ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ಆರ್ ವೆಂಕಟೇಶ್ ಕವಿತೆ- ಕತ್ತಲಲ್ಲಿ ಚಂದ್ರ…

ಪಿ ಆರ್ ವೆಂಕಟೇಶ್

ಪ್ರತಿ ರಾತ್ರಿಯ ಮುಗಿಲ ಕೌಳದಲ್ಲಿ
ಚಂದ್ರ ಕಣ್ಣೀರ ಹನಿಯಂತೆ ಕಾಣುತ್ತಾನೆ
ನೆಲದ ಕತ್ತಲ ಧೂಳ ಹನಿತುಂಬ ಬಿಂಬಿಸಿ.

ಕನಸ ಶವಹಾಸಿಗೆ ಅಪ್ಪಿದ ಮನಸು ನಿದ್ದೆಯೊದ್ದು
ತಡಕಾಡಿದೆ.
ಕಣ್ಣಹನಿ ವದ್ದೆಗೆ ತಣ್ಣಗಾದ ತೆಲೆದಿಂಬಿಗೆ ಬೆಳದಿಂಗಳ ಬಿಸಿಯುಸಿರು.

ನೆಲದ ಬಿರುಕುಗಳೆಲ್ಲ ಒಟ್ಟಾಗಿ ಮುಗಿಲಿಗೆ ರಾಚಿ
ಅರ್ಥವಾಗದ ಚಿತ್ರ ಕೊರೆದಿವೆ
ಎಲ್ಲ ವಿಕೃತಿಗಳ ಹೊತ್ತು.

ಅರಳುವ ಗುಲಾಬಿಯ ದಳಗಳ ಒಂದೊಂದೇ ಉರುಳಿವೆ
ಉಳಿದ ಮುಳ್ಳು ಬೆಳದಿಂಗಳ ತಂಪಿಗೆ ಗಾಯಗಳ ಕೊರೆದಿದೆ.

ಎಲ್ಲಿಯ ಕರುಣೆ ಹೇಳಿ ಕರುಳಿಲ್ಲದ ಬಳ್ಳಿಗೆ
ಬೆವರ ಬಾಂಡಲೆಯೊಳಗೆ ಬಿಟ್ಟ ಬೇರುಗಳು
ಬೆಂಕಿಯ ಅಲೆಯಾದಾಗ.
ಕಾಡ ಹಸಿವು ನಾಡ ಹಸಿವಾಗಿ
ಹುಲಿ ಸಿಂಹ ಚಿರತೆಗಳು ಊರ ಸೇರಿರುವಾಗ.

ಫೋರ್ಡ ಸುಜುಕಿ ಹೊಂಡಾಗಳ
ಘರ್ಜನೆ ತುಂಬಿರುವ ಹಾದಿಯಲಿ
ಮನುಷ್ಯರ ಮಾತೇಲ್ಲಿ, ಹಾಡೆಲ್ಲಿ, ನೆಗೆದ ನೆಗೆಯೆಲ್ಲಿ.

ನನ್ನ ಬೆವರು ಹೊತ್ತ ಟ್ರಿಪ್ಪರ್ ಲಾರಿಗಳ ಜಿಗಿದೋಟ
ಬದುಕಿನ ಕನಸ ಮೂಳೆಗಳನೆಲ್ಲ ನುಚ್ಚನೂರಾಗಿಸಿ
ಎತ್ತಲೋ ಸುರುವಿ ಮೈಕೊಡವಿ ನಗುತ್ತವೆ.

ನಿಂತಲ್ಲೇ ದಿಟ್ಟಿಸುತ್ತೇನೆ ಬೆವರು ಹೆತ್ತ ಬೆಟ್ಟವನ್ನು
ನನ್ನಿಂದ ದೂರ ಓಡುವ ಅದರಾಚೆಯ ಬೆಳಕನ್ನು.

ದಾರಿಯ ಮೈಗೆ ಚಕ್ರಗಳು ಕೊರೆದ ಗಾಯಗಳು
ಕಣ್ಣಲ್ಲಿ ಹೆಪ್ಪಾಗುತ್ತವೆ ಕೆಂಡವರಳಿಸಿ.
ಮುಗಿಲ ಕತ್ತಲಲ್ಲಿ ಚಂದ್ರ ಕಣ್ಣೀರ ಹನಿಯಾಗುತ್ತಾನೆ.

‍ಲೇಖಕರು Admin

7 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading