ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪೂರ್ಣತೆಯಿಂದ ‌ಪೂರ್ಣತ್ವದಕಡೆಗೆ

ತೇಜಾವತಿ ಹೆಚ್ ಡಿ ಅವರ ಕವನ ಸಂಕಲನ ‘ಸೀಮೆ ಜಾಲಿ’

ನಾಗಶ್ರೀ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಡಾ.ಎಚ್.ಎಲ್. ಪುಷ್ಪ ಅವರ ಬರಹ ಇಲ್ಲಿದೆ.

-ಡಾ.ಎಚ್.ಎಲ್.ಪುಷ್ಪ

ಕವಿತೆ ಯಾಕೆ ಬೇಕು, ಯಾರಿಗೆ ಬೇಕು, ಅದರಿಂದ ದೊರಕುವ ಫಲಗಳೇನು ಎಂಬ ಚರ್ಚೆಯನ್ನು ಪಂಪನನ್ನೂ ಒಳಗೊಂಡಂತೆ ಎಲ್ಲರೂ ಚರ್ಚಿಸುತ್ತಲೇ ಬಂದಿದ್ದಾರೆ. ಬರೆದಾದ ನಂತರ ಹಾಗೆ ಬರೆಯಹುದಿತ್ತು, ಹೀಗೆ ಬರೆಯಬಹುದಿತ್ತು ಎಂಬುದನ್ನು ಸಹ ಕೇಳುತ್ತಾ ಬಂದಿದ್ದೇವೆ. ಹೇಳುವ ಓದುಗ -ವಿಮರ್ಶಕರು, ಬರೆಯುವ ಕವಿಗಳು ಇವುಗಳನ್ನು ಗಮನಿಸಿದರೂ ತಾವು ಬರೆಯುವ ಹಾದಿಯನ್ನು ಬದಲಿಸಿಕೊಳ್ಳಲು ಸಾಧ್ಯವೇ. ಕವಿತೆ ಕವಿಯ ಖಾಸಗಿ ಸೊತ್ತು. ತಾನು ಹತ್ತಿದ ಕುದುರೆಯ ಮನಸ್ಥಿತಿಯನ್ನು ಅನುಸರಿಸಿ ಅದನ್ನು ಓಡಿಸಬೇಕಾಗುತ್ತದೆ. ಈ ಕುದುರೆ ಕೆಡವಲೂ ಬಲ್ಲದು, ಹತ್ತಿಸಿಕೊಂಡು ಓಡಿಸಲೂ ಬಲ್ಲದು. ಹೀಗಾಗಿ ‘ಹೀಗೆ’ ಬರೆಯಿರಿ ಎಂದು ಯಾರಿಗೆ ಯಾರೂ ಸಹ ನಿರೂಪವನ್ನು ಕೊಡಲಾಗದು. ತೇಜಾವತಿಯವರ ಕವಿತೆಗಳನ್ನು ಓದಿದ ತಕ್ಷಣ ಅನಿಸಿದ ಭಾವಗಳು ಇವು.

ಅನುಭವವೂ, ಅಭಿವ್ಯಕ್ತಿಯೂ ವೈಯಕ್ತಿಕವಾದದ್ದು. ಈಗಾಗಲೇ ‘ಕಾಲಚಕ್ರ, ಮಿನುಗುವ ತಾರೆ, ಬಾ ಭವಿಷ್ಯದ ನಕ್ಷತ್ರಗಳಾಗೋಣ’ ಎನ್ನುವ ಮೂರು ಕವನ ಸಂಕಲನಗಳನ್ನು ತೇಜಾವತಿಯವರು ಪ್ರಕಟಿಸಿದ್ದಾರೆ. ಈಗ ‘ಸೀಮೆ ಜಾಲಿ’ ಎನ್ನುವ ಹೆಸರಿನ ನಾಲ್ಕನೇ ಸಂಕಲನವನ್ನು ಪ್ರಕಟಿಸುತ್ತಿದ್ದಾರೆ. ಇಲ್ಲಿನ ಕವಿತೆಗಳನ್ನು ಓದುವಾಗ ‘ಈಗಾಗಲೇ ಮೂರು ಸಂಕಲನ’ಗಳನ್ನು ಪ್ರಕಟಿಸಿದ ಕವಯತ್ರಿಯ ಕವಿತೆಗಳು ಹೇಗಿರುತ್ತವೆ ಎಂಬ ನಿರೀಕ್ಷೆಗಳು ಮೂಡುವುದು ಸಹಜ. ಸಾಧಾರಣವಾಗಿ ಒಬ್ಬ ಶಕ್ತಕವಿ ತನ್ನ ಮೊದಲನೆಯ ಸಂಕಲನದಲ್ಲೇ ತನ್ನ ಕವಿತ್ವದ ಸಾಮರ್ಥ್ಯವನ್ನು ಪ್ರಕಟಿಸಿ ಬಿಡುತ್ತಾನೆ/ಳೆ. ಮೊದಲ ಸಂಕಲನದ ಕವಿತೆಗಳಲ್ಲಿನ ಆಶಯ, ರೂಪಕ, ಕವಿತಾ ನಿರ್ಮಾಣ ಸಾಮರ್ಥ್ಯಕ್ಕಿಂತ ಅವುಗಳಲ್ಲಿನ ಹೊಸದಾದ ಉಕ್ತಿಕ್ರಮ, ವಸ್ತುವನ್ನು ಗ್ರಹಿಸುವ ಕ್ರಮ, ರೂಪಕಗಳನ್ನು ಬಳಸಿಕೊಳ್ಳುವ ಸಾಮರ್ಥ್ಯ ಗಮನ ಸೆಳೆಯುತ್ತದೆ ಎಂಬುದು ನನ್ನ ನಂಬಿಕೆ.

ಹಾಗಾದರೆ ಕವಿತ್ವದ ಸಾಮರ್ಥ್ಯ ಎಂದರೆ ಏನು? ಹೊಸದಾಗಿ ಕವಿತೆ ಬರೆಯುವವರು ಹೊಸದಾಗಿ ಉಳಲು ಸಿದ್ಧವಿರುವ ಭೂಮಿಯಂತೆ. ಅದುವರೆಗೂ ಯಾವುದೇ ಬೆಳೆಯನ್ನು ಕೊಡದ, ಮುಳ್ಳು ಗಿಡಗಳಿಂದ, ಕಳೆಗಳಿಂದ ಕೂಡಿದ ಹದಗೊಂಡ ಭೂಮಿ ಬೀಜ ಬಿತ್ತನೆಗೆ ಸಿದ್ಧವಾಗಿರುತ್ತದೆ. ಫಲವತ್ತಾದ ಈ ಭೂಮಿ ಗೊಬ್ಬರಗೋಡುಗಳ ಬಳಕೆಯ ನಂತರ ಇನ್ನಷ್ಟು ಶಕ್ತವಾಗಿ ಮಾರ್ಪಡುತ್ತದೆ. ಮೊದಲ ಫಸಲಿನಲ್ಲೇ ತನ್ನ ಸಾಮರ್ಥ್ಯವನ್ನು ತೋರಿಸಿಕೊಳ್ಳುತ್ತದೆ. ಇದರಂತೆಯೇ ಕವಿ, ಕವಿಯ ಭಾಷೆ, ಕವಿತ್ವದ ಸಾಮರ್ಥ್ಯ ಕೂಡ ಎಂದು ಪರಿಗಣಿಸಬೇಕಾಗುತ್ತದೆ. ಕ್ರಮೇಣ ಕವಿತ್ವದ ಇಳುವರಿ ಕಡಿಮೆಯಾಗುತ್ತಾ ಹೋಗುತ್ತದೆ. ಆಗ ಮತ್ತೆಮತ್ತೆ ಸಾಮರ್ಥವನ್ನು ಪುಷ್ಟಿಗೊಳಿಸಿಕೊಳ್ಳಬೇಕಾ ಗುತ್ತದೆ.

ಕವಿತೆಯನ್ನು ಮತ್ತೆಮತ್ತೆ ಹೊಸದಾಗಿ ಬರಮಾಡಿಕೊಳ್ಳುವುದು, ಅಭಿವ್ಯಕ್ತಿಸುವುದು ಹೇಗೆ- ಇದು ಎಲ್ಲರ ಸಮಸ್ಯೆಯೂ ಹೌದು. ಒಂದು ಕಾಲದಲ್ಲಿ ಓದುಗರನ್ನು ಹಿಡಿದಿಟ್ಟುಕೊಂಡಿದ್ದ ಪ್ರಸಿದ್ಧ ಕವಿಗಳ ಈಗಿನ ಜಾಳಾದ ಕವಿತೆಗಳನ್ನು ಓದುವಲ್ಲಿ ಇಂತಹ ಸಮಸ್ಯೆಗಳು ಎದ್ದು ಕಾಣುತ್ತವೆ. ವಸ್ತು ಮತ್ತು ಭಾಷಾ ಸಾಮಗ್ರಿಗಳು ಆದಿಕವಿ ಪಂಪನನ್ನೂ ಒಳಗೊಂಡಂತೆ ಅಂದಿನಿಂದಲೂ ಇಂದಿನವರೆಗೆ ಒಂದೇ ರೀತಿಯವು. ಲೋಕದ ವಸ್ತು ಮತ್ತು ಭಾವದಲ್ಲಿ ಬದಲಾವಣೆಯಿಲ್ಲ ನಿಜ. ಆದರೆ ಸಾಮಾಜಿಕ ವೈಪರೀತ್ಯಗಳಲ್ಲಿ ಬದುಕುವಾಗ ಅದನ್ನು ಪರಿಭಾವಿಸುವ, ಅಭಿವ್ಯಕ್ತಿಸುವ ಕ್ರಮದಲ್ಲಿ, ಮುರಿದುಕಟ್ಟುವ ಕ್ರಮದಲ್ಲಿ ಸಹಜವಾಗಿಯೇ ಬದಲಾವಣೆಯಾಗುತ್ತದೆ. ವಕ್ರೋಕ್ತಿ ಎಂಬ ಮಾತನ್ನು ಸಾಧಾರಣವಾಗಿ ಇಂತಹ‌ ಕಡೆ ಬಳಸುತ್ತಿರುತ್ತೇವೆ. ಹರಿವ ನೀರಿನಂತಹ ಭಾಷೆಯನ್ನು ಆಯಾ ಕಾಲಘಟ್ಟದಲ್ಲಿ ಬರುವ ಶಕ್ತ ಹಾಗೂ ಪ್ರತಿಭಾವಂತ ಕವಿಗಳು ಕಾವ್ಯ ಸಾಮಗ್ರಿಗಳಿಗೆ ಬೇಕಾದಂತೆ ಸಾಣೆ ಹಿಡಿದು ಹರಿತಗೊಳಿಸಿ ಹೊಸದಾಗಿ ರೂಪಿಸಿಕೊಳ್ಳುತ್ತಾರೆ.

ಈ ಹರಿತಗೊಳಿಸುವ ಕ್ರಿಯೆ ಹೇಗೆ ನಡೆಯಬಹುದು? ಪ್ರಾಚೀನ ಕಾವ್ಯ ಪರಂಪರೆಯನ್ನು ಒಳಗೊಂಡಂತೆ ಹೊಸತಲೆಮಾರಿನ ಇಂದಿನ ಕಾವ್ಯವನ್ನು ನಾವು ಸಂಭ್ರಮ ಹಾಗೂ ಕುತೂಹಲದಿಂದ ಎದುರುಗೊಳ್ಳಲೇಬೇಕಾಗುತ್ತದೆ. ಅಲ್ಲಿನ ಹೊಸತನಗಳು, ಪ್ರಯೋಗಗಳು ನಮ್ಮ ಕವಿತ್ವವನ್ನು ಬರಡಾಗದಂತೆ ಕಾಪಾಡಬಲ್ಲವು. ದೇಹ ಮತ್ತು ಮನಸ್ಸಿಗೆ ಮುಪ್ಪು ಆವರಿಸುವಂತೆ ಸಹಜವಾದ ಕವಿತ್ವಕ್ಕೂ ಮುಪ್ಪು ಆವರಿಸಬಲ್ಲದು. ಲವಲವಿಕೆಯಿಂದ ಬದುಕುವ ಕ್ರಮ ಕವಿತ್ವವನ್ನು ಜೀವಂತವಾಗಿ ಇರಿಸಬಲ್ಲದು, ದಣಿವನ್ನು ದೂರಮಾಡಬಲ್ಲದು.

ಕಲ್ಪನೆ ಮತ್ತು ರೂಪಕಗಳನ್ನು ಹೇಳುವ ಕ್ರಮ ಕ್ರಮೇಣವಾಗಿ ಕುಂದುತ್ತಾ ಹೋಗುತ್ತದೆ. ಇದನ್ನು ಎದುರಿಸಬಲ್ಲ ಶಕ್ತಕವಿ ಮಾತ್ರ ಮತ್ತೆ ಮೈತುಂಬಿಸಿಕೊಂಡು ಬರೆಯಬಲ್ಲ ಎಂಬುದು ನನ್ನ ನಂಬಿಕೆ. ಹೀಗಾಗಿ ಕವಿತ್ವದ ಚರಿತ್ರೆಯಲ್ಲಿ ಕೆಲವು ಕವಿಗಳು ಮಾತ್ರವೇ ಉಳಿದಿದ್ದಾರೆ ಮತ್ತು ಕೆಲವರು ಅಳಿದಿದ್ದಾರೆ, ಅಳಿಯುತ್ತಿದ್ದಾರೆ ಎಂಬುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕು.

ಹಾಗಾದರೆ ಮೊದಲನೆಯ ಸಂಕಲನವನ್ನು ಮುಖ್ಯವಾಗಿ ಪರಿಗಣಿಸುವುದು ಯಾಕೆ. ಮೊದಲನೆಯ ಸಂಕಲನದಲ್ಲಿ ಕವಿತೆಗಳು ‘ಕವಿ ಯಾವ ಜಾಡನ್ನು ಹಿಡಿದು ಹೊರಡಬೇಕೆಂಬ’ ಹುಡುಕಾಟವನ್ನು ತೋರುತ್ತವೆ. ಅಭಿವ್ಯಕ್ತಿಯಲ್ಲಿರುವ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಪ್ರಸ್ತಾಪಿಸುತ್ತಿರುತ್ತವೆ. ಹೀಗಾಗಿ ಮೊದಲ ಸಂಕಲನದ ಕವಿತೆಗಳು ಹೊಸತನಗಳೊಂದಿಗೆ, ಹುಡುಕಾಟಗಳೊಂದಿಗೆ, ಸರ್ವ ಶಕ್ತಿಯನ್ನು ಪ್ರಕಟಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂಬುದು ನನ್ನ ನಂಬಿಕೆ‌. ಎರಡನೆಯ, ಮೂರನೆಯ ಸಂಕಲನ ಪ್ರಕಟವಾಗುವ ಹೊತ್ತಿಗೆ ಈ ದಾರಿ ಸ್ಪಷ್ಟವಾಗಿ ಸಿದ್ಧಗೊಳ್ಳಬೇಕು. ಈ ಮಾತುಗಳು ಕೇವಲ ತೇಜಾವತಿಯವರ ಕವಿತೆಗಳನ್ನು ಕುರಿತಂತಲ್ಲ, ನನ್ನನ್ನೂ ಒಳಗೊಂಡಂತೆ ಎಲ್ಲರಿಗೂ ಹೊಂದಬಲ್ಲವು ಎಂಬುದು ನನ್ನ ನಂಬಿಕೆ.

ತೇಜಾವತಿಯವರ ‘ಸೀಮೆ ಜಾಲಿ’ ಸಂಕಲನದಲ್ಲಿ ಈ ರೀತಿಯ ಹುಡುಕಾಟಗಳು ಮತ್ತೆ ಮತ್ತೆ ಕಾಣುತ್ತವೆ. ಅಪೂರ್ಣತ್ವದಿಂದ ಪೂರ್ಣತ್ವದ ಕಡೆಗೆ ಹೋಗುವ ಕಡೆಗೆ ಇಲ್ಲಿನ ಕವಿತೆಗಳು ನಿರಂತರ ಪ್ರಯತ್ನ ಮಾಡುತ್ತವೆ.

ಅಪೂರ್ಣ ಕವಿತೆ ನಾನು
ನಿಮ್ಮ ಊಹೆಯೂ ನಿಜ
ಪೂರ್ಣಗೊಳ್ಳದ ಕವಿತೆಗಳು
ಬದುಕಿ ಬಾಳುವುದು ಅತೀ ವಿರಳ
ಹೆತ್ತವರು, ಹೊತ್ತವರೋ
ಸೋದರರೋ, ಸಂಬಂಧಿಕರೋ
ಕೊನೆಗೆ ಹಿತ ಶತ್ರುಗಳೆಲ್ಲರೂ ಕಿಡಿ, ಒಡನಾಡಿ
ಕಾಲ ಮಾತ್ರವೇ ಗಡಿಯ ದಾಟಿ
ಗುರಿಯ ಮುಟ್ಟುವುದು
ಹೊಸ್ತಿಲಲ್ಲೇ ಹೊಸಕಿ ಹೋಗುವವು
ಇನ್ನೂ ಕೆಲ ಕವಿತೆಗಳು
– ಅಪೂರ್ಣ ಕವಿತೆ

ಇಲ್ಲಿನ ಹಲವಾರು ಕವಿತೆಗಳಲ್ಲಿ‌ ಬದುಕಿನ‌ಲ್ಲಿನ ಮನುಷ್ಯ ಸಂಬಂಧಗಳು, ಅದರೊಟ್ಟಿಗೇ ಬರುವ ಅಸಾಧ್ಯವಾದ ಹತಾಶೆಗಳು ಮೇಲಿಂದ ಮೇಲೆ ಕಂಡುಬರುವ ಸಾಮಾನ್ಯ ಅಂಶಗಳಾಗಿವೆ. ಸಮಾಜದಲ್ಲಿ ಇರುವಂತಹ ಅಸಮಾನತೆಗಳ ಬಗ್ಗೆ, ವಿಷಮ ಪರಿಸ್ಥಿತಿಯ ಬಗ್ಗೆ, ಬೇಕಾದದ್ದನ್ನು ಪಡೆಯಲಾಗದ ಅಸಹಾಯಕತೆಯ ಬಗ್ಗೆ ವಿಷಾದಿಂದ ಈ ಕವಿತೆಗಳು ಮಾತನಾಡುತ್ತವೆ.

ಇಲ್ಲಿನ‌ ಬಹುತೇಕ ಕವಿತೆಗಳು ವಿಷಮ ಸಂಬಂಧಗಳನ್ನು ನಿರ್ವಹಿಸುವಲ್ಲಿನ ತೊಡಕುಗಳನ್ನು, ಸುಸ್ತಾದ ಮನಸ್ಥಿಯೊಂದನ್ನು ವಿಸ್ತರಿಸುತ್ತಾ ಹೋಗುತ್ತವೆ. ಅದು ಸಮಾಜದೊಂದಿಗಿನ ಕ್ರೌರ್ಯ ಎದುರಿಸುವಲ್ಲಿ, ಗಂಡು-ಹೆಣ್ಣು, ಪತಿ- ಪತ್ನಿ ಸಂಬಂಧಗಳ ನಿರ್ವಹಣೆಯಲ್ಲಿ ಮತ್ತೆಮತ್ತೆ ತಲೆದೋರುತ್ತಾ ಹೋಗುತ್ತದೆ. ವರ್ತಮಾನದಲ್ಲಿ ಸಂಬಂಧಗಳನ್ನು ನಿರ್ವಹಿಸುವಲ್ಲಿ ಬದಲಾದ ನಿಷ್ಠೆಗಳು, ಸಾಂಸಾರಿಕ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಕಳೆದುಕೊಂಡ ಹೆಣ್ಣಿನ ಅಸ್ತಿತ್ವ, ಗಂಡ ಗೆಳೆಯನಾಗದ ಆಘಾತ – ಹೀಗೆ ಹಲವು ತೊಡಕುಗಳನ್ನು ಕುರಿತು ಕವಿತೆಗಳು ಮಾತನಾಡುತ್ತವೆ. ಅನಿವಾರ್ಯ ನಿರ್ವಹಣೆಯಾಗಿರುವ ಕೆಲ ಸಂಬಂಧಗಳಲ್ಲಿನ ಸೂಕ್ಷ್ಮ ಪದರುಗಳನ್ನು ಮುಟ್ಟಿನೋಡುವ, ಅದನ್ನು ಹೇಳಲಾರದ ಅಸಹಾಯಕತೆಯನ್ನು ನವಿರಾಗಿ ಚಿತ್ರಿಸುವಲ್ಲಿನ ಮಿತಿಗಳನ್ನು ಇಲ್ಲಿನ ಕವಿತೆಗಳು ಚಿತ್ರಿಸುತ್ತವೆ. ಉದಾಹರಣೆಗೆ ಈ ತೊಡಕುಗಳನ್ನು ಚಿತ್ರಿಸುವ ‘ಚುಚ್ಚುವ ಸೀರೆ’ ಎಂಬ ಕವಿತೆಯನ್ನು ನೋಡಬಹುದು.

ಸಂಜೆ ಐದಾಗುತ್ತಲೇ
ಸೀರೆ ಚುಚ್ಚಲು ಪ್ರಾರಂಭಿಸುತ್ತದೆ
ಲಾಡಿ ಕೊರೆಯಲು ಶುರು ಮಾಡುತ್ತದೆ
ಹೂವು ಹುಳವಾದಂತೆ ಭಾಸವಾಗುತ್ತದೆ
ಬಹುಶಃ
ವ್ಯಾಲಿಡಿಟಿ ಎಕ್ಸ್ಪೈರ್ ಆದ ಬಳಿಕ
ಎಲ್ಲವೂ ಹೀಗೆ
ಅಮೃತವಾಗಿದ್ದ ಗುಳಿಗೆ ವಿಷವಾದಂತೆ
ಹಗ್ಗ ಹಾವಾದಂತೆ
ಸೀರೆಯೂ- (ಚುಚ್ಚುವ ಸೀರೆ)

ಇಡೀ ಕವಿತೆ ‘ಕಾಲ ಮತ್ತು ನಡಾವಳಿಗಳ ಅವಸ್ಥಾಂತರ’ವನ್ನು ಸೊಗಸಾಗಿ ಅಭಿನಯಿಸುಯತ್ತದೆ. ಮೊದಲ ಭಾಗದಲ್ಲಿ ಮುಂಜಾನೆಯ ಸ್ನಾನ, ಅಲಂಕಾರ, ಖುಷಿಯಿಂದ ನೆರಿಗೆ ಹಿಡಿದು ನಡೆವ ನಡೆಯಲ್ಲಿ ನವಿಲು ನರ್ತನವಿದೆ‌. ಸಂಜೆ ಐದಾಗುತ್ತಲೇ ಈ ನವಿಲು ನಡಿಗೆಯ ಸೀರೆಗೆ ಆಯಾಸ, ದಣಿವು ಕಾಣಿಸಿಕೊಳ್ಳುತ್ತದೆ‌. ಸೀರೆ ಚುಚ್ಚಲಾರಂಭಿಸುತ್ತದೆ, ಲಾಡಿ ಕೊರೆಯಲಾರಂಭಿಸುತ್ತದೆ, ಮುಡಿಯಲ್ಲಿನ ಹೂವು ಹುಳವಾಗುತ್ತದೆ. ಹೀಗೆ ಮುಂದುವರೆದ ಕವಿತೆ ಕಾಲ ಕಳೆದಂತೆ ಅಮೃತವೂ ವಿಷವಾಗುವ ದುರಂತವನ್ನು ಕಟ್ಟಿಕೊಡುತ್ತದೆ.

ಆಕರ್ಷಕ ಸೀರೆಯ ಹಾಗೆ
ಸೀಮಿತ ಅವಧಿಯೊಳಗೆ
ಕಂಫರ್ಟ್ ಝೋನ್ ಸೃಷ್ಟಿಸುವ ಅವು
ವಾಯಿದೆ ಮುಗಿದ ಬಳಿಕ
ಚುಚ್ಚಲು ಶುರುವಿಡುತ್ತದೆ

ಹೀಗೆ ಸಾಗುವ ಕವಿತೆ ಸಂಬಂಧಕ್ಕಿರುವ ಕಾಲದ ಮಿತಿಯನ್ನು ‘ವ್ಯಾಲಿಡಿಟಿ ಎಕ್ಸ್ಪೈರ್’ ಆಗುವ ಸಹಜ ಕ್ರಿಯೆಯೆಂಬಂತೆ ಸಲೀಸಾಗಿ ಕಟ್ಟಿಕೊಡುತ್ತದೆ.

‘ಸೀಮೆ ಜಾಲಿ’ ಎನ್ನುವ ಕವಿತೆ ಇಡೀ ಸಂಕಲನದ ಆಶಯವನ್ನು ಕಟ್ಟಿಕೊಡುತ್ತದೆ. ಸಮಾಜದಲ್ಲಿ ಒಳಿತು- ಕೆಡುಕು, ಒಳ್ಳೆಯವರು- ಕೆಟ್ಟವರು ಇರಬೇಕಾದದ್ದು ಅನಿವಾರ್ಯ. ಒಂದೊಂದು ಬಾರಿ ಒಳಿತಿಗೆ ಕೆಡಕಿನಿಂದ ನೋವಾದರೂ ಅದು ಬೆಳಕಿಗೆ ಬರುವುದು ಕೆಡಕಿನೊಂದಿಗಿನ ಸಂಘರ್ಷದಲ್ಲಿಯೇ. ಕೆಸರು ದುರ್ನಾತದ ನಡುವೆ ಬೆಳೆದಿರುವ ರಾಯಸಕ್ಕರಿ ಮರ ಸುತ್ತಲಿನ ಸೀಮೆಜಾಲಿ, ಮುಳ್ಳು, ಕಳ್ಳಿಯ ನಡೆವೆಯೇ ಇದ್ದರೂ ಅದರ ನೋಟ ಸೂರ್ಯನೆಡೆಗೆ. ಅದರ ಅಂದ ಹೊರಹೊಮ್ಮಿದ್ದು ಇಂತಹ ಪರಿಸರದ ನಡುವಿನಿಂದಲೇ ಆಗಿದೆ. ಇಂತಹ ಈ ಮರ ಮಧುಫಲವನ್ನು ನೀಡುತ್ತಲೇ ಜಾಲಿಯ ಮರದಲ್ಲಿ ಹಕ್ಕಿಗಳು ಗೂಡು ಕಟ್ಟಲಿ, ಅವುಗಳ ಬಾಳು ಹಸನಾಗಲಿ, ಸುಡುಬಿಸಿಲ ನಾಡು ತಂಪಾಗಲಿ ಎಂಬ ಹಾರೈಕೆಯನ್ನೇ ನೀಡುತ್ತದೆ‌. ಒಳಿತು ಕೆಡಕಿನ ಜೊತೆಗಿದ್ದರೂ ಅದರ ಸ್ವಭಾವಕ್ಕೆ ಮುಕ್ಕು ಬರುವುದಿಲ್ಲ, ಕೇಡನ್ನು ಮರುರೂಪಿಸುವ ಅದು ಎಂದಿಗೂ ಒಳ್ಳೆಯದನ್ನೇ ಬಯಸುತ್ತದೆ ಎಂಬ ಸಂದೇಶವನ್ನು ಈ ಕವಿತೆ ಸುಲಭವಾಗಿ ರವಾನಿಸುತ್ತದೆ.

ಇಲ್ಲಿನ ಬಹುತೇಕ ಕವಿತೆಗಳು ಕೆಡಕಿನಿಂದ ಒಳಿತಿನ ಕಡೆಗೆ, ವಿಷಾದದಿಂದ ಸಂಭ್ರಮದ ಕಡೆಗೆ, ಅಪೂರ್ಣತೆಯಿಂದ ಪೂರ್ಣತೆಯ ಕಡೆಗೆ ಸಾಗುವ ಆಶಯಗಳನ್ನು ಹೊಂದಿವೆ. ಹೀಗಾಗಿಯೇ ಈ ಕವಿತೆಗಳು ಜಾಲಿ, ಕಳ್ಳಿಗಳ ನಡುವೆ ನಿಂತ ತಪಸ್ವಿಯಂತೆ ಹೂಮಿಡಿಕಾಯಿಗಳನ್ನು ಒಳಗೊಂಡು ಮಧುಫಲವ ನೀಡುವ ಜೀವಶ್ರದ್ಧೆಯನ್ನು ನೀಡುವ ಪ್ರಯತ್ನ ಮಾಡಿವೆ. ಇಂತಹ ಜೀವಪ್ರೀತಿಯ ಕವಿತೆಗಳನ್ನು ನೀಡಿದ ತೇಜಾವತಿಯವರಿಗೆ ಈ ಮೂಲಕ ಶುಭ ಹಾರೈಸುತ್ತೇನೆ.

‍ಲೇಖಕರು Admin

12 November, 2026

1 Comment

  1. Manjunathanayaka. N. R

    ವಿಷ ವರ್ತುಲ ಕಾಲವೆಲ್ಲಾ ಅಮೃತ ಗಳಿಗೆಗಳಿಗೂ ಕೋಲಾಹಲ, ನಮ್ಮವರೇ ಶತ್ರುವೆಂಬಂತೆ ಮೆದುವಾಗಿ ತಬ್ಬಿ ಹಿತನೀಡುವ ಸೀರೆಯೇ ಒಮ್ಮೊಮ್ಮೆ ಚುಚ್ಚುತ್ತಿದೆ ಎಂದರೆ, ಮೇಲುನೋಟಕ್ಕೆ ಅಲಂಕೃತ, ಒಳಗೊಳಗೇ ವಿಕೃತ ಎಂದು ಸಾರುವ ಕವಿತೆ ವಿಭಿನ್ನ, ಶೋಚನೀಯ, ವರ್ತುಲಗಳ ಸುಳಿ,…… ಚಂದವಿದೆ ಮೇಡಂ
    ತಂಪಿಡದ, ನೆರಳಿರದ “ಜಾಲಿ ಮುಳ್ಳು “ಸೂಕ್ತವಾಗಿದೆ. ಅದರಲ್ಲೂ ಸೀರೆ ಕವಿತೆ ಅಮೋಘ.
    ವಂದನೆಗಳೊಂದಿಗೆ “ಶ್ರೀರತ್ನತನಯ.ನುಗ್ಗಿಹಳ್ಳಿ.”

    Reply

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading