ಬೇಲೂರು ರಘುನಂದನ್ ಕಾಲಂ : ಉಮಾಶ್ರೀಯನ್ನು ಕಟ್ಟಿಕೊಟ್ಟಿದ್ದಾರೆ ವೀಣಾ ಬನ್ನಂಜೆ

Umasiri-1411

ಪ್ರದರ್ಶನ ದರ್ಶನವಾಗುವ ದಾರಿ

ಬಾಗಲಕೋಟೆ ಜಮಖಂಡಿ ತಾಲೂಕಿನಲ್ಲಿರುವ ಸತ್ಯಕಾಮ ಪ್ರತಿಷ್ಠಾನದ ಹೆಸರು ಬಂದೊಡನೆ ವೀಣಾ ಬನ್ನಂಜೆಯವರ ಹೆಸರು ನಮ್ಮ ಮುಂದೆ ಬರುತ್ತದೆ. ಸತ್ಯಕಾಮರ ನೆಲದಲ್ಲಿ ಸಾಹಿತ್ಯ, ಆಧ್ಯಾತ್ಮ, ಸಂಸ್ಕೃತಿಯ ಕೆಲಸವನ್ನು ಮಾಡುತ್ತಿರುವ ವೀಣಾ ಬನ್ನಂಜೆ ಅವರಲ್ಲಿ ಉಮಾಶ್ರೀ ಅವರ ಬಗ್ಗೆ ಮಾತಾಡಿ ಎಂದಾಗ ಅವರು ತೋರಿದ ಲೋಕವೇ ಹೊಸ ಬಗೆಯೊಂದರಲ್ಲಿ ಉಮಾಶ್ರೀ ಅಭಿನಯದ ಸಾಧ್ಯತೆಗಳನ್ನು ಅರಿವಿಗೆ ತಂದುಕೊಟ್ಟಿತು. ಸತ್ಯಕಾಮ ಪ್ರತಿಷ್ಠಾನ ಇರುವುದು ಕಲ್ಹಳ್ಳಿಯಲ್ಲಿ. ಕಲ್ಹಳ್ಳಿ ಇರುವುದು ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ. ತೇರದಾಳ ಉಮಾಶ್ರೀ ಅವರ ರಾಜಕೀಯ ಕಾರ್ಯಕ್ಷೇತ್ರ. ವೀಣಾ ಬನ್ನಂಜೆ ಅವರು ಮತದಾರರು, ಉಮಾಶ್ರೀ ಅವರು ಶಾಸಕರು ಎಂದು ಹೇಳುತ್ತಾ ಮತ್ತೊಂದು ಬಗೆಯ ಉಮೇದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ ಎಂದಲ್ಲ. ಯಾಕೆಂದರೆ ಇವರಿಬ್ಬರೂ ತಮ್ಮ ತಮ್ಮ ಉಪಾದಿಗಳನ್ನು ಮೀರಿದವರು ಎಂಬುದು ನನ್ನ ನಂಬಿಕೆ. ಎಲ್ಲರ ತಿಳಿವಿಗಾಗಿ ಈ ಅಂಶವನ್ನು ಪ್ರಸ್ತಾಪಿಸಿದೆ ಅಷ್ಟೇ.

ಇದೇ ಸತ್ಯಕಾಮ ಪ್ರತಿಷ್ಠಾನದಲ್ಲಿ ಕಾಜಾಣ ಕಾವ್ಯ ಕಮ್ಮಟ ಮಾಡಿದಾಗ ಉಮಾಶ್ರೀ ಅವರು ಇಡೀ ಕಮ್ಮಟಕ್ಕೆ ಕೊಟ್ಟ ನೆರವು ಮತ್ತು ವೀಣಾ ಬನ್ನಂಜೆ ಅವರು ನಮ್ಮ ಜೊತೆಯಾದ ಜೀವಂತಿಕೆಯ ಪರಿಯನ್ನು ನಾ ಎಂದಿಗೂ ಮರೆಯಲಾರೆ.  ಸತ್ಯಕಾಮರ ನೆಲದಲ್ಲಿ ನನ್ನ ಕಟ್ಟುಪದಗಳ ಆಧಾರಿತ ಭೂಮಿ ನಾಟಕ ಪ್ರದರ್ಶನಗೊಂಡಾಗ ಸಾಕವ್ವ ಮತ್ತು ವೀಣಮ್ಮ ಇಬ್ಬರೂ ತಮ್ಮ ತಮ್ಮ ಅಭಿವ್ಯಕ್ತಿಯನ್ನು ಪ್ರಕಟ ಪಡಿಸುತ್ತಲೇ ಯುವ ಪಡೆಯ ಜೊತೆ ಬೆರೆತದ್ದು ಕೂಡ ನನ್ನ ಪಾಲಿಗೆ ಸಂತಸದ ಘಳಿಗೆಯೇ.  ಉಮಾಶ್ರೀ ವೀಣಾ ಬನ್ನಂಜೆ ಈ ಬಗೆಗೆ ನೆನಪಿಸಿ ಕೊಳ್ಳ ಬಹುದಾದ ಇನ್ನೊಂದು ಕೊಂಡಿಯೆಂದರೆ ನಾವು ಕುಪ್ಪಳಿಯಲ್ಲಿ ಉಮಾಶ್ರೀ ಅವರ ಅಭಿನಯವನ್ನು ಕುರಿತು ಮೂರು ದಿನಗಳ ಶಿಬಿರವನ್ನು ಆಯೋಜಿಸಿದ್ದೆವು. ಆ ಸಮಯದಲ್ಲೂ ಕೂಡ ವೀಣಾ ಬನ್ನಂಜೆಯವರು ಉಮಾಶ್ರೀ ಅನ್ನುವ ಕಲಾವಿದೆಯ ನೆಪದಲ್ಲಿ ನಮ್ಮ ಜೊತೆಯಾಗಿದ್ದರು.
ವೀಣಾಬನ್ನಂಜೆ ಅವರು ಉಮಾಶ್ರೀ ಅವರ ಅಭಿನಯವನ್ನು ಕುರಿತು ಸಂವಾದಕ್ಕೆ ಇಳಿದಾಗ ನಿಜಕ್ಕೂ ಅವರು ಪ್ರದರ್ಶನ ಮತ್ತು ದರ್ಶನಗಳ ದಾರಿಯನ್ನು ಅಭಿವ್ಯಕ್ತಿಯ ಮೂಲಕ ಹೇಗೆ ಕಾಣಬಹುದು ಎಂಬುದನ್ನು ಒಂದೊಳ್ಳೆ ಡಿಬೇಟ್ ನಮ್ಮ ಮುಂದೆ ಇಟ್ಟರು. ಮಾತು ಆರಂಭಿಸುವ ಮೊದಲು ನನಗೆ ವೈಯಕ್ತಿವಾಗಿ ಉಮಾಶ್ರೀ ಅವರ ಬಗ್ಗೆ ಏನೂ ಗೊತ್ತಿಲ್ಲ. ಅವರ ಸಿನೆಮಾಗಳನ್ನು ಕೂಡ ಎಲ್ಲವನ್ನೂ ನೋಡಿಲ್ಲ. ಒಡಲಾಳದ ಸಾಕವ್ವನನ್ನು ಕೂಡ ನಾ ನೋಡಿಲ್ಲ. ನೋಡಲು ಸಾಧ್ಯ ಆಗಲಿಲ್ಲ. ಇಷ್ಟೆಲ್ಲಾ ಅನರ್ಹತೆಗಳನ್ನು ಇಟ್ಟುಕೊಂಡು ಹೇಗೆ ಉಮಾಶ್ರೀ ಅವರ ಕಲಾ ಬದುಕಿನ ಬಗ್ಗೆ ಮಾತಾಡಲಿ ಎಂದು ತಮ್ಮ ಗ್ರಹಿಕೆಯ ಒಳ ಬಾಗಿಲನ್ನು ತೆರೆದರು. ನಮ್ಮ ಕಿವಿಗಳು ಆಲಿಸುವ ದಾರಿಗೆ ಹೆಜ್ಜೆ ಇಟ್ಟಿತು.
User comments
ಅಮ್ಮ ಬಗೆ ಬಗೆಯ ಅಡುಗೆಗಳನ್ನು ಮಾಡುತ್ತಾಳೆ. ಬೇರೆ ಬೇರೆ ಅಡುಗೆಗೂ ಬೇರೆ ಬೇರೆ ರುಚಿ ತನ್ನ ಕೈಗುಣದಿಂದ ಒದಗಿಸುತ್ತಾಳೆ. ಪ್ರತಿ ಅಡುಗೆಗೂ ರುಚಿಯನ್ನು ಆಸ್ವಾದಿಸುವ ಒಂದು ಕ್ರಮವಾದರೆ, ರುಚಿ ರುಚಿಯಾಗಿ ಅಡುಗೆ ಮಾಡಿದ ಅವಳ ಮನಸು ರುಚಿಯಾಗಿರುತ್ತದೆ ಎಂದು ನೋಡುವುದು ಕೂಡ ಬಹಳ ಮುಖ್ಯ. ಬಹಿರಂಗದಲ್ಲಿ ಕಾಣುವ ತಾಯಿಗೂ ಅಂತರಂಗಲ್ಲಿ ಕಾಣುವ ತಾಯಿಗೂ ಪರಸ್ಪರ ಹೊಂದಾಣಿಕೆ ಇದೆ. ಆಂತರ್ಯದಲ್ಲಿ ಉಮಾಶ್ರೀ ಅನ್ನುವ ಕಲಾವಿದೆಯ ಅಭಿವ್ಯಕ್ತಿ ಬಹಿರಂಗದಲ್ಲಿ ಅರ್ಥಪೂರ್ಣವಾಗಿ ಪ್ರಕಟಗೊಳ್ಳುತ್ತದೆ. ಹಾಗಾಗಿಯೇ ಉಮಾಶ್ರೀ ಅವರು ಉಣಬಡಿಸುವ ಕಲೆಯೆಂಬ ರುಚಿ ಆಂತರ್ಯದ ಸ್ವಾದವನ್ನು ನಮಗೆ ಕೊಟ್ಟಿರುವುದು. ನಾಟಕ ರಂಗವಾಗಲಿ ಚಲನ ಚಿತ್ರರಂಗದಲ್ಲಾಗಲಿ ಉಮಾಶ್ರೀ ಅವರು ಯಾವ ಪಾತ್ರ ಮಾಡಿದರೂ ನೋಡುವ ಜನರಿದ್ದಾರೆ. ಯಾಕೆಂದರೆ ಅವರು ಮಾಡುವ ಕಲಾರುಚಿಯ ಅಡುಗೆಯಿಂದ. ಈ ಮಾತುಗಳನ್ನು ಕೇಳುತ್ತಾ ಅಡುಗೆ, ರುಚಿ, ಅಭಿನಯ ಇವುಗಳ ಹೊಳಹು ಕುತೂಹಲವನ್ನು ಉಂಟು ಮಾಡಿತು.
ಮಾತು ಮುಂದುವರೆಸಿದ ವೀಣಾ ಬನ್ನಂಜೆಯವರು ನಾಟ್ಯಕ್ಕೆ ಶಾಸ್ತ್ರ ಬರೆದವನು ಮುನಿ, ದಾರ್ಶನಿಕ ಭರತ. ಹಾಗೂ ರಸ ಸಿದ್ಧಾಂತವನ್ನು ಕಟ್ಟಿ ಕೊಟ್ಟವನೂ ಕೂಡ ಮುನಿ, ದಾರ್ಶನಿಕ ಅಭಿನವ. ಇವರಿಬ್ಬರು ಅಭಿನಯ ಮತ್ತು ಪ್ರದರ್ಶನವನ್ನು ಕುರಿತು ಹೇಳಿದ್ದನ್ನು ಹಲವು ಸಲ ಯೋಚಿಸಿದ್ದೇನೆ. ಈಗ ಮತ್ತೆ ಅದೇ ಹುಡುಕಾಟವನ್ನು ಉಮಾಶ್ರೀ ಅವರ ಅಭಿನಯವನ್ನು ಉದಾಹರಣೆಯಾಗಿಟ್ಟುಕೊಂಡು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದರು.  ವೀಣಾ ಬನ್ನಂಜೆಯವರ ಮಾತಿಗೆ ಕೇಳುವ ಭಾವ ತಂತಾನೇ ಏಕಾಗ್ರತೆಯತ್ತ ಸಾಗಿತ್ತು. ಅವರು ಪ್ರದರ್ಶನವನ್ನು ಕುರಿತು ಮತ್ತೆ ತನ್ನ ಅಭಿಪ್ರಾಯವನ್ನು ಹೇಳುತ್ತಾ, ಪ್ರತಿಯೊಬ್ಬರ ಜೀವನದಲ್ಲೂ ಪ್ರದರ್ಶನ ಇದ್ದೇ ಇರುತ್ತದೆ. ನಾವು ಹೊರಗೆ ಕಾಣಿಸುವ ರೀತಿಗೂ ಒಳಗೆ ನಮ್ಮಂತೆ ನಾವು ಇರುವ ರೀತಿಗೂ ಸಾಕಷ್ಟು ವ್ಯತ್ಯಾಸವಿದೆ.  ಒಳಗಿನದ್ದು ಹೊರಗೆ ಪ್ರದರ್ಶನ ಆದರೆ ಅದೇ ಸಾಧನೆ ಅಥವಾ ದರ್ಶನ ಎಂದು ಕರೆಯಬಹುದು. ನಾವು ಸಾಮಾನ್ಯರು, ಅಕ್ಕನಂತೆ ಬಾಹು ಬಲಿಯಂತೆ ಒಳ ಹೊರಗನ್ನು ಒಂದು ಮಾಡಿಕೊಂಡು ಬದುಕು ಮಾಡಲು ಸಾಧ್ಯವಾಗಿಲ್ಲ. ಆದರೆ ಕಲೆಯಲ್ಲಿ ಇದು ಸಾಧ್ಯ. ಸಾಕವ್ವನ ಅಭಿನಯದಲ್ಲಿ ಈ ಬಗೆಯ ಒಳ ಹೊರಗನ್ನು ಒಂದು ಮಾಡಿಕೊಂಡ ಎತ್ತರವನ್ನು ಕಾಣಬಹುದು ಎಂದರು ವೀಣಾ ಮೇಡಂ. ಅವರು ಹೇಳಿದ್ದನ್ನು ಗ್ರಹಿಸಲು ಅರ್ಥದ ಸಿಗುವ ದಾರಿಯನ್ನು ನನ್ನೊಳಗೆ ನಾನೇ ಹುಡುಕಿ ಹೊರಟಿದ್ದಾಯಿತು.
ವೀಣಾ ಬನ್ನಂಜೆ ಅವರು ಮಾತಾಡುತ್ತ ತಾನೂ ಕೂಡ ಒಬ್ಬ ಕಲಾವಿದೆ. ಅಕ್ಷರ ಅವರ ನಿರ್ದೇಶನದಲ್ಲಿ ನಾಟಕ ಮಾಡಿದ್ದೇನೆ ಎಂದು ಉಲ್ಲೇಖಿಸುತ್ತಾ ಒಂದು ನಾಟಕ ಕಲಾಕೃತಿ ಆಗುವ ಪ್ರಾಸೆಸ್ ಕುರಿತು ಒಂದು ಥಿಯರಿಯನ್ನೇ ಮುಂದಿಟ್ಟರು. ಒಂದು ನಾಟಕ ಪ್ರದರ್ಶನ ಆಗಬೇಕಾದರೆ ಅದಕ್ಕೆ ಕನಿಷ್ಟ ನಲವತ್ತು ದಿನಗಳ ತಾಲೀಮು ಅಗತ್ಯ. ಮೊದಲು ನಾಟಕದ ಸ್ಕ್ರಿಪ್ಟ್ ಓದಿಸುವುದರಿಂದ ಮೊದಲ ಹಂತ ಶುರು ಆಗುತ್ತದೆ. ನಾವು ಒಂದು ಸಾಹಿತ್ಯ ಪಾಠವಾಗಿ ನಾಟಕವನ್ನು ಮೊದಲು ಓದುತ್ತೇವೆ. ನಾಟಕವನ್ನು ಓದುತ್ತಾ ಓದುತ್ತಾ ಪಾತ್ರಗಳಿಗೆ ಬೇಕಾದ ಆಂಗಿಕವನ್ನು ಮತ್ತು ದನಿಯನ್ನು ಕೊಟ್ಟು ಓದುತ್ತೇವೆ. ನಮ್ಮ ಓದು ಮತ್ತು ಅಭಿವ್ಯಕ್ತಿಯ ಆಧಾರದ ಮೇಲೆ ನಿರ್ದೇಶಕರು ನಮಗೆ ಒಪ್ಪುವ ಪಾತ್ರವನ್ನು ಕೊಡುತ್ತಾರೆ. ದಿನದಿಂದ ದಿನಕ್ಕೆ ಅಕ್ಷರ ರೂಪದಲ್ಲಿದ್ದ ಪಾತ್ರ ಅಭಿನಯಿಸುವವನೇ ಪಾತ್ರ ಆಗುವಷ್ಟು ಮಟ್ಟಿಗೆ ಪರಕಾಯ ಪ್ರವೇಶ ಆಗುತ್ತದೆ. ಈ ನಲವತ್ತು ದಿನಗಳ ತಾಲೀಮಿನಲ್ಲಿ ಕಲಾವಿದ ತನ್ನ ತನಗಳನ್ನೆಲ್ಲಾ ಮರೆತು ಬಿಟ್ಟು ಪಾತ್ರವೇ ತಾನಾಗಿಬಿಡಬೇಕು. ಇದೆಲ್ಲದರ ಒಟ್ಟು ಮೊತ್ತವಾಗಿ ಪ್ರದರ್ಶನ ಕೊನೆಯ ಘಟ್ಟ. ತಾಲೀಮಿನಲ್ಲಿ ಚೆನ್ನಾಗಿ ಕಾಣಿಸಿಕೊಂಡವನು ಪ್ರದರ್ಶನದಲ್ಲಿ ಸೋಲಬಹುದು. ತಾಲೀಮಿನಲ್ಲಿ ಸೋತವನ್ನು ಪ್ರದರ್ಶನದಲ್ಲಿ ಗೆಲ್ಲಬಹುದು. ಇಲ್ಲಿ ಎಲ್ಲವೂ ನಿರ್ಧಾರ ಆಗುವುದು ಕಲಾವಿದ ತನ್ನ ಪಾತ್ರವನ್ನು ಹೇಗೆ ಎಷ್ಟರ ಮಟ್ಟಿಗೆ ಒಳಗೆ ತೆಗೆದುಕೊಂಡಿದ್ದಾನೆ ಎಂಬುದನ್ನು ಅವಲಂಬಿಸಿ. ಪ್ರದರ್ಶನ ದರ್ಶನ ಆಗಬೇಕಾದರೆ ತಪಸ್ಸು ಬಹಳ ಮುಖ್ಯ. ಸಾಕ್ಷಾತ್ಕಾರ ಎಂಬುದು ನಿರಂತರ ತಪಸ್ಸಿಗೆ ದಕ್ಕುವಂಥದ್ದು. ಅದು ಒಂದು ಕ್ಷಣ ನಮ್ಮ ಸುಳಿದು ಸರಿದು ಹೋಗಿ ಬಿಡಬಹುದು. ಯಾವಾಗ ಹೇಗೆ ಬರುತ್ತದೆ ಎಂಬುದು ಗೊತ್ತಾಗುವುದಿಲ್ಲ. ಹಾಗಾಗಿ ದರ್ಶನಕ್ಕೆ ನಿರಂತರ ತಾಲೀಮು ಮತ್ತು ಪ್ರಯತ್ನ ಮಾಡಬೇಕಾಗುತ್ತದೆ. ಈ ತಪಸ್ಸಿನ ಫಲ ರಂಗದ ಮೇಲೆ ಸಾಕ್ಷಾತ್ಕಾರ ಆಗುತ್ತದೆ. ಉಮಾಶ್ರೀ ಅವರ ವಿಷಯದಲ್ಲಿ ಆಗಿರುವುದು ಕೂಡ ಇದೆ, ಸತತ ಕಲಾಯಾನದ ತಪಸ್ಸಿನಲ್ಲಿ ಅವರಿಗೆ ಸಿದ್ಧಿಸಿರುವುದು ಸಾಕ್ಷಾತ್ಕಾರ ಎಂದು ವೀಣಾ ಬನ್ನಂಜೆ ಅವರು ತನ್ನ ಒಳನೋಟಗಳನ್ನು ಮುಂದಿಟ್ಟರು. ನಾ ನಿರೀಕ್ಷಿಸಿಯೇ ಇಲ್ಲದ ಹೊಸ ಬಗೆಯ ಪ್ರದರ್ಶನದ ಬಗೆಗೆ ಉಮಾಶ್ರೀ ಅವರ ಅಭಿನಯವನ್ನು ಅನುಲಕ್ಷಿಸಿ ಮಾತನಾಡಿದ್ದನ್ನು ಮರೆಯಲಾಗುವುದಿಲ್ಲ.
IMG_2617
ಇದೇ ದರ್ಶನ ಮತ್ತು ಪ್ರದರ್ಶನದ ಮಾತುಗಳನ್ನೇ ಮತ್ತೂ ಮುಂದುವರೆಸಿ, ಪ್ರದರ್ಶನಕ್ಕೆ ತಾಲೀಮು ನಡೆಸುವಾಗ ಮತ್ತು ಪ್ರದರ್ಶನದ ಸಮಯದಲ್ಲಿ ಕಲಾವಿದ ತನ್ನ ಎಲ್ಲ ಅಸ್ತಿತ್ವನ್ನು ಬಿಟ್ಟು ಖಾಲಿಯಗಬೇಕು. ಯಾವ ಉಪಾದಿಗಳೂ ಅವನ ಕಲಾವಿದನ ಜೊತೆ ಇರಬಾರದು. ತನ್ನ ಎಲ್ಲಾ ವ್ಯಾಪಾರಗಳನ್ನು ಮರೆತು ಪಾತ್ರವೇ ತಾನಾದರೆ ಪ್ರದರ್ಶನ ದರ್ಶನವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ನಿರಂತರ ಪರಕಾಯ ಪ್ರವೇಶ ಅಗತ್ಯ. ತಾನು ಯಾರು ಎಂಬುದನ್ನೇ ಮರೆತು ಪಾತ್ರವೇ ತಾನಾದರೆ ದರ್ಶನ ರಂಗದ ಮೇಲೆ ಉಂಟಾಗುತ್ತದೆ. ತನ್ನನ್ನು ತಾನು ನೋಡುವುದು ಕೂಡ ಸಾಕ್ಷಾತ್ಕಾರವೇ. ನೋಡಿಕೊಳ್ಳುವ  ಮತ್ತು ಮಾಡುವ ಎರಡೂ ಸಾಧ್ಯತೆಗಳು ನಾಟಕ ಮತ್ತು ಸಿನೆಮಾದಲ್ಲಿ ಅವಕಾಶವಿದೆ.  ಪ್ರದರ್ಶನದಲ್ಲಿ ಆತ್ಯಂತಿಕ ಸ್ಥಿತಿ ತಲುಪಿದರೆ ಖಂಡಿತಾ ದರ್ಶನವಾಗುತ್ತದೆ. ಉಮಾಶ್ರೀ ಅವರ ನಟನೆಯಲ್ಲಿ ಕೆಲವು ಪಾತ್ರಗಳು ಪ್ರದರ್ಶನವನ್ನು ದಾಟಿ ದರ್ಶನದ ಹಾದಿ ಹಿಡಿದಿರುವುದರಿಂದಲೇ ಸಾಕವ್ವ ಈ ಎತ್ತರಕ್ಕೆ ಏರಿರುವುದು ಎಂದು ಹೇಳುತ್ತಾ ಈ ಸಿದ್ಧಾಂತವನ್ನು ಖೇನ ಉಪನಿಷತ್ತಿನಲ್ಲಿ ಕಾಣಬಹುದು ಎಂಬ ಉಲ್ಲೇಖವನ್ನು ಎದುರಿಗಿಟ್ಟರು.
ಮಾತಿಗೆ ಶಕ್ತಿಯನ್ನು ತುಂಬುವುದು ವರ್ಣ. ತಪಸ್ಸಿಗೆ ಪೂರ್ವಭಾವಿಯಾಗಿ ಶಕ್ತಿ ಕೊಡುವುದು ಕೂಡ ಮಂತ್ರ. ಮನುಷ್ಯ ಜಾತಿಯಲ್ಲಿ ಮಾತ್ರ ಪ್ರತಿಯೊಬ್ಬನಿಗೂ ಬೇರೆ ಬೇರೆ ದ್ವನಿ. ಅವನಿಂದ ಹೊರಡುವ ದ್ವನಿ ಬೇರೆ ಬೇರೆ ವರ್ಣಗಳಿಂದ ಕೂಡಿರುವುದು. ಆ ವರ್ಣವನ್ನು ಆಧರಿಸಿಯೇ ಅವರ ಬದುಕಿನ ಅನುಭವ ಲೋಕ ತೆರದುಕೊಳ್ಳುತ್ತದೆ.  ಬದುಕಿನುದ್ದಕ್ಕೂ ಉಮಾಶ್ರೀ ಅಕ್ಕ ದುಃಖ ಪರಂಪರೆಯಿಂದ ಬಂದವರು. ದುಃಖದಲ್ಲಿ ಬೆಳೆದಷ್ಟು ಮನುಷ್ಯ ಮತ್ತೆಲ್ಲೂ ಬೆಳೆಯುವುದಿಲ್ಲ. ಉಮಾಶ್ರೀ ಅವರ ನೋವು ಸಂಕಟಗಳು ಅವರ ಅನುಭವ ಲೋಕದ ಒಳಗೆ ಸೇರಿಕೊಂಡಿರುವುದರಿಂದ ಅವರ ದನಿಗೆ ಅಷ್ಟು ಸ್ಪಷ್ಟವಾದ ಬಣ್ಣ ಬರಲು ಸಾಧ್ಯವಾಗಿದೆ. ಹೀಗೆ ಹುಟ್ಟಿದ ವರ್ಣ ಅವರ ಅಭಿನಯವನ್ನು ಕೈ ಹಿಡಿದು ನಡೆಸಿದೆ.  ಆಂತರ್ಯದಲ್ಲಿ ಮನುಷ್ಯ ಏನಾಗಿರುತ್ತಾನೋ ಅದೇ ದನಿ ಪ್ರಕಟ ಆಗುತ್ತದೆ. ಆ ದನಿಯ ರೀತಿಯದ್ದೇ ವ್ಯಕ್ತಿತ್ವವನ್ನು ಹೊಂದಿರುತ್ತಾನೆ. ಹಾಗಾಗಿ ಉಮಾಶ್ರೀ ಆಕ್ಕ ಆಂತರ್ಯದಲ್ಲಿ ಹೊಂದಿರುವ ಸತ್ವವೇ ದನಿಯಾಗಿ ಹೊರಬಂದು ಅಭಿವ್ಯಕ್ತಿಗೊಂಡಿದೆ ಎಂಬುದು ನನ್ನ ನಂಬಿಕೆ. ಯಾಕೆಂದರೆ ಮನುಷ್ಯ ಬಿಟ್ಟು ಉಳಿದೆಲ್ಲಾ ಪ್ರಾಣಿ ವಾರಕ್ಕೆ ಅದರದ್ದೇ ಆದ ಏಕ ರೂಪದ ದ್ವನಿ ಇರುತ್ತದೆ. ಮನುಷ್ಯನಲ್ಲಿ ಮಾತ್ರ ಹಾಗಲ್ಲ ಎಲ್ಲರ ದ್ವನಿಯೂ ಬೇರೆ ಬೇರೆ. ವರ್ಣಗಳು ಬೇರೆ ಬೇರೆ. ಆ ಮೂಲಕ ಕಾಣುವ ವ್ಯಕ್ತಿತ್ವಗಳು ಬೇರೆ ಬೇರೆ. ಪ್ರದರ್ಶನ ದರ್ಶನ ಆಗುವ ದಾರಿಯಲ್ಲಿ ಅಭಿವಯಕ್ತಿಯೂ ಬೇರೆ ಬೇರೆ. ಹಾಗಾಗಿ ಉಮಾಶ್ರೀ ಅಕ್ಕ ನಮ್ಮ ನಡುವಿನ ಉತ್ತಮ ಕಲಾವಿದೆ. ವೀಣಾ ಮೇಡಂ ಅವರ ಈ ಬಗೆಯ ಮಾತುಗಳನ್ನು ಕೇಳಿ ಅಭಿನಯ ಮತ್ತು ಪ್ರದರ್ಶನ ಕಲೆಯ ಬಗೆಗೆ ಇದ್ದ ಹೈಪಾಥೀಸಿಸ್ ನಿಜಕ್ಕೂ ತನ್ನ ಪರಿಧಿಯನ್ನು ವಿಸ್ತರಿಸಿಕೊಂಡುಬಿಟ್ಟಿತು.
ಗರತಿ, ಗಯ್ಯಾಳಿ, ಮುದುಕಿ, ಅಶ್ಲೀಲ ಎನಿಸುವ ಡಬಲ್ ಮೀನಿಗ್ ಪಾತ್ರಗಳು, ಹೀಗೆ ಅನೇಕ ಪಾತ್ರಗಳನ್ನು ನಿಭಾಯಿಸಿದ ಉಮಾಶ್ರೀ ಅವರಲ್ಲಿ ಒಬ್ಬ ತಾಯನ್ನು ಗುರುತಿಸಿ ಪುಟ್ಟಮಲ್ಲಿ ಪಾತ್ರ ಕೊಟ್ಟ ರವಿಚಂದ್ರನ್ ಆಂತರ್ಯ ಕೂಡ ಬಹಳ ದೊಡ್ಡದೇ ಎಂದು ಹೇಳುತ್ತಾ ಬಹಿರಂಗದಲ್ಲಿ ರವಿಚಂದ್ರನ್ ಕಾಣುವಂತೆ ಆಂತರ್ಯದಲ್ಲಿ ಇಲ್ಲ ಎನ್ನುವುದಕ್ಕೆ ಉಮಾಶ್ರೀ ಅವರ ಪುಟ್ಟಮಲ್ಲಿ ಪಾತ್ರವೇ ಸಾಕ್ಷಿ. ತಾನು ಮತ್ತು  ಉಮಾಶ್ರೀ ಅವರು ಒಂದು ವೇದಿಕೆಯಲ್ಲಿ ಅಮ್ಮನನು ಕುರಿತು ಮಾತಾಡುವ ಸಮಾರಂಭವೊಂದರಲ್ಲಿ ಸೇರಿದ್ದ ನೆನಪನ್ನು ಹಂಚಿಕೊಳ್ಳುತ್ತ ಅವರ ಮಾತುಗಳನ್ನು ಹೀಗೆ ನೆನಪಿಸಿಕೊಳ್ಳುತ್ತಾ ಉಮಾಶ್ರೀ ಅವರ ಒಳಗಿನ ತಾಯಿಯ ಬಗೆಗೆ ವಿನೀತರಾಗಿ ಮಾತಾಡಿದರು ವೀಣಾ ಮೇಡಂ.
ವೀಣಾ ಬನ್ನಂಜೆ ಅವರ ಜೊತೆ ಸುದೀರ್ಘವಾಗಿ ಸುಮಾರು ಎರಡುಗಂಟೆ ಮಾತಾಡಿದ್ದು ಸಮಯ ಹೋಗಿದ್ದೆ ಗೊತ್ತಾಗಲಿಲ್ಲ. ಅದು ಕಾಣಿಸಿದ ಹೊಳಪೂ ಕೂಡ ಮಾತು ನಿಲ್ಲಿಸಿಬಿಡಬೇಕು ಎಂದನಿಸಲಿಲ್ಲ. ಅನಿವಾರ್ಯಕ್ಕೆ ವಿರಾಮ ಇಡುತ್ತಾ ವೀಣಾ ಬನ್ನಂಜೆಯವರು ಅನೇಕ ನೋವುಗಳನ್ನು ಉಂಡ ಉಮಾಶ್ರೀ ಅಕ್ಕ ಸೋತು ಗೆಲುವನ್ನು ಹಿಡಿದವರು. ಹೆಣ್ಣಿಗೆ ಮಾತ್ರ ಈ ಶಕ್ತಿ ಇರುವದು. ಗಂಡಿಗೆ ಯಾವುದಾದರೂ ಜೋರಾದ ಪೆಟ್ಟಾದರೆ ಅನಸ್ತೇಶಿಯಾ ಕೊಟ್ಟು ಅದನ್ನು ಆಪರೇಶನ್ ಮಾಡಬೇಕು. ಅದಕ್ಕಿಂತ ಹತ್ತು ಪಟ್ಟು ನೋವಿರುವ ಹೆರಿಗೆಯ ನೋವನ್ನು ಒಬ್ಬ ತಾಯಿ ಮಾತ್ರ ಸಹಿಸ ಬಲ್ಲಳು.  ಕಷ್ಟಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಉಮಾಶ್ರೀ ಅವರಂಥಹ ಹೆಣ್ಣು ಮಕ್ಕಳಿಗೆ ಖಂಡಿತಾ ಇರುತ್ತದೆ.  ಒಬ್ಬ ಕುಂತಿಯ ಶಕ್ತಿ, ಒಬ್ಬ ದ್ರೌಪದಿಯ ಶಕ್ತಿ ಉಮಾಶ್ರೀ ಅಕ್ಕನಲ್ಲಿ ಇದೆ. ಅವರು ಇನ್ನೂ ಎತ್ತರಕ್ಕೆ ಎರಲಿ ಎಂದು ಆಶಿಸುತ್ತಾ ಮಾತಿಗೆ ವಿರಾಮ ಇಡುತ್ತಾರೆ.
ಆಮೇಲೆ ಮತ್ತೆ, ಕಡೆಯದಾಗಿ ಎರಡು ಮಾತು ಎಂದು ತನ್ನ ಬದುಕಿಗೆ ನೋವು ತಂದವರ ಬಗ್ಗೆ, ನೆನಪಿಟ್ಟು ಕೊಂಡು ಆ ರೀತಿಯ ಪಾತ್ರ ಬಂದಾಗ ಅದನ್ನು ತನ್ನ ಅಭಿನಯದಲ್ಲಿ ಎಲ್ಲೂ ತೋರಿಸಿಲ್ಲ. ಹಾಗೇ ತೋರಿಸಿದ್ದೇ ಆದರೆ ದ್ವೇಷ ಉಳಿದು  ಅಭಿನಯ ಸೋತು ಬಿಟ್ಟಿರುತಿತ್ತು. ಉಮಾಶ್ರೀ ಅವರು ಎಲ್ಲವನ್ನು ಮರೆತು ಖಾಲಿಯಾಗುವ ಗುಣದವರು. ಅವರು ಅಭಿನಯಿಸಿದ ಹಲವು ಬಗೆಯ ಪಾತ್ರಗಳಲ್ಲಿ ಎಲ್ಲೂ ತನ್ನ ಬದುಕಿನ ನೋವುಗಳು ಕಾರುವ ಅಭಿವ್ಯಕ್ತಿಯಾಗಿ ಕಾಣುವುದೇ ಇಲ್ಲ. ಅದು ಹಾಗೇ ಆಗಿದ್ದರಿಂದಲೇ ಅವರಿಗೆ ಕಲೆಯಲ್ಲಿ ದರ್ಶನವಾಗಿರುವುದು ಎಂದು ಹೇಳಿ ಮುಗುಳ್ನಕ್ಕು ಮಾತು ಮುಗಿಸಿದರು.
 
 

‍ಲೇಖಕರು G

September 27, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. Anonymous

    ಎರಡು ದ್ರುವತಾರೆಗಳ ಅಂತರಂಗದ ಪಕ್ಷಿನೋಟ.
    ಆಕರ್ಷಕ ನಿರೂಪಣೆ.

    ಪ್ರತಿಕ್ರಿಯೆ
  2. Anonymous

    ಎರಡು ದ್ರುವತಾರೆಗಳ ಅಂತರಂಗದ ಪಕ್ಷಿನೋಟ.

    ಪ್ರತಿಕ್ರಿಯೆ
  3. Anonymous

    ಉಮಾಶ್ರೀಯವರು ಕಲಾವಿದೆಯಾದಾಗಿನಿಂದಲೂ ನಾನು ಅವರ ಅಭಿಮಾನಿಗಳಲ್ಲಿ ಒಬ್ಬ. ಆದರೆ ಅವರು ನನಗೆ ಪರಿಚಯವಾಗಿದ್ದು ಮಾತ್ರ ರಾಜಕಾರಣಿಯಾಗಿ. ಒಬ್ಬ ಪತ್ರಕರ್ತನಾಗಿ ಅವರ ಬಗ್ಗೆ ತಿಳಿದು ಕೊಂಡಿದ್ದಕ್ಕಿಂತಲೂ ಅವರ ಜೀವನದ ಕೆಲವೊಂದು ವಿಷಯಗಳನ್ನು ತಮ್ಮ ಅವಧಿ ಮೂಲಕ ತಿಳಿದುಕೊಳ್ಳಲು ಸಹಾಯವಾಗುತ್ತಿದೆ. ತಮ್ಮ ಬರವಣಿಗೆ ಎಂತಹವರನ್ನು ಕೂಡಾ ಓದಿಸಿಕೊಂಡು ಹೋಗುತ್ತದೆ.
    ಅಭಿನಂದನೆಗಳು… ರಘುನಂದನ್ ಸರ್
    ಕಿರಣ ಶ್ರೀಶೈಲ ಆಳಗಿ
    ಬನಹಟ್ಟಿ

    ಪ್ರತಿಕ್ರಿಯೆ
  4. Muthuraj Artist

    Amma endare aakaasha.. umaashree endare bhaavabhivyakthatheya saagara

    ಪ್ರತಿಕ್ರಿಯೆ
  5. ಡಾಶಿವಾನಂದ ಕುಬಸದ

    ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳ‍ಲ್ಲಿ ಅದ್ವೀತೀಯರು. ನೀವು ಅದನ್ನು ನಿರೂಪಿಸಿದ ರೀತಿ ಕೂಡ ಸುಂದರ

    ಪ್ರತಿಕ್ರಿಯೆ
  6. shrishail

    Pradarshan darshanvaaguva bage mattu adannu tilisida dwani aalisida kivi
    Ellavu Dhanya….dhanyavaadgalu meshtre.

    ಪ್ರತಿಕ್ರಿಯೆ
  7. lakshmikanth itnal

    ಉಮಾಶ್ರೀ ಎಂಬ ದೈತ್ಯ ಪ್ರತಿಭೆಯ, ಕಲಾಕುಸುಮದ ಬಗ್ಗೆ ಎಷ್ಟು ಬರೆದರೂ ಬೊಗಸೆಯಷ್ಟೆ. ಅದೊಂದು ಕಲಾ ಸಾಗರ. ..ಅಂತಹವರ ಒಡಲಾಳದ ಒಡನಾಟದ ಮೂಸೆಯಲ್ಲಿಮೂಡುವ ಆಪ್ತ ಬರಹಗಳು ನೇರವಾಗಿ ಎದೆ ಸೇರುತ್ತವೆ. ಅವರೊಂದು ಅಪ್ಪಟ ಕಲಾವಿದೆ, ಅವರಿಗೊಂದು ನಮಸ್ಲಾರ ತಿಳಸಿ, ಸರ್,ಹಾಂ, ಬರಹ ಬಲು ಆಪ್ತ.

    ಪ್ರತಿಕ್ರಿಯೆ
  8. narayan Raichur

    veena vykhyana tumbaa chennaagide ; Umaashree kalyantaryavoo aste 11
    Narayan Raichur

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: