ಬೇಲೂರು ರಘುನಂದನ್ ಕಾಲಂ : ಉಮಾಶ್ರೀ ಅವರನ್ನು ಕೂಡ ಓದಬಹುದು

Umasiri-1411
 ಸೃಜನಶೀಲತೆ ಮತ್ತು ಅಭದ್ರತೆ ಒಂದರ ಜೀವ ಇನ್ನೊಂದರಲ್ಲಿ ಇರುವಂತೆ ಪರಸ್ಪರ ಪೂರಕವಾದವು. ಯಾರ ಬದುಕಲ್ಲಿ ಅಭದ್ರತೆ ಇರುವುದೋ ಅವರ ಮನಸ್ಸು ಸೃಜನವಾಗಿದ್ದರೆ ಬದುಕಿನ ಕ್ರಿಯಾಶೀಲ ಅನಾವರಣ ಸಾಧ್ಯ ಎಂಬುದಂತೂ ಸತ್ಯ. ಅಂದರೆ ನಾನು ಹೇಳ ಬಯಸುತ್ತಿರುವ ಮುಖ್ಯ ವಸ್ತು ವಿಷಯಗಳೆರಡೂ  ಉಮಾಶ್ರೀ ಅವರನ್ನೇ ಎದುರು ನೋಡುತ್ತಿದೆ. ಉಮಾದೇವಿಯಿಂದ ಉಮಾಶ್ರೀ ಯಾಗುವ ತನಕ ಮತ್ತದು ಮುಂದುವರೆದು ವರ್ತಮಾನವಾಗುವ ಪ್ರಕ್ರಿಯೆ ಬೆಸೆದುಕೊಂಡಿರುವುದು ಈ ಅಭದ್ರತೆ ಮತ್ತು ಸೃಜನಶೀಲತೆಗಳ ನಡುವೆಯೇ. ಅಭದ್ರತೆಯಿಂದ ಸೃಜನಗೊಂಡ ಉಮಾಶ್ರೀ ಒಬ್ಬ ಕಲಾವಿದೆ ಮಾತ್ರವಲ್ಲ. ಅವರು ಬದುಕಿನ ಅನ್ವೇಷಕಿಯೂ ಹೌದು.
ಇಡೀ ನಮ್ಮ ಪರಂಪರೆ ಹೆಣ್ಣನ್ನು ಪ್ರಕೃತಿ ಅಂತಲೇ ಹೇಳಿಕೊಂಡು ಬಂದಿದೆ. ಅಂದರೆ ಹೆಣ್ಣನ್ನು ನದಿ, ನೆಲ, ವನ, ಗಿಡ, ಬಳ್ಳಿ, ಹೀಗೆ ಅನೇಕ ರೂಪಕಗಳನ್ನು ಸಾಮಾನ್ಯನ ಬದುಕಿನಲ್ಲೂ ಪ್ರಕೃತಿಗೆ ಆರೋಪಿಸಿ ಹೇಳುವುದನ್ನು ಗಮನಿಸಿದ್ದೇವೆ. ಸಾಹಿತ್ಯ, ಸಂಸ್ಕೃತಿ ಮತ್ತು ಸಾಮಾಜಿಕ  ಸಂದರ್ಭಗಳಲ್ಲಿಯೂ ಸಹಜವಾಗಿಯೇ ಸ್ತ್ರೀ ಪ್ರಕೃತಿಯಂತಲೇ ಅನಾವರಣಗೊಂಡಿದ್ದಾಳೆ. ಹೆಣ್ಣು ಮತ್ತು ಪ್ರಕೃತಿ ಎರಡೂ ಧಾರೆಗಳು ಬದುಕು, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂದರ್ಭಗಳಲ್ಲಿ ಮತ್ತೆ ಮತ್ತೆ ಯಾಕೆ ಹೋಲಿಕೆಯಾಗುತ್ತವೆ ಎಂದು ಪ್ರೆಶ್ನೆಯನ್ನು ಮುಂದಿಟ್ಟುಕೊಂಡರೆ, ಬಹುಶಃ ಒಲಿಯುವ ಮತ್ತು ಮುನಿಯವ ಹಾಗೂ ಪಾಲಿಸುವ ಮತ್ತು ಸಲಹುವ ಗುಣಗಳು ಮಹಿಳೆ ಮತ್ತು ಪ್ರಕೃತಿ ಎರಡರಲ್ಲೂ ಹೊಂದಾಣಿಕೆ ಆಗುವ ಕಾರಣಕ್ಕೆ ಅನ್ನುವ ಮೇಲಿನ ಉತ್ತರ ಕೊಟ್ಟು ಸುಮ್ಮನಾಗ ಬಹುದು. ಆದ್ರೆ ಈ ಎರಡೂ ಹೋಲಿಕೆಗಳು ಅಷ್ಟಕ್ಕೇ ನಿಲ್ಲುವುದಿಲ್ಲ ಅನ್ನುವು ಅಂಶವೂ ಬಹಳ ಮುಖ್ಯವಾದುದು. ಹಾಗಾದರೆ ಇನ್ನೂ ಮುಂದುವರೆದು ಸ್ತ್ರೀ ಮತ್ತು ಪ್ರಕೃತಿಗಳ ಸಮರ್ಥವಾದ ಹೋಲಿಕೆ ಗ್ರಹಿಕೆಗಳು  ಮುಖ್ಯವಾಗಿ ನಿಲ್ಲುವುದು ಹೆಣ್ಣು ಮತ್ತು ಪ್ರಕೃತಿಯಲ್ಲಿನ ಸಮಾನ ಜೈವಿಕ ಗುಣಗಳು. ಜೊತೆಗೆ ದೈಹಿಕ  ಮತ್ತು ಮಾನಸಿಕ ಸ್ಥಿತಿಗಳ ಸಾಮೀಪ್ಯವೂ ಕೂಡಾ ಸ್ಪಷ್ಟ. ಪ್ರೀತಿ, ಕಾಳಜಿ, ತಾಯ್ತನ, ಪೊರೆಯುವ ಇನ್ನಿತರ ಗುಣಗಳು ಸಹಜವಾಗಿ ಹೆಣ್ಣು ಮತ್ತು ಪ್ರಕೃತಿಯಲ್ಲಿ ಕಂಡುಬರುವುದರಿಂದ ಜೈವಿಕ ಗುಣಗಳ ಸಾಮ್ಯತೆ ಇದುವರೆಗೂ ಪರಂಪರೆ ಹೆಣ್ಣನ್ನು ಮತ್ತು ಪ್ರಕೃತಿಯನ್ನು ಹೋಲಿಸಿ ಹೇಳುತ್ತಿರುವ ಕ್ರಮಕ್ಕೆ ಪುಷ್ಠಿ ನೀಡುತ್ತದೆ. ಹಿನ್ನೆಲೆಯಲ್ಲಿ ಹೆಣ್ಣು ಪ್ರಕೃತಿಯಾಗುವ ಅಥವಾ ಹೆಣ್ಣೇ ಪ್ರಕೃತಿ ಎಂದು ಪರಿಭಾವಿಸುವ ಚರ್ಚೆಯನ್ನು ಕಲಾವಿದನ ಹಿನ್ನೆಲೆಯಲ್ಲಿ ಗ್ರಹಿಸಬಹುದಾದ ಸಾಧ್ಯತೆಗಳನ್ನು ಗಮನಿಸಬಹುದು.
ಉಮಾಶ್ರೀ ಅವರ ಜೀವನ ತೆರೆದ ಪುಸ್ತಕದಂತೆ ಗೊತ್ತಿರುವ ಕಥೆಗಳನ್ನು ಮಾತ್ರ ಹೇಳುವುದು ಇಲ್ಲಿನ ಉದ್ದೇಶವಲ್ಲ. ಕಲಾವಿದೆಯ ಕಷ್ಟದ ಕಥೆಗಳನ್ನು ಅಥವಾ ರೋಚಕ ಎನ್ನುವ ಕಥಾನಕಗಳನ್ನು ಮೀರಿದ ಉಮಾಶ್ರೀಯವರ ಅನಾವರಣಗೊಂಡ ವ್ಯಕ್ತಿತ್ವವನ್ನು, ಬದುಕನ್ನು, ಜೀವನ ಪ್ರೀತಿಯನ್ನು ಅದಕ್ಕೆ ಹೊಸೆದುಕೊಂಡಂತೆ ಇತರ ವಿವರಗಳನ್ನು ಬರೆಯುವುದು ಬಹುಮುಖ್ಯ ಜವಾಬ್ದಾರಿ. ಅರಿಯುವುದೂ ಕೂಡ ಸಾಮಾಜಿಕ ಜವಾಬ್ದಾರಿಯೇ.
ಕಲಾವಿದೆಯಾಗಿ ಮಾತ್ರ ಈಕೆ ನಿಲ್ಲದೇ ಸಾಹಿತ್ಯ, ಸಮಾಜ, ರಂಗಭೂಮಿ, ಸಿನೆಮಾ, ಕುಟುಂಬ, ರಾಜಕೀಯ ಹೀಗೆ ಹತ್ತು ಹಲವಾರು ಅಂತರ ಶಿಸ್ತುಗಳಲ್ಲಿ ನಡೆಸುವ ಹುಡುಕಾಟ ಮತ್ತು ಅದರ ಜೊತೆ ಅನುಸಂಧಾನ ಮಾಡಿಕೊಳ್ಳುವ ಪರಿ, ಅದಕ್ಕೆ ಬೇಕಾದ ತಯಾರಿ, ಕೊನೆಗೆ ಅಸ್ಥಿತ್ವಕ್ಕೆ ತರುವುದು, ನಂತರ ಕಂಡುಕೊಂಡ ದಾರಿಯನ್ನು ಪಾಲಿಸುವುದು, ಪಾಲಿಸುವಂತೆ ನೋಡಿಕೊಳ್ಳುವುದು ಉಮಾಶ್ರೀಯವರನ್ನು ಅರ್ಥೈಸಿಕೊಳ್ಳಲು ಬೇಕಾದ ಒಳ್ಳೆಯ ಸರಕು. ಇವು ಕಾಡುವುದು, ಕೆದಕುವುದು ವ್ಯಕ್ತಿ ಸಮಷ್ಟಿಯಾಗುವಲ್ಲಿ ನಿರ್ವಹಿಸುವ ಪಾತ್ರಗಳು ಯಾವುದೇ ರಾಜಿ ಮಾಡಿಕೊಳ್ಳದೇ ಗುರಿಯನ್ನು ದುಡಿಸಿಕೊಳ್ಳುವುದು ಕ್ರಿಯೆ ಮತ್ತು ಪ್ರಕ್ರಿಯೆ ಕಲಾವಿದೆಯಾಗಿ ಉಮಾಶ್ರೀಯವರನ್ನು ನೋಡಿದಾಗ ಹೇಗೆ ನಿರ್ಮಿಸಿದೆ ಎಂದು ತಿಳಿಯಬಹುದು.
ಯಾವುದೇ ಕಾರ್ಯಕ್ಷೇತ್ರವನ್ನು ತೆಗೆದುಕೊಂಡರೂ ಅದಕ್ಕೆ ಸಂಪೂರ್ಣ ನ್ಯಾಯವನ್ನು ಒದಗಿಸುವುದು ಉಮಾಶ್ರೀಯವರ ಬಹುಮುಖ್ಯ ಗುಣ. ಬುದ್ದಿ, ದೇಹ, ಮನಸ್ಸು ಈ ಮೂರನ್ನೂ ಆರೋಗ್ಯಪೂರ್ಣವಾಗಿ ದುಡಿಸಿಕೊಂಡು ಹಿಡಿದ ಕಾರ್ಯಕ್ಕೆ ಅರ್ಥವನ್ನು ತರುವುದು ಇವರ ನಿಷ್ಟತೆಯನ್ನು ತೋರುತ್ತದೆ. ಬಹುಶಃ ಈ ಒಂದು ಉದಾಹರಣೆ ಅವರ ಕಾರ್ಯದಕ್ಷತೆಯನ್ನು ಅರ್ಥವಿಸಿಕೊಳ್ಳಲು ಸಹಕಾರಿಯಾಗಬಹುದು. ಉತ್ತರ ಕರ್ನಾಟಕ ತೇರದಾಳ ಮತಕ್ಷೇತ್ರ ಈಗ ಅವರ ರಾಜಕೀಯ ರಂಗದ ಕರ್ಮಭೂಮಿ. ವಾಸ ಇರುವುದು ಬೆಂಗಳೂರಿನಲ್ಲಿ. ಹಿಂದಿನ ಚುನಾವಣೆಯಲ್ಲಿ ಕೆಲ ಕಾರಣಗಳಿಂದ ಸೋತ ನಂತರ ಕೆಲಸಕ್ಕೆ ಬೆನ್ನು ಮಾಡಿ ಬರಲಿಲ್ಲ. ಅದಕ್ಕೆ ಬದಲಾಗಿ ಅಲ್ಲೇ ಮನೆ ಮಾಡಿಕೊಂಡು ಇದ್ದು, ಈಗ ಆ ಊರಿನವರೇ ಆಗಿದ್ದಾರೆ. ಬೆಂಗಳೂರಿಗೆ ಆಗಾಗ ಬಂದು ಹೋಗುವ ಅತಿಥಿಯಾಗಿದ್ದಾರೆ. ಚಿತ್ರೀಕರಣವೋ, ನಾಟಕವೋ, ದಾರವಾಹಿಯೋ ಏನಾದರೂ ಇದ್ದಲ್ಲಿ ಅಲ್ಲಿಂದ ರೈಲಿನಲ್ಲಿ ರಾತ್ರಿ ಹೊರಟು ಬೆಳಿಗ್ಗೆ ಇಲ್ಲಿ ತಲುಪಿ, ಕೆಲಸ ಅಚ್ಚುಕಟ್ಟಾಗಿ ಮುಗಿಸಿ ಮತ್ತೆ ರಾತ್ರಿ ರೈಲಿನ ಪ್ರಯಾಣ ಮಾಡಿ ತೇರದಾಳದಲ್ಲಿ ಹಾಜರಾಗಿರುತ್ತಾರೆ. ಇದನ್ನು ಗಮನಿಸಿದಾಗ ಉಸಿರು ಬಿಡುವಂತೆ ಅನಿಸಿದರೂ ಇದು ಸತ್ಯ.
ಅನುಭವ ಜನ್ಯ ಸಾಹಿತ್ಯ ಹೇಗೆ ಯಾವ ಕಾಲಕ್ಕೋ ಅಸ್ತಿತ್ವದಲ್ಲಿರುತ್ತದೆಯೋ ಅನುಭವ ತುಂಬಿದ ಬದುಕು ಕೂಡ ಅರ್ಥಪೂರ್ಣವೇ ಮತ್ತು ಯಾವ ಕಾಲಕ್ಕೂ ಪ್ರಭಾವ ಭೀರುವಂತದ್ದೇ. ವಿವಿಧ ಅನುಭವಗಳ ಜೊತೆಗೆ ದುಡಿಯುವ ಉತ್ಸಾಹ, ಜೀವನ ಪ್ರೀತಿ, ಸಮಾಜದ ಬಗೆಗಿನ ಕಾಳಜಿ, ಓದು, ಇವೆಲ್ಲವೂ ಇಂದು ನಮ್ಮ ಮುಂದೆ ಉಮಾಶ್ರೀಯವರ ಯಶಸ್ಸಿನ ಪುಟಗಳನ್ನು ಓದುವಂತೆ ಮಾಡಿದೆ. ತಾದಾತ್ಮ್ಯ, ತಲ್ಲೀನವಾಗುವುದರಿಂದಲೇ ಇದು ಸಾದ್ಯ. ಹಿಂದೊಮ್ಮೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ದೆಹಲಿ ಎಡಿಷನ್ನಲ್ಲಿ, ಉಮಾಶ್ರೀಯವರ ಒಡಲಾಳದ ಸಾಕವ್ವನ ಪಾತ್ರವನ್ನು ನೋಡಿ ರಂಗಭೂಮಿಗೆ ಅಂತಲೇ ಎನಾದರೂ ಆಸ್ಕರ್ ಬಹುಮಾನ ಇದ್ದಿದ್ದರೆ ಅದು ಉಮಾಶ್ರೀಯವರಿಗೆ ಖಂಡಿತವಾಗಿ ದಕ್ಕುತ್ತಿತ್ತು ಎಂದು ಬರೆದಿತ್ತು. ಈ ಗ್ರಹಿಕೆ ಉಮಾಶ್ರೀ ಕಲಾವಿದೆಯಾಗಿ ಕಲಾಕೃತಿಯನ್ನು ಆಗಿಸುವಿಕೆಯ ದಟ್ಟ ನೆಲೆಗಳನ್ನು ನಾವು ಗಮನಿಸಬಹುದು. ಅಷ್ಟೇ ಅಲ್ಲ ಈ ಉದಾಹರಣೆ ಅವರ ಸಾಂಸ್ಕೃತಿಕ ಬದುಕಿನಲ್ಲಿ ಅತಿಮುಖ್ಯವಾದುದು ಎನ್ನಬಹುದು.
ಮೊದಲು ಅವರ ಮನೆಗೆ ಬೇಟಿ ನೀಡಿದಾಗ ನನಗೆ ಅವರ ಮನೆಯ ಸೌಂದರ್ಯವಾಗಲೀ, ಅಚ್ಚುಕಟ್ಟಾಗಲೀ ಗಮನ ಸೆಳೆಯಲಿಲ್ಲ. ಅವರ ಕೋಣೆಯಲ್ಲಿ ಸಾಲಾಗಿ ಜೋಡಿಸಿಟ್ಟ ಕನ್ನಡದ ತ್ರಿಪದಿ, ವಚನ ಸಾಹಿತ್ಯ, ದಾಸ ಸಾಹಿತ್ಯ, ಕುವೆಂಪು, ಬೇಂದ್ರೆ, ವೈದೇಹಿ ಅಷ್ಟೇ ಅಲ್ಲ ರಾಜಕೀಯ ಪ್ರಕಾರದ ಕೆಲ ಮೌಲಿಕ ಕೃತಿಗಳನ್ನು ನೋಡಿ ಚಕಿತನಾದೆ. ಕಲಾವಿದೆಯಾಗಿ ಮಾತ್ರವಲ್ಲದೇ ಒಬ್ಬ ಸಹೃದಯಿ ಓದುಗಳಾಗಿ ಆಕೆ ಕಂಡು ಬಂದರು. ಅವರೋಂದಿಗೆ ಚರ್ಚೆ ಮಾಡುವ ಸಂದರ್ಭದಲ್ಲಿ ಒಬ್ಬ ವಿಮರ್ಷಕಿಯಾಗಿ ಆಕೆಯನ್ನು ನೋಡಬಹುದು. ಒಮ್ಮೆ ಸಾಹಿತ್ಯದ ವೇದಿಕೆಯಲ್ಲಿ ಜಾನಪದ ಸಾಹಿತ್ಯವನ್ನು ಕುರಿತಾದ ಅವರ ವಿಚಾರಮಂಡಿಸಿದ ರೀತಿಯನ್ನು ನೋಡಿ ಅವರ ಚರ್ಚೆಯ ವಸ್ತು ವಿಷಯವನ್ನು ಅವರ ಅಧ್ಯಯನ ಕಡಿಮೆಯಿಲ್ಲ ಎನಿಸಿತು. ಇದೆಲ್ಲಾ ಸಾದ್ಯವಾಗಿದ್ದು ಅವರ ಅನುಭವ, ಓದಿನ ಪ್ರೀತಿ, ಮೌಲ್ಯಗಳ ಬಗೆಗಿನ ಧೋರಣೆ, ಬದುಕಿನ ಬಗೆಗಿನ ಆಸಕ್ತಿಯಿಂದಲೇ. ಅವರ ಓದಿನ ಛಲ ಕೂಡ ಮೆಚ್ಚುವಂತದ್ದೇ. ಒಬ್ಬ ನೇರ ವಿದ್ಯಾರ್ಥಿನಿಯಂತೆ ಒಂದು ತಿಂಗಳು ತನ್ನೆಲ್ಲಾ ಕೆಲಸ ಕಾರ್ಯಗಳಿಗೆ ರಜೆ ಘೋಷಿಸಿ ಒಂದೆಡೆ ಕುಳಿತು ಓದಿ, ಬರೆದು, ಪುನರಾವರ್ತಿಸಿ, ಪರಾಮರ್ಶಿಸಿ, ಚರ್ಚಿಸಿ ರಾಜ್ಯಶಾಸ್ತ್ರದಲ್ಲಿ ಪರೀಕ್ಷೆ ಬರೆದು ಯಶಸ್ವಿಯಾದರು. ಈಗ ಅವರು ಎಂ.ಎ. ಪದವೀಧರೆ.
DSC06115
ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕಿನ ವಿವಿಧ ಮಗ್ಗಲುಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಉಮಾಶ್ರೀ ಒಂದು ಐಕಾನ್ ಎಂಬುದಂತೂ ಸರಿಸತ್ಯ. ಕಲಾ ಬದುಕಿನಲ್ಲಿ ಸಂಶೋಧನಾತ್ಮಕವಾಗಿ ಮತ್ತು ಅನ್ವೇಷಕ ದಾರಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಅನುಭವವನ್ನು ಅವರು ದುಡಿಸಿಕೊಂಡಿದ್ದಾರೆ. ಅವರ ಭಾವ ಅನುಭಾವದ ನೆಲೆಗಳು ಕನ್ನಡ ಕಲಾ ಲೋಕಕ್ಕೆ, ಮನುಷ್ಯ ಪ್ರೀತಿಯ ಕಾಳಜಿಗಳು ಸಾಮಾಜಿಕ ನೆಲಯಲ್ಲಿ ರಾಜಕೀಯ ಪ್ರಪಂಚಕ್ಕೆ, ಅದಕ್ಕೆಲ್ಲಾ ಮಿಗಿಲಾಗಿ ಯಶಸ್ವೀ ಬದುಕಿಗೆ ಒಬ್ಬ ಅಲ್ಪಸಂಖ್ಯಾತ ಮಹಿಳೆ ಮುನ್ನುಗ್ಗುವ ಜಲಪಾತೀಯ ಧೋರಣೆ ಬದುಕನ್ನು, ಸಮಾಜವನ್ನು ಗಟ್ಟಿಗೊಳಿಸುವ ಕ್ರಿಯೆಗೆ ಗಟ್ಟಿ ಅಡಿಪಾಯವಂತೂ ಆಗಿದೆ ಎಂದು ಹೇಳಬಹುದು.
ಅಭಿನಯ ಅನ್ನುವುದು ಪ್ರತಿಯೊಬ್ಬರ ಬದುಕಿನ ಕ್ರಮದೊಳಗೆ ಸೇರಿಹೊಗಿರುತ್ತದೆ. ಕಲಾವಿದ ಅಭಿನಯವನ್ನು ತನ್ನ ಜೀವನವನ್ನಾಗಿಸಿಕೊಂಡಿದ್ದರೆ, ಒಬ್ಬ ನೋಡುಗ ಅಭಿನಯವನ್ನು ತನಗೆ ಬೇಕಾದ ಖುಷಿಯನ್ನೋ, ಜ್ಞಾನವನ್ನೋ ಅಥವಾ ತನ್ನ ಮನಸು ಏನನ್ನು ಅಭಿನಯದ ಮೂಲಕವಾಗಿ ಪಡೆಯಲು ಬಯಸುತ್ತಿರುತ್ತದೋ ಅದನ್ನು ಪಡೆಯಲು ಪ್ರಯತ್ನಿಸುತ್ತಿರುತ್ತಾನೆ. ಒಮ್ಮೊಮ್ಮೆ  ಇದು ನೋಡುಗನ ಡಿಮ್ಯಾಂಡ್ ಆಗಿ ಕಲಾವಿದನ ಪೂರೈಸಲೇ ಬೇಕಾದ ಕರ್ತವ್ಯದ ಹಂತಕ್ಕೂ ಹೋಗುವ ಸಾಧ್ಯತೆಗಳಿವೆ. ಹೀಗಿರುವ ಒಂದು ಕಲಾ ಶಿಸ್ತನ್ನು ಒಂದು ಅಧ್ಯಯನಕ್ಕೆ ಒಳಪಡಿಸುವುದರಿಂದ ಸಾಂಸ್ಕೃತಿಕ ಗ್ರಹಿಕೆಗಳು ತೆರೆದು ಕೊಳ್ಳುವ ಅಂಶ ಕಂಡು ಬರುತ್ತದೆ. ಈ ತೆರನಾದ ಓದು ಮತ್ತು ಅಭ್ಯಾಸ ಒಬ್ಬ ಕಲಾವಿದನ ಬದುಕಿಗೆ ಇರುವ ಸಾಂಸ್ಕೃತಿಕ ಮೌಲ್ಯಗಳು, ಸಾಮಾಜಿಕ ಮೌಲ್ಯಗಳನ್ನು ಹಾಗೂ ಅದಕ್ಕೆ ಒಗ್ಗಿಕೊಂಡ ಇನ್ನಿತರ ಟೆಕ್ಸ್ಟ್ ಗಳನ್ನು ನಮ್ಮ ಮುಂದಿಡುತ್ತವೆ. ಜೊತೆಗೆ ಕಲಾಭಿವ್ಯಕಿಯಲ್ಲೂ ಕಲಾವಿದನ ಅನುಭವದ ಹಿನ್ನೆಲೆ ಮತ್ತು ಪ್ರತಿಭೆ ಇವುಗಳನ್ನು ಸೂಕ್ಷ್ಮವಾಗಿ ಗ್ರಹಿಸುತ್ತಲೇ ಹೊಳಹುಗಳನ್ನು ಹಿಡಿಯಲು ಸಾಧ್ಯಮಾಡಿಕೊಡುತ್ತದೆ.
ಅಭಿನಯ ಅಥವಾ ಕಲೆ ಯಾವುದೇ ಪ್ರದರ್ಶನದ ಪ್ರಕಾರಗಳನ್ನು ತೆಗೆದುಕೊಂಡರೂ ಕೊಡುವ ಮತ್ತು ಸ್ವೀಕರಿಸುವ ( ಕಲಾವಿದ ಮತ್ತು ನೋಡುಗ )ಎರಡು ಆಶಯಗಳು ಪರಸ್ಪರ ಮುಖಾಮುಖಿ ಆಗುತ್ತಲೇ ಇರುತ್ತದೆ. ಹೀಗಿರುವಾಗ ಸ್ವೀಕರಿಸುವ ಮನಸುಗಳ ನಿರೀಕ್ಷೆ ಮತ್ತು ಅಭಿವ್ಯಕ್ತಿಯ ಮನಸು ಹೇಗೆ ಸೃಜನಗೊಂಡು ಗಟ್ಟಿಯಾದುದನ್ನು ಕೊಡುತ್ತದೆ ಅನ್ನುವುದೇ ಮುಖ್ಯವಾಗುತ್ತದೆ. ಹಾಗೂ ಈ ಗಟ್ಟಿತನಗಳ ಮೇಲೆಯೇ ಪ್ರತಿಭೆಯನ್ನು ದುಡಿಸಿಕೊಂಡ ಕಲೆ ನಿಂತಿರುತ್ತದೆ. ಆಗ ಕಲಾ ಪ್ರಯೋಜನ ಕೂಡ ಆಗುತ್ತದೆ. ಇಲ್ಲವೇ ಆಶಯಗಳನ್ನು ಕಳೆದುಕೊಂಡ ಅಭಿವ್ಯಕ್ತಿ ಸೋಲುತ್ತದೆ. ಹಾಗಾಗಿ ಕಲಾವಿದನೊಬ್ಬನ ಆಸಕ್ತಿ, ಜೀವನಕ್ರಮ, ಅನುಭವ, ಅವನು ಬದುಕಿದ ಸಾಮಾಜಿಕ ಸಂದರ್ಭ, ಕುಟುಂಬ, ಸಮುದಾಯ ಹೀಗೆ ಅವನನ್ನು ಒಳಗೊಂಡ ಏನೆಲ್ಲಾ ಅಂಶಗಳು ಇರುತ್ತವೆಯೇ ಅವೆಲ್ಲಾ ಒಬ್ಬ ಕಲಾವಿದ ಪ್ರಕಟ ಪಡಿಸುವ ಅಭಿನಯವನ್ನು ಕುರಿತು ಚರ್ಚಿಸುವಾಗ ಪರಿಕರಗಳಂತೆ ನಿಲ್ಲುತ್ತವೆ. ಈ ಕ್ರಮದಲ್ಲೇ ಕಲೆಯನ್ನೋ ಕಲಾವಿದನನ್ನೋ ಅಥವಾ ಅಭಿನಯವನ್ನೋ ಸಾಂಸ್ಕೃತಿಕ ಅಧ್ಯಯನದಲ್ಲಿ ಗಮನಿಸುವುದು ಸರಿಯಾದ ಕ್ರಮ.
ಕನ್ನಡ ಜನಪದ ಕಲಾ ಪ್ರಕಾರಗಳಿರಬಹುದು, ಕನ್ನಡ ರಂಗಭೂಮಿಯಿರಬಹುದು ಅಥವಾ ಕನ್ನಡ ಚಿತ್ರರಂಗ ಇರಬಹುದು ಇವೆಲ್ಲವವೂ ಕನ್ನಡ ಸಂಸ್ಕೃತಿಯ ಭಾಗವೇ ಆಗಿರುವುದರಿಂದ ಅಲ್ಲಿನ ಜೀವದ್ರವ್ಯ ಆಗಿರುವ ಅಭಿನಯವನ್ನು ಈ ಮೇಲೆ ಹೇಳಿದ ಅಧ್ಯಯನದ ಕ್ರಮಗಳ ಹಿನ್ನೆಲೆಯಲ್ಲಿ ಚರ್ಚಿಸಲು ಅನೇಕ ಸಾಧ್ಯತೆಗಳಿವೆ. ಅಭಿನಯವನ್ನು ಸಾಹಿತ್ಯ ಅಧ್ಯಯನದ ವ್ಯಾಪ್ತಿಯಲ್ಲಿ ತರಲು ಸಾಧ್ಯವಿಲ್ಲ ಅನ್ನುವ ಸಂಶೋಧನೆಯಲ್ಲಿ ಶುದ್ಧತೆಯ ದಾರಿ ತಪ್ಪುತ್ತದೆ ಅನ್ನುವುದು ಕೆಲವರ ವಾದ. ಹಾಗೂ ಮುದ್ರಿತ ಟೆಕ್ಸ್ಟ್ ಗಳನ್ನು ಮಾತ್ರ ಸಾಹಿತ್ಯ ಅಧ್ಯಯನದೊಳಗೆ ಮಾಡಬೇಕೆಂಬುದು ಒಂದಷ್ಟು ಜನರ ಅಭಿಪ್ರಾಯ. ಇನ್ನೂ ಅಭಿನಯ ಅನ್ನುವುದು ಈ ಸ್ಕೇಲ್ ಒಳಗೆ ಬರುವುದಿಲ್ಲ ಅನ್ನುವವರು ಅನೇಕರಿದ್ದಾರೆ. ಆದರೆ ಸಾಹಿತ್ಯ ಸಂಸ್ಕೃತಿ ಸಮಾಜದ ಭಾಗವೇ ಆಗಿರುವುದರಿಂದ ಅಭಿನಯವನ್ನು ಕುರಿತು ಸಂಸ್ಕೃತಿ ಅಧ್ಯಯನ ಮಾಡುವುದು ಈ ಹೊತ್ತಿನ ಅಗತ್ಯ ಮತ್ತು ತುರ್ತು ಕೂಡ. ಮೇಲ್ನೋಟಕ್ಕೆ ಇದು ಒಂದು ಸಾಮಾಜಿಕ ಸಂಶೋಧನೆಯಂತೆ ಕಂಡರೂ ಮೂಲದಲ್ಲಿ ನಮ್ಮ  ಸಂಸ್ಕೃತಿಯನ್ನು ಬಲಪಡಿಸುತ್ತಿರುತ್ತದೆ. ಉದಾಹರಣೆಗೆ ಬೆಟ್ಟವೊಂದಕ್ಕೆ ಕ್ಯಾಮೆರಾ ಫೋಕಸ್ ಮಾಡಿ ಅದರಲ್ಲಿನ ಮರವೊಂದಕ್ಕೆ ಜೂಮ್ ಮಾಡುತ್ತಾ ಮಾಡುತ್ತಾ ಕೊಂಬೆ ಅದರ ಮೇಲಿನ ಗಿಳಿಯೊಂದಕ್ಕೆ ಕ್ಲೋಸ್ ಜೂಮ್ ಮಾಡಿದಂತೆ. ಸಂಸ್ಕೃತಿಯೂ ಹೀಗೆ ಪ್ರಧಾನದಿಂದ ಹಲವು ಸೂಕ್ಷ್ಮ ಮೂಲಕ್ಕೆ ಹೊರಳುತ್ತಲೇ ಮತ್ತೆ ಅದೇ ಮೂಲದಿಂದ ಪ್ರಧಾನ ನೆಲೆಯನ್ನು ಕಟ್ಟಿಕೊಳ್ಳುತ್ತದೆ.
ಯಾವುದೇ ಕಲಾವಿದನೊಬ್ಬನ ಮಾತನಾಡುವ ಭಾಷೆ, ಜೀವನ ವಿಧಾನ, ಕೌಟುಂಬಿಕ ಹಿನ್ನೆಲೆ ಮತ್ತು ಸಾಮುದಾಯಿಕ ಹಿನ್ನೆಲೆಗಳು ಆ ಕಲಾವಿದನ ಅಭಿನಯದ ಅಂತಸತ್ವದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಸೇರಿಕೊಂಡಿರುತ್ತದೆ. ಸಿನೆಮಾ ಅಥವಾ ರಂಗಭೂಮಿಯಾ ಹಿನ್ನೆಲೆಯಲ್ಲಿ ನಿರ್ದೇಶಕನೊಬ್ಬನ ದೃಷ್ಟಿ ಅಥವಾ  ಕಥಾವಸ್ತುವಿನ ದರ್ಶನಕ್ಕೆ ಅನುಗುಣವಾಗಿ ಕಲಾವಿದ ಅಭಿನಯಿಸುವುದು ಸರಿಯಾದ ಕ್ರಮವಾದರೂ ಕಲಾವಿದ ತನ್ನ ವೃತ್ತಿಪರ ಅನುಭವ ಮತ್ತು ಜೀವನಾನುಭವದ ನೆಲೆಯಲ್ಲಿ  ತನ್ನ ಕಾಣ್ಕೆಯನ್ನು ಕೊಡಲು ನಿಜವಾದ ಕಲಾವಿದ ಪ್ರಯತ್ನಿಸುತ್ತಲೇ ಇರುತ್ತಾನೆ. ಇದು ತಾಂತ್ರಿಕವಾಗಿ ಅಭಿನಯಿಸುವುದನ್ನು ತಪ್ಪಿಸುತ್ತದೆ. ಹೀಗಾದಾಗ ಹೇಳಬೇಕಾದ ಅಥವಾ ತೋರಬೇಕಾದ ಕಲಾಕೃತಿ ಉಪಯೋಗಗೊಳ್ಳುತ್ತದೆ ಇಲ್ಲವೇ ಪಕ್ಕಕ್ಕೆ ಸರಿದುಬಿಡುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ರಂಗಭೂಮಿ ಮತ್ತು ಸಿನಿಮಾದ ಹಿನ್ನೆಲೆಯಿಂದ ಬಂದ ಉಮಾಶ್ರೀ ಅವರನ್ನು ಕೂಡ ಖಂಡಿತಾ ಆದ ಬಹುದು

‍ಲೇಖಕರು G

September 13, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

7 ಪ್ರತಿಕ್ರಿಯೆಗಳು

  1. ದ್ಯಾವನೂರು ಮಂಜುನಾಥ್

    ಲೇಖನ ಚನ್ನಾಗಿದೆ

    ಪ್ರತಿಕ್ರಿಯೆ
  2. M NARAYANAPPA

    ಉಮಾಕ್ಕನ ಸಾಹಿತ್ಯಾಸಕ್ತಿ ಅಚ್ಚರಿ ತಂದಿತು.ಇತರ ನಟ ವರ್ಗಕ್ಕೆ ಮಾದರಿ.ಸಾಹಿತ್ಯ ಸಿನಿಮಾದ ಬಾಂಧವ್ಯ ಮತ್ತಷ್ಟು ವೃದ್ದಿಸಲಿ

    ಪ್ರತಿಕ್ರಿಯೆ
  3. Dr venkatesha.T.S

    ಕಲೆಯನ್ನೇ ಉಸಿರಾಗಿಸಿಕೊಂಡಿರುವ ನಿಜವಾದ ಕಲಾವಿದೆ ಉಮಾಶ್ರಿಯವರ ಬಹುಮುಖಿ ವ್ಯಕ್ತಿತ್ವವನ್ನು ಪರಿಚಯಿಸುವ ಈ ಲೇಖನ ಉತ್ತತಮವಾಗಿದೆ…..ಬದುಕಿನ ಅನೇಕ ನೋವು,ನಲಿವುಗಳನ್ನು ಸಮರ್ಥವಾಗಿ ಎದುರಿಸಿ ಎಲ್ಲಾ ದಮನಿತ ಸ್ತ್ರೀಯರ ಪ್ರತೀಕದಂತಿರುವ ಉಮಾಶ್ರೀ ಅಮ್ಮನವರು ನಿಜಕ್ಕೂ ಅನುಕರಣೀಯರು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: