ಅಮೆರಿಕ – ಮಧುವನದ ಕಣಿವೆಯಲ್ಲಿ ಮದಿರೆಯ ಹೊಳೆ

(ನಿನ್ನೆಯಿಂದ)

7

ಮಧುವನದ ಕಣಿವೆಯಲ್ಲಿ ಮದಿರೆಯ ಹೊಳೆ

ಸ್ಯಾನ್‌ಫ್ರಾನ್ಸಿಸ್ಕೋದ ಉತ್ತರ ಭಾಗದಲ್ಲಿರುವ ನಾಪಾ ಕಣಿವೆ (ನಾಪಾ ವ್ಯಾಲಿ) ದ್ರಾಕ್ಷಿ ತೋಟಗಳು ಹಾಗೂ ದ್ರಾಕ್ಷಾರಸದ ತಯಾರಿಕೆಗೆ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಈ ಕಣಿವೆಯಲ್ಲಿ ಎತ್ತ ನೋಡಿದರೂ ದ್ರಾಕ್ಷಿಯ ತೋಟಗಳೇ.

1850ರಲ್ಲಿ ನಿರ್ಮಾಣವಾದ ಈ ಕೌಂಟಿ, ಅಮೆರಿಕದ ಮೂಲ ಕೌಂಟಿಗಳಲ್ಲಿ ಒಂದು. ಇಲ್ಲಿನ ಎತ್ತರದ ಶಿಖರ ಪ್ರದೇಶ 4200 ಅಡಿ. ಈ ಏರು, ತಗ್ಗುಗಳಲ್ಲಿ ಹರಡಿಕೊಂಡಿರುವ ದ್ರಾಕ್ಷಿಯ ತೋಟಗಳು ಇಡಿಯ ಪ್ರದೇಶಕ್ಕೆ ಹಸಿರು ಕಂಬಳಿಯನ್ನು ಹೊದಿಸಿ ಸಿಂಗಾರ ಮಾಡಿದೆ.

ಈ ಕಣಿವೆಯಲ್ಲಿ ಸುಮಾರು 550 ತಯಾರಿಕಾ ಘಟಕಗಳಿದ್ದು, ವಿಶ್ವದ ಅತಿ ದೊಡ್ಡ ದ್ರಾಕ್ಷಾರಸ ತಯಾರಿಕಾ ಪ್ರದೇಶವಾಗಿದೆ. ಈ ಕಣಿವೆಯನ್ನು ಪೂರಾ ಸಂದರ್ಶಿಸ ಬಯಸುವವರು, ಒಂದು ವೈಭವೋಪೇತ ಸ್ಥಳೀಯ ರೈಲು ಗಾಡಿಯಲ್ಲಿ ಕುಳಿತು 36 ಮೈಲು ಸಾಗುತ್ತಾ ಇಡಿಯ ಕಣಿವೆಯನ್ನು ನೋಡಬಹುದು. ಪ್ರಮುಖವಾದ ತಯಾರಿಕಾ ಘಟಕಗಳಲ್ಲಿ ಇಳಿದು ನೋಡಬಹುದು.

ಗೊಂಚಲುಗಳಿಂದ ತುಂಬಿದ ದ್ರಾಕ್ಷಿ ಗಿಡ

ದಾರಿಯುದ್ದಕ್ಕೂ ಪುಷ್ಕಳವಾದ ಭೋಜನ, ತಿಂಡಿ, ಅಲ್ಲಿನ ವಿಶೇಷವಾದ ಮದಿರೆ ಎಲ್ಲವನ್ನೂ ಯಾವುದೇ ಮಿತಿಯಿಲ್ಲದೆ ಸವಿಯಬಹುದು. ಅಂತೆಯೇ ಮೂರ‍್ನಾಲ್ಕು ಗಂಟೆಗಳ ಈ ಪಯಣದಲ್ಲಿ ಕಣಿವೆಯ ರಮಣೀಯ ಸೌಂದರ್ಯವನ್ನು ಮನಸಾರೆ ನೋಡಬಹುದು. ಇದಕ್ಕೆ ಮುಂಗಡವಾಗಿ ಕಾದಿರಿಸಿಕೊಂಡು ಹೋಗಬೇಕು.

ಈ ರೀತಿ ವಿವರವಾಗಿ ನೋಡುವ ಆಸಕ್ತಿ ಇಲ್ಲದವರು, ನಾವು ಮಾಡಿದ ಹಾಗೆ ತಮ್ಮ ಪಾಡಿಗೆ ತಮ್ಮ ವಾಹನದಲ್ಲೇ ದಾರಿಯುದ್ದಕ್ಕೂ ನೋಟವನ್ನು ಸವಿಯುತ್ತಾ ಯಾವುದಾದರೂ ತಮ್ಮಿಚ್ಛೆಯ ತಯಾರಿಕಾ ಘಟಕವನ್ನು ಸಂದರ್ಶಿಸಬಹುದು. ನಾವು ಹೀಗೆಯೇ ಒಂದು ಗಂಟೆ ಕಾಲ ಕಣಿವೆಯಲ್ಲಿ ಸುತ್ತಾಡುತ್ತಾ ‘ಕ್ಯಾಸ್ಟೆಲೊ ಡಿ ಅಮರೋಸ’ ಎನ್ನುವ ಒಂದು ಪುರಾತನ ಕೋಟೆಯ ಮಾದರಿಯ ಘಟಕದ ಒಳಹೊಕ್ಕೆವು.

ಇಲ್ಲಿ ಎರಡು ಅಂತಸ್ತಿನಲ್ಲಿ ಹಲವಾರು ಕೋಣೆಗಳಿದ್ದು, ಮಧ್ಯದಲ್ಲಿ ಆಕಾಶಕ್ಕೆ ತೆರೆದುಕೊಂಡಿರುವ ವಿಶಾಲವಾದ ಅಂಗಳವಿದೆ. ಒಂದೊಂದು ಕೋಣೆಯೂ ಒಂದೊಂದು ವಿಭಾಗಕ್ಕೆ ಮೀಸಲಾಗಿದೆ. ದೊಡ್ಡ ಊಟದ ಮನೆ ಮತ್ತು ಒಂದು ಪ್ರಾರ್ಥನಾ ಮಂದಿರ ಕೂಡಾ ಇದೆ. ಮೇಲಿನ ಅಂತಸ್ತಿಗೆ ಹೋದರೆ ಈ ಕೋಟೆಯ ಉತ್ತರ ಮತ್ತು ದಕ್ಷಿಣ ದಿಕ್ಕಿನ ಬುರುಜುಗಳು ಸಿಗುತ್ತವೆ.

ಈ ಬುರುಜನ್ನು ಹತ್ತಿ ನಿಂತು ಅಲ್ಲಿನ ಕಿಟಕಿಗಳಲ್ಲಿ ನಾಪಾ ಕಣಿವೆಯ ಸೌಂದರ್ಯವನ್ನು ಸವಿಯುವುದೇ ಒಂದು ಸುಂದರ ಅನುಭವ. ಇಡಿಯ ಕಟ್ಟಡವನ್ನು ಪುರಾತನ ಶೈಲಿಯಲ್ಲಿ ಉಳಿಸಿಕೊಂಡಿದ್ದು, ನಾವು ಒಂದು ದ್ರಾಕ್ಷಾರಸ ತಯಾರಿಕಾ ಕೇಂದ್ರಕ್ಕೆ ಬಂದಿರುವೆವೆಂಬ ಭಾವನೆಯನ್ನೀಯದೆ, ಯಾವುದೋ ರಾಜ ಮಹಾರಾಜರ ಕೋಟೆಯೊಳಹೊಕ್ಕ ಅನುಭವವನ್ನು ನೀಡುತ್ತದೆ.

ಕಲ್ಲಿನ ಕಟ್ಟಡ, ತೀಕ್ಷ್ಣವಲ್ಲದ ಮಂದವಾದ ದೀಪಗಳು, ಮರದ ಪಾವಟಿಗೆಗಳು, ಅಲ್ಲಲ್ಲಿ ಕಾಣಸಿಗುವ ಪುರಾತನ ವಸ್ತುಗಳು ಇವೆಲ್ಲವೂ ತನ್ನದೇ ಒಂದು ವಾತಾವರಣವನ್ನು ನಿರ್ಮಿಸುವುದರಲ್ಲಿ ಯಶಸ್ವಿಯಾಗಿವೆ.

ಪುರಾತನ ಕೋಟೆಯಂತಿರುವ ‘ಕ್ಯಾಸ್ಟೆಲೊ ಡಿ ಅಮರೋಸ’ ದ್ರಾಕ್ಷಾರಸ ತಯಾರಿಕಾ ಘಟಕ

ಎಲ್ಲ ಆಧುನಿಕ ಸೌಲಭ್ಯಗಳನ್ನೊಳಗೊಂಡು, ಪುರಾತನ ಚಿತ್ರವನ್ನು ಉಳಿಸಿಕೊಂಡಿರುವ ವಿಶೇಷತೆ ಈ ಕಟ್ಟಡದಲ್ಲಿದೆ. ಮೇಲೆ ಕೆಳಗೆ ಓಡಾಡಲು ಲಿಫ್ಟಿನ ಸೌಲಭ್ಯವಿದೆ. ಮೇಲೆಲ್ಲಾ ನೋಡಿಕೊಂಡು ನೆಲಮಾಳಿಗೆಗೆ ಇಳಿದರೆ, ಅಲ್ಲಿ ದ್ರಾಕ್ಷ್ಯಾರಸದ ರುಚಿನೋಡುವ ವಿಭಾಗವಿದೆ. ನೂರಾರು ಬಗೆಯ ಮದಿರೆಯಿದ್ದರೂ, ಒಬ್ಬ ವ್ಯಕ್ತಿ ಐದು ಬಗೆಯದನ್ನು ಮಾತ್ರ ಸವಿಯಬಹುದು.

ಮದಿರಾ ಪ್ರಿಯರಲ್ಲದವರು ದ್ರಾಕ್ಷಿಯ ಷರಬತ್ತನ್ನು ಸೇವಿಸಬಹುದು. ಈ ನೆಲಮಾಳಿಗೆಯನ್ನು ಅನೇಕ ಪುರಾತನ ವಸ್ತುಗಳಿಂದ ಸಜ್ಜುಗೊಳಿಸಿ, ನಾವು ಯಾವುದೋ ಕಾಲದಲ್ಲಿ ಪಯಣಿಸಿರುವಂತ ಅನುಭವವನ್ನು ಇದು ನೀಡುತ್ತದೆ. ಮದಿರೆಯಷ್ಟೇ ಅಲ್ಲದೆ, ದ್ರಾಕ್ಷಿಯ ಬೀಜದ ಎಣ್ಣೆ, ಮತ್ತಿತರ ಹಲವಾರು ಪೂರಕ ಉತ್ಪನ್ನಗಳೂ ಇಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ.

ಈ ತಾಣಕ್ಕೇ ಸೀಮಿತವಾದ ಕೆಲವು ವಿಶೇಷ ಉತ್ಪನ್ನಗಳು ಇಲ್ಲಿ ದೊರೆಯುತ್ತವೆ. ಇಡಿಯ ಕಟ್ಟಡವೇ ಮತ್ತೇರಿಸುವ ಮದಿರೆಯ ನರುಗಂಪಿನಿಂದ ಕೂಡಿದ್ದು ‘ವೈನ್ ಪ್ರಿಯರ ಸ್ವರ್ಗ ಸಮಾನವಾದ ಜಾಗ’ ಇದಾಗಿದೆ. ನನ್ನಂತವರಿಗೆ ಅವರ ಸ್ವರ್ಗವನ್ನು ನೋಡುವ ಭಾಗ್ಯವಿದೆ!.

ದ್ರಾಕ್ಷಾರಸವನ್ನು ಸವಿಯುವ ತಾಣ

ನಾಪಾ ನಗರದಿಂದ ಸ್ಯಾನ್‌ಫ್ರಾನ್ಸಿಸ್ಕೋದ ಗೋಲ್ಡನ್ ಬ್ರಿಡ್ಜ್‌ವರೆಗೆ ಬಲೂನು ಪ್ರಯಾಣವನ್ನು ಮಾಡುವಂತ ಒಂದು ಸಾಹಸ ಮನರಂಜನಾ ಕ್ರೀಡೆ ಇಲ್ಲಿದೆ. ಈ ಸಾಹಸದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಬೆಳಗಿನ ಜಾವ ಐದು ಗಂಟೆಗೇ ಇಲ್ಲಿ ಹಾಜರಿರಬೇಕು. ದರಕ್ಕೆ ತಕ್ಕಂತೆ ಇಬ್ಬರೇ ಪಯಣಿಸಬಹುದಾದ, ಒಂದು ಗುಂಪಲ್ಲಿ ಪಯಣಿಸಬಹುದಾದ ಹಾಗೂ ಎಲ್ಲರೊಂದಿಗೆ ಪಯಣಿಸಬಹುದಾದ ಸೌಲಭ್ಯಗಳಿವೆ. ಸಾಹಸ ಪ್ರಿಯರೂ, ಆರ್ಥಿಕ ಸಂಪನ್ನರೂ ಎರಡು ಗಂಟೆ ಗಗನಯಾತ್ರಿಗಳಾಗಿ ಈ ಆನಂದವನ್ನು ಪಡೆಯಬಹುದು.

ವೈನ್ ತಯಾರಿಕೆಗೆ ಪೂರಕವಾಗಿ ಇಲ್ಲಿ ಅಡುಗೆ ತರಬೇತಿ ಕೇಂದ್ರಗಳೂ ಇವೆ. ಯಾವ ವೈನ್ ಜೊತೆ ಯಾವ ಪ್ರಕಾರದ ಆಹಾರ ಹೊಂದುತ್ತದೆ; ಅದರ ತಯಾರಿಕಾ ವಿಧಾನವೇನು; ಎಲ್ಲದರ ಬಗ್ಗೆ ಇಲ್ಲಿ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ ಎಂಬುದರ ಬಗ್ಗೆ ಕೇಳಿ ತಿಳಿದೆ. ವಿಶ್ವದಾದ್ಯಂತ ಹಲವು ಜನರ ನೆಚ್ಚಿನ ಪಾನಿಯದ ಬಗ್ಗೆ ಸಂಪೂರ್ಣ ವಿವರಗಳನ್ನು ಅದರ ಮೂಲ ಸ್ಥಳಕ್ಕೇ ಹೋಗಿ ನೋಡುವಂತಹ ಅವಕಾಶ ನಮಗೆ ದೊರಕಿತ್ತು.

ಇಲ್ಲಿನ ದ್ರಾಕ್ಷಿ ಗಿಡಗಳು ನಮ್ಮಲ್ಲಿನಂತೆ ಬಳ್ಳಿಗಳಾಗಿ ಕಲ್ಲುಕಂಬದ ಚಪ್ಪರಕ್ಕೆ ಹಬ್ಬಿಕೊಂಡಿರುವುದಿಲ್ಲ. ಗಿಡಗಳಾಗೇ ಉಳಿದಿರುತ್ತವೆ. ದಟ್ಟ ಪೊದೆಯಂತಿರುವ ಈ ಗಿಡಗಳಲ್ಲಿ ದ್ರಾಕ್ಷಿಯ ಗೊಂಚಲುಗಳು ಗಿಡದೆಲ್ಲೆಡೆಯಲ್ಲೂ ಕಾಣ ಸಿಗುತ್ತವೆ. ನಾವು ಹೋಗಿದ್ದು ಹಣ್ಣಿನ ಕಾಲವಲ್ಲ.  ಹಾಗಾಗಿ ಕಾಯಿಯ ಗೊಂಚಲುಗಳನ್ನೇ ಎಲ್ಲೆಡೆ ಕಂಡೆವು. ಏನೋ ಹೊಸದೊಂದನ್ನು ನೋಡಿದ, ಯಾವುದೋ ಕಾಲಮಾನದಲ್ಲಿ ಒಂದಷ್ಟು ಕಾಲ ಸಂಚರಿಸಿದ ಅನುಭವವನ್ನು ತುಂಬಿಕೊಂಡು ಅಲ್ಲಿಂದ ಹೊರಟು ನಮ್ಮ ಜಾಗವನ್ನು ಸೇರಿಕೊಂಡೆವು.

ಎರಡು ರಾಜ್ಯಗಳ ನಡುವೆ ಹಂಚಿಹೋದ ಕ್ಯಾನ್ಸಸ್ ನಗರ

ಅಮೆರಿಕದ ಚರಿತ್ರೆಯ ಒಂದು ಭಾಗವಾಗಿರುವ ಕ್ಯಾನ್ಸಸ್ ಪಟ್ಟಣ ಹೆಚ್ಚು ಕಡಿಮೆ ದೇಶದ ಮಧ್ಯಭಾಗದಲ್ಲಿದೆ. ಡಲ್ಲಾಸ್, ಟೆಕ್ಸಾಸ್, ಪಿಟ್ಸ್ಬರ್ಗ್, ಚಿಕಾಗೋ, ಡೆನ್‌ವರ್, ಸೇಂಟ್ ಲೂಯಿಸ್, ಒಮಾಹ, ಮಿನ್ನೆಯಾ ಪೊಲೀಸ್, ಸೇಂಟ್ ಪಾಲ್, ಒಕ್ಲಹಾಮ, ಸಿಯಾಟಲ್ ಮುಂತಾದ ಮುಖ್ಯ ನಗರಗಳಿಂದ ಸುಮಾರು ಎಂಟು ಗಂಟೆ ದೂರದಲ್ಲಿದೆ.

ಈ ಪಟ್ಟಣದಲ್ಲಿ ಹರಿಯುವ ಮಿಸೋರಿ ನದಿ ಪಟ್ಟಣವನ್ನು ಕ್ಯಾನ್ಸಸ್ ಮತ್ತು ಮಿಸೋರಿ ರಾಜ್ಯಗಳ ನಡುವೆ ಹಂಚಿದೆ. ಪಟ್ಟಣದಲ್ಲಿ ಸಂಚರಿಸುವಾಗ ಕೆಲವು ಭಾಗ ಕ್ಯಾನ್ಸಸ್ ರಾಜ್ಯದಲ್ಲಿದ್ದರೆ, ಕೆಲವು ಭಾಗ ಮಿಸೋರಿ ರಾಜ್ಯದಲ್ಲಿರುವುದು ಇಲ್ಲಿನ ಒಂದು ವಿಶೇಷ. ಇದು ಸಮುದ್ರ ತೀರದಿಂದ ದೂರದಲ್ಲಿರುವ ಹೆಚ್ಚಾಗಿ ಸಮತಟ್ಟಾಗಿರುವ ಭೂಭಾಗ.

ಪೂರ್ವ ಮತ್ತು ಪಶ್ಚಿಮ ಎರಡೂ ದಿಕ್ಕುಗಳಿಂದ ಬೀಸುವ ವಿರುದ್ಧ ದಿಕ್ಕಿನ ಬಿರುಸಾದ ಗಾಳಿಯಿಂದಾಗಿ ಇಲ್ಲಿ ಸುಂಟರಗಾಳಿಯೇಳುವುದು ಸಾಮಾನ್ಯವಾದ ವಿಚಾರ. ಅತಿ ಬಿಸಿಲು ಮತ್ತು ಚಳಿಯಿಂದಾಗಿ ಇದು ಸ್ವಲ್ಪ ಮಟ್ಟಿಗೆ ವಿರಳವಾದ ಜನಸಂಖ್ಯೆಯಿರುವ ಪಟ್ಟಣವೆಂದೇ ಹೇಳಬಹುದು. ಅಮೆರಿಕದ ಚರಿತ್ರೆಯಲ್ಲಿ ದಾಖಲಾಗಿರುವ ಪಟ್ಟಣಗಳಲ್ಲಿ ಇದೂ ಒಂದು.

ಸಂಜೆಗತ್ತಲಲ್ಲಿ ಯೂನಿಯನ್ ಸ್ಟೇಷನ್‌ನಿಂದ ಕಾಣುವ ಸ್ಮಾರಕ ಶಿಲೆ

ಒಂದನೇ ವಿಶ್ವ ಮಹಾಯುದ್ಧದ ಕಾಲದಲ್ಲಿ, ಈ ಪಟ್ಟಣದಲ್ಲಿ ಹಲವು ಯುದ್ಧ ಚಟುವಟಿಕೆಗಳು ನಡೆದಿದ್ದ ಹಿನ್ನೆಲೆಯಲ್ಲಿ ಈ ನಗರವು ದೇಶದ ಮಧ್ಯ ಭಾಗದಲಿದ್ದು ಹೆಚ್ಚಾಗಿ ಸಮತಟ್ಟಾದ ಪ್ರದೇಶವಾಗಿದ್ದರಿಂದ ಭೂ ಸಂಚಾರಕ್ಕೆ ಹಾಗೂ ರೈಲು ಸಂಚಾರಕ್ಕೆ ಪ್ರಶಸ್ತವಾಗಿದ್ದು, ಆ ಸಮಯದಲ್ಲಿ ಸರಕು ಹಾಗೂ ಸೈನ್ಯದ ಸಾಗಾಣಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದೆ.

ಈ ಒಂದನೇ ವಿಶ್ವ ಮಹಾಯುದ್ಧದ ಜ್ಞಾಪಕಾರ್ಥವಾಗಿ ಈ ನಗರದಲ್ಲಿ 218 ಅಡಿ ಎತ್ತರದ ಒಂದು ಏಕಶಿಲಾ ಕಂಬದ ಸ್ಮಾರಕವನ್ನು 1920ರಲ್ಲಿ ನಿರ್ಮಿಸಿದ್ದಾರೆ. ನೆಲದಿಂದ 50 ಅಡಿ ಮೇಲಿದ್ದು ಮೆಟ್ಟಿಲುಗಳ ಮೇಲೆ ಸಾಗಿ ಈ ಕಂಬವನ್ನು ನೋಡಬಹುದು. ತಳಭಾಗದಲ್ಲಿ 36 ಅಡಿ ಸುತ್ತಳತೆಯಿರುವ ಕಂಬದ ಮೇಲೆ ಮೇಲೆ ಹೋಗುತ್ತಾ ಕಿರಿದಾಗುತ್ತಾ ತುದಿಯ ಭಾಗದಲ್ಲಿ 28 ಅಡಿ ಸುತ್ತಳತೆಯಿದೆ. ಒಳಗಡೆಯಿಂದ ಹತ್ತಲು 45 ಮೆಟ್ಟಿಲುಗಳ ಸರಣಿಗಳಿದ್ದು, ತುತ್ತ ತುದಿ ತಲುಪಿ ಅಲ್ಲಿಂದ ವಿಹಂಗಮ ದೃಷ್ಟಿ ಬೀರಿದರೆ, ಕಾಣುವ ಕ್ಯಾನ್ಸಸ್ ನಗರದ ನೋಟ ಅತ್ಯದ್ಭುತ ಎಂದು ಬಣ್ಣಿಸುತ್ತಾರೆ.

ನಮಗೆ ಈ ರೀತಿ ನೋಡುವ ಅವಕಾಶವಾಗಲಿಲ್ಲ. ಗೋಪುರದ ಮೇಲುಭಾಗದಲ್ಲಿ ನಾಲ್ಕು ಮೂಲೆಗಳಲ್ಲೂ ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಶಾಂತಿಯನ್ನು ಕಾಯುವ, ಗೌರವ, ಶೌರ್ಯ, ರಾಷ್ಟ್ರ ಭಕ್ತಿ ಮತ್ತು ತ್ಯಾಗದ ಸಂಕೇತವಾಗಿ 40 ಅಡಿ ಎತ್ತರದ ಕಾವಲು ದೇವತೆಗಳನ್ನು ಕೆತ್ತಿದ್ದಾರೆ. ಈ ಸ್ಮಾರಕದ ಮುಂಭಾಗದಲ್ಲಿ ಪೂರ್ವಕ್ಕೂ ಮತ್ತು ಪಶ್ಚಿಮಕ್ಕೂ ಮುಖ ಮಾಡಿಕೊಂಡಿರುವ ‘ಅಸಿರಿಯನ್ ಸ್ಪಿಂಕ್ಸ್’ ಎನ್ನುವ ಹೆಸರಿನ ಎರಡು ಮುಖ ಮುಚ್ಚಿಕೊಂಡಿರುವ ಸಿಂಹಗಳ ಎದೆಯಳತೆಯ ಮೂರ್ತಿಗಳನ್ನು ಕೆತ್ತಿದ್ದಾರೆ.

ಈ ಸಿಂಹಗಳು ಮುಖವನ್ನು ಏಕೆ ಮುಚ್ಚಿಕೊಂಡಿವೆ?! ಪೂರ್ವಕ್ಕೆ ಮುಖ ಮಾಡಿರುವ ‘ಮೆಮೊರಿ’ (ಜ್ಞಾಪಕ) ಎನ್ನುವ ಸಿಂಹವು ಫ್ರಾನ್ಸಿನ ಯುದ್ಧರಂಗದ ಕಡೆ ಮುಖಮಾಡಿ, ಆ ಯುದ್ಧದ ಭೀಕರತೆಗೆ ಹೆದರಿ ಮುಖ ಮುಚ್ಚಿಕೊಂಡಿದೆ. ಪಶ್ಚಿಮದ ಕಡೆ ಮುಖ ಮಾಡಿರುವ ‘ಫ್ಯೂಚರ್’ (ಭವಿಷ್ಯ) ಎನ್ನುವ ಸಿಂಹವು ಅನಿಶ್ಚಿತವಾದ ಭವಿಷ್ಯಕ್ಕೆ ಬೆದರಿ ಮುಖ ಮುಚ್ಚಿಕೊಂಡಿದೆ.

ಯುದ್ಧವು ಮನುಷ್ಯನ ಸುಖವನ್ನು ನಾಶಮಾಡುವ, ಗೆದ್ದ ಮೇಲೂ ಸುಖವನ್ನು ನೀಡದ ಒಂದು ಭೀಕರವಾದ, ಅಸಹ್ಯಕರ ಮನುಷ್ಯ ಸೃಷ್ಟಿ ಎನ್ನುವುದು ಮಾನವನಿಗೆ ಅರಿವಾಗಿದೆಯೋ ಇಲ್ಲವೋ, ಉದರಂಭರಣಕ್ಕಾಗಿ ಹೋರಾಟ ಅನಿವಾರ್ಯವಾದ ಈ ಪ್ರಾಣಿಗಳಿಗೆ ಅರ್ಥವಾಗಿರುವುದು ಪರಿಸ್ಥಿತಿಯ ವ್ಯಂಗ್ಯಕ್ಕೆ ಕನ್ನಡಿಯಾಗಿದೆ!.

ಈ ಸ್ಮಾರಕ ಶಿಲೆಯ ಪೂರ್ವ ಭಾಗದಲ್ಲಿ ಸ್ಮಾರಕ ಭವನವಿದ್ದು, ಇಲ್ಲಿ ಯುದ್ಧದ ಚಿತ್ರಣವನ್ನು ನೀಡುವ ಚಿತ್ರಗಳು ಹಾಗೂ ಯುದ್ಧದಲ್ಲಿ ಮಡಿದ 440 ಕ್ಯಾನ್ಸಸ್ ಯೋಧರ ಕಂಚಿನ ಪದಕಗಳನ್ನು ಇಡಲಾಗಿದೆ. ಪಶ್ಚಿಮ ಭಾಗದಲ್ಲಿ ಒಂದು ಸ್ಮಾರಕ ಪ್ರದರ್ಶನ ಕಟ್ಟಡವಿದ್ದು, ಇಲ್ಲಿ ಯುದ್ದಕ್ಕೆ ಸಂಬಂಧ ಪಟ್ಟ ಪ್ರತಿಮೆಗಳು, ಪಾಲ್ಗೊಂಡಿದ್ದ ದೇಶಗಳ ಬಾವುಟಗಳು ಮುಂತಾದವು ಇವೆ.

ಈ ಎರಡೂ ಕಟ್ಟಡಗಳ ಮುಂದೆ ಮೊಸಾಯಿಕ್ ನೆಲವಿದ್ದು ಅವುಗಳಲ್ಲಿ ಕಾಣುವ ಚಿನ್ನದ ಬಣ್ಣದ ಕುರುಹುಗಳನ್ನು ಆಕಾಶದಲ್ಲಿ ಕಾಣುವ ತಾರೆಗಳೆಂದೂ, ಅವು ಮಹಾಯುದ್ಧದಲ್ಲಿ ಮಡಿದ ಯೋಧರ ವೀರಮಾತೆಯರ ನೆನಪೆಂದೂ ಬಣ್ಣಿಸುತ್ತಾರೆ. ಸ್ಮಾರಕದ ಹಿಂದಿನ ಭಾಗವಾದ ಉತ್ತರ ಭಾಗದ 148 ಅಡಿ ಅಗಲ 18 ಅಡಿ ಎತ್ತರದ ಭಿತ್ತಿಯ ಮೇಲೆ ಯುದ್ಧದಿಂದ ಶಾಂತಿಯವರೆಗಿನ ಮಾನವನ ನಡಿಗೆಯನ್ನು ಬಿಂಬಿಸಲಾಗಿದೆ. ದಕ್ಷಿಣ ದಿಕ್ಕಿನ ಗೋಡೆ ಅಷ್ಟೇನೂ ಎತ್ತರವಿಲ್ಲದೆ ಇಲ್ಲಿಂದ ಹಿಂದೆ ಕಾಣುವ ಇಡೀ ನಗರದ ನೋಟವನ್ನು ಕಣ್ತುಂಬಿಕೊಳ್ಳಬಹುದು.

ಸ್ಮಾರಕ ಶಿಲೆಯ ಆವರಣದ ಹಿಂಬದಿಯಲ್ಲಿ ಕಾಣುತ್ತಿರುವ ಯೂನಿಯನ್ ಸ್ಟೇಷನ್ ಮತ್ತು ಕ್ಯಾನ್ಸಸ್ ನಗರ

ಇಲ್ಲಿಂದ ಕ್ಯಾನ್ಸಸ್‌ನ ಮತ್ತೊಂದು ಪ್ರಸಿದ್ಧ ಚಾರಿತ್ರಿಕ ಕಟ್ಟಡವಾದ ‘ಯೂನಿಯನ್ ಸ್ಟೇಷನ್’ ಕಾಣುತ್ತದೆ. ಸ್ಮಾರಕ ಕಂಬವನ್ನು ಇಳಿದು ಇಡೀ ಆವರಣವನ್ನು ಸುತ್ತುವರಿದು ಹಿಂಭಾಗಕ್ಕೆ ಬಂದರೆ 1878ರಲ್ಲಿ ನಿರ್ಮಿತವಾದ ಚರಿತ್ರೆಯ ಒಂದು ಭಾಗವಾದ ಈ ರೈಲ್ವೇಸ್ಟೇಷನ್ ಅನ್ನು ತಲುಪಬಹುದು.

ಈ ಮೊದಲೇ ಹೇಳಿದಂತೆ ಯುದ್ಧ ಕಾಲದಲ್ಲಿ ಸರಕು ಮತ್ತು ಸೈನಿಕರ ಸಾಕಣೆಯ ಕಾರ್ಯದಲ್ಲಿ ಈ ನಿಲ್ದಾಣ ಪ್ರಮುಖವಾದ ಪಾತ್ರ ವಹಿಸಿದೆ. ಆ ನಂತರವೂ ಪ್ರಯಾಣದ ಅವಶ್ಯಕತೆಗಾಗಿ ಈ ನಿಲ್ದಾಣ ಬಹುಕಾಲ ಉಪಯೋಗದಲ್ಲಿತ್ತು. 1950ರ ದಶಕದಲ್ಲಿ ವಿಮಾನಯಾನ ಹೆಚ್ಚಾದ ಹಿನ್ನೆಲೆಯಲ್ಲಿ ಇದರ ಪ್ರಾಮುಖ್ಯತೆ ಮಸಕಾಗುತ್ತಾ ಬಂದಿದೆ.

ಯುದ್ಧದ ಸಮಯದಲ್ಲಿ ದಿನಕ್ಕೆ ಗರಿಷ್ಟ 271 ಗಾಡಿಗಳಂತೆ 1,79,368 ಗಾಡಿಗಳು ಈ ಕಂಬಿಯ ಮೇಲೆ ಓಡಾಡಿದ್ದವು.  1973ರ ಹೊತ್ತಿಗೆ, ಒಂದು ವರ್ಷದ ಅವಧಿಯಲ್ಲಿ ಕೇವಲ 32,842 ಪ್ರಯಾಣಿಕರು ಈ ಮಾರ್ಗದಲ್ಲಿ ಪ್ರಯಾಣಿಸಿದ್ದು, ಒಂದು ದಿನಕ್ಕೆ ಕೇವಲ 6 ಗಾಡಿಗಳು ಓಡಾಡುತ್ತಿದ್ದವು.

ಇದು ಮೂಲ ಸ್ವರೂಪದಲ್ಲಿ 10 ಅಂತಸ್ತುಗಳ ಭವ್ಯ ಕಟ್ಟಡವಾಗಿದ್ದು, 90 ಕೋಣೆಗಳು, ಟಿಕೆಟ್ ನೀಡುವ ಹಲವು ಬೂತುಗಳು, ಭವ್ಯ ಹೊಟೆಲ್‌ಗಳು, ಅಂಗಡಿಗಳು, ಕಛೇರಿಗಳು, ಅಂಚೆ ಸಾಕಣೆ ವಿಭಾಗ ಎಲ್ಲದರಿಂದ ಕಂಗೊಳಿಸುತ್ತಿದ್ದು, ಇಂದು ಒಂದು ರಾಜನಿಲ್ಲದ ಅರಮನೆಯಲ್ಲಿ ನೋಡುಗರು ತಂತಮ್ಮ ಕಲ್ಪನೆಗಳನ್ನು ಕಾಣುತ್ತಾ, ವಿವಿಧ ಭಾಗಗಳನ್ನು ನೋಡಬಹುದಾಗಿದೆ. ನೂರಾರು ವರ್ಷ ಹಳೆಯದಾದ ದೀಪಾಲಂಕಾರಗಳು, ಗಡಿಯಾರಗಳು, ಪೀಠೋಪಕರಣಗಳು ತಮ್ಮಲ್ಲಿ ಅದೆಷ್ಟು ಕತೆಗಳನ್ನು ಬಚ್ಚಿಟ್ಟುಕೊಂಡಿವೆಯೋ!.

ವಿಶ್ವವಿದ್ಯಾಲಯ ನಗರಿ ವಿಚಿಟಾ

ಕ್ಯಾನ್ಸಸ್ ರಾಜ್ಯದ ಒಂದು ಅತಿ ಮುಖ್ಯ ಪಟ್ಟಣ ‘ವಿಚಿಟಾ’; ಕ್ಯಾನ್ಸಸ್ ನಗರದಿಂದ ಮೂರು ಗಂಟೆಯ ಪಯಣ ವಿಚಿಟಾಗೆ. ದಾರಿಯುದ್ದಕ್ಕೂ ಸೂರ್ಯಕಾಂತಿ, ಗೋಧಿ ಮತ್ತು ಮೆಕ್ಕೆ ಜೋಳಗಳನ್ನು ಬೆಳೆಯುವ ಹೊಲಗಳನ್ನು ದಾರಿಯ ಇಕ್ಕೆಲಗಳಲ್ಲೂ ನೋಡುತ್ತೇವೆ.

ಸೂರ್ಯಕಾಂತಿ ಹೂವರಳುವ ಕಾಲದಲ್ಲಿ ನೂರಾರು ಎಕರೆ ಹಳದಿ ಹೂಗಳು ಇಕ್ಕೆಲಗಳಲ್ಲೂ ಅರಳಿರುವ ದೃಶ್ಯ ನಿಜಕ್ಕೂ ನೋಡುವಂಥದ್ದು! ಮುಖ್ಯವಾಗಿ ಇಲ್ಲಿ ವ್ಯವಸಾಯ ಭೂಮಿಯನ್ನು ಹಾದಿಯುದ್ದಕ್ಕೂ ಕಾಣುತ್ತೇವೆ. ದಾರಿಯಲ್ಲಿ ಸಾಗುತ್ತಿರುವಾಗ ಒಂದು ಪ್ರಸಿದ್ಧ ಐಸ್‌ಕ್ರೀಂ ಘಟಕ ಸಿಗುತ್ತದೆ. ಬಿರುಬಿಸಿಲಿಗೆ ಹೆಸರಾದ ಈ ಪ್ರದೇಶದಲ್ಲಿ ಇದು ಬಲು ಆಪ್ಯಾಯಮಾನವಾಗಿದೆ. ಅಮೆರಿಕ ದೇಶದ ವಾಣಿಜ್ಯ ಪ್ರಪಂಚದಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವ ‘ಅಮೆಜಾ಼ನ್’ನ ಕೇಂದ್ರ ಕಛೇರಿ ಈ ಹಾದಿಯಲ್ಲಿದೆ.

ವಿಚಿಟಾ ನಗರದ ಒಳಹೊಕ್ಕರೆ ಎಲ್ಲೆಡೆಯೂ ಓದಿಗೆ, ಅಧ್ಯಯನಕ್ಕೆ, ಸಂಶೋಧನೆಗೆ ಸಂಬಂಧಪಟ್ಟ ಕಛೇರಿಗಳು, ಗ್ರಂಥಾಲಯಗಳು, ಪ್ರಯೋಗಾಲಯಗಳು ಇಂಥವೇ ಕಾಣಸಿಗುತ್ತದೆ. 1895ರಲ್ಲಿ ಆರಂಭವಾಗಿ 330 ಎಕರೆಗಳಲ್ಲಿ ಹರಡಿಕೊಂಡ ವಿಶಾಲವಾದ ವಿಶ್ವವಿದ್ಯಾಲಯ ಆವರಣದಲ್ಲಿ 15000ಕ್ಕೂ ಮಿಕ್ಕು ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡಿಕೊಳ್ಳುತ್ತಿದ್ದಾರೆ. 500ಕ್ಕೂ ಹೆಚ್ಚು ಬೋಧಕರಿದ್ದಾರೆ. ಅರವತ್ತು ವಿಷಯಗಳಲ್ಲಿ (ಕಲೆ, ವಿಜ್ಞಾನ ಮತ್ತು ವಾಣಿಜ್ಯ ಎಲ್ಲವೂ ಸೇರಿ) ಪೂರ್ವ ಪದವಿ ಶಿಕ್ಷಣ ವ್ಯವಸ್ಥೆ ಹಾಗೂ ಇನ್ನೂರಕ್ಕೂ ಹೆಚ್ಚು ಪದವಿ ವಿಭಾಗಗಳಲ್ಲಿ ಶಿಕ್ಷಣ ಮತ್ತು ನಲವತ್ತನಾಲ್ಕು ಉನ್ನತ ವ್ಯಾಸಂಗ ವಿಭಾಗಗಳು ಇವೆ.

ನನ್ನ ಮೈದುನನ ಮಗಳು ಅಲ್ಲಿ ಏರೋ ಡೈನಮಿಕ್ಸ್ ವಿಭಾಗದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವುದರಿಂದ ನಮಗೆ ವಿಶ್ವವಿದ್ಯಾಲಯದ ಒಳಹೊಕ್ಕು ಅಲ್ಲಿನ ಹಲವು ವಿಭಾಗಗಳನ್ನು, ಗ್ರಂಥಾಲಯಗಳನ್ನು, ವಸ್ತು ಸಂಗ್ರಹಾಲಯಗಳನ್ನು ನೋಡುವ ಅವಕಾಶವೊದಗಿತು. ನಾನೇನೂ ವಿಶೇಷ ಅಧ್ಯಯನ ಮಾಡದಿದ್ದರೂ ಅಮೆರಿಕದ ಒಂದು ಹಳೆಯ ವಿಶ್ವವಿದ್ಯಾಲಯದ ಒಳ ಹೊಕ್ಕು, ಅಲ್ಲಿನ ದೃಶ್ಯಗಳನ್ನು ಕಣ್ತುಂಬಿಕೊಂಡು, ಒಂದು ಉಲ್ಲಾಸಕರ ಅನುಭವ ಪಡೆಯಲು ನೆರವಾಯಿತು.

ವಿಚಿಟಾ ವಿಶ್ವವಿದ್ಯಾಲಯದ ವಸ್ತು ಸಂಗ್ರಹಾಲಯದ ಒಂದು ನೋಟ

ಗ್ರಂಥಾಲಯ ನನಗೆ ತುಂಬಾ ಹಿಡಿಸಿದ ವಿಭಾಗ – ಮೂರು ಅಂತಸ್ತುಗಳಲ್ಲಿ ನಿರ್ಮಿತವಾಗಿದ್ದು, ಕಂಪ್ಯೂಟರಿನಲ್ಲಿ ಅಲ್ಲಿರುವ ಎಲ್ಲ ಪುಸ್ತಕಗಳ ಬಗ್ಗೆ ಮಾಹಿತಿ ಹಾಗೂ ಅದು ಇರುವ ಜಾಗ ಎಲ್ಲವು ಸೂಚಿತವಾಗಿರುತ್ತದೆ. ಗುಂಪು ಗುಂಪಾಗಿ ಕುಳಿತು ಓದಲು, ಅಥವಾ ಒಬ್ಬರೇ ಕುಳಿತುಕೊಂಡು ಓದಲು ಬೇರೆ ಬೇರೆ ವ್ಯವಸ್ಥೆಗಳಿವೆ.

ಒಂದು ಟೇಬಲ್, ಖುರ್ಚಿ ಮತ್ತು ಲ್ಯಾಪ್‌ಟಾಪನ್ನು ಇರಿಸಿಕೊಂಡು, ಒಂದು ಚೌಕಾಕೃತಿಯ ನಿರ್ಮಿತಿಯಲ್ಲಿ, ಯಾರದೇ ತಂಟೆಯಿಲ್ಲದೆ, ಯಾವುದೇ ಅಡೆತಡೆಯಿಲ್ಲದೆ, ಹಲವಾರು ಪುಸ್ತಕಗಳನ್ನು ಪರಿಶೀಲಿಸುತ್ತಾ ಓದುವುದಕ್ಕೂ, ವಿಷಯಗಳನ್ನು ದಾಖಲಿಸಿಕೊಳ್ಳುತ್ತಾ ಹೋಗುವುದಕ್ಕೂ ವಿಶೇಷವಾದ ವ್ಯವಸ್ಥೆಯಿದೆ.

ಪರೀಕ್ಷೆಯ ಹತ್ತಿರದ ದಿನಗಳಲ್ಲಾದರೆ, ಮೊದಲೇ ಗ್ರಂಥಪಾಲಕರೊಡನೆ ದಿನ ಮತ್ತು ಸಮಯವನ್ನು ನೋಂದಣಿ ಮಾಡಿಸಿ ಕಾದಿರಿಸಿಕೊಂಡಿರಬೇಕು. ಮಧ್ಯದಲ್ಲಿ ಕಾಪಿ, ಟೀ, ಲಘು ಉಪಹಾರ ತೆಗೆದುಕೊಳ್ಳುವ ಹವ್ಯಾಸವಿರುವವರಿಗಾಗಿ ಅಲ್ಲಲ್ಲಿ ಅಂತಹ ಮುಂಗಟ್ಟೆಗಳಿವೆ. ಒಟ್ಟಿನಲ್ಲಿ ಓದುವವರ ಪಾಲಿಗೆ ನಿರಾತಂಕವಾದ ಒಂದು ಅಚ್ಚುಕಟ್ಟಾದ ವ್ಯವಸ್ಥೆ.

ಕ್ಯಾನ್ಸಸ್ ರಾಜ್ಯದವರಷ್ಟೇ ಅಲ್ಲದೆ, ಅಮೆರಿಕದ ಹಲವು ರಾಜ್ಯಗಳಿಂದ ಬಂದು ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿದ್ದಾರೆ. ಹಲವು ದೇಶಗಳಿಂದ ಬಂದು ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳೂ ಇದ್ದಾರೆ. ಅದೇ ರಾಜ್ಯದವರಿಗಾದರೆ ಶುಲ್ಕದಲ್ಲಿ ಬಹಳಷ್ಟು ರಿಯಾಯಿತಿ; ಬೇರೆ ರಾಜ್ಯದವರಿಗಾದರೆ ಸ್ವಲ್ಪ ಹೆಚ್ಚು; ಹೊರದೇಶದವರಿಗಾದರೆ ಇಲ್ಲಿನ ವಿದ್ಯಾಭ್ಯಾಸ ಬಲು ತುಟ್ಟಿ.

ಆದರೂ ವಿಶ್ವವಿದ್ಯಾಲಯ ಹೊರದೇಶದವರಿಂದಲೂ ತುಂಬಿ ತುಳುಕುತ್ತಿರುವುದನ್ನು ನೋಡುವಾಗ ಅಮೆರಿಕದಲ್ಲಿ ಓದಬೇಕೆಂಬ ಯುವಜನಾಂಗದ ಆಕರ್ಷಣೆಯ ಬಗ್ಗೆ ನಿಜಕ್ಕೂ ಅಚ್ಚರಿಯಾಗುತ್ತದೆ. ಹೀಗೆ ಹೊರದೇಶದಿಂದ ಬಂದು ಓದುವವರಲ್ಲಿ ಭಾರತೀಯರ ಸಂಖ್ಯೆ ಗಣನೀಯವಾಗಿ ಹೆಚ್ಚು.

ವಿಶ್ವವಿದ್ಯಾಲಯವನ್ನೆಲ್ಲಾ ಸುಮ್ಮನೆ ಒಂದು ಸುತ್ತು ಹಾಕಿಕೊಂಡು ಬರುವಾಗ, ಮುಂಭಾಗದಲ್ಲಿ ʻಪೀಜಾ಼ ಹಟ್‌ʼನ ಒಂದು ಸಣ್ಣ ಮರದ ಕಟ್ಟಡ ಕಾಣುತ್ತದೆ. ಅಮೆರಿಕದಲ್ಲಿ ಪೀಜಾ಼ ಸಂಸ್ಕೃತಿ ಆರಂಭವಾಗಿದ್ದು ಈ ಕಟ್ಟಡದಲ್ಲಂತೆ!! ಆವರಣದ ಮಧ್ಯದಲ್ಲೆಲ್ಲೋ ಇದ್ದ ಆ ಕಟ್ಟಡವನ್ನು ಒಂದು ಚಾರಿತ್ರಿಕ ಕುರುಹಾಗಿ ಉಳಿಸಿಕೊಳ್ಳುವ ಸಲುವಾಗಿ ಆವರಣದ ಮುಂಭಾಗಕ್ಕೆ ಇಡಿಯ ಕಟ್ಟಡವನ್ನೇ ಸ್ಥಳಾಂತರಗೊಳಿಸಿದ್ದಾರೆ.

ಆವರಣದ ಹೊರಬಂದರೆ ಸುತ್ತಮುತ್ತಲೆಲ್ಲಾ ವಿದ್ಯಾರ್ಥಿಗಳ ವಸತಿ ವ್ಯವಸ್ಥೆ, ಅವರ ವಾಸ ಯೋಗ್ಯ ಅಪಾರ್ಟ್ಮೆಂಟುಗಳು, ಕಾಫಿ ಕ್ಲಬ್‌ಗಳು, ದಿನಸಿ ಮತ್ತು ದಿನೋಪಯೋಗಿ ಸರಕುಗಳ ಮಳಿಗೆ ಮತ್ತು ದೇಶೀಯ ಹಾಗೂ ಅನ್ಯದೇಶೀಯ ಖಾದ್ಯಗಳ ರೆಸ್ಟೋರೆಂಟುಗಳು ಕಾಣಸಿಗುತ್ತವೆ. ಇಲ್ಲಿನ ವಿಶೇಷವೆಂದು ಹೇಳಿದ ಮೆಡಿಟರೇನಿಯನ್ ಊಟವನ್ನು ಒಂದು ರೆಸ್ಟೋರೆಂಟಿನಲ್ಲಿ ಸವಿದೆವು.

ವಿಚಿಟಾದ ‘ಕೀಪರ್ ಆಫ್ ಪೀಸ್’ ಪ್ರತಿಮೆ

ಇವೆಲ್ಲವೂ ವಿಶ್ವವಿದ್ಯಾನಿಲಯವಿರುವ ಭಾಗವಿರುವ ವಿಚಿಟಾ ಊರಿನ ಚಿತ್ರಣ. ವಿಚಿಟಾ ಹಳೆಯ ನಗರಕ್ಕೆ ಹೋದರೆ ಅಲ್ಲಿ ಒಂದು ಪ್ರಾಣಿ ಸಂಗ್ರಹಾಲಯವಿದೆ, ಸಸ್ಯೋದ್ಯಾನವಿದೆ, ನದಿಯ ಮೇಲೆ ಓಡಾಡುವಂತ ಒಂದು ಆಕರ್ಷಕ ಮರದ ಸೇತುವೆ, ಸೇತುವೆಯ ಬಳಿಯೇ ಕೈಯೆತ್ತಿ ಮುಗಿಯುತ್ತಾ ‘ನಗರವನ್ನು ಕಾಪಾಡು’ ಎಂದು ಬೇಡಿಕೊಳ್ಳುತ್ತಿರುವ ‘ಕೀಪರ್ ಆಫ್ ಪೀಸ್’ ಪ್ರತಿಮೆ ವಿಶೇಷವಾಗಿದೆ. ಎಲ್ಲದರ ಕಡೆಯೂ ಕಣ್ಣು ಹಾಯಿಸುತ್ತಾ ಕ್ಯಾನ್ಸಸ್ ನಗರದ ಕಡೆಗೆ ನಮ್ಮ ಪ್ರಯಾಣವನ್ನು ಮುಂದುವರೆಸಿದೆವು.

ಚಿತ್ರ-ವಿಚಿತ್ರ ಸಮುದ್ರ ತೀರದ ನಗರ..

ಬೇ ಪ್ರದೇಶದಲ್ಲಿ ಅತ್ಯಂತ ಜನದಟ್ಟಣೆಯ, ಪ್ರಮುಖವಾದ ಹಾಗೂ ಪ್ರಸಿದ್ಧವಾದ ಪಟ್ಟಣ ಸ್ಯಾನ್ ಫ್ರಾನ್ಸಿಸ್ಕೋ. ಸುಮಾರು ನೂರು ವರ್ಷಗಳ ಹಿಂದೆ ಭೂಕಂಪವಾದಾಗ ಉಳಿದುಕೊಂಡ ಇಡಿಯ ಪಟ್ಟಣದ ಕೆಲವೇ ಪ್ರಮುಖ ಕಟ್ಟಡಗಳಲ್ಲಿ ‘ಪ್ಯಾಲೇಸ್ ಆಫ್ ಫೈನ್ ಆರ್ಟ್ಸ್ ಮ್ಯೂಸಿಯಂ’ ಒಂದು.

ಭೂಕಂಪದ ನಂತರ ನಗರದ ಎಲ್ಲ ಕಟ್ಟಡಗಳೂ ಪುನರ್ ನಿರ್ಮಿತವಾದಂತವುಗಳು. ಹಿತವಾದ ಹವಾಮಾನದೊಂದಿಗೆ ಹಲವಾರು ವಿಶಿಷ್ಟತೆಗಳನ್ನು ಒಳಗೊಂಡಿದೆ. ವಿಶ್ವದಲ್ಲೇ ಪ್ರಖ್ಯಾತವಾದ ಅನೇಕ ಕಂಪನಿಗಳ ಕೇಂದ್ರ ಕಛೇರಿಗಳೂ ಈ ನಗರದಲ್ಲಿವೆ. ಒಂದು ಇಡೀ ದಿವಸ ನೋಡುವಷ್ಟು ಪ್ರೇಕ್ಷಣೀಯ ಸ್ಥಳಗಳು ಮತ್ತು ಅವುಗಳ ಮಾರ್ಗದರ್ಶಿ ಪಯಣ ವ್ಯವಸ್ಥೆಯೂ ಇಲ್ಲಿದೆ. ನನಗೆ ಇಲ್ಲಿ ವಿಶೇಷವೆನಿಸಿದ ಕೆಲವು ಸಂಗತಿಗಳನ್ನು ಮಾತ್ರ ಇಲ್ಲಿ ಹೇಳುತ್ತಿದ್ದೇನೆ.

ಇಡಿಯ ಪಟ್ಟಣ ಒತ್ತೊತ್ತಾಗಿ ನಿರ್ಮಾಣವಾಗಿದ್ದು, ಮನೆಗಳು ಒಂದಕ್ಕೊಂದು ಅಂಟಿಕೊಂಡಂತೆ ಇವೆ. ಮೈಲುಗಟ್ಟಲೇ ಉದ್ದಕ್ಕೆ ನೇರವಾಗಿ ಸಾಗುವ ರಸ್ತೆಗಳು, ಒಂದು ತುದಿಯಿಂದ ನೋಡಿದರೆ ಇನ್ನೊಂದು ತುದಿ ಒಂದು ಸಣ್ಣ ಗುಡ್ಡದ ಮೇಲೆ ಇರುವಷ್ಟು ಎತ್ತರದಲ್ಲಿ ಇರುವಂತ ರಸ್ತೆಗಳಿವೆ. ನಾಲ್ಕೈದು ವರ್ಷದ ಮಕ್ಕಳು ಕೆಳಗಿಂದ ಗುಡ್ಡಕ್ಕೆ ಹೋಗುವ ರಸ್ತೆಯನ್ನು ಬರೆಯುವಾಗ ನೇರವಾಗಿ ಎರಡು ಗೆರೆ ಗುಡ್ಡದ ನೆತ್ತಿಗೆ ಎಳೆದರೆ, ನಾವು ‘ಇದು ಹೇಗೆ ಸಾಧ್ಯ?’ ಎಂದು ನಗುತ್ತಾ ಅವರಿಗೆ ಆ ರೀತಿ ಎತ್ತರವನ್ನು ಕ್ರಮಿಸುವಾಗ ಸುತ್ತು ಬಳಸಿದ ದಾರಿ ಇರಬೇಕು ಎಂದು ತಿದ್ದುತ್ತೇವೆ.

ಆದರೆ ಇಲ್ಲಿ ಮಕ್ಕಳ ಆ ಕಲ್ಪನೆ ಅಕ್ಷರಶಃ ಸಾಕಾರಗೊಂಡಿದೆ. ಸುಸ್ಥಿತಿಯಲ್ಲಿಲ್ಲದ ಕಾರನ್ನಾಗಲೀ, ಅನನುಭವಿ ಚಾಲಕನನ್ನಾಗಲೀ ಇಲ್ಲಿ ನೋಡಲು ಸಾಧ್ಯವೇ ಇಲ್ಲ. ಹಾದಿಯುದ್ದಕ್ಕೂ ನಿಲ್ಲಿಸಿರುವ ಕಾರುಗಳು ಸುಮಾರು 30 ಡಿಗ್ರಿಯಷ್ಟು ಬಾಗಿ ನಿಂತಿರುತ್ತವೆ. ಲಂಬಾರ್ಡ್ ಬೀದಿಯಲ್ಲಿ ಸಾಗುವಾಗ ಒಂದು ಪಕ್ಕದಲ್ಲಿ ಕಾಣುವ ಎಲ್ಲ ಅಡ್ಡ ರಸ್ತೆಗಳೂ ಪಾತಾಳದಿಂದ ಆಕಾಶಕ್ಕೆ ಮೊಗಮಾಡಿ ನಿಂತಿರುವುದು ಒಂದು ನೋಡಿಯೇ ಅನುಭವಿಸಬೇಕಾದ ರೋಮಾಂಚನ!.

ಅಂಕುಡೊಂಕಾಗಿ ಸಾಗಿರುವ ಕ್ರುಕೆಡ್ ರಸ್ತೆ

ಇಲ್ಲಿ ಲಂಬಾರ್ಡ್ ರಸ್ತೆಯ ಒಂದು ಭಾಗವಾದ ‘ಕ್ರುಕೆಡ್ ಸ್ಟ್ರೀಟ್’ ಎಂಬ ವಕ್ರಗತಿಯ ಹಾದಿಯೂ ಇದೆ. ಅಲ್ಲಿ ಎರಡು ಕಟ್ಟಡಗಳ ನಡುವಿನ ಒಂದು ಸಣ್ಣ ರಸ್ತೆಯಲ್ಲಿ, ಮೇಲಿನಿಂದ ಕೆಳಗಿನವರೆಗೆ ಸುಮಾರು ಏಳೆಂಟು ಸಮಾನಾಂತರ ‘ಯು’ ತಿರುವುಗಳಿದ್ದು ಇದರಲ್ಲಿ ಸಾಗುವುದು ಪ್ರಯಾಣಿಕರಿಗೆ ಒಂದು ಮೋಜಿನ ವಿಷಯವೇ ಸರಿ. ಅಷ್ಟು ಪುಟ್ಟ ರಸ್ತೆಯ ಇಕ್ಕೆಲಗಳಲ್ಲೂ ಮನೆಗಳು, ಸುಂದರ ಹೂದೋಟಗಳು, ಮನೆಯ ಮುಂದೆ ಈ ರಸ್ತೆಯನ್ನು ನೇರವಾಗಿ ಇಳಿಯಲು ಮೆಟ್ಟಿಲುಗಳು ಇವೆಲ್ಲವೂ ಒಬ್ಬ ಚಿತ್ರ ಕಲಾವಿದನ ಸುಂದರ ಕಲ್ಪನೆಯೋ ಎನ್ನುವಷ್ಟು ಸೊಗಸಾಗಿದೆ!.

ಕಾರಿನಲ್ಲಿ ಪಯಣಿಸುತ್ತಾ ಈ ಸೌಂದರ್ಯವನ್ನು ಆಸ್ವಾದಿಸುವುದು ಒಂದು ತೆರನಾದರೆ, ಪಕ್ಕದ ಮೆಟ್ಟಿಲುಗಳಲ್ಲಿ ನಿಧಾನವಾಗಿ ಇಳಿಯುತ್ತಾ ಅಕ್ಕ-ಪಕ್ಕದ ಸೌಂದರ್ಯವನ್ನು ಕಣ್ಣಿನಲ್ಲಿ ಬಾಚಿಕೊಳ್ಳುವುದು ಇನ್ನೊಂದು ತೆರನಾದ ಸಂತೋಷ.

ಇದು ಒಂದು ರೀತಿಯ ರಸ್ತೆಗಳಾದರೆ, ಊರಿನ ಮಧ್ಯದಲ್ಲಿರುವ ಹಲವು ಕಿಕ್ಕಿರಿದ ಬಹುಮಹಡಿ ಕಟ್ಟಡಗಳ ಚಿತ್ರಣವೇ ಬೇರೆಯದು. 30-40 ಅಡಿ ಅಗಲದ ರಸ್ತೆಯುದ್ದಕ್ಕೂ ಹಲವು ನೂರು ಅಂತರಾಷ್ಟ್ರೀಯ ಕಂಪನಿಗಳ ಕೇಂದ್ರ/ಮುಖ್ಯ ಕಛೇರಿಗಳಿವೆ. ಇವೆಲ್ಲವೂ ಎತ್ತರದಲ್ಲಿ, ಆಕೃತಿಯಲ್ಲಿ ಒಂದಕ್ಕೊಂದು ಪೈಪೋಟಿ ಮಾಡಿಕೊಂಡು ನಿಂತಿವೆ.

ಈ ಬೀದಿಗಳಲ್ಲಿ ದಿನದ ಯಾವ ಸಮಯದಲ್ಲೂ ಸೂರ್ಯರಶ್ಮಿ ನೆಲವನ್ನು ತಾಗದು. ಸೂರ್ಯ ಕಛೇರಿಗಳ ಮೇಲಂತಸ್ತನ್ನು ಮಾತ್ರ ಚುಂಬಿಸಿ ಓಡಿಬಿಡುತ್ತಾನೆ. ಕೆಳಗೆ ಸದಾ ಒಂದು ಮಂದ ಪ್ರಕಾಶದ ವಾತಾವರಣವೇ. 3ಡಿ ಸಿನಿಮಾವೊಂದರಲ್ಲಿ, ಛಾಯಾಚಿತ್ರಗಾರನ ಕೈಚಳಕದಲ್ಲಿ ಒಂದು ರಸ್ತೆಯ ಕೆಳಭಾಗದಿಂದ ಅವನ ಕ್ಯಾಮರಾ ಮೇಲಮೇಲಕ್ಕೆ ಸಾಗುತ್ತಾ ಸುತ್ತಲ ಕಟ್ಟಡಗಳನ್ನು `ಜೂ಼ಮ್’ ಮಾಡುತ್ತಾ ಅವೆಲ್ಲವೂ ನಮ್ಮ ಕಡೆಗೆ ಬರುತ್ತಿದೆಯೇನೋ ಎನ್ನುವಂತೆ ತೋರಿಸುವ ಅನುಭವವನ್ನು ಇಲ್ಲಿ ನಾವೇ ಪ್ರತ್ಯಕ್ಷವಾಗಿ ನೋಡುತ್ತಾ ಅನುಭವಿಸಬಹುದು.

ಜನವಸತಿಯ ಪ್ರದೇಶಕ್ಕೆ ಬಂದರೆ ಮೈಲುಗಟ್ಟಲೆ ಒಂದೇ ರೀತಿಯ ಅಂಟಿಕೊಂಡಿರುವ ಎರಡು, ಮೂರು ಅಂತಸ್ತಿನ ಮನೆಗಳು, ಒಂದೇ ಹೊರಮೈ ಬಣ್ಣದ ಕಟ್ಟಡಗಳು, ಒಂದೇ ರೀತಿಯ ಬಾಗಿಲು, ಕಿಟಕಿ ಹೊರಾವರಣದ ಅಲಂಕಾರ, ಹೆಚ್ಚು ಅಗಲವಲ್ಲದ ಉದ್ದದ ರಸ್ತೆಗಳು ಎಲ್ಲವೂ ಒಂದು ವಿಚಿತ್ರ ಶೋಭೆಯನ್ನು ನೀಡಿವೆ.

ವಿಶ್ವದ ಹಲವು ಪ್ರಮುಖ ಕಂಪನಿಗಳ ಕಛೇರಿಗಳು ಇಲ್ಲಿರುವುದರಿಂದ ಎಲ್ಲ ಭಾಗದ ಜನರನ್ನೂ ಇಲ್ಲಿ ನೋಡಬಹುದು. ಇಷ್ಟೊಂದು ಜನದಟ್ಟಣೆಯಿದ್ದರೂ, ಸಮುದ್ರದ ಮೇಲಿನಿಂದ ಬೀಸುವ ತಂಗಾಳಿ ಇಡೀ ನಗರವನ್ನು ಸದಾ ಒಂದು ಹವಾ ನಿಯಂತ್ರಿತ ಸ್ಥಿತಿಯಲ್ಲಿರಿಸಿರುತ್ತದೆ. ನಮ್ಮಲ್ಲಿನ ಸಮುದ್ರ ತೀರದಲ್ಲಿರುವಂಥ ಅಂಟು ಹವೆ ಇಲ್ಲಿಲ್ಲ. ಸಾಗರದ ನೀರಿನ ಉಷ್ಣತೆಯೇ 3ರಿಂದ 4 ಡಿಗ್ರಿಗಳಷ್ಟು.

ಹಾಗಾಗಿ ಅದರ ಮೇಲಿನಿಂದ ಬೀಸುವ ಗಾಳಿ ನಡುಕ ಹುಟ್ಟಿಸುವಂಥದ್ದೇ! ಈ ಹವಾಮಾನದ ಕಾರಣದಿಂದಲೇ ಈ ನಗರ ಅತಿ ಹೆಚ್ಚು ಜನದಟ್ಟಣೆಯ ಪ್ರದೇಶವಾಗಿರಬೇಕು. ಅಂತೆಯೇ ಎಲ್ಲ ವಿಷಯಗಳಲ್ಲೂ ಅತಿ ದುಬಾರಿಯಾದ ಪಟ್ಟಣವೂ ಇದಾಗಿದೆ.

ಸಲಿಂಗ ಸಂಬಂಧಗಳನ್ನು ಬೆಂಬಲಿಸುವ ಒಂದು ವಸತಿ ಪ್ರದೇಶವೇ ಇಲ್ಲಿದೆ. ಇಲ್ಲಿನ ಎಲ್ಲ ಮನೆಗಳ ಮುಂದೂ ಅದಕ್ಕೆ ಒತ್ತಾಸೆ ನೀಡುವ ಬಾವುಟಗಳಿವೆ. ಭಾರತದಲ್ಲಿ ಇತ್ತೀಚೆಗೆ ಮಾನ್ಯತೆಗೊಳಗಾದ ಈ ವಿಚಾರ ಅಲ್ಲಿ ಹಲವು ದಶಕಗಳ ಹಿಂದಿನಿಂದಲೇ ಬೆಂಬಲ ಪಡೆದಿರುವುದು ಹಾಗೂ ಅದನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಸಹಜವೆಂಬಂತೆ ಒತ್ತಾಸೆ ನೀಡಿರುವುದೂ ಒಂದು ವಿಶೇಷವಾದ ವಿಚಾರವೇ.

ಎಲ್ಲ ಪಟ್ಟಣಗಳಲ್ಲಿರುವಂತೆ ಇಲ್ಲಿಯೂ ವಸ್ತು ಸಂಗ್ರಹಾಲಯಗಳು, ಪ್ರಸಿದ್ಧ ಹೋಟೆಲ್‌ಗಳು, ಉದ್ಯಾನವನಗಳು ಇತ್ಯಾದಿಗಳು ಇವೆ. ಇಲ್ಲಿನ ಸಾಗರದಲ್ಲಿ ವಿಹಾರ ಹೋಗಲು ಹಲವು ದೋಣಿ ವಿಹಾರ ಕೇಂದ್ರಗಳಿವೆ. ಅವನ್ನು ಪಿಯರ್‌ಗಳೆಂದು ಕರೆಯುತ್ತಾರೆ. ಅವುಗಳ ಪಕ್ಕ ಒಂದು ‘ಫಿಶರ್‌ಮೆನ್ ವಾರ್ಫ್’ ಎನ್ನುವ ಒಂದು ಮಾರುಕಟ್ಟೆ ಇರುತ್ತದೆ. ಇಂತಹ ಪಿಯರ್‌ಗಳಲ್ಲಿ ಒಂದಾದ ‘ಪಿಯರ್ 39’ ಬಗ್ಗೆ ಮುಂದೆ ಬರೆಯುತ್ತಿರುವುದರಿಂದ ಸ್ಯಾನ್ ಫ್ರಾನ್ಸಿಸ್ಕೋ ಪಟ್ಟಣದ ಬಗೆಗಿನ ವಿಚಾರಗಳನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ.

(ಮುಂದುವರಿಯುವುದು)

‍ಲೇಖಕರು avadhi

October 15, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: