ಕಥೆ- ಸೂಳೇಬಾವಿ ಕ್ಯಾಂಪು- ಇವರು ಕಡು ಕತ್ತಲಿನಲ್ಲಿ ನಿಂತಿದ್ದಾರೆ

(ನಿನ್ನೆಯಿಂದ)

3

ರಾತ್ರಿಗೆ ಅಡುಗೆ ತಯಾರಿ ಮಾಡಲು ತಮ್ಮಯ್ಯನ ಬಳಿ ಗೆಸ್ಟ್ ಹೌಸಿಗೆ ಹೇಳಿ ಕಳುಹಿಸಿದ ಶಂಕರ ಇವರೆಲ್ಲರ ಜೊತೆ ಅವರ ಜೀಪಿನಲ್ಲೇ ತಾನು ಗೆಸ್ಟ್ ಹೌಸಿಗೆ ಹೊರಟ. ಗೆಸ್ಟ್ ಹೌಸನ್ನು ತಲುಪಿ ಎಲ್ಲರಿಗೂ ತಮ್ಮ ಕೋಣೆಯನ್ನು ತೋರಿಸಿ ಸಾರಾಳ ಜೊತೆ ಮಾತುಕತೆಗೆ ಇಳಿದ.

ರುಬಿಕಾ ದೂರದಿಂದಲೇ ಶಂಕರನನ್ನು ಒಂಟಿ ಕಣ್ಣಿನಿಂದ ನೋಡುತ್ತಿದ್ದಳು. ಶಂಕರ ಸಾರಾಳ ಹತ್ತಿರವಾಗಲು ಯತ್ನಿಸುತ್ತಿದ್ದರೆ ರುಬಿಕಾ ಶಂಕರನ ಹತ್ತಿರವಾಗಲು ಪ್ರಯತ್ನಿಸುತ್ತಿರುವಂತೆ ಕಾಣಿಸಿತು. ಕಾರಣ ಶಂಕರನಿಗೆ ಈಗಾಗಲೇ ತಿಳಿದಿತ್ತು. ಸಾರಾ ಮೊದಲೇ ಅನುಮತಿ ಇದ್ದಿದ್ದರಿಂದ ಹಾಡಿಯಲ್ಲಿ ಉಳಿಯಬಹುದಿತ್ತು. ಆದರೆ ರುಬಿಕಾಳಿಗೆ ಉಳಿಯುವ ಅವಕಾಶಗಳಿರಲಿಲ್ಲ. ಆದರೆ, ಶಂಕರ ಮನಸ್ಸು ಮಾಡಿದರೆ ಮಾತ್ರ ಅದು ಸಾಧ್ಯವಿತ್ತು.

ರುಬಿಕಾಳು ಉಳಿಯುವ ಇಚ್ಛೆಯನ್ನು ಸಾರಾ ಶಂಕರನ ಬಳಿ ಪ್ರಸ್ತಾಪಿಸಿದ್ದಳಾದರು ಶಂಕರ ನಿರ್ಲಕ್ಷಿಸಿದ್ದು ರುಬಿಕಾಳ ಗಮನಕ್ಕೆ ಬರದೇ ಏನಿರಲಿಲ್ಲ. ಆದರೆ ರುಬಿಕಾಳಿಗೆ ಬಹಳ ಮುಖ್ಯವಾದ ಕೆಲಸ ಇದ್ದುದುರಿಂದ ಈ ಬಾರಿ ಅವಳು ಉಳಿಯಲು ಯಾವುದಕ್ಕೂ ಸಿದ್ಧವಾಗಿಯೇ ಬಂದಿದ್ದಳು. ಜೊತೆಗೆ ಈ ಮೊದಲೇ ಅನುಮತಿ ಪಡೆಯದೇ ಬಂದದ್ದಕ್ಕೆ ಕಾರಣಗಳು ರುಬಿಕಾಳಿಗೆ ಮಾತ್ರ ಗೊತ್ತಿತ್ತು.

 

ವೀರಣ್ಣನವರು “ಸಾಹೇಬ್ರೆ, ನೀವು ಏನಾರ ಮಾಡಿ.. ಆದ್ರೆ, ನಾವು ಮತ್ತೊಮ್ಮೆ ಅಲ್ಲಿ ಉಳ್ಯಾಂಗಿಲ್ಲ ನೋಡ್ರಿ” ಅಂದಾಗ ಶಂಕರ ನಕ್ಕು “ನೀವು ಮುಂದಿನ ಸಲ ಇರ್ಬೇಕು ಅನ್ನೋ ಇಚ್ಛೆ ಇದ್ರೆ, ನಾಲ್ಕೈದು ಪ್ಯಾಂಟ್ ಹಾಕ್ಕೊಂಡು ಇಟ್ಕೊಂಡು  ಬಂದ್ರೆ ಒಳ್ಳೇದು. ಒದ್ದೆಯಾದಾಗ ಚೇಂಜ್ ಮಾಡೋಕೆ ” ಅಂದಾಗ ವೀರಣ್ಣ ನಕ್ಕು ಸುಮ್ಮನಾಗಿದ್ದರು. ಊಟ ತಯಾರಾದ ನಂತರ ಎಲ್ಲರೂ ಊಟ ಮಾಡಿ ತಮ್ಮ-ತಮ್ಮ ಕೊಠಡಿ ಸೇರಿದ್ದರು.

ರುಬಿಕಾಳ ನಡುವಳಿಕೆ ಶಂಕರನಲ್ಲಿ ಅನುಮಾನವನ್ನು ದುಪ್ಪಟ್ಟುಗೊಳಿಸಿತ್ತು. ಯೋಚಿಸುತ್ತಾ ಸಿಗರೇಟು ಹೊತ್ತಿಸಿ ಬಾಲ್ಕನಿಯಲ್ಲಿ ನಿಂತಿದ್ದ, ಹಿಂದಿನಿಂದ  ಮಾದಕ ದ್ವನಿಯೊಂದು ಮಾತನಾಡಿತು “ನಿದ್ದೆ ಬರ್ತಾ ಇಲ್ವೇ ಶಂಕರ್ ಸರ್?” ಶಂಕರ ಹಿಂದೆ ತಿರುಗಿದ. ರುಬಿಕಾ ಮತ್ತೆ ಕೊಠಡಿಯಿಂದ ಹೊರ ಬಂದು ಶಂಕರನ ಬಳಿ ನಡೆದು ಬಂದಿದ್ದಳು.

ಹತ್ತಿರ ಬಂದು ಶಂಕರನ ಪ್ಯಾಂಟಿನ ಕಿಸೆಗೆ ಕೈ ಹಾಕಿದಾಗ ಶಂಕರನ ಎದೆ ಜನರೇಟರ್ ನಂತೆ ಸದ್ದು ಹೊರಡಿಸುತ್ತಿತ್ತು.  ಅವನು ಸಾರಾಳಿಗೆ ಹತ್ತಿರವಾಗುವ ಯೋಚನೆ ಮಾಡಿದ್ದ. ಆದರೆ, ರುಬಿಕಾ ಇವನ ತೆಕ್ಕೆಗೆ ಬೀಳುತ್ತಿರುವುದನ್ನು ಕಂಡು ಗಾಬರಿಗೆ ಒಳಗಾಗಿದ್ದು ನಿಜ. ಶಂಕರ ಬೇಡವೆಂದು ನಿರಾಕರಿಸುವ ಯೋಚನೆ ಮಾಡಿದ. ಆದರೆ ವಯಸ್ಸು ಕೇಳಬೇಕೆ ಶಂಕರ ಪ್ರತಿಕ್ರಿಯಿಸಲಿಲ್ಲ ಆದರೆ ಪ್ರತಿಭಟಿಸಲೂ ಇಲ್ಲ.

ನಂತರ ಇವರಿಬ್ಬರ ಹಗ್ಗಜಗ್ಗಾಟ ನಡುರಾತ್ರಿಯವರೆಗೂ ಶಂಕರನ ರೂಮಿನಲ್ಲಿ ಮುಂದುವರೆದಿತ್ತು. ಶಂಕರ ಕೇಳಿದ “ಕಳೆದ ಐದಾರು ವರ್ಷಗಳ ಹಿಂದೆ ಮಮತಾ ನಾಯ್ಕರಳ ದೇಹದ ಫೋಟೋ ತೆಗೆದಿದ್ದವಳು ನೀನೇನಾ?” ರುಬಿಕಾ ಹೆದರಿದವಳಂತಾಗಿ ಹೌದೆಂದು ತಲೆಯಾಡಿಸಿದಳು. “ಆ ಸಾವಿನ ಬಗ್ಗೆ ಇನ್ನು ಹೆಚ್ಚು ತಿಳಿಯಬೇಕಿತ್ತು” ಶಂಕರ ಕೇಳಿದ್ದಕ್ಕೆ ರುಬಿಕಾ ಹಾಡಿಯ ಶಿಂಗಾನಾಯ್ಕರ ಹೇಳಿದ್ದ ಕಥೆಯನ್ನೇ ಹೇಳಿದಳು.

ಶಂಕರ ಇನ್ನು ಹೆಚ್ಚು ಮಾತನಾಡದೆ ಸಿಗರೇಟು ಹೊತ್ತಿಸಿ ಕಿಟಕಿಯಿಂದ ಹೊರಗೆ  ಹೊಗೆ ಉಗುಳುತ್ತಿದ್ದ. ಸಮಯ ನೋಡಿ ತಡರಾತ್ರಿಯಾಗಿದ್ದರಿಂದ ರುಬಿಕಾಳನ್ನು ಅವಳ ಕೋಣೆಗೆ ಕಳುಹಿಸಿದ. ಬೆಳಿಗ್ಗೆ ಎದ್ದಾಗ ಆನಂದ ಆಗಲೇ ಗೆಸ್ಟ್ ಹೌಸಿನ ಮುಂಭಾಗದಲ್ಲಿ ಕಾಯುತ್ತಾ ಕುಳಿತಿದ್ದ. ಶಂಕರನು ಅವನನ್ನು ಕಂಡು ಸಂತೋಷಗೊಂಡು ಹೇಳಿದ “ಮೂರು ದಿನ ಅಂದು ಇವತ್ತೆ ಬಂದದ್ದು ಒಳ್ಳೆಯದೇ ಆಯಿತು, ಬಹಳ ಮಾತನಾಡುವುದು ಇದೆ.” ಆನಂದನಿಗೆ ಆಶ್ಚರ್ಯವಾದರೂ ನಕ್ಕು ಒಮ್ಮೆ ಸುಮ್ಮನಾದ.

ರುಬಿಕಾಳಿಗೆ ಅನುಮತಿ  ರಾತ್ರಿಯೇ ಸಿಕ್ಕಾಗಿತ್ತು. ತಿಂಡಿ ಮುಗಿಸಿಕೊಂಡು ಆ ಮೂರು ಜನ ಹಾಡಿಯ ಕಡೆ ಹೊರಟರೆ ಶಂಕರ ಮತ್ತು ಆನಂದ ಅಂತರಸಂತೆ ಆಫೀಸಿನ ಕಡೆ ನಡೆದರು. ಶಂಕರ ಆನಂದನ ಜೊತೆ ಬಹಳ ಚರ್ಚಿಸುವುದಿತ್ತು. ಬರುವ ದಾರಿಯಲ್ಲಿ ಇವನ ಅನುಮಾನಗಳನ್ನು ಆನಂದನೊಡನೆ ಚರ್ಚಿಸಿ ಇಂದು ಮತ್ತೆ ಕ್ಯಾಂಪಿಗೆ ಹೋಗುವ ಇಂಗಿತವನ್ನು ವ್ಯಕ್ತಪಡಿಸಿದ್ದ.

ಆನಂದನಿಗೆ ದೆವ್ವವೋ ಅಥವಾ ಮನುಷ್ಯರ ಕೃತ್ಯವೋ ಎಂದು ಯೋಚಿಸುವುದಕ್ಕೆ ಸರಿಯಾದ ಕುರುಹುಗಳು ಇನ್ನು ಕಂಡಿರಲಿಲ್ಲ. ಆಫೀಸಿನ ಬಳಿ ತಲುಪುತ್ತಿದ್ದಂತೆ ಹಾಡಿಯ ಶಿಂಗಾನಾಯ್ಕರ ಶಂಕರನಿಗೆ ಕಾಯುತ್ತಿದ್ದ. ಶಂಕರನೇ ಶಿಂಗಾನಾಯ್ಕರನನ್ನು ಹೋಗಿ ಕಾಣುವ ತವಕದಲ್ಲಿದ್ದ ಅಂತಹುದರಲ್ಲಿ ಶಿಂಗಾನಾಯ್ಕರ ಆಫೀಸಿನ ಬಳಿಯೇ ಸಿಕ್ಕಿದ್ದು ಶಂಕರನಿಗೆ ಖುಷಿ ತಂದಿತ್ತು. ಅವನನ್ನು ಒಳಗೆ ಕರೆದು  ವಿಚಾರಿಸಿದ.

ಶಿಂಗಾನಾಯ್ಕರನ ಜನರನ್ನು ಕಾಡಿನಿಂದ ನಾಡಿಗೆ ತರಲು ಸರ್ಕಾರ ಪ್ರಯತ್ನಪಟ್ಟಿತ್ತು. ಆ ವಿಚಾರವಾಗಿ ಶಿಂಗಾನಾಯ್ಕರ ಶಂಕರನ ಬಳಿ ಚರ್ಚಿಸಲು ಬಂದಿದ್ದ. ಶಂಕರ ಕೇಳಿದ “ಏನ್ರಿ ಸಮಾಚಾರಾ, ಬಂದ  ಕಾರಣ?” ಶಿಂಗಾನಾಯ್ಕರ “ಏನ್ ಮಾಡೋದು ಸಾರು , ನಮ್  ಹಾಡಿನಲ್ಲಿ ಒಬ್ಬೊಬ್ಬರೇ ಹೆಂಗಸರು ಮತ್ತೆ ಕಳುವಾಗೋಕೆ ಶುರು ಆಗೈತೆ. ನೀವು ಬಂದು ಹೋದ ದಿನ ನಮ್ಮ ಹೆಂಗಸ್ರು ತಂಗಿ ಕಾಣೆ ಆಗೋಯ್ತು ಸಾರು.

ಈ ಕೆಂಚಯ್ಯ ನಮ್ಮ ಹೆಂಗುಸರೇ ಅವಳ ತಂಗಿನಾ ಬಾಯಿಗೆ ಹಾಕ್ಕೊಂಡಿರೋದು ಅಂತ ಹೇಳಿದ್ಮ್ಯಾಕೆ ನಾವೇನು ಹುಡ್ಕೋಕೆ ಹೋಗಿಲ್ಲ. ಮತ್ತೆ ನೀವು ಆ ಕಡೆ ಬಂದಿಲ್ಲರೀ. ಅದಿಕ್ಕೆ ನಾನೆ ನಿಮ್ಮನ್ನ ಹುಡ್ಕೊಂಡು ಬಂದೀನ್ರಿ. ಸುಂದ್ರಿ ಕಣ್ರೀ ಸಾರು ಅವ್ಳು, ಪಾಪ ಅವಳ ಗಂಡ ಹುಚ್ಚ ಆಗಿ ಬಂದವ್ನೆ ಸಾರು. ಇದಾಗಿ ನಾವು ಕಾಡಿಂದ ನಾಡಿಗೆ ಬರೋ ಚಿಂತೆ ಮಾಡೀವ್ರಿ. ನೀವು ಅದೇನು ಮುಂದೆ ಹೇಳ್ಬೇಕು”.

ಶಂಕರನಿಗೆ ಒಂದು ಕಡೆ ಖುಷಿಯಾದಂತಾಯಿತು ಕಾರಣ ನಾಡು ಅಂದರೆ ದ್ವೇಷವನ್ನೇ ಮಾಡುತ್ತಿದ್ದ ಜನ ಈಗ ನಾಡಿಗೆ ಬರುವ ಯೋಚನೆ ಮಾಡುತ್ತಿದ್ದಾರೆ. ಜೊತೆಗೆ ಅವನು ಅಂದು ಕ್ಯಾಂಪಿನಲ್ಲಿ ನೋಡಿದ ದೇಹ ಮಮತಾ ನಾಯ್ಕರಳ ತಂಗಿಯದು ಆದ್ದರಿಂದ ಆನಂದನ ಮನೆಯಲ್ಲಿ ನೋಡಿದ ನ್ಯೂಸ್ ಪೇಪರ್  ನಲ್ಲಿರುವ ಮಮತಾ ನಾಯ್ಕರಳ  ಮುಖಕ್ಕೆ ಹೋಲಿಕೆಯಾಗಿತ್ತು ಅಷ್ಟೇ ವಿನಹ ದೆವ್ವ-ಭೂತದ್ದಲ್ಲ ಎಂಬುದರ ಸ್ಪಷ್ಟತೆ ಶಂಕರನಿಗೆ ಮತ್ತು ಆನಂದನಿಗೆ  ದೊರೆಯಿತು.

ಒಂದು ಕ್ಷಣ ಕಣ್ಣು ಮುಚ್ಚಿ ಎಲ್ಲ ಅವಲೋಕಿಸಿದ ಶಂಕರ, ಶಿಂಗಾನಾಯ್ಕರನನ್ನು ಕೇಳಿದ “ಆ ಎನ್‍ಜಿಒ ದ  ಸಾರಾ, ಆ ಹುಡುಗಿ ಏನ್ ಕೆಲಸ ಮಾಡ್ತಾರೆ ಅಲ್ಲಿ  ಉಳ್ಕೊಂಡು? ” ಈ ಪ್ರಶ್ನೆ ಮತ್ತು ಮಮತಾ ನಾಯ್ಕರಳ ತಂಗಿಯ ಸಾವಿನ ಸುದ್ದಿ ಶಂಕರನ ಯೋಚನೆಗಳಿಗೆ ಮಹತ್ವದ ತಿರುವು ನೀಡಿದ್ದು ಸತ್ಯ.

ಶಿಂಗಾನಾಯ್ಕರ ಕೈ ಮುಗಿಯುತ್ತಾ ಸಾರಾಳನ್ನು ನೆನೆಸಿಕೊಂಡ “ಆ ಮಹಾತಾಯಿಂದಾನೆ ಇನ್ನು ಒಂದು ಹೆಣ್ಮಗ ಕಾಣೆಯಾಗಿಲ್ಲ ಸಾರು, ನಮ್ಮ ಹೆಂಗಸ್ರು ತಂಗಿನೇ ಲಾಸ್ಟು.. ಅದಾದ್ಮೇಲೆ ಪ್ರತಿ ಅಮಾವಾಸ್ಯೆ ಮತ್ತೆ ಹುಣ್ಣಿಮೆಗೆ ನಮ್ಮೂರು ಕೆಂಚಯ್ಯ ಮತ್ತು ಆ ತಾಯಿ ಸೇರ್ಕೊಂಡು ನಮ್ಮ ಹಾಡಿಯ ಕೊನೆಯಲ್ಲಿರೋ ಪಿಲೇಕಮ್ಮ ದೇವಸ್ಥಾನಕ್ಕೆ ಹೋಮ ಮಾಡ್ತಾ ಅವ್ರೆ ಸಾರು. ಕೆಂಚಯ್ಯ ಪೂಜೆಗೆ ಯಾರಾದ್ರೂ ಒಂದು ಹೆಂಗಸು ಇರ್ಬೇಕು ಅಂತ ಹೇಳೋವ್ನೆ ಸಾರು. ನಮ್ಮೂರ್ನಾಗೆ ಯಾರು ಹೆಂಗಸ್ರು ಧೈರ್ಯ ಮಾಡಿಲ್ಲ ಸಾರು.. ಅದಿಕ್ಕೆ ಈ ತಾಯೀನೇ ಹೋಗಿ ಕೆಂಚಯ್ಯನ್ ಜೊತೆ ಪೂಜೆ ಮುಗಿಸ್ಕೊಂಡು ಬರೋದು. ಅದಿಕ್ಕೆ ಆ ಮಹಾ ತಾಯಿನೇ ಇಲ್ಲಿ ಹದಿನೈದು ದಿನಕ್ಕೊಂದು ಸಲಾ ಇಲ್ಲಿ ಬಂದು ಉಳ್ಕೊಳೋದು ಸಾರು. ಕಳೆದ ಐದು ವರ್ಷದಿಂದಾನು ಈ ತರ ತೊಂದ್ರೆ ಆದಾಗ ಅವರು ಇದೆ ತರ ಪೂಜೆ ಮಾಡಿ ನಮ್ಮುನ್ನ ಬದುಕಿಸೋವ್ರೆ”.

ಶಿಂಗಾನಾಯ್ಕರನಿಗೆ ಹೊರಡಲು  ಹೇಳಿ ಆನಂದನೊಡನೆ ಮತ್ತೆ ಚರ್ಚೆಗಿಳಿದ. ಈಗ ಶಂಕರನಿಗೆ ಒಂದಕ್ಕೊಂದು ಗೆರೆಗಳು ಕೂಡಲು ಶುರುವಾದವು . ಒಂದೊಂದನ್ನೇ ಎಳೆ-ಎಳೆಯಾಗಿ ಯೋಚಿಸಲು ಶುರು ಮಾಡಿದ. ಸಾರಾ ಅಂದು ಕ್ಯಾಂಪಿಗೆ ಹೋಗುವಾಗ ಅಷ್ಟೇನೂ ಹೆದರಿರಲಿಲ್ಲ. ಅಂದು ಅವನು ಕಂಡಿದ್ದು ಮಮತಾ ನಾಯ್ಕರಳ ಭೂತವನ್ನಲ್ಲ. ಅಷ್ಟೆಲ್ಲ ಆದರೂ ಅಂದು ಸಾರಾ ನಿದ್ದೆ ಗೆ ಜಾರಿದ್ದನ್ನು ನೆನೆದ.

ಪ್ರತಿ ಬಾರಿ ಅಲ್ಲಿ ಹೆಂಗಸರು ಉಳಿದಾಗ ವಾಪಸಾದ ನಿದರ್ಶನಗಳಿರಲಿಲ್ಲ. ಆದರೂ ಸಾರಾ ಸುರಕ್ಷಿತವಾಗಿ ವಾಪಸಾಗಿದ್ದಳು. ದೆವ್ವವೇ ಆಗಿದ್ದರೆ ರಿವಾಲ್ವರ್ ಗೆ ಯಾಕೆ ಹೆದರುತ್ತದೆ ಅಂದರೆ ಅಂದು ಅವನು ಹಿಡಿದ ರಿವಾಲ್ವರ್ ಉಪಯೋಗಕ್ಕೆ ಬಂದಿದೆ. ಶಂಕರನಿಗೂ ಎರಡು ಬಾರಿ ಇವರನ್ನು ಯಾರೋ ಗಮನಿಸುತ್ತಿರುವುದರ ಅರಿವಾಗಿತ್ತು. ಅಲ್ಲಿ ಗಮನಿಸುತ್ತಿದವರಿಗೆ ಸಾರಾಳ ಬಗ್ಗೆ ತಿಳಿದಿರುವ ಎಲ್ಲ ಸಾಧ್ಯತೆಗಳಿವೆ.

ಆದ್ದರಿಂದಲೇ ಸಾರಾಳನ್ನು ಅಪಹರಿಸುವ ಕೃತ್ಯ ಎಸಗಿಲ್ಲ. ಜೊತೆಗೆ ಶಂಕರನು ಎಷ್ಟೇ ಹೆದರಿದ್ದರು ರಿವಾಲ್ವರ್ ಹಿಡಿದು ಗಟ್ಟಿತನ ಪ್ರದರ್ಶಿಸಿದ್ದುದು ಎಲ್ಲರು ಬೆಳಿಗ್ಗೆ ಸುರಕ್ಷಿತವಾಗಿ ವಾಪಸಾಗಲು ಸಾಧ್ಯವಾಗಿರಬಹುದು. ಇದಕ್ಕೆ ಮುಂಚೆ ಶಂಕರನಿಗೆ ಸಾರಾ ಮತ್ತು ಕೆಂಚಯ್ಯನ ಪೂಜೆಯ ಬಗ್ಗೆ ತಿಳಿದಿದ್ದರೂ ಸಾರಾಳ ಮೇಲೆ ಅನುಮಾನ ಪಡುತ್ತಿರಲಿಲ್ಲವೇನೋ ಆದರೆ ಮಮತಾ ನಾಯ್ಕರಳ ತಂಗಿಯ ಸಾವು ಇವರು ಕ್ಯಾಂಪಿಗೆ ಹೋದ ದಿನವೇ ನಡೆದು ಅವನು ನೋಡಿದ ದೇಹ ಅವಳದೇ ಆಗಿದ್ದರಿಂದ ಅದು ಅವನು ನೋಡಿದ್ದು ದೆವ್ವ ಅಲ್ಲವೆಂದು ಖಚಿತ ಪಡಿಸಿಕೊಂಡ ಮೇಲೆ ಸಾರಾಳ ಚಟುವಟಿಕೆಯನ್ನು ಗಮನಿಸಬೇಕೆನ್ನಿಸಿತ್ತು.

ಹಾಗೆಯೇ ನೆನೆಸಿಕೊಳ್ಳುತ್ತಿದ್ದವನಿಗೆ ಅಂದು ಕಂಡ ಪ್ರಾಣಿಯ ಕಣ್ಣುಗಳು ನೆನಪಾದವು “ಒಹ್ ಅದು ಪ್ರಾಣಿಯಲ್ಲ ದೂರದಲ್ಲಿದ್ದ ಯಾವುದೋ ವಾಹನ” ಎಂದು ಬಾಯಿಂದ ಮಾತುಗಳು ಒದರಿದ. ಇಷ್ಟು ವರ್ಷ ಯಾಕೆ ಯಾವ ಅಧಿಕಾರಿಗಳು ಇದರ ಬಗ್ಗೆ ಹೆಚ್ಚು ಗಮನ ಹರಿಸಿಲ್ಲವೆಂದು ಯೋಚಿಸಿದಾಗ ನೆನಪಾದದ್ದು ಇವನಿಗೆ ಆದ ರೀತಿಯೇ ಅವರಿಗೂ ದೆವ್ವದ ಅನುಭವಗಳಾಗಿರಬೇಕು. ಅದರಲ್ಲೂ ಇವನ ಹಿಂದೆ ಇದ್ದ ಅಧಿಕಾರಿ ರಮೇಶ ಜಿಗಜಿಣಗಿಯನ್ನು ನೆನೆದ.

ರಮೇಶ್ ಜಿಗಜಿಣಗಿ ದೆವ್ವ-ದೇವರು ಎರಡನ್ನು ಅತಿ ಹೆಚ್ಚಾಗಿ ನಂಬಿದ ಮನುಷ್ಯ. ಇದೆಲ್ಲವೂ ಸೇರಿ ಐದಾರು ವರ್ಷ ಇಲ್ಲಿ ಏನೇನೋ ಕಥೆಗಳು ಹುಟ್ಟಿಕೊಂಡಿರುವುದು ಕಾಕತಾಳೀಯವೆನಿಸಿತು. ಮತ್ತೆ ನಿನ್ನೆ ಭೇಟಿಯಾಗಿದ್ದ ರುಬಿಕಾಳನ್ನು ನೆನೆದು ಯೋಚಿಸಿದ, ಅವಳಿಗೆ ಅಂತಹ ಅವಸರವೇನಿತ್ತು ನನ್ನ ಜೊತೆ ದೇಹ ಹಂಚಿ ಅನುಮತಿ ಪಡೆಯುವಷ್ಟು ಅವಸರ. ಅವಳು ನೆನಪಾದೊಡನೆ ರಾತ್ರಿ ನಡೆದಿದ್ದು ನೆನೆಸಿಕೊಂಡು ತಾನೇದಾರು ತಪ್ಪು ಮಾಡಿದೆನಾ ಎನಿಸಿತು.

ಆದರೆ ಅವನಿಗೆ ಅವಳ ಆತುರತೆ ಮತ್ತು ಸತ್ಯವನ್ನು ಅರಿಯುವುದಕ್ಕೆ ಅವಳ ಜೊತೆ ಮುಂದುವರಿಯದೆ ಬೇರೆ ದಾರಿ ಇರಲಿಲ್ಲ. ಸಂಜೆ ಐದಾಗಿದ್ದರಬೇಕು ದಮ್ಮನಕಟ್ಟೆ ಕ್ರಾಸ್ನಲ್ಲಿ ಚಹಾ ಕುಡಿಯಲೆಂದು ಶಂಕರ ಮತ್ತು ಆನಂದ ಜೀಪಿನಲ್ಲಿ ತೆರಳಿದರು. ದೂರದಲ್ಲಿ ವೀರಣ್ಣನವರು ನಡೆದು ಬರುತ್ತಿರುವುದು ಕಾಣಿಸಿತು. ಶಂಕರ ಹತ್ತಿರಕ್ಕೆ ಹೋಗಿ ಜೀಪು ನಿಲ್ಲಿಸಿದ. ವೀರಣ್ಣ ಎಂದಿನಂತೆ ಉದ್ದದ ಸಲ್ಯೂಟ್  ಮಾಡಿದರು.

ಶಂಕರ ನುಡಿದ “ಏನ್ರಿ ವಾಪಸ್ ಹೊರಟಿದ್ದೀರಿ. ನಿಮ್ಮ ಸ್ನೇಹಿತರೆಲ್ಲಿ?” ವೀರಣ್ಣನವರು ಉತ್ತರಿಸಿದರು “ಅವರು ಇಲ್ಲಿಯೇ ಉಳಿಯುತ್ತಿದ್ದಾರೆ ಸರ್. ನಾನು ಬೆಂಗಳೂರಿಗೆ ಹೊರಡುತ್ತಿದ್ದೇನೆ ಕೊನೆಯ ಬಸ್ ಒಂದಿದೆಯಲ್ಲ ಅದಕ್ಕೆ. ಅವರು ನನ್ನನ್ನು ಇಲ್ಲಿಗೆ ಕರೆ ತಂದು ಬಿಟ್ಟು ಹೋದರು. ನಾನು ಆ ದಿನದ ಮಳೆಯ ನಂತರ ಎಂದು ಉಳಿದವನಲ್ಲ, ಬೆಳಗ್ಗೆ ಬಂದವನೇ ಕೆಲಸ ಮುಗಿಸಿ ಬೆಂಗಳೂರಿಗೆ ವಾಪಸಾಗುವನೇ. ಸಾರಾ ಮೇಡಂ ಮಾತ್ರ ಉಳಿಯುತ್ತಿದ್ದಿದು” .

ಈ ದಿನವನ್ನು ನೆನೆದು  ಹುಣ್ಣಿಮೆ ಎಂದು ಅರಿವಾಯಿತು ಅಂದರೆ ಸಾರಾ ಮತ್ತೆ ರುಬಿಕಾ ಅಲ್ಲಿಯೇ ಉಳಿಯಲಿದ್ದಾರೆ. ಅಂದರೆ ಸದ್ಯದಲ್ಲೇ ಏನೋ ದೊಡ್ಡ ಕೆಲಸ ಕಾಡಿನಲ್ಲಿ ನಡೆಯಲಿದೆಯಾ, ಏನದು ? ಏನಾಗುತ್ತಿರಬಹುದೆಂದು ಯೋಚಿಸತೊಡಗಿದ. ವೀರಣ್ಣನವರಿಗೆ ಇದರಲ್ಲಿ ಪಾಲು ಇದೆಯಾ? ಚಹಾ ಮುಗಿಸಿದ ನಂತರ ಆನಂದ ಮತ್ತು ಶಂಕರ ಇಂದು ಮತ್ತೆ ಕ್ಯಾಂಪಿಗೆ ಹೋಗುವ ಬದಲು ಸಾರಾ ಮತ್ತು ರುಬಿಕಾರನ್ನು ಫಾಲೋ ಮಾಡಿ ನೋಡೋಣ ಎಂಬ ತೀರ್ಮಾನಕ್ಕೆ ಬಂದಿದ್ದರು.

ಸ್ವಲ್ಪ ಹೆಚ್ಚು ಕಡಿಮೆಯಾದರೂ ಶಂಕರ, ಆನಂದ ಮತ್ತು ತಮ್ಮಯ್ಯನ  ಜೀವಕ್ಕೆ ಅಪಾಯವಿದ್ದುದು ಹೊಸ ವಿಚಾರವೇನಲ್ಲ. ತಮ್ಮಯ್ಯನಿಗಿಂತ ಗೊತ್ತಿದ್ದ ಕಾಡು ಬೇರೆಯವರಿಗೆ ಗೊತ್ತಿರಲಿಲ್ಲ. ಆದರೆ, ರಾತ್ರಿಯಾದರೆ ಆಸಾಮಿಗೆ ಸಾರಾಯಿ ಇರಲೇಬೇಕು ಎನ್ನುವುದಷ್ಟೆ ಗೋಳು. ಆದರೆ, ಸಾಹೇಬರು ಹೇಳಿದ ಮೇಲೆ ಸಾರಾಯಿಯು ಇಲ್ಲ.. ನಿದ್ದೆಯು ಇಲ್ಲ.. ಎನ್ನುವುದು ತಮ್ಮಯ್ಯನಿಗೂ ಗೊತ್ತಿರುವ ವಿಚಾರವೇ.

ವೀರಣ್ಣನವರು ಬಸ್ ಹತ್ತುವವರೆಗೂ ಅಲ್ಲಿಯೇ ನಿಂತು ನಂತರ ಹಾಡಿಯ ಹಾದಿ ಹಿಡಿದರು. ತಮ್ಮಯ್ಯನ ಅನುಭವದಿಂದ ಕಾಡಿನ ರಹಸ್ಯ ದಾರಿ ಹಿಡಿದು ನೇರವಾಗಿ ಪಿಲೇಕಮ್ಮ ದೇವಸ್ಥಾನ ತಲುಪಿದ್ದರು. ಜೀಪನ್ನು ಯಾರಿಗೂ ಕಾಣದಂತೆ ನಿಲ್ಲಿಸಿದ್ದು ತಮ್ಮಯ್ಯನ ಚಾಣಾಕ್ಷತನ. ಸ್ವಲ್ಪ ದೂರದಲ್ಲಿ ಮೂವರು ಅವಿತು ಕುಳಿತು ಸಾರಾ ಮತ್ತು ಕೆಂಚಯ್ಯನಿಗೆ ದೇವಸ್ಥಾನಕ್ಕೆ ಪೂಜೆಗೆ ಬರುವುದನ್ನ ಕಾಯುತ್ತ ಕುಳಿತರು.

ಅಲ್ಲಿ ಕುಳಿತು ಎರಡು ಘಂಟೆಯಾದರು ಯಾವುದೇ ಸದ್ದಾಗಿರಲಿಲ್ಲ. ದೂರದಲ್ಲಿ ಎರಡು ಬೆಳಕುಗಳು ಇವರ ಕಡೆ ಬರುತ್ತಿರುವುದು ಕಾಣಿಸಿತು. ಅದು ಬೆಳಕಲ್ಲ ಕಣ್ಣುಗಳು, ಸ್ವಲ್ಪ ಹತ್ತಿರವಾದ ಮೇಲೆ ತಮ್ಮಯ್ಯ ಒದರಿದ “ಚಿರತೆ ಕಣ್ರೀ! ಥೂ ಹೋಗ ಅವ್ನವ್ನ”. ತೀರಾ ಹತ್ತಿರಕ್ಕೆ ಬಂದರೆ ಮಾತ್ರ ತೊಂದರೆ, ಇವರು ಅವಿತಿದ್ದ ಜಾಗವನ್ನು ಬದಲಿಸಬೇಕಾಗಿ ಬರಬಹುದು.

ಬಹಳ ಹತ್ತಿರದವರೆಗೂ ಬಂದ  ಚಿರತೆ  ಇವರನ್ನು ನೋಡಿ ಓಡಿ  ಹೋಯಿತು. ಕಾರಣ ಚಿರತೆಗಳು ಮ್ಯಾನ್ ಈಟರ್ ಗಳಾಗಿಲ್ಲವೆಂದರೆ ಮನುಷ್ಯನೆಂದರೆ ಅವುಗಳಿಗೆ ಅಲರ್ಜಿ, ಮನುಷ್ಯನಿಗಿಂತಲೂ ಹೆಚ್ಚು ನಾಚಿಕೆ ಸ್ವಭಾವ ಚಿರತೆಗಳಿಗೆ. ಮನುಷ್ಯನನ್ನ ನೋಡಿದ ಕ್ಷಣವೇ ಮರೆಯಾಗುವುದು ಅವುಗಳ ಸ್ವಭಾವ. ಆಗ ನಿಧಾನವಾಗಿ ಜೀಪಿನ ಸದ್ದು ಕೇಳಿಸಿ ಶಂಕರನ ಕಿವಿ ನಿಮಿರತೊಡಗಿತು. ದೇವಸ್ಥಾನದತ್ತಿರವರೆಗೂ ಬಂದ  ಜೀಪು ನಿಂತು ತಣ್ಣಗಾಯಿತು.

ಸಾರಾ, ಕೆಂಚಯ್ಯ ಮುಂದೆ ಇಳಿದಿದ್ದು ಕಾಣಿಸಿತು. ಹಿಂದೆಯೂ ಯಾರೋ ಇದ್ದಾರೆ. ಬಲಿ ಕೊಡಲು ಯಾವುದೋ ಹೆಂಗಸನ್ನೇನಾದರೂ ಹೊತ್ತು ತಂದಿದ್ದಾರೆಯೇ?. ಶಂಕರನಿಗೆ  ಸ್ಪಷ್ಟವಾಗಿ ಅದು ರುಬಿಕಾಳೆಂದು ಕಂಡಾಗ ಉದ್ಗರಿಸಿದ “ಒಹ್  ಇವತ್ತು ರಾತ್ರಿ ಬಹಳ ದೊಡ್ಡದಾಗಲಿದೆ”. ಕೆಂಚಯ್ಯ ದೇವಸ್ಥಾನದ ಹತ್ತಿರದವರೆಗೂ ಹೋಗಿ ಘಂಟೆಯನ್ನು ಬಾರಿಸಿದ. ಯಾವುದೇ ಪೂಜೆ-ಪುನಸ್ಕಾರಗಳನ್ನೇನು ಮಾಡಲಿಲ್ಲ.

ಘಂಟೆಯ ಸದ್ದು  ಊರಿನವರೆಗೆ ಕೇಳಿಸಿದರೆ ಸಾಕು, ಏನೋ  ನಡೆಯುತ್ತಿದೆ ಎಂದೆನಿಸದರೆ ಸಾಕು ಅನ್ನುವಂತಿತ್ತು ಅವನು ಮಾಡಿದ ಕೆಲಸ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಘಂಟೆಯನ್ನು ಬಾರಿಸಿ ಜೀಪನ್ನು ಹತ್ತಿದ. ಪಿಲೇಕಮ್ಮ ದೇವಸ್ಥಾನದ ಹಿಂದಿನಿಂದ ದಕ್ಷಿಣಕ್ಕೆ ದಾರಿಯನ್ನು ಹಿಡಿದ ಅವರ ಜೀಪು ನಿಧಾನಕ್ಕೆ ಚಲಿಸತೊಡಗಿತು.  ತಮ್ಮಯ್ಯ ಕುಳಿತಲ್ಲೇ ದಾರಿಯನ್ನು ಅಂದಾಜಿಸತೊಡಗಿದ.

ಎರಡು ಕಿಲೋಮೀಟರ್ ಹೋಗಿರಬೇಕು ಇವನು ಜೀಪನ್ನು ಚಲಾಯಿಸಿ ಸ್ವಲ್ಪ ಮುನ್ನಡೆಸಿದ. ಎತ್ತರ ಪ್ರದೇಶ ಸಿಕ್ಕಿ ತನ್ನ ಜೀಪನ್ನು ನಿಲ್ಲಿಸಿ ಗಾಡಿಯನ್ನು ತಣ್ಣಗೆ ಮಾಡಿಕೊಂಡ. ಹೀಗೆ ಮಾಡುತ್ತಾ ಅವರಿಗೆ ತಿಳಿಯದೆ ಅವರ ಜೀಪನ್ನು ಹಿಂಬಾಲಿಸಿ ಸುಮಾರು ಇಪ್ಪತೈದು ಕಿಲೋಮೀಟರ್ ವರೆಗೂ ಕಾಡಿನ ಒಳಗೆ ನಡೆದಿದ್ದರು.

ನಂತರ ಸಿಕ್ಕಿದ್ದು ಹುಲ್ಲುಗಾವಲಿನ ಇಳಿಜಾರು ಪ್ರದೇಶ ಅಲ್ಲಿ ಇವರನ್ನು ಫಾಲೋ ಮಾಡುವುದು ಕಷ್ಟವೆನಿಸಿ ಗಾಡಿಯನ್ನು ಗೊತ್ತಾಗದ ಹಾಗೆ ದೂರದಲ್ಲೆ ನಿಲ್ಲಿಸಿದ. ಮುಂದೆ ಇವರ ಕಾವಲುಗಾರರು ಇದ್ದು ಇವರ ಜೀಪನ್ನು ಸುಲಭವಾಗಿ ಪತ್ತೆ  ಹಚ್ಚಿ ಬಿಡಬಹುದಾದುದರಿಂದ ಅಲ್ಲಿಂದ ನಡೆಯುವುದು ಅವಶ್ಯಕವೆನಿಸಿತು. ಮೂವರು ಇಳಿದು ಹುಲ್ಲುಗಾವಲಿನಲ್ಲಿ ನಡೆಯುತ್ತಾ ಜೀಪು ಹೋದ ಕಡೆ ಕತ್ತಲಿನಲ್ಲಿ ನಡೆಯುತ್ತಾ ಹೋದರು.

ಅಲ್ಲಿಂದ ಮೂರು  ಕಿಲೋಮೀಟರ್ ನಡೆದಿರಬೇಕು ದೂರದಲ್ಲೊಂದು ಬಂಗ್ಲೋ ಬೆಳಕಿನಲ್ಲಿ ಅರಮನೆಯಂತೆ ಕಾಣುತ್ತಿತ್ತು. ಬಹಳ ಇಳಿಜಾರಿರದೆ, ಸಮತಟ್ಟಾದ ಪ್ರದೇಶದಿಂದ ನೋಡಿದರೆ ಈ ಜಾಗವೇ ಕಾಣ ಸಿಗುವುದಿಲ್ಲ. ಆ ಜಾಗ ಏನು ಎಂದು ಇವರಿಗೆ ಅರಿವಾಗಲಿಲ್ಲ. ಕಾರಣ, ಶಂಕರ ಇಷ್ಟು ಒಳಗೆ ಅದರಲ್ಲೂ ನಾಗರಹೊಳೆಯ ಕೇರಳದ ಕಾಡಿನ ಬಾರ್ಡರ್  ಕಡೆ  ಬಂದೇ ಇರಲಿಲ್ಲ.

ಅಲ್ಲಿ ಬಹಳ ಜೀಪುಗಳು ಬಂದು ನಿಂತಿದ್ದವು. ಹತ್ತಾರು ಜನ ಅಲ್ಲಿ ನಿಂತು ಏನೇನೋ ಮಾತನಾಡಿಕೊಳ್ಳುತ್ತಿದ್ದುದು ಅವರಿದ್ದಲ್ಲಿಗೆ ಕೇಳಿಸುತ್ತಿರಲಿಲ್ಲ. ಯಾರೋ ಹುಟ್ಟಿಸಿದ್ದ ದೆವ್ವದ ಭಯಕ್ಕೆ ದಾರಿಯಲ್ಲೇ ಇದ್ದ ಆ ಆಂಟಿ ಪೋಚಿಂಗ್ ಕ್ಯಾಂಪಿನಿಂದ ಆಚೆ ಯಾರು ಬರಲು ಸಾಧ್ಯವಿರಲಿಲ್ಲ. ಶಂಕರನಂತಹ ಒಬ್ಬ ಅನುಮಾನಾಸ್ಪದ ಆಫೀಸರ್ ನ ಅದೃಷ್ಟದ ಮೇರೆಗೆ ಶಿಂಗಾನಾಯ್ಕರನೇ ಖುದ್ದು ಬಂದು ತನ್ನ ಹೆಂಗಸಿನ ತಂಗಿಯು ಕಾಣೆಯಾಗಿದ್ದನ್ನು ತಿಳಿಸಿದಾಗ ಎಲ್ಲವು ಕೂಡಿ ಈ ಜಾಗಕ್ಕೆ ಅವರನ್ನು ಕರೆತರುವಂತೆ ಮಾಡಿತ್ತು.

ನಡೆಯುವುದು ಬೇಡವೆಂದು ತೀರ್ಮಾನಿಸಿ ಸ್ವಲ್ಪ ದೂರದವರೆಗೂ ತೆವಳಿ ಅಲ್ಲಿಯೇ ಇದ್ದ ಕೆಲವು ಮರಗಳ ಹಿಂದೆ ಅವಿತು ನಿಂತು ಕೇಳಿಸಿಕೊಳ್ಳತೊಡಗಿದರು. ಗಂಡಸು, ಹೆಂಗಸು ಎಲ್ಲ ಸೇರಿದಂತೆ ಒಟ್ಟು ಇಪ್ಪತ್ತು ಜನರಾದರೂ ಅಲ್ಲಿ ಇದ್ದಿದ್ದು ವಿಶೇಷ. ಸಾರಾ ಮತ್ತು ಕೆಂಚಯ್ಯ ಕಾಣಿಸುತ್ತಿದ್ದಾರೆ. ಕೆಂಚಯ್ಯ ಪ್ಯಾಂಟು ಧರಿಸಿದ್ದಾನೆ ವೇಷವೇ ಬದಲಾಗಿ ಹೋಗಿದೆ.

ಇನ್ನು ಮಿಕ್ಕ ಜನರು ಯಾರು ಎಂಬುದು ಆನಂದನಿಗಾಗಲಿ, ಶಂಕರನಿಗಾಗಲಿ ತಿಳಿಯಲಿಲ್ಲ. ಆದರೆ ಕರ್ನಾಟಕದ ಮೂಲೆ-ಮೂಲೆಯ ಕಾಡುಗಳ ಮಾತುಗಳು ಸ್ಪಷ್ಟವಾಗಿ ಕೇಳಿ ಬರುತ್ತಿದ್ದವು. ಗೋವಾದಲ್ಲಿ ನಡೆಯುವ ಸನ್ ಬರ್ನ್ ಹಬ್ಬಕ್ಕೆ ಏನನ್ನೋ ಸಾಗಿಸುವ ಮಾತಾಗುತ್ತಿದ್ದುದು ಕೇಳಿಸುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಕೆಲ ಕೆಲಸಗಾರರು ಬಂದು ಅಲ್ಲಿಯೇ ಇದ್ದ ಸೋಲಾರ್ ಬತ್ತಿಗಳನ್ನು ಹೊತ್ತಿಸಿದರು ಆಗ ಸುತ್ತ-ಮುತ್ತ ನೂರು ಮೀಟರ್ ವರೆಗೂ ಸ್ಪಷ್ಟವಾಗಿ ಕಾಣಿಸತೊಡಗಿತು.

ಚಿತ್ರಕೃಪೆ: ಜಮುನ ಎಂ.ಬಿ.

ಈ ಕಾಲದಲ್ಲಿ  ಸೋಲಾರ್ ಅದು ಇಷ್ಟು ಚೆಂದವಾಗಿ ಮಾಡಿರಲು ಬಹಳಷ್ಟು  ಹಣ ಇದ್ದಿರಬೇಕು ಎಂದುಕೊಂಡ ಶಂಕರ.  ಇವರೆಲ್ಲ ನಿಂತಿರುವುದು ಐಷಾರಾಮಿ  ಬಂಗ್ಲೊ ಮುಂದಿನ ಲಾನಿನಲ್ಲಿ. ಇಡೀ ಅಂತರಸಂತೆ ಕಾಡಿನ ಪೂರ್ಣ ಇಂಚಾರ್ಜ್ ಶಂಕರ,  ನೋಡಿದರೆ ನೆಲದಲ್ಲಿ ತೆವಳುತ್ತ ಒದ್ದಾಡುತ್ತಿದ್ದಾನೆ. ಇವನದೇ   ರೇಂಜ್ ನಲ್ಲಿ ಐಷಾರಾಮಿ ಬಂಗ್ಲೊ, ಮಿಂಚುವ ಕಾರುಗಳು, ಹೈ ಪ್ರೊಫೈಲ್ ಲೇಡಿಸ್ ಕಂಡ ಶಂಕರನಿಗೆ ಬೇರೆಯೇ ಪ್ರಪಂಚಕ್ಕೆ ಬಂದಂತಾಗಿತ್ತು.

ತಮ್ಮಯ್ಯನಂತೂ ಬಾಯಿ ಮುಚ್ಚದೇ ನೋಡುತ್ತಿದ್ದ. ಆನಂದನಂತೂ ಪತ್ರಿಕೆಯಲ್ಲಿ ಹೆಡ್ ಲೈನ್ ಏನು ಬರೆಯುವುದು ಎಂದು ಒಳಗೊಳಗೆ ಏನನ್ನೋ ಕಂಡು ಹಿಡಿದ ಮಹತ್ಸಾಧನೆಯಿಂದ ಬೀಗುತ್ತಿದ್ದ. ಸ್ವಲ್ಪ ದೂರದಲ್ಲಿ ಗದ್ದೆಗಳಲ್ಲಿ ಏನೋ ಬೆಳೆಯಿದೆ..  ದಿಟ್ಟಿಸಿ ನೋಡಿದ ತಮ್ಮಯ್ಯ ಕೂಗಿದ “ಗಾಂಜಾ!” ಶಂಕರ ಅವನ ಬಾಯನ್ನು ಅದುಮಿದ.

ಮತ್ತೆರಡು ನಿಮಿಷದ ನಂತರ ಸೀರೆಯನ್ನುಟ್ಟ ಹೆಂಗಸೊಬ್ಬರು ಧಾವಿಸಿದರು. ಆಗ ಎಲ್ಲರು ಸರಿದು ಅವರಿಗೆ ಜಾಗ ಮಾಡಿಕೊಟ್ಟಾಗ ಶಂಕರನಿಗೆ ಇವರೆಲ್ಲರ ಬಾಸ್ ಆ ಹೆಂಗಸೇ ಎಂದು ಖಚಿತಪಟ್ಟಿತು. ಆ ಹೆಂಗಸಿನ ಮುಖ ಇನ್ನು ಕಂಡಿರಲಿಲ್ಲ. ಆದರೆ, ಅವಳು ನಡೆದ ಠೀವಿ ಮಾತ್ರ ಎದ್ದು ಕಾಣುತ್ತಿತ್ತು. ಲೇಡಿ ಬಾಸ್ ! ಯಾರದು ಮುಖ ಸ್ಪಷ್ಟವಾಗಿ ಕಾಣುತ್ತಿಲ್ಲ ಕಾರಣ ಇವರು ಆಕೆಯ ಬೆನ್ನಿನ ಕಡೆಗಿದ್ದಾರೆ. ಸೀರೆ ಉಟ್ಟಿದ್ದಾಕೆ ಮುಂದೆ ಹೋಗಿ ಈ ಕಡೆ ತಿರುಗಿದರು ಮುಖ ಸ್ಪಷ್ಟವಾಗಿ ಕಾಣಿಸತೊಡಗಿತು. ಶಂಕರ ನಿಧಾನವಾಗಿ ಉಸಿರು ಬಿಡುತ್ತಾ “ರುಬಿಕಾ ” ಎಂದೇಳಿದ.

ಆನಂದ ಪ್ರೆಸ್ ಕ್ಯಾಮಾರವೊಂದನ್ನು ಜೇಬಿಗಿಳಿಸಿಕೊಂಡು ಬಂದಿದ್ದ. ಫ್ಲಾಷ್ ಬರದ, ಸದ್ದು ಮಾಡದ ಆ ಕ್ಯಾಮರಾದಿಂದ  ಚಿತ್ರಗಳನ್ನು ತೆಗೆಯುವುದರಲ್ಲಿ ಆನಂದ ಬಿಸಿಯಾಗಿದ್ದ. ಹೀಗೆ ನೋಡು ನೋಡುತ್ತಿದ್ದಂತೆ ರುಬಿಕಾ ಇವರ ಕಡೆ ತಿರುಗಿ ಎತ್ತರಕ್ಕೆ ತಲೆ ಎತ್ತಿ ಇವರನ್ನೇ ದುರುಗುಟ್ಟಿ ನೋಡತೊಡಗಿದಳು. ಶಂಕರನಿಗೆ ಜಂಗಾಬಲ ಉಡುಗಿ ಹೋದಂತಾಯ್ತು.

ನಿನ್ನೆ ರುಬಿಕಾಳ ಕೋಮಲ ಮೃದು ಎದೆಯಲ್ಲಿ ತಲೆ ಇಟ್ಟು ಮಲಗಿದ್ದವನಿಗೆ ಇಂದು ರುಬಿಕಾಳ ಆ ನೋಟ ಚಡ್ಡಿಯಲ್ಲಿ ನೀರಿಳಿಸಿತ್ತು. ಹಿಂದೆ ತಿರುಗಿ ನೋಡಿದ ಯಾರು ಇರಲಿಲ್ಲ. ಅವಳಿಗೆ ಈ ಮೂವರು ಕಾಣಿಸಲು  ಸಾಧ್ಯವಿಲ್ಲ. ಆದರೆ ಇವರಿಗೆ ಅವಳು ಕಾಣಬಹುದು ಕಾರಣ ಇವರು ಕಡು ಕತ್ತಲಿನಲ್ಲಿ ನಿಂತಿದ್ದಾರೆ. ಅವಳು ಬೆಳಕಿನಲ್ಲಿ ನಿಂತಿದ್ದಾಳೆ ಆದರೂ ಅವಳೇಕೆ ಇವರತ್ತ ನೋಡಿದಳು? ಶಂಕರನಿಗೆ ಅನುಮಾನದ ಅಲೆಗಳು ಸಮುದ್ರದ ಅಲೆಗಳಿಗಿಂತ ಜೋರಾಗಿ ಬಂದು ಮನಸ್ಸನ್ನು ಅಪ್ಪಳಿಸಿದವು. ಸ್ವಲ್ಪ ಸಮಯದ ನಂತರ ರುಬಿಕಾ ಬೇರೆಡೆ ತಿರುಗಿ ಮಾತಿನಲ್ಲಿ ಮಗ್ನಳಾದಳು. ಅವಳ ನೋಟ ಶಂಕರನನ್ನು ಘಾಸಿಗೊಳಿಸುತ್ತಿತ್ತು.

ಇನ್ನು ಹೆಚ್ಚಿನ ಕಾಲ ಅಲ್ಲಿರುವುದು ಸರಿಯಲ್ಲ ಎಂದೆನಿಸಿ ಕೊಂಚ ದೂರದವರೆಗೂ ವಾಪಸ್ ತೆವಳಿ ನಂತರ  ಮೂರು ಕಿಲೋಮೀಟರ್ ವಾಪಸ್ ನಡೆದು ಈ ಮೂವರು ರಹಸ್ಯ ದಾರಿ ಹಿಡಿದು ಅಂತರಸಂತೆ ಆಫೀಸಿಗೆ ವಾಪಸಾದಾಗ ಬೆಳಗಿನ ಜಾವ ನಾಲ್ಕಾಗಿತ್ತು. ಶಂಕರನಿಗೆ ಯೋಚನೆಗಳು ಹೆಚ್ಚಾಗಿ ಹಾಸಿಗೆ ಮೇಲೆ ತಲೆ ಇಟ್ಟ  ಕ್ಷಣ ಮಾತ್ರಕ್ಕೆ ನಿದ್ರೆ ಇವನ ಮೇಲೆ ಸವಾರಿ ಮಾಡಿತ್ತು. ಬೆಳಿಗ್ಗೆ ಸಮಯ ಒಂಭತ್ತಾಗಿತ್ತು, ಆನಂದ ಶಂಕರನ ಕೊಠಡಿಯ ಬಾಗಿಲು ಬಡಿದ. ಶಂಕರ ಮೈ ಮುರಿಯುತ್ತ ಎದ್ದು ಬಾಗಿಲು ತೆಗೆದು ನೋಡಿದಾಗ ಸಾರಾ ಮತ್ತು ರುಬಿಕಾ ಆಗಲೇ ಹಾಲಿನಲ್ಲಿದ್ದ ಸೋಫಾದಲ್ಲಿ ವಿರಾಜಮಾನರಾಗಿದ್ದರು.

ಶಂಕರ ಹೆಚ್ಚು ಭಾವನಗೆಳನ್ನು ತೋರ್ಪಡಿಸದೆ ಮೇಜಿನ ಮೇಲಿದ್ದ ಕೆಟಲ್ ನಿಂದ ಕಾಫಿಯನ್ನು ಪಿಂಗಾಣಿ ಕಪ್‍ಗೆ ಬಗ್ಗಿಸಿಕೊಂಡು ಸೋಫಾದ ಬಳಿ ನಡೆದ. ಕೆಟಲ್ ಎತ್ತಿ ಸೋಫಾದ ಮುಂದಿದ್ದ ಟಿಪಾಯಿನ ಮೇಲಿರಿಸಿ ಎಲ್ಲರಿಗೂ ಸ್ವಸಹಾಯ ಮಾಡಿಕೊಳ್ಳಲು ಹೇಳಿದ. ಸಾರಾ ಎರಡು ಕಪ್‍ಗೆ ಹಾಕಿ ಒಂದನ್ನು ರುಬಿಕಾಳಿಗೆ ನೀಡಿದಳು.

ಆನಂದ ಒಂದು ಕಪ್‍ನಲ್ಲಿ ತಮ್ಮಯ್ಯನಿಗೂ ಕೊಟ್ಟು ಅವನು ಹೀರುತ್ತಾ ದಿನಪತ್ರಿಕೆ ಓದುವಲ್ಲಿ ಮಗ್ನನಾಗಿದ್ದ.  ಶಂಕರ ರುಬಿಕಾಳನ್ನು ಗಮನಿಸಿದ, ಮುಖದಲ್ಲಿ ಅದೇ ಮೋಹಕ ನಗೆ ಆದರೆ ಮೃದುವಾಗಿದೆ. ನಿನ್ನೆ ನೋಡಿದ ರುಬಿಕಾಳಿಗೂ ಇಂದಿನ ರುಬಿಕಾಳಿಗೂ  ಅಜಗಜಾಂತರ ವ್ಯತ್ಯಾಸವಿದ್ದಿದು ಕಂಡು ಬೆರಗಾದ.  ಇಷ್ಟೊಂದು ಔಪಚಾರಿಕ ಮೌನವನ್ನು ಅಲ್ಲಿ ಇದ್ದ ಎಲ್ಲರೂ ಬಲ್ಲವರಾದರೂ ತೋರಿಸಿಕೊಳ್ಳುವಂತಿರಲಿಲ್ಲ. ಆದ್ದರಿಂದ ರುಬಿಕಾ ಮೆಲ್ಲನೆ ನುಡಿದಳು  “ಗುಡ್ ಮಾರ್ನಿಂಗ್ ಶಂಕರ್ ಸಾರ್, ನಿದ್ದೆ ಇನ್ನು ಮುಗಿದಿಲ್ಲವೆಂದು ತೋರುತ್ತಿದೆ. ತೊಂದರೆಯಾಯಿತೇ ?”.

ಶಂಕರ ಅರ್ಧ ನಗುವಿನಲ್ಲಿ ನುಡಿದ “ಇಟ್ಸ್ ಆಲ್ ರೈಟ್ . ನಿಮ್ಮ ಕೆಲಸ ಹೇಗಾಯ್ತು ?” ಸಾರಾ ಅಡ್ಡ ಮಾತನಾಡಿದಳು “ಎಲ್ಲ ಚೆನ್ನಾಗಾಯ್ತು ಸರ್, ಇಂದು ನಾನು ಹೊರಡುತ್ತಿದ್ದೇನೆ.  ರುಬಿಕಾರಿಗೆ ಇನ್ನು ನಿಮ್ಮಲ್ಲಿ ಕೆಲಸವಿದೆಯಂದರು. ಆದ್ದರಿಂದ ಇಲ್ಲಿಯೇ ಉಳಿಯಲಿದ್ದಾರೆ” ರುಬಿಕಾ ಮಾದಕವಾಗಿ ನುಡಿದಳು “ನನಗೆ ಇನ್ನೆರಡು  ದಿನ ನಿಮ್ಮಲ್ಲಿ ಜಾಗವಿದೆಯೇ ಶಂಕರ್ ?” ಶಂಕರ ರುಬಿಕಾಳನ್ನೇ ಎರಡು ಕ್ಷಣ ನೋಡಿ ತಲೆಯಾಡಿಸಿದ.

(ಮುಂದುವರಿಯುವುದು)

‍ಲೇಖಕರು avadhi

October 15, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: