ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಣ್ಣನ ನೆನಪು -1

ಎಚ್ಎಸ್ ವೆಂಕಟೇಶ ಮೂರ್ತಿ ಅವರ ಎರಡನೇ ಮಗ ಸುಧೀರ ಹೊದಿಗೆರೆ. ಇವರು ಪ್ರತಿಷ್ಠಿತ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಸುಧೀರ ಹೊದಿಗೆರೆ ತಮ್ಮ ತಂದೆಯ ಕೆಲವು ನೆನಪುಗಳನ್ನು ಇಲ್ಲಿ ಮೆಲುಕು ಹಾಕಿದ್ದಾರೆ.

-ಸುಧೀರ ಹೊದಿಗೆರೆ

ಬಾಲ್ಯದಲ್ಲಿ ನಮಗೆ ಅಣ್ಣನವರ ಒಡನಾಟ ಬಹಳ ಕಡಿಮೆ. ಅದರ ಹಿಂದೆ ಎರಡು ಕಾರಣಗಳು ಇದ್ದಿರಬಹುದು—ಒಂದೆಡೆ ಅವರ ಸಮಯದ ಕೊರತೆ, ಇನ್ನೊಂದೆಡೆ ಅವರ ಬಗ್ಗೆ ನಮ್ಮ ಮನಸ್ಸಿನಲ್ಲಿ ಬೆಳೆದಿದ್ದ ಒಂದು ಮೃದುವಾದ ಭಯ!

ನನ್ನ ನೆನಪುಗಳ ಬೆಳಿಗ್ಗೆಗಳು ಹಾಸಿಗೆಯ ಮೃದುವಿನಲ್ಲೇ ಆರಂಭವಾಗುತ್ತಿದ್ದರೆ, ಅಣ್ಣನವರ ದಿನಗಳು ಅದಕ್ಕೂ ಮುಂಚೆಯೇ ದಾರಿಗೆ ಹೊರಟಿರುತ್ತಿದವು. ತ್ಯಾಗರಾಜನಗರದ ಆ ಸಣ್ಣ ಮನೆಯೊಳಗೆ ನಾವು ಕಣ್ಣುತೆರೆಸುವಷ್ಟರಲ್ಲಿ, ಅವರು ಬೆಳಗಿನ ಮಸುಕಿನಲ್ಲೇ ಎದ್ದು ಸಿದ್ಧರಾಗಿ, ಬಸ್ ಹಿಡಿದು ಕಾಲೇಜಿನತ್ತ ಹೊರತಡಿರುತ್ತಿದ್ದರು. ಕಾಲೇಜಿನ ಮೊದಲ ಗಂಟೆ ಬಾರಿಸುವ ಮೊದಲೆ ತಲುಪಲೇಬೇಕು ಎಂಬುದು ಅವರೊಳಗಿನ ಅಚಲ ನಿಯಮ—ಎಂತಹ ಅಡೆತಡೆಗಳಿದ್ದರೂ ಕಾಲದ ಜೊತೆ ಮಾಡಿದ ಒಪ್ಪಂದ. ಸಂಜೆಯ ವೇಳೆಗೆ, ಅವರು ಮನೆ ಸೇರುವ ಹೊತ್ತಿಗೆ, ಕತ್ತಲೆ ತನ್ನ ಹಾಸಿಗೆ ಹಾಸಲು ಆರಂಭಿಸಿರುತ್ತಿತ್ತು; ಚಂದ್ರನು ಆಕಾಶದ ಅಂಚಿನಲ್ಲಿ ಮೆಲ್ಲನೆ ಮುಖ ಇಣುಕಿ ಹಾಕಿರುತಿದ್ದ. ನಾವು ಆಗಲೇ ನಿದ್ರೆಯ ತುದಿಯಲ್ಲಿ ತೂಗಾಡುತ್ತಿದ್ದ ಮಕ್ಕಳು. ಹೀಗೆ ಬೆಳಗು-ರಾತ್ರಿಗಳ ಚಕ್ರದಲ್ಲಿ , ಅಣ್ಣನವರ ಉಪಸ್ಥಿತಿ ನಮ್ಮ ಪಾಲಿಗೆ ಅಪರೂಪದ ಹಬ್ಬದಂತೆ—ಶನಿವಾರ ಅಥವಾ ಭಾನುವಾರದ ನಿಧಾನ ಕ್ಷಣಗಳಲ್ಲಿ ಮಾತ್ರ, ಅದೂ ಅವರ ಸಾಹಿತ್ಯದ ಕರೆಯಿಲ್ಲದ ದಿನಗಳಲ್ಲಿ.

ಅಣ್ಣನವರನ್ನು ಕಂಡರೆ ನಮಗೆ ಒಂದು ರೀತಿಯ ಭಯ ಎಂದು ಹೇಳಿದನಲ್ಲವೇ ?  ಇದಕ್ಕೆ ಕಾರಣ ನಾವು ಜನ ಮಕ್ಕಳು ಬಹಳ ತುಂಟರು. ನಮ್ಮ ತುಂಟತನವೇ ಒಂದು ಅಲೆಮಾರಿ ಗಾಳಿಯಂತಿತ್ತು—ಪ್ರತಿದಿನ ಮನೆಯಲ್ಲಿ ಏನಾದರೂ ಒಂದು ಅವಾಂತರದ ಗುರುತು. ಒಡೆದ ಕುರ್ಚಿಯ ಕಾಲು, ಚೂರುಗಳಾದ ಕಿಟಕಿಯ ಗಾಜು, ಹರಿದ ಪುಸ್ತಕದ ಪುಟಗಳು… ಯಾವುದೂ ಇಲ್ಲದಿದ್ದರೆ ಕಿತ್ತ ಪಕ್ಕದ ಮನೆಯ ಗಿಡಗಳು ನಮ್ಮ ಕಿತ್ತಾಟದ ಸಾಕ್ಷಿಗಳಾಗುತ್ತಿದವು. ಒಂದು ತಪ್ಪು ಅಲ್ಲ, ಅನೇಕ ಸಣ್ಣ ಕೃತ್ಯಗಳ ಸರಮಾಲೆ—ಅದಕ್ಕೇ ಆ ಭಯದ ನೆರಳು.

ರಾತ್ರಿ ಸುಸ್ತಾಗಿ ಮನೆಗೆ ಬಂದ ಅಣ್ಣನವರ ಕಿವಿಗೆ ಈ ಸುದ್ದಿ ಹೇಗೋ ತಲುಪಿ ಬಿಡುತ್ತಿತ್ತು. ಇದು ಅವರಿಗೆ ವಿಪರೀತ ಕೋಪ ತರುವುದು. ” ನಗು ಮುಖದ ಕವಿ”  ಎಂದೇ ಹೆಸರಾಗಿದ್ದ ಅಣ್ಣನವರ ಈ ಕೋಪ ಹೊರಗಿನವರು ಯಾರು ಊಹಿಸಲು ಅಸಾಧ್ಯ.  ನಮ್ಮನ್ನು ಕರೆದು ಸಾಲಾಗಿ ನಿಲ್ಲಿಸಿ,  ನನಗೆ ಅಪ್ಪಣೆ ಕೊಡುವವರು “ಹೋಗು, ಹೋಗಿ ಒಂದು ಕೋಲನ್ನು ತೆಗೆದುಕೊಂಡ ಬಾ”!

ಆ ರಾತ್ರಿ “ಕೋಲು ತಂದುಕೊಂಡು ಬಾ” ಎಂಬ ಆಜ್ಞೆ ಬಿದ್ದ ಕೂಡಲೇ ನನ್ನ ತಲೆದಲ್ಲಿ ದೊಡ್ಡ ಪ್ರಶ್ನೆ, ಈ ಹೊತ್ತಿಗೆ ಕೋಲು ಹುಡುಕಲು ನಾನು ಯಾವ ಅರಣ್ಯಕ್ಕೆ ಹೋಗಲಿ? ಅದೂ ತಡವಾದಷ್ಟು ಪೆಟ್ಟುಗಳು ಬಡ್ಡಿಯಂತೆ ಹೆಚ್ಚುತ್ತವೆ ಅನ್ನೋ ಲೆಕ್ಕವೂ ಸ್ಪಷ್ಟ! ಕೊನೆಗೆ ಪರಿಹಾರ ಅಡುಗೆಮನೆಯಲ್ಲೇ ಸಿಕ್ಕಿತು ; ಅಲ್ಲಿದ್ದ ಮುದ್ದೆ ಕೋಲು. ಅದನ್ನೇ ಹಿಡಿದು ಗೌರವದಿಂದ ಸಮರ್ಪಣೆ! ನಂತರ ವಿಧಿಯಂತೆ ಹೊಡೆತ ಸ್ವೀಕಾರ, ಕಣ್ಣೀರಿನ ಜಲಪಾತ, ಮತ್ತು ನೇರವಾಗಿ ಅಜ್ಜಿಯ ಮಡಿಲಿಗೆ ಓಟ.  ಆಗ ಆ ಮುದ್ದೆ ಕೋಲಿನ ಮೇಲೆ ನನಗೆ ವಿಪರೀತ ಕೋಪ !  ಹೇಗಾದರೂ ಮಾಡಿ, ಒಂದು ದಿನ ಆ ಮುದ್ದೆ ಕೋಲನ್ನು ಮಾಯ ಮಾಡಿಬಿಡಬೇಕೆಂಬ ಯೋಚನೆ ನನ್ನ ಮನಸ್ಸಿಗೆ ಬರುತ್ತಿತ್ತು. ಆದರೆ ಆ ಮುದ್ದೆ ಕೋಲು ಮಾಯವಾದರೆ ನಮ್ಮ ಇಷ್ಟದ  ಮುದ್ದೆ ಕೂಡ ತಪ್ಪಿ ಹೋಗಬಹುದೆಂದು ಆ ಯೋಚನೆಯನ್ನು ಅಲ್ಲಿಯೇ ಕೈಬಿಟ್ಟೆ.

ಈ ಹೊಡೆತದ ಶಿಕ್ಷೆಯನ್ನು ತಪ್ಪಿಸಿಕೊಳ್ಳಲು ನಾವು ಒಂದು ಹೊಸ ಉಪಾಯ ಕಂಡುಕೊಂಡೆವು.  ಅದೇನೆಂದರೆ,  ಅಣ್ಣ ಮನೆಗೆ ಬರುವ ಮುಂಚೆಯೇ, ಯಾವುದಾದರೂ ಒಂದು ಮೂಲೆಯಲ್ಲಿ, ನಿದ್ದೆ ಮಾಡಿ ಬಿಡುವುದು ಅಥವಾ ನಿದ್ದೆ ಮಾಡುತ್ತಿರುವಂತೆ ನಟಿಸುವುದು. ನಿದ್ದೆ ಮಾಡುತಿದ್ದ ಮಕ್ಕಳನ್ನು  ಯಾವ ತಂದೆ ತಾನೆ ಎಬ್ಬಿಸಿ ಹೊಡೆಯುತ್ತಾರೆ ?  ಮಲಗಿದ್ದ ಅಥವಾ ಹಾಗೆ ನಟಿಸುತ್ತಿದ್ದ ನಮ್ಮನ್ನು,  ಪಾಪ,  ಅವರೇ ಹಾಸಿಗೆ ಹಾಸಿ ಎತ್ತಿಕೊಂಡು ಬಂದು ಮಲಗಿಸುತ್ತಿದ್ದರು.  ಅವರು ನಮ್ಮನ್ನು ಮೃದುವಾಗಿ ಎತ್ತಿ ಹಾಸಿಗೆಯಲ್ಲಿ ಮಲಗಿಸುವ ಕ್ಷಣಗಳಲ್ಲಿ, ಅವರೊಳಗಿನ ಕೋಪದ ಜ್ವಾಲೆ ಪ್ರೀತಿಯ ಬೆಳಕಾಗಿ ಕರಗುತ್ತಿತ್ತು.

ಇನ್ನೊಂದು ಸಣ್ಣ ರಹಸ್ಯ ಹೇಳಿಬಿಡುತ್ತೇನೆ. ಅಣ್ಣನವರಿಗೆ ಊಟದ ಸಮಯ ಎಂದರೆ ಮೌನ ವ್ರತ : ಮನೆ ಒಂದು ದೇವಸ್ಥಾನವಾಗಿರಬೇಕು! ಆದರೆ ನಾನು? ಊಟದ ವಿಷಯದಲ್ಲಿ ಫುಲ್ ಕಿರಿಕಿರಿ ಪ್ಯಾಕೇಜ್. “ಈ ತರಕಾರಿ ಬೇಡ!”, “ಈ ಗೊಜ್ಜು ಸೆರಲ್ಲ!”, “ಹಾಲಲ್ಲಿ ಕೆನೆ ಇದೆ!”—ಹೀಗೆ ಪ್ರತಿಯೊಂದು ಸಂಗತಿಗೂ ವಿರೋಧ ಪಕ್ಷದ ನಾಯಕರಂತೆ ಪ್ರಶ್ನೆಗಳು. ಹಠದ ನಡುವೆ ಅಚಾನಕ್ “ಧಡ್!” ಅನ್ನೋ ಸದ್ದು. ಆದರೆ ಟ್ವಿಸ್ಟ್ ಏನು ಗೊತ್ತಾ? ಗುದ್ದಿದ್ದು ನನಗಲ್ಲ! ಅಣ್ಣನವರ ಎಡಬದಿಯಲ್ಲಿ ಸುಮ್ಮನೆ ಶಾಂತಿಯಾಗಿ ಊಟ ಮಾಡುತ್ತಿದ್ದ ನನ್ನ ತಮ್ಮನ ಬೆನ್ನಿಗೆ ಬಿದ್ದದ್ದು! ಅವನು ಏನು ತಪ್ಪು ಮಾಡಿದನೆಂದರೆ, ತಪ್ಪಾದ ಜಾಗದಲ್ಲಿ ಕುಳಿತದ್ದು ಮಾತ್ರ!  ಆ ದಿನದಿಂದ ನಾನು ಒಂದು ಮಹತ್ವದ ಜೀವನ ಪಾಠ ಕಲಿತೆ , “ಊಟಕ್ಕೆ ಕುಳಿತುಕೊಳ್ಳುವ ಜಾಗವೂ ಸ್ಟ್ರಾಟೆಜಿ ಆಗಬೇಕು!” ಅಣ್ಣನವರ ಎಡಬದಿ ನನ್ನ ಪಾಲಿಗೆ ನೋ-ಎಂಟ್ರಿ. ನಾನು ಬಲಗಡೆ ಕುಳಿತರೆ ಸುರಕ್ಷೆ ಗ್ಯಾರಂಟಿ . ಊಟ ಮಾಡುತ್ತಿರುವ ಕೈಯಿಂದ ಹೇಗೆ ಗುದ್ದುತ್ತಾರೆ ಹೇಳಿ!?

ಕಾಲ ಕಳೆಯುತ್ತ ಅವರ ಕೋಪವೂ ಮೃದುವಾದ ನೆರಳಾಗಿ ಉಳಿಯಿತು, ಅಥವಾ ನಾವು ದೊಡ್ಡವರಾದೆವೋ? ಇಲ್ಲವೇ ಅವರು ತಮ್ಮೊಳಗಿನ ಅಲೆಗಳನ್ನು ಶಮನಗೊಳಿಸಿದ್ದರೋ?. ಆದರು ಕೋಪ ಪೂರ್ಣ ವಾಗಿ ನಿಂತಿದೆ ಎಂದೇನಲ್ಲ. ಹಾಗೇನಾದರೂ ಅವರಿಗೆ ಕೋಪ ಅಥವಾ ಬೇಸರ ಬಂದಿದ್ದರೆ ಅದು ಶಾಲಿನಿಗೆ ತಿಳಿದುಬಿಡುವುದು. ಅವಳು ನನ್ನನ್ನು ಪಕ್ಕಕ್ಕೆ ಕರೆದು ಮೆತ್ತಗೆ ಹೇಳುವವಳು ” ನೋಡಿ,  ಅಪ್ಪ ಯಾಕೋ ಮೀಸೆ ತೆಗೆದಿದ್ದಾರೆ. ಏನಾಯ್ತು ಎಂದು ಹೋಗಿ ಕೇಳಬಾರದೇ ?”. ಆಗ ನನಗೆ ಹೊಳೆದದ್ದು, ” ಮೀಸೆ ಇಲ್ಲ ಎಂದರೆ ಕೋಪ ಇದೆ” ಎಂದು ಅರ್ಥ.

**********

ಸಂಸಾರದ ಸುತ್ತುಬುತ್ತುಗಳನ್ನು ಅಮ್ಮ ಮೌನವಾಗಿ ತನ್ನ ಭುಜಗಳ ಮೇಲೆ ಹೊತ್ತುಕೊಂಡಿದ್ದಾಗ, ಅಣ್ಣನವರ ಲೋಕ ನಿಧಾನವಾಗಿ ಕಾವ್ಯದ ಗಗನಕ್ಕೆ ವಿಸ್ತರಿಸುತ್ತಿತ್ತು. ತಿಂಗಳ ಕೊನೆಯಲ್ಲಿ ಅವರು ತಂದು ಅಮ್ಮನ ಕೈಗೆ ಇಡುತ್ತಿದ್ದ ಸಂಬಳವೇ ಅವರ ಕರ್ತವ್ಯದ ಗಡಿ; ಅದರಾಚೆಗೆ ದಿನನಿತ್ಯದ ಎಲ್ಲ ಚಿಕ್ಕ–ದೊಡ್ಡ ಹೊರೆಗಳು ಅಮ್ಮನ ಹೆಜ್ಜೆಗಳಿಗೆ ಸೇರಿದವು. ರೇಷನ್ ಅಂಗಡಿಯ ಸಾಲು, ತರಕಾರಿ ಚೀಲದ ಭಾರ, ಕರೆಂಟ್ ಬಿಲ್ಲಿನ ದಿನಾಂಕ, ಸೀಮೆ ಎಣ್ಣೆಯ ಕ್ಯೂ, ನಮ್ಮ ಹೋಂವರ್ಕಿನ ಕಿರಿಕಿರಿ, ಇವೆಲ್ಲವೂ ಅವಳ ನಿಶ್ಶಬ್ದ ದಿನಚರಿಯ ಭಾಗ. ಅಮ್ಮನ ಬದುಕು ಭೂಮಿಯ ಲಯದಲ್ಲಿ ಸುತ್ತುತ್ತಿದ್ದರೆ, ಅಣ್ಣನವರ ಮನಸ್ಸು ಪದಗಳ ರೆಕ್ಕೆ ಹಿಡಿದು ಆಕಾಶದಲ್ಲಿ ಹಾರುತ್ತಿತ್ತು. ಒಂದೇ ಮನೆಯೊಳಗೆ ಭೂಮಿಯ ಸ್ಥೈರ್ಯವೂ, ಗಗನದ ಕನಸೂ ಸೇರಿ, ನಮ್ಮ ಜೀವನಕ್ಕೆ ಒಂದು ಮೃದು ಸಮತೋಲನವನ್ನು ಕಲ್ಪಿಸಿದ್ದವು.

ಅವತ್ತು ರಜೆ ದಿನ, ಅಣ್ಣ ಮನೆಯಲ್ಲೇ ಇದ್ದರು. ನಮಗೆ ಶಾಲೆಯ ಪರೀಕ್ಷೆಗಳ ಭೀತಿ ಹತ್ತಿರವಾಗುತ್ತಿತ್ತು! ಅಮ್ಮ ಅಡುಗೆ ಮನೆಯೊಳಗಿಂದಲೇ ಧ್ವನಿ ಎತ್ತಿದರು “ಮನೆಯಲ್ಲಿ ಇದ್ದೀರಲ್ಲಾ, ಹುಡುಗರ ಪರೀಕ್ಷೆಗೆ ಹೇಗೆ ತಯಾರಿ ಮಾಡ್ತಿದ್ದಾರೆ ಅಂತ ಸ್ವಲ್ಪ ಕೇಳಿ ನೋಡಬಾರದೆ?”

ಆ ಒಂದು ವಾಕ್ಯವೇ ಸಾಕು,  ಅಣ್ಣನವರ ಒಳಗೆ ಯಾವುದೋ “ಶಿಕ್ಷಣ ಯಜ್ಞ” ಪ್ರಾರಂಭವಾದಂತಾಯಿತು. “ಹೌದಲ್ಲ…” ಎಂದು ನಿಧಾನವಾಗಿ ತಲೆಯಾಡಿಸಿ, ಅಲ್ಲೇ ಚಾಪೆ ಹಾಸಿದರು. ನಮ್ಮನ್ನು ಸುತ್ತಲೂ ಕುಳ್ಳಿರಿಸಿದರು. ಯುದ್ಧ ಆರಂಭವಾಯಿತು, ಅದಕ್ಕೆ ಹೆಸರು: ವಿದ್ಯಾಭ್ಯಾಸ.

ಮೊದಲು ಇಂಗ್ಲಿಷ್ ಡಿಕ್ಟೇಶನ್.

ನನಗೆ ಅದು ಕಬ್ಬಿಣವೂ ಅಲ್ಲ… ಸಂಪೂರ್ಣ ಕಬ್ಬಿಣದ ಕಾರ್ಖಾನೆ! ಅಣ್ಣ ಹೇಳುತ್ತಿದ್ದ ಪದಗಳು ನನ್ನ ಕಿವಿಗೆ ಹೊಸ ಗ್ರಹಭಾಷೆಯಂತೆ. “C” ಎಲ್ಲಿ ಹಾಕಬೇಕು, “K” ಯಾವಾಗ ಬರಬೇಕು , ಎಲ್ಲವೂ ಗೊಂದಲದ ಚಕ್ರವಾತ. ನಾನು ಬರೆಯುತ್ತಿದ್ದ ಪ್ರತಿಯೊಂದು ಪದವೂ “ತಪ್ಪು” ಎಂಬ ಘೋಷಣೆಯನ್ನೇ ಧರಿಸಿತ್ತು. ಶಿಕ್ಷೆ ಅಂತೂ ಖಚಿತ, ನೂರು ಬಾರಿ ಬರೆಯಬೇಕು!

ಅದರ ನಂತರ ಗಣಿತ. ಅಣ್ಣನವರ ಕಣ್ಣುಗಳಲ್ಲಿ ಒಂದು ವಿಚಿತ್ರ ಮಿಂಚು ; ಆಲ್ಜಿಬ್ರಾ ಅವರ ಪ್ರಿಯ ಪ್ರೇಯಸಿ! ಹೈಸ್ಕೂಲಿನ ಫಾರ್ಮುಲಾಗಳು ಅವರ ಮನಸ್ಸಿನಲ್ಲಿ ಇನ್ನೂ ಜೀವಂತವಾಗಿದ್ದವು.

ಮೊದಲ ಪ್ರಶ್ನೆ ಬಾಣದಂತೆ ನನ್ನ ಮೇಲೆ ಬಿತ್ತು:

“ಇಡ್ಲಿ ಪ್ಲಸ್ ವಡೆ ಹೋಲ್ ಸ್ಕ್ವೇರ್ ಏನು?”

ನಾನು ಕ್ಷಣಾರ್ಧದಲ್ಲಿ ಉತ್ತರಿಸಿದ್ದೆ:

“ಇಡ್ಲಿ ಸ್ಕ್ವೇರ್ + ವಡೆ ಸ್ಕ್ವೇರ್ + ಟು ಇಡ್ಲಿ ವಡೆ!”

“ಗುಡ್ ಗುಡ್…” ಅವರ ಧ್ವನಿಯಲ್ಲಿ ಸಂಭ್ರಮ. ಮುಂದಿನ ದಾಳಿ ಇನ್ನಷ್ಟು ಭೀಕರ :

“ಇಗೋ ಹೇಳು… ಇಡ್ಲಿ + ವಡೆ + ಸಾಂಬಾರ್ ಹೋಲ್ ಸ್ಕ್ವೇರ್ ಏನು?”

ಈ ಬಾರಿ ನನ್ನ ಆತ್ಮವಿಶ್ವಾಸ ಸ್ವಲ್ಪ ಕುಸಿತ. ನಿಧಾನವಾಗಿ ಹೇಳಿದೆ:

“ಇಡ್ಲಿ ಸ್ಕ್ವೇರ್… ವಡೆ ಸ್ಕ್ವೇರ್… ಸಾಂಬಾರ್ ಸ್ಕ್ವೇರ್… ಟು ಇಡ್ಲಿ ವಡೆ… ಟು ವಡೆ ಸಾಂಬಾರ್… ಟು… ಟು…”

ಇಡ್ಲಿ ಜೊತೆ  ಅವರು, ಸಾಂಬಾರ್ ಹೇಳಿದ್ದರೋ ? ಚಟ್ನಿ ಹೇಳಿದ್ದರೋ ? ಗಡಿಬಿಡಿಯಲ್ಲಿ ಎಲ್ಲಾ ಮರೆತು ಹೋಗುತ್ತಿದೆ ! ಕೊನೆಗೆ ಇಡ್ಲಿ ವಡೆ ಸಾಂಬಾರ್ ಚಟ್ನಿ,  ಎಲ್ಲಾ ಸೇರಿ ನನ್ನ ಉತ್ತರ ಚಿತ್ರಾನ್ನ!.

ಒಂದು ವಿಷಯವನ್ನು ಮನಸ್ಸು ತುಂಬಿಕೊಂಡು ಹೇಳಬೇಕು. ಅವರು ಎಂದಿಗೂ ನಮಗೆ ಬಂದ ಅಂಕಗಳನ್ನು ಲೆಕ್ಕ ಹಾಕಿ ದೂಷಿಸುವವರಾಗಿರಲಿಲ್ಲ. “ಪರವಾಗಿಲ್ಲ ಬಿಡು… ಮುಂದಿನ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡು” ಎಂಬ ಆ ಒಂದೇ ವಾಕ್ಯದಲ್ಲಿ, ಒಂದು ದೊಡ್ಡ ಆಸರೆ ಇರುತ್ತಿತ್ತು. ಸೋಲಿನ ಭಾರವನ್ನು ಕಡಿಮೆ ಮಾಡುವ ಅವರ ಆ ಮೃದುವಾದ ಧ್ವನಿಯೇ ನಮಗೆ ಮತ್ತೆ ಪ್ರಯತ್ನಿಸುವ ಧೈರ್ಯ ನೀಡುತ್ತಿತ್ತು. ಅಂಕಗಳು ಚೆನ್ನಾಗಿ ಬಂದಾಗ ಅವರ ಸಂತೋಷವನ್ನು ಪದಗಳಲ್ಲಿ ಹಿಡಿಯುವುದು ಕಷ್ಟ. ಅದು ಕೇವಲ ಹೆಮ್ಮೆ ಅಲ್ಲ, ನಮ್ಮ ಬೆಳವಣಿಗೆಯಲ್ಲೇ ಅವರು ಕಂಡ ಸಂತೋಷ, ಒಂದು ನಿಶ್ಶಬ್ದ ಹರ್ಷ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸೌಖ್ಯ ರಾಜ್ಯಕ್ಕೆ ರಾನ್ಕ್  ಬಂದ ದಿನ ಇನ್ನೂ ಸ್ಪಷ್ಟವಾಗಿ ನೆನಪಿದೆ. ಫಲಿತಾಂಶದ ದಿನವೇ ದೂರದರ್ಶನದಿಂದ  ಅವಳಿಗೆ ಕರೆ ಬಂದಿತ್ತು. ಆದರೆ ಆ ಕ್ಷಣದಲ್ಲಿ, ಟಿವಿಯ ಎದುರು ಮಾತನಾಡಿದವರು ಸೌಖ್ಯಕ್ಕಿಂತ ಹೆಚ್ಚಾಗಿ ಅಣ್ಣನವರೇ ಆಗಿದ್ದರು. ಅವರ ಧ್ವನಿಯಲ್ಲಿ ಕಂಡ ಸಂತೋಷ, ಹೆಮ್ಮೆಯೊಂದಿಗೆ ಬೆರೆತ ಒಂದು ಕಣ್ಣೀರಿನ ಬೆಳಕು! ಅದು ಕೇವಲ ಫಲಿತಾಂಶದ ಆಚರಣೆ ಅಲ್ಲ, ಅವರ ಕನಸುಗಳು ನಮ್ಮೊಳಗೆ ಹೂವು ಬಿಡುತ್ತಿರುವ ಕ್ಷಣವಾಗಿತ್ತು.

**********

ನಿದ್ದೆಯ ವಿಷಯದಲ್ಲಿ ಅಣ್ಣನವರು ಒಂದು ರೀತಿಯ ಆಶೀರ್ವಾದ ಪಡೆದವರಂತಿದ್ದರು. ಮನೆಯೊಳಗೆ ಎಷ್ಟೇ ಶಬ್ದ, ಎಷ್ಟೇ ಗದ್ದಲ ಇದ್ದರೂ, ದಿಂಬಿಗೆ ತಲೆ ತಾಗಿದ ಕ್ಷಣವೇ ಅವರ ಲೋಕವೇ ಬದಲಾಗುತ್ತಿತ್ತು—ಅದು ಮೌನದ ಆಳಕ್ಕೆ ಇಳಿದ ಮತ್ತೊಂದು ಪ್ರಪಂಚ. ಅಲ್ಲಿ ಅವರು ಕೇವಲ ಮಲಗುವುದಲ್ಲ; ಮತ್ತೆ ಯಾವ ಹೊತ್ತಿಗೆ ಎಚ್ಚರಗೊಳ್ಳಬೇಕು ಎಂಬುದನ್ನೂ ಮೊದಲೇ ಮನಸ್ಸಿನಲ್ಲಿ ಗಟ್ಟಿಯಾಗಿ ನಿರ್ಧರಿಸಿಕೊಂಡಿರುತ್ತಿದ್ದರು, ಕಾಲವೇ ಅವರಿಗೆ ವಿಧೇಯವಾಗಿರುವಂತೆ.

ಒಂದು ಕ್ಷಣದಲ್ಲಿ ಅವರು ನಿದ್ದೆಯಲ್ಲಿರುತ್ತಿದ್ದರು; ಮುಂದಿನ ಕ್ಷಣದಲ್ಲಿ ಎದ್ದು, ಹೊಸ ಪದ್ಯದೊಳಗೆ, ಹೊಸ ಸಾಲಿನೊಳಗೆ ಕಳೆದುಹೋಗುತ್ತಿದ್ದರು. ಬರವಣಿಗೆ ಅವರಿಗಾಗಿ ಕೆಲಸವಲ್ಲ್, ಅದು ನಿದ್ರೆಯ ನಂತರದ ಮತ್ತೊಂದು ಉಸಿರು.

“ಬುದ್ಧ ಚರಣ” ಬರೆಯುವ ದಿನಗಳಲ್ಲಿ ನಾನು ನೋಡುತ್ತಿದ್ದದ್ದು ಒಂದು ವಿಶೇಷ ದೃಶ್ಯ. ಅವರ ಕೋಣೆಯ ದೀಪ ಕೆಲವೊಮ್ಮೆ ಹೊಳೆಯುತ್ತಿತ್ತು, ಕೆಲವೊಮ್ಮೆ ನಿಶ್ಶಬ್ದವಾಗಿ ಆರಿಹೋಗುತ್ತಿತ್ತು. ಆ ಬೆಳಕು ಮತ್ತು ಕತ್ತಲೆಯ ನಡುವಿನ ಮೌನ ಸಂಭಾಷಣೆಯಲ್ಲಿ, ಬುದ್ಧ ನಿಧಾನವಾಗಿ ರೂಪುಗೊಳ್ಳುತ್ತಿದ್ದನು, ಒಂದು ಜೀವಂತ ತಪಸ್ಸಿನಂತೆ.

ಆದರೆ ಕೊನೆಯ ದಿನಗಳಲ್ಲಿ ಆ ನಿದ್ದೆಯ ಮೇಲಿನ ಹಿಡಿತ ನಿಧಾನವಾಗಿ ಕೈತಪ್ಪಿತು. ಆರೋಗ್ಯದ ನೆರಳು ಅವರ ಮೌನಕ್ಕೂ ಅಡಚಣೆ ತಂದಿತು. ಮಧ್ಯರಾತ್ರಿ ಕೆಲವೊಮ್ಮೆ ಶಾಲಿನಿಯ ಫೋನ್ ಮೊಳಗುತ್ತಿತ್ತು. ಅದರ ಆ ಕಡೆಯಿಂದ ಅವರ ಸಣ್ಣ, ನೋವಿನ ಧ್ವನಿ: “ನಿದ್ರೆ ಬರ್ತಿಲ್ಲ… ಹಸಿವೂ ಆಗ್ತಿದೆ… ಸ್ವಲ್ಪ ಹಾಲು-ಗಂಜಿ ಮಾಡಿಕೊಡ್ತೀಯಾ?”

ಆ ಕ್ಷಣಗಳಲ್ಲಿ ಅವರು ಕವಿ ಅಲ್ಲ, ತಂದೆ ಅಲ್ಲ, ಗುರು ಅಲ್ಲ. ಒಂದು ಮಗುಮಾದರಿಯ ನಿರ್ಭರತೆಯ ಮೌನವಾಗಿ ಕೇಳಿಸುತ್ತಿದ್ದರು.

**********

ಅವರ ಓದು ಬರವಣಿಗೆಗೆ ಇಂದು ಬಿಡುವಿರಬೇಕು !  ಬೆಳಿಗ್ಗೆ ಎದ್ದವರೆ  ಅಡುಗೆ ಮನೆಗೆ ಬಂದಿದ್ದಾರೆ ! “ಏನಮ್ಮ ಇವತ್ತು ತಿಂಡಿ ? , ತರಕಾರಿ ಏನಾದರೂ ಹೆಚ್ಚಿ ಕೊಡಲೇ ?”

ತರಕಾರಿ ಹೆಚ್ಚುವುದು ಎಂದರೆ ಅವರಿಗಾಗಿ ಅದು ಕೇವಲ ಕೆಲಸ ಅಲ್ಲ, ಒಂದು ಕಾವ್ಯ ರಚನೆ. ಪ್ರತಿಯೊಂದು ಹೋಳಿಗೆಗೂ ತೂಕ, ಗಾತ್ರ, ನ್ಯಾಯ, ನ್ಯಾಯಾಂಗ ಎಲ್ಲವೂ ಬೇಕು! ನಿಧಾನವಾಗಿ, ತೂಗಿ ಅಳೆದು, ಜಗತ್ತಿನ ಶಾಂತಿಗೆ ತಕ್ಕಂತೆ ಕತ್ತರಿಸುತ್ತಿದ್ದ ಅವರು.

ಹಿಂದಿನಿಂದ ಶಾಲಿನಿಯ ಕಂಠಶಬ್ದ ಬಾಣದಂತೆ ಬರುತಿತ್ತು” “ನೀವು ತರಕಾರಿ ಹೆಚ್ಚಲು ಇಷ್ಟು ಸಮಯ ತೆಗೆದುಕೊಂಡರೆ, ಉಪ್ಪಿಟ್ಟು ಅಲ್ಲ… ರವೇ ಸೀದೋ ಚಾರ್ಕೋಲ್ ಆಗಿಬಿಡುತ್ತದೆ! ಉಪ್ಪಿಟ್ಟು ಹೋಗಿ ಕಪ್ಪಿಟ್ಟು ಆದ್ರೆ ನಾನು ಹೊಣೆ ಅಲ್ಲ!”

ಅಣ್ಣನವರಿಗೆ ರುಚಿಯ ಮೇಲೆ ಪ್ರೀತಿ ಅಪಾರ. ರೊಟ್ಟಿ, ಪಲ್ಯ, ಮುದ್ದೆ, ಗೊಜ್ಜು, ಎಸರು—ಎಲ್ಲವೂ ಅವರ ಹೃದಯದ ಬಂಧುಗಳು. ಊಟದಲ್ಲಿ ಅವರು ಎಂದಿಗೂ “ಇಷ್ಟವಿಲ್ಲ” ಅನ್ನೋ ಪದ ಬಳಸುವುದಿಲ್ಲ. ಏನಾದರೂ ಸ್ವಲ್ಪ ತಪ್ಪಾದರೂ ಅವರ ಪ್ರತಿಕ್ರಿಯೆ ತುಂಬ ಸೌಮ್ಯ, ““ಯಾಕೋ ಇವತ್ತು ಅಡುಗೆಗೆ ರುಚಿ ಹಾಕೋದು ಮರೆತೆಯಲ್ಲಮ್ಮ…”

ಆದರೆ ಒಂದು ವಿಷಯ ಮಾತ್ರ ವಿಚಿತ್ರ., ಪೊಂಗಲ್!.  ಅದಕ್ಕೆ ಅವರ ಮನಸ್ಸಿನಲ್ಲಿ ಸಣ್ಣ ವಿರೋಧ ಇತ್ತು. ಅದನ್ನು ಅವರು ಪ್ರೀತಿಯಿಂದ “ಚೆನ್ನೈ” ಎಂದು ಕರೆಯುತ್ತಿದ್ದರು. ನಮ್ಮ ಮನೆಯಲ್ಲಿ ಪೊಂಗಲ್ ಕಂಡ ಕ್ಷಣವೇ ಮೊದಲ ಸೊಸೆ ಪ್ರತಿಮ ಫೋನ್ ಡಯಲ್ ಆಗುತ್ತಿತ್ತು ” ಇವತ್ತು ನಿನ್ನ ಮನೆಯಲ್ಲಿ ಏನಮ್ಮ ತಿಂಡಿ?”

ಅಂದು ಅವರ ಮನೆಯಲ್ಲೂ ಪೊಂಗಲ್ ಅಗಿರಬೇಕೇ ?

“ಓಹ್… ಅಕ್ಕ-ತಂಗಿ ಸೇರಿ ಚೆನ್ನೈ ಮಾಡ್ತಿದೀರಾ? ಬೇರೆ ಏನೂ ಇಲ್ವಾ?”

ಮತ್ತೆ ಮುಂದಿನ ಕರೆ. ಮತ್ತೊಂದು ಸೊಸೆ, ಮತ್ತೊಂದು ವಿಚಾರಣೆ! ಪೊಂಗಲ್ ಒಂದು ಕುಟುಂಬ ತನಿಖಾ ಪ್ರಕರಣವಾಗಿಬಿಡುತ್ತಿತ್ತು.

ಮನೆಯ ತಿಂಡಿಯ ಜೊತೆಗೆ ಅವರಿಗೆ ಹೋಟೆಲ್ ತಿಂಡಿಗಳ ಮೇಲೂ ವಿಶೇಷ ಪ್ರೀತಿ. ವಿದ್ಯಾರ್ಥಿ ಭವನ, ದ್ವಾರಕ, ಎಸ್‌ಎಲ್‌ವಿ, ಎನ್‌ಎಮ್‌ಎಚ್—ಇವುಗಳ ಹೆಸರು ಕೇಳಿದರೆ ಅವರ ಕಣ್ಣುಗಳಲ್ಲಿ ಒಂದು ಹಬ್ಬವೇ ನಡೆಯುತ್ತಿತ್ತು. ಇವತ್ತು ರವಿಂದ್ರ ಕಲಾಕ್ಷೆತ್ರದಲ್ಲಿ  ಒಂದು ಕಾರ್ಯಕ್ರಮ.  ಅದಕ್ಕೆ ಅಣ್ಣನೇ  ಮುಖ್ಯ ಅತಿಥಿ.  ಡ್ರೈವರ್‌ಗೆ ಶಿವಣ್ಣ ಪೋನ್ ಮಾಡಿ,  ಅವರಿಗೆ ಆದೇಶ:

“ಇವತ್ತು ಸಂಜೆ ಐದುವರೆಗೆ ಕಾರ್ಯಕ್ರಮ ಇದೆ. ನಾಲ್ಕಕ್ಕೆ ಬಾ. ಹೋಗುವ ದಾರಿಯಲ್ಲಿ ಎನ್‌ಎಮ್‌ಎಚ್‌ನಲ್ಲಿ ಇಡ್ಲಿ ಸಾಂಬಾರ್ ತಿನ್ನೋಣ.”

ನಾನು ಮಧ್ಯೆ ನಗುತ್ತ ಕೇಳಿದೆ, ““ಕಾರ್ಯಕ್ರಮದಲ್ಲೇ ತಿಂಡಿ ಕೊಡ್ತಾರಲ್ಲಾ, ಮತ್ತೆ ಹೋಟೆಲ್ ಖರ್ಚು ಯಾಕೆ?”. ಅವರ ಉತ್ತರ ಸಿಂಪಲ್ ತತ್ವಶಾಸ್ತ್ರ “ಇರುವಾಗ ನೋಡು, ಇರದಾಗ ಹಲುಬಬೇಡ.”

ಆ ಮಾತು ಆಗ ನಗುವಾಗಿದ್ದರೂ, ನಂತರ ಅದು ಬದುಕಿನ ಸತ್ಯವಾಗಿ ಅರಿತುಕೊಂಡೆವು. ಕೊನೆಯ ದಿನಗಳಲ್ಲಿ ಆ ಸಣ್ಣ ಆಸೆಗಳೂ ಅವರಿಂದ ದೂರವಾಗುತ್ತಾ ಹೋದವು. ಒಂದು ದಿನ ವಿದ್ಯಾರ್ಥಿ ಭವನದ ದೋಸೆಯ ಆಸೆ. ಆದರೆ ದೇಹ ಸಹಕರಿಸಲಿಲ್ಲ. ಪಾರ್ಸೆಲ್ ತರಿಸಲಾಯಿತು. ದೋಸೆ ತಟ್ಟೆಯ ಮುಂದೆ ಅವರು ಸ್ವಲ್ಪ ಹೊತ್ತು ನೋಡಿದರು… ಒಂದು ತುತ್ತು ತಿನ್ನಲು ಪ್ರಯತ್ನಿಸಿದರು… ಮತ್ತೆ ನಿಲ್ಲಿಸಿದರು, ಕಣ್ಣಲ್ಲಿ ನೀರು…

“ಯಾಕೋ… ನುಂಗಲು ಆಗುತ್ತಿಲ್ಲ…”

ಆ ಮಾತು ಕೇಳಿದ ಕ್ಷಣದಲ್ಲಿ, ಅಡುಗೆಮನೆಯ ಹಾಸ್ಯಗಳೆಲ್ಲಾ ಮೌನವಾಗಿಬಿಟ್ಟವು. ಅವರ ಕಣ್ಣುಗಳಲ್ಲಿ ಕಾಣಿಸಿದ ನೋವು, ಆ ದೋಸೆಗಾಗಿ ಅಲ್ಲ, ಅದು ಕಳೆದುಹೋಗುತ್ತಿದ್ದ ಶಕ್ತಿಯೊಳಗಿತ್ತು.  ಆ ಕ್ಷಣದಲ್ಲಿ ಅವರು ಕೇವಲ ಊಟ ಪ್ರಿಯ ಅಣ್ಣನಲ್ಲ; ಬದುಕಿನ ಸಣ್ಣ ಸಂತೋಷಗಳನ್ನೇ ಪ್ರೀತಿಸಿದ ಒಂದು ಮೌನ ಕವಿ !

ಮುಂದುವರೆಯುತ್ತದೆ

‍ಲೇಖಕರು Admin

12 May, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading