~ರಂಗಮ್ಮ ಹೊದೇಕಲ್
ನನ್ನ ಜೋಳಿಗೆಯಲ್ಲಿ….
ನನ್ನ ಜೋಳಿಗೆಯಲ್ಲೇನಿದೆ
ಎಂದು ಇಣುಕಬೇಡಿ
ಶ್ರಮದ ಮುಟಿಗೆ ಅನ್ನದ ಜೊತೆ
ತೀರದ ಕತೆಗಳಿವೆ
ಆರದ ಗಾಯಗಳಿವೆ
ಯಾರೋ ಯಾರೋ
ಹರಿದೆಸೆದ ಕವಿತೆಯ
ಚೂರುಗಳಿವೆ!
ಚೌಕಟ್ಟಿಗೆ ಸಿಗದ
ಚದುರಿದ ಬಣ್ಣಗಳಿವೆ!
ನೂರು ನೋವುಗಳ ನಡುವೆ
ನಗೆಯ ಹಾಯಿ ದೋಣಿ
ತೇಲಿಸಿ ಮುಳುಗಿಯೇ ಹೋದ
ಜೀವಗಳ ಬೆಚ್ಚಗಿನ ನೆನಪುಗಳಿವೆ!
ಇರಿದವರ ಅಸ್ತ್ರಗಳು
ಮುಚ್ಚಟೆಯಲ್ಲಿವೆ!
ಬುದ್ಧಿಮತ್ತೆಯಲ್ಲಿ ಹಾರಿ ಬಂದ
ಮಾತುಗಳನ್ನು ಬಿರಡೆ ಹಾಕಿ
ಮುಚ್ಚಲಾಗಿದೆ!
ಸಣ್ಣ ಚೀತ್ಕಾರಗಳು
ಪ್ರಕಟವಾಗದ ಸಂಕಟಗಳು
ಜೋಳಿಗೆಯಲ್ಲಿ
ತುಯ್ಯುತ್ತಲೇ ಇವೆ.!
ಒಂದಿಷ್ಟು ಮನುಷ್ಯರು ಕೊಟ್ಟ
ಅಕಾರಣ ನಲುಮೆ
ಸಕಾರಣ ಸಮಾಧಾನ
ಹಗೆಕೊಲ್ಲುವ ನಗೆಯನ್ನು
ಒಯ್ಯುವಿರಾದರೆ
ಬೊಗಸೆ ತುಂಬಿ ಕೊಡುವೆ!






0 Comments