'ಭಾಷೆಯಲ್ಲಿ ಉಮಾಶ್ರೀ ಅಭಿನಯವನ್ನು ಹಿಡಿದಿಡಲು ಸಾಧ್ಯವಿಲ್ಲ' – ಅಮರೇಶ ನುಗಡೋಣಿ

ಉಮಾಶ್ರೀ ಅವರ ಬಗ್ಗೆ ಅಮರೇಶ್ ನುಗಡೋಣಿ ಏನು ಹೇಳಿದ್ದಾರೆ ಎಂದು ಅವರನ್ನು ಸಂದರ್ಶಿಸಿ, ಅವರ ನುಡಿಗಳನ್ನು

ಕಳುಹಿಸಿಕೊಟ್ಟಿದ್ದಾರೆ ಬೇಲೂರು ರಘುನಂದನ್

ಅಮರೇಶ ನುಗಡೋಣಿ ಕಂಡಂತೆ ಪುಟ್ಟಮಲ್ಲಿ

facebook_1442666386156
ಕಾಸರವಳ್ಳಿಯವರು ಆಧುನಿಕ ಮನಸುಳ್ಳ ನಿರ್ದೇಶಕರು. ಸಮಕಾಲೀನ ವಿದ್ಯಾಮಾನಗಳನ್ನು ಗಮನದಲ್ಲಿ ಇಟ್ಟುಕೊಂಡೇ ಸಿನೆಮಾವನ್ನು ಸಂಕೇತ ಪ್ರತಿಮೆಗಳಲ್ಲಿ ಹೆಣೆಯುತ್ತಾರೆ. ನನ್ನ ಕಥೆಯಲ್ಲಿ ದೃಶ್ಯೀಕರಿಸಲು ಸಾಧ್ಯವಾಗದನ್ನು ತಮ್ಮ ಅವರ ಸಿನೆಮಾದಲ್ಲಿ ಚಿತ್ರಿಸುತ್ತಾರೆ. ಕೆಲವೆಡೆ ಇರುವ ದೃಶ್ಯಗಳನ್ನು ಬಿಟ್ಟು ಹೊಸ ದೃಶ್ಯಗಳನ್ನೇ ಕಟ್ಟುತ್ತಾರೆ. ಹೀಗೆ ನನ್ನ ಸವಾರಿ ಕಥೆ ಕಾಸರವಳ್ಳಿ ಅವರ ಸಿನೆಮಾದಲ್ಲಿ ಹೊಸ ರೂಪವನ್ನೇ ಪಡೆದಿದೆ. ಕಥೆಯಲ್ಲಿ ಮತ್ತು ಸಿನೆಮಾ ಕತೆಯಲ್ಲಿ ಮುಖ್ಯವಾಗಿ ಕಂಡು ಬರುವ ಪಾತ್ರಗಳು ವಜ್ರಪ್ಪ, ರುದ್ರಿ ಮತ್ತು ಮಠದಯ್ಯ. ಈ ಮೂರು ಪಾತ್ರಗಳು ಸಿನೆಮಾದಲ್ಲಿ ಸಮನಾಗಿ ಬಂದಿವೆ. ಉಮಾಶ್ರೀ ಅವರು ರುದ್ರಿ ಪಾತ್ರವನ್ನು ಅರ್ಥಪೂರ್ಣವಾಗಿ ನಿರ್ವಹಿಸಿದ್ದಾರೆ.
ರುದ್ರಿ ತನ್ನ ಗಂಡನ ಕುಲ ಕಸುಬಿನ ಜೊತೆ ಹೊಂದಿಕೊಂಡು ಜೀವನ ನಿರ್ವಹಿಸಲು ಆಗದೇ ಬದುಕಿಗೆ ಹೊಸದಾರಿಯನ್ನು ಕಂಡುಕೊಳ್ಳುತ್ತಾಳೆ. ಅವಳು ಬದುಕಿಗಾಗಿ ಕಟ್ಟಿಕೊಂಡ ಹೊಸ ದಾರಿ ತನ್ನ ಗಂಡನ ನಂಬಿಕೆ ಮತ್ತು ಕಸುಬನ್ನು ತಿರಸ್ಕರಿಸದೇ ಮತ್ತು ಅಡ್ಡಿ ಮಾಡದೇ ಅದನ್ನು ಕಾಯ್ದುಕೊಂಡು ಜೀವನ ಮಾಡುತ್ತಿರುತ್ತಾಳೆ. ಇಷ್ಟರ ನಡುವೆಯೂ ಅನಿವಾರ್ಯಕ್ಕೆ ಪ್ರೆಶ್ನೆ ಮಾಡುವುದನ್ನು ಬಿಟ್ಟರೆ ತನ್ನ ಗಂಡನ ಕೆಲಸದ ಬಗೆಗೆ ಆಕೆಗೆ ಗೌರವ ಇದ್ದೇ ಇದೆ.
ಗಂಡನ ಕಾಯಕವನ್ನು ಅನುಮಾನಿಸುವ ಸಂದರ್ಭದಲ್ಲಿಯೂ ರುದ್ರಿ ಮೌನವಾಗಿರುತ್ತಾಳೆ. ಆದರೆ ತನ್ನ ಗಂಡನನ್ನು ಒಂದು ಫ್ಯೂಡಲ್ ವ್ಯವಸ್ತೆ ಸವಾರಿ ಮಾಡಿ ಅವನ ನಮಬಿಕೆಯನ್ನು ದುರುಪಯೋಗ ಮಾಡಿಕೊಳ್ಳಲು ಶುರು ಮಾಡಿದಾಗ ಕೊನೆಗೆ ತನ್ನ ಗಂಡನ ಪರವಾಗಿ ನಿಲ್ಲುತ್ತಾಳೆ ರುದ್ರಿ. ಈ ಸನ್ನಿವೇಷವನ್ನು ಪಾತ್ರವಾಗಿ ಉಮಾಶ್ರೀ ಅವರು ಬಹಳ ಸಮರ್ಥವಾಗಿ ನಿಭಾಯಿಸಿದ್ದಾರೆ. ಒಟ್ಟು ಸಿನೆಮಾದಲ್ಲಿ ಉಮಾಶ್ರೀ ಅವರ ಅಭಿನಯ ನೋಡಿದ ಮೇಲೆ ನನ್ನ ಕಥೆಯ ಒಳಗಿನ ರುದ್ರಿ ನನ್ನ ಕಣ್ಣ ಮುಂದೆ ಉಳಿಯಲಿಲ್ಲ. ಸಿನೆಮಾದ ರುದ್ರಿಯೇ ಈಗ ನನ್ನೆದುರು ಉಳಿದಿದ್ದಾಳೆ. ಹೀಗೆ ಉಳಿಯುವಲ್ಲಿ ಉಮಾಶ್ರೀ ಅವರು ಉಳಿದಿದ್ದಾರೆ ಎಂದು ಹೇಳಲಾರೆ. ಉಳಿದಿರುವುದು ಸಿನೆಮಾದ ರುದ್ರಿಯೇ. ಹಾಗೇ ತನ್ನ ಇರುವನ್ನು ಇಲ್ಲದಂತೆ ಮಾಡಿ ಪಾತ್ರವನ್ನು ಉಳಿಸುವ ಉಮಾಶ್ರೀ ಅವರ ಅಭಿನಯ ನನ್ನ ಕಲ್ಪನೆಯ ರುದ್ರಿ ಕರಗಿಹೋಗುವಂತೆ ಮಾಡಿದೆ.
ರುದ್ರಿಯ ಪಾತ್ರವನ್ನು ಮಾಡುವ ಸಮಯದಲ್ಲಿ ಉಮಾಶ್ರೀ ಅವರಿಗೆ ಎಲ್ಲಾ ಸೂಕ್ಷ್ಮಗಳನ್ನು ನಿರ್ದೇಶಕರು ಹೇಳಿಕೊಟ್ಟಿದ್ದಾರೋ ? ಅಥವಾ ಉಮಾಶ್ರೀ ಅವರೇ ಪಾತ್ರಕ್ಕೆ ಬೇಕಾದಂತೆ ಇಂಪ್ರೂವ್ ಮಾಡಿಕೊಂಡು ಅಭಿನಯಿಸುತ್ತಾರೋ ? ಎಂಬ ಕುತೂಹಲ ಮೂಡಿದೆ, ಯಾಕೆಂದರೆ ನಿರ್ದೇಶಕನನ್ನು ಮೀರಿದ ಅನೇಕ ಸನ್ನಿವೇಶಗಳು ಈ ಚಿತ್ರದಲ್ಲಿ ಬಂದಿವೆ ಎಂಬುದು ನನ್ನ ಅಭಿಪ್ರಾಯ. ಉದಾಹರಣೆಗೆ ಕಟ್ಟಿಗೆ ಹೊರುವಾಗ ಒಂದು ಕಟ್ಟಿಗೆ ತುಂಡು ಉಮಾಶ್ರೀ ಅವರ ಸೆರಗಿಗೆ ಸಿಕ್ಕಿಕ್ಕೊಂಡಾಗ ಅದನ್ನು ಎಷ್ಟು ಸಹಜವಾಗಿ ತೆಗೆದು ಹಾಕಿ ಮುಂದೆ ನಡೆಯುತ್ತಾರೆ. ಹಾಗೆಯೇ ರುದ್ರಿಯ ಗಂಡನಿಗೆ ಪಿಟ್ಸ್ ಬಂದು ಅವನ ಬಾಯಿಂದ ನೊರೆಯಂತ ಬುರುಗು ಬರುತ್ತಿರುತ್ತದೆ. ಅದನ್ನು ಒರೆಸುವ ದೃಶ್ಯ ತಾಯ್ತನವನ್ನು ತೋರುತ್ತದೆ. ಯಾಕೆಂದರೆ ಗಂಡ ಎಂದು ಬಂದಕೂಡಲೇ ಕೆಲ ನಿಭಂದನೆಗಳು ಬರುತ್ತವೆ. ಆದ್ರೆ ತಾಯಿ ಎಂದು ಬಂದಾಗ ಯಾವ ನಿಭಂದನೆಗಳು ಇರುವುದಿಲ್ಲ. ಹಾಗೆಯೇ ತನ್ನ ಗಂಡ ಈರ್ಯ ಹತಾಶನಾದಾಗ ಎದೆಗೆ ಆನಿಸಿಕೊಂಡು ರುದ್ರಿ ಸಂತೈಸುವ ದೃಶ್ಯ ನೋಡಿದಾಗಲೂ ಉಮಾಶ್ರೀ ಅವರ ಪ್ರಬುದ್ಧ ನಟನೆ ಕಂಡು ಬರುತ್ತದೆ. ಇವೆಲ್ಲಾ ಸಾಧ್ಯ ಆಗುವುದು ಬದುಕಿನ ಅನುಭವಗಳು ಗಟ್ಟಿಯಾಗಿ ಬದುಕನ್ನೇ ಆವರಿಸಿ ಕೊಂಡಾಗ ಮಾತ್ರ.  ಹಾಗಾಗಿ ಉಮಾಶ್ರೀ ಅವರು ಒಳ್ಳೆಯ ಅಭಿನಯ ಮಾಡಲು ಸಾಧ್ಯವಾಗಿದೆ.
images
ಇನ್ನೂ ಮುಂದುವರೆದಂತೆ ಸೊಂಟ ಮತ್ತು ತಲೆಯ ಮೇಲೆ ಬಿಂದಿಗೆ ಹೊತ್ತು ನಡೆಯುವ ದೃಶ್ಯ ಇರಬಹುದು, ರೊಟ್ಟಿ ಬಡಿಯುವ ದೃಶ್ಯ ಇರಬಹುದು, ಹೂವು ಮತ್ತು ಜೋಳ ಕದಿಯುವ ದೃಶ್ಯ ಇರಬಹುದು ಇಲ್ಲೆಲ್ಲಾ ಉಮಾಶ್ರೀ ಅವರ ಅಭಿನಯ ನಿಜಕ್ಕೂ ತನ್ನದೇ ಆದ ಐಡೆಂಟಿಟಿಯನ್ನು ಉಳಿಸಿಕೊಂಡಿದೆ. ಉತ್ತರ ಕರ್ನಾಟಕದಲ್ಲಿ ರೊಟ್ಟಿ ಬಡಿಯುವಾಗ ಕಾಯ ಮನಸ್ಸು ಒಂದೆಡೆ ಇರುತ್ತದೆ. ಒಮ್ಮೊಮ್ಮೆ ಇರುವುದಿಲ್ಲ. ಸಿನೆಮಾದಲ್ಲಿ ರುದ್ರಿ ರೊಟ್ಟಿ ಬಡಿಯುವ ಒಂದು ದೃಶ್ಯವಿದೆ. ಆ ದೃಶ್ಯ ತುಂಬಾ ಬೇಗ ಬೇಗ ನಡೆಯುತ್ತದೆ. ಚಿತ್ರೀಕರಣವೂ ಕೂಡ ಬೇಗ ಬೇಗನೆ ಆಗುತ್ತದೆ. ಅಂದ್ರೆ ಚಿತ್ರಕತೆ ಒತ್ತಾಯಿಸುವ ವೇಗಕ್ಕೆ ಉಮಾಶ್ರೀ ಅವರೂ ಕೂಡ ಅದೇ ವೇಗಕ್ಕೆ ಹೊಂದಿಕೊಂಡು ಆ ದೃಶ್ಯಕ್ಕೆ ಬೇಕಾದ ಅಭಿನಯ ಮಾಡಿದ್ದಾರೆ. ಅವರು ರೊಟ್ಟಿ ಬಡಿಯುವ ಕ್ರಮ, ಅದಕ್ಕೆ ಹೊಂದಿಕೊಂಡ ಬಡಿಯುವ ಲಯ ಜೊತೆಗೆ ರೊಟ್ಟಿ ಬಡಿಯುವಾಗ ಜಾರುವ ಸೆರಗನ್ನು ಸರಿ ಪಡಿಸಿಕೊಳ್ಳುವುದನ್ನು ನೋಡಿದರೆ ಅಪ್ಪಟ ಉತ್ತರ ಕರ್ನಾಟಕದ ಹೆಣ್ಣು ಮಗಳಂತೆಯೇ ಕಾಣುತ್ತಾರೆ. ಇದನ್ನೆಲ್ಲಾ ನೋಡಿದಾಗ ಇದನ್ನೆಲ್ಲಾ ಒಬ್ಬ ನಿರ್ದೇಶಕ ಹೇಳಿಕೊಟ್ಟಿದ್ದಾರೆಯೇ ಅಥವಾ ಉಮಾಶ್ರೀ ಅವರು ಸಹಜವಾಗಿ ಮಾಡಿದ್ದಾರೆಯೇ ಎಂಬ ಅನುಮಾನ ಮೂಡುತ್ತದೆ. ಆದ್ರೆ ಸಿನೆಮಾವನ್ನು ನೋಡಿದಾಗ ಉಮಾಶ್ರೀ ಅವರ ಅಭಿನಯ ಕೆಲವೆಡೆ ನಿರ್ದೇಶಕನನ್ನು  ಮೀರಿದ ಕಾಣ್ಕೆ ಇದೆ ಎಂದು ಖಂಡಿತಾ ಅನ್ನಿಸುತ್ತದೆ.
ನಾವು ಕಥೆಗಾರಗು ಶೇಕಡಾ ಐವತ್ತು ಮಾತ್ರ  ಕಥೆ ಬರೆಯಬಹುದು. ಇನ್ನು ಉಳಿದದ್ದು ಓದುಗರು ವಿಸ್ತರಿಸುತ್ತಾರೆ. ಸಿನೆಮಾ ಕೂಡ ಹಾಗೇ. ನಿರ್ದೇಶಕನನ್ನು ಮೀರಿ ಎಷ್ಟೋ ಉತ್ತಮ ಕಲಾವಿದರು ಸಿನೆಮಾದ ಆಶಯ ಗೆಲ್ಲಿಸಿರುತ್ತಾರೆ. ಹಾಗೆ ಸಿನೆಮಾದ ಯಶಸ್ಸಿಗೆ ಬಿರಾದರ್ ಉಮಾಶ್ರೀ ಹಾಗೂ ಇನ್ನಿತರ ಕಲಾವಿದರೂ ಕಾರಣಕರ್ತರೆ. ಬಿರಾದರ್ ಮತ್ತು ಉಮಾಶ್ರೀ ಅವರದ್ದು ಕನಸೆಂಬೊ ಕುದುರೆಯನೇರಿ ಸಿನೆಮಾದಲ್ಲಿ ಒಂದು ರೀತಿಯ ಜುಗಲ್ ಬಂದಿ ರೀತಿಯ ಅಭಿನಯ. ಸಂಗೀತಗಾರರು ಇಬ್ಬರು ಕಛೇರಿ ಮಾಡುವಾಗ ಒಬ್ಬರು ಇನ್ನೊಬ್ಬರನ್ನು ಸೋಲಿಸಲು ಪೈಪೋಟಿಗೆ ಬಿದ್ದಂತೆ ತೋರುತ್ತದೆ. ಆದರೆ ಇಬ್ಬರೂ ಒಬ್ಬರನ್ನು ಒಬ್ಬರು ಪೋಷಿಸುತ್ತಿರುತ್ತಾರೆ. ಬಿರಾದಾರ್ ಮತ್ತು ಉಮಾಶ್ರೀ ಅವರ ವಿಷಯದಲ್ಲಿ ಕೂಡ ಆಗಿರುವುದು ಪರಸ್ಪರ ಒಬ್ಬರು ಒಬ್ಬರನ್ನು ಪೋಷಿಸುವ ಪ್ರಬುದ್ಧವಾದ ಅಭಿನಯದ ಜುಗಲ್ಬಂದಿ.
ಸಿನೆಮಾದ ನಟರನ್ನು ಆಯ್ಕೆಯ ವಿಷಯಕ್ಕೆ ಸಂಬಂಧಿಸಿದಂತೆ ಕಾಸರವಳ್ಳಿಯವರು ನನ್ನನ್ನು ಒಮ್ಮೆ ಕೇಳಿದ್ದರು. ಆದ್ರೆ ಅದಕ್ಕೂ ಮುಂಚೆ ರುದ್ರಿ ಪಾತ್ರಕ್ಕೆ ಉಮಾಶ್ರೀ ಎಂಬುದಾಗಿ ತಿಳಿಸಿದ್ದರು. ಬಿರಾದರ್ ಅವರನ್ನು ಈರ್ಯನ ಪಾತ್ರಕ್ಕೆ ಹೊಂದುತ್ತಾರೆಯೇ ಎಂದು ಕೇಳಿದ್ದರು. ನನಗೆ ಅವೆಲ್ಲಾ ಸೂಕ್ಷ್ಮಗಳು ಗೊತ್ತಿರಲಿಲ್ಲ. ಆದ್ರೆ ಬಿರಾದರ್ ಅವರನ್ನು ಬಿಕ್ಷುಕ ಹಾಗೂ ಇನ್ನಿತರ ಹಾಸ್ಯ ಪಾತ್ರಗಳಲ್ಲಿ ನೋಡಿದ್ದೆ. ಅಭಿಪ್ರಾಯ ಕೇಳಿದರು ಅನ್ನುವ ಕಾರಣಕ್ಕೆ ಒಳ್ಳೇ ನಟ ಸರ್ ಎಂದು ಅಭಿಪ್ರಾಯ ಸೂಚಿಸಿದ್ದೆ. ಮಠದಯ್ಯನ ಪಾತ್ರಕ್ಕೆ ಉತ್ತರ ಕರ್ನಾಟಕದವರೇ ಅನ್ನುವ ಕೆಲ ಒತ್ತಡಗಳಿಂದ ಗುಡಿಗೇರಿ ಬಸವರಾಜು ಅವರಿಗೆ ಒಂದು ಅವಕಾಶ ಮಾಡಿಕೊಡಲಾಗಿತ್ತು. ಮೂರು ದಿನ ಚಿತ್ರೀಕರಣ ಕೂಡ ಆಗಿತ್ತು.  ಪಾತ್ರಕ್ಕೆ ಅವರು ಹೊಂದಿಕೆ ಆಗದೇ ಅವರಿಗೆ ತಿಳಿ ಹೇಳಿ ವಾಪಸ್ ಕಳಿಸಿದ್ದರು.  ಹಾಗೂ ಇದೇ ಸಿನೆಮಾದ ರುದ್ರಿಯ ಪಾತ್ರಕ್ಕೆ ಜಯಂತಿ ಅವರ ಹೆಸರು ಮೊದಲು ಇತ್ತಂತೆ. ಆದ್ರೆ ಅವರು ಅಭಿನಯ ಮುಂದು ಮಾಡುತ್ತಾರೆ ಅನ್ನುವ ಕಾರಣಕ್ಕೆ ಅವರನ್ನು ಕೈ ಬಿಟ್ಟು ಉಮಾಶ್ರೀ ಅವರನ್ನು ರುದ್ರಿಯ ಪಾತ್ರಕ್ಕೆ ಅಂತಿಮ ಮಾಡಿದ ವಿಷಯವನ್ನು ಕಾಸರವಳ್ಳಿಯವರೇ ನನ್ನ ಬಳಿ ಚಹಾ ವಿರಾಮದಲ್ಲಿ ಹಂಚಿಕೊಂಡಿದ್ದರು. ಹಾಗೂ ಜಯಂತಿ ಅವರಿಗೆ ಹೊಂದುವ ಪಾತ್ರ ಬಂದಾಗ ಬಳಸಿಕೊಳ್ಳುವೆ ಎಂದೂ ಕೂಡ ಹೇಳಿದ್ದರು. ಅದರ ಪ್ರಕಾರ ಕೂರ್ಮಾವತಾರದಲ್ಲಿ ಜಯಂತಿ ಅವರು ಅಭಿನಯಿಸಿದರು ಅನ್ನಿಸುತ್ತೆ.
ವಾಸ್ತವ ಬದುಕಿನ ಪ್ರಕಾರವೇ ಸಹಜವಾಗಿ ನಟನೆ ಮಾಡಿಸುವುದು ಕಾಸರವಳ್ಳಿ ಅವರು ನಿರ್ದೇಶನ ಮಾಡುವ ಕ್ರಮ. ಅಭಿನಯ ಮಾಡುವ ಕಲಾವಿದರು ಅವರ ಪರಿಧಿಯಲ್ಲಿ ಬರಲು ಆಗದು. ಪಾತ್ರವೇ ತಾನಾಗಿ ಕತೆಯ ಆಶಯವನ್ನು ದುಡಿಸುವುದು ಕಾಸರವಳ್ಳಿ ಅವರಿಗೆ ಮುಖ್ಯ. ಆ ಪ್ರಕಾರ ಉಮಾಶ್ರೀ ಜೀವಂತ ಬದುಕಿನ ಒಳಗೆ ಓಡಾಡುವ ಪಾತ್ರವಾಗಿಯೇ ರುದ್ರಿಯಾಗಿ ಸಿನೆಮಾದಲ್ಲಿ ತನ್ನನ್ನು ತಾನು ಪ್ರಕಟಿಸಿಕೊಂಡಿದ್ದಾರೆ. ಇಡೀ ಸಿನೆಮಾದಲ್ಲಿ ಉಮಾಶ್ರೀ ಅವರೂ ಎಲ್ಲೂ ಅಭಿನಯಿಸಿಲ್ಲ. ಸಹಜ ಬದುಕಿನ ಅಭಿವ್ಯಕ್ತಿಯಂತೆ ಕಾಣಿಸುವುದು ನಿರ್ದೇಶಕರ ಮತ್ತು ಕಲಾವಿದರ ಗೆಲುವು ಅನ್ನಬಹುದು.
ಕೊನೆಯದಾಗಿ ಹೇಳುವುದಾದರೆ ನನ್ನ ಭಾಷೆಯಲ್ಲಿ ಉಮಾಶ್ರೀ ಅವರ ಅಭಿನಯವನ್ನು ಹಿಡಿದಿಡಲು ಸಾಧ್ಯವಿಲ್ಲ. ನನ್ನ ಕತೆಯಲ್ಲೂ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ಭಾಷೆಯನ್ನು ಮೀರಿದ ಅಭಿನಯ ಉಮಾಶ್ರೀ ಅವರದ್ದು.

****

ನಂಬಿಕೆಯ ಜಗತ್ತು ಮತ್ತು ಅದನ್ನು ನಂಬಿದ ಲೋಕದ ಸುತ್ತ ಹೆಣೆದ ಕಥೆಯುಳ್ಳ ಸಿನೆಮಾ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ ಚಿತ್ರ ಕನಸೆಂಬೋ ಕುದುರೆಯನೇರಿ ಸಿನೆಮಾ. ಈ ಸಿನೆಮಾದ ಕಥೆ ಅಮರೇಶ ನುಗಡೋಣಿ ಅವರ ಸವಾರಿ ಕಥಾಸಂಕಲನದ್ದು. ಸಿನೆಮಾ ಕಲಾಕೃತಿ ಮತ್ತು ಸಾಹಿತ್ಯ ಕೃತಿ ಎರಡರಲ್ಲೂ ಬಹಳ ಮುಖ್ಯವಾಗಿ ಕಂಡು ಬರುವ ಪಾತ್ರಗಳೆಂದರೆ ವಜ್ರಪ್ಪ ( ಸಿನೆಮಾದದಲ್ಲಿ ಈರ್ಯ ) ರುದ್ರಿ ಮತ್ತು ಮಠದಯ್ಯ. ಗುಣಿ ತೋಡುವವನ ಕನಸಿನ ನಂಬಿಕೆ ಮತ್ತು ಅವನ ಕುಲಕಸುಬನ್ನು ನಂಬಿ ಬದುಕುವ ಈರ್ಯ. ತನ್ನ ಗಂಡನ ಬದುಕು ಮತ್ತು ನಂಬಿಕೆಗೆ ಪೂರಕವಾಗಿ ನಿಲ್ಲುವ ಪಾತ್ರವೇ ರುದ್ರಿ. ಉಮಾಶ್ರೀಯೊಳಗಿನ ರುದ್ರಿಯನ್ನು ಕುರಿತು ಕಥೆಗಾರರಾದ ಅಮರೇಶ ನುಗಡೋಣಿ ಅವರು ಹಂಚಿಕೊಂಡ ಮಾತುಗಳಿವು.
ಲೇಖಕ ಯಾವುದಾದರು ಪಾತ್ರಗಳನ್ನು ತನ್ನ ಕತೆಯೊಳಗೆ ಅಕ್ಷರ ರೂಪ ಕೊಟ್ಟು ನಿರ್ಮಿಸಬಹುದು . ಒಂದು ಸಾಹಿತ್ಯ ಕೃತಿ ಪ್ರದರ್ಶನದ ಟೆಕ್ಸ್ಟ್ ಆಗಬೇಕಾದರೆ ಅಭಿವ್ಯಕ್ತಿ ಸಹಜವಾಗಿಯೇ ತನ್ನ ಲೋಕವನ್ನು ವಿಸ್ತರಿಸಿಕೊಂಡು ಪಾತ್ರವಾಗಿ ಪ್ರಕಟಗೊಳ್ಳುತ್ತದೆ. ಓದುವಾಗ ಓದುಗ ತನ್ನ ಅಗತ್ಯಕ್ಕೆ ತಕ್ಕಂತೆ ಊಹಿಸಿಕೊಂಡು ಪಾತ್ರವನ್ನು ತನ್ನಷ್ಟಕ್ಕೆ ತಾನೇ ನಿರ್ಮಾಣ ಮಾಡಿಕೊಂಡಿರುತ್ತಾನೆ. ಆದ್ರೆ ಒಬ್ಬ ನಿರ್ದೇಶಕ ಮತ್ತು ಕಲಾವಿದರು ಕಥೆಯ ಪಾತ್ರಗಳಿಗೆ ಜೀವ ಕೊಡುವುದು ಅಂದ್ರೆ ಹೀಗೆ ರುದ್ರಿಯಂತೆ, ಗುಲಾಬಿಯಂತೆ, ಪುಟ್ಟಮಲ್ಲಿಯಂತೆ, ಅನುಭವದ ಪದ್ದಿಯಂತೆ. ಈ ಪಾತ್ರಗಳ ಹಿಂದೆ ದುಡಿದ ನಿರ್ದೇಶಕರಂತೆ.
ಕನಸೆಂಬೋ ಕುದುರೆಯನೇರಿ ಸಿನೆಮಾದಲ್ಲಿ ಉತ್ತರ ಕರ್ನಾಟಕದ ಭಾಷೆಯಿಂದ ಮೊದಲುಗೊಂಡು ಹಾವ ಭಾವ, ನಡೆ ನುಡಿ, ಜೀವನ ಕ್ರಮ ಎಲ್ಲವನ್ನೂ ಮೈವೆತ್ತಂತೆ ಅಭಿನಯಿಸಿರುವುದು ಕಲಾವಿದೆಯೊಬ್ಬಳ ಅನುಭವ ಲೋಕವನ್ನು ಊಹಿಸಿಕೊಳ್ಳಲು ಒಂದು ಸ್ಪೇಸ್ ಮಾಡಿಕೊಡುತ್ತದೆ ಎಂಬುದಂತೂ ಸತ್ಯ. ಒಟ್ಟಾರೆ ಬಾವಿಯಲ್ಲಿ ಇಳಿದು ನೀರು ತುಂಬಿಸಿಕೊಂಡು ಸೊಂಟದಲ್ಲಿ ಮತ್ತು ತಲೆಯ ಮೇಲೆ ಬಿಂದಿಗೆ ಹೊತ್ತು ನಡೆಯುವ, ರೊಟ್ಟಿ ಬಡಿಯುವ ಹಾಗೂ ಇನ್ನಿತರ ದೃಶ್ಯಗಳು ಉಮಾಶ್ರೀ ಅನ್ನುವ ಗುರುತನ್ನು ಒತ್ತಿ ಬಿಡುತ್ತದೆ. ಈ ಮೂಲಕ ರುದ್ರಿ ನಮ್ಮನ್ನು ಆವರಿಸಿಕೊಂಡು ಬಿಡುತ್ತಾಳೆ. ಕೊನೆಗೆ ಉಮಾಶ್ರೀ ಮರೆಯಾಗಿಬಿಡುತ್ತಾರೆ.

‍ಲೇಖಕರು G

September 20, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Vj

    ನನಗೆ ತಿಳಿದಿರುವಹಾಗೆ ಉಮಾಶ್ರೀ ಯವರು ೧೯೮೫ (1985)ರಿಂದ ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿಯಲ್ಲಿ ಅಭಿನಯಿಸಿದ್ದಾರೆ. ಅವರಿಗೆ ಅ ಭಾಗದ ಭಾಷೆಯ ಮೇಲೆಯ ಹಿಡಿತ ಎಷ್ಷಿದೆ ಅಂದರೆ, ಬಹಳ ಜನ ಇಂದಿಗೂ ಉಮಾಶ್ರೀ ಉತ್ತರ ಕರ್ನಾಟಕದವರು ಎಂಬ ನಂಬಿಕೆ ಇದೆ. ಅವರು ಅಭಿನಯಾ ಮಾತ್ರವಲ್ಲದೆ ರಾಜಕೀಯ ಭಾಷಣ ಮತ್ತು ಅಲ್ಲಿನ ಜನರ ಜೊತೆ ಒಡನಾಟದ ಮಾತುಗಳು ಕೂಡ ಸ್ಥಳೀಯ ದಾಟಿಯಲ್ಲೆ ಇರುತ್ತೆ ಎಂಬುದು ಗಮನಾರ್ಹ. ಕಳವು ಸಿನಿಮಾದಲ್ಲಿ ಕೋಲಾರದ ಕನ್ನಡ, ಗುಲಾಬಿ ಟಾಕೀಸ್ ನಲ್ಲಿ ಕುಂದಾಪುರದ ಕುಂದಕನ್ನಡ ಮಾತಾಡಿದ್ದಾರೆ. ಅಲ್ಲಿಯೂ ಸ್ಥಳಿಯ ಭಾಷೆ ನುಡಿದಿದ್ದಾರೆ ಉಮಾಶ್ರೀ. ಹ್ಯಾಟ್ಸ್ ಆಫ್ ಟು ಯೂ ಉಮಾಶ್ರೀ ಮೇಡಂ.

    ಪ್ರತಿಕ್ರಿಯೆ
  2. ನಿಮ್ಮ ಭಿಮಾನಿ

    ಅಮರೇಶ ನುಗಡೋಣಿ ಕಂಡಂತೆ ಪುಟ್ಟಮಲ್ಲಿ….
    ಒಳ್ಳೆ ನುಡುಗಳನ್ನು ಸ್ಪಷ್ಟನೆ ನೀಡಿರುತ್ತಾರೆ ಉಮಾಶ್ರೀಯವರ ಬಗ್ಗೆ, ಅದು ನಿಜ ಕೂಡ
    ಉಮಾಶ್ರೀಯವರಿಗೆ ನಟನೆ ಅಚ್ಚು ಮೆಚ್ಚು ಹಾಗೂ ನಟನೆಯಿಂದಲೆ ಅವರು ಜನರ ಮೆಚ್ಚುಗೆಯನ್ನು ಸಂಪಾದಿಸಿದ್ದಾರೆ, ನಟನೆ ಬರಿ ನಟನೆಯಾಗಿಲ್ಲಾ ಅವರು ಪಾತ್ರಗಳಲ್ಲಿ ಜೀವ ತುಂಬುತ್ತಾರೆ, ನಿರ್ದೇಶಕರು ರುದ್ರಿಯ ಪಾತ್ರವನ್ನು ಉಮಾಶ್ರೀಯವರಿಂದಲೆ ಆಗಬೇಕು ಹಾಗೂ ಇವರಿಂದಲೆ ಇಂತಹ ಪಾತ್ರಗಳನ್ನು ಮಾಡಿಸುತ್ತಿದ್ದರು, ಇವರಿಗೆ ಪಾತ್ರಗಳ ಆಯ್ಕೆ ಇಲ್ಲದಿದ್ದರು,ಇಂತಹ ಪಾತ್ರಗಳನ್ನು ಮಾಡಲು ಉಮಾಶ್ರೀ ಅವರಿಂದ ಮಾತ್ರ ಸಾಧ್ಯ ಅಂತ ನಿರ್ದೇಶಕರೆ ಇವರನ್ನು ಆಯ್ಕೆ ಮಾಡುತ್ತಿದ್ದರು,,,
    ಅಭಿನಯ ಎಲ್ಲಾ ಕಲಾವಿಧರಲ್ಲ್ಲಿ ಕಾಣಬಹುದು, ಆದರೆ ಅಭಿನಯಕ್ಕೆ ಒಂದು ಕಲೆ ಕೊಟ್ಟು ನಟನೆ ಮಾಡುವದು ಉಮಾಶ್ರೀ ಮಾತ್ರ…
    ಕನಸೆಂಬ ಕುದರೆಯನ್ನೇರಿ ಸಿನೆಮಾದಲ್ಲಿ ಇವರು ಕಟ್ಟಿಗೆ ಹೊರೆಯನ್ನು (ದೊಡ್ಡ ಗಾತ್ರದ) ಹೋರುವುದು ಹಾಗೂ ಸಹಜವಾಗಿ ನಡೆದುಕೊಂಡು ಹೋಗುತ್ತಿರುವದು ನೋಡುತ್ತಿದ್ದರೆ, ಇಂದಿನ ಅಭಿನೇತ್ರಿಯರು ಆಗಿದ್ದಲ್ಲಿ Thermocol ಅಲ್ಲಿ ಮಾಡಿದ್ದ ಹೊರೆಯನ್ನು ಹೊತ್ತು ಅದನ್ನೆ ಅನೇಕ ಸಲ ಟೇಕ್ ಆಫ್ ಮಾಡುತ್ತಿದ್ದರು, ಅದು ಬೇರೆ ವಿಷಯ ಬಿಡಿ, ಇವರು ಜೀವನದ ಕಷ್ಟಗಳ, ಅವಮಾನಗಳ, ಅನುಭವಗಳ, ಟೀಕೆಗಳ, ಭಿನ್ಃ ಅಭಿಪ್ರಾಯಗಳ,ಕುಟುಂಬ ಇವರನ್ನು ನಡೆಸಿಕೊಂಡು ಬಂದಂತಹ ರೀತಿ ಇದೆ ದೊಡ್ಡ ಗಾತ್ರದ ಹೊರೆಯನ್ನು ಸಲೀಸವಾಗಿ ಭಾರವನ್ನು ತಲೆಯ ಮೇಲೆ ಹೊತ್ತುಕೊಂಡು ಬಂದಂತಹ ದಿಟ್ಟ ಮಹಿಳೆ ಇವರು, ಇನ್ನು ಕಟ್ಟಿಗೆ ಹೊರೆಹೊತ್ತುವದು ಇವರಿಗೇನು ದೊಡ್ಡ ಹೊರೆ ಅಲ್ಲ,,,
    ಇನ್ನು ಭಾಷೆಯ ಬಗ್ಗೆ ಅವರು ಕರ್ನಾಟಕದ ಮಹಿಳೆ ಕುಂದಾಪುರದ ಭಾಷೆಯಾಗಿರಬಹುದು ಅಥವ ಉತ್ತರ ಕರ್ನಾಟಕದ್ದೇ ಇರಬಹುದು, ಇವರು ಆ ಜನರಲ್ಲಿ ಬೆರೆಯುತ್ತಾರೆ, ಇಂದಿಗೂ ಬೆರೆಯುತ್ತೀದ್ದಾರೆ ಇವರಲ್ಲಿ ಎಲ್ಲೂ ಭೇಧ ಭಾವಮಾತ್ರ ಇಲ್ಲ ಎಲ್ಲರಲ್ಲಿ ಒಂದಾಗಿ ಬದುಕುವ ಸರಳತನ ಇವರಲ್ಲಿ ಇದೆ…
    ಮನಸಲ್ಲಿ ಅನೇಕ ನೋವನ್ನು ಬದಿಗೆ ಇಟ್ಟು ಜನರಿಗೆ ನಗಿಸುತ್ತಾರೆ ಆದರೆ ಜನರು ಕೂಡ ಇವರು ನಡೆದು ಬಂದ ದಾರಿಯನ್ನು ನೋಡಲೆಬೇಕು…
    ಆ ಪ್ರಯತ್ನವನ್ನು ಬೇಲೂರು ರಘುನಂದನ್ ನೀವು ಮಾಡುತ್ತೀದ್ದೀರಿ, ನಾನು ಹೇಳಬೇಕೆಂದಿದ್ದು ಇಷ್ಟೆ ಮಹಿಳೆಯರು ಈ ಅಂಕಣಗಳನ್ನು ಓದಿರಿ, ನನ್ನ ಆತ್ಮ ಬಲ ಎಷ್ಟೋ ಬದಲಾಗಿದೆ
    ನಿಮ್ಮ ಆತ್ಮ ಬಲವು ಹೆಚ್ಚಾಗಬಹುದು ಈ ಸಬಲಿಕರಣ ಮಹಿಳೆಯ ಬಗ್ಗೆ ಓದುವಾಗ….
    ಆ ದೇವಿ ಅನುಗ್ರಹ ಸದಾ ಇವರಿಗೆಲ್ಲರಿಗೂ ಇರಲಿ ಗುರುವೆ ಶ್ವೇತ ಪ್ರಿಯ ಗುರುವೆ…
    ನಿಮ್ಮ ಅಭಿಮಾನಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: