ವಿಕ್ರಮ ಹತ್ವಾರ್ ಅವರ ಎರಡು ಕವನ ಸಂಕಲನ ‘ಮೆಟ್ರೊ ಝೆನ್’ ಮತ್ತು ‘ನಿಶ್ಚಲವ ಕಲಕಿದ ಹಕ್ಕಿ’
‘ಮೆಟ್ರೊ ಝೆನ್’ ಕೃತಿಯನ್ನು ಅಂಕಿತ ಪುಸ್ತಕ ಹಾಗೂ ‘ನಿಶ್ಚಲವ ಕಲಕಿದ ಹಕ್ಕಿ’ ಕೃತಿಯನ್ನು ವೀರಲೋಕ ಪ್ರಕಾಶನ ಪ್ರಕಟಿಸಿದೆ.
ಈ ಕೃತಿಗಳ ಕುರಿತ ಗೀತಾ ಹೆಗಡೆ ಅವರ ಬರಹ ಇಲ್ಲಿದೆ.
–ಗೀತಾ ಹೆಗಡೆ
ಕವಿತೆಗಳನ್ನು ಕೊಂಚವೂ ಹಿಂಜಬಾರದು! ಆದರೆ, ಅವು ಕವಿತೆಗಳು! ಗಂಧವನ್ನು ತೇಯ್ದರೆ ಅದು ನೋಯಬಹುದು, ನೊಂದೀತೆಂದು ಸುಮ್ಮನೇ ಇಟ್ಟುಬಿಡಲಾದೀತೆ? ಖ್ಯಾತ ಕವಿ, ಬರಹಗಾರ ವಿಕ್ರಮ ಹತ್ವಾರ್ ಅವರ ಮೆಟ್ರೊ ಝೆನ್ ಕವಿತೆಗಳು, ಮತ್ತು ನಿಶ್ಚಲವ ಕಲಕಿದ ಹಕ್ಕಿ ಸಂಕಲನಗಳ ಓದಿನ ಕಿರು-ಪ್ರತಿಸ್ಪಂದ ಇಲ್ಲಿದೆ.
ಒಂದು ಸಾರ್ಥಕ ಕವಿತೆ ತನ್ನನ್ನು ಓದಿಕೊಳ್ಳಲು ಹಚ್ಚುತ್ತಿದ್ದಂತೆಯೇ ಓದುಗಮನದ ಪೂರ್ತಿ ಹೊರಜಗತ್ತಿನ ಅರಿವನು ಕಸಿದು, ಹಠಾತ್ತನೆ ತನ್ನತ್ತ ಸೆಳೆದು, ಕವಿತೆಯ ತುದಿಸಾಲು ಪೂರ್ಣವಿರಾಮವನ್ನು ಹಾಳೆಯಲ್ಲಿ ಸೂಚಿಸುತ್ತಿದ್ದರೂ- ಮೋಹಕ್ಕೊಳಗಾದಂತೆ, ಅಥವಾ, ಕವಿತೆಯನ್ನು ಇನ್ನೂ ತುಸು ಅರ್ಥ ಮಾಡಿಕೊಳ್ಳಬೇಕಾಗಿದೆಯಪ್ಪಾ, ಏನಿರಬಹುದು-ಈ ಇದರ ಒಳಗುಟ್ಟು..ಎಂಬ ಜವಾಬ್ದಾರಿ ವಹಿಸಲ್ಪಟ್ಟಂತೆ, ಮರು-ಮರು-ಓದಿಗೆ ಎಳಸುವ ಕವಿತೆ ಈ ಬಗೆಯದು. ಅದು ಎಂದಿಗೂ ಓದುಗನಿಗೆ ಒಂದು ವಿಶೇಷ ಅನುಭವ.!. ಕವಿತೆ ಸುಲಭಕ್ಕೆ ತನ್ನನ್ನು ಬಿಟ್ಟುಕೊಡದದ್ದಾದರೆ ಏನೋ ಒಂದು ವಿಚಿತ್ರ ಆಕರ್ಷಣೆ ಇದ್ದೇ ಇರುತ್ತದೆ! ಸಾಲಿಗೆ ಸಾಲು ಹೊಸೆದಿರದೇ ಅದು ಅರ್ಥಕ್ಕೆ ಇನ್ನೂರಾರು ಅರ್ಥಸಾಧ್ಯತೆಗಳನ್ನು ಒದಗಿಸುತ್ತ ಸಾಗುತ್ತದೆ:
ಗೀತಾರ್ಥಿಯಾದ ಶಿಷ್ಯ-ಶ್ರದ್ಧೆಗೆ ಹೇಗೆ ಗುರುವು ಕೊಂಚ-ಕೊಂಚವೇ ತನ್ನ ವಿದ್ಯೆಯ ಒಳಮರ್ಮಗಳನ್ನು ಅನುಗ್ರಹಿಸುತ್ತಲೂ, ಅದೇ ಕಾಲಕ್ಕೆ ಆ ವಿದ್ಯೆಯ ಮೇಲಿನ ತನ್ನ ಸ್ವಾಯತ್ತತೆಯನ್ನು ಹತೋಟಿಯಲ್ಲಿಟ್ಟುಕೊಳ್ಳುತ್ತಲೇ ಸರಿದೂಗಿಸುವನೋ- ಹಾಗೆ! ಕನ್ನಡದ ಪ್ರಮುಖ ಬರಹಗಾರರಲ್ಲೊಬ್ಬರಾದ ವಿಕ್ರಮ ಹತ್ವಾರ್ ಅವರ ಕಾವ್ಯಸೃಷ್ಟಿಗೆ ಅದರದೇ ಆದ ಸ್ವಂತಿಕೆಯಿದೆ.
ಜೀವನ ಎಂಬುದು ಹೇಗೇ ಇರಲಿ, ವಿಷಾದಗಳು ಮೈಯುಣ್ಣಲು ಬಿಡದಿರಲು ಬೇಕಾದ ದಾರ್ಶನಿಕ ತತ್ವವೊಂದು ಅವಗತವಿದ್ದರೆ, ಅವಗತವಾದಾಗ, ಮೂಡುವ ಕವಿತೆ ಬರಿಯ ಪದಗಳಾಗುಳಿಯುವುದಿಲ್ಲ. ಮತ್ತಿದನ್ನು ಉಸುರಲು ಪಿಸುಮಾತಿನ ದನಿಯೇ ಸಾಕು!! ಕ್ರಾಂತಿಕಾರಕ ಘೋಷಣೆಗಳಾಗಲೀ, ಅಥವಾ ಅಡಂಬರ-ಅಬ್ಬರವಾಗಲೀ ಇಲ್ಲದ, ಕವಿತೆಯನ್ನು ಕವಿತಾತ್ಮಕವಾದ ನಿಗೂಢತೆಯೊಂದಿಗೇ, ನವಿರುತನ, ಅರ್ಥವಂತಿಕೆಯಲ್ಲಿ ಅರಳಿಸುವ, ಜೀವ-ಜೀವನಪರ ಸಹೃದಯತೆಯ ಮಿಡಿತ- ವಿಕ್ರಮ್ ಹತ್ವಾರ್ ಅವರ ಕಾವ್ಯಸೃಷ್ಟಿಯ ಹೆಗ್ಗುರುತು ಎನ್ನಬಹುದು. ನೋವಿನದೋ/ನಲಿವಿನದೋ –ಒಂದು ಅಂತರ್ದನಿಯ ಸ್ವಗತ ಎಲ್ಲ ಹೇಳಿಬಿಡುತ್ತದೆ.
“ಕೆಂಡದಲಿ ಸುಡುಜೋಳ” ಒಂದು ಮೈ ಝುಮ್ಮೆನಿಸುವಂಥ ಪ್ರತಿಮಾತ್ಮಕ ಕವಿತೆ. (ಮೆಟ್ರೊ ಝೆನ್)
ಕೆಂಡದ ಮೇಲೆ ಮಲಗಿಸಿ ಕೆಂಪಾಗಲೆಂದು
ಬೀಸಣಿಕೆ ಬೀಸುತಿರುವೆಯಾ ತಾಯೀ!
ಎಂದಾರಂಭಗೊಳ್ಳುವ ದೃಶ್ಯ, ನಿಗಿನಿಗಿ ರೂಪಕಗಳೊಂದಿಗೆ ಅನಾವರಣಗೊಳ್ಳುವ “ಬಗೆ” ಅನ್ಯಾದೃಶ!
ರುಚಿ ಏರಿಸಲು ಸವರುವೆ
ಉಪ್ಪು-ಹುಳಿ-ಖಾರ.
ನನ್ದದೇ ಕಿತ್ತ ಚರ್ಮದ ಮೇಲಿಟ್ಟು ಕೊಡುವೆ
ಮೆಲ್ಲುವವರ ಕೈ ಸುಡದಿರಲೆಂದು
ಕಂಬನಿ ಜಿನುಗದೆ ಮೆದುವಾಗಿ ಎದ್ದು
ಉರಿಯ ಹಾಸಿನ ಮಸಿ ಕಂಬಳಿ ಹೊದ್ದು
ನಿನ್ನುಡಿಗಂಟಿಕೊಂಡೇ ಇರುವ ಈ ಬಂಡಿ ದಾಟುವಾಗ
ಒಳಗಿನ್ನೂ ಅನುರಣಿಸುತಿದೆ-
ಕೆಂಡದ ನಾಲಗೆ ನನ್ನ ಮೈಯೆಲ್ಲ
ಚಪ್ಪರಿಸುವ ಸದ್ದಿನ ನಡುವೆ
ಯಾರಿಗೂ ಕೇಳಿಸದೇ ಹೋದ
ನಿನ್ನ ಕೈಬಳೆಯ ಜೋಗುಳ
ಅಖಿಲ ಬಹ್ಮಾಂಡದ ಚರಾಚರ ಸೃಷ್ಟಿಯ, ನೆಲೆ ಕಾಣಿಸದ ಮಾಯಾ-ಮೋಹಗಳ ಸುಳಿಯಲ್ಲಿ ಜೀವಜಾಲವ ಸಿಲುಕಿಸಿ, ರಸಾಧಿಕ ವ್ಯಂಜನಗಳಿಂದಲಂಕರಿಸುತ ಹದಗೈಯುವವಳಂತೆ ಭಾಸವಾಗಿಸುವ ಕೈಯೇ ಇರಬಹುದೇ ಅದು!? ನೋಯಿಸುತ, ಬೇಯಿಸುತ, (ಸುಟ್ಟರೂ ಹದಗೆಡದಂತೆ ಆಗಾಗ/ ಹೊರಳಿಸುವೆ ಬೆನ್ನಹುರಿ ಹಿಡಿದು)…
ನರಕ-ಸ್ವರ್ಗಗಳ ಭ್ರಾಂತಿಯನ್ನು ನಿಜವೆಂಬಂತೆ ಅನುಭವಕ್ಕೆ ಉಣಿಸುತ್ತಲೇ ಮತ್ತೆ- ಆ ನೋವುಗಳ ಮಾಯಿಸುವಂತೊಲುಮೆ,ಯ, ಮಾಯಿಸುವಂಥ ಒಲುಮೆಯ ಮಡಿಲಿನ ಒಡತಿಯ ಕಕ್ಕುಲಾತಿಯ ಜೋಗುಳ-ನಿನದವು, ಅಲ್ಲಿ ಹಿನ್ನೆಲೆಯಲ್ಲಿ ನುಡಿಯುತ್ತಿದಂತೆ ಭಾಸವಾವುದು- ಕೆಂಡದಲಿ ಸುಡು ಜೋಳದ ಹಳವಂಡಕ್ಕೆ!, ಜೀವಜಂತುಗಳನ್ನು ಕಂಡೂ ಕಾಣದಂತೆ ಕಾಪಾಡುವ ಅನನ್ಯ ಮಾತೃತ್ವದ ಈ “ಸರ” (ಧ್ವನಿ) “ಯಾರಿಗೂ ಕೇಳಿಸದೇ ಹೋದ”ದ್ದಾಗಿರುವುದು- ಎಂದು ಸ್ಮರಿಸುವಲ್ಲಿ ಎಂಥ ಗಾಢ ವಿಷಾದವಿದೆ! ಮತ್ತೆ ಅದು ಯಾರಿಗೂ ಕೇಳಿಸದೇ ಹೋದರೂ- ಅದರ ಅಸ್ತಿತ್ವವು ಅ-ಪ್ರಜ್ಞೆಯ ಅವಿನಾಭಾವ ನಾದವಾಗಿ ಅನುರಣಿಸುವ ರಿಂಗಣವೆಂದೆಣಿಸಿದರೆ, ಅಂಬಿಕಾತನಯದತ್ತರು “ಬಾರೆ, ಬಾ ತಾಯೆ ಇಳಿದು ಬಾ..”. ಎಂದು ಕರೆವ ಆರ್ತತೆ, ಮಹರ್ಷಿ ಅರವಿಂದರು ಕಂಡರಿಸುವ ಸಾವಿತ್ರಿ-ಗಾಯತ್ರಿಯ ಉತ್ಕಂಠತೆ.., ವಡ್ಡಾರಾಧನೆಯ ಕತೆಗಳಲ್ಲಿ ತಳುಕು ಹಾಕಿಕೊಳ್ಳುವ, ಜೀವಿಗಳ ಸ್ವರ್ಗ-ನರಕಗಳ ಸರಣಿ, ಭವಾವಳಿಗಳ ಬವಣೆ..ಏನೆಲ್ಲ ಸುಳಿವುಗಳು ಸ್ಮೃತಿಕೋಶದಲ್ಲಿ ಹಾದುಹೋಗುತ್ತವೆ- ಈ ಕವಿತೆಯ ಮಾರ್ದನಿಗೆ!- ಗಾಳಿಯಲ್ಲೆಸೆದ ಕಣೆ ಕಾಣದಿದ್ದರೂ ಮರು-ಮರುತ್-ತರಂಗಗಳನ್ನು ಸೃಜಿಸುವಂತೆ!
“ಇರುವೆ ಸಾಲಿನ ನಡುವೆ ಅಳತೆ ತುಯ್ಯುತ್ತಲೇ ಇರುವ ಖಾಲಿ ಗೆರೆ”ಯಾಗುವ “ಕವಿತೆಯೆಂಬುದು”ತನ್ನ ನಿರವಯವ ಅಸ್ತಿತ್ವವನ್ನೂ, ನಿರಂತರ ಚಲನಶೀಲತೆಯನ್ನೂ ಸಾಂಕೇತಿಸುವ ಒಂದು ಸಮರ್ಥ ರೂಪಕ
“ಚುಕ್ಕಿಯೊಂದು ಹೊತ್ತಿಕೊಂಢಂತೆ ಹಕ್ಕಿ
ಮರದ ಎದೆ ಬಿಚ್ಚಿಕೊಳ್ಳುವುದು
ಆಳತೆಯಿರದೆ ನೆಗೆದು ಗುರುತಿರದ ದಿಕ್ಕಿನಲಿ..”
ಗಾನದಲ್ಲಿ ತಲ್ಲೀನವಾದ ಹಕ್ಕಿ, ಕೇಳುಗನನ್ನೂ ಧ್ಯಾನಸ್ಥ ಸ್ಥಿತಿಗೆ ಒಳಗೊಂಡ ಘಳಿಗೆ- ಅಲ್ಲೇ ಆವಿರ್ಭವಿಸುವುದು- ಏಕೋಭಾವ! ಕವಿಯಾಗ ವಿವಶನಾಗುವ;
“ಹೇಳಲಾರೆನು ಇನ್ನು/ ಇದು ಹಕ್ಕಿ ಇದು ಮರ/ ಇದು ದಿಕ್ಕು ಇದು ದನಿ/ ಇದು ಏನು? (ಹಕ್ಕಿ ಧ್ಯಾನ- ಮೆಟ್ರೊ ಝೆನ್) ಇದು ಮತ್ತು “ಮತ್ತೆ ಕೂಗಿತು ಹಕ್ಕಿ/ ತಾನೇ ಮರವಾದ”, “ಎಲೆ ಸಾವಿರ ರೆಪ್ಪೆ/ ಹಕ್ಕಿ ಮರದ ಕಣ್ಣು”, (ನಿಶ್ಚಲವ ಕಲಕಿದ ಹಕ್ಕಿ) ಮುಂತಾದ ಸಾಲುಗಳು ಕವಿ(ತೆ)ಯ ಅಂತರ್ದನಿಯಾಗಿ, ಅನಂತವನ್ನು ಗುರುತಿಸುವ, ಮತ್ತು ಅದೇ ಕಾಲಕ್ಕೆ, ಅನಂತದಲ್ಲಿ ಒಂದಾಗಿಬಿಟ್ಟ ಪರಿವೆಯ- ಸಮ್ಮೇಳವಾಗಿ ಭಾಸವಾಗುತ್ವವೆ..
“ಹರಿದ ಚಪ್ಪಲಿ ಹೊಲಿದು/ ಸಡಿಲಾದ ನಮ್ಮ ನಡಿಗೆಗೆ/ ಮರಳಿ ಹಿಂದಿನ ಘನತೆ ನೀಡಿದೆ (ಚಮ್ಮಾರ), “ನಿಂತರು ನಿಂತ ಹಾಗಲ್ಲ/ ಪಾದಗಳಷ್ಟೇ ತಂತಿ ಮೇಲೆ, ಅವಳಿಲ್ಲ/ ಹಬ್ಬಿಕೊಂಡಿದ್ದಾಳೆ ದೇಹದಿಂದಾಚೆ/ ಹಚ್ಚಿ ಇಟ್ಟಂತೆ ಸೂಟೆ/ ತನ್ನರಿವೇ ತನ್ನ ಕೋಟೆ!” (ತಂತಿ ಮೇಲಿನ ನಡಿಗೆ; ನಿಶ್ಚಲವ ಕಲಕಿದ ಹಕ್ಕಿ)
ಇಂಥ ಮೂರ್ತಾಮೂರ್ತ ಹೋಲಿಕೆಗಳು, ರೂಪಕಗಳು ಪ್ರಾಪಂಚಿಕ ವಸ್ತುನಿಷ್ಠತೆಯನ್ನು ಇಟ್ಟುಕೊಂಡೇ, ಪದಗಳಾಚೆಗಿನ ಅಭೌತಿಕ ಕಲ್ಪಕತೆಯನ್ನರಸುವ ಕವಿತೆಯಾಗಿ ಹೊಮ್ಮುವವು! ಒಮ್ಮೊಮ್ಮೆ ಲೌಕಿಕದ ಪಟ್ಟಕದ ಮೂಲಕವೇ ತಾನೆ- ಏಕವರ್ಣದ ಅಥವಾ ವರ್ಣಾತೀತ ಅಲೌಕಿಕದ ಸಪ್ತವರ್ಣಗಳು ಹೊಮ್ಮುವುದು!?
ಮೆಟ್ರೊ ಸಂತೆ- ಒಂದು ಅದ್ಭುತ ಕವಿತೆ! “ಝಿಪ್ಪೆಳೆದ ಹಾಗೆ ಸಾಗಿದೆ ಮೆಟ್ರೊ ರೈಲು/ ಊರ ಚೀಲದೊಳಗೆ ತೋರುತ್ತ ಚಿತ್ರಸಂತೆ;.” ಎಂದು ಶುರುವಾಗುವ ಈ ಕವಿತೆಯ ಉತ್ತರಾರ್ಧಕ್ಕೆ ಮತ್ತಾವ ವಿವರಣೆಯೂ ಬೇಕಾಗದಷ್ಟು ಸರಳ- ಸಂಕೀರ್ಣ ಎರಡೂ ಆಗಿವೆ!
“ನಾನಾ ನಮೂನೆಯ
ಸಿದ್ಧಾಂತದ
ಧರ್ಮದ
ಜಾತಿಯ
ನಂಬಿಕೆಯ
ಗ್ರಹಿಕೆಯ
ಅನುಭವದ
ಆಗ್ರಹದ
ಜನರು ಕುಳಿತಿದ್ದಾರೆ ಒಳಗೆ:
ಒಬ್ಬರ ಉಸಿರು ಮತ್ತೊಬ್ಬರಿಗೆ ತಾಕದಂತೆ ಮಾಸ್ಕು,
ಕಣ್ಣೋಟಗಳು ಸಂಧಿಸದಂತೆ ಮೊಬೈಲು,
ಬಂದವರು ಯಾವ ನಿಲ್ದಾಣದಲಿ
ತೊರೆದು ಹೋಗುವರೆಂದು ತಿಳಿಯದೆ
ಎಲ್ಲರೂ ಜೊತೆಯಾಗಿ ಸಾಗುತ್ತಿರುವ ಒಂಟಿ ಪಯಣಿಗರು”
ಎಲ್ಲೋ ನಡೆಯುವ ಅಣಕು ಕಾರ್ಯಕ್ರಮವನ್ನಿ ಎಲ್ಲರಂತೇ ನೋಡಿದರೂ, ಅಲ್ಲೂ ಒಂದು ಚಿಂತನೆಯ ಹೊಳಹು ಕವಿಯಲ್ಲಿ ಹುಟ್ಟಬಲ್ಲುದು. “ಎಲ್ಲರಿಗೂ ಅವರವರದೇ ಧ್ವನಿಯಿದೆ..” “ಅವರಲ್ಲ; ಅವರಂತಾಡುವುದು ಹಾಸ್ಯ..” “ಮತ್ತೊಬ್ಬರ ದನಿಯಿದೆ/ ಎಲ್ಲರೊಳಗೆ ಕಿಂಚಿತ್ತಾದರು” (ಮಿಮಿಕ್ರಿ- ಮೆಟ್ರೊ ಝೆನ್)
ಹ್ಯಾಂಗೋವರ್ ಕವಿತೆಯ ಶೀರ್ಷಿಕೆಯ ಸಮೇತ ಒಟ್ಟೂ ಕವಿತೆಯ ಆಶಯವು “ನೇರಳೆಗೆ ಹೊರಳುತ್ತಿರುವ ಮಲ್ಲಿಗೆಯೇ/ ನಿನ್ನ ಘಮದ ಉಗಮಧಾಮಕ್ಕೆ ಮಣಿದಿರುವೆ” ಎಂಬೊಂದೇ ಗುಂಗಲ್ಲಿ ಕಾಣಬಹುದೇನೋ!
ರಮ್ಯ ಕಲ್ಪನೆಗಳ ಆಕರ ಚಂದಿರ ಯಾವ ಕವಿಯನ್ನು ಕಾಡದೆ ಬಿಟ್ಟಿಲ್ಲ? ವಿಕ್ರಮ್‌ಗೆ ಚಂದಿರ “ತಾರೆಗಳ ಬಲೆ ಹೆಣೆದು ಹೊಂಚುತ್ತಿರುವ ಬಿಳಿ ಜೇಡ” ಆಗಿಯೋ, ತೊಟ್ಟಿಲೊ, ಹಣೆಗಿಡಬಹುದಾದ ವಿಭೂತಿಯ ಬೊಟ್ಟೊ, ಬೆಳಕಿನ ಮೆಟ್ಟುಗತ್ತಿಯೊ. ತಾರೆಕೊಳದಲಿ ಸಾಗಲು ಮಾಡಿಕೊಳಬಹುದಾದ ದೋಣಿಯೊ ಆಗಿ ತೋರುವನಲ್ಲದೆ, ಕಡೆಗೂ, “ಪರಿಪರಿ ರೂಪಕದಲಿ ಪರಿಪೂರ್ಣ ಕವಿತೆ ಬಯಸುವ ಬಿಡುಗಣ್ಣು” ಆಗಿ “ಕಾಣುʼವ!
ದೇಹಾತ್ಮ ವಿಲಾಸ ಕವಿತೆಯಲ್ಲಿ “ಬೆಳಕನ್ನು ವಿಭಜಿಸುವ ವಜ್ರಕಾಯ್ದೆ”ಯ ಜಿಜ್ಞಾಸೆ ಹರಿತವೂ, ಸೂಕ್ಷ್ಮವೂ ಆಗಿದೆ!ಲೌಕಿಕದ ವಿವರಗಳಲ್ಲಿ ರಮಿಸುತ್ತಿರುವಾಗಲೇ, ಕವಿತೆಯ ಯಾವುದೋ ಅಂಗಾಶದಲ್ಲಿ ಹಠಾತ್ತನೆ ಲೌಕಿಕವೇ ಅಲ್ಲದ ಮತ್ತೊಂದೇ ಕಿರಣ ಝಳಪಿಸುವುದು! “ಎಸ್ಕಲೇಟರ್”, “ಗಾಲಿ ಕುರ್ಚಿ”, “ಬರುವ ಮೊದಲು ಹೇಗೋ/ ಹೊರಡುವಾಗಲೂ ಹಾಗೇ/ ಮನೆಯೆಂಬುದು ಗೋಡೆಗಳ ಆಚೆ” (ಮನೆ ಖಾಲಿ ಮಾಡುವ ದಿವಸ”), “ನಮ್ಮೊಳಗಿನ ಬೆಳಕ/ ಮುಟ್ಟಬೇಕೆಂದರೆ/ನಮ್ಮೊಳಗಿನ ಕತ್ತಲ ಸುರಂಗದೊಳಕ್ಕೆ ಇಳಿಯಲು/ ಹೆದರಬಾರದು”(ಮಿಂಚುಗಳು), ಆಸೆ ಬಿಸಿಲನು/ ಗುಡಿಸಿಹಾಕಿದ ಮೋಡ/ ಹಕ್ಕಿ ಹಾರಿಹೋದ/ ಸಂಜೆ ಆಗಸ/ ಬರೆಯಬೇಕೆನಿಸದ ಕವಿತೆ” (ಹಗುರ ಹಕ್ಕಿಗಳು)ಮುಂತಾದ ಕವಿತೆಗಳಲ್ಲಿದೆ- ಈ ಕಿರಣಸ್ಪರ್ಶ
“ಪೂಜೆ” ಮತ್ತು” ಬಯಲು ಶಿವ” ಕವಿತೆಗಳು, ಬೆಡಗಿನ ವಚನಗಳ ಮಾದರಿ-ಒಕ್ಕಣೆಗಳನ್ನು ರಚನೆ, ಆಶಯ ಮತ್ತು ರೂಪಕಾರ್ಥಗಳಲ್ಲಿ ನೆನಪಿಸುವಂತೆ ವಿಭಿನ್ನವಾಗಿವೆ. (ನಿಶ್ಚಲವ ಕಲಕಿದ ಹಕ್ಕಿ)
“ಬಳ್ಳಿ ಕೊರಳಿನ ಹಾವು
ತುಂಬಿರುವ ಅಂಬರ
ನುಸಿ ಭೃಂಗಗಳ ಡಮರುಗ
ನಿಶ್ಚಲವ ಕಲಕಿದ ಹಕ್ಕಿ ಮೂರನೆಯ ಕಣ್ಣು
ಮರಮರವು ಲಿಂಗರೂಪ
ನೀಲಿಗಟ್ಟಿದ ಆಗಸವೇ ವಿಷ ಹಿಡಿದ ಕಂಠ
ಮಿಂಚಿನ ಶೂಲ
ಮೋಡಗಳ ಜೋಳಿಗೆ
ನಾವಿತ್ತ ನಿರ್ಮಮದ ಮಾತುಗಳ ಬಿಕ್ಕೆಗೆ
ಮಳೆ ನಿನ್ನ ಭಾಷ್ಪ!
“ಕಳ್ಳಬೆಕ್ಕು” ಕವಿತೆಯ “ತಿಳಿದಿದೆಯೇ ಅವುಗಳಿಗೆ/ ಇದು ಕಳ್ಳತನ ಇದು ಅಲ್ಲ ಎಂದು?” ಎಂಬ ಮುಗ್ಧ ಜಿಜ್ಞಾಸೆ, “ಪೊರಕೆಯಿಂದೆದ್ದ ಧೂಪಕ್ಕೆ ಮೃದುವಾದ ದಿನಕರ” ಇಂಥ ಹೊಸ ಹೋಲಿಕೆಗಳಲ್ಲದೆ, “ಕನಸು-ಭಯ” ಕವಿತೆಯ ಈ ಸಾಲುಗಳನ್ನು ನೋಡಿ!
“ಕುದುರೆ ನಿಂತು ನಿದ್ರೆಯಲ್ಲು
ಓಟವನ್ನೆ ಹೊತ್ತು ಕಂಪಿಸಿದಂತೆ
ಕನಸಿನಲಿ ಬಿತ್ತಿಕೊಂಡ ಭೀತಿ
ಎಚ್ಚರವ ಸುತ್ತಿ ಸೆಳೆಯುತ್ತಿತ್ತು
ಬೇಕಿತ್ತು ಆ ಭಯಕ್ಕೊಂದು ವಿವರಣೆ ಗುರುತು
(ಮೆಟ್ರೊ ಝೆನ್)
ಇಲ್ಲಿ ವೈರುದ್ಧ್ಯಮಯ ಉದಾಹರಣೆಗಳು ಬಳಸಲ್ಪಟ್ಟಿವೆ; ನಿದ್ರೆಯಲ್ಲಿ ಓಟದ ಕನಸಿನಿಂದ ಬೆಚ್ಚಿದ ಕುದುರೆ ಹಾಗೂ ಕನಸಿನಿಂದಾಗಿ ಎಚ್ಚರದಲ್ಲೂ ಕಂಗೆಟ್ಟ ಮನುಷ್ಯ! ಒಂದು ರೀತಿಯ ಸರ್ರಿಯಲಿಸ್ಟ್ ಕಾವ್ಯದಂತೇ ಭಾಸವಾದರೂ, ಪ್ರತಿಮೆಗಳ ಸಂದೇಶ ಕವನದ ಸೂಚ್ಯಾರ್ಥಕ್ಕೆ ಇಂಬು ಕೊಡುವಲ್ಲಿ ಹೊಂದುವ ಸೋಜಿಗವಲ್ಲಿದೆ.
“ತಾರೆ ಸೂಟಿ” ಇನ್ನೊಂದು ನಿಗೂಢಾತ್ಮಕ ಸಂಕೇತದ ಕವನ.
”ನಾವು ಹೋಗುವ ಮೊದಲೇ
ನಮ್ಮ ದಾರಿಯಲಿ ಯಾರೋ
ಹರಡಿಹೋಗಿದ್ದಾರೆ ಬೆಳಕು…”
ಇಂಥ ಬೆಳಕಲ್ಲು ಸೆಳೆಯುವುದು ಒಂಟಿ ತಾರೆ”- ಎಂಬ ವೀಕ್ಷಣೆ ಕೊನೆಗೊಳ್ಳುವುದು, ತಾರೆ ನೀಡುತ್ತಿರುವ ಕರೆ,
“ನಾವೂ ಅಲ್ಲಿಗೆ ಬರಲೆಂದೆ?
ಅವರನಿಲ್ಲಿಗೆ ತರಲೆಂದೆ?
ಕುಳಿತಿರುವೆವು ಇಲ್ಲಿಯೇ
ಏನು ಮಾಡುವುದೋ ತಿಳಿಯದೆ” ಎಂಬ ಅಮಾಯಕ ಸ್ಥಗಿತತೆಯಲ್ಲಿ. “ನಕ್ಷತ್ರ” ಕವಿತೆಯ ನಡುವಿನ ಸಾಲುಗಳಲ್ಲಿ ಇದರ ಛಾಯೆ ಸಂಚರಿಸುವುದು, ಕೇವಲ ಕಾಕತಾಳೀಯವಾಗಿರಲಿಕ್ಕಿಲ್ಲ!
“ಎಣಿಸಿರುವುದನ್ನೇ ಬಿಟ್ಟಿರುವೆನೆಂದು ಭ್ರಮಿಸಿ
ಮರಮರಳಿ ಸುತ್ತುವುದು ಬಂದ ದಾರಿ
ಇರುವಲ್ಲೆ ಅನವರತ ತಿರುಗಿಸುವುದು
ಲೆಕ್ಕಗೆಡಿಸುವುದೇ ಅನಂತದ ವೈಖರಿ”
ಈ “ಬಗೆ”ಯ ವಿವಶತೆಯ ಸೂಕ್ಷ್ಮಗಳು “ಗಾಲಿ ಕುರ್ಚಿ”, “ಕೈ ತಪ್ಪಿದ ಬಲೂನು” ಕವನದಲ್ಲೂ ಸುಳಿಯುವುದು.“ಸದ್ದಿರದ ಕವಿತೆಗಳ ಸಹಜ ಮೌನ ಇವನ ಪರಾಕು..” (ಎಸ್. ಮಂಜುನಾಥ್) ಎನ್ನುವುದು ಕವಿಗೆ ಕವಿಯ ಮನದಾಳದ ನಮನ.
ಮುನಿಸಿನ ಕೆಳದಿಯ ಒಲಿಸುವ ವಿನಯದ “ಆಹ್ವಾನ” ಕವಿತೆಯು ಓದಿಸಿಕೊಳ್ಳುವಾಗ, ಮೆಹದಿ ಹಸನ್ ನ ಮನಮೋಹಕ ರಂಜಿಷ್ ಹೀ ಸಹೀ…”ಗಝಲ್ ನೆನಪಾದರೆ ಆಚ್ಶರಿಯಾಗದು. ಸರಸ-ವಿರಸದ ಭಯಕೆ, ಅನುನಯಕೆ ದೇಶ-ಕಾಲದ ಹಂಗಿಲ್ಲ.
“ಮರಳಿ ಎಂದಿಗೆ ಬರುವೆ
ಎಂದು ಕೇಳುವುದಿಲ್ಲ
ಈಗಲಾದರೂ ಒಮ್ಮೆ
ಬಂದು ಹೋಗುವೆಯೇನು?
“ಬೇಂದ್ರೆ” ಕವಿತೆಯ ಓಘ ಮತ್ತು ಜೀವಂತಿಕೆ-ಲವಲವಿಕೆ ಸೊಗಸಿನದು!
“..ಚಿತ್ತದ ಸಾಲು ಪಡಿಮೂಡಿದ ತಾಳೆಗರಿಯಂತೆ
ಹಗುರ ದೇಹದಲಿ ನೆರಿಗೆಯೆದ್ದ ಹಣೆ
ಒಳಶೃತಿಯ ಸ್ವರಕೆ ಕರಗತಿಯ ಲಯಕೆ
ಹಾಡುವುದು ಕವಿತೆ ಬಲೆ ಬೀಸಿದಂತೆ..” ಇಲ್ಲಿ ಕವಿ ಬಳಸಿದ “ಕರಗತಿಯ” ಪದ ಶ್ಲೇಷಾಲಂಕಾರ! ಬೇಂದ್ರೆಯವರ ಮಾತಿನ, ಕವಿತಾವಾಚನದ ಶೈಲಿಯ ಸಚಿತ್ರ ವರ್ಣನೆಯಾಗಿಯೂ, ಕರಗತ ವೈದುಷ್ಯದ ಬೇಂದ್ರೆತನ- ಎಂತಲೂ ಇದು ಸಲ್ಲುವುದು!
“ಕತ್ತಲ ಸುರಂಗದಲಿ ಶಬ್ದಗಳ ಹೊತ್ತಿಸಿದೆ
ಮುಟ್ಟಿ ನೋಡಿಕೊಳ್ಳುವ ಹಾಗೆ
ಇನ್ನಾರು ಮುಟ್ಟದ ಹಾಗೆ”
ಬೇಂದ್ರೆ ಎಂಬ ಪದಗಾರುಡಿಗನಿಗೆ ಒಪ್ಪುವ ಸನದು!
ಈ ಎರಡೂ ಸಂಕಲನಗಳ ಕವಿತೆಗಳು ತಮ್ಮ ಭಾವಸಂಪನ್ನತೆಯಿಂದ ಮತ್ತು ಗಹನತೆಯ- ಅದು ಇರವಿನದೂ ಮತ್ತು ಅಳಿವಿನದೂ – ಈ ದ್ವಂದ್ವದ ಅರಸುವಿಕೆಯಿಂದ, ಕನ್ನಡ ಕಾವ್ಯಲೋಕಕ್ಕೆ ವಿಕ್ರಮ್ ಹತ್ವಾರ್ ಅವರ ವಿಶಿಷ್ಟ ಕೊಡುಗೆಯಾಗಿವೆ. ಇಲ್ಲಿ ಶುಷ್ಕ ತರ್ಕಗಳಾಗಲೀ, ಅಹಮಿಕೆಯ ಆರ್ಭಟವಾಗಲೀ, ಭ್ರಮನಿರಸನದ ಹಳಹಳಿಕೆಗಳಾಗಲೀ ಅಥವಾ ಯಾವುದಾದರೊಂದು ವ್ಯವಸ್ಥೆಯ ಕುರಿತಾದ ಆಕ್ರೋಶವಾಗಲೀ ಇಲ್ಲವೇ ಇಲ್ಲ. ಜೀವಪ್ರಪಂಚದೆಡೆ, ಮಾನವೀಯ ಸಂಬಂಧಗಳ ಬಗೆಗಿನ ಗೌರವವೇ ಒಂದು ಘನವಾದ ಕವಿತೆ! ಇದಕ್ಕೆ ಇಲ್ಲಿಯ “ಸೀರೆ”, “ಕವಿತೆ ಎಲ್ಲಿದೆ?”, “ಒಂದು ನೋವಿನಿಂದ”, “ಪದಗಳು ಮುಖಗಳು” ಇಂಥ ಕವಿತೆಗಳೇ ಸಾಕ್ಷಿ. ಹಾಗಾಗಿ ಇಲ್ಲಿಯ ಕವಿತೆಗಳು ಅಲಿಪ್ತ ಧಾಟಿಯಲ್ಲಿದ್ದುಕೊಂಡೂ, ಮೃದುಸಂವೇದನೆಯನ್ನು ಮೀಟಬಲ್ಲವು.
“ಕಾರ್ ಡ್ರೈವಿಂಗ್”ಕವಿತೆಯಲ್ಲಿ (ಮೆಟ್ರೊ ಝೆನ್) ಬರುವ,
“ಇಬ್ಬರು ಚಾಲಕರು ಒಂದೇ ಕಾರಿಗೆ
ಕುಳಿತಿದ್ದೇನೆ ನಾನು ಕುಳಿತಲ್ಲೇ
ಸಾಗಲು ತೊಡಗಿತು ಕಾರು ಮೆಲ್ಲಗೆ
ಪಕ್ಕದಲಿ
ಜೊತೆಯಲಿ
ಅಲ್ಲ
ಕುಳಿತಿದ್ದಾನೆ ಅವನೀಗ ನನ್ನೊಳಗೇ
ಎಂಬ ಚಚ್ಚರ ಇರುವವರು ಆವೇಗಕ್ಕೆ ಸಿಲುಕುವ ಸಾಧ್ಯತೆ ವಿರಳ.
ಮನುಷ್ಯ ಭಾಷೆಯನ್ನಲ್ಲ
ಭಾಷೆಯೇ ಮನುಷ್ಯನ ಹೊತ್ತು ತಿರುಗುತ್ತಿದೆ ಇಲ್ಲಿ” (ಶಬ್ದದೊಳಗಣ ನಿಃಶಬ್ದ; ನಿಶ್ಚಲವ ಕಲಕಿದ ಹಕ್ಕಿ)
ಎಂದು ನುಡಿಯುವ ವಿಕ್ರಮ್ ಅವರ,
“ಎಲ್ಲ ಭಾಷೆಯೂ ಒಂದೇ
ಅರ್ಥಕ್ಕೆ ಹಾತೊರೆದು
ಅರ್ಧಕ್ಕೇ ಕುಸಿದ ಬಾಣ”
ಎಂಬ ಕಾಣ್ಕೆಯೊಂದಿಗೇ, “ಉಳಿದಿವೆ ಕೆಲವು ಖಯಾಲಿಗಳು” ಕವಿತೆಯಲ್ಲಿ ಹಂಬಲಿಸುವಂತೆ,
“ಉಳಿದಿವೆ ಇನ್ನೂ ಬಹಳ
ಬರೆಯದೇ ಹೋದ ಕವಿತೆಗಳು”ಎಂದಿದ್ದಾರೆ, ಅವೆಲ್ಲ ಮತ್ತೆ ಮತ್ತೆ ಲೋಕಾಭಿಮುಖವಾಗುತ್ತಿರಲಿ – ಎಂದು ಶುಭ ಹಾರೈಸುತ್ತೇನೆ.
(೨೦೨೧ರಲ್ಲಿ ಅಂಕಿತ ಪ್ರಕಾಶನದಿಂದ ಮೊದಲ ಮುದ್ರಣಗೊಂಡ ಮೆಟ್ರೊ ಝೆನ್ ಕವನಸಂಕಲನದಲ್ಲಿ ನಲವತ್ತೈದು ಕವಿತೆಗಳಿವೆ. ೨೦೨೩ರಲ್ಲಿ ವೀರಲೋಕ ಪ್ರಕಾಶನ; ನಿಶ್ಚಲವ ಕಲಕಿದ ಹಕ್ಕಿ- ನಲವತ್ತು ಕಿವಿತೆಗಳು). ಸಾಹಿತ್ಯ, ಸಾಂಸ್ಕೃತಿಕ ಚಿಂತನೆಗಳು, “ಅರಳು ಪ್ರಶಸ್ತಿ” ಪುರಸ್ಕೃತರು. ಅವರ ಕವನಸಂಕಲನಗಳು- “ಇದೇ ಇರಬೇಕು ಕವಿತೆ”, “ಆಕ್ಷೀ…ಎಂದಿತು ವೃಕ್ಷ”, “ಮೆಟ್ರೊ ಝೆನ್”, ”ನಿಶ್ಚಲವ ಕಲಕಿದ ಹಕ್ಕಿ”, ಇವು. “ನೀ ಮಾಯೆಯಳಗೋ”(ಪ್ರಬಂಧ ಸಂಕಲನ), “ಹಮಾರಾ ಬಜಾಜ್” ಮತ್ತು “ಕಾಗೆ ಮೇಷ್ಟ್ರು”(ಕಥಾ ಸಂಕಲನ)
ಅವರ ಕತೆಯನ್ನಾಧರಿಸಿ “ನಿರುತ್ತರ” ಎಂಬ ಸಿನೆಮಾ ಆಗಿದೆ. “ಓದಿದ್ದು, ನೋಡಿದ್ದು” ಸಾಹಿತ್ಯ-ಸಿನಿಮಾ ಅವಲೋಕನ ಬರಹಗಳು ಪುಸ್ತಕದ ಕರ್ತೃರು. ಕರ್ನಾಟಕ ಸಾಹಿತ್ಯ ಪರಿಷತ್‌ನ “ಅರಳು ಪ್ರಶಸ್ತಿ ಪುರಸ್ಕೃತರು. ಪ್ರಕೃತಿ ಪ್ರಕಾಶನ ಸಂಸ್ಥೆಯ ನಿರ್ಮಾತೃ ಕೂಡ. ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ(೨೦೧೬) ಪಡೆದ ಝೀರೋ ಮತ್ತು ಒಂದು ಕೃತಿ ವಿಕ್ರಮ್ ಅವರ ಮೊದಲ ಕಥಾಸಂಕಲನ.
ಅಭಿನಂದನೆಗಳೊಂದಿಗೆ, ನನ್ನೀ ಓದಿಗೆ ಆತ್ಮೀಯತೆ, ವಿಶ್ವಾಸದಿಂದ ತಮ್ಮ ಅಷ್ಟೊಂದು ಅಮೂಲ್ಯ ಪುಸ್ತಕಗಳನ್ನು ಒದಗಿಸಿಕೊಟ್ಟ ವಿಕ್ರಮ್ ಹತ್ವಾರ್ ಅವರಿಗೆ ತುಂಬುಹೃದಯದ ಕೃತಜ್ಞತೆಗಳು.






0 Comments