಗಳು ಮೂಡಿಬರಲಿ ಎಂದು ಆಶಿಸುತ್ತೇನೆ.

‍ಲೇಖಕರು Avadhi

October 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: