ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಡು ಕತ್ತಲೆ ಜೊತೆ

-ಅಶೋಕ ಹೊಸಮನಿ

ದೇವಭಾಷೆಯ ಗೋಡೆಗಳ ಚಿಗುರುವಿಕೆಯಲ್ಲೂ

ಕಡು ಕತ್ತಲೆ ಜೊತೆ
ಸೆಣಸಾಡುವಾಗಲೆಲ್ಲ
ನೆತ್ತರ ಜಿನುಗಿಸುತ್ತವೆ
ಕಣ್ಣ ರೇಖೆಗಳು
ರೆಪ್ಪೆ ಬಡಿವ ನೆರಳುಗಳು
ಕಂಪಿಸುವಲ್ಲಿ

ಕಡು ಕತ್ತಲೆ ಜೊತೆ
ಸೆಣಸಾಡುವಾಗಲೆಲ್ಲ
ಉರಿ
ಉರಿಗೊಳ್ಳಿ
ಊದುಗೊಳವೆ
ವೃತ್ತಾಕಾರವಾಗಿ
ಚಲಿಸುತ್ತವೆ

ಕಡು ಕತ್ತಲೆ ಜೊತೆ
ಸೆಣಸಾಡುವಾಗಲೆಲ್ಲ
ಕೊರಳ ಕೊಯ್ದಿಹ
ತಲೆಮಾರುಗಳ ನೆತ್ತರ ರೇಖೆಗಳೇ
ಹೊಸ್ತಿಲು ದಾಟಲು
ಹೆಣಗಾಡುತ್ತವೆ

ಕಡು ಕತ್ತಲೆ ಜೊತೆ
ಸೆಣಸಾಡುವಾಗಲೆಲ್ಲ
ಗೋಡೆಗಳ ಹಕ್ಕಳಿಕೆಗಳು
ಉದುರಿ ಬೀಳುತ್ತವೆ
ಜಂತಿಯ ತೊಪ್ಪಲು
ನೆಲುವಿನ ಅಂಗೈ ಬಿಕ್ಕಳಿಕೆಯ ‌ಹಿಂಗಿಸಿ
ತೊಲೆಗಂಬವೂ
ಕುಸಿಯುತ್ತದೆ

ಕಡು ಕತ್ತಲೆ ಜೊತೆ
ಸೆಣಸಾಡುವಾಗಲೆಲ್ಲ
ಕೀವು ಕುಡಿದಿಹ ಹೊಕ್ಕುಳು ಬಳ್ಳಿಯ
ನೆಲಹಾಸಿನೊಳು
ಪುರಷಾಧಿಕಾರದ ಅಹಂಕಾರದ ಗೋರಿಗಳು
ನಳನಳಿಸುತ್ತವೆ

ಕಡು ಕತ್ತಲೆ ಜೊತೆ
ಸೆಣಸಾಡುವಾಗಲೆಲ್ಲ
ಕೊಮಣಿ ಮುದುಡುತ್ತದೆ
ರೊಟ್ಟಿ ದಿಕ್ಕೆಡುತ್ತದೆ
ಹೆಂಚು ಮಾತನ್ನು ನುಂಗುತ್ತದೆ
ಒಲೆ ಇನ್ನಿಲ್ಲದಂತೆ ಕಾಲವನ್ನು
ಸುಡುತ್ತದೆ

ಕಡು ಕತ್ತಲೆ ಜೊತೆ
ಸೆಣಸಾಡುವಾಗಲೆಲ್ಲ
ಬೀಸೋಕಲ್ಲಿನ ಪದ ಪದಗಳು
ಗಂಟಲಲ್ಲಿ ಸಿಕ್ಕಿಕೊಳ್ಳುತ್ತವೆ
ಒನಕೆ,ಒಳ್ಳು,
ಹಿಂಡಿಕಲ್ಲು
ಅನಾಥ ಮುಸ್ಸಂಜೆಯ ಕಟ್ಟ ಕಡೆಯ ತುತ್ತುಗಳಂತೆ
ಭಾಸವಾಗುತ್ತವೆ

ಕಡು ಕತ್ತಲೆ ಜೊತೆ
ಸೆಣಸಾಡುವಾಗಲೆಲ್ಲ
ವೈಧವ್ಯದ ಹಣೆಯ ಗೆರೆಗಳ
ಅನಾಥ ದೀವಿಗೆಗಳು
ಕಣ್ಣೀರಿಡುತ್ತವೆ
ದೇವಭಾಷೆಯ ಗೋಡೆಗಳ
ಚಿಗುರುವಿಕೆಯಲ್ಲೂ
ನಿರಾಳ ಸಂತೆಯ ಗೊಣಗಾಟದಲ್ಲೂ

ಈಗೀಗ
ಕಳಚಿಟ್ಟ ಬೆನ್ನುಹುರಿಗಳ ಮೇಲೆ
ಅನಾಥ ಸೊರೊಂದು
ಚಿಗುರೊಡೆದಿದೆ
ಗೋರಿಗಳು ಹುಯ್ಯಲಿಡುವ ಗಳಿಗೆಯಲ್ಲಿ
ಕಾಲ್ಕಿತ್ತ ಕಡು ಕತ್ತಲ ಶವದ
ಮೆರವಣಿಗೆಯಲ್ಲಿ

‍ಲೇಖಕರು Admin

12 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading