ಅಮರಸುಳ್ಯವು ಇತಿಹಾಸದ ಪುಟದಲ್ಲಿ…

ಕುಶ್ವಂತ್‌ ಕೋಳಿಬೈಲು

ಸುಳ್ಯದಂತಹ ಗ್ರಾಮೀಣ ಪರಿಸರದ ನಡುವೆ ಎದ್ದ ಕೆವಿಜಿ ಕ್ಯಾಂಪಸ್ಸಿನಲ್ಲಿರುವ ವೈದ್ಯಕೀಯ, ಇಂಜಿನಿಯರಿಂಗ್, ಡೆಂಟಲ್ ಇತ್ಯಾದಿ ಕಾಲೇಜುಗಳನ್ನು ಕಣ್ಣು ತುಂಬಾ ನೋಡಿದ ಆಗಿನ ಭಾರತದ ಉಪಪ್ರಧಾನಿಗಳಾಗಿದ್ದ ಲಾಲ್ ಕೃಷ್ಣ ಅಡ್ವಾಣಿಯವರ ಅಭಿಮಾನ ಮತ್ತು ಆನಂದದಿಂದ “ಇಷ್ಟೆಲ್ಲಾ ಸಾಧನೆಯನ್ನು ಒಬ್ಬ ವ್ಯಕ್ತಿಗೆ ತನ್ನ ಜೀವಿತಾವಧಿಯಲ್ಲಿ ಮಾಡಲು ಸಾಧ್ಯವೆ?!” ಎಂದು ವೇದಿಕೆಯಿಂದ ನುಡಿದಿದ್ದರು.

ಅಂದು ಡಿಸಂಬರ್ 26, 2003 ! ಕುರುಂಜಿ ವೆಂಕಟರಮಣ ಗೌಡರ ಅಮೃತಮಹೋತ್ಸವದ ಆಚರಣೆಗೆ ಇಡೀ ಸುಳ್ಯವೇ ಸಿಂಗಾರಗೊಂಡಿತ್ತು. ಈ ಭಗೀರಥ ಪ್ರಯತ್ನವನ್ನು ಮಾಡಿದ್ದ ಎಪ್ಪತ್ತೈದರ ಯುವಕ, ಕೆವಿಜಿಯವರು ಓದಿದ್ದು ಕೇವಲ ಮೂರನೇ ಕ್ಲಾಸು ಮತ್ತು ಕೃಷಿ ಕುಟುಂಬದಿಂದ ಬಂದವರೆಂದರೆ ಅಡ್ವಾನಿ ಸಹಿತರಾಗಿ ಸುಳ್ಯಕ್ಕೆ ಮೊದಲ ಬಾರಿಗೆ ಬಂದ ಯಾರೊಬ್ಬರೂ ನಂಬುತ್ತಿರಲಿಲ್ಲ…

1976ರಲ್ಲಿ ಸುಳ್ಯದಲ್ಲಿ ನೆಹರೂ ಮೆಮೋರಿಯಲ್ ಕಾಲೇಜನ್ನು ಸ್ಥಾಪಿಸಿದಾಗ ಕೆವಿಜಿಯವರಿಗೆ ನಲವತ್ತೆಂಟು ವರ್ಷ. ಮಡಿಕೇರಿ ಮತ್ತು ಪುತ್ತೂರು ನಡುವೆ ಬರುವ ಸುಳ್ಯವೆಂಬ ಊರನ್ನು 1837ರ ಅಮರಸುಳ್ಯ ಹೋರಾಟಕ್ಕೆ ನೆಲೆಯೊದಗಿಸಿದ ಕಾರಣಕ್ಕಾಗಿ ಶಿಕ್ಷೆಯೆಂಬಂತೆ ದೇಶಕ್ಕೆ ಸ್ವಾತಂತ್ರ್ಯ ಬರುವ ತನಕ ಬ್ರಿಟಿಷರು ಸುಳ್ಯವನ್ನು ಅಕ್ಷರಶಃ ಕತ್ತಲಿನಲ್ಲಿ ಇಟ್ಟಿದ್ದರು. ಪಯಶ್ವಿನಿ ತೀರದಲ್ಲಿ ಕೆವಿಜಿಯವರು ಹುಟ್ಟದಿದ್ದರೆ ಸುಳ್ಯ ಇನ್ನೂ ಬಹಳಷ್ಟು ವರ್ಷಗಳ ಕಾಲ ಮಡಿಕೇರಿ ಮತ್ತು ಪುತ್ತೂರಿನ ನಡುವೆ ಬರುವ ಹತ್ತಾರು ಅಂಗಡಿ ಮುಂಗಟ್ಟುಗಳಿರುವ ಸಣ್ಣ ಪಟ್ಟಣವಾಗಿರುತ್ತಿತ್ತು.

ಕೃಷಿ, ವ್ಯಾಪಾರ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಕೆವಿಜಿಯವರು ಅಕಾಡೆಮಿ ಆಫ್ ಲಿಬರಲ್ ಎಡ್ಯುಕೇಷನ್ ಸ್ಥಾಪಿಸಿ ಸಾಲು ಸಾಲು ಶಿಕ್ಷಣ ಸಂಸ್ಥೆಗಳನ್ನು ದಣಿವರಿಯದೆ ಸ್ಥಾಪಿಸುತ್ತಾ ಹೋದರು ಮತ್ತು ಸುಳ್ಯದ ಜನರಿಗೆ ಆಲದ ಮರವಾದರು. ಕೆವಿಜಿ ಶಿಕ್ಷಣ ಸಂಸ್ಥೆಯಿಂದಾಗಿ ಮತ್ತು ಸಂಸ್ಥೆಯ ಸುತ್ತ ಲಕ್ಷಾಂತರ ಜನರು ತಮ್ಮ ಬದುಕನ್ನು ಕಟ್ಟಿಕೊಂಡರು. (ನಾನೂ ಒಬ್ಬ) ನಾನು ಶಾಲಾ ದಿನಗಳಿಂದಲೇ ಕುರುಂಜಿಯವರನ್ನು ಹತ್ತಿರದಿಂದ ನೋಡಿದ್ದೇನೆ‌. ಅವರು ಕ್ರೀಮ್ ಬಣ್ಣದ ಕೋಟನ್ನು ಧರಿಸಿ ಬಿಳಿ ಕಂಟೆಸಾ ಕಾರಿನಲ್ಲಿ ಬಂದರೆಂದರೆ ನಾವು “ಪ್ರೆಸಿಡೆಂಟ್ ತಾತಾ ಬಂದೋ” ಎಂದು ಪುಳಕಿತರಾಗುತ್ತಿದ್ದೆವು.

ತೊಂಬತ್ತರ ದಶಕದ ನಮ್ಮ ಸುಳ್ಯದ ಶಾಲದಿನಗಳಲ್ಲಿ ದೇಶದ ನಾಲ್ಕು ಗಣ್ಯ ವ್ಯಕ್ತಿಗಳ ಹೆಸರಿಸಿ ಎಂದು ಯಾರಾದರು ಹೇಳಿದರೆ ನಮ್ಮ ಬಾಯಿಂದ ಗಾಂಧಿ, ನೆಹರೂ ಬೋಸ್ ಮತ್ತು ಕುರುಂಜಿ ವೆಂಕಟರಮಣ ಗೌಡರು ಎಂಬ ಹೆಸರುಗಳಷ್ಟೇ ಹೊರಬರುತ್ತಿತ್ತು. ಸುಳ್ಯದಲ್ಲಿ ಮೆಡಿಕಲ್ ಕಾಲೇಜನ್ನು ಸ್ಥಾಪಿಸಬೇಕೆಂಬ ಅವರ ಹಠ ಎಷ್ಟು ತೀವ್ರವಾಗಿತ್ತೆಂದರೆ ಅವರ ಪ್ರತಿ ಭಾಷಣದಲ್ಲೂ ಅವರು “ನಾನು ಮಾಡ್ನೆ.. ನಾನು ಮಾಡ್ನೆ” ಎಂದು ದೃಢವಾಗಿ ನುಡಿಯುತ್ತಿದ್ದದ್ದು ನಮಗೆಲ್ಲಾ ಭೀಷ್ಮ ಪ್ರತಿಜ್ಞೆಯಂತೆ ಭಾಸವಾಗುತ್ತಿತ್ತು. ಮೊದಲು ಕಾಂಗ್ರೆಸ್‌ ಜೊತೆಯಲ್ಲಿ ಗುರುತಿಸಿಕೊಂಡು ಚೇರ್ಮನ್ ಆಗಿದ್ದ ಕೆವಿಜಿಯವರು ಸುಳ್ಯದಲ್ಲಿ ಪಕ್ಷ, ಸಿದ್ದಾಂತ, ಜಾತಿ ಎಲ್ಲವನ್ನು ಮೀರಿ ಬೆಳೆದು ಕೊನೆಗೆ ‌ಕಷ್ಟ ಬಂದಾಗ ಪ್ರತಿಯೊಬ್ಬರು ನೆನೆವ “ಸಂಕಟ ಬಂದಾಗ ವೆಂಕಟರಮಣ”ರಾದರು.

ಕೆವಿಜಿಯವರಿಗೆ ತಮಗೆ ಶಿಕ್ಷಣ ಪಡೆಯಲಾಗಲಿಲ್ಲವೆಂಬ ನೋವು ಮತ್ತು ಆ ಸಂಕಷ್ಟ ಇತರರಿಗೆ ಬರಬಾರದೆಂಬ ಹಠ ಎಷ್ಟು ತೀವ್ರವಾಗಿತ್ತೆಂದರೆ ಅವರನ್ನು ಭೇಟಿಯಾಗಲು ವಿವಿಧ ಕ್ಷೇತ್ರದ ಗಣ್ಯರು ನಿತ್ಯ ಬರುತ್ತಿದ್ದರೂ ಅವರು ವಿವಿಐಪಿಗಳಂತೆ ಕಂಡು ಹತ್ತಿರ ಕೂರಿಸಿಕೊಳ್ಳುತ್ತಿದ್ದದ್ದು ರ಼್ಯಾಂಕ್ ಪಡೆದ ಮಕ್ಕಳನ್ನು ಮಾತ್ರ. ಅವರ ಸುತ್ತ ಕೆಲಸ ಮಾಡುತ್ತಿದ್ದ ವಿವಿಧ ಸಂಸ್ಥೆಗಳ ಪ್ರಾಂಶುಪಾಲರು, ವೈದ್ಯರು, ಇಂಜಿನಿಯರುಗಳು, ಪ್ರೊಫೆಸರ್ಗಳಿಂದ ಕಾಲೇಜಿನ ಮಕ್ಕಳು ಕಲಿಯುತ್ತಿದ್ದದ್ದಕ್ಕಿಂತ ಜಾಸ್ತಿ ಕೆವಿಜಿಯವರು ತಮ್ಮ ಸೂಕ್ಷ್ಮ ಗ್ರಹಣಾ ಶಕ್ತಿಯಿಂದ ಗ್ರಹಿಸುತ್ತಾ ಹೋದರು. ಅವರ ಕಟ್ಟಡಗಳಿಗೆ ಅವರೇ ಇಂಜಿನಿಯರಾಗಿದ್ದರು, ಅವರ ಯೋಜನೆಗಳಿಗೆ ಅವರೇ ಆರ್ಥಿಕ ತಜ್ಞರಾಗಿದ್ದರು ಮತ್ತು ಸುಳ್ಯದ ಅಮರಶಿಲ್ಪಿಯಾಗುವುದರ ಜೊತೆಗೆ ಅವರ ಏಳಿಗೆಗೂ ಅವರೇ ಶಿಲ್ಪಿಯಾಗಿದ್ದರು‌.

ಬಹುಶಃ ಕೆವಿಜಿಯವರನ್ನು ನಾನು ಈ ಕಾಲಘಟ್ಟದಲ್ಲಿ ಇಷ್ಟು ನೆನೆಸಿಕೊಳ್ಳಲು ಕಾರಣವೂ ಇದೆ. ಬ್ರಿಟಿಷರ ವಿರುದ್ಧದ ಅಮರ ಸುಳ್ಯ- 1837 ಹೋರಾಟಕ್ಕೆ ನೇತೃತ್ವ ನೀಡಿದ ಕೆದಂಬಾಡಿ ರಾಮೇಗೌಡರ ನೇತೃತ್ವದ ರೈತರ ಸೇನೆಯು ಮಂಗಳೂರಿನ ಬಾವುಟಗುಡ್ಡೆಯಲ್ಲಿದ್ದ ಯುನಿಯನ್ ಜಾಕ್ ಧ್ವಜವನ್ನು ಕಿತ್ತೆಸೆದು ಹದಿಮೂರು ದಿನಗಳ ಕಾಲ ಆಡಳಿತ ಮಾಡಿತ್ತು. ಅದೇ ಬಾವುಟ ಗುಡ್ಡೆಯಲ್ಲಿ ಸ್ಥಾಪನೆಯಾಗಲು ಬರಲಿರುವ ಕೆದಂಬಾಡಿ ರಾಮೇಗೌಡರ ಕಂಚಿನ ಪ್ರತಿಮೆಯನ್ನು ಆಗಸ್ಟ್ 28, ಭಾನುವಾರದ ಸಂಜೆಯಂದು ಮಡಿಕೇರಿಯಲ್ಲಿ ಹುತಾತ್ಮ ಸುಬೆದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆಯ ಸಮಕ್ಷಮದಲ್ಲಿ ನಿಲ್ಲಿಸಿ ನಾಗರೀಕರಿಂದ ಗೌರವ ವಂದನೆಯನ್ನು ನೀಡಲಾಗುತ್ತದೆ. ಮರುದಿನ ಮುಂಜಾನೆ ಸಂಪಾಜೆ ಮೂಲಕ ಸುಳ್ಯವನ್ನು ಪ್ರವೇಶಿಸಲಿರುವ ಕೆದಂಬಾಡಿ ರಾಮೇಗೌಡರ ಪ್ರತಿಮೆಯನ್ನು ಸ್ವಾಗತಿಸುವ ಗಣ್ಯತಿ ಗಣ್ಯರ ಸಾಲಿನಲ್ಲಿ ಜೀವಂತವಾಗಿದ್ದಿದ್ದರೆ ಬಹುಶಃ ಕೆವಿಜಿಯವರೇ ಮುಂಚೂಣಿಯಲ್ಲಿರುತ್ತಿದ್ದರು.

ಕೆವಿಜಿ ಕ್ಯಾಂಪಸ್ಸಿನಲ್ಲಿರುವ ಕೆವಿಜಿಯವರ ಕಂಚಿನ ಪ್ರತಿಮೆಯ ಸಮಕ್ಷಮಲ್ಲಿ ಸುಳ್ಯದ ನಾಗರೀಕರು ಕೆದಂಬಾಡಿ ರಾಮೇಗೌಡರಿಗೆ ಗೌರವವಂದನೆಗಳನ್ನು ಸಲ್ಲಿಸುವುದು ಈ ಸಮಯದಲ್ಲಿ ಬಹಳ ಸಮಂಜಸವೆನಿಸಬಹುದೆಂದು ತೋರುತ್ತದೆ.

1837ರಲ್ಲಿ ಕೆದಂಬಾಡಿ ರಾಮೇಗೌಡರು ತೋರಿದ ನಾಯಕತ್ವದ ಗುಣ ಮತ್ತು ಸಂಘಟನಾ ಶಕ್ತಿಗೆಯಿಂದಾಗಿ ಅಮರಸುಳ್ಯವು ಇತಿಹಾಸದ ಪುಟದಲ್ಲಿ ಶಾಶ್ವತವಾಗಿ ದಾಖಲಾಗಿದ್ದರೆ ವಿಶ್ವ ಭೂಪಟದಲ್ಲಿ ಸುಳ್ಯವನ್ನು ಶಾಶ್ವತವಾಗಿ ಗುರುತಿಸುವಂತೆ ಮಾಡಿರುವುದು ಇದೇ ಕುರುಂಜಿ ವೆಂಕಟರಮಣ ಗೌಡರು. ಆ ಕ್ಯಾಂಪಸ್ ನೋಡಿದರೆ ಬಹುಶಃ ಕೆದಂಬಾಡಿ ರಾಮೇಗೌಡರ ಆತ್ಮವೂ “ಇಷ್ಟೆಲ್ಲಾ ಸಾಧನೆಯನ್ನು ಒಬ್ಬ ವ್ಯಕ್ತಿಗೆ ತನ್ನ ಜೀವಿತಾವಧಿಯಲ್ಲಿ ಮಾಡಲು ಸಾಧ್ಯವೆ?!” ಎಂದು ಹೆಮ್ಮೆ ಪಡಬಹುದು.

‍ಲೇಖಕರು Admin

August 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: