ಶೀಲಾ ಪೈ ಕಥೆ- ಡಿ ಕಪ್…

ಶೀಲಾ ಪೈ

ಕಪಾಟಿನಲ್ಲಿ ಬಟ್ಟೆಗಳನ್ನು ಜೋಡಿಸಿಡುತ್ತಿದ್ದಳು ವಿನಯ. ದೇವಿ ಒಂದೊಂದೇ ಬಟ್ಟೆಯನ್ನು ಅಚ್ಚುಕಟ್ಟಾಗಿ ಮಡಿಸಿಕೊಡುತ್ತ ಅವಳಿಗೆ ಸಹಾಯ ಮಾಡುತ್ತಿದ್ದಳು. ಕುರ್ತಾ, ಸಲ್ವಾರ್, ಸೀರೆಗಳು, ರವಿಕೆಗಳು ಎಂದೆಲ್ಲ ವಿಂಗಡಿಸಿ ಅಟ್ಟಿ ಮಾಡಿ ನೀಟಾಗಿ ಜೋಡಿಸುವಾಗ ಕಣ್ಣಿಗೆ ಬಿದ್ದದ್ದು ಸುಮಾರು ಐವತ್ತು, ಅರವತ್ತರಷ್ಟು ಸಂಖ್ಯೆಯಲ್ಲಿದ್ದ ಚಂದದ ದುಪಟ್ಟಾಗಳು.

ದೇವಿ “ಅರೆ, ಎಷ್ಟೊಂದು ದುಪಟ್ಟ ಇದೆಯಕ್ಕಾ ನಿಮ್ಹತ್ರ ? ಒಂದಕ್ಕಿಂತ ಒಂದು ಚಂದ .. “ ಕಣ್ಣರಳಿಸಿ ದುಪಟ್ಟಾದ ರಾಶಿಯ ಮೇಲೆ ಕೈಯಿಟ್ಟು ಕೇಳಿದ್ದಳು.

“ಹ್ಞೂ, ದುಪಟ್ಟಾ ಇಲ್ದೇ ನನ್ ಜೀವ್ನ ನಡೆಯೋದೇ ಇಲ್ವಲ್ಲಾ ?” ನಸುಗಪ್ಪು ಬಣ್ಣದ ಲಕ್ಷಣವಾದ ಮುಖವನ್ನು ಕ್ಷಣಾರ್ಧದಲ್ಲಿ ಗಂಟಿಕ್ಕುತ್ತ ಉತ್ತರಿಸಿದ ವಿನಯಳ ದನಿಯಲ್ಲಿ ಅಸಹನೆ ನುಸುಳಿತ್ತು. ದೇವಿ ಮುಂದೆ ಮಾತಾಡದೆ ಕೈ ಚುರುಕಾಗಿಸಿದಳು. ವಿನಯ ಅವಳನ್ನೇ ಒಂದು ಘಳಿಗೆ ನೋಡಿದಳು. ತೆಳ್ಳಗೆ ಕಡ್ಡಿಯಂತಹ ದೇಹವುಳ್ಳ ಚುರುಕಿನ ಹೆಂಗಸು, ಎರಡು ಮಕ್ಕಳತಾಯಿ ಎಂದು ಹೇಳಲಸಾಧ್ಯ. ಮನೆಕೆಲಸ ಅಡಿಗೆ ಎಲ್ಲದರಲ್ಲೂ ಚುರುಕು. ಬೆಳಿಗ್ಗೆ ಒಮ್ಮೆ, ಸಂಜೆ ಮತ್ತೊಮ್ಮೆ ಬಂದು ಎಲ್ಲ ಕೆಲಸಗಳನ್ನು ಮಾಡಿಕೊಡುತ್ತಿದ್ದಳು. ಮೈಮೇಲೆ ಒಂದು ಚೂರೂ ಮಾಂಸ ಇಲ್ಲದ ಅವಳನ್ನು ನೋಡಿ ಇವಳಿಗೇನು ಗೊತ್ತು ನನ್ನ ಕಷ್ಟ ಎಂದು ಮನದಲ್ಲೇ ಅಂದುಕೊಂಡಳು ವಿನಯ. ದುಪಟ್ಟದ ಬಗ್ಗೆ ದೇವಿಯ ಪ್ರಶ್ನೆ ಕಿವಿಗೆ ಬಿದ್ದಾಗಲೇ ವಿನಯಳ ಮನ ಶಾಲಾದಿನಗಳತ್ತ ಜಾರಿತ್ತು.

ಥ್ರೋ ಬಾಲ್, ವಾಲಿಬಾಲ್ ಆಟಗಳೆಂದರೆ ಪಂಚಪ್ರಾಣ ಆ ದಿನಗಳಲ್ಲಿ. ಶಾಲಾ ಯುನಿಫಾರ್ಮ್ ಸ್ಕರ್ಟ್, ಅರೆತೋಳಿನ ಕೈ, ಕಾಲರಿದ್ದ ಷರಟು ಹಾಕಿಕೊಂಡು ಶಾಲೆಯ ಕೋರ್ಟಿನಲ್ಲಿ ಆಡುವಾಗಿನ ಪ್ರಪಂಚವೇ ಬೇರೆ. ಸುತ್ತು ನಿಂತು ಹುಡುಗರು ನೋಡುತ್ತಿದ್ದರು. ಕೆಲವು ಕಿಡಿಗೇಡಿ ಹುಡುಗರು ಇವಳು ಹಾರಿ ಬಾಲು ಹಿಡಿಯುವಾಗ ತಮ್ಮಲ್ಲೇ ಕುಶಾಲು ಮಾತಾಡಿ ಕಿಸಕ್ಕನೇ ನಗುವುದಿತ್ತು. ಆ ವಯಸ್ಸಿನಲ್ಲಿ ಅದೆಲ್ಲ ಲೆಕ್ಕವೇ? ವಿನಯಳಿಗೆ ಲೆಕ್ಕಕ್ಕಿಲ್ಲದ ಮಾತುಗಳು ಅಲ್ಲೇ ಇದ್ದ ಅಕ್ಕನ ಮೂಲಕ ಅಮ್ಮನ ಕಿವಿ ಮುಟ್ಟಿದ್ದವು. ಮೂರು ಹೆಣ್ಣು ಮಕ್ಕಳ ತಾಯಿ ಗಾಭರಿಯಾಗಿ ಇನ್ನು ಮುಂದೆ ಆಡಲು ಹೋಗಬಾರದೆಂದು ತಾಕೀತು ಮಾಡಿದ್ದರು. ಯಾಕೆ ಏನು ಎಂದು ಸ್ಪಷ್ಟವಾಗಿ ಅರ್ಥವಾಗುವ ವಯಸ್ಸಲ್ಲ ಅದು.

ಉದ್ದನೆಯ ಎರಡು ಜಡೆಯನ್ನು ಹೆಣೆದು ಮುಂದೆ ಹಾಕಿಕೊಂಡರೆ ತುಳುವಿನಲ್ಲಿ “ಫುಚ್ಛೆ ಪೇರ್ ಪರ್ ಪುಂಡು” ಎಂದು ಕೇಳುವಂತೆಯೇ ಹೇಳುವ ಹುಡುಗರ ಸಂಖ್ಯೆ ಕಡಿಮೆ ಇರಲಿಲ್ಲ. ಇದು ತನ್ನ ಅನುಭವ ಮಾತ್ರವೋ ಎಲ್ಲ ಹುಡುಗಿಯರದೂ ಇದೇ ಕತೆಯೋ ಯಾರನ್ನು ಕೇಳುವುದು?

ಏಳನೆಯ ತರಗತಿಯಲ್ಲಿದ್ದಾಗ ಒಂದು ದಿನ ಪಿಟಿ ಮೇಷ್ಟ್ರು ಡೆಪ್ಯುಟೇಷನ್ ಮೇಲೆ ತರಗತಿಗೆ ಬಂದಿದ್ದರು. ಗುಂಗುರು ಕೂದಲಿನ, ಬೆಳ್ಳಗಿನ ಮೇಷ್ಟ್ರ ಹೆಸರು ನೆನಪಿಲ್ಲ ಮಾಡಿದ ಹರಕತ್ತು ಮಾತ್ರ ಮರೆಯಲಾಗದ್ದು. ಮಗ್ಗಿ ಬರೆಯಲು ಕೊಟ್ಟಿದ್ದರು. ತಲೆ ಬಗ್ಗಿಸಿ ಎಡ ಕೈಯನ್ನು ಪುಸ್ತಕದ ಸುತ್ತು ಇಟ್ಟು ಬರೆಯುತ್ತಿರುವಾಗ ಶತಪಥ ಸುತ್ತುತ್ತಿದ್ದ ಮೇಷ್ಟ್ರು ಎಡ ಕಂಕುಳದ ಬದಿಯಿಂದ ಕೈಹಾಕಿ ಎಡ ಮೊಲೆಯನ್ನು ನೇವರಿಸಿ ತಕ್ಷಣ ಬೆನ್ನು ತಟ್ಟಿ “ಬರೀತಾ ಇದ್ದಿಯ ಗುಡ್ ಗುಡ್” ಎಂದಾಗ ಏನಾಯಿತೆಂದು ತಿಳಿಯದೆ ಪೂರಾ ಅಯೋಮಯವಾಗಿತ್ತು. ಬೇಕೆಂದೇ ಮಾಡಿದ್ದೆ ? ಅಕಸ್ಮಾತ್ತಾಗಿ ನಡೆದಿದ್ದೆ? ಯಾರನ್ನು ಕೇಳುವುದು? ಮನೆಯಲ್ಲಿ ಬಾಯಿ ಬಿಟ್ಟಿರಲಿಲ್ಲ. ಅಮ್ಮ ತನ್ನನ್ನೇ ಬೈದರೆ? ಮನದಾಳಕ್ಕಿಳಿದ ಘಟನೆ ಯಾಕೀಗ ನೆನಪಾಗುತ್ತಿದೆ ? ಅಮ್ಮನಿಗೆ ಆಗೆಲ್ಲ ತನ್ನ ಮೇಲೆ ಸಿಡಿಮಿಡಿ. “ಇಷ್ಟು ಬೇಗ ಬೆಳೀತಾ ಇದ್ಯಲ್ಲ, ಏನವಸರ ನಿಂಗೆ ? ಕಣ್ಣಿಗೇ ಹೋಗ್ತಾ ಇದ್ದೀ …“ ಅಂದಾಗ ಕಣ್ಣಲ್ಲಿ ನೀರು ತುಂಬಿತ್ತು . ಈ ಅಮ್ಮ ಯಾಕೆ ಹೀಗೆ ? ಸುಮ್ಮನೆ ಜೋರು ಮಾಡುವುದು ? ಅಮ್ಮನಲ್ಲಿ ಏನೂ ಹೇಳದಿರುವುದೇ ವಾಸಿ ಎನ್ನುವ ತೀರ್ಮಾನಕ್ಕೆ ಬಂದ ವಿನಯ ಮಾತಾಡುವುದೇ ಕಮ್ಮಿ ಆಗಿತ್ತು. ತಪ್ಪಿತಸ್ಥ ಭಾವ, ಸಂಕೋಚ, ತುಟಿ ಎರಡು ಮಾಡದೇ ಇರುವುದು ಅಭ್ಯಾಸವಾಗಿತ್ತು. ಶಾಲೆಯಲ್ಲಿ ಆಟವಾಡುವುದು ನಿಂತೇ ಹೋಗಿತ್ತು. ಆ ದಿನಗಳಲ್ಲೇ ಅಲ್ಲವೇ ಅಮ್ಮ ಮನೆಯಲ್ಲೇ ಹೊಲಿದ ತೋಳಿಲ್ಲದ ರವಿಕೆಯಂತಹ ಎದುರು ಗುಬ್ಬಿಯಿದ್ದ ಒಳಉಡುಪನ್ನು ಹಾಕಿಸುವ ಅಭ್ಯಾಸ ಶುರುಮಾಡಿದ್ದು ? ಅಬ್ಬಾ ನೆನೆದರೇ ಭಯವಾಗುತ್ತದೆ . ಅದನ್ನು ಹಾಕಿಕೊಂಡರೆ ಸಮನಾಗಿ ಉಸಿರಾಡಲೂ ಅಗುತ್ತಿರಲಿಲ್ಲ. ಎದೆಯನ್ನು ಚಪ್ಪಟೆಯಾಗಿಸುವ ಕೆಲಸವನ್ನು ಮಾತ್ರ ಬಹಳ ಚೆನ್ನಾಗಿ ಮಾಡುತ್ತಿತ್ತು ಅದು . ಎರಡನೇ ಅಕ್ಕ ಧೈರ್ಯವಂತೆ ಕೆಲವು ತಿಂಗಳುಗಳ ನಂತರ ಮುಷ್ಕರ ಹೂಡಿದ್ದಳು “ಉಸ್ರು ಕಟ್ಟುತ್ತೆ ಅಮ್ಮ ನಾ ಹಾಕಲ್ಲ”. ಮುಂದೆಂದೋ ಸುಧೀರನೊಟ್ಟಿಗೆ ಟೈಟಾನಿಕ್ ನಲ್ಲಿ ಕೇಟ್ ವಿನ್ಸ್ಲೆಟ್ ಗೆ ಕೋರ್ಸೆಟ್ (corset) ಬಿಗಿಯುವ ದೃಶ್ಯ ನೋಡುವಾಗ ಫಕ್ಕನೆ ಅಮ್ಮನ ನೆನಪಾಗಿತ್ತು. ಇದ್ದದ್ದನ್ನು ಇಲ್ಲದಿರುವಂತೆ ಕಾಣಿಸಲು ಪ್ರಯತ್ನಿಸುವ ಅಮ್ಮಂದಿರ ಹುನ್ನಾರವಿದು ಎಂದೆನಿಸಿತ್ತು. ಕಾಲೇಜಿಗೆ ಕಾಲಿಟ್ಟ ಮೇಲೆ ದುಪಟ್ಟ ಎಡೆಬಿಡದ ಸಂಗಾತಿಯಾಗಿತ್ತು . ಶಾಲೆಯಲ್ಲಿರುವಷ್ಟು ಕಾಲ ಸ್ಕರ್ಟು ಬ್ಲೌಸ್ ಯೂನಿಫಾರ್ಮ್ ಇದ್ದಾಗ ಹುಡುಗರ, ಗಂಡಸರ ದೃಷ್ಟಿ ಎದೆಯ ಮೇಲೆ ನಾಟಿರುವುದರ ಅರಿವಾದರೂ ಏನೂ ಮಾಡಲಾಗದೇ ತಳಮಳಿಸಿದ ಹುಡುಗಿಯ ಸೂಕ್ಷ್ಮ ಮನ ಕಾಲೇಜಿಗೆ ಕಾಲಿಟ್ಟೊಡನೆ ಸಲ್ವಾರ್ ಕಮೀಜ್ ದುಪಟ್ಟಾದ ಮೊರೆಹೋಗಿ ನಿರಾಳವಾಗಿತ್ತು. ಅಮ್ಮನ ಗೆಳತಿಯರು, ನೆರೆಮನೆಯ ಆಂಟಿಗಳು “ವಿನಯ ಎಷ್ಟು ಡೀಸೆಂಟ್ ಆಗಿ ಡ್ರೆಸ್ ಮಾಡ್ತಾಳಲ್ವಾ” ಎಂದಾಗ ಅಮ್ಮನ ಮುಖದಲ್ಲಿ ಹೆಮ್ಮೆ ಕಾಣಿಸುವಾಗ ಒಳಗೊಳಗೇ ಸಿಟ್ಟು ಉಕ್ಕುತ್ತಿತ್ತು. ಮನೆಯಿಂದ ಹೊರಬೀಳುವಾಗ ಪುಸ್ತಕಗಳನ್ನು ಎದೆಗವಚಿಕೊಂಡು ತಲೆ ತಗ್ಗಿಸಿ ಅತ್ತಿತ್ತ ನೋಡದೆ ನಡೆಯುವ ಅಭ್ಯಾಸ ಶುರುವಾದದ್ದು ಯಾವತ್ತೆಂದೇ ಗೊತ್ತಾಗಿರಲಿಲ್ಲ.

ದೊಡ್ಡಕ್ಕನ ಮದುವೆ ಸಮಯದಲ್ಲಿ ಮನೆ ತುಂಬಾ ದೊಡ್ಡಮ್ಮನ ಚಿಕ್ಕಮ್ಮನ ಹೆಣ್ಣುಮಕ್ಕಳೊಂದಿಗೆ ಸೇರಿ ದೊಡ್ಡ ಗುಂಪು ಕಟ್ಟಿಕೊಂಡು ಓಡಾಡಿದ್ದರು. ದೊಡ್ಡಮ್ಮನ ಮಗಳು ಅನಿತಕ್ಕ ಎಲ್ಲರಿಗೂ ಲೀಡರ್. ಹಿರಿಯರ ಕಣ್ಣು ತಪ್ಪಿಸಿ ರಾತ್ರಿಯ ಹೊತ್ತು ಯಾವ್ಯಾವುದೋ ಆಟಗಳು, ಮುಂಬಯಿಯಿಂದ ಬಂದವಳು, ತಾವೆಲ್ಲ ಬಾಯಿಬಿಟ್ಟುಕೊಂಡು ಅವಳ ಮಾತು ಕೇಳುತ್ತಿದ್ದೆವು . ಅವತ್ತು ಟ್ರೂತ್ ಅಂಡ್ ಡೇರ್ ಆಡುವಾಗ ವಿನಯಳ ಬ್ರಾ ಸೈಜ್ ಕೇಳಿದ್ದಳಲ್ಲವೇ. ಎದೆ ಧಸಕ್ಕೆಂದಿತ್ತು. ಸಾಹಸ ಮಾಡಿ “ಥರ್ಟಿ ಸಿಕ್ಸ್” ಎಂದು ಘಟ್ಟಿ ಶುರುಮಾಡಿದವಳು “ಡಿ” ಎನ್ನುವ ಹೊತ್ತಿಗೆ ದನಿ ಹೂತು ಹೋಗಿ ಜೀವ ಹಿಡಿಯಾಗಿತ್ತು . ಹೋ ಎಂದು ಎಲ್ಲರೂ ನಕ್ಕು ಹುಯಿಲೆಬ್ಬಿಸಿದ್ದರು . ಅವತ್ತೇ ಗೊತ್ತಾಗಿದ್ದು ಉಳಿದವರ ಸೈಜು ಬಿ ಅಥವಾ ಸಿ ಎಂದು. ಮನ ಮುದುಡಿತ್ತು. ಡಿಗ್ರಿ ಮುಗಿಸಿದ ಕೂಡಲೇ ಮದುವೆಯಾಗಿತ್ತು. ಸುಧೀರ ಕಸ್ಟಮ್ಸ್ ನಲ್ಲಿ ಆಫೀಸರ್, ಇಬ್ಬರೂ ಚೆನ್ನಾಗಿ ಹೊಂದಿಕೊಂಡಿದ್ದರು. ಸುನಿಲ್ ಹುಟ್ಟಿದ್ದ, ಮನೆಯಲ್ಲೇ ಆರಾಮಾಗಿ ಇದ್ದುಬಿಟ್ಟಿದ್ದಳು ವಿನಯ. ಉಡುಪಿಯ ಪಳೆಕಟ್ಟೆಯಿಂದ ಬಂದವಳಿಗೆ ಬೆಂಗಳೂರು ಹಿತವಾಗಿತ್ತು.

ನೆನಪುಗಳೇ ಹೀಗೆ ಒಮ್ಮೆ ಶುರುವಾಯಿತೆಂದರೆ ಮೊಬೈಲು ಸ್ಕ್ರಾಲ್ ಮಾಡಿದ ಹಾಗೆಯೇ ನಿಯಂತ್ರಣಕ್ಕೇ ಬಾರದು.

ಇತ್ತೀಚೆಗೆ ನಾಲ್ಕಾರು ವರ್ಷಗಳ ಹಿಂದೆ ಸುನಿಲ್ ನಾಲ್ಕನೆಯ ತರಗತಿಯಲ್ಲಿರುವಾಗ ಶಾಲೆಯಿಂದ ಫೋನು ಬಂದಿತ್ತು . “ಬಾಸ್ಕೆಟ್ ಬಾಲ್ ಆಡುವಾಗ ಬಿದ್ದು ಕೈಗೆ ಏಟಾಗಿದೆ, ತಕ್ಷಣ ಬನ್ನಿ”. ಮನೆಯಲ್ಲಿ ಕೆಲಸ ಮಾಡಿಕೊಳ್ಳುತ್ತಿದ್ದವಳು ಪರ್ಸು, ಮೊಬೈಲ್ ಹಿಡಕೊಂಡು ಓಡಿದ್ದಳು. ಹತ್ತುನಿಮಿಷದ ದಾರಿ ಆಟೋದಲ್ಲಿ, ಮಗೂಗೇನಾಯಿತೋ ಎಂದು ಹೆದರುತ್ತಲೇ ಹೋಗಿ ನೋಡಿದರೆ ಇವಳನ್ನು ನೋಡುತ್ತಲೇ ಹೋ ಎಂದು ಅಳು ಜೋರಾಗಿಸಿದ್ದ. ಕೈಗೆ ಅಡಿಕೋಲು ಇಟ್ಟು ಕಟ್ಟಿದ್ದರು, ಕೂಡಲೇ ಅಪೋಲೋ ಗೆ ಹೋಗಿ ಎಕ್ಸ್ ರೇ ತೆಗೆಸಿ ವೈದ್ಯರಿಗೆ ತೋರಿಸಿದ್ದಳು. ಏನೂ ಆಗಿಲ್ಲ ಒಂದು ವಾರ ರೆಸ್ಟ್ ಕೊಡಿ ಎಂದು ಕ್ರೆಪ್ ಬ್ಯಾಂಡೇಜ್ ಹಾಕಿ ಕಳಿಸಿದ್ದರು . ಮನೆಯ ಹತ್ತಿರ ಬರುತ್ತಲೇ ನೆರೆಮನೆಯ ನೀರಜಾ ಸಿಕ್ಕಿದ್ದರು. ಇವಳನ್ನು ಮೇಲಿಂದ ಕೆಳಗೆ ನೋಡಿ “ಏನೂ ಇವತ್ತು ದುಪಟ್ಟಾ ಹಾಕಿಲ್ವ? ಯಾವಾಗ್ಲೂ ಹಾಕಿರ್ತೀರಲ್ಲ ?” ಎಂದು ಕೇಳಿದಾಗ ರಪ್ಪೆಂದು ಕೆನ್ನೆಗೆ ಬಾರಿಸುವಷ್ಟು ರೋಷ ಉಕ್ಕಿತ್ತು. ಡ್ರೈವಿಂಗ್ ಬರದವಳು ನಡಕೊಂಡು ಹೋಗಿ ಆಟೋ ಹಿಡಿದು ಶಾಲೆ, ಆಸ್ಪತ್ರೆ ತಿರುಗಾಡಿ ಸದ್ಯ ಏನೂ ಆಗಿಲ್ಲವಲ್ಲ ಎನ್ನುವ ಸಮಾಧಾನದಿಂದ ಮನೆಗೆ ಬಂದರೆ ಇಂತಹ ಪ್ರಶ್ನೆ! “ಇವ್ನು ಆಡೋವಾಗ ಬಿದ್ದು ಪೆಟ್ಟಾಯ್ತು, ಅರ್ಜೆಂಟಾಗಿ ಸ್ಕೂಲಿಗೆ ಹೋಗ್ಬಂದೆ” ಮೃದುವಾದ ಉತ್ತರ ಹೊರಬಂದಿತ್ತು. ಮನೆ ಬಾಗಿಲು ತೆರೆದು ಒಳಬಂದವಳಿಗೆ ಅದೇ ಚುಚ್ಚುತ್ತಿತ್ತು. “ಇಲ್ಲ ಹಾಕಿಲ್ಲ ನಿಂಗೇನು?” ಅಂತ ಯಾಕೆ ತಾನು ಕೇಳಿಲ್ಲ, ಕನಿಷ್ಠ ಪಕ್ಷ ಉತ್ತರ ಕೊಡದೆ ಇರಬಹುದಿತ್ತು, ಶಾಲಾ ಹುಡುಗಿಯಂತೆ ಸಮಜಾಯಿಷಿ ಕೊಟ್ಟದ್ಯಾಕೆ ಅಂತೆಲ್ಲ ಹಳಹಳಿಸುತ್ತ, ತನ್ನ ಮೇಲೆಯೇ ಸಿಟ್ಟು ಮಾಡಿಕೊಳ್ಳುತ್ತ ದಿನ ಕಳೆದಿತ್ತಲ್ಲವೇ?

“ಅಕ್ಕಾ ತರಕಾರಿ ಯಾವುದು ಕಟ್ ಮಾಡ್ಲಿ ?“ ಅಂತ ಕೇಳಿದ ದೇವಿಯ ಹಿಂದೆ ವಿನಯ ಅಡಿಗೆ ಮನೆಗೆ ನಡೆದಳು. ಯಾರೋ ಏನೋ ಹೇಳಿದ್ದೆಲ್ಲ ಯಾಕೆ ನೆನಪಿಟ್ಕೋಬೇಕು ಛೆ ಅಂತ ತನ್ನನ್ನೇ ಬೈದುಕೊಂಡ್ರೂ ಮತ್ತೆ ಇನ್ಯಾವಾಗಲೋ ನೆನಪಾಗೆ ಆಗುತ್ತೆ ಇಂಥದೆಲ್ಲ ಅಂತ ಯೋಚ್ನೆ ಮಾಡ್ತಾ ವಿನಯಳ ಅಡಿಗೆ ಮುಗಿದಿತ್ತು. ಸುಧೀರ ಮಧ್ಯಾಹ್ನ ಊಟಕ್ಕೆ ಬರುತ್ತಾನೆ. ಸುನಿಲ್ ಬರುವಾಗ ಮೂರುವರೆ. ಹತ್ತನೇ ತರಗತಿಯಲ್ಲಿದ್ದಾನೆ, ಊಟ ಮಾಡಿ ಸಂಜೆಯ ಕೋಚಿಂಗ್ ಕ್ಲಾಸ್ ಗೆ ಹೋಗುತ್ತಾನೆ. ವಾಟ್ಸಾಪ್ ನೋಡಿದರೆ ಸಾಕ್ಷಿಯ ಮೆಸೇಜ್ ಇತ್ತು. ರಾತ್ರಿ ಡಿನ್ನರ್ ಗೆ ಬ್ರಹ್ಮ ಬ್ರೂಸ್ ಗೆ ಹೋಗೋಣ ಮಗನ ಹುಟ್ಟಿದ ಹಬ್ಬ ಎಂದು. ಸಾಕ್ಷಿಯ ಗಂಡ ಸುಧೀರನ ಬಾಸು. ಓಕೆ ಎಂದು ಮರುತ್ತರಿಸಿದಳು. ರಾತ್ರಿ ಹಾಕಿಕೊಳ್ಳಲು ಕುರ್ತಾ ಆರಿಸಿಟ್ಟಳು, ಏನು ಹಾಕಿಕೊಂಡರೂ ಸುಧೀರನಿಗೆ ಇಷ್ಟ. ಆದರೆ ವಿನಯಳಿಗೇ ಸಂಕೋಚ, ಯಾರು ಏನಂದುಕೊಳ್ಳುತ್ತಾರೋ ಎಂದು ಜಾಗರೂಕಳಾಗಿಯೇ ಇರುವ ಅಭ್ಯಾಸ. ಸುಧೀರ ಬಂದ ಕೂಡಲೇ ಇಬ್ಬರೂ ಊಟ ಮಾಡಿದರು. ಅವನು ಆಫೀಸಿಗೆ ಹೋದ ಮೇಲೆ ಮೈಮೇಲೆ ತೆಳ್ಳಗಿನ ಕ್ವಿಲ್ಟ್ ಎಳೆದುಕೊಂಡು ಸೋಫಾದ ಮೇಲೆ ಅಡ್ಡಾದಳು. ಬೆಳಿಗ್ಗೆಯಿಂದ ನೆನಪುಗಳು ಕಾಡುತ್ತಿದ್ದರಿಂದಲೋ ಏನೋ ಎಂದಿನಂತೆ ಮಂಪರು ಹತ್ತಲಿಲ್ಲ. ಸ್ವಲ್ಪ ಹೊತ್ತು ಹೊರಳಾಡಿ ಎದ್ದು ಚಹಕ್ಕಿಟ್ಟಳು. ಸುನಿಲ್ ಬಂದ. ಊಟ ಬಡಿಸುವಾಗ “ರಾತ್ರಿ ಡಿನ್ನರ್ ಗೆ ಹೋಗೋದಿದೆ ಪುಟ್ಟ , ಹೋಮ್ ವರ್ಕ್ ಇದ್ರೆ ಮುಗಿಸ್ಕೋ”
“ಅಮ್ಮ , ನಿಮ್ ಫ್ರೆಂಡ್ಸ್ ಜತೆ ನಾನ್ಯಾಕೆ ಬರ್ಬೇಕು? ನಂಗಿಷ್ಟ ಇಲ್ಲ” ಎಂದು ತಕರಾರು ತೆಗೆದ.

“ಈ ಸಲ ಬಾರೋ, ಸಾಕ್ಷಿ ಮಗನ ಬರ್ತ್ ಡೇ ಅಂತೆ”
“ಸುಮ್ನೆ ಫೋರ್ಸ್ ಮಾಡ್ತಿ ಎಲ್ಲದಕ್ಕೂ, ನಂಗಿಷ್ಟ ಇಲ್ಲ ಅವ್ರ ಜತೆ ಹೋಗೋದು“ ಸಿಡಿಸಿಡಿ ಮಾಡ್ತಾ ತಟ್ಟೆಯಲ್ಲಿ ಹಾಕಿದ್ದು ತಿಂದು ರೂಮಿಗೆ ಹೋದ.

ಹೌದಲ್ಲ, ತನಗೂ ಎಷ್ಟೋ ಸಲ ಸಾಕ್ಷಿಯ ನಡವಳಿಕೆ ಕಿರಿಕಿರಿ ಅನಿಸ್ತಾ ಇರುತ್ತೆ, ಇವನೂ ಗಮನಿಸಿರಬಹುದು, ಈಗಿನ ಮಕ್ಕಳು ಇಂತಹ ವಿಷ್ಯದಲ್ಲಿ ಬಹಳ ಚುರುಕು. ಕಳೆದ ತಿಂಗಳು ಸಿನಿಮಾಕ್ಕೆ ಹೋದಾಗ ಉತ್ತರ ಭಾರತೀಯ ಹೆಂಗಸೊಬ್ಬರ ಡ್ರೆಸ್ ಬಿಗಿಯಾಗಿದೆಯೆಂದು ಕಮೆಂಟ್ ಮಾಡಿದ್ದಳು. “ಕುಂಬಳಕಾಯಿ ಥರ ಇದೆ ಅವ್ಳದು. ಡಿಸೆಂಟಾಗಿ ಡ್ರೆಸ್ ಮಾಡ್ಬಾರ್ದ” ಅಂದಾಗ ವಿನಯಳಿಗೆ ಮುಜುಗರವಾಗಿತ್ತು. ಬಟ್ಟೆಬರೆ ಅವರಿಷ್ಟ, ನಾವ್ಯಾಕೆ ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತಾಡ್ಬೇಕು ? ಚಟ್ಟೆ ಕಿವಿ, ಕುಂಬಳಕಾಯಿ ಎದೆ, ದೊಡ್ಡ ಮೂಗು, ಕಪ್ಪು ಚರ್ಮ, ಉದ್ದ ,ಗಿಡ್ಡ ಇದೆಲ್ಲ ನಮ್ಮ ಕೈಯಲ್ಲಿದೆಯೇ? ಇವಳಿಗೆ ಯಾಕೆ ಅರ್ಥವಾಗುವುದಿಲ್ಲ ? ಸಾಕ್ಷಿ ಟೀಚರ್ ಬೇರೆ, ಹೊರಗಿನ ಪ್ರಪಂಚವನ್ನು, ಶಾಲೆಯಲ್ಲಿ ಮಕ್ಕಳನ್ನು ನೋಡುವವಳೇ ಹೀಗೆ ಮಾತಾಡುವುದೇ ? ಎಷ್ಟೋ ಸಲ ಶಿಕ್ಷಣಕ್ಕೂ ಸಂಸ್ಕಾರಕ್ಕೂ ಸಂಬಂಧವೇ ಇಲ್ಲ ಅನ್ನಿಸಿಬಿಡುತ್ತದೆ ವಿನಯಳಿಗೆ.

“ಅಕ್ಕಾ ಹೂವೂ …” ಪಳನಿಯ ಸ್ವರ, ಜೊತೆಗೇ ಗುನು ಗುನು ಹಾಡು, ಯಾವುದೊ ತಮಿಳು ಹಾಡು ಸದಾ ಬಾಯಲ್ಲಿರುತ್ತದೆ ಅವಳದ್ದು.
“ಬಂದೆ ಇರು” ದುಡ್ಡು ಕೈಯಲ್ಲಿ ಹಿಡಿದು ಬಾಗಿಲು ತೆರೆದು “ಎರಡು ಮೊಳ’ ಅನ್ನುವ ಮೊದಲೇ ಅವಳು ಬುಟ್ಟಿ ಇಳಿಸಿ ಮಲ್ಲಿಗೆ ಮಾಲೆ ತುಂಡು ಮಾಡಿದ್ದಳು. ಧಡೂತಿ ದೇಹವನ್ನು ಹತ್ತಿಯಂತೆ ಹಗುರವಾಗಿಸಿ, ತಲೆ ಮೇಲೆ ಹೂ ಬುಟ್ಟಿ ಇರಿಸಿ ಎರಡೂ ಕೈ ಬೀಸಿ ಸರಭರ ನಡೆದು ಹಾಡು ಗುನುಗುತ್ತ, ಗುರುತಿನವರು ಸಿಕ್ಕರೆ ಮಿರಮಿರ ಮಿಂಚುವ ಕರಿ ಮುಖದ ಮೇಲೆ ಪಳಚ್ಚನೆ ಹೊಳೆಯುವ ದಂತಪಂಕ್ತಿ ತೋರುತ್ತ ಬಾಯ್ತುಂಬ ನಗುವ ಪಳನಿಯನ್ನು ನೋಡಿದರೆ ವಿನಯಳಿಗೆ ಒಮ್ಮೊಮ್ಮೆ ಹೊಟ್ಟೆಕಿಚ್ಚಾಗುತ್ತದೆ. ಎಷ್ಟು ಖುಷಿಯಾಗಿರ್ತಾಳೆ ಇವಳು, ಹೂ ಮಾರಿ ಹೆಣ್ಣುಮಕ್ಕಳ ಮದುವೆ, ಬಾಣಂತನ ಎಲ್ಲ ಮುಗಿಸಿ ನಿರಾಳವಾಗಿದ್ದಾಳೆ, ಯಾರಿಗೂ ಕ್ಯಾರೇ ಅನ್ನದ ಇವಳ ಹತ್ರ ಜೀವ್ನ ಮಾಡೋದನ್ನು ಕಲೀಬೇಕು ಅಂದುಕೊಳ್ಳುತ್ತಲೇ ಒಳ ನಡೆದವಳ ಮೊಬೈಲ್ ಕೂಗಿಕೊಳ್ಳುತ್ತಿತ್ತು. ಸಾಕ್ಷಿಯ ಕರೆ, ಮೈಯಲ್ಲಿ ಚೆನ್ನಾಗಿಲ್ಲವೆಂದು ಡಿನ್ನರ್ ಕ್ಯಾನ್ಸಲ್ ಎಂದು ಹೇಳಲು ಕಾಲ್ ಮಾಡಿದ್ದಳು. ಸರಿ ಒಳ್ಳೇದೇ ಆಯಿತು ಹೇಗೂ ಸುನಿಲ್ ಗೂ ಹೋಗೋದು ಇಷ್ಟ ಇರ್ಲಿಲ್ಲ ಅಂದುಕೊಂಡಳು. ಊಟಕ್ಕೆ ಮೊದಲು ಸುಧೀರನೊಟ್ಟಿಗೆ ಅರ್ಧ ಘಂಟೆ ವಾಕ್ ಹೋಗೋದು ರೂಢಿ. ಮಾತಾಡ್ತಾ ನಡೆಯುವಾಗ ಮರುದಿನ ಸೆಕೆಂಡ್ ಸೆಟರ್ಡೇ ಅಂತ ನೆನಪಾಯ್ತು.

“ನಾಳೆ ನಾನು ಶಾಪರ್ಸ್ ಸ್ಟಾಪ್ ಗೆ ಹೋಗ್ಬೇಕು , ನೀನು ಬೇಕಾದ್ರೆ ಗಾಡೀಲೇ ಕೂತ್ಕೋ ಹತ್ತೇ ನಿಮಿಷದಲ್ಲಿ ಬರ್ತೀನಿ” ಅಂದಳು. ಅವನು ಕೈಯಲ್ಲಿನ ಮೊಬೈಲ್ ನೋಡ್ತಾ ನಡೀತಿದ್ದೋನು “ಹ್ಞೂ” ಅಂದ. ಮರುದಿನ ಶನಿವಾರ. ನಾಲ್ಕು ಘಂಟೆಗೆ ಶಾಪರ್ಸ್ ಸ್ಟಾಪ್ಗೆ ಹೊರಟರು. ಒಳಉಡುಪುಗಳ ಖರೀದಿ ಅಂದ್ರೆ ಇಲ್ಲಿಗೇ ಬರುವ ರೂಢಿ, ಬಾಯಿಬಿಟ್ಟು ಸೈಜು ಹೇಳುವ ಮುಜುಗರದಿಂದ ತಪ್ಪಿಸಿಕೊಂಡು ಎಷ್ಟೋ ವರ್ಷಗಳಾದವು. ಇವರು ಹೋಗುವಾಗ ಮಳಿಗೆ ಖಾಲಿಯಾಗಿಯೇ ಇತ್ತು. ಇಷ್ಟು ದೊಡ್ಡ ಮಳಿಗೆ ಯಾವಾಗ ನೋಡಿದರೂ ಖಾಲಿ, ಹೇಗಾದರೂ ಪೂರೈಸುತ್ತದೋ ಇವರಿಗೆ ಅಂದುಕೊಳ್ಳುತ್ತಲೇ ಸೀದಾ ಇನ್ನರ್ ವೇರ್ ಇರುವ ಭಾಗಕ್ಕೆ ಹೋದಳು. ಯಾವಾಗಲೂ ಕೊಳ್ಳುವ ಬ್ರಾಂಡಿನ ಒಳಉಡುಪುಗಳನ್ನು ಕೊಂಡು ಬಿಲ್ ಪೇ ಮಾಡಲು ಬಂದಳು. ಎರಡು ಮಾನಿಟರ್ ನಲ್ಲಿ ಬಿಲ್ಲಿಂಗ್ ನಡೆಯುತ್ತಿತ್ತು. ಬಿಲ್ ಎಂಟರ್ ಮಾಡುತ್ತಿದ್ದ ಹುಡುಗನ ಹತ್ತಿರ ಬಟ್ಟೆ ಮಡಿಸಿ, ಸೆಕ್ಯೂರಿಟಿ ಟ್ಯಾಗ್ ತೆಗೆಯುವ ಹುಡುಗಿ ಸೇಳೆ ಮಾಡುತ್ತಾ ಕಿಸಿಕಿಸಿ ನಗುತ್ತ ಇದ್ದದ್ದು ನೋಡಿ ಈ ವಯಸ್ಸೇ ಹಾಗೇ ಅಂದುಕೊಡು ವಿನಯಳಿಗೂ ನಗು ಬಂತು. ಯಾವಾಗಲೂ ಮನೆಯಿಂದ ಬ್ಯಾಗು ತರುತ್ತಿದ್ದವಳು ಇವತ್ತು ತಂದಿರಲಿಲ್ಲ, ಛೇ ಸುಮ್ಮನೆ ದುಡ್ಡು ದಂಡ ಅಂತ ಪೇಚಾಡುತ್ತಲೇ ಇಪ್ಪತ್ತು ರೂಪಾಯಿ ಕೊಟ್ಟು ಶಾಪರ್ಸ್ ಸ್ಟಾಪ್ ನ ಬ್ಯಾಗ್ ಕೊಂಡಳು. ಹುಡುಗಿ ಕೊಟ್ಟ ಬ್ಯಾಗು ಇಸಕೊಂಡು ಬಿಲ್ಲು ಒಳಗಡೆ ಹಾಕಿ ಬೇಗ ಹೊರಬಂದಳು.

ರಾತ್ರಿ ಸಿನಿಮಾ, ಮರುದಿನ ರವಿವಾರ ಬಿರಿಯಾನಿ, ಸ್ನೇಹಿತರು ಎಂದೆಲ್ಲ ಇಡೀ ದಿನ ಕಳೆದದ್ದೇ ಗೊತ್ತಾಗಲಿಲ್ಲ. ಸೋಮವಾರ ಬೆಳಿಗ್ಗೆ ಸುಧೀರ ಆಫೀಸಿಗೆ ಹೋದ ಮೇಲೆ ಹೊಸ ಒಳಉಡುಪುಗಳನ್ನು ವಾಷಿಂಗ್ ಮಷೀನಿಗೆ ಹಾಕೋಣ ಅಂತ ತೆಗೆದು ನೋಡುವಾಗಲೇ ಗೊತ್ತಾಗಿದ್ದು ಇದು ತನ್ನ ಖರೀದಿಯಲ್ಲ ಎಂದು. ಬಣ್ಣ ಬಣ್ಣದ ಸ್ಯಾಟಿನ್ ನ, ಲೇಸುಗಳು ಪ್ಯಾಡುಗಳು ಇರುವ ಬ್ರಾದ ಬಾಕ್ಸ್ ಗಳು ಲೇಸಿನ ನೈಟಿ, ಬಿಲ್ ನೋಡಿದರೆ ಹತ್ತು ಸಾವಿರದ ಹತ್ತಿರ. ಅಯ್ಯಬ್ಬ ಎಂದು ಕೂಡಲೇ ಬಿಲ್ಲಿನಲ್ಲಿದ್ದ ಅಂಗಡಿಯ ನಂಬರಿಗೆ ಫೋನು ಮಾಡಿದಳು. ಆ ಹುಡುಗನ ಹತ್ತಿರ ಮಾತನಾಡಿ ನಗುತ್ತಿದ್ದ ಬೇಜವಾಬ್ದಾರಿ ಹುಡುಗಿ ಮಾಡಿದ ಕೆಲಸ ಇದು ಅಂತ ಸಿಟ್ಟು ಬಂತು. ಫೋನು ಎತ್ತಿದವನೊಡನೆ ಬ್ಯಾಗು ಅದಲು ಬದಲಾಗಿದೆ ನನ್ನ ಬಿಲ್ ನಾಲ್ಕು ಸಾವಿರದ್ದು ಎಂದೆಲ್ಲ ವಿವರಿಸಿದಾಗ ಇರಿ ಒಂದು ನಿಮಿಷ ಅಂದವನು ಐದು ನಿಮಿಷ ಕಾಯಿಸಿದ. ಆಮೇಲೆ “ಅವ್ರ ನಂಬರ್ ಕೊಡ್ತೇನೆ. ನೀವು ಕಾಂಟ್ಯಾಕ್ಟ್ ಮಾಡಿ ಅತ್ವಾ ನೀವಿಲ್ಲಿ ಬಂದು ಕೊಟ್ರೂ ಆದೀತು” ಅಂದ. “ಅಯ್ಯೋ ಅಷ್ಟು ದೂರ ಮತ್ತೆ ಬರಕ್ಕಾಗಲ್ಲ, ಅವ್ರ ಫೋನ್ ಬಂದ್ರೆ ನನ್ನ ನಂಬರ್ ಕೊಡಿ, ನಾನೂ ಟ್ರೈ ಮಾಡ್ತೇನೆ” ಅಂದು ಡಿಸ್ಕನೆಕ್ಟ್ ಮಾಡಿದಳು.

ಅಪರಿಚಿತರೊಡನೆ ಮಾತನಾಡುವುದರಲ್ಲಿ ವಿನಯ ಯಾವತ್ತೂ ಹಿಂದೆ, ಈಗ ಬೇರೆ ಉಪಾಯಗಾಣದೆ ಅಂಗಡಿಯವನು ಕೊಟ್ಟ ನಂಬರ್ ಟ್ರೈ ಮಾಡಿದಳು. ಸುಮಾರು ಹೊತ್ತು ರಿಂಗ್ ಹೋದಮೇಲೆ “ಹಲೋ” ಕೇಳಿಸಿತು. ವಿವರಿಸಿದ ಕೂಡಲೇ “ಹೌದು, ನಾನೂ ನೋಡಿದ್ದೆ, ನೀವು ಯಾವ ಏರಿಯಾ ?” ಅಂದರು. ಜಯನಗರ ಎಂದೊಡನೆ “ಸರಿ, ಸಂಜೆ ನಾಲ್ಕು ಘಂಟೆಗೆ ೯ನೇ ಮೈನ್ ನ ಸ್ಟಾರ್ ಬಕ್ಸ್ ಗೆ ಬರ್ತೀರಾ, ಎಕ್ಸ್ ಚೇಂಜ್ ಮಾಡಣ, ಓಕೆನಾ ” ಅಂದರು . ರಗಳೆ ಅನ್ನಿಸಿದರೂ ಸುನಿಲ್ ಶಾಲೆಯಿಂದ ಬಂದೊಡನೆ ಊಟ ಕೊಟ್ಟು ಶಾಪರ್ಸ್ ಸ್ಟಾಪ್ ಬ್ಯಾಗು ಹಿಡಿದು ಹೊರಟಳು . ಸ್ಟಾರ್ ಬಕ್ಸ್ ನ ಹೊರಗೆ ಹಾಕಿದ್ದ ಕುರ್ಚಿಯಲ್ಲಿ ಕಾಯುತ್ತ ಕೂತಳು . ಬಿಳಿ ಬಲೆನೊ ಬಂದು ನಿಂತಿತು.

ಬಾಗಿಲು ತೆರೆದು ಝರಾ ದ ಮಾಡೆಲ್ ನಂತೆ ಕಾಣುವ ಹೆಂಗಸೊಬ್ಬರು ಕೈಯಲ್ಲಿ ಶಾಪರ್ಸ್ ಸ್ಟಾಪ್ ಬ್ಯಾಗ್ ಹಿಡಿದು ಇಳಿದಾಗ “ಸಧ್ಯ ಹೆಚ್ಚು ಹೊತ್ತು ಕಾಯಿಸಲಿಲ್ಲ, ಕೂಡಲೇ ಬ್ಯಾಗು ಎಕ್ಸ್ ಚೇಂಜ್ ಮಾಡಿ ಹೊರಟು ಬಿಡುವುದು” ಎಂದು ಎಣಿಸುತ್ತಿದಂತೆಯೇ ಅವಳು ಎದುರು ಬಂದವಳೇ “ಹಲೋ, ಮೈಸೆಲ್ಫ್ ಖ್ಯಾತಿ” ಎಂದು ಪರಿಚಯಿಸಿಕೊಳ್ಳುತ್ತಲೇ “ಕಾಪಿ ಕುಡಿಯೋಣ ಬನ್ನಿ” ಅಂತಲೂ “ಕೆಪುಚಿನೊ ಓಕೆನಾ” ಅಂತಲೂ ಕೇಳಿ ಆರ್ಡರ್ ಮಾಡಿ ಮೂಲೆಯಲ್ಲಿದ್ದ ಸೋಫಾದತ್ತ ವಿನಯಳನ್ನು ಒಂಥರ ಒತ್ತಾಯದಿಂದಲೇ ತಳ್ಳಿಕೊಂಡು ಹೊರಟಳು. ವಿನಯಳಿಗೆ ಮುಜುಗರ “ಅಯ್ಯೋ ಯಾರೋ ಏನೋ ಇವ್ಳು, ಸುಮ್ನೆ ಬೇಡ ಅನ್ಬೇಕಿತ್ತು” ಎಂದೆಲ್ಲಾ ಮನದಲ್ಲಿಯೇ ಹಳಹಳಿಸುತ್ತ ಹೋಗಿ ಕೂತಳು. ಅವಳು ಮಾತ್ರ ನಿರಾತಂಕವಾಗಿದ್ದಂತೆ ಕಾಣುತ್ತಿದ್ದಳು . ಒಮ್ಮೆಲೇ ಇವಳನ್ನೇ ನೋಡುತ್ತಾ “ಎಲ್ಲಿಂದ ಬರ್ತಿದ್ದೀನಿ ಗೊತ್ತಾ, ಕ್ಯಾನ್ಸರ್ ಹಾಸ್ಪಿಟಲ್ನಿಂದ.

ಬೈಲ್ಯಾಟರಲ್ ಮಾಸ್ಟೆಕ್ಟಮಿ ಮಾಡಿಸ್ಕೊಂಡು ನಾಲಕ್ಕು ತಿಂಗಳಾಯ್ತು, ಬ್ರಾ ಹಾಕ್ಕೊಳಕ್ಕೆ ಆಗಲ್ಲ. ನಿಮ್ಮ ಬಾಕ್ಸ್ ನೋಡ್ದೆ, ೩೬ ಡಿ, ಪುಣ್ಯ ಮಾಡಿದ್ರಿ. ನಂಗೆ ಏನೋ ಕಳ್ಕೊಂಡ ಹಾಗೆ, ನಾನು ನಾನಲ್ಲ ಹೆಣ್ಣೇ ಅಲ್ಲ ಅಂತೆಲ್ಲ ಏನೇನೋ ಫೀಲಿಂಗ್ಸ್. ಥೆರಪಿಸ್ಟ್ ಹತ್ರ ಹೋಗ್ತೀನಿ. ಇದೇನೂ ದೊಡ್ಡದಲ್ಲ, ಜೀವ ಮುಖ್ಯ ಅಂತಾರೆ, ಹೌದು ಅನ್ಸತ್ತೆ, ಮನೆಗೆ ಬಂದ್ಮೇಲೆ ಮತ್ತೆ ಅಳು ಬರತ್ತೆ, ಸುಮ್ನೆ ಹೋಗಿ ಇನ್ನರ್ ವೇರ್ ತಗೊಂಡು ಬಂದೆ, ಹಾಕ್ಕೊಳ್ಳೋದು ಇನ್ಯಾವಾಗಲೋ” ಎಂದೆಲ್ಲ ಒಂದೇ ಉಸಿರಿಗೆ ಹೇಳುತ್ತಾ ಕಣ್ಣಿಂದ ಪಟಪಟ ಉದುರುತ್ತಿದ್ದ ನೀರನ್ನು ಒರೆಸಿಕೊಳ್ಳುವ ಗೋಜಿಗೆ ಹೋಗದೆ ಮಾತಾಡಿದವಳನ್ನು ನೋಡಿ ವಿನಯ ದಿಗ್ಭ್ರಾಂತಳಾದಳು. ಒಳಗೆಲ್ಲೋ ಕಳಕ್ ಅಂದಿತು. ಎದುರಿಗಿದ್ದ ಟೇಬಲ್ ನಲ್ಲಿ ಕಾಪಿ ಮಗ್ ಪಕ್ಕದಲ್ಲಿಟ್ಟುಕೊಂಡು ಲ್ಯಾಪ್ ಟಾಪ್ ತೆರೆದು ಕೆಲಸ ಮಾಡುತ್ತಿದ್ದವ ಒಂದು ಕ್ಷಣ ತನ್ನ ಕೆಲಸ ನಿಲ್ಲಿಸಿ ಇವರತ್ತಲೇ ನೋಡಿದ.

ವಿನಯಳ ಕೈ ಆಯಾಚಿತವಾಗಿ ಖ್ಯಾತಿಯ ಕೈ ಹಿಡಿಯಿತು. ಕೆಪುಚಿನೊ ಬಂತು. ಮಾತಿಲ್ಲದೇ ಇಬ್ಬರೂ ಕುಡಿದರು. ಬ್ಯಾಗ್ ಎಕ್ಸ್ ಚೇಂಜ್ ಮಾಡಿದರು. ಖ್ಯಾತಿ ಇವಳನ್ನು ಒಮ್ಮೆ ಹಗ್ ಮಾಡಿದವಳೇ ಹಿಂತಿರುಗಿ ನೋಡದೇ ಕಾರು ಹತ್ತಿ ಹೊರಟುಹೋದಳು. ವಿನಯ ಆಟೋ ಹಿಡಿಯುವ ಬದಲು ನಡಕೊಂಡೇ ಮನೆ ಕಡೆ ಹೊರಟಳು. ಕೈ ನಡುಗುತ್ತಿತ್ತು, ಮನದ ತುಂಬಾ ಗೊಂದಲ, ವಿಚಿತ್ರ ಅನಿಸೋದಕ್ಕೆ ಶುರುವಾಯ್ತು. ತಾನಿಷ್ಟು ವರ್ಷ ಏನೆಂದುಕೊಂಡಿದ್ದೆ, ಖ್ಯಾತಿ ಹೇಗೆ ಯಾಕೆ ಸಿಕ್ಕಿದ್ಲು ಎಂದೆಲ್ಲ ಯೋಚನೆ ಮಾಡುತ್ತ ಮನೆಯ ಹತ್ತಿರ ಬಂದಳು. ಸಂಜೆಯ ಸೂರ್ಯನ ಚಿನ್ನದಂತಹ ಕಿರಣಗಳು ಅಂಗಳದ, ಮನೆಯ ತುಂಬಾ ಹರಡಿಕೊಂಡು ಬೆಳಕಾಗಿತ್ತು.

‍ಲೇಖಕರು Admin

January 7, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: