‘ಪವಿತ್ರ ಆರ್ಥಿಕತೆ’ಯನ್ನು ಸಾರಾಸಗಟಾಗಿ ತಳ್ಳಿ ಹಾಕಬಿಡಬಹುದೇ?

ಪವಿತ್ರ ಆರ್ಥಿಕತೆಗಾಗಿ ಖ್ಯಾತ ರಂಗಕರ್ಮಿ, ದೇಸಿ ಚಳವಳಿಯನ್ನು ಹುಟ್ಟು ಹಾಕಿದ ಪ್ರಸನ್ನ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ‘ಇದೇನಿದು ಪವಿತ್ರ ಆರ್ಥಿಕತೆ?’ ಎನ್ನುವ ಪ್ರಶ್ನೆಗಳೂ ಎದ್ದಿವೆ.

ಈ ಬಗ್ಗೆ ನಾ.ದಿವಾಕರ ಅವರು ಬರೆದಿರುವ ‘ಪ್ರಸನ್ನ ಮತ್ತೊಬ್ಬ ಅಣ್ಣಾ ಹಜಾರೆಯಂತೆ ಕಾಣುತ್ತಾರೆ’ ಎನ್ನುವ ಲೇಖನ ‘ಜುಗಾರಿ ಕ್ರಾಸ್’ ಅಂಕಣದಲ್ಲಿ  ಪ್ರಕಟವಾಗಿತ್ತು.

ಡಿ.ಎಸ್. ರಾಮಸ್ವಾಮಿ ಅವರು  ‘ಪವಿತ್ರ ಆರ್ಥಿಕತೆ’ ಎಂಬ ಅರ್ಥವಿಲ್ಲದ ಪದ  ಎಂದು ವಿಮರ್ಶಿಸಿದ್ದರು.

ಎಲ್ ಸಿ ನಾಗರಾಜ್ ಅವರು ‘ಪವಿತ್ರ ಆರ್ಥಿಕತೆ ಅಂತಾ ಕರೆದುಕೊಂಡಿದ್ದರೆ ತಪ್ಪೇನಿದೆ?’ ಎಂದು ಪ್ರಶ್ನಿಸಿದ್ದರು.

ಇದಕ್ಕೆ ‘ಅವಧಿ’ ಪ್ರತಿಕ್ರಿಯೆಯನ್ನು ಆಹ್ವಾನಿಸಿತ್ತು.

ಇದೀಗ ಮುರಳಿ ಕೃಷ್ಣ ಅವರ ನೋಟ ಇಲ್ಲಿದೆ-

ಮ ಶ್ರೀ ಮುರಳಿಕೃಷ್ಣ

ನಾನು ಪ್ರಸನ್ನ ಅವರ ಉಪವಾಸ ಸತ್ಯಾಗ್ರಹದ ತಾಣ- ಬೆಂಗಳೂರಿನ ಶೇಷಾದ್ರಿಪುರಂನ ವಲ್ಲಭನಿಕೇತನಕ್ಕೆ ಭೇಟಿ ನೀಡಿದಾಗ, ದುಡಿಮೆ ಗೆಲ್ಲಿಸಿ, ಪರಿಸರ ಉಳಿಸಿ, ಸಹಿಷ್ಣುತೆ, ಸಹಕಾರ, ಶ್ರಮಗೌರವ, ದುಡಿಮೆ ನಮ್ಮ ಧರ್ಮ, ಕೆಲಸ ಕೊಡಿ, ಇದೇ ಪವಿತ್ರ ಆರ್ಥಿಕತೆ, ಪವಿತ್ರ ಆರ್ಥಿಕತೆಗೆ ಅವಶ್ಯಕತೆಯೇ ಆಧಾರ, ದುರಾಸೆಯಲ್ಲ, ನಿಸರ್ಗ ರಕ್ಷಣೆ ಎಂಬುದು ಪವಿತ್ರ ಆರ್ಥಿಕತೆ… ಎಂಬಿತ್ಯಾದಿ ಬ್ಯಾನರ್ ಗಳು ಕಂಡು ಬಂದವು. ಅವರು ನಿರಶನವನ್ನು ಶುರುಮಾಡಿ ಐದು ದಿನಗಳಾಗಿದ್ದವು.

ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ, ‘ಅವಧಿ’ಯೂ ಸೇರಿದಂತೆ, ಪ್ರಸನ್ನ ಅವರು ಮಂಡಿಸಿರುವ ಪವಿತ್ರ ಆರ್ಥಿಕತೆ ಕುರಿತಂತೆ ಟೀಕೆಗಳು, ಭಿನ್ನಾಭಿಪ್ರಾಯಗಳು ವ್ಯಕ್ತವಾಗತೊಡಗಿದವು.  ಕೆಲವರಂತೂ ಹುನ್ನಾರಗಳನ್ನೇ ಕಂಡರು! ಇರಲಿ, ಒಂದು ಹೋರಾಟಕ್ಕೆ ಈ ಪರಿಯ ಕ್ಷ ಕಿರಣ ಬೀರುವಿಕೆ ಅವಶ್ಯ.  ಇದು ಮುಂದಾಳತ್ವ ವಹಿಸಿದವರಿಗೆ ಎಚ್ಚರಿಕೆಯ ಘಂಟಾನಾದ!

ಪ್ರಸನ್ನ ಅವರು ತಮ್ಮ ಹೋರಾಟಕ್ಕೆ ಪವಿತ್ರ ಅಥವಾ ಇನ್ಯಾವುದೋ ಪದವನ್ನು ಜೋಡಿಸಿದರೂ, ಅವರು ಎತ್ತಿರುವ ವಿಷಯಗಳನ್ನು ಮತ್ತು ಪ್ರಶ್ನೆಗಳನ್ನು ಸಾರಾಸಗಟಾಗಿ ಉಪೇಕ್ಷಿಸಬಹುದೇ? ಅವುಗಳ ಬಗೆಗೆ ನಮಗೆ ತಕರಾರುಗಳಿರಬಹುದು; ತೀವ್ರ ಅಸಮಾಧಾನಗಳಿರಬಹುದು.  ಆದರೂ ಅವುಗಳನ್ನು ನಿಕಷಕ್ಕೆ ಒಡ್ಡಿ, ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು.

ಯಾವ ಉತ್ಪಾದನಾ ವ್ಯವಸ್ಥೆಯಲ್ಲಿ ಅತ್ಯಂತ ಕಡಿಮೆ ಹೂಡಿಕೆ ಮತ್ತು ಪರ್ಯಾವರಣಕ್ಕೆ ಲುಕ್ಸಾನು ಇರುತ್ತವೆಯೋ ಹಾಗೂ ಅತ್ಯಧಿಕ ಸಂಖ್ಯೆಯಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತದೆಯೋ, ಅಂತಹ ಆರ್ಥಿಕ ವ್ಯವಸ್ಥೆಯನ್ನು ಪವಿತ್ರ ಆರ್ಥಿಕತೆ ಎಂದು ಕರೆಯಲಾಗುತ್ತದೆ.

ಇದರಡಿಯ ಉತ್ಪಾದನಾ ವ್ಯವಸ್ಥೆಯಲ್ಲಿ ಕನಿಷ್ಠ ಶೇ.60ರಷ್ಟು ಮಾನವ ಶ್ರಮ, ಶೇ60ರಷ್ಟು ಸ್ಥಳೀಯ ಕಚ್ಛಾ ವಸ್ತುಗಳು ಮತ್ತು ಶೇ.40ರಷ್ಟು ಯಾಂತ್ರೀಕರಣದ ಬಳಕೆ ಇರುತ್ತವೆ ಎಂಬ ಒಂದು ವಿವರಣೆ ಮಾಧ್ಯಮದಲ್ಲಿ ವರದಿಯಾಗಿದೆ.

ವಿಶ್ವ ಬ್ಯಾಂಕಿನ ಹಿರಿಯ ಉಪಾಧ್ಯಕ್ಷ ಹಾಗೂ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ, ಅರ್ಥಶಾಸ್ತ್ರದ ಕೊಡುಗೆಗಳಿಗಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಜೋಸೆಫ್ ಸ್ಟಿಗ್‍ಲಿಟ್ಸ್ ನೈತಿಕ ದಿವಾಳಿತನ ಎಂಬ ತಮ್ಮ ಒಂದು ಲೇಖನದಲ್ಲಿ, ನಾವು ಸೃಷ್ಟಿಸಿರುವ ಭೌತವಾದ ನಮ್ಮ ನೈತಿಕ ಬದ್ಧತೆಯನ್ನು ಹಿಂದೆ ಹಾಕುತ್ತಿದೆ. ನಾವು ಸಾಧಿಸಿರುವ ಕ್ಷಿಪ್ರ ಅಭಿವೃದ್ಧಿಯು ಪರ್ಯಾವರಣ ಮತ್ತು ಸಾಮಾಜಿಕ ಸುಸ್ಥಿರತೆಗೆ ಪೂರಕವಾಗಿಲ್ಲ.

ನಮ್ಮ ಅವಶ್ಯತೆಗಳಿಗಾಗಿ ನಾವು ಜೊತೆಜೊತೆಯಾಗಿ ಕೆಲಸವನ್ನು ಮಾಡುವುದಿಲ್ಲ. ಸಾಮುದಾಯಿಕ ಆಯಾಮಗಳನ್ನು ಮಾರುಕಟ್ಟೆ ಮೂಲಭೂತವಾದ ಭಗ್ನಗೊಳಿಸಿದೆ. ತಿಳಿವಿರದ, ಸುರಕ್ಷೆಯಿರದ ವ್ಯಕ್ತಿಗಳು ವ್ಯಾಪಕ ಶೋಷಣೆಗೆ ಒಳಗಾಗುತ್ತಿದ್ದಾರೆ. ನಂಬಿಕೆ ಎನ್ನುವುದು ಶಿಥಿಲವಾಗಿದೆ. ಇದು ಬರೀ ವಿತ್ತೀಯ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುವುದಿಲ್ಲ.  ಈ ಬಿರುಕುಗಳನ್ನು ಮುಚ್ಚಲು ಇನ್ನೂ ಸಮಯಾವಕಾಶವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Eco-socialism ಮತ್ತು Eco-marxismನಂತಹ ವಿಚಾರಧಾರೆಗಳು ಕೂಡ ಮೇಲೆ ಪ್ರಸ್ತಾಪಿಸಿರುವ ಕೆಲವು ಚಿಂತನೆಗಳನ್ನು ಒಳಗೊಂಡಿವೆ (ಆದರೆ ಗುರುತಾರ್ಹ ವ್ಯತ್ಯಾಸಗಳೂ ಇವೆ).  ಇಂತಹದ್ದನ್ನು ಒಂದರ್ಥದಲ್ಲಿ ಧ್ವನಿಸುತ್ತಿದೆ ಪವಿತ್ರ ಆರ್ಥಿಕತೆ.

ಜಾಗತೀಕರಣದಡಿ ನವ ಉದಾರ ನೀತಿಗಳು, ನವ ಫ್ಯಾಸಿವಾದ, ನಾಝಿವಾದ, ಮೂಲಭೂತವಾದ, ಕೋಮುವಾದ ಜೊತೆಗೂಡಿ ತಮ್ಮ ಕಬಂಧ ಬಾಹುಗಳನ್ನು ಚಾಚುತ್ತ, ಅಟ್ಟಹಾಸವನ್ನು ಮಾಡುತ್ತಿರುವ ಪ್ರಸ್ತುತ ದಾರುಣ ಸಂದರ್ಭದಲ್ಲಿ ಇವುಗಳ ವಿರುದ್ಧ ತುರ್ತಾಗಿ ಆಗಬೇಕಿರುವುದು ಕಾಮನಬಿಲ್ಲು ಸಮ್ಮಿಶ್ರಣದ ಹೋರಾಟಗಳು.  ಜನಪರ ಸಂಘಟನೆಗಳಲ್ಲಿರುವ ಪ್ರಗತಿಪರರು ಕೂದಲು ಸೀಳುವ ತರ್ಕಗಳನ್ನು, ವಾಗ್ವಿಲಾಸವನ್ನು ಬದಿಗಿಟ್ಟು ಭಿನ್ನ ನಡೆಯ ಬದಲು ಜಂಟಿ ನಡೆಗಳನ್ನು ಹೂಡುವುದು ವರ್ತಮಾನದ ತುರ್ತು.

‍ಲೇಖಕರು avadhi

October 15, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಮ ಶ್ರೀ ಮುರಳಿ ಕೃಷ್ಣ

    ನನ್ನ ಮೇಲಿನ ಬರಹವನ್ನು ಪ್ರಕಟಿಸಿದ್ದಕ್ಕೆ ‘ಅವಧಿ’ ಮತ್ತು ಶ್ರೀ ಮೋಹನ್ ಆವರಿಗೆ ಧನ್ಯವಾದಗಳು..

    ಪ್ರತಿಕ್ರಿಯೆ
  2. Kotresh T A M Kotri

    ನಿಮ್ಮ ಅಭಿಪ್ರಾಯ ಸರಿಯಾಗಿದೆ

    ಪ್ರತಿಕ್ರಿಯೆ
    • ಮ ಶ್ರೀ ಮುರಳಿ ಕೃಷ್ಣ

      ಧನ್ಯವಾದ ಶ್ರೀ ಕೊಟ್ರೇಶ್..

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: