ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಲೂರು ರಘುನಂದನ್ ಕಾಲಂ : ಅಮ್ಮ ಜನ್ಮ ದಿನದ ಶುಭಾಶಯಗಳು

ಅವತ್ತು 2009 ಮೇ ಹತ್ತು. ಬೌದ್ಧ ಪೂರ್ಣಿಮೆ. ಜೆ.ಪಿ.ನಗರದ ಬಿ.ಜಿ.ಎಸ್ ಆಸ್ಪತ್ರೆಯಲ್ಲಿ ನಮ್ಮ ಮನೆಯವರಿಗೆಲ್ಲಾ ಖುಷಿ ಮೇಲೆ ಖುಷಿ. ಡಾ.ಹೇಮಾ ದಿವಾಕರ್ ಅವರು ಇನ್ನೊಬ್ಬಳು ಸಾಕವ್ವ ಹುಟ್ಟಿದಳು ಎಂದು ಮಗು ಎತ್ತಿಕೊಂಡು ಸೀದಾ ನನ್ನ ಬಳಿ ಕೊಡಲು ಬಂದ್ರು. ಆಗ ನಾನು, ನನ್ನ ಮಡದಿ ಲಕ್ಷ್ಮಿ ಮತ್ತು ನಮ್ಮ ಭಾವ ಮೂರು ಜನ ಆಸ್ಪತ್ರೆಯಲ್ಲಿ ಇದ್ದೆವು. ಪಾಪು ನೋಡಿದ ತಕ್ಷಣ ನನಗೆ ಬಳ ಬಳ ಕಣ್ಣೀರು ಬಂದು ಗಂಟಲು ಗದ್ಗದಿತವಾಯಿತು. ಕೆನ್ನೆ ಎಲ್ಲಾ ನಡುಗೋಕೆ ಶುರು ಆಯಿತು. ಕೈ ಕಾಲುಗಳಿಗೆ ಅವ್ಯಕ್ತವಾದ ಆನಂದ. ಇನ್ನು ಎದೆ ಮತ್ತು ಮೆದುಳಿಗೆ ಕೇಳಬೇಕೆ.
ನಾನು ಮಗುವನ್ನು ನೋಡಿದ ಕೂಡಲೇ ನಮ್ಮ ಭಾವನವರು ತನ್ನ ಮಗಳನ್ನು ಎತ್ತಿಕೊಳ್ಳಲಿ ಅಂತ ಆಸೆಯಿಂದ ಅವರ ಕಡೆ ನೋಡಿದೆ. ಡಾಕ್ಟರ್ ಅವರಿಗೆ ಮೊದಲು ಮಗು ಕೊಟ್ಟರು. ನಾ ಕಷ್ಟಪಟ್ಟ ದಿನಗಳೆಲ್ಲಾ ಸವೆದು ಹೋದವು ಅಂತ ಅನ್ನಿಸಿ ಬಿಟ್ಟವು. ಆ ಮಗುವನ್ನು ನೋಡುತ್ತಿದ್ದರೆ ಆಗು ನೀ ಅನಿಕೇತನ ಕವಿತೆ ಮತ್ತೆ ಮತ್ತೆ ಕಿವಿಯಲ್ಲಿ ಅನುರಣಿಸುತಿತ್ತು. ಹೌದು ಅವತ್ತು ಬೆಳಗಿನ ಜಾವ ಮೂರು ಗಂಟೆ ಹೊತ್ತಿಗೆ ಪುಟ್ಟ ಶೇತಮ್ಮ ಹುಟ್ಟಿದಳು. ಅದೇ ದಿನ ಅಮ್ಮ ಕೂಡ ಹುಟ್ಟಿದ ದಿನ. ಅಜ್ಜಿ ಮೊಮ್ಮೊಗಳ ಇಬ್ಬರ ಜನ್ಮದಿನವೂ ಒಂದೇ ಅಂತ ನಮ್ಮ ಭಾವನವರ ಮುಖದಲ್ಲಿ ಉಂಟಾಗುತ್ತಿದ್ದ ಖುಷಿಯ ಮತ್ತು ಬದುಕಿನ ಸಾರ್ಥಕತೆಯ ಗೆರೆಗಳು ಕಣ್ಣ ಮುಂದೆ ಸುಳಿದಾಡುತ್ತಿರುವಾಗ ಅಬ್ಬಾ ಏನಿದು ಬದುಕು. ಏನಿದು ಸಂಬಂಧ ಅಂತ ಅನ್ನಿಸುತಿತ್ತು.
ನಮ್ಮ ಭಾವನವರ ಕಣ್ಣುಗಳಲ್ಲಿ ಇದ್ದ ಕಾಂತಿ, ಆಗ ತಾನೇ ಹುಟ್ಟಿದ ಹಸಿಗೂಸು ಶೇತಮ್ಮನ ಮಗಳ ಕಣ್ಣುಗಳಲ್ಲಿದ್ದ ಕಾಂತಿ ಒಂದೇ ಆಗಿತ್ತು. ಆಮೇಲೆ ನನ್ನ ತಂಗಿಯನ್ನು ಬೆಳಗಿನ ತನಕ ನೋಡಲು ಬಿಟ್ಟಿರಲಿಲ್ಲ ನನ್ನೊಳಗಿದ್ದ ಅಣ್ಣ ಅನ್ನುವ ತಾಯಿಯ ಕಾತರಿಸುತ್ತಿತ್ತು ಅವಳನ್ನು ನೋಡಲು. ಅವಳನ್ನು ಬೆಳಿಗ್ಗೆ ನೋಡಿದ ಕೂಡಲೇ ಅವಳ ಕಣ್ಣುಗಳಲ್ಲಿ ಇದ್ದ ಕಾಂತಿಯೂ ಕೂಡ ಪಾಪು ಕಣ್ಣಲ್ಲಿ ಇದ್ದ ಬೆಳಕೇ ಇತ್ತು. ಬೆಳಗಿನ ಜಾವ ವತ್ತಾರೆಗೆ ಅಮ್ಮ ಬಂದರು. ಅವರ ಕಣ್ಣುಗಳಲ್ಲಿ ಇದ್ದ ಕಾಂತಿಯೂ ಅದೇ ಇತ್ತು. ಒಂದು ಜೀವಕ್ಕೆ ಎಷ್ಟು ಶಕ್ತಿ ಇದೆ ಅಲ್ವಾ. ನಮ್ಮ ಮತ್ತು ಅಮ್ಮನ ಕುಟುಂಬ ಎರಡೂ ಬದುಕು ಕಟ್ಟಿ ಕೊಂಡಿದ್ದ ಕಷ್ಟದ ದಿನಗಳೆಲ್ಲಾ ಸರಕ್ಕನೆ ಕಣ್ಣ ಮುಂದೆ ಬಂದು ಈ ದಿನಕ್ಕಾಗಿ ಕಾಯುತ್ತಿದ್ದೆವು ಅನ್ನುವ ಭಾವ ಎಲ್ಲರಲ್ಲಿಯೂ ಇತ್ತು. ಯಾರೂ ಏನೂ ಮಾತಾಡದಿದ್ದರೂ ನಮ್ಮ ನಮ್ಮ ಮೌನಗಳೇ ಎಲ್ಲವನ್ನು ಹೇಳುತ್ತಿದ್ದವು. ಅಮ್ಮ ತನ್ನ ಮೊಮ್ಮಗಳನ್ನು ನೋಡಿ “ನಾನು ಹುಟ್ಟಿದ ದಿನವೇ ಹುಟ್ಟಿದೆಯಲ್ಲಾ ಕಂದಾ ಎಂದು ಗುರುದೈವಾ” ಎಂದು ಕಣ್ಣು ಒರೆಸಿಕೊಂಡರು. ಅಮ್ಮ ಹುಟ್ಟಿದ ದಿನವೇ ನಿಸರ್ಗ ಹುಟ್ಟಿದ್ದನ್ನು ಕಂಡು ಮಗು ನೋಡಲು ಬಂದವರೆಲ್ಲಾ ತಮ್ಮ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಅಂದು ಆಸ್ಪತ್ರೆಯಲ್ಲಿಯೇ ನಿಸರ್ಗಳ ಮೊದಲ ಜನುಮದಿನ ಮತ್ತು ಅಮ್ಮನ ಹುಟ್ಟಿದ ಹಬ್ಬವನ್ನು ಆಚರಿಸಿದೆವು.
ಅಮ್ಮಾ ನೀವು ನನ್ನ ಬದುಕಲ್ಲಿ ಬಂದ ಕೂಡಲೇ ನಾ ಕಲಿತದ್ದು ಅನೇಕ. ಮಗ ಎಂದು ಮಡಿಲಿಗೆ ಹಾಕಿಕೊಂಡಿರಿ. ಪ್ರೀತಿ ತೋರಿದಿರಿ. ನೋವುಗಳನ್ನು ನುಂಗಿ ನಿರಾಳ ಆಗುವ ಪಾಠವನ್ನು ಹೇಳಿಕೊಟ್ಟಿರಿ. ಸ್ನೇಹಿತೆಯಂತೆ ಜೋತೆಯಾದಿರಿ. ಗುರುವಿನಂತೆ ಮಾರ್ಗದರ್ಶನ ತೋರಿದಿರಿ. ಸಮಾಜ ಸೇವೆ ಮತ್ತು ಕಲಾ ಸೇವೆಯಲ್ಲಿ ಇನ್ನೂ ಎತ್ತರದ ಸ್ಥಾನಕ್ಕೆ ಇರುವುದನ್ನು ನೋಡಲು ಸದಾ ಕಾಯುತ್ತೇನೆ. ನಿಮ್ಮಿಂದ ಹಿಡಿ ಪ್ರೀತಿ, ನಿಮ್ಮ ಕಣ್ಣುಗಳಲ್ಲಿ ಇರುವ ಸಾಂತ್ವನ ಮತ್ತು ಎದೆಗಪ್ಪಿ ತಲೆ ನೇವರಿಸುವ ತಾಯ ಮಮತೆಯನ್ನು ಬಿಟ್ಟು ಬೇರೇನೂ ಬಯಸಲಾರೆ. ಜಗತ್ತು ನಿಮ್ಮ ಪ್ರಭಾವಳಿಯಲ್ಲಿದ್ದೇನೆ ಅಂದುಕೊಳ್ಳುತ್ತಿರಬಹುದು. ಅಮ್ಮಾ ನೀವೊಬ್ಬ ಸೂರ್ಯ.ನಿಮ್ಮ ಬೆಳಕನ್ನು ಹೀರಿ ಬೆಳಗುವ ಚಂದ್ರ ಖಂಡಿತಾ ಆಗಲಾರೆ. ನನ್ನದೇ ದಾರಿಯಲ್ಲಿ ನಡೆಯುವ ಪುಟ್ಟ ಗರಿಕೆಯಂತಾದರೂ ಆಗಿ ಕೊನೆಯಾಗುವೆ. ಇವತ್ತು ಏನಾಗಿದ್ದೀರೋ ಅದೆಲ್ಲಾ ನಿಮ್ಮದು. ನಿಮ್ಮನ್ನು ನೋಡಿ ಕಲಿತು ಬೆಳೆಯುವ ಬೆಳಕು ಮಾತ್ರ ನಮ್ಮದು. ನೀವಿಟ್ಟ ಹೆಜ್ಜೆಗಳನ್ನು ಗೌರವಿಸುತ್ತಾ ನಡೆಯುವೆ. ಅಮ್ಮಾ ನಿಮಗೆ ಜನುಮ ದಿನದ ಶುಭಾಶಯಗಳು.

***

ಯಾವ ವರ್ಷವೂ ಅಮ್ಮನ ಜನ್ಮದಿನಕ್ಕೆ ಇರಲು ಆಗುವುದೇ ಇಲ್ಲ. ನನ್ನ ಸ್ನೇಹಿತೆಯರೂ ಹಾಗೂ ಸಹಜವಾಗಿ ಎಲ್ಲ ಹೆಣ್ಣು ಮಕ್ಕಳು ತನ್ನ ತಾಯಿಯ ಜೊತೆ ದಿನಕ್ಕೆ ಒಮ್ಮೆ ಆದರು ಫೋನ್ ಮಾಡಿ ಮಾತಾಡುತ್ತಾರೆ. ತಮ್ಮ ನೋವು ನಲಿವುಗಳನ್ನು ಹಂಚಿಕೊಳ್ಳುತ್ತಾರೆ. ರಜಕ್ಕೆ ಅಂತ ಗಂಡ ಮಕ್ಕಳ ಜೊತೆ ತವರಿಗೆ ಬಂದಾಗಲೂ ಅಮ್ಮ ಸಿಗುವುದೇ ಇಲ್ಲ. ಬಾಲ್ಯದಲ್ಲಿ ಹಾಸ್ಟೆಲ್ ಜೀವನದಲ್ಲಿ ತಾಯಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ. ಆಮೇಲೆ ಮದುವೆ ಆದ ಮೇಲೆ ಮತ್ತೆ ಅಮ್ಮನ ಸಾಂಗತ್ಯ ಸ್ವಲ್ಪ ದೂರವಾಯಿತು. ಈಗ ರಾಜಕೀಯ. ಅವರು ತುಂಬಾ ಒತ್ತಡದಲ್ಲಿ ಇರುತ್ತಾರೆ. ಎಷ್ಟೋ ಸಲ ತಿಂಗಳುಗಳಾದರೂ ಫೋನ್ ಮಾಡಲು ಸಾಧ್ಯವೇ ಆಗಿರುವುದಿಲ್ಲ. ಅವರು ಎಷ್ಟೇ ಎತ್ತರಕ್ಕೆ ಹೋದರೂ ಮಗಳು ಅಳಿಯ ಮೊಮ್ಮಕ್ಕಳು ಸೊಸೆ ಮಗ ಅಂತ ಒಂದಿಷ್ಟು ಸಮಯಕೊಡಬೇಕು ಅನ್ನುವ ಬಯಕೆ ನನ್ನದು. ಎಲ್ಲ ಅಮ್ಮಂದಿರ ತರಹದ ಸಹಜವಾದ ತಾಯಿ ಬೇಕು ಅಂತನಿಸುತ್ತದೆ. ಆದ್ರೆ ಏನು ಮಾಡುವುದು ಅದಕ್ಕೆಲ್ಲಾ ಈ ಸಮಯದಲ್ಲಿ ಅದೆಲ್ಲಾ ಅವರಿಂದ ಆಗುತ್ತಿಲ್ಲ. ರಜಕ್ಕೆ ಬಂದಾಗ ನನ್ನ ಮಕ್ಕಳ ಜೊತೆ ಸುತ್ತಾಡಬೇಕು ಅಂತೆಲ್ಲಾ ಅನಿಸುತ್ತದೆ. ಅವರ ರಾಜಕೀಯ ಒತ್ತಡದಲ್ಲಿ ಅದಕ್ಕೆಲ್ಲಾ ಸಮಯ ಕೊಡಲು ಆಗುವುದೇ ಇಲ್ಲ. ಈ ವರ್ಷ ಅವರ ಜನುಮದಿನಕ್ಕೆ ನಾನು ಬರುತ್ತಿದ್ದೇನೆ ಎಷ್ಟೋ ವರ್ಷಗಳ ನಂತರ. ಅಮ್ಮ ನಿಮ್ಮ ವೈಯಕ್ತಿಕ ಜೀವನದ ಕಡೆಗೂ ಒಂದಿಷ್ಟು ಸಮಯ ಕೊಡಿ. ಆರೋಗ್ಯದ ಕಡೆ ಗಮನಕೊಡಿ. ಜನರ ಸೇವೆ ಮಾಡುವ ಶಕ್ತಿ ಬರಲಿ. ರಮೇಶ್, ಮುಗ್ಧ ಮತ್ತು ರುಚಿತ್ ಅವರುಗಳ ಕಡೆಯಿಂದ ಕೂಡ ನಿಮಗೆ ಜನುಮ ದಿನದ ಶುಭಾಶಯಗಳು.
ಅಮ್ಮಾ ವಿಶ್ ಯು ಹ್ಯಾಪಿ ಬರ್ಥಡೇ ಟೂ ಯು .
ಡಾ. ಗಾಯತ್ರಿ ರಮೇಶ್ ( ಮಗಳು ) ಖಾನ್ಪುರ

***

ಮದುವೆ ಆಗುವ ತನಕ ಹಾರುವ ಹಕ್ಕಿಯ ತರಹ ಇದ್ದ ನಮ್ಮ ಅಮ್ಮನಿಗೆ ಆಮೇಲೆಲ್ಲಾ ಸಿಕ್ಕಿದ್ದು ಬಂಧನಗಳೇ. ಕುಟುಂಬ ಮತ್ತು ಸಮಾಜದಿಂದ ಸಾಕಷ್ಟು ನೋವನ್ನುಂಡಿದ್ದಾರೆ. ಅದಾದ ಮೇಲೆ ಮಕ್ಕಳಿಗೆ ಅಂತ ತನ್ನ ದುಡಿಮೆ ಮತ್ತು ಜೀವನವನ್ನು ಮುಡಿಪಾಗಿ ಇಟ್ಟಿದ್ದಾರೆ. ಆಮೇಲೆ ಸಿನೆಮಾ ರಂಗಭೂಮಿ ಅಂತ ತನ್ನ ಕಲಾ ಸೇವೆಯನ್ನು ಮಾಡಿದ್ದಾರೆ. ಈ ಹಂತಗಳನ್ನು ದಾಟಿದ ಮೇಲೆ ಸಮಾಜದಿಂದ ತನಗೆ ಏನು ಸಿಕ್ಕಿದೆ ಅನ್ನುವುದಕ್ಕಿಂತ ಸಮಾಜಕ್ಕೆ ತಾನೇನು ಕೊಡಬೇಕು ಎಂಬುದರ ಕಡೆಗೆ ಅವರ ಪಯಣ ದಿನದಿಂದ ದಿನಕ್ಕೆ ದಿಟ್ಟವಾಗಿ ಸಾಗುತ್ತಿದೆ. ತನ್ನ ಮಕ್ಕಳು, ರಂಗಭೂಮಿ, ಸಿನೆಮಾ ಅಂತೆಲ್ಲಾ ಐವತ್ತು ವರ್ಷ ಸಮಯ ಕಳೆದ ಮೇಲೆ ಜನ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ನಾವು ಮಕ್ಕಳು, ಅವರು ಹರಿದಂತೆ ಹರಿಯಲು ಬಿಡಬೇಕು. ಯಾಕೆಂದರೆ ಉಮಾಶ್ರೀ ಅನ್ನುವುದು ಒಂದು ವ್ಯಕ್ತಿಯಲ್ಲ ಅದೊಂದು ಜೀವಂತ ನದಿ. ಅದಕ್ಕೆ ಆಣೆಕಟ್ಟು ಕಟ್ಟಲು ನಮಗೆ ಯಾವ ಹಕ್ಕಾಗಲಿ, ಅಧಿಕಾರವಾಗಲಿ ಇಲ್ಲ. ಅವರ ಜೊತೆ ನಾವೂ ಹರಿಯ ಬೇಕಷ್ಟೇ. ನಮ್ಮ ಅಮ್ಮ ನನಗೆ ಸಮಯ ಕೊಡುತ್ತಿಲ್ಲ ಅನ್ನುವುದು ಸ್ವಾರ್ಥವಾಗುತ್ತದೆ. ಯಾಕೆಂದರೆ ಹರಿವ ನದಿಗೆ ಯಾವ ಹಂಗೂ ಇರುವುದಿಲ್ಲ ಅಲ್ಲವೇ ? ಅಮ್ಮ ಇನ್ನೂ ಎತ್ತರಕ್ಕೆ ಹೋಗಬೇಕು. ಕರ್ನಾಟಕದ ಮಹಿಳೆಯರ ಗಟ್ಟಿ ದ್ವನಿ ಆಗಬೇಕು ಅನ್ನುವ ಬಯಕೆ ಇದೆ.
ಎಷ್ಟೋ ಸಲ ತಾನು ಸಿನೆಮಾ ಮಾಡಿದ ಹಣವನ್ನೆಲ್ಲಾ ತಗೊಂಡು ಹೋಗಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಸುರಿಯುತ್ತಿದ್ದಾಗ, ನಾನು ಎಷ್ಟೋ ಸಲ ಅವರೊಡನೆ ಜಗಳವಾಡಿದ್ದೇನೆ. ಅಮ್ಮ ನೀವು ದುಡಿದ ಹಣವನ್ನೆಲ್ಲಾ ಕೊಡಿ ಇನ್ನೊಂದು ಮನೆ ಕಟ್ಟಿಸುತ್ತೇನೆ. ಬಾಡಿಗೆ ಬರುವಂತೆ ಮಾಡುತ್ತೇನೆ. ಯಾಕಂದೆರೆ ಊರಿಂದ ಊರಿಗೆ ಹೋಗಿದ್ದೇವೆ. ಜನ ಕೈ ಹಿಡಿಯಲಿಲ್ಲ ಅಂದ್ರೆ ನಿಮ್ಮ ಶ್ರಮ ಹಣ ಎಲ್ಲಾ ವ್ಯರ್ಥ ಆಗಿಬಿಡುತ್ತದೆ ಅಂತ ಜಟಾಪಟಿ ಮಾತಾಡಿದ್ದೇನೆ. ಅದಕ್ಕೆ ಅಮ್ಮ “ಇಲ್ಲ ಮಗನೆ ನಿನ್ನ ಅಮ್ಮನ ಮೇಲೆ ನಂಬಿಕೆ ಇಡು. ನನ್ನ ಮೇಲೆ ನನಗೆ ಪೂರ್ಣ ನಂಬಿಕೆ ಇದೆ. ಜನರಿಗಾಗಿ ಕೆಲಸ ಮಾಡೋಣ. ಅವರು ಎಂದೂ ನಮ್ಮ ಕೈ ಬಿಡುವುದಿಲ್ಲ” ಎಂದು ಸಮಾಧಾನ ಹೇಳುತ್ತಿದ್ದರು. ಅಮ್ಮ ಇಷ್ಟು ಎತ್ತರಕ್ಕೆ ಬೆಳೆಯುತ್ತಾರೆ ಎಂದು ನಾನು ಊಹಿಸಿರಲಿಲ್ಲ. ಆದ್ರೆ ಈಗ ಯಾಕೆ ಆಗ ನನಗೆ ಬುದ್ಧಿ ಹೇಳುತ್ತಿದ್ದರು ಎಂಬುದು ಅರಿವಾಗಿದೆ. ಅಮ್ಮ ಕೂಡ ಇನ್ನಷ್ಟು ಅರ್ಥ ಆಗಿದ್ದಾರೆ. ನಮ್ಮ ಕ್ಷೇತ್ರದ ಜನತೆಯ ಮನಸೂ ಕೂಡ ನನಗೆ ಅರ್ಥವಾಗಿದೆ.
ನಮ್ಮಮ್ಮ ರಾಜಕಾರಣಿ ಆಗಲಿ, ಮಂತ್ರಿ ಆಗಲಿ ಏನೇ ಆಗಲಿ ಅವರೊಬ್ಬ ಜೀವಂತ ಕಲಾವಿದೆ. ಅಮ್ಮನ ಕೊನೆಯ ಉಸಿರು ಇರುವ ತನಕ ಅವರು ಬಣ್ಣ ಹಚ್ಚುತ್ತಲೇ ಇರಬೇಕು. ಅವರ ಕನಸಿನ ಪಾತ್ರಗಳನ್ನೂ ಮಾಡಲೇ ಬೇಕು ಎನ್ನುವುದು ಬಹು ದೊಡ್ಡ ಆಸೆ ನನ್ನದು. ರಾಜಕಾರಣಿ ಆದ್ರೆ ಒಂದು ಪಕ್ಷಕ್ಕೆ ದುಡಿಯುತ್ತಾರೆ. ಆದ್ರೆ ಉಮಾಶ್ರೀ ಅನ್ನುವ ಕಲಾವಿದೆ ಪಕ್ಷಾತೀತ. ಜನರ ಕಲಾವಿದೆ. ರಂಗದ ಮೇಲೆ ಅಮ್ಮನನ್ನು ನೋಡುವುದೆಂದರೆ ನನ್ನ ಬದುಕಿನ ಅಮೂಲ್ಯ ಕ್ಷಣಗಳು. ಈಗ ಕಲಾವಿದೆಯಾಗಿ ಅವರು ಸಮಯ ಕೊಡಲು ಆಗುತ್ತಿಲ್ಲ. ಆ ನೋವು ಅವರ ಮನದ ಮೊಲೆಯಲ್ಲಿ ಒಂದು ಕಡೆ ಇದ್ದೇ ಇದೆ. ಆದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅದೆಷ್ಟೋ ಕಲ ಜೀವಗಳ ಸೇವೆ ಮಾಡುತ್ತಿರುವುದು ದೊಡ್ಡ ಸೇವೆಯೇ. ಜನ ಸೇವೆಯಲ್ಲಿ ಇದ್ದುಕೊಂಡೇ ಒಂದಷ್ಟು ಸಮಯ ಬಿಡುವು ಮಾಡಿಕೊಂಡು ಅಮ್ಮ ಬಣ್ಣ ಹಚ್ಚಲು ಬಿಡುವು ಮಾಡಿಕೊಳ್ಳಬೇಕು. ಅದಕ್ಕೆ ಪೂರಕವಾಗಿ ನಾವೂ ಅವರ ಒತ್ತಡವನ್ನು ಕಡಿಮೆ ಮಾಡಬೇಕು ಎಂದು ಎಷ್ಟೋ ಸಲ ಅನ್ನಿಸಿದೆ. ಆದ್ರೆ ಆಗುತ್ತಿಲ್ಲ. ಆ ದಿನಗಳೂ ಬೇಗ ಬರಲಿ ಎಂದು ಕಾಯುವೆ.
ಇತ್ತೀಚೆಗೆ ನಾನು ಅಮ್ಮ ಇಪ್ಪತ್ತು ದಿನಗಳಾದರೂ ಮುಖಾಮುಖಿ ಆಗಿರಲೇ ಇಲ್ಲ. ಒಬ್ಬರನ್ನೊಬ್ಬರು ನೋಡಿರಲಿಲ್ಲ, ಮಾತಾಡಿರಲಿಲ್ಲ. ಅವರು ಕ್ಷೇತ್ರಕ್ಕೆ ಬಂದರೂ ಕೊಡ ಭೇಟಿಗೆ ಅವಕಾಶ ಆಗಿರಲಿಲ್ಲ. ನಾನು ಕ್ಷೇತ್ರದ ಕೆಲಸದಲ್ಲಿ ನಾನು ತೊಡಗಿರುತ್ತಿದ್ದೆ. ಅವರು ರಾಜ್ಯದ ಕೆಲಸದಲ್ಲಿ ತೊಡಗಿರುತ್ತಿದ್ದರು. ಮೊನ್ನೆ ಅಮ್ಮ ಸಿಕ್ಕಿದ್ದರು. ಸಿಕ್ಕಾಗ ಅವರು “ ಇಪ್ಪತ್ತು ದಿನಗಳು ಆದವಲ್ಲೋ ಮಗನೇ ನಿನ್ನನ್ನು ನೋಡಿ. ಸದಾ ಒತ್ತಡದಲ್ಲಿ ಇರುತ್ತೇನೆ. ನಿಮ್ಮನ್ನು ಮಾತಾಡಿಸಲೂ ಸಮಯ ಆಗಲ್ಲ. ನಿನಗೆ, ಗಾಯಮ್ಮನಿಗೆ ಸಮಯ ಕೊಡಲು ಆಗುತ್ತಿಲ್ಲ ಅನ್ನುವ ಬೇಸರ ಇದೆಯೇನೋ. ನಿಮ್ಮಿಬ್ಬರಿಗೂ ಇನ್ನೊಬ್ಬಳು ಅಮ್ಮನನ್ನು ತಂದು ಕೊಡಲೇನೋ” ಎಂದು ಭಾವುಕರಾದರು.
ಅಮ್ಮಾ ನೀವು ನದಿಯಂತೆ ಹರಿದರೆ ದಡದಂತೆ ನಾನು ನಿಮ್ಮ ಜೊತೆ ಇರುವೆ. ನೀವು ಜನರಿಗಾಗಿ ಎಷ್ಟು ಸಾಧ್ಯವಾಗುತ್ತೋ ಅಷ್ಟೇ ಸೇವೆ ಮಾಡಿ. ನಿಮ್ಮನ್ನು ಕೋಟೆ ಕಟ್ಟಿ ಇಡುವ ಯಾವ ಹಕ್ಕು ನನಗಿಲ್ಲ. ನಮಗಾಗಿ ಬದುಕು ರೂಪಿಸಿ ಕೊಟ್ಟಿದ್ದೀರಿ. ಜೀವನ ಅಂದ್ರೆ ಏನು ಅಂತ ತೋರಿಸಿಕೊಟ್ಟಿದ್ದೀರಿ. ನಿಮಗೆ ಯಾವ ಕ್ಷೇತ್ರದಲ್ಲಿ ದುಡಿಯಬೇಕು ಅನ್ನಿಸುತ್ತೋ ಅಲ್ಲಿ ಸೇವೆ ಮಾಡಿ. ನಾನಂತೂ ಸದಾ ನಿಮ್ಮ ಜೊತೆ ಇರುತ್ತೇನೆ. ಇರುವುದಷ್ಟೇ ಅಲ್ಲ ದುಡಿಯುತ್ತೇನೆ. ನಿಮಗೆ ನೋವಾಗದಂತೆ ನಿಮ್ಮ ಒತ್ತಡಗಳನ್ನು ನಿಭಾಯಿಸುತ್ತೇನೆ. ಜನ ಸೇವೆ ಮಾಡುವ ನಿಮ್ಮ ಶಕ್ತಿ ಎಂದೂ ಕುಸಿಯದಿರಲಿ. ನಿಮ್ಮ ಒಳಗಿನ ಕಲಾ ದೇವಿ ನಿಮ್ಮನ್ನು ಸದಾ ಕೈ ಹಿಡಿದು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.
ಅಮ್ಮಾ ನಿಮಗೆ ಜನ್ಮದಿನದ ಶುಭಾಶಯಗಳು.
ವಿಜಯ್ ಕುಮಾರ್ ( ಬಾಬು ) ಮಗ

***

ನಾನೊಬ್ಬ ಸಾಮಾನ್ಯ ಗೃಹಿಣಿ. ಅಮ್ಮ ಮಂತ್ರಿಯಾದರೂ, ಸಿನೆಮಾ ತಾರೆಯಾದರೂ ನನಗಂತೂ ಅವರು ಒಬ್ಬ ತಾಯಿ. ಮೊದ ಮೊದಲು ಅವರ ಶಿಸ್ತು, ಕೆಲಸದ ನಿಷ್ಠೆಗೆ ಹೊಂದಿಕೊಳ್ಳಲು ಕಷ್ಟ ಆಯಿತು. ಆದ್ರೆ ಈಗ ಆಗ ಅಷ್ಟೆಲ್ಲಾ ಮಾಡಿದ್ದು ಈಗ ಇಡೀ ಸಂಸಾರ ನಿಭಾಯಿಸಲು ಸುಲಭವಾಯಿತು. ಸರಳತೆ ಬಯಸುವ ಅವರು ಯಾವ ವೈಭೋಗದ ಜೀವನ ಶೈಲಿಯನ್ನು ಇಷ್ಟ ಪಡುವುದಿಲ್ಲ. ನಮ್ಮನ್ನು ಹಾಗೇ ಇರಲು ಹೇಳಿಕೊಡುತ್ತಾರೆ. ನಾವೂ ಕಷ್ಟದಲ್ಲಿ ಬೆಳೆದು ಬಂದಿದ್ದರಿಂದ ಸರಳವಾಗಿ ಇರುವುದರಲ್ಲೇ ಹೆಚ್ಚು ವಿಶ್ವಾಸ. ನನ್ನ ಅಣ್ಣನ ತಾಯ್ತನ, ಅಜ್ಜಿಯ ಮಡಿಲ, ನಮ್ಮ ತಾಯಿಯ ಮಮತೆ ಮದುವೆ ಆದ ಮೇಲೆ ಸಿಕ್ಕಲ್ಲ ಅಂದುಕೊಂಡಿದ್ದೆ. ಆದ್ರೆ ಅದು ಹಾಗಾಗಲಿಲ್ಲ. ಅತ್ತೆ ಅಮ್ಮ ಆದ್ರೂ. ಬೇಲೂರಿನಿಂದ ಬಂದ ಹುಡುಗಿಗೆ ಇನ್ನೇನು ಬೇಕು ಹೇಳಿ. ಎಂದೂ ವಡವೆ ಅಂದ್ರೆ ನನಗೆ ಇಷ್ಟ ಇರಲಿಲ್ಲ. ಈಗಲೂ ಕೂಡ. ಆದ್ರೆ ಅಮ್ಮನಿಗೆ ನಾ ವಡವೆ ಹಾಕಿಕೊಳ್ಳಬೇಕು, ಒಳ್ಳೊಳ್ಳೆ ಸೀರೆ ಉಟ್ಕೋಬೇಕು ಅದನ್ನು ತಾನು ಕಣ್ತುಂಬಿಕೊಳ್ಳಬೇಕು ಅನ್ನುವ ಆಸೆ. ಥೇಟ್ ನನ್ನ ಅಣ್ಣನ ತರಹ. ಮೊನ್ನೆ ಮೊನ್ನೆ ಅವರು ತಂದು ಕೊಟ್ಟ ಓಲೆಗಳು ತುಂಬಾ ಚೆನ್ನಾಗಿವೆ. ನನಗೆ ಹೇಳದೇ ಹೋಗಿ ಸೊಸೆಗೆ ಅಂತ ವಡವೆ ತಂದು ಸರ್ಪ್ರೈಸ್ ಕೊಟ್ಟಿದ್ದ ಘಳಿಗೆಗಳನ್ನು ಮರೆಯಲಾರೆ.
ನನ್ನ ಮಗಳು ನಿಸರ್ಗ ಮತ್ತು ಅಮ್ಮ ಇಬ್ಬರ ಜನ್ಮದಿನ ಇಬ್ಬರದ್ದೂ ಒಂದೇ ದಿನ ಎಂಬುದು ಖುಷಿ ನನಗೆ. ಯಾಕೆಂದರೆ ಹಿರಿಯ ಕೊಂಡಿಯ ಜೊತೆಗೆ ಕಿರಿಯ ಕೊಂಡಿಯೊಂದು ಬೆಸೆದುಕೊಂಡಿದ್ದು ಅದೃಷ್ಟವೇ. ಅಮ್ಮನಂತೆ ಎಲ್ಲವನ್ನು ನಿಭಾಯಿಸುವ, ನಿಯಂತ್ರಿಸುವ ಮತ್ತು ಸಂಭಾಳಿಸುವ ಶಕ್ತಿ ನನ್ನ ಮಗಳಿಗೆ ಈಗಲೇ ಇದೆ. ಅವಳಲ್ಲಿ ಕೂಡ ಅದೆಷ್ಟೋ ನಾಯಕತ್ವದ ಗುಣಗಳನ್ನು ನೋಡಿದ್ದೇನೆ. ಅವಳ ಬಾಡಿ ಲಾಂಗ್ವೇಜ್ ಮತ್ತು ಗೆಷ್ಚರ್ಸ್ ಎಲ್ಲಾ ಥೇಟ್ ಅಮ್ಮನ ತರಾನೇ ಇದ್ದಾವೆ. ಎಷ್ಟೋ ಸಲ ಉಮಾಶ್ರೀ ಎಲ್ಲಿ ಅಂತ ಹುಡುಕುವುದು ಬೇಡ. ಅವರು ನನ್ನ ಮಗಳಲ್ಲೇ ಇದ್ದಾರೆ ಅಂತ ಅನ್ನಿಸಿದೆ. ಅಮ್ಮ ಮತ್ತು ನನ್ನ ಪತಿ ಇಬ್ಬರೂ ಸಮಾಜಕ್ಕಾಗಿ ಬಿಡುವಿಲ್ಲದೇ ದುಡಿಯುತ್ತಿದ್ದಾರೆ. ಜನಸೇವೆ ಮಾಡುತ್ತಿದ್ದಾರೆ. ಅವರಿಬ್ಬರಿಗೂ ಸಂಸಾರದ ವತಿಯಿಂದ ಎಷ್ಟು ಸಾಧ್ಯವೋ ಅಷ್ಟು ಸಹಕಾರ ಕೊಡುತ್ತೇನೆ. ಅಮ್ಮನ ಉಡುಗೆ ತೊಡುಗೆ, ಅವರ ಡಯಟ್ ಇವುಗಳನ್ನೆಲ್ಲಾ ನೋಡಿಕೊಳ್ಳುವುದರಲ್ಲಿ ಕೂಡ ಸುಖವಿದೆ ಎಂದು ನಂಬಿದ್ದೇನೆ. ಅವರು ಎಷ್ಟೇ ಎತ್ತರಕ್ಕೆ ಹೋದರೂ ನನಗೊಬ್ಬ ತಾಯಿ ಅಂತಷ್ಟೇ ಭಾವಿಸುತ್ತೇನೆ. ಅವರಷ್ಟೇ ಎತ್ತರಕ್ಕೆ ಅಥವಾ ಅವರನ್ನು ಮೀರಿಸುವ ಎತ್ತರಕ್ಕೆ ನನ್ನ ಮಗಳು ನಿಸರ್ಗ ಹೋಗುತ್ತಾಳೆ ಅನ್ನುವ ಭರವಸೆಗಳು ಈಗಾಗಲೇ ನನಗೆ ಮೂಡ ತೊಡಗಿವೆ.

ಅಮ್ಮಾ ನಿಮ್ಮ ಸಾಧನೆಯ ಬಗ್ಗೆ ನನಗೆ ಅತ್ಯಂತ ಗೌರವವಿದೆ. ಸೊಸೆಯಾಗಿ ನಿಮ್ಮನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳಬೇಕು ಅನ್ನುವುದಷ್ಟೇ ನನ್ನ ಸಂತಸ. ಕುಟುಂಬ ಗೌಜು ಗದ್ದಲಗಳ ಕಡೆ ತಲೆ ಕೆಡಿಸಿಕೊಳ್ಳಬೇಡಿ. ಅದಕ್ಕೆ ನಾನಿದ್ದೇನೆ. ನಿಮ್ಮ ಬೆಳವಣಿಗೆಗಳು ಇನ್ನೂ ಎತ್ತರಕ್ಕೆ ಏರಲಿ ಎಂದು ದಿನ ನಿತ್ಯ ದೀಪ ಹಚ್ಚುವಾಗ ನನ್ನ ದೇವರಲ್ಲಿ ಬೇಡಿಕೊಳ್ಳುತ್ತೇನೆ.
ಅಮ್ಮಾ ನಿಮಗೆ ಹುಟ್ಟಿದ ಹಬ್ಬದ ಶುಭಾಶಯಗಳು.
ಶ್ವೇತಾ ವಿಜಯ್ ಕುಮಾರ್ (ಸೊಸೆ)
ಮುಗ್ಧ ( ಮೊಮ್ಮಗಳು ) ಖಾನ್ಪುರ
 

‍ಲೇಖಕರು G

10 May, 2015

ನಿಮಗೆ ಇವೂ ಇಷ್ಟವಾಗಬಹುದು…

6 Comments

  1. Anonymous

    E avadhiyalli beluru ragunandan avaru hennu makkalige yestu pramukyathe kodutthare yendu namage thiliyutthade…..

  2. savita amaresh nugadoni

    ಕಳೆದ ವರ್ಷ ಮೇ ಒಂಭತ್ತನೇ ತಾರೀಖು ಬಸ್ ನಲ್ಲಿ ಪ್ರಯಾಣ ಮಾಡಬೇಕಾದರೆ ಬೇಲೂರರ ಅಮ್ಮನ ಕುರಿತಾದ ಕಟ್ಟು ಪದಗಳಲ್ಲಿ ಉಮಾಶ್ರೀ ಅವರ ಬಗೆಗೆ ಬರೆದ ಕಟ್ಟುಪದ ಬರೆದು ಕಳಿಸಿದ್ದರು. ಅದಕ್ಕೆ ರಾಗ ಸಂಯೋಜಿಸಿ ಹಾಡಿ ವಾಟ್ಸಪ್ ನಲ್ಲಿ ಕಳಿಸಿದ್ದೆ. ಅದನ್ನು ಮೇ ಹತ್ತು ಅವರ ಹುಟ್ಟು ಹಬ್ಬದ ದಿನ ಉಡುಗೊರೆಯಾಗಿ ಬೇಲೂರರು ಕೊಟ್ಟಿದ್ದರಂತೆ. ಈ ದಿನ ಉಮಾಶ್ರೀ ಅವರ ಹುಟ್ಟಿದ ಹಬ್ಬ. ಕಳೆದ ವರ್ಷ ಹಾಡಿದ ಕಟ್ಟುಪದ ಮತ್ತೆ ನೆನಪಾಯಿತು. ಸಂವೇದನಾ ಶೀಲ ಕಲಾವಿದೆಗೆ ಮತ್ತು ಅವರ ಮೊಮ್ಮಗಳು ನಿಸರ್ಗಳಿಗೆ ಜನಮದಿನದ ಶುಭಾಶಯಗಳು.
    ಸವಿತಾ ಅಮರೇಶ ನುಗಡೋಣಿ.

  3. kiran.k.b

    Tumba olleya praytana.baraha kooda chennagide.abhinandanegalu

  4. Anonymous

    ಮನಮುಟ್ಟುವ ಬರೆಹ. ತುಂಬ ಚೆನ್ನಾದ ನಿರೂಪಣೆ. ಅಮ್ಮಂದಿರ ದಿನ ಜನಿಸಿದ ಎರಡೂ ಚೇತನಗಳಿಗೂ ಶುಭಹಾರೈಕೆಗಳು.

  5. Dinesh

    tumba chennagi niruupaneyaagide,heege barittirali

  6. GAYATHRI RAMESH

    Satyavada anisikegallu raghu. Written wonderfully.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading