–ದೇವಿಕಾ ನಾಗೇಶ್
೧ .ನೆಲದ ಮಾತು
ಮೌನ ದ ಮೊಟ್ಟೆಗೆ
ಕಾವು ಕೂತ ಭುವಿಗೀಗ
ಗದ್ದಲ ಹೊರಗೆ. ಒಳಗೆ
ಹೂ ಭಾಷೆ ಹಕ್ಕಿ ಆಶೆ
ಮಲ್ಲಿಗೆಯ ಘಮಲು
ಪಿಸುಗುಟ್ಟಿದೆ
ಆ. ಈ ತಿದ್ದುವ
ಉನ್ಮಾದಕೆ ಮುಗಿಲಲಿ
ಮೇಘ ನಿನಾದ
ಒಲಿದ ಮಿಂಚಿಗೆ
ಗುಡು ಗುಡು ಗುಮ್ಮನ
ಸ್ವಗತ ಸಿಂಚನ
ಹಸಿವೋ
ಹಸಿರೋ ಬಲ್ಲವರಿಲ್ಲ
ಹೆಚ್ಚೇನಲ್ಲ ಹನಿಗೀಗ
ನವ ಮಾಸ ಹೆರಿಗೆ ನೋವು
ಸಿರಿಗರದ ಹದುಳ
ಬಲ್ಲವರೆಲ್ಲ ಗುಡಿ ಗುಮ್ಮಟ
ಶಿಖರ ಹೊಳೆ ಶರಧಿಗೂ
ಬಣ್ಣ ದೋಕುಳಿ ಚೆಲ್ಲಬೇಕಂತೆ
ಕತ್ತಲದೋ ಬೆಳಕಿನದೋ
ಬೆಳದಿಂಗಳದೋ ಕಲರವ
ಚಿತ್ತ ಭಿತ್ತಿ ಜೋಳಿಗೆಯೊಳಗೂ
ಈಗ
ಹೆಚ್ಚೇನಲ್ಲ ಸ್ವಚ್ಛ
ನೆಲ ದ ಮಾತು
೨ . ಸೂಜಿ ದಾರ
ಕೂಡಿ ಕಳೆವ
ನಿತ್ಯದ ವ್ಯಾಪಾರಕೆ
ಸಂಬಂಧದ ಹೆಣಿಗೆಗೆ
ಸೂಜಿ ಬಿದ್ದರೂ
ಸದ್ದಾಗದ ಗಾಢ
ಮೌನ ಬೇಕಂತೆ
ದಾರವದು ಪೋಣಿಸುತ
ಕಾಲ ಕುದುರೆಯನೇರಿ
ಗುಣಿಸು ಭಾಗಿಸು
ತಿದ್ದಿ ಗುದ್ದುವ ಹದಕೂ
ಸಂವೇದನೆ ಬೇಕಂತೆ
ಧ್ಯಾನವೋ ದಿಗಣವೋ
ಸೂಜಿ ದಾರದ
ಈ… ಲೆಕ್ಕಾಚಾರ
ನಿಜವೋ….ಸೋಜಿಗವೋ
ತಂತಿ ಮೇಲಿನ ನಡಿಗೆ
ಇದು
ನಗುವ ನಿನ್ನೆಗೂ
ಇಂದಿನಿರುಳು ಕಳೆದು
ಬರುವ ನಾಳೆಗೂ
ಅರಳುವ ಕಸೂತಿ
ಕುಸುಮ ಕೋಮಲ
ಕರುಳ ಬಂಧ
ಅರಿಯುವ ಹದವದು
ದಕ್ಕಲು ಹರೆಯ ಅರುವತ್ತು
ಅರಳಿನದು ಮರಳಿನದು
ಕಣ್ಣೀಗ ಮಂಜು ಮಂಜು
ಸೂಜಿ ದಾರ ಅಯೋಮಯ
ಫೋಣಿಸಲು ಬೇಕು
ಆನಂದ
ಅನುಬಂಧ






0 Comments