ಬೇಲೂರು ರಘುನಂದನ್ ಕಾಲಂ : 'ಆ ದಿನಗಳು' ಚೈತನ್ಯ ಕಂಡಂತೆ ಉಮಾಶ್ರೀ

Umasiri-1411
 ‘ಕಿಚ್ಚು ಧಾರಾವಾಹಿ ಮಾಡುವಾಗ ಮತ್ತು ಒಂದೆರಡು ಸಿನೆಮಾದಲ್ಲಿ ಉಮಾಶ್ರೀ ಅವರನ್ನು ಹತ್ತಿರದಿಂದ ನೋಡಿದ್ದೇನೆ.  ನನಗೆ ತಿಳಿದಂತೆ ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಕೂಡ ಮಾಡಿದ್ದೇನೆ.  ಕಿಚ್ಚು ಧಾರವಾಹಿ ಮಾಡುವಾಗ ನನಗೆ ದೊಡ್ಡ ಹೆಸರೇನು ಇರಲಿಲ್ಲ. ಆದ್ರೆ ಆ ಹೊತ್ತಿಗೆ ಉಮಾಶ್ರೀ ಅವರು ಕನ್ನಡದಲ್ಲಿ ಸ್ಟಾರ್ ನಟಿ. ಹೀಗಿದ್ದಾಗ ಅವರನ್ನು ಧಾರಾವಾಹಿ ಪ್ರಧಾನ ಪಾತ್ರವೊಂದಕ್ಕೆ ಅಪ್ರೋಚ್ ಮಾಡಿದೆ. ಅವರು ಅದಕ್ಕೆ ಒಪ್ಪಿ ಸೀರಿಯಲ್ ಅನ್ನುವ ಕಿರುತೆರೆಯ ಲೋಕದಲ್ಲಿ ಅಭಿನಯಿಸಿದರು. ಅವರೊಟ್ಟಿಗೆ ಕೆಲಸ ಮಾಡಿದ್ದು ನಿಜಕ್ಕೂ ಒಂದು ಒಳ್ಳೇ ಅನುಭವ. ಹಾಗೂ ವಿಭಿನ್ನ ಅನುಭವ.
ಕಿಚ್ಚು ಧಾರವಾಹಿಯಲ್ಲಿ ಉಮಾಶ್ರೀ ಅವರದ್ದು ಒಬ್ಬ ವಿಧವೆ ತಾಯಿ ಪಾತ್ರ. ಅವರಿಗೆ ನಾಲ್ಕು ಜನ  ಹೆಣ್ಣು ಮಕ್ಕಳು. ತಾಯಿ ಮತ್ತು ಹೆಣ್ಣು ಮಕ್ಕಳ ನಡುವೆ ಹರಿದಾಡುವ ಕಥೆ ಅದು. ಸೆಟ್ ನಲ್ಲಿ  ಕೆಲವೊಮ್ಮೆ  ಮಗುವಂತೆ ಮುಗ್ಧವಾಗಿ  ಇನ್ನೂ ಕೆಲವೊಮ್ಮೆ ಹಠ ಸ್ವಭಾವದಿಂದ ಮತ್ತೆ ಒಮ್ಮೊಮ್ಮೆ ಟೆಂಪೆರ್ ಕಳೆದುಕೊಂಡು ಸಿಟ್ಟಾಗುವುದು ಕೆಲ ಸಮಯ ನಗುತ್ತಾ ನಗಿಸುತ್ತಾ  ಜಾಲಿಯಾಗಿ ಇರುವುದು ಹೀಗೆ ಉಮಾಶ್ರೀ ಅನ್ನುವ ಬೇರೆ ಬೇರೆ ಭಾವಗಳನ್ನು ಇರುವುದನ್ನು ಗಮನಿಸಿದ್ದೇನೆ. ಈ ಎಲ್ಲಾ ಭಾವಗಳನ್ನು ಉಮಾಶ್ರೀ ಅವರು ಕಥೆಯ ಪಾತ್ರದ ಜೊತೆಗೆ ಸೇರಿಸಿ, ಅದನ್ನು ಅವರ ರೀತಿಯಲ್ಲಿ ಅಡಾಪ್ಟ್ ಮಾಡಿ ಆಕ್ಟ್ ಮಾಡಿ ಬಿಡೋರು. ಅಂದ್ರೆ ಅಷ್ಟು ಇನ್ವಾಲ್ವ್ಮೆಂಟ್ ಅವರದ್ದು. ತನ್ನ ಒಳಗಿರುವ ಎಲ್ಲವನ್ನು ತಾನು ಮಾಡುತ್ತಿರುವ ಕೆಲಸಕ್ಕೆ ಹೊಂದಿಸಿ ಅದನ್ನು ಯಶಸ್ಸು ಮಾಡುವುದು ಉಮಾಶ್ರೀ ಅವರಲ್ಲಿ ಇರುವ ಬಹಳ ಮುಖ್ಯ ಗುಣ.
ಎಷ್ಟೋ ಸಲ ಕೆಲ ಸೀನ್ ತೆಗೆಯುವಾಗ ಇವರಿಗಿಂತ ಇವರ ಸಹ ನಟರ ಪಾತ್ರ ಹೆಚ್ಚು ಸ್ಪೇಸ್ ತೆಗೆದುಕೊಂಡು ಬಿಟ್ಟಾಗ ಒಂದು ಸಣ್ಣ ಹೊಟ್ಟೆಕಿಚ್ಚು ಕೂಡ ಉಮಾಶ್ರೀ ಅವರು ವ್ಯಕ್ತ ಪಡಿಸುತ್ತಿದ್ದರು. ಅದೂ ಸಹ ನಟರನ್ನು ಕಡೆಗಣಿಸಬೇಕು ಅಂತಲ್ಲ ಅವರನ್ನು ಕನ್ಸಿಡರ್ ಮಾಡಲಿಲ್ಲ ಅನ್ನುವ ಕಾರಣಕ್ಕೆ. ಆಗ ನಾನು ಕಥೆಯನ್ನು ಹೇಳಿ ಮಗುವಿನ ತರ ಕನ್ವೀನ್ಸ್ ಮಾಡುತ್ತಿದ್ದೆ. ಕೆಲವು ಸಲ ಸರಿ ಎಂದು ತಲೆ ಆಡಿಸುತ್ತಿದ್ದರು. ಇನ್ನೂ ಕೆಲವೊಮ್ಮೆ “ ನಾನ್ ಎಷ್ಟೊಂದು ಸಿನೆಮಾ ಮಾಡಿದ್ದೇನೆ ನನಗೆ ಎಲ್ಲಾ ಗೊತ್ತಾಗುತ್ತೆ “ ಎಂದು ಸಿಟ್ಟು ಸೆಡವು ಮಾಡಿಕೊಂಡು “ಸರಿ ನೀವ್ ಹೇಳ್ದಂಗೆ ಮಾಡ್ತೇನೆ ಅಂತ “ ಆಕ್ಟ್ ಮಾಡಿ ಬಿಡೋರು. ಹೀಗೆ ದಿನ ದಿನವೂ ಅವರೊಟ್ಟಿಗೆ ಜಟಾಪಟಿ ಮತ್ತು ಹೊಸ ಅನುಭವಗಳಿಗೆ ತೆರೆದು ಕೊಳ್ಳಲು ಒಂದು ಅವಕಾಶ ತನ್ನಿಂದ ತಾನೇ ಮಾಡಿಕೊಳ್ಳುತಿತ್ತು.
06-km-chaitanya
ಕಿಚ್ಚುನಲ್ಲಿ ಉಮಾಶ್ರೀ ಅವರದ್ದು ಗಂಭೀರ ಪಾತ್ರ. ಅದರಲ್ಲಿ ಅವರು ತಮ್ಮ ರೆಗ್ಯುಲರ್ ಸ್ಟೈಲ್ ಆಕ್ಟಿಂಗ್ ಮಾಡಲು ಅವಕಾಶ ಇರಲಿಲ್ಲ. ಥೇಟರ್ ಪ್ರಭಾವ ಕೂಡ ತಪ್ಪಿಸಿಕೊಂಡು ಆಕ್ಟ್ ಮಾಡೋದು ಸ್ವಲ್ಪ ಕಷ್ಟವೇ. ಹೀಗೆ ಒಂದು ಸಲ ಮಗಳನ್ನು ‘ಎಲ್ಲಿಂದ ಬಂದ್ಯೇ’ ಎಂದು ಕೇಳುವ ಸಂದರ್ಭ. ಉಮಾಶ್ರೀ ಅವರು ಅವರು ”ಏಯ್… ಎಲ್ಲಿಂದ ಬಂದ್ಯೇ ?“ ಎಂದು ರಾಗ ಎಳದು ತನ್ನ ರೆಗ್ಯುಲರ್ ಸ್ಟೈಲ್ ಅಂದ್ರೆ ಹಾಸ್ಯ ಪಾತ್ರಗಳಲ್ಲಿ ಮಾಡುತ್ತಿದ್ದ ರೀತಿಯಲ್ಲಿ ಕೇಳಿಬಿಟ್ಟರು. ನಾನು ತಕ್ಷಣ ಮೇಡಂ ಏನ್ ಮಾಡ್ತಾ ಇದ್ದೀರಾ ಅಂದಿದ್ದಕ್ಕೆ “ಪ್ರಾಕ್ಟೀಸು” ಎಂದು ನಕ್ಕು ಬಿಟ್ರು. ಆದ್ರೆ ಅಂದು ಅವರು ಸಹಜವಾಗಿ ಅಭಿನಯಿಸಿದ್ದರು. ಗಂಭೀರತೆಯ ಒಳಗೂ ತಮ್ಮ ರೀತಿಯ ನಟನೆಯನ್ನು ಗೊತ್ತಿಲ್ಲದಂತೆ ಮಾಡಿ ಬಿಡುತ್ತಿದ್ದರು. ಇದನ್ನು ಯಾಕೆ ಹೇಳಿದೆ ಅಂದ್ರೆ ಗಂಭೀರ ಪಾತ್ರದ ಒಳಗೂ ತನ್ನ ತನವನ್ನು ಉಳಿಸಿಕೊಳ್ಳಲು ಉಮಾಶ್ರೀ ಅಂಥವರಿಗೆ ಮಾತ್ರ ಸಾಧ್ಯ. ಆಮೇಲೆ ಈ ರೀತಿ ಬೇಡ ಮೇಡಂ. ಈ ಪಾತ್ರಕ್ಕೆ ಒಗ್ಗುವುದಿಲ್ಲ ಎಂದಿದ್ದಕ್ಕೆ “ ಆಯ್ತು ಬಿಡಿ ಡ್ರೈ ಆಗಿ ಹೇಳ್ತೇನೆ “ ಅಂದ್ರು. ನಕ್ಕು ಸುಮ್ಮನಾದೆ. ಆಮೇಲೆ ನಾವು ಕೇಳಿದಂತೆ ಆಕ್ಟ್ ಮಾಡಿದರು. ಇದೆಲ್ಲಾ ಅವರಿಗೂ ಕೂಡ ಗೊತ್ತೇ ಇತ್ತು. ಆದ್ರೂ ಸದಾ ಪ್ರಯೋಗಶೀಲತೆಗೆ ಒಡ್ಡಿಕೊಳ್ಳುವುದು ಉಮಾಶ್ರೀಅವರ ಸ್ವಭಾವ ಆಗಿತ್ತು.
ಉಮಾಶ್ರೀ ಆಗಲಿ ಅಥ್ವಾ ರಂಗಭೂಮಿಯಿಂದ ಬಂದ ಇನ್ನಿತರ ಯಾವುದೇ ಕಲಾವಿದರಿಗಾಗಲಿ ಖುಲ್ಲಾ ಅಭಿನಯಿಸುವುದು ಹೆಚ್ಚು ಆಪ್ತ. ಆಂಗಿಕ ಮುಖಭಾವ ಎಲ್ಲ ತನ್ನ ಇಷ್ಟದಂತೆ ಅಭಿನಯಿಸಲು ಅವರಿಗೆ ಅಲ್ಲಿ ಸ್ವಾತಂತ್ರ ಇರುತ್ತದೆ. ಆದ್ರೆ ಕಿರು ತೆರೆಯಲ್ಲಿ ಅದು ಸಾಧ್ಯವಿಲ್ಲ. ಸಾಧ್ಯವಾದಷ್ಟು ಕ್ಲೋಸ್ ಶಾಟ್ ಗಳಲ್ಲಿಯೇ ಶೂಟ್ ಮಾಡುತ್ತಿರುತ್ತೇವೆ. ಹೀಗಾದಾಗ ರಂಗ ಭೂಮಿ ಹಿನ್ನಲೆಯ ಕಲಾವಿದರಿಗೆ ತುಸು ಕಷ್ಟವೇ ಆಗುತ್ತದೆ. ಒಂದು ಕ್ಲೋಸ್ ಶಾಟ್ ನಲ್ಲಿ ಉಮಾಶ್ರೀ ಅವರು ಅಳಬೇಕಿತ್ತು. ನಾವು ಕ್ಯಾಮರಾ ಹತ್ತಿರ ಇಟ್ಟಿದ್ದೆವು. ಅದಕ್ಕೆ ಮೇಡಂ “ ಇದೇನಿದು ಕ್ಯಾಮರ ಇಷ್ಟು ಹತ್ತಿರ ಇಟ್ಟಿದೀರಾ. ನನಗೂ ತಡ್ಕೊಂಡು ತಡ್ಕೊಂಡು ಸಾಕಾಯ್ತು ಜೋರಾಗಿ ಅಳಬೇಕು. ನೀ ಯಾವ ಸೀಮೆ ಡೈರೆಕ್ಟರ್. ಕ್ಯಾಮರ ಸ್ವಲ್ಪ ದೂರ ಇಡಿ” ಅಂದ್ರು. ಆಮೇಲೆ ಹಾಗಲ್ಲ ಹೀಗೆ ಎಂದು ಹೇಳಿದ್ದಕ್ಕೆ ಅವರು ಹಾಗೇ ಅಭಿನಯಿಸಿದರು. ಆದ್ರೂ ಚಿಕ್ಕ ಫ್ರೇಮ್ ನಲ್ಲಿ ಉಮಾಶ್ರೀ ಅಂತಹ ಅದ್ಭುತ ಕಲಾವಿದೆಯನ್ನು ಹಿಡಿದಿಡುವುದು ಕಷ್ಟವೇ ಸರಿ.
ಸೀರಿಯಲ್ ಸಮಯದ್ದೇ ಇನ್ನೊಂದು ಘಟನೆ ಅದೇನೆಂದರೆ ಸುಮಾರು ಎರಡು ಗಂಟೆ ಶೂಟ್ ಮಾಡಿದ್ವಿ. ಅದು ಇನ್ನೂ ಚೆನ್ನಾಗಿ ಬರಬಹುದಿತ್ತು ನನಗೆ ಅನ್ನಿಸಿತ್ತು. ಅದನ್ನು ಉಮಾಶ್ರೀ ಅವರಿಗೆ ನಾ ಹೇಳಿದೆ. ಅದಕ್ಕವರು “ನನಗೆ ಇಷ್ಟೇ ರೀ ಮಾಡೋಕೆ ಬರೋದು“ ಎಂದು ಬಿರುಸಾಗಿ ಅಂದುಬಿಟ್ಟಿದ್ದರು. ನಾ ಬೇಸರದಿಂದಲೇ ಮುಂದಿನ ಭಾಗವನ್ನು ಶೂಟ್ ಮಾಡಿದೆ. ನನಗೆ ಬೇಸರ ಆಗಿರುವುದು ಅವರಿಗೆ ಗೊತ್ತಾಗಿತ್ತು ಅನ್ನಿಸುತ್ತೆ. ಎಲ್ಲಾ ಶೂಟ್ ಮುಗಿದು ಪ್ಯಾಕ್ ಅಪ್ ಆಗುವ ಸಮಯ. ಆ ವೇಳೆಗೆ ಉಮಾಶ್ರೀ ಅವರು ನನ್ನ ಹತ್ತಿರ ಬಂದು “ನಿಮಗೆ ಇಷ್ಟ ಆಗಿಲ್ಲ ಅಂದ್ರೆ ರೀ ಶೂಟ್ ಮಾಡಿ. ನಾ ಮಾಡುತ್ತೇನೆ” ಅಂದ್ರು. ಬೇಡವೆಂದರೂ ಕೇಳದೇ ಸುಮಾರು ಮೂರು ತಾಸು ಶೂಟ್ ಮಾಡಬೇಕಿದ್ದ ಅವರ ಪೋರ್ಷನ್ ಕೇವಲ ಹತ್ತು ನಿಮಿಷಕ್ಕೆ ಮುಗಿಸಿಕೊಟ್ಟು ಹೋದರು. ಹೀಗೆ ಎಂದು ಉಮಾಶ್ರೀ ಅವರನ್ನು ಅರ್ಥ ಮಾಡಿಕೊಳ್ಳೋದು ಸಾಧ್ಯವೇ ಆಗುತ್ತಿರಲಿಲ್ಲ. ಆದ್ರೆ ಯಾರಿಗೂ ನೋವಾಗುವುದನ್ನು ಅವರು ಇಷ್ಟ ಪಡುತ್ತಿರಲಿಲ್ಲ. ಬೇಕಾದರೆ ತಾನು ಎಷ್ಟು ಬೇಕಾದ್ರೂ ಶ್ರಮ ಮೈ ಮೇಲೆ ಹಾಕಿಕೊಂಡು ಬಿಡುತ್ತಿದ್ದರು.
BJFIRHI-W064_GF_24_1467162e
ಪರಾರಿ ಅನ್ನುವ ಲೋ ಬಜೆಟ್ ಸಿನೆಮಾ. ಉಮಾಶ್ರೀ ಅವರು ಸಚಿವೆ ಆಗುವ ಮುನ್ನಾ ಚುನಾವಣೆಯ ಬ್ಯುಸಿ ಬೇರೆ ಅವರದ್ದು. ಈ ಸಿನಿಮಾದಲ್ಲಿ ಅಭಿನಯಿಸಲು ಉಮಾಶ್ರೀ ಅವರನ್ನು ಕೇಳಲು ಹೋದೆ. ಅವರು ಕಥೆಯನ್ನೆಲ್ಲಾ ಕೇಳಿ ಒಪ್ಪಿ ತನ್ನ ಸಂಭಾವನೆ ಇಂತಿಷ್ಟು ಎಂದು ಹೇಳಿದರು. ಅದನ್ನು ಭರಿಸುವುದು ಆ ಚಿತ್ರ ತಂಡದ ಬಳಿ ಸಾಧ್ಯವಾಗಲಿಲ್ಲ. ಸಾಧ್ಯ ಆಗುವುದಿಲ್ಲ ಮೇಡಂ ನಮ್ಮದು ಕಡಿಮೆ ಬಜೆಟ್ ಸಿನೆಮಾ ಅಂದೆ. ಅದಕ್ಕವರು ಆಯಿತು ಕಡಿಮೆಗೆ ಮಾಡುತ್ತೇನೆ ಅಂದು ಶೂಟಿಂಗ್ ಡಬ್ಬಿಂಗ್ ಎಲ್ಲಾ ಮುಗಿಸಿ ಕೊಟ್ಟರು. ಆದ್ರೆ ಇಂದಿಗೂ ಅವರು ನಮ್ಮಿಂದ ಹಣ ತೆಗೆದುಕೊಂಡಿಲ್ಲ. ನಾವು ನಮ್ಮ ಚಿತ್ರ ತಂಡ ಎಷ್ಟೇ ಸಲ ಹೋಗಿ ಗೌರವ ಸಂಭಾವನೆ ಕೊಡಲು ಹೋದರೂ ಮೇಡಂ ಅದನ್ನು ಸ್ವೀಕರಿಸಲೇ ಇಲ್ಲ. ಆಗ ಹಣಕ್ಕಾಗಿ ಪಾತ್ರ ಮಾಡುತ್ತಿದ್ದ ಉಮಾಶ್ರೀ ಇಂದು ಒಂದು ಪ್ರತಿಭೆ ಮತ್ತು ಶ್ರಮದ ಜೊತೆಗೆ ಯಾವುದೇ ಸಂಭಾವನೆ ಇಲ್ಲದೆ ಕೈ ಜೋಡಿಸುವುದು ನಿಜಕ್ಕೂ ಅವರ ಮೇಲಿನ ಗೌರವನ್ನು ಹೆಚ್ಚಿಸಿಬಿಡುತ್ತದೆ. ಉಮಾಶ್ರೀ ಅವರು ಸಂಭಾವನೆಯ ವಿಚಾರದಲ್ಲಿ ತುಂಬಾ ಕಟ್ಟು ನಿಟ್ಟು ಅಂತ ಇಂಡಸ್ಟ್ರೀ ಮಾತಾಡಿಕೊಳ್ಳುವುದನ್ನು ಕೇಳಿದ್ದೆ. ಆದ್ರೆ ಅದೆಷ್ಟೋ ಸಿನೆಮಾಗಳ ಹಣ ಬರದೇ ಇದ್ದಾಗ ಕಠಿಣ ಆಗದೇ ಬೇರೆ ದಾರಿ ಇಲ್ಲ ಅಂತ ಅನ್ನಿಸುತ್ತೆ. ಕೇವಲ ಉಮಾಶ್ರೀ ಅವರು ಮಾತ್ರವಲ್ಲ ಈ ಸಮಸ್ಯೆಯನ್ನು ನಮ್ಮ ಚಿತ್ರ ರಂಗದ ಅನೇಕರ ಎದುರಿಸಿದ್ದಾರೆ ಅನ್ನೋದು ಕೂಡ ನಿಜ. ಇಷ್ಟರ ನಡುವೆಯೂ ಉಮಾಶ್ರೀ ಅವರು ಭಿನ್ನರಾಗಿ ನಿಂತುಬಿಡುತ್ತಾರೆ.
ಇದೇ ಸಿನೆಮಾ ಶೂಟಿಂಗ್ ಸಮಯದಲ್ಲಿ ಉಮಾಶ್ರೀ ಮತ್ತು ಬುಲೆಟ್ ಪ್ರಕಾಶ್ ಅವರು ಒಟ್ಟಿಗಿರುವ ದೃಶ್ಯ ಅದು. ಒಬ್ಬರು ಕಾಂಗ್ರೆಸ್ಸು ಮತ್ತೊಬ್ಬರು ಜೆ.ಡಿ.ಎಸ್. ಇಬ್ಬರೂ ಅಭಿನಯಿಸುವಾಗ ತಣ್ಣಗೆ ಟಗ್ ಆಫ್ ವಾರ್ ಬಿದ್ದುಬಿಡುತ್ತಿತ್ತು. ಅದು ಮಾತುಗಳ ಜಗಳವಲ್ಲ. ಅದು ಒಳಗೊಳಗೇ ಅವರ ನಡವಳಿಕೆಯಲ್ಲಿ ಗೊತ್ತಾಗುತ್ತಿದ್ದ ತಣ್ಣನೆ ಮುನಿಸು. ಮೊದ ಮೊದಲು ಹೀಗಿದ್ದ ಸನ್ನಿವೇಷವನ್ನು ಕೊನೆಗೆ ಇಬ್ಬರೂ ನಗಾಡಿಕೊಂಡು ಆರಾಮಾಗಿ ಅಭಿನಯಿಸುವ ಹಾಗೇ ಮಾಡಿಕೊಂಡು ಬಿಟ್ಟರು ಉಮಾಶ್ರೀ ಅವರು. ಹೀಗೆ ಅವರ ಜೊತೆಗೆ ಶೂಟಿಂಗ್ ಮಾಡುವಾಗೆಲ್ಲಾ ಹೀಗೆ ಎಂದು ಉಮಾಶ್ರೀ ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಅವರ ಅನುಭವ ಲೋಕ ವಿಶಾಲ ಪರಿಧಿಗೆ ಸೇರಿರುವಂಥದ್ದು.
ಕೊಟ್ರೇಶಿ ಕನಸು ಸಿನೆಮಾದ ಬಗ್ಗೆ ನಾಗತಿಹಳ್ಳಿ ಅವರ ಮಡದಿ ಶೋಭಾ ಅವರ ಮಾತಾಡುವಾಗ ಅವರು ಹೇಳಿದ್ದು ಕೇಳಿ ಆಶ್ಚರ್ಯ ಮತ್ತು ಖುಷಿಯೂ ಆಯಿತು. ಸಿನೆಮಾಗಾಗಿ ಪ್ರೊಡಕ್ಷನ್ ನವರು ಒಂದಷ್ಟು ಹೊಸ ಸೀರೆಗಳನ್ನು ತಂದಿದ್ದರಂತೆ. ಉಮಾಶ್ರೀ ಅವರು “ ಹೊಸ ಸೀರೆಗಳನ್ನು ಯಾಕೆ ತರೋಕೆ ಹೋದ್ರಿ. ಅದಕ್ಕೆ ಬೇರೆ ಖರ್ಚು” ಅಂದು ಅವರಿಗಾಗಿ ತಂದಿದ್ದ ಹೊಸ ಸೀರೆಗಳನ್ನು ಅದೇ ಹಳ್ಳಿಗ ಬಡ ಕುಟುಂಬದ ತಾಯಂದಿರಿಗೆ ಕೊಟ್ಟು ಹಳೆಯ ಸೀರೆಗಳನ್ನು ಉಟ್ಟುಕೊಂಡು ಅಭಿನಯಿಸಿದರಂತೆ. ಹೊಸ ಸೀರೆಯನ್ನೇ ಮಣ್ಣಲ್ಲಿ ಉಜ್ಜಿ ಹಳೆಯ ಸೀರೆ ಹಾಗೇ ಮಾಡಿ ಕೊಡುತ್ತೇವೆ ಅಂದ್ರೂ ಉಮಾಶ್ರೀ ಅವರು ಒಪ್ಪಲಿಲ್ಲವಂತೆ, ಹಳ್ಳಿಯವರ ಬಳಿ ಕೇಳಿ ಪಡೆದ ಸೀರೆಗಳಲ್ಲೇ ಸಿನೆಮಾ ಮುಗಿಸಿಕೊಟ್ಟರಂತೆ. ಅಷ್ಟೇ ಅಲ್ಲ ಬಿಡುವಿನ ಸಮಯವೆಲ್ಲಾ ಊರಿನವರ ಜೊತೆ ಹೊಂದಿಕೊಂಡು ಇದ್ದು ಬಿಡುತ್ತಿದ್ದರಂತೆ ಎಂದು ಹೇಳುವುದನ್ನು ಕೇಳಿದೆ. ನನ್ನ ಸಿನೆಮಾ ಮತ್ತು ಸೀರಿಯಲ್ ನಲ್ಲೂ ಹೀಗೆ ಹೊಂದಿಕೊಂಡು ತನ್ನ ಅಗತ್ಯಕ್ಕೆ ಬೇಕಿರುವ ಎಲ್ಲವನ್ನು ತಾನೇ ವ್ಯವಸ್ಥೆ ಮಾಡಿಕೊಂಡು ಅಭಿನಯಿಸುತ್ತಿದ್ದ ಕಲಾವಿದೆ ಉಮಾಶ್ರೀ ಅವರು. ಇದನ್ನೆಲ್ಲಾ ಗಮನಿಸಿದಾಗ ಒಬ್ಬ ನಿರ್ದೇಶಕ ಸ್ಕ್ರಿಪ್ಟ್ ಮಾಡುತ್ತಾನೆ. ಅವನು ಒಂದು ವಿಶನ್ ಇಟ್ಟುಕೊಂಡಿರುತ್ತಾನೆ. ಅದನ್ನು ನಟರಿಗೆ ವರ್ಗಾಯಿಸಿದಾಗ ಕೆಲವರು ನಿರ್ದೇಶಕನ ವಿಷನ್ ತುಂಬಿಕೊಡುತ್ತಾರೆ. ಕೆಲವರಿಂದ ಅದು ಸಾಧ್ಯ ಆಗುವುದಿಲ್ಲ. ಹೀಗೆ ನಿರ್ದೇಶಕನ ದೃಷ್ಟಿಕೋನ ಮತ್ತು ಆಶಯವನ್ನು  ಸರಿಯಾಗಿ ಅರ್ಥ ಮಾಡಿಕೊಂಡು ಅದನ್ನು ಗೆಲ್ಲಿಸುವ ಮಾಡುವ ಪ್ರಯತವನ್ನು ಉಮಾಶ್ರೀ ಅವರು ಎಲ್ಲ ಸಿನೆಮಾಗಳಲ್ಲಿ ಮಾಡಿದ್ದಾರೆ ಎಂಬದು ಅವರ ಸಿನೆಮಾಗಳನ್ನು ನೋಡಿದಾಗ ಅನ್ನಿಸುತ್ತದೆ.
ನನಗೆ ಉಮಾಶ್ರೀ ಅವರಲ್ಲಿ ಇಷ್ಟವಾಗ ಮತ್ತೊಂದು ಬಹಳ ಮುಖ್ಯ ಗುಣವೆಂದರೆ ಅವರಿಗೆ ಸಿನೆಮಾದಲ್ಲಿ ದುಡಿಯುವ ಕಾರ್ಮಿಕರು ಎಂದರೆ ತುಂಬಾ ಇಷ್ಟ ಮತ್ತು ಗೌರವ. ಲೈಟ್ ಬಾಯ್, ಮೇಕಪ್ಪಿನವರು ಹೀಗೆ ಸಿನೆಮಾದಲ್ಲಿ ದುಡಿಯುವ ಕಾರ್ಮಿಕರಿಗೆ ಏನಾದ್ರೂ ನೋವಾದರೆ, ನೋವಾಗುವಂತೆ ಸಿನೆಮಾ ತಂಡ ನಡೆದುಕೊಂಡರೆ ಉಮಾಶ್ರೀ ಅವರು ಅದನ್ನು ತಕ್ಷಣ ಪ್ರತಿಭಟಿಸುತ್ತಿದ್ದರು. ಅವರಿಗೆ ಅನ್ಯಾಯ ಆದರೆ ಎಂಥಾ ದೊಡ್ಡ ಡೈರೆಕ್ಟರ್ ಅಥವಾ ಬಹು ದೊಡ್ಡ ನಟ ನಟಿ ಆದ್ರೂ ಅವರಿಗೆ ಮೂರು ಕಾಸಿನ ಗೌರವ ಕೊಡುತ್ತಿರಲಿಲ್ಲ. ಶೂಟಿಂಗ್ ವೇಳೆಯಲ್ಲಿ ಒಟ್ಟು ಕಾರ್ಮಿಕರ ಗೌರವಕ್ಕೆ ಕುತ್ತು ಬಂದರೆ ಉಮಾಶ್ರೀ ಅವರು ಸಹಿಸುತ್ತಿರಲಿಲ್ಲ. ಇನ್ನೊಂದು ವಿಷಯವೆಂದರೆ ಉಮಾಶ್ರೀ ಅವರ ಬಳಿ ಹೊಸ ಕಲಾವಿದರು ಏನಾದ್ರೂ ಅವರ ಬಿಡುವಿನ ವೇಳೆಯಲ್ಲಿ ಹೋಗಿ ಆಕ್ಟ್ ಮಾಡೋದನ್ನು ಹೇಳಿ ಕೊಡಿ ಅಂದ್ರೆ ಖುಷಿ ಅವರಿಗೆ. ತಮ್ಮ ಶಾಟ್ ಇದೆ ಅನ್ನೋದನ್ನೂ ಕೊಡಾ ಮರೆತು ಗಂಟೆ ಗಟ್ಟಲೆ ಹೊಸ ತಲೆಮಾರಿಗೆ ಆಕ್ಟಿಂಗ್ ಹೇಳಿಕೊಟ್ಟಿದ್ದನ್ನು ನಾನು ನೋಡಿದ್ದೇನೆ. ಒಟ್ಟು ಹೀಗೆಲ್ಲಾ ಉಮಾಶ್ರೀ ಅವರನ್ನು ಹತ್ತಿರದಿಂದ ಕಂಡರೂ ಒಂದು ವಿಶೇಷಣದಲ್ಲಿ ಅವರನ್ನು ಹಿಡಿದಿಡಲು ಸಾಧ್ಯವಿಲ್ಲ.

****

ಆ ದಿನಗಳು ಚಿತ್ರದ ನಿರ್ದೇಶಕ ಚೈತನ್ಯ ಅವರನ್ನು ಉಮಾಶ್ರೀ ಬಗೆಗೆ ಮಾತಾಡಿದಾಗ ಸೇರಿಕೊಂಡಿದ್ದು ಪರಂಪರೆಗಳ ಕೊಂಡಿ. ಚೈತನ್ಯ ಅವರು ಸಹಜವಾಗಿ ಮಾತಾಡುತ್ತಲೇ ಸಿನೆಮಾ ಕಲೆಯನ್ನು ಉಮಾಶ್ರೀ ಮತ್ತು ತನ್ನ ನೆಲೆಯಲ್ಲಿ ಕಟ್ಟಿಕೊಟ್ಟ ಬಗೆ ಕಲಾತ್ಮಕವಾದುದು. ಹಾಗೂ ಒಂದು ಹಿರೀಕ ತಲೆಮಾರು ಮತ್ತು ಹೊಸ ತಲೆಮಾರು ಪರಸ್ಪರ ಮುಖಾಮುಖಿಯಾಗುತ್ತಲೇ ಒಂದು ಸಾಂಸ್ಕೃತಿಕ ಹರಹನ್ನು ಚೈತನ್ಯ ಅವರ ಮಾತುಗಳು ನಮ್ಮ ಮುಂದೆ ಇಡುತ್ತವೆ. ಹಾಗಾಗಿ ಚೈತನ್ಯ ಅವರು ಕಟ್ಟಿ ಕೊಡುವ ಉಮಾಶ್ರೀ ಅನ್ನುವ ಕಲಾವಿದೆಯ ವ್ಯಕ್ತಿತ್ವ ಮತ್ತು ಪ್ರತಿಭೆ ಎರಡೂ ಕನ್ನಡ ಸಿನೆಮಾ ಮತ್ತು ಕಿರುತೆರೆಯ ಒಂದು ಶಕ್ತಿಯಂತೆ ಕಾಣುತ್ತದೆ. ಹಾಗೆಯೇ ಉಮಾಶ್ರೀ ಅನ್ನುವ ಸೀನಿಯಾರಿಟಿ ತನ್ನದೇ ಕ್ಷೇತ್ರದ ಹೊಸ ಚಿಗುರುಗಳಿಗೆ ಹೇಗೆ ಜೊತೆ ಆಗಬೇಕು ಅನ್ನುವುದನ್ನು ಸೂಕ್ಷವಾಗಿ ತೋರಿಸುತ್ತದೆ. ಇವೆಲ್ಲವುಗಳ ನಡುವೆ ಅನುಭವ ಹರಿದಾಡುತ್ತಲೇ ಎಷ್ಟೊಂದು ಕಲಿಸಿಬಿಡುತ್ತದೆ ತಾನೇ ?
 

‍ಲೇಖಕರು avadhi-sandhyarani

August 30, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Suresh Bidari

    Umashree avaru adbuta kalavide. Act annodu avara raktadalle bandide yavude patra irali avaru lilajalavagi madtare

    ಪ್ರತಿಕ್ರಿಯೆ
  2. Muthuraj Artist

    Amma endare eege sahaja abhinayakke avare saati.. monne Rajadaani cinemaa nodide.. abba adestu sahaja abinaya.. amma u r great..
    Thanks a lot Raghu sir..

    ಪ್ರತಿಕ್ರಿಯೆ
  3. Harishbabu TS

    ಉಮಾಸಿರಿ ಅಂಕಣದಲ್ಲಿ ತೆರೆದುಕೊಳ್ಳುತ್ತಿರುವ ಉಮಾಶ್ರೀಯವರ ತೆರೆಯ ಹಿಂದಿನ ಬದುಕು,ಅವರ ಸರಳ ಜೀವನ ಶೈಲಿ,ಹಿರಿಯರು ಕಿರಿಯರೆಂಬ ಬೇಧವಿಲ್ಲದೆ ಎಲ್ಲರೊಡನೆ ಬೆರೆತುಬಿಡುವ ವಿಶಾಲ ಮನಸ್ಸಿನಿಂದ ಮತ್ತಷ್ಟು ಆಪ್ತವಾಗಿಬಿಡುತ್ತಾರೆ..

    ಪ್ರತಿಕ್ರಿಯೆ
  4. ನಿಮ್ಮ ಅಭಿಮಾನಿ

    ಆ ದಿನಗಳು ಸಿನೆಮಾ ನಿರ್ದೇಶಕರಾದ ಚೈತನ್ಯರು ತಮ್ಮ ಮನದಾಳದ ಮಾತುಗಳನ್ನು ಎಳೆ ಎಳೆಯಾಗಿ ಬಿಡಿಸುತ್ತಾ ಬಂದಿರುತ್ತಾರೆ, ಉಮಾಶ್ರೀಯವರ ಬಗ್ಗೆ ಕಿರಿಯ ವಯಸ್ಸಿನಲ್ಲಿ ಅದ್ಬುತ ಪ್ರತಿಭೆ ಹೊಂದಿರುವಂತಹ ನಿರ್ದೇಶಕರು ಇವರು,,,
    ಕಿಚ್ಚು ದಾರವಾಹಿಯಲ್ಲಿ ಉಮಾಶ್ರೀ ಅವರಿಗೆ 4 ಹೆಣ್ಣುಮಕ್ಕಳ ತಾಯಿಯ ಪಾತ್ರ ಅದು ವಿಧವೆಯ ಪಾತ್ರ, ಹಿಂದೆ ಗಿರಿಜಾ ಲೋಕೇಶ ರವರು ಹೆಳಿದಂತೆ ಇವರಿಗೆ ಪಾತ್ರಗಳ ಆಯ್ಕೆ ಇರಲಿಲ್ಲವಂತೆ, ಬೇಡ ಬಿಡಿ, ನಿರ್ರ್ದೇಶಕರು ಇವರರಿಂದ ಪಾತ್ರಗಳನ್ನು ಮಾಡಿಸುತ್ತಿದ್ದರು,ಇವರನ್ನು ಆಯ್ಕೆ ಮಾಡುತ್ತಿದ್ದರು ಯಾವದೆ ಪಾತ್ರಕ್ಕೆ ಜೀವತುಂಬಿ ಅಭಿನ್ಯಿಸುತ್ತಿದ್ದರು ಉಮಾಶ್ರೀಯವರು ಅದಕ್ಕಾಗಿ.
    ಜಾಲಿಯಾಗಿ ನಟಿಸುವುದು, ಒಂದು ಸನ್ನಿವೇಶದಲ್ಲಿ ಮುಂಗೋಪಿಯಾಗಿ,ಕೆಲವೋಮ್ಮೆ ಹಟಮಾರಿಯಾಗಿ ಕೆಲವೋಮ್ಮೆ ಮುಗ್ದ ಮಗುವಿನಂತೆ, ಈ ಸನ್ನಿವೇಶಗಳು ಅಭಿನವಲ್ಲ ಇವುಗಳು ಅವರಲ್ಲಿ ಅಡಗಿರುವ ಭವನಾತ್ಮಕ ಭಾವನೆಗಳ ಅಭಿನಯ, ಒಂದು ಸನ್ನಿವೇಶದಲ್ಲಿ ತನ್ನ ಮಗಳನ್ನು “ಎಯ್ ಎಲ್ಲಿಂದ ಬಂದ್ಯ” ? ಕೇಳುವಾಗ , ನನಗೆ ಅನಿಸಿದ್ದು,ಮಧ್ಯಮ ವರ್ಗದ ಹೆಣ್ಣುಮಕ್ಕಳು ಅದು ಬಡವರಾದಲ್ಲಿ ಅಥವ ಅವಳಿಂದ ಎನಾದರು ತಪ್ಪುನಡೆದಿದ್ದಲ್ಲಿ,ನಡೆಯುತ್ತಿದ್ದರೆ ಅಲ್ಲಿಯ ತಾಯಂದಿರು ಕೇಳುವುದು ಇದೇ ಏರು ಧ್ವನಿಯಲ್ಲಿಯೇ, ಕೊಟ್ಟ್ರೇಶಿ ಕನಸು ಫಿಲ್ಮ್ ಯುನಿಟ್ ಹೊಸ ಸೀರೆಗಳನ್ನು ತಂದಿರುವಾಗ ಇವರು ಹಳ್ಳಿಯ ಮಹಿಳೆಯರಿಂದ ಹಳೆ ಸೀರೆಗಳನ್ನೆ ತೆಗೆದುಕೊಂಡು ಸನ್ನಿವೇಶಕ್ಕೆ ಬೇಕಾಗುವಹಾಗೆ ನಟಿಸಿದ್ದಾರೆ ನೋಡಿ, ಅಂದು ಬೇರೆ ನಟೆಯರು ಹಾಗೂ ಇಂದಿನವರು ನಟಿಯರು ಯಾರಾದರು ಹೀಗೆ ಹಳೆ ಬಟ್ತೆಗಳನ್ನು ಉಟ್ಟಿದ್ದು ಇದೆಯಾ?? ಉತ್ತರ ಇಲ್ಲ
    ಇನ್ನು ಸಿನೆಮಾ ಕಾರ್ಮಿಕರಾದ ಕ್ಯಮರಮೆನ್, ಲೈಟ್ಬಾಯಿ, ಇನ್ನಿತರರಿಗೆ ಅವಮಾವೆನಾದರು ಆದಲ್ಲಿ, ಇವರು ಸ್ಪಂದಿಸುತ್ತಿದ್ದರು ಇಂದಿನ ನಟಿಯರು ಈ ಕಾರ್ಮಿಕರಿಗೆ ಕಪಾಳ ಮೋಕ್ಶ್ಹ ಮಾಡುವದು,ಅಹಂಕಾರದಿಂದ ನೀವಲ್ಲ ಡಿ ಗ್ರುಪ್ ಕೆಲಸಗಾರರು ನಿಮ್ಮಿಂದ ನಾವು ನಟನೆ ಕಲಿಯುವದಾ? ಎಂತೆಲ್ಲಾ ತುಂಬಾ ಹಳೆ ರದ್ದಾಂತಗಳೆ ನಡೆದುಹೋಗಿವೆ,ಇವರು ಯಾವ ಯಾವಕ್ಶ್ಹೆತ್ರದಲ್ಲಿದ್ದರು ಇರಬಹುದು ಸೀನೆಮಾ, ನಾಟಕ,ರಾಜಕಿಯ ಹಾಗೂ ನಿಜ ಜೀವನದಲ್ಲಿ ಕೂಡ ಇವರು ಯಾರನ್ನು ಸಹ ಅಗೌರವದಿಂದ ನೋಡಲೆ ಇಲ್ಲಾ, ಇವರನ್ನು ನಿಂದನೆ ಮಾಡಿ, ಅವಮಾನ ಮಾಡಿದವರು, ಕ್ಶ್ಹಮೆ ಕೇಳಿಕೊಂಡು ಬಂದವರಿಗೆ ಕ್ಶ್ಹ್ಮಮೆಕೊಟ್ಟಂತಹ ಮಹಾನ ಮಹಿಳೆ ಇವರು,,,
    ಇವರು ಸದಾ ಹೀಗೆ ಇರಲಿ ಇವರ ಮನಸ್ಸು ಸದಾ ಶ್ರೀಮಂತಿಕೆಯಿಂದ ಮೆರೆಯಲಿ ಎಂದು ಹಾರೈಸುತ್ತಾ ದೇವಿ ಅನುಗ್ರಹ ಇವರಿಗೆ ಇರಲಿ…
    ರಘುಅವರೆ, ನಿಮ್ಮ ಈ ಅವಧಿ ಮ್ಯಗ್ ಉಮಾಸಿರಿ, ತುಂಬಾ ಜನಪ್ರಿಯವಾಗುತ್ತಿದೆ ಪ್ರತಿ ಒಂದು ಮಹಿಳೆ ಹಾಗೂ ಎಲ್ಲರೂ ಓದುವಂತಾಯಿತು ಈ ನಿಮ್ಮ ಅದ್ಬುತ ಲೆಖನ…
    ಹೌದಲ್ಲವೆ ಗುರುವೆ, ಶ್ವೇತಪ್ರಿಯ ಗುರುವೆ..
    ನಿಮ್ಮ ಅಭಿಮಾನಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: