ಗಾಂಧಿ ಪ್ರತಿಮೆಗಳು ಮತ್ತು ಇತ್ತೀಚೆಗಿನ ಘಟನೆಗಳು

ಡಾ. ಪ್ರೇಮಲತ ಬಿ

ಗಾಂಧಿ ಇಂದು ನಮ್ಮ ಜೊತೆಗಿಲ್ಲ. ಆದರೆ ಅವರ ತತ್ವ, ಆದರ್ಶಗಳು ಮತ್ತು ಸ್ಪೂರ್ತಿಗಳು ಇಡೀ ಪ್ರಪಂಚದಲ್ಲೆಲ್ಲ ಹರಡಿವೆ. ಹೀಗಿದ್ದೂ ಇತ್ತೀಚೆಗೆ ’ ಬ್ಲಾಕ್ ಲೈವ್ಸ್ ಮ್ಯಾಟರ್ಸ್’ ಎನ್ನುವ ಅಭಿಯಾನದಲ್ಲಿ ಗಾಂಧಿಯ ಹೆಸರನ್ನೂ ಸೇರಿಸಲಾಯ್ತು. ಪ್ರಪಂಚದ ಹಲವೆಡೆ ಇರುವ ಗಾಂಧಿಯ ಪ್ರತಿಮೆಗೆ ಧಕ್ಕೆ ತರಲು ಕೆಲವು ದೇಶದ ಉದ್ರಿಕ್ತ ಜನರು ಪ್ರಯತ್ನಿಸಿದರು.

ಇವರು ಕೇಳಿದ್ದು ಚಾರಿತ್ರಿಕ ನ್ಯಾಯವನ್ನು, ಸಮಾನತೆಯನ್ನು ಮತ್ತು  ಅಸಹಿಷ್ಣುತೆಯ ಪ್ರಶ್ನೆಗಳನ್ನು.ನಿಜಕ್ಕೂ ಗಾಂಧೀಜಿಯಿಂದ ಅಂತಹ ಅನ್ಯಾಯಗಳು ನಡೆದಿವೆಯೇ? ಗಾಂಧಿಯ ಪ್ರತಿಮೆಗೆ ಧಕ್ಕೆ ತರುವ ಜನರಿಗೆ ನಿಜಕ್ಕೂ ಗಾಂಧಿಯ ಬಗ್ಗೆ ಗೊತ್ತಿದೆಯೇ?ಗಾಂಧಿಯ ಪ್ರತಿಮೆಗಳ ಮೇಲೆ ನಡೆದ ಧಾಳಿ ನ್ಯಾಯಯುತವೇ? ಎನ್ನುವುದನ್ನು ವಿಶ್ಲೇಷಿಸಲು ಮಾಡಿರುವ ಪ್ರಯತ್ನವಿದು.

ಭಾರತ ಮತ್ತು ಬ್ರಿಟನ್ನಿನಲ್ಲಿಯೇ ಅಲ್ಲದೆ ಜಗತ್ತಿನ ನಾನಾ ಭಾಗಗಳಲ್ಲಿ ಗಾಂಧಿಯ ಪ್ರತಿಮೆಗಳಿವೆ. ಆದರೆ ಇತ್ತೀಚೆಗೆ  ಹಲವು ದೇಶಗಳಲ್ಲಿ ಗಾಂಧೀಜಿಯ ಪ್ರತಿಮೆಗಳಿಗೆ ಅಪಾಯ ಕಂಡುಬಂದವು.

2014 ರಲ್ಲಿ ಇಂಗ್ಲೆಂಡಿನ ಲೆಸ್ಟರ್ ನಗರದ ಬೆಲ್ ಗ್ರೇವ್ ರಸ್ತೆಯ ಗೋಲ್ಡನ್ ಮೈಲ್ ಬಳಿಯ ಪ್ರತಿಮೆಯನ್ನು ಕೆಲವರು ಅನಿವಾಸಿ ಸಿಕ್ಕರು ಜಕಂ ಗೊಳಿಸಲು ಪ್ರಯತ್ನಿಸಿದರು. ಗಾಂಧಿಯ ಪ್ರತಿಮೆಯ ಮೇಲೆ ತಮಗೆ  ’1984 ರಲ್ಲಿ ನಡೆದ ಘಟನೆಗಾಗಿ ನ್ಯಾಯ ಬೇಕು ’ ಎಂದು ಬರೆದರು.

1984 ರಲ್ಲಿ ನಡೆದದ್ದೇನು?

1984 ರಲ್ಲಿ ಅಮೃತ್ ಸರ್ ನ ಗೋಲ್ಡನ್ ಟೆಂಪಲ್ ನ ಮೇಲೆ ಭಾರತ ಸರ್ಕಾರ ಧಾಳಿ ನಡೆಸಿ ಬ್ಲೂ ಸ್ಟಾರ್ ಕಾರ್ಯಾಚರಣೆಯನ್ನು ನಡೆಸಿತು. ಪಂಜಾಬನ್ನು ವಿಭಾಗಿಸಿ ಖಲಿಸ್ಥಾನ್ ಬೇಕೆಂದು ಹೋರಾಟ ನಡೆಸುತ್ತಿದ್ದ ಗುಂಪಿಗೆ ಸೇರಿದ್ದ ಸಿಕ ಉಗ್ರರು  ಗೋಲ್ಡನ್ ಟೆಂಪಲ್ ನಲ್ಲಿ ಬಚ್ಚಿಟ್ಟುಕೊಂಡಿದ್ದಾರೆಂಬ ಮಾಹಿತಿಯ ಆಧಾರದ ಮೇಲೆ ಭಾರತದ ಸೈನಿಕರು ಧಾಳಿ ನಡೆಸಿದರು. ಇದರಲ್ಲಿ 400 ಜನ ಸತ್ತರು ಹತರಾದವರಲ್ಲಿ  87 ಜನ ಸೈನಿಕರೂ ಇದ್ದರು ಎಂದು ಅಧಿಕೃತ ಮೂಲಗಳು ಹೇಳುತ್ತವೆ.

ಇದಕ್ಕೆ ಪ್ರತಿಯಾಗಿ ಸಿಖ್ ಸಮುದಾಯದ ಅಂಗರಕ್ಷಕರು ಭಾರತದ ಪ್ರಥಮ ಮಹಿಳಾ ಪ್ರಧಾನಿಯಾದ ಇಂದಿರಾಗಾಂಧಿಯನ್ನು ಗುಂಡಿನ ಸುರಿ ಮಳೆಗೈದು ಕೊಂದರು. ’ಗಾಂಧಿ’ ಎನ್ನುವ ಹೆಸರಿದ್ದರೂ 1984 ರಲ್ಲಿ ನಡೆದ ಮೇಲಿನ ಘಟನೆಗೂ ಮಹಾತ್ಮ ಗಾಂಧೀಜಿಗೂ ಸಂಭಂದವಿರಲಿಲ್ಲ. ಗಾಂಧಿ 1984 ರ ವೇಳೆಗೆ ಸತ್ತು ದಶಕಗಳೇ ಕಳೆದಿದ್ದವು. ಇಬ್ಬರೂ ಸಂಭಂದಿಕರಲ್ಲ ಎನ್ನುವುದು  ಘೋಷಣೆಗಳನ್ನು ಬರೆದವರಿಗೆ ತಿಳಿದಿರಲಿಲ್ಲ!

ಇದಲ್ಲದೆ ಸಿಖ್ ಜನಾಂಗದ ’ ಗುರು ಗೋಬಿಂದ ಸಿಂಗ್’ ರನ್ನು ಗಾಂಧಿ ಹಿಂದುತ್ವವನ್ನು ಬಲವಾಗಿ ಬೆಂಬಲಿಸಿದ ವಿಶ್ವಗುರುವೆಂದು ಕರೆದದ್ದನ್ನು ಅವರಲ್ಲಿ ಕೆಲವರು ಒಪ್ಪುವುದಿಲ್ಲ. ಅದನ್ನು ಆತನಿಗೆ ಗಾಂಧಿ ಮಾಡಿದ ಅವಮಾನವೆಂದು ಪರಿಗಣಿಸುತ್ತಾರೆ. “ ನೀವೂ ಹಿಂದೂಗಳೆ “ ಎಂದು ಸಿಖ್ ಜನಾಂಗದವರನ್ನು ಪದೇ ಪದೇ ಕರೆದದ್ದನ್ನೂ ಕೆಲವರು ಸಿಕ್ಕರು ಬಹಳ ಕೋಪದಿಂದ ನೋಡುತ್ತಾರೆ.

ಇವರ ಅರ್ಥದಲ್ಲಿ ಈ ಎರಡೂ ಸಮಾನವಲ್ಲ. ಆದರೆ ಅಸಹಿಷ್ಣುಗಳು ಮತ್ತು  ’ಸಮಾನತೆ ’ಯಲ್ಲಿ ನಂಬುಗೆ ಇಲ್ಲದವರು ಇವರಿಬ್ಬರಲ್ಲಿ ಯಾರು? ಸ್ವಾತಂತ್ರ್ಯದ ಸಮಯದಲ್ಲಿ ಭಾರತದ ವಿಭಜನೆ ಗಾಂಧಿಯ ಇಚ್ಛೆಗೆ ವಿರುದ್ಧವಾಗಿ ನಡೆಯಿತು. ಆಗ ಎಲ್ಲರ ಕೈ ಮೀರಿ ನಡೆದ ಗಲಭೆಗಳಿಗೂ ಗಾಂಧೀಜಿಯನ್ನೇ ದೂರುವವರಿದ್ದಾರೆ!

ಇದೇ ವರ್ಷ ಮೇ 25 ರಂದು ಅಮೆರಿಕಾದ ಬಿಳಿಯ ಪೋಲೀಸನೊಬ್ಬ ಕರಿಯ ಜನಾಂಗದ ಜಾರ್ಜ್ ಫ್ಲಾಯ್ಡ್ ಎಂಬ ವ್ಯಕ್ತಿಯ ಕುತ್ತಿಗೆಯ ಮೇಲೆ ಮೊಣಕಾಲೂರಿ ಕೂತು ಆತನನ್ನು ಕೊಂದ ಬಳಿಕ ಭುಗಿಲೆದ್ದ  ಪ್ರತಿಭಟನೆಗಳಿಂದ ’ಬ್ಲಾಕ್ ಲೈವ್ಸ್ ಮ್ಯಾಟರ್ಸ್ ’ ಎನ್ನುವ ಅಭಿಯಾನಗಳು ಶುರುವಾದವು.

ಕರಿಯ ಜನಾಂಗದವರ ಆಕ್ರೋಶ ದಾಸ್ಯವನ್ನು ಮೆರೆಸಿದ ಹಲವು ಕುಖ್ಯಾತರ ಪ್ರತಿಮೆಗಳ ಮೇಲೆ ತಿರುಗಿತು. ವಾಷಿಂಗ್ಟನ್ ಸೇರಿದಂತೆ ಅಮೆರಿಕಾದ ಹಲವು ನಗರಗಳು, ಲಂಡನ್, ಬ್ರಿಸ್ಬೇನ್, ಇಸ್ರೇಲ್, ಜರ್ಮನಿ,ಫ್ರಾನ್ಸ್, ದಕ್ಷಿಣ ಅಮೆರಿಕಾದ ಬ್ರೆಜಿಲ್, ದಕ್ಷಿಣ ಆಫ್ರಿಕಾ ಎಲ್ಲೆಡೆಯೂ ಜನರು ಬೀದಿಗಿಳಿದರು.

ಇಂಗ್ಲೆಂಡಿನ ಬ್ರಿಸ್ಟಲ್ ಎಂಬ ಬಂದರು ನಗರವನ್ನು ಕಟ್ಟಿದ 17 ನೇ ಶತಮಾನದಲ್ಲಿ  ಸ್ಲೇವ್ ಟ್ರೇಡರ್ ನಾಗಿದ್ದ ಎಡ್ವರ್ಡ್ ಕೋಲ್ಸ್ಟನ್ನನ ಪ್ರತಿಮೆಯನ್ನು 10,000 ಜನರ ಗುಂಪೊಂದು ಉರುಳಿಸಿ, ಅದರ ಮೇಲೆ ಹತ್ತಿ ಕುಣಿದು ರಸ್ತೆಯಲ್ಲಿ ದರ ದರನೆ ಎಳೆದುಕೊಂಡು ಹೋಗಿ ಬಂದರಿನ ಸಮುದ್ರದ ನೀರಲ್ಲಿ  ಎಸೆದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಸುಮಾರು 80,000 ಜನರನ್ನು ಅಟ್ಲಾಂಟಿಕ್ ಸಮುದ್ರದ ಮೂಲಕ ದಾಸ್ಯದ ವ್ಯಾಪಾರಕ್ಕೆ ಬಳಸಿದ್ದ ಎಡ್ವರ್ಡ್ ಇಡೀ ಬ್ರಿಸ್ಟಲ್ ನಗರವನ್ನು ಕಟ್ಟಲು ನೆರವಾಗಿದ್ದ  ಪ್ರತಿಷ್ಟಿತ ರಾಜಕಾರಣಿ.ಅವನ ಪ್ರತಿಮೆಯನ್ನು ತೆಗೆಯಿರಿ ಎಂಬ ಅಹವಾಲು ಈಗಾಗಲೇ ನಡೆಯುತ್ತಿತ್ತು. ಆದರೆ ಚಾರಿತ್ರಿಕ ಕಾರಣಗಳಿಗಾಗಿ ಅದನ್ನು ಉಳಿಸಿಕೊಳ್ಳಲಾಗಿತ್ತು.

ದಾಸ್ಯದಿಂದ ದುಡ್ಡು ಮಾಡಿದ ಇಂತಹ ಪ್ರಮುಖ  ವ್ಯಕ್ತಿಗಳಿಂದ ಶುರುವಾದ ವಿಚಾರ ಗಾಂಧಿಯ ಮೇಲೂ ತಿರುಗಿತು. ಆದರೆ ಗಾಂಧೀಜಿ ಇಂತಹ ಯಾವುದೇ ಕೃತ್ಯಗಳಲ್ಲಿ ತೊಡಗಿಕೊಂಡವರಲ್ಲ.

ಗಾಂಧಿಯ ಮೇಲಿರುವ ಅಪವಾದ ಎಂದರೆ ಆತ ಕರಿಯ ಜನಾಂಗದವರನ್ನು  ’ಕಾಫಿರ್ ’,  ’ಸಂಸ್ಕೃತಿಯಿಲ್ಲದ ಜನ ’,  ’ಪ್ರಾಣಿಗಳಂತೆ ಬದುಕುತ್ತಾರೆ ’ ಎಂದು ತನ್ನ ಚಿಕ್ಕ ವಯಸ್ಸಿನಲ್ಲಿ, ಬ್ರಿಟಿಷ್ ಆಡಳಿತದ ಕಾಲದಲ್ಲಿ ಒಬ್ಬ ವಕೀಲನಾಗಿದ್ದ ದಿನಗಳಲ್ಲಿ ಮಾಡಿದ ಉಲ್ಲೇಖ ಮಾಡಿದ್ದುದು. ಒಟ್ಟಿನಲ್ಲಿ  ಆಫ್ರಿಕನ್ನರ ಪರವಾಗಿ ಹೋರಾಡಿದ ತ್ಯಾಗವನ್ನು ಮರೆತು ಇದೊಂದನ್ನೇ ದೊಡ್ಡದು ಮಾಡಿ ಖಂಡಿಸಲಾಯಿತು.

ಒಬ್ಬ ಭಾರತೀಯ ವಕೀಲನಾಗಿ, ನೇತಾರನಾಗಿ, ಹಿಂದೂವಾಗಿ ,ಇಂಗ್ಲೆಂಡಿನಿಂದ ದಕ್ಷಿಣ ಆಫ್ರಿಕಾಕ್ಕೆ ಹೋದಾಗ ಗಾಂಧೀಜಿಗೆ ವಯಸ್ಸು ಕೇವಲ 23 ವರ್ಷಗಳು! ಆಗ ಈ ಯುವಕನ ತಲೆಯಲ್ಲಿದ್ದುದು ಕೇವಲ ತಾಯ್ನಾಡನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಮಾಡಬೇಕೆಂಬ ಯೋಚನೆಗಳು ಮಾತ್ರ.

ಆಗಿನ ಕಾಲದಲ್ಲಿ ಕಂಡ ಕೆಲವು ವಿಚಾರಗಳ ಬಗ್ಗೆ ಅತಿ ಚಿಕ್ಕವಯಸ್ಸಿನಲ್ಲಿ ಗಾಂಧೀಜಿ ಹಾಗೆ ಉಲ್ಲೇಖಿಸಿದ್ದರೂ ಅದರಂತೆ ಕರಿಯ ಜನರನ್ನು ನಡೆಸಿಕೊಂಡವರಲ್ಲ.ಅದನ್ನು ಉತ್ತೇಜಿಸಿದವರೂ ಅಲ್ಲ.ಬದಲಾಗಿ ಅದರಿಂದಲೇ ಲೋಕದ ಅನ್ಯಾಯಗಳನ್ನು ಮೊಟ್ಟ ಮೊದಲ ಬಾರಿಗೆ ಆಳವಾಗಿ ಅರಿತುಕೊಂಡು ಬದಲಾದವರು.

2016 ರಲ್ಲಿ  ಘಾನಾ ದೇಶದ ಅಕ್ಕ್ರಾ ವಿಶ್ವ ವಿದ್ಯಾನಿಲಯದ ಆವರಣದಲ್ಲಿದ್ದ ಸ್ಥಾಪಿಸಿದ್ದ ಗಾಂಧಿ ಪ್ರತಿಮೆಯನ್ನು ಇದೇ ಕಾರಣಕ್ಕೆ 2018  ರಲ್ಲಿ ಕೆಳಗಿಳಿಸಲಾಗಿತ್ತು. ಇದನ್ನು ಆಗ್ರಹಿಸಿದ್ದು ಅಲ್ಲಿಯ ವಿದ್ಯಾರ್ಥಿಗಳು ಮತ್ತು ಇನ್ನು ಕೆಲವರು.

ಆಕ್ಕ್ರಾ ಕಾಲೇಜಿನಲ್ಲಿ 2016 ರಲ್ಲಿ ವೈಸ್ ಚಾನ್ಸಲರ್ ಆಗಿದ್ದ ಪ್ರೊಫೆಸರ್ ಅರ್ನೆಸ್ಟ್ ಏರ್ಯಟೆ  (Ernest Aryeetey ) ಗಾಂಧಿಯ ಬಗ್ಗೆ ತಿಳಿದುಕೊಂಡವರು. ಇವರು ಗಾಂಧಿಯ ಬಗ್ಗೆ ಅರಿಯದೆಯೇ ನಡೆದ ಗಲಭೆಗಳ ಬಗ್ಗೆ ಮರುಗಿದರೂ ವಿದ್ಯಾರ್ಥಿಗಳ ಭಾವಾವೇಶದ ಅ ಜ್ಞಾನಕ್ಕೆ ಗಾಂಧಿಯ ಪ್ರತಿಮೆ ಬಲಿಯಾಗದಿದ್ದುದೇ ಒಳಿತಾಯಿತು ಎಂದು ಬರೆಯುತ್ತ ಯಾವುದೋ ಕಾಲಘಟ್ಟದಲ್ಲಿ ಮಾಡಿದ ಉಲ್ಲೇಖ ಅಥವಾ ಪತ್ರದಲ್ಲಿ ಬರೆದ ಪದಗಳಿಗಾಗಿ, ಗಾಂಧೀಜಿಯನ್ನು ಒಪ್ಪದಿರುವುದು ಅವರನ್ನು ಅರ್ಥಮಾಡಿಕೊಳ್ಳದವರ ತಪ್ಪಷ್ಟೆ ಎನ್ನುತ್ತಾರೆ.

ಬಹುಶಃ ಗಾಂಧೀಜಿ ಆಫ್ರಿಕನ್ನರ ಪರವಾಗಿ ಯಾವುದೇ ರೀತಿಯ ಹೋರಾಟವನ್ನೂ ನಡೆಸದೆ ಸುಮ್ಮನಿದ್ದಿದ್ದರೆ  ಅವರೆಲ್ಲ ಇದೀಗ ಕೈ ಮುಗಿಯುತ್ತಿದ್ದರೇನೋ?

2018 ರಲ್ಲಿ ಇಂಗ್ಲೆಂಡಿನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಆವರಣದಲ್ಲಿ  ಅಹಿಂಸೆಯ ಪ್ರತೀಕವಾದ ಗಾಂಧೀಜಿಯ ಪ್ರತಿಮೆಯನ್ನು ಅನಾವರಣಗೊಳಿಸುವ ಪ್ರಯತ್ನವನ್ನು ನಡೆಸಿದ್ದರು. ಅದನ್ನು ತಡೆದ ಹಲವು ಆಫ್ರಿಕನ್ ವಿದ್ಯಾರ್ಥಿಗಳು ಗಾಂಧೀಜಿ “ ಭಾರತೀಯರು ಕರಿಯ ಜನಾಂಗದವರಿಗಿಂತ ಮೇಲು” ಎಂದು ಹೇಳಿದ್ದರು ಎಂಬ ಕಾರಣವನ್ನು ನೀಡಿದರು. ಅಕ್ಟೋಬರ್ ತಿಂಗಳನ್ನು  ಇಂಗ್ಲೆಂಡ್ ನಲ್ಲಿ ಕರಿಯ ಜನಾಂಗೀಯ ತಿಂಗಳೆಂದು ಆಚರಿಸುತ್ತದೆ.

ಅದೇ ತಿಂಗಳಲ್ಲಿ ಗಾಂಧಿಯ ಪ್ರತಿಮೆಯ ಅನಾವರಣವನ್ನು ಅವರು ತಡೆದರು. ಅವರ ಜೊತೆಗೆ ಕಾಶ್ಮೀರಿ ಮುಸಲ್ಮಾನರ ಸಂಘವೂ ಜೊತೆಗೂಡಿತು. ಈ ಮುಸಲ್ಮಾನರು ಗಾಂಧೀಜಿ   ತಮ್ಮನ್ನು  “ಪೀಡಕ (bully)  “ ರೆಂದು ಕರೆದಿದ್ದರು ಎಂಬ ಫಿರ್ಯಾದು ಸಲ್ಲಿಸಿದ್ದರು! – ಇಬ್ಬರಿಗೂ ಗಾಂಧೀಜಿ ಅವರಿಗಾಗಿ ಹಲವುಬಾರಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ ಬಗ್ಗೆ ತಿಳಿದದ್ದು ಬಹಳ ಕಡಿಮೆಯಿತ್ತು.

 ಕೇವಲ ಕೆಲವು ’ಉಲ್ಲೇಖ” ಗಳನ್ನು ಆಧರಿಸಿ ಗಾಂಧಿಯ ಪ್ರತಿಮೆಯನ್ನು ಯುವಜನತೆ ವಿರೋಧಿಸಿದ್ದನ್ನು  ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬಹುತೇಕರು ಖಂಡಿಸಿದರು. ಆದರೆ ಕಾಲೇಜಿನ ಯುವಜನತೆಯ ಮೇಲೆ ಒತ್ತಡ ಹೇರದೆ ಜನರು ಸುಮ್ಮನಾದರು.

ಅಂದಿನ ಕಾಲದಲ್ಲಿ ಆಫ್ರಿಕಾದಲ್ಲಿದ್ದ ಭಾರತೀಯರ ಪಾಡು ಮತ್ತು ಕರಿಯ ಜನಾಂಗೀಯರ ಬವಣೆಗಳು ಅವರ ಮತಿಯಲ್ಲಿ ಒಂದು ಚಿತ್ರವನ್ನ ಕಲ್ಪಿಸುತ್ತಿದ್ದ ಕಾಲವದು. ಆದರೆ ಅವರಲ್ಲಿದ್ದ ಮಹಾನುಭಾವ ಆಗಾಗಲೇ ರೂಪುಗೊಳ್ಳುತ್ತಿದ್ದ. ಅಸ್ಪೃಶ್ಯತೆಯ ವಿರುದ್ಧ ಅವರ ಹೋರಾಟವೂ ಅದರಿಂದಲೇ ಶುರುವಾಯಿತು. ಗಾಂಧಿ ಬದಲಾದರು.

ಅಲ್ಲಿಂದ ಭಾರತಕ್ಕೆ  ಮರಳಿದ ಮೇಲೆ ಅವರಲ್ಲಿ  ನಡೆದ ಬದಲಾವಣೆಗಳು ಇಡೀ ಭಾರತವನ್ನು ಮುನ್ನೆಡೆಸಿದವು. ಸಮಾನತೆ, ಸಹಬಾಳ್ವೆಗಳೇ ಅವರ ಜೀವನ ಕ್ರಮಗಳಾದವು. ಇಂದು ಗಾಂಧಿಯ ಬಗ್ಗೆ ಅಸಹನೆ ತೋರುತ್ತಿರುವ ಕರಿಯ ಜನಾಂಗದ ಹೋರಾಟಗಾರರಾದ ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾರ ಹೋರಾಟಕ್ಕೆ ಗಾಂಧಿಯೇ ಸ್ಪೂರ್ತಿಯಾದರು.

ಅವರ ನೇತಾರರು ಕಂಡದ್ದನ್ನು ಕಾಣಲಾಗದೆ  ಭಾವೋದ್ರೇಕಗಳಲ್ಲಿ ಗಾಂಧಿಯ ಪ್ರತಿಮೆಗಳ ಮೇಲೆ ಧಾಳಿ ಮಾಡುತ್ತಿರುವ ಆಫ್ರಿಕನ್ ಯುವಜನತೆಗೆ ತಿಳಿಯದ ವಿಚಾರಗಳು ಹಲವಿವೆ..

ಮಹಾತ್ಮ ಗಾಂಧಿ ಹುಟ್ಟಿದ್ದು  2 ಅಕ್ಟೋಬರ್  1869 ರಲ್ಲಿ. ಆ ಕಾಲದಲ್ಲಿ ಈ ಪ್ರಪಂಚ ನಡೆಯುತ್ತಿದ್ದ ಬಗೆಯೇ ಬೇರೆಯದಾಗಿತ್ತು. ತಾರತಮ್ಯಗಳು, ಮೇಲು-ಕೀಳುಗಳು, ಒಡೆಯ-ಗುಲಾಮತನಗಳು ಅಧಿಕೃತವಾಗಿ, ರಾಜೋ ರೋಶಾಗಿ ನಡೆಯುತ್ತಿದ್ದ ಕಾಲವದು.

ತಂತ್ರ ಜ್ಞಾನದ ಕೃಪೆಯಿಂದ ಇಂದು ಸಾಮಾನ್ಯನೂ ಪ್ರಪಂಚದ ಇನ್ನೊಂದು ಮೂಲೆಯಲ್ಲಿ ನಡೆಯುತ್ತಿರುವುದನ್ನು ಅರಿಯಬಲ್ಲವನಾಗಿದ್ದಾನೆ. ಆದರೆ ಗಾಂಧೀಜಿಯ ಕಾಲದಲ್ಲಿ ಇದು ಅಸಾಧ್ಯವಾಗಿತ್ತು. ಕೇವಲ ಬುದ್ದಿಬಲ, ಹಣಬಲ ಮತ್ತು ಮನೋಬಲವಿರುವ ವ್ಯಕ್ತಿಗಳು ಮಾತ್ರ ದೇಶ- ವಿದೇಶಗಳ ವಿದ್ಯಮಾನಗಳನ್ನು ಅರಿಯಲು ಸಾಧ್ಯವಿತ್ತು.

ಪ್ರಪಂಚದಲ್ಲಿ ಇಂದು ನಾವು ಕಾಣುತ್ತಿರುವ ವಾಕ್ ಸ್ವಾತಂತ್ರ್ಯಗಳು, ಪತ್ರಿಕಾ ಸ್ವಾತಂತ್ರ್ಯಗಳು, ಸಮಾನತೆಯ ಕೂಗುಗಳು ಇವೆಲ್ಲ  ಭಾರತೀಯರ ಪಾಲಿಗೆ ಇಲ್ಲದಿದ್ದ ಕಾಲವದು. ಮೊಬೈಲ್, ಮಿಂಚಂಚೆ, ಅಂತರ್ಜಾಲ, ವಿಮಾನಗಳು, ಆಧುನಿಕ ತಂತ್ರ ಜ್ಞಾನದ ಉಪಕರಣಗಳ್ಯಾವುವೂ ಇಲ್ಲದ ವರ್ಷಗಳವು.ಆಧುನಿಕ ಶಸ್ತ್ರಾಸ್ತ್ರ ಗಳು, ಕೃತಕ ಬುದ್ಧಿಮತ್ತೆಗಳಿಲ್ಲದ ಆ ಕಾಲದಲ್ಲಿ ಮೋಹನಲಾಲ ಕರಮಚಂದ ಗಾಂಧಿ ಎಂಬ ಒಂದು ಚೇತನ ಹುಟ್ಟಿದ್ದು ಸ್ವಾತಂತ್ರ್ಯ ಭಾರತದ  ಭವಿತವ್ಯ ಜನ್ಮ ತಳೆದ ದಿವ್ಯ ಕ್ಷಣ.

ಆದರೆ ಆ ವೇಳೆಗೆ ಬೃಹತ್ತಾದ ಭಾರತ ಛಿದ್ರ ಛಿದ್ರವಾದ ನೂರಾರು ಸಂಸ್ಥಾನಗಳಾಗಿ ಒಡೆದುಹೋಗಿತ್ತು.  ಆಗಿನ ಭಾರತ ಒಗ್ಗಟ್ಟಿನಲ್ಲಿ ಬಲವನ್ನು ಕಾಣುವುದನ್ನು ಮರೆತು ವಿದೇಶೀಯ ಶಕ್ತಿಗಳಿಗೆ ಮಣಿದುಹೋಗಿತ್ತು. ಬ್ರಿಟಿಷರ ಜೊತೆ ಸೇರಿ ತಂತಮ್ಮ ಬುಡಗಳನ್ನು ಮಾತ್ರ ರಕ್ಷಿಸಿಕೊಳ್ಳುವ  ಹುನ್ನಾರದಲ್ಲಿ ಬುದ್ದಿವಂತರೂ, ಶಕ್ತಿಶಾಲಿ ರಾಜರುಗಳು  ಲೋಕದೃಷ್ಟಿಯಿಲ್ಲದೆ ತಮ್ಮದೇ ಸ್ವಾರ್ಥ ಹೋರಾಟಗಳಲ್ಲಿ ತೊಡಗಿ ಇಡೀ ದೇಶದ ಬಗ್ಗೆ ಯೋಚಿಸಲು ಅಸಮರ್ಥರಾಗಿದ್ದರು. ಎದುರಿಸಿ ನಿಂತು ಹೋರಾಡುವವರು ಹುತಾತ್ಮರಾಗಿದ್ದರು. ಉಳಿದವರು ಅಸಮಾಧಾನದ ಉರಿಯಲ್ಲಿ ಬೇಯುತ್ತಿದ್ದರು.

ಅಂತಹ ಸಮಯದ ಬ್ರಿಟಿಷ್ ಆಡಳಿತದ ಭಾರತದಲ್ಲಿ ಹುಟ್ಟಿಬೆಳೆದು, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಗಳಲ್ಲಿ ಓದಿದ ಮಹಾತ್ಮ ಗಾಂಧೀಜಿ ನಮ್ಮ ನಿಮ್ಮಂತೆ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದವರು. ರಾಜಮನೆತನ, ರಾಜಕೀಯ ಧುರೀಣರ ಯಾವ ಪ್ರಭಾವಗಳೂ ಅವರ ಮನೆಯಲ್ಲಿರಲಿಲ್ಲ. ಆ ಕಾಲದಲ್ಲಿ ಪ್ರತಿಷ್ಠಿತ ಎನ್ನಬಹುದಾದ ವಕೀಲ ವೃತ್ತಿಯನ್ನು ಹೊಟ್ಟೆಯ ಪಾಡಿಗಾಗಿ ಮಗ ನಡೆಸಲಿ ಎನ್ನುವ ಅಭಿಲಾಶೆಗಳನ್ನಷ್ಟೇ ಆ ಸಂಸಾರ ಹೊಂದಿದ್ದುದು.

ಹೀಗೆ ಹುಟ್ಟಿ , ಬೆಳೆದ ವ್ಯಕ್ತಿಯೊಬ್ಬ ತನ್ನ ತಾಯ್ನಾಡಿಗೆ ಸ್ವಾತಂತ್ರ್ಯ ತಂದುಕೊಡಲು ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟು, ತಾನು, ತನ್ನದು , ತನ್ನ ಸಂಸಾರ ಎಂಬ ಯಾವುದೇ ಲವ ಲೇಶ ಮಾತ್ರದ ಸ್ವಾರ್ಥವಿಲ್ಲದೆ ಅಧಿಕಾರ ದಾಹವಿಲ್ಲದೆ ಎಲ್ಲವನ್ನೂ ತ್ಯಾಗ ಮಾಡುವುದನ್ನು ಊಹಿಸಲೂ ಆಗದ ಸ್ವಾರ್ಥಮಯ ರಾಜಕಾರಣದ ಕಾಲದಲ್ಲಿ ಈಗ ನಾವಿದ್ದೇವೆ.

ಅದೇ ಕಾರಣಕ್ಕೆ ಗಾಂಧೀಜಿಯ, ಆತನ ಅಸಂಖ್ಯಾತ ಹಿಂಬಾಲಕ ಸ್ವಾತಂತ್ರ್ಯ ಯೋಧರ , ತ್ಯಾಗಗಳ, ಜೀವನದ ಬಲಿದಾನಗಳನ್ನು ನಿಂದಿಸುವ, ಅಲ್ಲೆಗೆಳೆಯುವ, ಇನ್ಯಾರನ್ನೋ ದೊಡ್ಡದು ಮಾಡುವ ಹೀನ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದೇವೆ.

ವ್ಯಕ್ತಿಯೊಬ್ಬ ತನ್ನ ಇಪ್ಪತ್ತೆನೆಯ, ಮೂವತ್ತನೆಯ ವರ್ಷಗಳಲ್ಲಿ  ಬದುಕನ್ನು ಕಲಿಯುವ ವಯಸ್ಸಿನಲ್ಲಿ ಮಾಡಿದ, ಆಡಿದ ಮಾತುಗಳನ್ನು ಆರಿಸಿಕೊಂಡು ತಪ್ಪುಗಳನ್ನು ಹುಡುಕಿ, ಉಲ್ಲೇಖಿಸಿ ಆತ ಆ ನಂತರ ಮಹಾತ್ಮನಾಗಿ ಬೆಳೆದರೂ ಅದನ್ನು ಕಡೆಗಣಿಸಿ ಆತನ ಚಾರಿತ್ರ್ಯವಧೆಯಲ್ಲಿ ವಿಚಾರವಂತಿಕೆಯ ದಾರ್ಷ್ಟ್ಯ ವನ್ನು ಮೆರೆಯುವ  ತಬ್ಬಿಬ್ಬಿನಲ್ಲಿದ್ದೇವೆ. ಪ್ರತಿಯೋರ್ವ ಸ್ವಾತಂತ್ರ್ಯ ಹೋರಾಟಗಾರನೂ ಗಾಂಧಿಯಷ್ಟೇ ಮುಖ್ಯ.

ಅವರ ತ್ಯಾಗ, ಬಲಿದಾನಗಳು ಸರಿಸಮಾನ ಎನ್ನುವುದನ್ನು ಅಲ್ಲೆಗೆಳೆಯಲು ಸಾಧ್ಯವಿಲ್ಲ. ಆದರೆ, ಜಗತ್ತಿನ ಇನ್ಯಾರೂ ಮಾಡಿಲ್ಲದ ಅಹಿಂಸಾತ್ಮಕ ತಂತ್ರವನ್ನು ಅಳವಡಿಸಿಕೊಂಡು ಬಹುತೇಕ ಇಡೀ ರಾಷ್ಟ್ರವನ್ನು ಒಂದುಗೂಡಿಸಿ ಮುನ್ನೆಡೆಸಿದ ನಾಯಕ ನಮ್ಮ ಭಾರತಕ್ಕಷ್ಟೇ ಅಲ್ಲ ಇಡೀ ಜಗತ್ತಿನಲ್ಲಿ ಇನ್ನಿಲ್ಲದ ಶೌರ್ಯ ಮೆರೆದು ಹುತಾತ್ಮನಾಗಿದ್ದನ್ನು ಮರೆಯುತ್ತಿದ್ದೇವೆ. ಆತನ ಜನ್ಮದಿನದಂದು ಆತನನ್ನು ಸ್ಮರಿಸಿ, ಗೌರವಿಸಿ, ಆತನಿಗೆ ಮನಸ್ಪೂರ್ವಕ ನಮನಗಳನ್ನು ಅರ್ಪಿಸುವುದಕ್ಕೂ ನಮ್ಮಲ್ಲಿ ಹಿಂಜರಿಕೆಯ ವಾತಾವರಣ ಸೃಷ್ಟಿಯಾಗಿರುವುದು ಅತ್ಯಂತ ಖೇದಕರ.

ಗಾಂಧೀಜಿಯ ಹತ್ಯೆಯನ್ನು ಸಮರ್ಥಿಸಿ ಮಾತನಾಡಿದಂತಹ ಹಲವು ದೃಷ್ಕೃತ್ಯಗಳು  ಭಾರತದಲ್ಲಿ ಇತ್ತೀಚೆಗೆ ನಡೆದಿರುವುದು ನಮ್ಮ ದೇಶದ ದೊಡ್ಡ ಅದಃಪತನವೇ ಸರಿ. ಯಾವುದೇ ದೇಶದ ಆದರ್ಶಗಳನ್ನು, ಅದರ್ಶ ವ್ಯಕ್ತಿಗಳ ಚಿತ್ರಣಗಳನ್ನು ಮತ್ತು ಅದರಿಂದ ದೊರೆವ ಒಗ್ಗಟ್ಟಿನ ಬಲವನ್ನು ಒಡೆವವರು ಮತ್ತು ಒಂದು ರಾಷ್ಟ್ರದ ಹೆಮ್ಮೆಯ ದ್ಯೋತಕಗಳನ್ನು ಅಳಿಸಲು ಯತ್ನಿಸುವವರು ಇಡೀ ದೇಶಕ್ಕೆ ಅಪಮಾನ ಮಾಡಿದಂತೇ ಸರಿ.

ಅದರೊಡನೆಯೇ ಅಂತಹ ದೇಶಗಳು ಜಾಗತಿಕ ಮಟ್ಟದಲ್ಲೂ ಕೆಳಗೆ ಬೀಳುತ್ತವೆ. ತಾತ್ಕಾಲಿಕ ಪೊಳ್ಳು  ರಾಷ್ಟ್ರಪ್ರೇಮದ ಮೆರವಣಿಗೆಯ ಬದಲು ನಮ್ಮ ದೇಶದ ತಾಯಿ ಬೇರನ್ನು ಪೋಷಿಸುವ ಮೂಲಕ ಮತ್ತೆಲ್ಲ ಬೇರುಗಳೂ ಬಲವಾಗುತ್ತವೆ  ಎಂಬುದನ್ನು ಅರಿಯುವುದು ಒಳಿತು. ದೇಶದ ಪಿತಾಮಹನನ್ನು ಕೆಲಕಾಲ ಮೆರೆಸಿ ನಂತರ ಇನ್ಯಾರನ್ನೋ  ತಮ್ಮ ಸ್ವಾರ್ಥಕ್ಕಾಗಿ ಮೆರೆಸಲು ದೇಶಭಕ್ತಿಯೆನ್ನುವುದನ್ನು ಕಾಲ ಕಾಲಕ್ಕೆ ಬದಲಾಗುವ ಫ್ಯಾಷನ್ ಎಂದು ಪರಿಗಣಿಸಲು ಸಾದ್ಯವೇ?

ಗಾಂಧೀಜಿ  ’ ಅಂದಿನ ಕಾಲದ ’ ಆಗು ಹೋಗುಗಳನ್ನು ನಿಚ್ಚಳವಾಗಿ ಕಂಡು ದಾಖಲಿಸಿದ್ದರು ಎಂಬುದನ್ನ ಮರೆತು  ಅವೇ ಮಾತುಗಳನ್ನು  ’ಇಂದಿನ ಕಾಲದ ’ ಚಶ್ಮಾ ಧರಿಸಿ ವಿಚ್ಛೇದಿಸಿ ನೋಡುವ ಪ್ರಯತ್ನ ಮಾಡುತ್ತ ನಾವು ಅಂಧರಾಗಿದ್ದೇವೆ.

ಸ್ವತಃ ಗಾಂಧಿಯೂ ತನ್ನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಿದ್ದರು, ಅವರ ಸುತ್ತ ಮುತ್ತಲ ಜಗತ್ತೂ ಬದಲಾಗುತ್ತಿತ್ತು ಎನ್ನುವ ಯಾವ ಅರ್ಥೈಸುವಿಕೆಯನ್ನೂ ತೋರಸದ ಕೆಲವರು ಇಪ್ಪತ್ತರ- ಮೂವತ್ತು   ವರ್ಷದ ಗಾಂಧಿ ತಮ್ಮ ಎಪ್ಪತ್ತರಲ್ಲಿ ಸಂಪೂರ್ಣ ಬದಲಾದ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ಅರಿಯದೆ ಆತ ಹುಟ್ಟುತ್ತಲೇ ಎಪ್ಪತ್ತು ವರ್ಷದ ವಿದ್ವತ್ತನ್ನು ಪಡೆದೇ ಹುಟ್ಟಿರಬೇಕು ಎನ್ನುವ ಅಸಹಜ ನಿರೀಕ್ಷೆಯನ್ನು ತೋರಿಸಿರುವುದು ಅತ್ಯಂತ ಬಾಲಿಶವಾದ ಪ್ರಕರಣಗಳಾಗಿವೆ.

ಅದರ ಜೊತೆಯಲ್ಲಿ ಆತನ ಮುಂದಾಳತ್ವದಿಂದ ಲಾಭವನ್ನು ಪಡೆದ ಕರಿಯ ಜನಾಂಗದವರು ಗಾಂಧೀಜಿಯ ಮಾತುಗಳಿಂದ ಅವರಿಗೆ ನೇರವಾದ ಯಾವ ಹಾನಿಯಾಗಿಲ್ಲದಿದ್ದರೂ ಅದನ್ನೇ ದೊಡ್ಡದನ್ನು ಮಾಡುವ ಪ್ರಯತ್ನದಲ್ಲಿದ್ದಾರೆ. ಇಡೀ ಶತಮಾನಗಳು,ಅಸಂಖ್ಯಾತ ಇತರರು ಅವರನ್ನು ನಡೆಸಿಕೊಂಡ ರೀತಿಗೆ ಶಾಂತರೂಪಿ ಗಾಂಧಿಯ ಮೇಲೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ನೂರಾರು ವರ್ಷಗಳ ಹಿಂದೆ ಹುಟ್ಟಿ, ಕೆಲವರಿಗೆ ಸಹಾಯ ಮಾಡಲು ಹೋಗಿ, ಇನ್ನು ಕೆಲವರನ್ನು ತಮ್ಮವರಂತೆ ತಬ್ಬಲು ಹೋಗಿ, ಅರ್ಥವಾಗದ ಜನರ ಜೊತೆ ಮೌನಿಯಾಗಿ, ಅಪಾರ ನೋವು- ಸಂಕಟಗಳನ್ನು ತಮ್ಮದಾಗಿಸಿಕೊಂಡು, ಹತ್ತು-ಹಲವರ ಅಹಂ, ಆಸೆಗಳಿಗೆ ಕಡಿವಾಣ ಹಾಕುತ್ತ, ಹಲವು ಧರ್ಮೀಯ, ಮತೀಯರ, ವಿದೇಶೀಯರ ಜೊತೆ ಸಮತೋಲನ ಸಾಧಿಸುತ್ತ ಒಬ್ಬ ಮನುಷ್ಯ ಅತ್ಯಂತ ಪ್ರಕ್ಷುಬ್ದ ಕಾಲದಲ್ಲಿ ಸಾಧಿಸಿದ್ದನ್ನು ಇಂದಿನವರು ಅತ್ಯಂತ ಕ್ಷುಲ್ಲಕ  ಕಾರಣಗಳಿಗೆ ಬಲಿದಾನ ನೀಡುವುದನ್ನು ನೋಡಲು ಬೇಸರವೆನಿಸುತ್ತದೆ.

ಈ ರೀತಿ ನಡೆದುಕೊಳ್ಳುವವರು ಬೆರಳೆಣಿಕೆಯ ಜನರನ್ನೂ ಸಂಭಾಳಿಸಿಲ್ಲದ ಅನನುಭವಿಗಳು, ತಾರ್ಕಿಕ ವಾದಕ್ಕೆ ತೆರೆದುಕೊಳ್ಳದವರು ಮತ್ತು ಚರಿತ್ರೆಯನ್ನು ತಿರುಚಿ ಇರುವುದನ್ನೂ ಕಳೆದುಕೊಂಡು ಆದರ್ಶಗಳೇ ಇಲ್ಲದ ಬರಿಗೈಯಾಗಲು ಹೊರಟಿರುವವರು. ಮತ್ತೆ ಕೆಲವರು ಇನ್ಯಾರದೋ ಸ್ವಾರ್ಥಕ್ಕೆ ಬಲಿಯಾಗುತ್ತಿದ್ದಾರೆ.

ಜೀವನ ಪೂರ್ತ ಅರಳುತ್ತ ಸತ್ಯಾನ್ವೇಷಣೆ ಮಾಡಲು ಹೊರಟ ಮನುಷ್ಯನ ಅಗಾಧತೆಯನ್ನು ಅರ್ಥ ಮಾಡಿಕೊಳ್ಳಲು ಯೋಗ್ಯತೆಯಿರಬೇಕಾಗುತ್ತದೆ. ಆದರೆ, ಸಾಮಾನ್ಯ ಮನುಷ್ಯರು, ಒಬ್ಬ ಮುತ್ಸದ್ದಿ ತಾನಿದ್ದ ಪರಿಸ್ಥಿತಿಯಲ್ಲಿ ಇನ್ನು ಹೇಗೆ ಎಲ್ಲರಿಗೂ ಸಲ್ಲಲು ಸಾಧ್ಯವಿತ್ತು ಎಂದು ಪ್ರಶ್ನಿಸಿಕೊಳ್ಳಬಹುದು.

ತಮ್ಮ ಪ್ರೀತಿಯ ಇನ್ಯಾರಾದರೂ “ ಸರಿ ”  ಎನ್ನುವವರಿದ್ದರೆ ಅವರು ತಪ್ಪೇ ಮಾಡದೆ ಬದುಕಿದ್ದಾರೆಯೇ ಎಂದು  ಕೇಳಿಕೊಳ್ಳಬಹುದು. “ಏನೋ ಇರಬೇಕು?”… “ಅದೆಲ್ಲ ತಪ್ಪು…” ಎನ್ನುವವರು ಅದು ಎಂತಹ ಕ್ಷುಲ್ಲಕ ವಿಚಾರ ಎಂಬುದನ್ನು ನಿಚ್ಚಳವಾಗಿ ಅರಿಯಲಿ.

ಹೊಸ ಯುವಪೀಳಿಗೆಯ ಕಣ್ತೆರಸಲಾದರೂ ಗಾಂಧಿಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಮಾಧ್ಯಮಗಳು  ನಿಯಮಿತವಾಗಿ ಹಂಚಿಕೊಳ್ಳಲಿ. ಹಿರಿಯ ತಲೆಮಾರುಗಳು ಗಾಂಧಿಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲಿ. ಕಿರಿಯರ ಅಸಹಜ ಅಸಹನೆಗಳನ್ನು ನಂದಿಸುವಂತಾಗಲಿ. ಆ ಮಹಾತ್ಮನಿಗೆ ಅನವರತ ನಮನಗಳು.

‍ಲೇಖಕರು Avadhi

October 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: