ಆರೋಹ: ಸಂಗೀತಮಯ ನಾಟಕವಲ್ಲ, ಇದು ಸಂಗೀತ-ನಾಟಕ

ಹೇಮಾ ಧ ಖುರ್ಸಾಪೂರ

‘ಆರೋಹ’ ನಾಟಕದ ಕುರಿತಾಗಿ ನಿರ್ದೇಶಕ ಎಸ್ ಸುರೇಂದ್ರನಾಥ್ ಹೇಳಿರುವ ಮಾತು ಸರಿಯಾಗಿದೆ. ಇದು ಸಂಗೀತಮಯ ನಾಟಕವಲ್ಲ: ಇದು ಸಂಗೀತ-ನಾಟಕ ಎಂದು.

ಸಂಗೀತ ನಮ್ಮನ್ನು ವಿಶ್ವ ಸಾಮರಸ್ಯದಲ್ಲಿ ಒಂದಾಗಿಸುತ್ತದೆ. ವಿಶ್ವದ ಜೀವಾಳವಿರುವುದು ಅದರ ಬಹುರೂಪತೆಯಲ್ಲಾದರೂ, ನಾವು ಬದುಕುತ್ತಿರುವುದು: ವಿಶ್ವಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಬಯಸುವ, ಗ್ಲೋಬಲ್ ವಿಲೇಜಿನ ಭಾಗವಾಗಿ ಎಲ್ಲವನ್ನೂ ಏಕರೂಪಗೊಳಿಸುತ್ತಿರುವ ಕಾಲಘಟ್ಟದಲ್ಲಿ. ಆದರೆ, ಭಾರತದಲ್ಲಿ ಭಿನ್ನತೆಯ ಅನನ್ಯತೆ ನಿರಂತರವಾಗಿ ಬದಲಾಗುತ್ತಿರುವ ನೈಸರ್ಗಿಕ ಲಕ್ಷಣಗಳಲ್ಲೂ ಪ್ರತಿಫಲಿಸುತ್ತದೆ – ಹಿಮಾಲಯದಿಂದ ನದಿಗಳವರೆಗೆ, ಕಾಡುಗಳಿಂದ ಮರುಭೂಮಿಗಳವರೆಗೆ, ಪ್ರಸ್ಥಭೂಮಿ-ದ್ವೀಪಗಳಿಂದ ಕರಾವಳಿಯವರೆಗೆ.

ಈ ವೈವಿಧ್ಯತೆ ನಮ್ಮ ಸಂಗೀತ, ಕಲೆ, ನೃತ್ಯ ಪ್ರಕಾರ, ಶಾಸ್ತ್ರೀಯ ಸಂಗೀತದ ಘರಾನಾಗಳು, ಇವೆಲ್ಲವುಗಳ ಜೀವಂತ ಸಂಗಮದಿಂದ ಕೂಡಿದೆ. “ಸಂಗೀತ ಎನ್ನುವುದು ಏಕಕಾಲದಲ್ಲಿ ಅನುಭವವೂ ಹೌದು, ಅನುಭವವನ್ನು ಅಭಿವ್ಯಕ್ತಿಸುವ ಮಾಧ್ಯಮವೂ ಹೌದು,” ಎನ್ನುತ್ತಾನೆ ಸ್ಪೈನರ್. ಪ್ರತಿ ಸಂಸ್ಕೃತಿಗೂ ತನ್ನದೇ ಸಂಗೀತ ಎನ್ನುವುದು ಅದರ ‘ಬೆಳಕಿಂಡಿ!’ ಆ ಕಿಂಡಿಯ ಮೂಲಕ ಇಡೀ ವಿಶ್ವದ ಸಂವೇದನೆಯನ್ನು ಅದು ತನ್ನಲ್ಲಿ ಅರಗಿಸಿಕೊಳ್ಳುತ್ತದೆ.

ಸಂಗೀತ ಅಂತ ಮಾತು ಬಂದಮೇಲೆ: ಸ್ವರ-ಲಯ-ತಾಳ-ಆರೋಹಣ-ಅವರೋಹಣ… ಎಲ್ಲವೂ ಬರುತ್ತವೆ. ‘ಸಂಗೀತ’ದಲ್ಲಿನ ‘ಸಂ’ಗೆ ಚೆನ್ನಾಗಿ ಒಗ್ಗೂಡಿಸಿರುವುದು ಎನ್ನುವ ಅರ್ಥವೂ ಇದೆ. ಗೀತ, ವಾದ್ಯ, ನೃತ್ಯ (ನಟನೆ) ಒಗ್ಗೂಡಿ ಬೆರೆತಾಗ ಮಾತ್ರ ಸಂಗೀತ. ಈ ಮೂರೂ ಅಂಶಗಳು ಬೇರ್ಪಟ್ಟು ಬೆಳೆದಿರುವುದು ಬೇರೆ ವಿಷಯ. ಇವು ಏಕತ್ರ ರೂಢಿಯಲ್ಲಿರುವುದು ಈಗ ರಂಗಭೂಮಿಯಲ್ಲಿ ಮಾತ್ರ.

ಬೆಂಗಳೂರಿನಲ್ಲಿದ್ದ ಕೆಲವರು ಆಗಸ್ಟ್ 23, 24ರಂದು ‘ರಂಗ ಶಂಕರ’ದಲ್ಲಿ ಈ ಮೂರೂ ಬೆರೆತ ಸಂಗೀತದ ‘ಆರೋಹ’ವನ್ನು Experience ಮಾಡಿದರು. ‘ಭೂಮಿಜಾ’ ಮೂಲಕ.

ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿರುವ ಮಲ್ಟಿಫ್ಲೆಕ್ಸ್‌ಗಳು Come Experience the Magic of Darkness ಎಂದು ಕೈಬೀಸಿ ಕರೆಯುತ್ತಿರುವ ಹೊತ್ತಲ್ಲಿ ಅದಕ್ಕೂ ಮೀರಿದ Magic of Darknessನ Experience ‘ರಂಗ ಶಂಕರ’ದಲ್ಲಿ ಘಟಿಸಿತು. ನಾಟಕ ಶುರುವಾದ ತಕ್ಷಣ ಎರಡೂವರೆ-ಮೂರು ನಿಮಿಷ ಸಂಪೂರ್ಣ ಕತ್ತಲಲ್ಲಿ ಆ ವಯಲಿನ್‌ ನುಡಿಸಾಣಿಕೆ ಕೇಳೋದಿದೆಲ್ಲ ಅದು ಮಾತು ಮರೆತ ಗಳಿಗೆ. ಸಂಗೀತ ಆಲಿಸುತ್ತಾ (ಅದೂ ವಯಲಿನ್‌…) ನಮ್ಮೊಳಗೆ ಏನಾಯಿತು, ಏನಾಗುತ್ತಿದೆ ಎಂದು ಹೇಳುವುದು ಬಹಳ ಕಷ್ಟ. ಸಾವಿರಾರು ವರ್ಷಗಳಿಂದಲೂ ಈ ಅವ್ಯಕ್ತತೆಯನ್ನು ಭೇದಿಸಿ ವ್ಯಕ್ತವಾಗಿಸಲು ಆಗಿಲ್ಲ.

ಆರೋಹ ನಾಟಕ ನಿಜಕ್ಕೂ ಒಂದು ಅದ್ಭುತ ಅನುಭವ. ನನ್ನ ಹಿಂದಿನ ತಲೆಮಾರು ‘ಘಾಸೀರಾಮ್ ಕೊತ್ವಾಲ್’ ‘ಸಂಗೀತಕ’ದ (ಪುಣೆಯಲ್ಲಿ ನಡೆದ ಮರಾಠಿ ನಾಟಕದ ಪ್ರದರ್ಶನವು ಭಾರತದಲ್ಲೇ ಅತಿ ಮುಖ್ಯವಾದ ಸಂಗೀತಕ ಪ್ರಯೋಗವೆಂದು ಹೆಸರಾಗಿದೆ) ಬಗ್ಗೆ ಮಾತುಗಳನ್ನು ಆಡುವುದನ್ನು ಕೇಳಿದಾಗೆಲ್ಲ ನಾನು ಅಯ್ಯೋ ನನಗೊಂದು ಇಂಥಹ ಅವಕಾಶ ಸಿಗಲಿಲ್ಲವಲ್ಲ ಎಂದು ಮರುಗುತ್ತಿದ್ದೆ. ನಿನ್ನೆಗೆ ಅದಕ್ಕೊಂದು ಅಲ್ಪವಿರಾಮ ಬಿತ್ತು!

ನಾವು ರಾಗಗಳಿಗೆ, ವಾದನಗಳಿಗೆ ಸ್ವಂತ ವ್ಯಕ್ತಿತ್ವ ಆರೋಪಿಸುವವರು. ಅಂಥದ್ದರಲ್ಲಿ ಶಾಸ್ತ್ರೀಯ ಸಂಗೀತ ಒಲಿಸಿಕೊಂಡವರು, ಒಲಿಸಿಕೊಳ್ಳಲು ಹೋದವರು, ಅವರ ಅವಿರತ ಶ್ರಮ-ಸಾಧನೆ, ಸಾಧನೆಯ ನಂತರದ ಅಹಂಕಾರ, ಆ ಅಹಂಕಾರದ ಕಾರಣಕ್ಕಾಗಿ ಒಲಿದ ಸಂಗೀತ ಮುನಿದು ಸಂಗೀತದಲ್ಲೆ ಸುಟ್ಟುಕೊಂಡವರು, ಬಿಟ್ಟುಕೊಟ್ಟವರ ಅಸಂಖ್ಯಾತ ಕತೆಗಳಿವೆ ಭಾರತೀಯ ಸಂಗೀತ ಪರಂಪರೆಯಲ್ಲಿ. ದೇವರಿಗೆ ಸವಾಲ್ ಹಾಕುವ ಮೂಲಕ ಸಂಗೀತದ ಸಾಧನೆಯ ಉತ್ತುಂಗಕ್ಕೇರುವುದು ಸಾಧ್ಯವಿಲ್ಲ ಅದು ಸಾಧ್ಯವಿರುವುದು ನಿವೇದನೆಯಿಂದ ಮಾತ್ರ. ಇಡೀ ನಾಟಕ ಇದನ್ನೇ ‘ನುಡಿಸುತ್ತದೆ!’

‘ಆರೋಹ’ದಲ್ಲಿ ನನಗೆ ಒಂದು ಚಿಕ್ಕ ಅಂಶ ತುಂಬಾ ಇಷ್ಟವಾಯ್ತು. ಇನ್ನೇನು ವಯಲಿನ್‌ಗೆ ತಬಲಾ ಸಾಥ್ ಶುರುವಾಗುತ್ತದೆ ಎನ್ನುವಾಗ ಆ ಸಾಥ್ ನೀಡುವವರು ದಾಯಾಂ ಎತ್ತಿ ಕಿವಿ ಪಕ್ಕ ಹಿಡಿದು, ಬಾರಿಸಿ, ಹೊಮ್ಮಿದ ತಗ್ಗಿನ ದನಿಯನ್ನು ಕೇಳಿ ಹಾಂ ಸರಿಯಾಗಿದೆ ಎಂದು ಗಮನಿಸಿಕೊಳ್ಳುತ್ತಾ ಇದ್ದಿದ್ದು.

ಭಾರತೀಯ ಸಂಗೀತದಲ್ಲಿ ಎದ್ದು ಕಾಣುವ ಗುಣ ಆವರ್ತನಶೀಲತೆ. ಅಂದರೆ ಹೊರಟಲ್ಲಿಗೇ ಬಂದು ಮುಟ್ಟುವುದು. ಇದು ಸಂಗೀತದಲ್ಲಿ ಮಾತ್ರವಲ್ಲ, ಜನನ ಮರಣದ ನಿರಂತರ ಚಕ್ರ, ಋತುಗಳ ಪುನರಾವರ್ತನೆಯಲ್ಲೂ ಇವೆ. ಪಲ್ಲವಿಯಿಂದ ಆರಂಭಿಸುವ ನಾವು ಅನುಪಲ್ಲವಿ, ಚರಣ ಮುಗಿಸಿ ಮತ್ತೆ ಪಲ್ಲವಿಗೆ ಮರಳುತ್ತೇವೆ. ಹೊರಟಲ್ಲಿಗೇ ಬಂದು ತಲುಪುತ್ತೇವೆ… ಮುಗಿಸುವುದಿಲ್ಲ! ನಾಟಕ, ಸಂಗೀತ ಕಛೇರಿಗಳನ್ನು ಮುಗಿಸುವುದು ಕೂಡ ಅಂದಿನ ಒಟ್ಟು ಮೊತ್ತವಾಗಿ. ಇಂದಿನ ಮುಕ್ತಾಯವೇ ನಾಳಿನ ಆರಂಭ. ನಿಮಗೆ ಈ ನಾಟಕದ ಪ್ರದರ್ಶನ ಇರುವುದು ಗೊತ್ತಾದರೆ ತಪ್ಪದೇ ನೋಡಿ. ನೋಡಬೇಡಿ, ಕೇಳಿ!

ಒಂದು ಹೊಸ ಪ್ರಯೋಗ ನಮಗದು ಹಿಡಿಸುವುದು ಬೇರೆ. ಅದಕ್ಕೆ ಅನೇಕ ಮಿತಿಗಳಿರುವುದು ಬೇರೆ.

ರಂಗಭೂಮಿಗೆ ಹಲವು ಉದ್ದೇಶಗಳಿರುತ್ತವೆ. ಅಲ್ಲಿ ಪ್ರದರ್ಶನದ ಜೊತೆಗಿದ್ದು ನಾಟಕವನ್ನು ಕಟ್ಟುವ ಸಂಗೀತಕ್ಕೆ ಪ್ರೇಕ್ಷಕರಿಗೆ ಏನನ್ನೋ ಹೇಳುವ – ದಾಟಿಸುವ – ಸಂವಹಿಸುವ ಉದ್ದೇಶವಿರುತ್ತದೆ. ‘ಆರೋಹ’ದಲ್ಲಿ ಈ ಉದ್ದೇಶ ಸ್ವಲ್ಪ ಗೊಂದಲಕ್ಕೆ ಒಳಗಾದ ಹಾಗಿದೆ. ಸಂಗೀತ ಅಮೂರ್ತ. ಆದರೆ, ಅಮೂರ್ತವನ್ನ ಮೂರ್ತಗೊಳಿಸಲು ವ್ಯಕ್ತಿಗಳು ರಂಗಮಂಚದ ಮೇಲೆ ಮಾತುಗಳನ್ನ ಆಡಿ ಹೊರಟು ಹೋಗುವುದು ಇಡೀ ನಾಟಕದಲ್ಲಿ ತುಸು ಕಿರಿಕಿರಿ ಉಂಟುಮಾಡಿದ ವಿಷಯ.

ಇದು ಹೊಸಪ್ರಯೋಗ ಅಂತ ಹೇಳುತ್ತಿರುವುದರಿಂದ ಈ ರೀತಿಯ ಇನ್ನರ್ ವಾಯ್ಸ್ ಗಳನ್ನು ಮಂಚದ ಮೇಲೆ ವ್ಯಕ್ತಿಯೊಬ್ಬರು ಬಂದು ಆಡಿ ಹೋಗುವುದಕ್ಕಿಂತ, ಎಸ್ ಜಿ ವಾಸುದೇವ್ ಅವರ ಕಲೆಯ ಮೇಲೆ ಚೆಂದದ ಬೆಳಕಿನ ವಿನ್ಯಾಸ ಮಾಡಿ, ಬರೀ ‘ದನಿ’ ಕೇಳಿಸಿದ್ದರೆ… ತಾಳ ತಂತಿಗಳು ಶ್ರೋತೃಗಳ ಅಂತರ್ಮಿಡಿತ ಲಯಗಳನ್ನು ಹಿಡಿದಿಟ್ಟು, ಅಮೂರ್ತದೊಂದಿಗೆ ಬೆಸೆದುಕೊಳ್ಳುವ ಅತ್ಯದ್ಭುತ ಕ್ರಿಯೆ ಜರಗಿರೋದು.

ನಾಟಕ ನಡೆಯುವಾಗ ವೇದಿಕೆ ಮತ್ತು ಶ್ರೋತೃಗಳ ನಡುವೆ ಒಂದು ಅಂತರ ಇರುತ್ತದೆ. ಒಬ್ಬ ನುರಿತ ನಟ ಮಾತ್ರ ಈ ಅಂತರವನ್ನು ಪಕ್ಕಕ್ಕೆ ಸರಿಸಿ ಶ್ರೋತೃಗಳನ್ನು ನಾಟಕದ ಭಾಗಮಾಡಿಕೊಳ್ಳಲು ಸಾಧ್ಯ. ಶ್ರೀನಿವಾಸ್ ಪ್ರಭು ಅಂತಹ ಒಬ್ಬ ನುರಿತ ಕಲಾವಿದರು. ಮಗುವಿನ ನಗು ಎಲ್ಲಿಂದ ಬಂತು ಎಂದು ಕೇಳುವಾಗ ನೋಡುಗರ ತುಟಿಯ ಮೇಲೆ ನಗು ತಂದು, ಚಿಟ್ಟೆಗಳನ್ನ ಹಾರಿ ಬಿಡುವಾಗ ಎಲ್ಲರೊಳಗೊಂದು ಹಾಡಾರಾಡುವ ಭಾವ ಹುಟ್ಟಿಸಿ, ದೇವರೊಂದಿಗೆ ಜಗಳವಾಡುವಾಗ, ಪ್ರೇಕ್ಷಕರೂ ಹೋಗಿ ಇನ್ನೇನು ಅವರ ಪರವಾಗಿ ದೇವರೊಂದಿಗೆ ಜಗಳ ಆಡಿಯೇ ಬಿಡಬೇಕು ಎನ್ನುವಾಗ, ಜಗಳ ಸಂಕೀರ್ತನದಂತೆ ಕೊನೆಗೊಳ್ಳುವುದು ಅವರ ದನಿಯಿಂದಾಗಿಯೇ.

ನಾಟಕದುದ್ದಕ್ಕೂ ಅವರ ದನಿ ಸಾಗುವ ರೀತಿಯೇ ವಿಶಿಷ್ಟ. ದನಿಯನ್ನು ದುಡಿಸಿಕೊಳ್ಳುವ ಅಪರೂಪದ ಕಲೆ ಅವರಿಗೆ ದಕ್ಕಿದೆ. ಅವರ ದನಿ ‘ಆರೋಹ’ದ ಮೂಲದ್ರವ್ಯ ಮತ್ತು ಇಡೀ ನಾಟಕ ಅವರ ದನಿಯ ಮಾಂತ್ರಿಕತೆಯಲ್ಲಿ ಮಿಂದೇಳುತ್ತದೆ

ರಂಗವಿನ್ಯಾಸದ ಬಗ್ಗೆ: ಬೆಳಕು ಸರಳರೇಖೆಯಲ್ಲಿ ಸಾಗಿದರೆ, ದನಿ ಚಲಿಸುವುದು ವಲಯಾಕಾರದಲ್ಲಿ. ಸಜ್ಜಿಕೆಯಲ್ಲಿ ಹಿಂದಿನ ಅಡ್ಡಸಾಲು ಅರ್ಧ ಚಂದ್ರಾಕೃತಿಯಲ್ಲಿ, ಅಕ್ಕಪಕ್ಕದ ನೇರ ಉದ್ದಸಾಲುಗಳು X ಆಕಾರದಲ್ಲಿ ಅಥವಾ ಮಧ್ಯದಲ್ಲಿ ಎರಡು ಅಡ್ಡ ಸರಳರೇಖೆಯಲ್ಲಿ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ವಯಲಿನ್‌ನ ಗುಂಪು ನುಡಿಸಾಣಿಕೆಯಲ್ಲಿನ ಅನನ್ಯತೆಯೆಂದರೆ ಅದರ ಅಂತರವಿಲ್ಲದ ನಿರಂತರತೆ.

ತಂತಿಯ ಅಡ್ಡಗಲಕ್ಕೆ ಕಮಾನು (Bow) ಆಡಿಸಿದಾಗ ಕಂಪನಗಳು ಬ್ರಿಜ್‌ನಿಂದ ವಯಲಿನ್‌ನ ವಕ್ರ ನಡುಭಾಗಕ್ಕೆ ಸಂವಹಿಸಿ, ರಾಗಕ್ಕೆ ಅನುಸಾರವಾಗಿ ಕಂಪನಗಳು ಹರಡಿಕೊಳ್ಳುತ್ತವೆ. ಕಂಪನ ಒಂದೆಡೆಯಿಂದ ಇನ್ನೊಂದೆಡೆ ಹರಿಯುವಾಗ ಎಲ್ಲಿ ತಗ್ಗಬೇಕು ಎಲ್ಲಿ ವಿಸ್ತಾರಗೊಳ್ಳಬೇಕು ಎಂಬುದು ತಂತಿಮೀಟುವ ಬೆರಳು, ಮೊಣಕೈ ಆಡುವ ಕೌಶಲವನ್ನು ಅವಲಂಬಿಸಿದೆ. ಈ ಕೌಶಲ ಪ್ರೇಕ್ಷಕರಿಗೆ ವೇದ್ಯವಾಗುವುದು ವಯಲಿನ್‌ನ ಗುಂಪು ನುಡಿಸಾಣಿಕೆಯ ಸದಸ್ಯರು X ಆಕಾರದಲ್ಲಿ ಅಥವಾ ಅಡ್ಡ ಸರಳರೇಖೆಯಲ್ಲಿ ಕುಳಿತಾಗ ಮಾತ್ರ.

ವಯಲಿನ್‌ ನುಡಿಸಾಣಿಕೆ ಮತ್ತು ಎಸ್ ಜಿ ವಾಸುದೇವ ಅವರ ಕಲೆ ನನಗಿಷ್ಟ ಎನ್ನುವ ಕಾರಣಕ್ಕಾಗಿ ಎರಡು ವಿಷಯ ಹೇಳಿ ಇದನ್ನು ಮುಗಿಸುತ್ತೇನೆ.

ವಯಲಿನ್‌ ಬಗ್ಗೆ: 18ನೆಯ ಶತಮಾನದಲ್ಲಿ ವಯಲಿನ್‌ ಪರಿಷ್ಕೃತ ವಾದ್ಯವಾಗಿ ಕಾಣಿಸಿಕೊಂಡಿತು. ಪಶ್ಚಿಮದ ಸಂಗೀತ ಪ್ರಪಂಚದಲ್ಲಿ ಇದೊಂದು ದೊಡ್ಡ ಘಟನೆ. ಫಿಡಲ್ ಎಂಬ ಬಹಳ ಸರಳ ವಾದ್ಯದಿಂದ ಇಟಲಿಯವರು ವಿಕಾಸಗೊಳಿಸಿದ ವಯಲಿನ್‌ ವಿನ್ಯಾಸ ಸಂಗೀತ ಪ್ರಪಂಚದ ಒಂದು ಅದ್ಭುತ. ಅಂದಿನಿಂದಲೂ ದೇಶ ದೇಶಗಳ ಸಂಗೀತ ಮಂದಿ ಅದರ ಗಾತ್ರ, ಆಕಾರ ಇತ್ಯಾದಿಗಳಲ್ಲಿ ಮಾರ್ಪಾಡು ತರಲು ಏನೇನೆಲ್ಲ ಮಾಡಿಯೂ ವಿಫಲರಾದರು. ಹೀಗೆ ವಯಲಿನ್‌ ಕುಶಲ ಕಲಾವಿದರ, ಇನ್ನೂ ಸುಧಾರಣೆ ಸಾಧ್ಯವೇ ಆಗದ, ಒಂದು ಪರಿಪೂರ್ಣ ಸೃಷ್ಟಿ. ಇದು ಭಾರತೀಯ ಸಂಗೀತದೊಳಗೆ ಸೊಸೆಯಂತೆ ಬಂದು ಮಗಳಂತೆ ಒಗ್ಗಿಕೊಂಡಿದ್ದು ಇನ್ನೊಂದು ಬೇರೆ ಕತೆ!

ಎಸ್ ಜಿ ವಾಸುದೇವ ಅವರ ಬಗ್ಗೆ: ಎಸ್ ಜಿ ವಾಸುದೇವ ಅವರು ಎ ಕೆ ರಾಮಾನುಜನ್ ಅವರ ಜಾನಪದ ಕತೆ She Speaking to Tree ಕತೆಯಾಧಾರಿತ ಸರಣಿ ವರ್ಣಚಿತ್ರಗಳನ್ನು ರಚಿಸಿದ್ದಾರೆ. ವಾಸುದೇವ್ ಅವರು ಹೆಚ್ಚಾಗಿ ಬಳಸುವುದು ತೈಲವರ್ಣಗಳನ್ನ. ತೈಲವರ್ಣಗಳು ಬೇಗ ಒಣಗುವುದಿಲ್ಲ. ಹಾಗಾಗಿ ಬಣ್ಣಗಳು ಒಣಗುವ ಮೊದಲು ಚಿತ್ರಕಲೆ ಮುಗಿಸಲು ಸಾಧ್ಯವಿಲ್ಲ. ಒಂದು ಚಿತ್ರ ಬಿಡಿಸಲು ಶುರುಮಾಡಿದರೆ 24ರಿಂದ 48 ಗಂಟೆಗಳು ಅವರು ಕ್ಯಾನ್ವಾಸಿನಲ್ಲಿ ಮುಳುಗಿ ಹೋಗಿರುತ್ತಾರೆ. ಈ ಸರಣಿಯನ್ನು ಅವರು ‘ಥಿಯೇಟರ್ ಆಫ್ ಲೈಫ್’ ಎಂದು ಕರೆದಿದ್ದಾರೆ. ರಂಗಭೂಮಿಗೇ ಬಂದು ಮಾತು ನಿಲ್ಲುವ ಮೂಲಕ ಒಂದು ಸುತ್ತು ಪೂರ್ತಿಯಾಯಿತು. Amazing ಅಲ್ವ!

‍ಲೇಖಕರು Admin

August 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: