ಬಿಕ್ಕುಗಳು

ರುಕ್ಮಿಣಿ ನಾಗಣ್ಣವರ

ಪಾರಿಯ ತಲಿ ಒಳಗ ಹತ್ತಾರ ನಮೂನಿ ಯೋಚನಿ ಹುಳುಗೋಳು ಟಪಕ್ಕನ ಬಿದ್ದು ಬುಚುಬುಚು ಹರದಾಡಾಕ ಹತ್ತಿದ್ದವು. ಪಾರಿಗೆ ಇದss ಮದಲ ಸಲಾ. ಇಷ್ಟsss ಯೋಚನಿ ಮಾಡುವಂಥ ಹರಕತ್ತು ಯಾವಾಗೂ ಬಂದಿರಕಿಲ್ಲ. ಸುತ್ತಮುತ್ತಿನ ಮಂದಿ ಏಟರ ಇಸ ಘಾತುಕರ ಅದಾರ!? ಈ ಇಸಘಾತುಕನದ ತಕ್ಕಡಿ ಒಳಗ ಮನ್ಯಾನ ಮಂದಿ ಪಾಲೂ ಸೇರೂದ ಅದ ಏನ? ಅಂತ ಚಿಂತಿಗಿ ಬಿದ್ದ ಪಾರಿಗೆ ಇದ್ದಕ್ಕಿದ್ದಂಗ ತಾನು‌ ಒಂಟಿ ಅನಿಸಾಕ ಹತ್ತಿತು.

ಕಣ್ಣು ಕಿಂವುಚಿ ಸಣ್ಣ ಆಗಾಕ ಹತ್ತಿದ್ವು. ಸೊಕ್ಕಿಲೇ ಶೆಟೆದು ಕುಂತಿದ್ದ ಕುಂತಿದ್ದ ಪ್ ಮೂಗು ಅದುರಲಾಕ ಸುರು ಮಾಡ್ತು‌. ತುಟಿಗೋಳು ತಾಂಯೇನ ಕಡಿಮಿ ಅಂತ ಜಿದ್ದಿಗಿ ಬಿದ್ದವು. ಪಾರಿ ಗಬಕ್ಕನೇ ತನ್ನ ಕೆಳದುಟಿ ಬಾಯಾಗ ಎಳದು ಮ್ಯಾಲಿನ ಹಲ್ಲುಗೋಳಿಂದ ತುಟಿ ಗಚ್ಚಿss ಹಿಡಿದಳು. ಒದ್ದಾಟ ನಡೆಸಿದ ಯೋಚನಿಗೋಳನ ಸಂಭಾಳ್ಸಾಕ ಗುದುಮುರಿಗಿ ನಡೆಸಿ ಸೋತು ಕೈ ಚಲ್ಲಿದಳು.

ಕಣ್ಣುಗೋಳ ಮತ್ತssಟ ಸಣ್ಣ ಆದವು. ಕಣ್ತುಂಬ ತುಂಬಿ ಬಂದ ನೀರು ಬೆಚ್ಚಗ ಹೊಯಿದಾಡಾಕ ಸುರು ಮಾಡಿದುವು. ‘ಎವ್ವಾ…. ಈ ಹುಡುಗಿ ಕಾಲಾಗ ಸಾಕ ಸಾಕ ಆಕೈತಿ ನನಗ…’ ಅಂದಾಕಿನ ಗೌರವ್ವ ತನ್ನ ಮಗಳ ತಲಿ ಕುಕ್ಕಿದಳು. ತಲಿ ಬಾಗಿಸಿ ಸೊಂಡಿ ಪಿರುಕಿಸಿ ಕುಂತಿದ್ದ ಪಾರಿಯ ದುಃಖದ ಕಟ್ಟಿ ಒಡದು ಬಂತು. ರೊಂಯ್ಯsssನ ರಾಗ ತಗದಳು. ಒಂದ ಅಂದರ ಹನ್ಯಾಡ ಯೋಚನಿ ಸಾಲು ಹಚ್ಚಿ ಹಣ್ಯಾಕ ಶುರು ಮಾಡಿದವು. ಪಾರಿ ದು:ಖಸಿ ದುಃಖಸಿ ಅಳಾಕ ಹತ್ತಿದಳು‌.

ತಾ ಉಟಗೊಂಡಿದ್ದ ಮೀಡಿಯ ಹೊರಪದರು ಮ್ಯಾಲೆಳದು ಒಳಗಿನ ಪೆಟ್ಟಿಕೋಟಿನ ಕೆಳ ತುದಿಯನ್ನ ಕಣ್ಣುಗೋಳಿಗೆ ಒತ್ತಿ ಹಿಡಿದಳು.. ‘ಸುಮ್ಮss ಆಗಲೇ ರಂಡಿ… ಮನ್ಯಾಗ ಯಾರರೇ ಸತ್ತಾರಂಗ ಅಳಾಕ ಹತ್ತಿದಿ…’ ಅನಕೋತ ಹರವಿದ್ದ ಪಾರಿಯ ಕೂದಲುಗೋಳನ ತನ್ನ ಎಡಗೈ ಮುಷ್ಟಿಯಿಂದ ಜಗ್ಗಿ ಪಾರಿಯನ್ನು ಸೀದ ಕುಂದುರಿಸಿದಳು.

ಮಗ್ಗುಲಕ ಸ್ಟೀಲ ಬಟ್ಟಲ ತುಂಬ ಕೊಬರಿ ಎಣ್ಣಿ ಇಟಗೊಂಡಿದ್ದಳು ಎಣ್ಣಿಬಟ್ಟಲಾ ಎತ್ತಿ ಪಾರಿಯ ನೆತ್ತಿಗೆ ಸುರುವಿ ತಪಾತಪಾ ಬಡ್ಕೋಂತ ಕೂದಲಾ ಸೀಳಿ ಎಣ್ಣಿ ಹಚ್ಚಾಕ ಹತ್ತಿದಳು. ಕಣ್ಣ ಒರಸ್ಕೋಂತ ಕುಂತಿದ್ದ ಪಾರಿ ತನ್ನವ್ವ ಅಗಸರ ಅಕ್ಕವ್ವನ ಬರಾಕ ಹೇಳಿ ಕಳಿಸಿದ್ದು ನೆನಪ ಆತು. ನೆನಪ ಆದಂಗ ಆದಂಗ‌ ಬಿಕ್ಕೂನಕಿ ಹೆಚ್ಮಾಡಿದವು.

ಚಿತ್ರಕೃಪೆ: ಗೂಗಲ್

ಯಾಕರ ಇಷ್ಟ ಲಗೂssನ ದೊಡ್ಡಾಕಿನ ಮಾಡಿದ್ಯೊ ಹಾಟ್ಯಾನ ಮಗನ..?’ ಮನಸಿನ್ಯಾಗ ಅಂದು ಪಾರಿ ಜಂತಿ ನೋಡಿದಳು. ಎದ್ಯಾಗಿನ ಕುದಿ ಉಕ್ಕಿ ಬಂದಂಗ ಆತು. ‘ನಿನ್ನ ಮನಿ ಮಸೂತಿ ಆಗಲಿ… ಏಟರೇ ಕಾಡ್ತಿದಿ… ಹಂಪ ಹರಕೊಂಡ ಹೋಗತ್ತ…’ ಪಾರಿ ಒಂದs ಶಬ್ಧಾನೂ ಹೊರಡಸದ ತನ್ನ ಎಲ್ಲಾ ಬಳ್ಳಗೋಳಿಂದ ಲಟಿಕಿ ಮುರದು ಸರಾಪ  ಹಾಕಿದ್ಳು.

************************

ಹಚ್ಚ ಹಸೂರಾನ ಬಳ್ಳಿ. ಆಸರ ಸಿಕ್ಕಷ್ಟ ಹಬ್ಬಿ ತಬ್ಬುವಂಥ ಬಳ್ಳಿ. ಸಣ್ಣ ಸಣ್ಣ ಎಲೆಗೋಳು. ಎಲೆಗೋಳ ನಡಬರಕ ಅಲ್ಲಿ ಇಲ್ಲಿ ಒಂದ್ಯಾಡು ಕೆಂಪಾನು ಮಿಡಿ ಮಗ್ಗಿ. ಬಗಲಾಗ ತನ್ನೆದಿ ದಳಗೋಳನ್ನು ಅಳ್ಳಿಸಿ ದುಂಬ್ಯಿಗಂತ ನುಲ್ಯೊ ಹೂವು. ತೂಗಿ ತೊನ್ಯೊ ಬಿನ್ನಾಣ. ಒಟ್ಟss ಬಾಡಂಗಿಲ್ಲದ ಹೂವು.

ಸಬಕಾರ ಹಚ್ಚಿ ಒಗದಟ್ಟ ಥಳಥಳಾ ಅನ್ನುವಂಥ ಬಣ್ಣ. ಕೆಳಗ ಸುತ್ತಕೂ ಬಂಗಾರ ಬಣ್ಣದ ಬಾಡರ್. ಎದಿಮ್ಯಾಲ ಕೋಟಿನಂಥದ ಮತ್ತೊಂದ ಪದರು. ಜಗ್ಗಿ ಕಟ್ಟುವ ಉದ್ದsssನ ಕಸಿದಾರ. ಹಂಗ ಬಿಟ್ರ ಮಳಕಾಲ ಮಟ ತೂಗಿ ನಿಲ್ಲುವ ದಾರ. ಕಟ್ಟಿ ಹಾಕಿದ್ರ ಥೇಟ ಕ್ಯಾದಿಗಿ ಹೂವು. ಎಷ್ಟ ಛಂದದ ಮೀಡಿ. ಶನಿವಾರ ಸಂತ್ಯಾಗ ಗೌರವ್ವ ಕೊಡಿಸಿದ್ದ ಮೀಡಿ.

‘ಈ ಸಲಾ ಉಗಾದಿಗಿ ಅರಿಬಿ ಅಂಚಡಿ ಕೊಡಸುದಾದರ ಅದsss ಮೀಡಿ ಕೊಡುಸು… ಇಲ್ಲಾಂದ್ರ ಹಳಿ ಅರಿಬಿ ಮ್ಯಾಲ ಉಗಾದಿ ಮಾಡ್ತೀನಿ….’ ಅಂತ  ಮಕಾ ಗಡಿಗಿ ಮಾಡ್ಕೊಂಡ  ಸೆಟಗೊಂಡ ಕುಂತಿದ್ಳು ಪಾರಿ. ವರಸದಾಗ ಒಂದss ಸಲಾ ಅರಿಬಿ ಸಂತಿ ಮಾಡ್ತಿದ್ದ ಗೌರವ್ವಗೂ ಕಳ್ಳ ಚುರಕ್ಕಂದಿತ್ತು. ಯಾವತ್ತೂ ಮಂಡ ಹಚ್ಚದ ಮಗಳು ಬಾಯ್ಬಿಟ್ಟು ಕೇಳ್ಯಾಳು. ಕೊಡಿಸಿದ್ರಾತು ಅಂದು ಮಲಿಕಟ್ಟಿನ್ಯಾಗ ಇಟಗೊಂಡಿದ್ದ ನೋಟಗೋಳ ಎಳದು ನೂರರು ಯಾಡ ನೋಟಗೋಳನ ಕೊಡ್ಲ್ಯೋ ಬ್ಯಾಡೋ ಹೊಯ್ಯ ಮನಸಿನಲ್ಲಿ ಕೊಟ್ಟು ಮೀಡಿ ತಂದಿದ್ದಳು.

ಅಂದ ಪಾರಿ ಖುಷಿ ಮುಗಲ ತುಂಬಿತ್ತು. ಮೀಡಿ ಉಟಗೊಂಡ ಗೆಳತ್ಯಾರ ಮುಂದ ಭಾರೀ ಗತ್ತಿನ್ಯಾಗ ಬೀಗೂದುನ್ನ ಪಾರಿ ಕಲ್ಪನಾ ಮಾಡಕೊಂಡ ಉಬ್ಬಿ ಹೋಗಿದ್ಳು. ಅವತ್ತ ಬುಧವಾರ. ಸಾಲಿ ಮಕ್ಳು ಭಿನ್ನ ಡ್ರೇಸ್ ಹಾಕೊಂಡ ಸಾಲಿಗಿ ಬರೊ ದಿನ. ಪಾರಿ ಅವತ್ತು ಮುಂಜಾನಿ ಲಗೂನ ಎದ್ದಿದ್ದಳು. ತಲಿಮ್ಯಾಲ ನೀರ ಹಾಕೊಂಡು ಯಾಡ ಪಾಕೀಟ ಕ್ಲೀನಿಕ್ ಪ್ಲಸ್ ಶಾಂಪು ಒಡದು ತಲಿ ತೊಳ್ಕೊಂಡು ಘಮ್ ಘಮ್ ಅಂತಿದ್ಳು. ಗೌರವ್ವ ಒಬ್ಬಿ ರೊಟ್ಟಿ ಬಡದೊಗದು ಹಿಟ್ಟಿನ್ನೀರಾಗ ಕೈತೊಳಿತಿದ್ಳು.

‘ಎವ್ವಾ… ಇವತ್ತ ನನಗ ಕುದುರಿ ಜುಟ್ಲಾ ಹಾಕ್ಬಾ ಬೇ…’ ಎನ್ನುತ್ತ ಪಾರಿ ಎಡಗೈಲಿ ಕನ್ನಡಿ ಬಲಗೈಲಿ ಹನಿಗಿ ಹಿಡಿದು ನಿಂತಿದ್ದಳು.  ಮಗಳ ಸಿಂಗಾರಿಕಿ ನೋಡಿ ಗೌರವ್ವ ತನ್ನ ಹುಬ್ಬ ಮ್ಯಾಲ ಏರಿಸಿ ತಳಗ ಇಳಿಸಿ ತುಟಿ ತುದ್ಯಾಗ ನಗು‌ ಸೂಸಿದ್ದಳು. ಸೊಂಟಕ್ಕ ತುರಿಕಿದ್ದ ಮಸಿ ಅರಿಬಿಗಿ ಕೈ ಒರಸ್ಗೋತ ಪಡಸಾಲಿ ಕಡಿ ಹೆಜ್ಜಿ ಹಾಕಾನ ಹಿಟ್ನೀರ ಮ್ಯಾಲ ಕುಂತಿದ್ದ ನೊಣಗೋಳು ಹಾರಾಣ ಜೊಮ್ಮ ಅಂತ ಸೌಂಡು ಬಂತು. ಪಾರಿ ಕಿಸಕ್ಕನ ನಕ್ಕು ಗೌರವ್ವಗ ತಲೆಕೊಟ್ಟು ಬೆಳ್ಳನ್ಯಾಗ ಮೀಡಿಗಿ ಮ್ಯಾಚ್ ಆಗಂತಾದ ಹಸರ ರಬ್ಬಲಿ ಬೆಳ್ಳಿನ ತುದ್ಯಾಗ ಹಿಡದಿದ್ದಳು.

ಕೂದಲ ಎಲ್ಲ ಎತ್ತರಕ ತಗೋಂಡ ತಲಿ ಹಿಕ್ಕಿ ಅಗದಿ ಮಸ್ತsssಗ ಕುದುರಿ‌ ಜುಟ್ಲಾ ಹಾಕಿಸಿಕೊಂಡು. ಅದನ ಕುದರಿ ಹಾಂಗss ಹೊಳ್ಯಾಡಸ್ಕೊಂಡ ಸಾಲಿಗಿ ನಡದಿದ್ದಳು. ಸಾಲಿಗಿ ಹೊಂಡುವಾಗ ಹಾದಿಬದ್ಯಾನ ಮಂದಿ ಕೈಯಾಗಿನ ಕೆಲಸ ಬಿಟ್ಟ ತನ್ನ ಒಬ್ಬಾಕಿನ ನೋಡಕೋತ ನಿಂತಾರು ಅನಕೊಂಡು ಭಾರೀ ಗತ್ತಿನ್ಯಾಗ ಹೆಜ್ಜಿ ಹಾಕಿದ್ಳು ಪಾರಿ. ಅಕಿ ಮನಸ ಭಾಳಟ ಅಳ್ಳಿತ್ತು. ಮೊದಲನೆ ಪಿರಿಡ್ ಹಡಪದ ಮಾಸ್ತರರದು.

ಬೀಜಗಣಿತ ಕ್ಲಾಸ್. ಬರ‍್ಡ್ ಮ್ಯಾಲ ಗಣಿತ ಲೆಕ್ಕಾ ಹಾಕಿ ಬಿಡಸರಿ ಅಂದು ಸ್ಟಾಪ್ ರೂಮಿಗಿ ಹೋಗಿ ಕರ‍್ಚೇಕ ಕುಂಡಿ ಹಚ್ಚಿ ಕುಂತಿದ್ದ. ವಾಪಸ್ ಬರುಗುಡದ ನಾ ಮುಂದ ನೀ ಮುಂದ ಅಂದು ಬಿಡಿಸಿದ ಲೆಕ್ಕಾ ತೋರಸಾಕ ಹುಡುಗೋರು ಮಾಸ್ತರನss ಘೇರಾವ ಮಾಡಿದ್ರು. ಆ ಗದ್ದಲದಾಗ ಅಂವನ ವಾಚಿಗಿ ಪಾರಿಯ ಮೀಡಿಯ ಎದಿಮ್ಯಾಲಿನ ಕಸಿ ಸಿಕ್ಕಿ ಹಾಕೊಂಡಿತ್ತು. ಅಂವ ತಳವಾರ ಪ್ರಕಾಶ.

ನಾಕನೇ ಸಾಲಿನೊಳಗ ಕುಂದರ‍್ತಿದ್ದ ಮೂರು ಮಂದ್ಯಾಗ ಎರಡನೇದಂವ ಹ್ವಾದ ವರಸ ಇಡೀ ಕ್ಲಾಸಿಗಿ ಮೊದಲ ಬಂದಾಂವ.‌ ಮೆಲ್ಲುಕ ಕೈ ಹಿಂದುಕ ತಗದು ಕಸ್ಯಾಗಿಂದ ವಾಚ್ ಬಿಡಸ್ಕೊಂಡು, ‘ಗೊತ್ತಾಗಲಿಲ್ಲ ಹಾಂ…. ಸ್ವಾ…ರಿ….’ ಅನ್ಕೋತ ಮೆಲು ನಗಿ ನಕ್ಕಿದ್ದ. ಅಂದಿಂದ ಅವನ ಕೂಡ ಮಾತು ಸುರು ಆಗಿತ್ತು. ದಿನ ಕಳದಂಗ ಗೆಳೆತನ ಆತು. ಬರಬರತ ಸಾಲಿಗಿ ಹೋಗುಮುಂದ ಅಂವ ಮನಿತಕಾ ಬಂದು ಪಾರಿ ಕರಕೊಂಡೇ ಸಾಲಿಗಿ ಹೋಗತ್ತಿದ್ದ.

ಓದೂದು, ರ‍್ಯೋದು, ಲೆಕ್ಕಾ ಬಿಡಿಸೋದು, ಹಿಸ್ಟರಿ ಇಸವಿಗೋಳನ ನೆನಪಿಡೂದು, ಬಾಯಿಪಾಠ ಮಾಡೂದು.. ಭಾಷಣ, ಹಾಡು, ಖೋಖೋ, ಓಟ, ರಿಲೇ..  ಏನೆಲ್ಲ….!ಅಂವನ ಚಿಗಪ್ಪಾ ಭಾಳ ಕಲತಾಂವಂತ. ಪಾರಿ ಕೂಡ ಆವಾಗವಾಗ ಸುಮ್ಮ ಕುಂತಾಗ ಹೇಳ್ತಿದ್ದ. ಒಂದಿನ, ‘ನಾ ಸಾಯನ್ಸ್ ತಗೋತಿನಿ, ಇಂಜಿನೇರ್ ಮಾಡ್ತೀನಿ, ಬೆಂಗಳೂರದಾಗ ನೋಕ್ರಿ ಮಾಡ್ತೀನಿ’ ಅಂದಿದ್ದ. ಅದಕ ಪಾರಿ, ‘ನಾ ಮನಗೂಳಿ ಅಕ್ಕೋರಂಗ ಆಕ್ಕಿನಿ… ಅಕ್ಕೋರ ಆಕ್ಕಿನಿ. ಆರ‍್ಶ ಶಿಕ್ಷಕಿ ಅನಸ್ಗೋಂತಿನಿ.’ ಅಂದಿದ್ಳು.

ಏನ ಓದಿದರ ಅಕ್ಕೋರ ಅಕ್ಕಾರ ಹೇಳು? ಅಂದು ಪಾರಿಗಿ ಕಣ್ಣಾಗ ಕೆಣಕಿದ್ದ. ಪಾರಿಗಿ ಏನ ಉತ್ತರ ಹೇಳಬೇಕು ಗೊತ್ತಾಗಿರಲಿಲ್ಲ. ತಲಿ ಕೆರಕೋಂತ ಹುಬ್ಬಿಗಿ ಹುಬ್ಬ ಕೂಡಿಸಿ ತಾನs ಒಂದು ಗಂಟಾಗಿ ನಿಂತ ಬಿಟ್ಟಿದ್ದಳು. ಮಳ್ಳಾ ಮರದಿನ ಮನಗೂಳಿ ಅಕ್ಕೋರ ಮನಿಗಿ ಹೋಗಿ ಮಾಸ್ತರಿಕಿಗಿ ಏನ ಓದಬೇಕು ಅನ್ನೋದನ್ನ ಕೇಳಕೊಂಡಿದ್ದಳು. ಹಿಂಗss ಅಂವನಿಂದ ಪಾರಿ‌ ಕನಸು ಹಿಗ್ಗಿತ್ತು. ಅಂವ-ಪಾರಿ ಇಡೀ ಸಾಲ್ಯಾಗ ಜಿಗರಿ ದೋಸ್ತ-ದೋಸ್ತಿ. ಅಂಥ ಗೆಳ್ಯಾನ ಗೆಳೆತನ ಕಟ್ಟಿಕೊಟ್ಟಂಥದ ಮೀಡಿ.

ಅದಕ ಆ ಮೀಡಿ ಅಂದರ ಪಾರಿಗೆ ಜೀಂವಕ ಜೀಂವ. ಖರೇನ ಜೀಂವ ಐತ್ಯೋನೋ ಅನೊ ಹಂಗ‌ ನೋಡ್ತಿದ್ದಳು. ಮೀಡಿಯ ಹೊಟ್ಟಿ ಮ್ಯಾಲ ಕೈ ಸವರಲಾಕ ಶುರು ಮಾಡಿದಳು. ತಲಿಗಿ ಎಣ್ಣಿ ಹಚ್ಚಿ ಮುಗಿಸಿದ್ದ ಗೌರವ್ವ ಕಲಿಸಿಟ್ಟಿದ್ದ ಅರಿಸಿನ ತಂದು ಮುಂದಿಟ್ಟಳು. ಅರಿಶಿನ ನೋಡ್ತಿದ್ದಂಗ ಪಾರಿಗೆ ಅಕಿ ಗೆಳತಿ ಕಾಡಸಿದ್ದ ನೀಲವ್ವ ನೆನಪಿಗೆ ಬಂದಳು. ಎದಿ ತುಂಬಿ ಬಂತು. ಗಂಟಲು ಬಿಗಿದಂಗ ಆಗಿ ನರಗೋಳು ಜಗ್ಗಾಕ ಹತ್ತಿದವು.

ಕಿವಿ ರುಮ್ಮ ಅಂತಿತ್ತು. ಕಣ್ಣ ನೀರಾಡಿದವು. ಕಾಡಸಿದ್ದ ನೀಲವ್ವ ಮೂರು ತಿಂಗಳ ಹಿಂದ ಮೈನೆರದಾಕಿ. ನೀಲವ್ವನ ಮನ್ಯಾಗ ಕಿರಾಣಿ ಅಂಗಡಿ ಇತ್ತು. ಅವರಪ್ಪ ನಡಿಸ್ತಿದ್ದ. ಅದಕ ಮಾಲ ತಂದ ಹಾಕುದಟ್ಟ ಅವನ ಕಾಯಕ. ಉಳದದ್ದೆಲ್ಲ ನೀಲವ್ವನ ದೇಖರೇಕಿನೇ. ಸಾಲಿಯಿಂದ ಮನಿಗಿ ಹೋದ ಮ್ಯಾಲ ನೀಲವ್ವಂದು ಗಲ್ಲೇದ ಮ್ಯಾಲ ಕುಂದುರುದೇ ಕೆಲಸ. ಲೆಕ್ಕದಾಗ ಖಂಡಾಪಟ್ಟಿ ಚುರುಕು.

ಅಂಗಡ್ಯಾಗಿನ ದಿನಸಿ ಲೆಕ್ಕಾ ಮಾಡಿ ಮಾಡಿನೇ ಅಷ್ಟು ಚುರುಕತನ ಬಂದಿತ್ತು. ಅಂಗಡಿಗಿ ಬಂದವರು ಮಾರಿ ಮ್ಯಾಲ ಮಾಡಿ ಕಣ್ಣಗುಡ್ಡಿ ಒಂದ ಮೂಲಗಿ ಸರಿಸಿ ತುಟಿಮ್ಯಾಲ ನಾಕಿಪ್ಪತ್ತು, ಅದ್ಯಾಡೈವತ್ತು, ಅದೊಂದು ಅಡಚನೂರು, ಇದೊಂದು ದೀಡನೂರು ಅಂತ ಮೆದುಳಿಗಿ ಜಿಗಿದು ಲೆಕ್ಕ ಮಾಡಿ ಇಕಿ ಕೂಡ ಬಂದ ನಿಲ್ಲುದಕ್ಕ ಅಕಿ ಒಂದು ಹಾಳ್ಯಾಗ ಸಟಸಟ್ ಲೆಕ್ಕಾ ಬರದು ಒಟ್ಟು ಮಾಡಿ ಅವರ ಸಾಮಾನೆಲ್ಲ ಕೈಚೀಲ ತುಂಬಿ ಮುಂದಿನ ಗಿರಾಕಿ ಕಡಿ ಮುಖ ಮಾಡರ‍್ತಿದ್ದಳು.

ಅಟ್ಟ ಹೋಶಿಯಾರ ಹುಡುಗಿ. ಒಂದೊಮ್ಮಿ ಪ್ರಕಾಶ ಅಕಿಗೂ ತನ್ನ ಚಿಗಪ್ಪನ ಕೂಡ ಭೆಟ್ಟಿ ಮಾಡಿಸಿದ್ದ. ಹತ್ತನೆತ್ತೆ ಮುಗದ ಮ್ಯಾಲ ಕಾರ‍್ಸ ಮಾಡಿದ್ರ ಲೆಕ್ಪತ್ರದ ನೋಕ್ರಿ ಮಾಡಬಹುದಂತ. ಕಾರ‍್ಸ್ ಮಾಡ್ತೀನಿ ಅಂದಿದ್ಳು. ಅವರಿಗೇನ ಕಡಿಮಿ‌ ಇತ್ತು.?  ರಾತ್ರೋರಾತ್ರಿ ತೆಲಗ್ಯಾನ ಹುಡುಗಗ ಪಸಂದ ಮಾಡಿ ಗಟ್ಟಿ ಮಾಡಿಯೇ ಬಿಟ್ರು. ಮೈನೆರದ ತಿಂಗಳ ತುಂಬುದರಾಗ ಮನಿ ಮುಂದ ಚಪ್ಪರ ಹಾಕಿ ಮದಿನೂ ಮಾಡಿದ್ರು.

ಸಾಲಿ ರ‍್ಧಕ್ಕ ಬಿಡಿಸಿ ಗಂಡನ ಮನಿಗಿ ಹಚಗೊಟ್ಟೇ ಬಿಟ್ರಲಾ ಅನ್ನೋದ ನೆನದು ಪಾರಿ ಮೆತ್ತಗಾದಳು. ಒಲಿಮ್ಯಾಲಿನ ಗಡಿಗ್ಯಾಗ ನೀರು ಕಾದು ಹೊಯ್ದಾಡಾಕ ಹತ್ತಿದ್ವು. ಪಾರಿ ಕೈಕಾಲಿಗೆ, ಮುಖಕ್ಕ ಅರಿಶಿನ ಸವರಿ ಒಂದಕಡಿ ಕುಂದರಿಸಿದ್ರು. ವಾರಾಗಿತ್ತ ನೆಲ ಸಾರಿಸಿ. ಸೆಗಣಿ ಬುಕುಣಿ ಒಣಗಿ ಹೆಕ್ಕಳಿ ಹೆಕ್ಕಳಿ ಮ್ಯಾಲ ಬಂದು ನೆಲದ ಕೂಡ ನಂಟು ಸಡಲ ಮಾಡಕೊಂಡಿದ್ದವು. ಅದನ ನೋಡ್ಕೋಂತ ತನ್ನ ಉಗುರಿಲೆ ಹೆಬ್ಬಾಕ ಹತ್ತಿದ್ಳು.

ಗೌರವ್ವ ಮಸಿ ಅರಿಬಿ ಹಿಡದು ಗಡಿಗಿ ಎತ್ತಿ ಬಚ್ಚಲ ಕಲ್ಲಿನ ಹಂತೇಕ ಇಟ್ಟಳು. ಪಡಸಾಲ್ಯಾಗ ತುಂಬಿಟ್ಟಿದ್ದ ಪ್ಲಾಸ್ಟಿಕ್ ಕೊಡ ಎತ್ತಿ ಹಿಡಿದು ದುಡುದುಡು ಬಚ್ಚಲ ಹಂತ್ಯೇಕ ತಂದು ಒಂದೀಸ ನೀರು ಬಾಗಿಸಿ ಬೆರಕಿ ಮಾಡಿದಳು. ಗೂಟಕ್ಕ ತೂಗ ಹಾಕಿದ್ದ ಲ್ಯಾವಿ ಗಂಟಿಗಿ ಕೈ ಹಾಕಿ ಬಿಚ್ಚಿದಳು. ಹಳೀssದು ಮೆತ್ತsನ ಪಡಕಿ ಹಿರದ ತಗದಳು. ಒತಾಟಿ ನೋಡಕೊಂತ ಬಂದಾಗ ನಟ್ಟಾ ನಡಬರಕಿನ ಕುಂಡಿ ಪದರು ಪಿಸಿಗಿತ್ತು.

ಗಟ್ಟಿ ಇದ್ದದ್ದ ಪಡಕಿ ಖಾತ್ರಿ ಮಾಡ್ಕೊಂಡ ಚಚ್ಚೌಕಗ ಹರದು ಐದಾರು ಮಡಕಿ ಸುತ್ತಿ ಎರಕೋಳಾನ ಹೆಂಗ ವಾಪರಸೋದು ಅಂತ ಹೇಳಿದಳು. ತಿಂಗಳದಾಗೊಮ್ಮಿ ಅವ್ವ ದೇಖಬಾಲಕಿ ಮಾಡಕೊಳೋದು ಪಾರಿ ನೋಡಿ ಕಂಡsss ಇದ್ದಳು.. ಹೂಂ ಅಂತಷ್ಟss ಗೋನ ಅಳಗ್ಯಾಡಿಸಿದಳು. ‘ಏ ರೇಣಕ್ಕಾ… ಬಾರಬೇ ನಾ ಇನss ಅಡಿಗಿ ಮಾಡಬೇಕು…ಹೊತ್ತಾತು’ ಅಂತ ಗೌರವ್ವ ಬಾಜೂ ಮನಿ ಹೆಂಗಸಿಗಿ ಕೂಗು  ಹಾಕಿದಳು.

‘ಪಾರಕ್ಕ ದೊಡ್ಡದಾಗೇ ಬಿಟ್ಟಳಲೇ ತಂಗಿ. ಇನ್ನ ಕೆಂಡ ಉಡ್ಯಾಗ ಇಟ್ಗೊಂಡಂಗ ಯವ್ವಾ.. ಹ್ವಾದೊರಸ ಒಂದ ವರಾ ಬಂದಿತಲಾ. ಇಜಾಪೂರದಂವ. ಪಾರಕ್ಕನ ಕುಡ್ರಿ ಅಂತ ಕೇಳಿದ್ರಲಾ. ಹಾದಿಮನಿ ಮಾಳಪ್ಪನ ಪೈಕಿ. ಆ ಹುಡುಗ ಭೇಷಿಲ್ಲ? ಅನ್ಕೋಂತ ರೇಣವ್ವಾ ಚೆರಿಗಿ ನೀರು ತುಂಬಿ ಹುಷ್ ಹುಷ್ ಹುಷ್ ಅಂತ ಸುಡು ಸುಡು‌ನೀರು ತಲಿಮ್ಯಾಲ ಹನಿಸಾಕ ಹತ್ತಿದ್ಳು. ಪಾರಿ ಗುಂಗ ಮೀಡ್ಯಾಗ  ಸುಳದಾಡ್ತಿತ್ತು.

ನೆತ್ತಿಮ್ಯಾಲ ಹೊಯ್ದಾಡೊ ನೀರ ಹನಿಸೊ ಕಡತಕ್ಕ ಉಸಲ ತುಗೋಳಾಕ ಸೆಣಸಾಟ ಸುರು ಆತು. ‘ಯಾರದಿರಿ ಒಳಗ..?’ ಅನ್ನುತ್ತ ಅಗಸರ ಅಕ್ಕವ್ವ ಬಾಗಲ ಸಂದ್ಯಾಗ ಕಾಲಾನ ಬಿಟ್ಟು ಪಡಸಾಲಿ ಏರಿ ಬಂದಳು. ‘ಏ ಕುಂದುರೇ ಅಕ್ಕವ್ವಾ…’ ಹುಡುಗಿಗಿ ನೀರ ಹಾಕಾಕ ಹತ್ತೀವಿ..’ ಗೌರವ್ವ ಅಂದಳು. ಪಾರಿ ಮೈ ಗಟ್ಟಿ ಹಿಡದು ಅಲ್ಲಾಡದ ಕುಂತಿದ್ಳು. ಕೈ ಮುಟಗಿ ಆಗಿತ್ತು. ಮುಟಗ್ಯಾಗ ಮೀಡಿ ಒತ್ತಿ ಹಿಡದಿದ್ಳು. ನೀರು ಹನಿದೇ ಹನೀತಿತ್ತು…

‍ಲೇಖಕರು Avadhi

October 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    ಸೊಗಸಾದ ಕತೆ. ತಟ್ಟಿ, ಕೆಲಹೊತ್ತು ನಿಲ್ಲಿಸುವ ಕತೆ. ಎಷ್ಟು ಚೆಂದದ ಭಾಷೆಯಿದೆ ಇಲ್ಲಿ. ಧನ್ಯವಾದಗಳು ರುಕ್ಮಿಣಿಯವರೆ.

    ಪ್ರತಿಕ್ರಿಯೆ
  2. D.M.Nadaf

    ———————————————–
    ಘನವಾದ ಭಾಷೆಯಿಂದ ಮನಸೆಳೆಯುವ ಕಥೆ; “ಬಿಕ್ಕುಗಳು”
    ———————————————–
    “ಸೆಗಣಿ ಒಣಗಿ ಹೆಕ್ಕಳಿ ಹೆಕ್ಕಳಿ ಮ್ಯಾಲ ಬಂದು ನೆಲದ ಕೂಡ ನಂಟ ಸಡಲ ಮಾಡಿಕೊಂಡಿದ್ದವು” ಎನ್ನುವ ಕಾವ್ಯಮಯ ಸಾಲಿನಿಂದ ಸೆಳೆಯುವ ಕಥೆ ಬಿಕ್ಕುಗಳು. ಓದುಗರನ್ನು ಕಿಶೋರಿಯೊಬ್ಬಳ ಭಾವನಾ ಸರೋವರದ ಆಳದಲ್ಲಿ ಅದ್ದಿ ತೆಗೆದು; ಸಾಲದ್ದಕ್ಕೆ ಸರೋವರದಲ್ಲಿ ಯೇ ಈಜಾಡುವ ನ್ತೆ ಮಾಡುತ್ತದೆ ಈ ಕತೆ.
    ಪಾರಿ “ದೊಡ್ಡವ”ಳಾಗುವ ಘಟನೆ ಅವಳಿಗೆ ಶಾರೀರಿಕವಾಗಿ ಸಣ್ಣ ಕಿರಿಕಿರಿ. ಆದರೆ ಮಾನಸಿಕ ವಾಗಿ ದುಮ್ಮಾನ, ದುಗುಡ, ಭವಿಷ್ಯದ ಕನಸುಗಳಿಗೆ ಕಲ್ಲು ಬೀಳಬಹುದೆಂಬ ದೊಡ್ಡ ಆತಂಕವನ್ನು ಉಂಟುಮಾಡುತ್ತದೆ. ಅದರಲ್ಲೂ ತಾನು ಆಗಬೇಕೆಂದಿದ್ದ “ಮನಗೂಳಿ ಅಕ್ಕೋರಂಗ” ಆದರ್ಶ ಶಿಕ್ಷಕಿಯಾಗುವ ಕನಸು ಚೂರು ಚೂರಾಗುವ ಎಲ್ಲ ಲಕ್ಷಣಗಳನ್ನು ಕಂಡು ಬಿಕ್ಕುತ್ತಾಳೆ.
    ಈ ಕನಸು ನುಚ್ಚು ನೂರಾಗುವ ಸುಳಿವು ಆವಳ ಗೆಳತಿ ಕಾಡಸಿದ್ಧ ನೀಲವ್ವಳಿಗೆ ಆಗಿರುವುದನ್ನು ಕಣ್ಣಾರೆ ಕಂಡಾಗಲೇ ಸಿಕ್ಕಿರುತ್ತದೆ. ಆದರೆ ಅವಲು ಅಂದು ಕೊಂಡಿರದ ಈ “ದೊಡ್ಡಾಕಿ” ಯಾಗುವ ಘಟನೆ ಹೀಗೆ ಒಮ್ಮೆಲೇ ಬಂದು ಸಿಡಿಲಿನಂತೆ ಎರಗುವ ನಿರೀಕ್ಷೆಯನ್ನು ಪಾರಿ ಎಂದು ಮಾಡಿರಲಿಲ್ಲ. ಮತ್ತು ಕಾಡಸಿದ್ದ ನೀಲವ್ವ ಳಿಗೆ ಆದ “ಮದುವೆ” ಸರದಿ ಈಗ ತನಗೆ ಬಂತು ಎಂದು ತನ್ನ ಅವ್ವ ಮತ್ತು ಬಾಜು ಮನೆಯ ರೇಣವ್ವ ಅವರ ಸಂಭಾಷಣೆಯಿಂದಲೇ ತಿಳಿದು ಕೊಳ್ಳುತ್ತಾಳೆ.
    ಕಾಡಸಿದ್ಧ ನೀಲವ್ವಳ ಗಣಿತ ಪ್ರತಿಭೆ ಅವಳ ಮದುವೆಯ ನಂತರ ಶಿಕ್ಷಣ ಅರ್ಧಕ್ಕೆ ನಿಂತು ಹೋಗಿ ಮಣ್ಣು ಪಾಲಾಗಿತ್ತು. ಅವಳಂತೆಯೇ ತನ್ನ” ಅಕ್ಕೋರು” ಆಗುವ ಕನಸು ಕೂಡ ನುಚ್ಚು ನೂರಾಗಲಿದೆ ಎಂದು ಅವರ ಸಂಭಾಷಣೆಯ ಪರಿಯಿನ್ದ ಪಾರಿ ತಿಳಿದುಕೊಂಡಿದ್ದಳು.
    ಅವಳು ಮೈ ನೆರೆದಾಗ ತೊಟ್ಟುಕೊಂಡಿದ್ದ ಮಿಡಿಗೆ ಸದ್ಯ ಅಗಸರ ಅಕ್ಕವ್ವ ನಿಂದ ಆಗಬಹುದಾದ ಅನಾಹುತಗಳು ಮುಂದೆ ಬಾಳಿನಲ್ಲಿ ತನಗೂ ಕಾದಿವೆ ಅನಿಸುತ್ತದೆ. ಪಾರಿ ದೇವರನ್ನು ಶಪಿಸುವ ಬೈಗುಳಗಳು ಬಾಯಿಂದ ಹೊರಡದೆ ಅವುಡುಗಚ್ಚಿ ನೆಟಿಕೆ ಮರೆಯುವುದರಲ್ಲಿ ಅವಸಾನ ವಾಗುತ್ತವೆ.
    “ಕಿಶೋರಿಯೊಬ್ಬಳು ತಾರುಣ್ಯಕ್ಕೆ ದಾಟುವ ಸಂದರ್ಭದ ಈ ದೈಹಿಕ ಪಕ್ವತೆಯ ಅವಸ್ಥೆ ಪ್ರತಿ ಮಹಿಳೆಯೂ ಜೀವನವಿಡಿ ಎಂದು ಮರೆಯದ ಘಟನೆ. ಆದರೆ ಭಾರತೀಯ ಸಮಾಜದಲ್ಲಿ ದೇಹ ಹದಗೊಳ್ಳುವ ಕ್ರಿಯೆಯನ್ನು ಅಮಂಗಳ ಎನ್ನುವ ಕಂದಾಚಾರದ ಭಾವನೆ ಇಂದಿಗೂ ನಶಿಸಿಲ್ಲ.” ಎನ್ನುವ ಸಂದೇಶ ಕೊಡ ಬಯಸುವ ಕಥೆ ಚೇತೋಹಾರಿ ನಿರೂಪನೆಯಿಂ ದಾಗಿ ಬಿಡದೇ ಓದಿಸಿಕೊಂಡು ಹೋಗುತ್ತದೆ.
    ” ಸಣ್ಣ ಕಥೆ ಎಂದರೆ ಕ್ಷಣಾರ್ಧದಲ್ಲಿ ನಿರ್ಮಿಸಿದ ತಾಜಮಹಲ್” ಎನ್ನುವ ವ್ಯಾಖ್ಯಾನ ಇದೆ. ಈ ರೀತಿಯ ಮಿಂಚಿನಂತಹ ತಿರುವುಗಳು ಕಥೆಯಲ್ಲಿ ಕಾಣದಿದ್ದರೂ ನಿರೂಪಣೆಯ ತಾಜಾತನ ಮತ್ತು ಓದಿನ ಓಘಕ್ಕೆ ಧಾರವಾಡದ ಆಡುಭಾಷೆಯ ನುಡಿಗಟ್ಟುಗಳು ತೀವ್ರತೆಯನ್ನು ಒದಗಿಸುತ್ತವೆ. ಇಂತಹ ವರ್ಣನೆಯನ್ನು ಕಥೆಯಲ್ಲಿ ಪಾರಿ ತನ್ನ ಮಿಡಿಯನ್ನು ವರ್ಣಿಸುವ ಸಾಲುಗಳಲ್ಲಿ ಕಾಣಬಹುದು. ಕಾಡಸಿದ್ದ ನೀಲವ್ವ ರೊಕ್ಕ ಎಣಿಸಿ, ಲೆಕ್ಕ ಹೇಳಿ, ಬರೆದಿಡುವ ಜಾಣತನದ ವರ್ಣನೆಯಲ್ಲಿಯು ನೋಡಬಹುದು.
    ಕಥೆಯ ಕೇಂದ್ರವಾದ ಪಾರಿಯ ಪಾತ್ರ ಕೊನೆಯವರೆಗೂ ಬೆಳೆಯುತ್ತಲೇ ಇಡೀ ಕಥೆಯನ್ನು ಆವರಿಸಿಕೊಳ್ಳುತ್ತದೆ. ಕೊನೆಗೂ ಪಾರಿ ಮನದಲ್ಲಿ ತನ್ನ ಶಿಕ್ಷಣ ಕೊನೆಯಾಗುವದು ನಿಶ್ಚಿತ ಎಂದು ಮನದಲ್ಲಿ ಅಂದು ಕೊಳ್ಳುತ್ತಾಳೆ.
    ಡಿ.ಎಂ. ನದಾಫ
    ಅಫಜಲಪೂರ

    ಪ್ರತಿಕ್ರಿಯೆ
  3. Rukmini Nagannavar

    ಧನ್ಯವಾದಗಳು ಸರ್… ನಿಮ್ಮ‌ ಪ್ರತಿಕ್ರಿಯೆ ಬಹಳ ಸಂತೋಷ ಕೊಟ್ಟಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: