ಜ್ಯೋತ್ಸ್ನಾ ಕಾಮತ…. ಒಂದು ನೆನಪು…

ಸರೋಜಿನಿ ಪಡಸಲಗಿ

ಜ್ಯೋತ್ಸ್ನಾ ಮೇಡಂ ನೀವೆಂದೆಂದಿಗೂ ನೆನಪಿನಂಗಳದಲ್ಲಿ…

ಈ ಹೊತ್ತು ಅಂದರೆ 24 ಆಗಸ್ಟ್ ಬೆಳಿಗ್ಗೆ ಏಳುತ್ತಿದ್ದಂತೆಯೇ ಜ್ಯೋತ್ಸ್ನಾ ಕಾಮತ ಆಂಟಿ ಮಾತು ಯಾಕೋ ಪಟ್ಟನೇ ನೆನಪಾಯ್ತು; “ಇನ್ನೊಮ್ಮೆ ನಿಮಗೆ ಸವಡಾದಾಗ ಬಂದ ಹೋಗ್ರಿ ಸರೋಜಿನಿ” ಅಂತ ಅಂದಿದ್ರು ನಾ ಈಗ ಎರಡೂವರೆ ತಿಂಗಳ ಹಿಂದೆ ಅವರ ಮನೆಗೆ ಹೋದಾಗ. ನಂದೂ ಸ್ವಾರ್ಥ ಅದರಲ್ಲಿತ್ತು: ಒಂದು ಅವರ ಆರೋಗ್ಯದ ಬಗ್ಗೆ ಕೇಳಿ ಭೇಟಿಯಾಗಿ ಬರೋ ಇರಾದೆ; ಎರಡು ಬಹುರೂಪಿ ಪ್ರಕಾಶನದ ನನ್ನ ಪುಸ್ತಕ “ಡಾಕ್ಟರ್ ಹೆಂಡತಿ” ಅವರಿಗೆ ಕೊಟ್ಟು ನಮಸ್ಕರಿಸೋದು; ಇನ್ನೊಂದು ಅವರ ಪುಸ್ತಕ “ಕಲಕತ್ತಾ ದಿನಗಳು” ತಗೊಂಡು ಬರಲಿಕ್ಕೆ. ಅದನ್ನೋದುವ ಅದಮ್ಯ ಆಸೆ ನಂಗೆ. ಅದೂ ಅಲ್ಲದೆ ಜ್ಯೋತ್ಸ್ನಾ ಆಂಟಿ ಹೇಳಿದ್ರು ನಂಗೆ.

“ಸರೋಜಿನಿ ನಿನಗಂತ ಆ ಪುಸ್ತಕ ತಗದಿಟ್ಟೀನಿ. ನೀನೇ ಬಂದ ತಗೊಂಡು ಹೋಗ್ತಿಯಾ? ನನಗೀಗ ಪೋಸ್ಟ್ ಮಾಡ್ಲಿಕ್ಕ ಆಗೋದಿಲ್ಲ” ಅಂದಿದ್ರು.

ಅದೆಲ್ಲಾ ಈಗ ನೆನಪಾಗಿ ಯಾಕೋ ಒಂಥರಾ ಕಳವಳ, ತಳಮಳ ಆತು ಹೋಗಲಿಕ್ಕಾಗವಲ್ಲತು ಅಂತ. ಅದನ್ನೇ ಮೆಲುಕು ಹಾಕೋವಾಗ ನನ್ನ ಸ್ನೇಹಿತರೊಬ್ಬರ ಮೆಸೇಜ್ ಬಂತು;” ಸರೋಜಿನಿ, ಜ್ಯೋತ್ಸ್ನಾ ಕಾಮತ ಹೋದ್ರಂತೆ” ಅಂತ. ಒಮ್ಮೆಲೆ ಗರ ಬಡಿದಂತಾಗಿ ಸುಮ್ಮನೆ ಕೂತೆ. ಮತ್ತೆ ಆ ಕೊನೇ ಭೇಟಿಯ ನೆನಪು ಕಣ್ಣಲ್ಲಿ…

“ಸರೋಜಿನಿ ಸ್ವಲ್ಪ ಹೆಲ್ತ್ ಏರುಪೇರು ಆಗಲಿಕ್ಹತ್ತೇದ್ರಿ” ಅಂದಿದ್ರು ಅಂದು. ಅದೂ ತಮ್ಮ ಎಂದಿನ ನಗೆ ಮಲ್ಲಿಗೆಯ ಅರಳು ಮುಖದ ತುಂಬ ಹಗುರ ನಗು ಸೂಸುತ್ತಲೆ. ಆ ಮಹಾನ್ ಚೇತನದ ಮುಂದೆ ನನ್ನ ಕುಬ್ಜತೆಯ ಅರಿವಾಯ್ತು ಪಟ್ಟನೇ. ಆ ನೋವಿನಲ್ಲೂ ಬದುಕನ್ನು ಎದುರಿಸುತ್ತಿರುವ ಅವರ ಈ ಬಗೆ, ಆ ನಗೆ ನನ್ನ ಕಣ್ಣ ತೇವ ಮಾಡ್ತು. ನನ್ನ ಹಾಡು ಕೇಳೋದ್ರಲ್ಲಿನ ಖುಷಿ ನನ್ನಲ್ಲಿ ಯಾವಾಗಲೂ ಹಚ್ಚಹಸಿರು.

ಆ ಹೊತ್ತೂ ಕೂಡ ಅವರ “ಶಶಿಕಿರಣ” ಅಪಾರ್ಟ್ಮೆಂಟ್ ನಲ್ಲೇ ಇರುವ ಅವರ ಸ್ನೇಹಿತೆಯೊಬ್ಬರು ತಮ್ಮ ತಂಗಿಯೊಡನೆ ಆಂಟಿಯ ಭೇಟಿಗೆ ಬಂದಾಗ ಅವರ ಮೊಗ ಇಷ್ಟಗಲ ಆಯ್ತು. “ಇವ್ರ ನೋಡ್ರಿ ಸರೋಜಿನಿ ಪಡಸಲಗಿ ಅಂತ. ಕವಿಯತ್ರಿ, ಗಾಯಕಿ, ಸಂಯೋಜಕಿ ಮತ್ತು ಒಳ್ಳೇ ಲೇಖಕಿ” ಅಂತ ನನ್ನ ಪರಿಚಯ ಮಾಡಿ ಕೊಟ್ಟಾಗ ನಾ ಸಂಕೋಚದಿಂದ ಹಿಡಿಯಷ್ಟಾದೆ. ಆ ಬೆಟ್ಟದೆತ್ತರದ‌‌ ಸಾಧಕಿಯ ಮುಂದೆ ನಾನ್ಯಾವ ಗಿಡದ ತೊಪ್ಪಲು! ಮತ್ತೊಮ್ಮೆ ನನ್ನ ಕುಬ್ಜತೆಯ ಅರಿವಾಯ್ತು ನಂಗೆ.

“ಸರೋಜಿನಿ ನಿನ್ನದೇ ಹಾಡು ಒಂದು ಹೇಳು” ಅಂದಾಗ ನನ್ನ ಸ್ವರಚಿತ ಕವನ “ಓ ಕನಸೇ” ಹೇಳ್ದೆ. ಖುಷಿನೋ ಖುಷಿ ಅವರಿಗೆ. “ಸರೋಜಿನಿ ನೀನೇ ಬರೆದು ಸಂಯೋಜಿಸಿದ ಸಂಪ್ರದಾಯದ ಹಾಡು ಹೇಳಲಾ” ಅಂದ್ರು. ಅದೂ ಆಯ್ತು. ಆಗ ಅವರು ಹೇಳಿದ ಮಾತು ಹೇಗೆ ಮರೆಯಲಿ?

“ಸಂಪ್ರದಾಯದ ಹಾಡುಗಳ ಪುನರುತ್ಥಾನ, ಪುನರುಜ್ಜೀವನ ಇದು ಸರೋಜಿನಿ; ನೀನು ನಿನ್ನದೇ ಶೈಲಿಯಲ್ಲಿ ಬರೆದದ್ದು ಅವಕ್ಕೆ ಒಂದು ಹೊಸ ರೂಪ ಕೊಟ್ಟಿದೆ” ಅಂದ್ರು. ದೊಡ್ಡವರ ದೊಡ್ಡತನ ಅದು! ಸಣ್ಣವರ ಸಣ್ಣ ಸಣ್ಣ ಕೆಲಸಗಳೇ ಅವರಿಗೆ ‘ಸಾಧನೆ’ ಅನಸ್ತಾವೆ. ಅದೆಲ್ಲ ಹಿಂದೆ ಮುಂದೆ ಸುಳಿದು ಕಣ್ತುಂಬಿ ಕೆನ್ನೆ ಒದ್ದೆ ಆದಾಗ ಅದೇ ಮಂಜುಗಣ್ಣಲ್ಲಿ ಅವರ ಮೊದಲ ಭೇಟಿಯ ನೆನಪು ತೇಲಿ ಬಂತು.

ನನ್ನ ಪತಿ ಡಾ. ಸುರೇಶ ಅವರ ಸ್ನೇಹಿತ ಡಾ. ಖಾರದ, ಅವರ ಪತ್ನಿ, ಸುರೇಶ ಹಾಗೂ ನಾನು ಅವರ ಮನೆಗೆ ಹೋಗಿದ್ವಿ ಅಂದು. ಅಲ್ಲೇ ಎಲ್ರೂ ಸೇರಿ ಭರ್ಜರಿ ಊಟ; ಅದಕ್ಕಿಂತಲೂ ಹೆಚ್ಚಿನ ವಿಶೇಷ – ಆ ವಿಶಿಷ್ಟ ವ್ಯಕ್ತಿತ್ವದ ಡಾ. ಜ್ಯೋತ್ಸ್ನಾ ಕಾಮತ ಅವರ ಮೊದಲ ಭೇಟಿ. ಅಷ್ಟೆಲ್ಲ ಸಾಧಿಸಿ ಹೆಸರು ಮಾಡಿದ ದೊಡ್ಡವರನ್ನು ಹೇಗೆ ಭೇಟಿ ಮಾಡೋದಪ್ಪ ಅಂತ ಕೊಂಚ ಆತಂಕ ನಂಗೆ. ನಾನೋ ಸೀದಾ ಸಾದಾ ಗೃಹಿಣಿ. ಆದರೆ ಆ ಸಹೃದಯಿಯ ಸೌಹಾರ್ದಮಯ ನಗು, ಮಮತೆಯ ಅಪ್ಪುಗೆ, ಮಾತು, ಆಪ್ತತೆ ನನ್ನನ್ನು ಎಲ್ಲೋ ತೇಲಿಸಿದ್ದಂತೂ ನಿಜ. ಸಂಕೋಚದ ಪೊರೆ ಗೊತ್ತೇ ಆಗದೆ ಕಳಚಿ ಹೋಗಿತ್ತು. ಹಳೇ ಪರಿಚಿತರಂತೆ ಮಾತಾಡಿ, ನಕ್ಕು, ಹಾಡಿ ಬಂದದ್ದಾಯ್ತು. ಅದೊಂದು ಬೆಚ್ಚಗಿನ, ಹಿತಕರ ಅನುಭವ!

ಜ್ಯೋತ್ಸ್ನಾ ಮೇಡಂ ಅವರೇ ಲಲಿತಮ್ಮ ಡಾ. ಚಂದ್ರಶೇಖರ ಅವರಿಗೆ ನನ್ನ ಪರಿಚಯ ಹೇಳಿ , ಫೋನಾಯಿಸಿ ‘ಅಮ್ಮ’ ನ ಪರಿಚಯ ಮಾಡಿ ಕೊಟ್ರು ನನಗೆ. ಆ ಅಮ್ಮನ ಒತ್ತಾಸೆಯೇ ‘ಡಾಕ್ಟರ್ ಹೆಂಡತಿ’ ಹೊರಬರಲು ಒಂದು ಕಾರಣ.

ಜ್ಯೋತ್ಸ್ನಾ ಮೇಡಂ ಅವರ ವ್ಯವಸ್ಥಿತ, ವಿಶಿಷ್ಟ ರೀತಿಯ ಸರಳ ಇರಿಸರಿಕೆ, ವಾತ್ಸಲ್ಯಮಯ ಆಪ್ತತೆ ನನ್ನನ್ನು ನನಗೇ ಗೊತ್ತಿಲ್ಲದಂತೆ ಅವರ ಆಪ್ತ ಬಳಗಕ್ಕೆ ಸೇರಿಸಿ ಬಿಟ್ತು. ಆ ದಿನ ಅವರ ಮನೆಯಿಂದ ವಾಪಸ್ಸು ಬರುವಾಗ ಅವರ Visitors’ ಡೈರಿಯಲ್ಲಿ ನನ್ನ ಹೆಸರು, ವಿಳಾಸ, ನನಗೆ ತೋಚಿದ ನಾಲ್ಕು ಸಾಲು ಬರೆದಿದ್ದೆ. ಈ ಛಂದದ ರೂಢಿ ನನಗೆ ಬಲು ಮೆಚ್ಚುಗೆ ಆತು. ಹಾಗೇ ಹೇಳಿದಾಗ ನಕ್ಕರು ಅವರು.

ಇಂಥ ಅಸಾಧಾರಣ ಪ್ರತಿಭೆ, ಮೇರು ವ್ಯಕ್ತಿತ್ವ, ಲೇಖಕಿ, ಏಐಆರ್ ನ ಸಫಲ ನಿರ್ದೇಶಕಿ ಇನ್ನಿಲ್ಲ ಅಂತ ಹೇಗೆ ಒಪ್ಪಿಸಲಿ ನನ್ನ ಮನಸನ್ನು ತಿಳೀತಿಲ್ಲ.

ಜ್ಯೊತ್ಸ್ನಾಆಂಟಿ (ಮೇಡಂ) ನಿಮ್ಮ ನಗೆಮಲ್ಲಿಗೆಯ ಅರಳು ಮೊಗದ ಆ ಮಾತು ” ಸರೋಜಿನಿ ಇನ್ನೊಮ್ಮೆ ಬರ್ರಿ ಹಾಗೂ ನೀವು ನನ್ನ ನೆನಪಿನಂಗಳದಲ್ಲಿ ಇಂದಿಗೂ, ಎಂದೆಂದಿಗೂ…

‍ಲೇಖಕರು Admin

August 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: