-ಅಪರ್ಣಾ ಹೆಗಡೆ
ಆ ನಡುರಾತ್ರಿ,
ಬೀಸಿದ ಗ್ರೀಷ್ಮದ ಗಾಳಿಗೆ ಅಂಗೈಯ್ಯೊಳಗೆ ಬೆವರ ಹನಿ
ಸುರಿದಿತ್ತು ಮುಗಿಲು ಹರಿದು ಮೊದಲ ಧಾರೆ
ತೂಗುವ ನಿದಿರೆಯ ತೊಟ್ಟಿಲಲ್ಲಿ ಬೆಚ್ಚಗಿನ ಕನಸು
ಎದೆಯ ಕಂಪನಕ್ಕೆ ಒಲವು ಮೊಳಕೆಯೊಡೆದಿತ್ತು
ಆಡುವ ಕುರುಳ ಸುರುಳಿಯಲ್ಲೊಂದು ಬಚ್ಚಿಟ್ಟ ಪತ್ರ
ಅಂಗೈ ಬೆವರು ಮಳೆಹನಿಯೊಂದಿಗೆ ಸೇರಿ
ಹೊಸ ಘಮಲು
ಧ್ಯಾನಕ್ಕೆ ಇಳಿದ ಮಲ್ಲಿಗೆಯ ಮುಚ್ಚಿಕೊಂಡ ರೆಪ್ಪೆ
ಒದ್ದೆಯಾಗಿತ್ತು ಹನಿಗೆ
ಗೆದ್ದ ನಗು ಮುಗಿಲಿಗೆ
ಗ್ರೀಷ್ಮಕ್ಕೆ ತೊನೆದ ಗಿಡಬಳ್ಳಿ
ನಿದ್ದೆ ಕದ್ದ ನಡುರಾತ್ರಿ…
ಮಸೆದ ಕತ್ತಿಯಂಚಿನ ಮಿಂಚು
ಅದೇನು ಪ್ರೇಮದಾರ್ಭಟವೋ! ಇಲ್ಲ ಒಲವ ಬಿನ್ನಪವೋ
ಎದೆ ಬಡಿತಕ್ಕೊಂಡು ದ್ವಂದ್ವಗಾನ
ಓಹ್! ಮಳೆಯೇ ಸುರಿದು ಬಿಡು ಇನ್ನಷ್ಟು ಮೋಹಕವಾಗಿ
ಜಾವದಲ್ಲಿನ ಸಿಹಿ ಜೊಂಪಿಗೆ ಶ್ರುತಿ ಹಿಡಿದ ನವಿಲ ಗಾನ
ಅಲ್ಲೆಲ್ಲೋ ಕಿರುಗುಟ್ಟುವ ಜೀರುಂಡೆ
ಓ ಇಲ್ಲೆ ಇಲ್ಲಿ ವಟರ್ ಎಂದ ಮಂಡೂಕ
ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಒಲವ ಕೋಟೆಯೊಳಗೆ ಬಂದವನು ಆ ಅವನು
ಈ ಗ್ರೀಷ್ಮದ ನಡುರಾತ್ರಿಯಲೊಂದು ನೆನಪಿಗೊ!, ಸುರಿದ ಮಳೆಗೊ!
ಈ ಇವಳಿಲ್ಲಿ ನೆನೆಯುತ್ತಾಳೆ…






0 Comments