ಓದಲೇಬೇಕಾದ ಪುಸ್ತಕ ʼದ್ವಾಪರʼ

ಎಲ್‌ ಆರ್‌ ಪಿ ಎಚ್‌ ಕೆ ಎಸ್‌ ಕೋಲಾರ

ಓದಿದ ಪುಸ್ತಕಗಳ ಸಣ್ಣ ಪರಿಚಯ ಲೇಖನ ಹಾಕುವುದು ನನ್ನ ಅಭ್ಯಾಸವಾದರೂ ಅದರಲ್ಲಿ ಒಂದು ಶಿಸ್ತು ಇಂದಿಗೂ ಇಲ್ಲ. ಏನೋ ಉತ್ಸಾಹ, ಸಮಯ, ಒತ್ತಡ ಎಲ್ಲ ಕೂಡಿಬಂದಾಗ ಬರಹ ಸಾಗಿಬಿಡುತ್ತದೆ. ಎಲ್ಲೋ ನಿಂತಿತೆಂದರೆ ಅದೆಷ್ಟೋ ದಿನಗಳು ಸ್ಥಗಿತ…

ಹಾಗೆ ಓದಿಯೂ, ಮೆಚ್ಚಿಯೂ, ಆಳವಾಗಿ ಚಿಂತಿಸಿಯೂ…ಏನನ್ನೂ ಬರೆಯಲಾಗದಂತಹಾ ಪದಗಳ ಕೊರತೆ ಕಾಡಿಸಿದ್ದು ಕೆಲವೊಂದು ಪುಸ್ತಕಗಳು. ಅವುಗಳಲ್ಲಿ ಕಂನಾಡಿಗಾ ನಾರಾಯಣರವರ ದ್ವಾಪರ ಸಹಾ ಸೇರಿದೆ. ಅವರು ವಿಶ್ವಾಸದಿಂದ ಕಳಿಸಿಕೊಟ್ಟ ಕೂಡಲೇ ಕುತೂಹಲದಿಂದ ಓದಿದೆ…ಒಂದಲ್ಲ ಎರಡು ಬಾರಿ! ಅದೇನೋ ಹೇಳಲಾಗದ ತುಡಿತ, ಚಿಂತನ ಮಂಥನಗಳು ಮನದಲ್ಲಿ. ಚಿಕ್ಕದಾಗಿ ಅವರಿಗೆ ತಿಳಿಸಿಯೂ ಬಿಟ್ಟೆ. ಆದರೆ ವಿಸ್ತೃತವಾಗಿ ಬರೆಯಬೇಕೆಂಬ, ಈ ಮೂಲಕ ಇತರರಿಗೆ ಪರಿಚಯಿಸಬೇಕೆಂಬ ಹಂಬಲ ಇದ್ದರೂ ಏನೋ ಅಳುಕು. ಏಕೆಂದರೆ ಮಹಾಭಾರತದಂತಹಾ ದೊಡ್ಡ ವಸ್ತುವಿನ ಬಗ್ಗೆ ಬರೆದ ವಿಶೇಷ ದೃಷ್ಟಿಕೋನದ ವಿಶಿಷ್ಟ ಕೃತಿ ಇದು. ಸುಮಾರು ಜನ ತಮ್ಮದೇ ಆದ ಅಭಿಪ್ರಾಯಗಳನ್ನು ಹೇಳಿರುವ ಇದರ ಬಗ್ಗೆ ನನ್ನ ಮನಸಿನ ಮಾತುಗಳನ್ನು ಅಕ್ಷರರೂಪದಲ್ಲಿ ಹೇಗೆ ಹಿಡಿದಿಡಬಲ್ಲೆ ಎಂಬ ಸಂಕೋಚ ಕಾಡಿದ್ದು ಸತ್ಯ.

ಮೂಲ ಮಹಾಭಾರತ ನನ್ನ ದಿನನಿತ್ಯದ ಪಾರಾಯಣ ಗ್ರಂಥಗಳಲ್ಲಿ ಒಂದು. ಹೀಗಾಗಿ ಈ ಹೊಸ ಆಲೋಚನೆಗಳ ಪುಸ್ತಕ ಹೇಗೆ ಅರಗಿಸಿಕೊಳ್ಳಬಲ್ಲೆನೆಂಬ ಅನುಮಾನ ಕಾಡಿತ್ತು. ಆದರೆ ಪುಟಗಳನ್ನು ತಿರುವಿದಂತೆ ಅದು ಮಾಯವಾಗಿ ಆಸಕ್ತಿ ಮೂಡಿತು. ಅದೇ ಬೇರೆ..ಇದೇ ಬೇರೆ ಎಂಬ ಭಾವ ಗಾಢವಾಯಿತು. ಮುಂದೆಲ್ಲ ಸುಲಭ. ಈ ರೀತಿ ಬೇರೆ ಬೇರೆ ದೃಷ್ಟಿಕೋನಗಳ ಮಹಾಭಾರತದ ಪಾತ್ರಗಳು, ಕಥೆಯ ನಿರೂಪಣೆ, ಇಂದಿನ ಕಾಲಮಾನಕ್ಕೆ ತಕ್ಕಂತೆ ತರ್ಕಿಸುವ, ವ್ಯಾಖ್ಯಾನಿಸುವ, ಹೌದಲ್ಲ ಎನ್ನಿಸುವ ಚಿಂತನೆಗಳು ನನ್ನನ್ನು ಬೇರೆಯದೇ ಲೋಕಕ್ಕೆಕರೆದೊಯ್ದ ಭಾವ. ಇಲ್ಲಿನ ಕೃಷ್ಣ ನಮ್ಮಂತೆ ಯೋಚಿಸುವವ. ಉತ್ತಮ ರಾಜಕಾರಣಿ.

ಬುದ್ಧಿವಂತ ಹಾಗೇ ದ್ರೌಪದಿ, ಕರ್ಣ, ಏಕಲವ್ಯ, ಅಶ್ವತ್ಥಾಮ, ಭೀಷ್ಮ, ಧರ್ಮ, ಅರ್ಜುನ.. ಕೀಚಕ ಕೂಡಾ ಇಲ್ಲಿ ತಮ್ಮೊಳಗಿನ ಮಾತುಗಳನ್ನು, ತಮ್ಮ ಅನುಭವಗಳನ್ನು, ಆಲೋಚನೆಗಳನ್ನು ವಿವರವಾಗಿ ಹಂಚಿಕೊಳ್ಳುತ್ತಾರೆ. ಹೀಗಾಗಿ ಪ್ರತಿಯೊಬ್ಬರ ಬಗ್ಗೆಯೂ ನಮಗೆ ಅರಿವಿಲ್ಲದೆ ಒಂದು ಸಹಾನುಭೂತಿಯ ಅಲೆ ಏಳುತ್ತದೆ. ದೈವೀಕ ಶಕ್ತಿ, ಪವಾಡಗಳು, ಅಸ್ತ್ರಗಳ ಸರಿಯಾದ ಅರ್ಥ, ಸನ್ನಿವೇಶಗಳ ಸೂಕ್ತ ವ್ಯಾಖ್ಯಾನ… ಎಲ್ಲವೂ ಸೇರಿ ದ್ವಾಪರ ಕಲಿಯುಗಕ್ಕೆ ಹತ್ತಿರವಾಗುತ್ತದೆ. ಮನುಷ್ಯರ ನಡುವಿನ ಅಹಂಭಾವದ ಗೋಡೆಗಳು, ಮುಖವಾಡಗಳನ್ನು ಕಳಚುವ, ಸತ್ಯ ಏನಾಗಿರಬಹುದೆಂಬುದನ್ನು ನಿರೂಪಿಸುವ ಲೇಖಕರ ಪ್ರಯತ್ನ ಯಶಸ್ವಿಯಾಗಿದೆ.

ಗರ್ಭ, ಪ್ರಜ್ಞೆ, ಖಾಂಡವ, ದಾಳ, ಅಕ್ಷಯ, ಅಜ್ಞಾತ, ಸಂಧಾನ ಮತ್ತು ಜಯ…ಹೀಗೆ ವಿಶೇಷ ಶೀರ್ಷಿಕೆಗಳಲ್ಲಿ ಮೂಡಿರುವ ಸ್ವಗತಗಳು, ನಿರೂಪಣೆಗಳು ಕಥೆಯ ಓಟಕ್ಕೆ ಪೂರಕವಾಗಿವೆ. ಎಲ್ಲಕ್ಕಿಂತ ಪಾಂಡವರ ಹುಟ್ಟು, ದ್ರೌಪದಿಯ ಮನದಾಳದ ಒಲವುಗಳು, ಅರ್ಜುನನ ಮನಸ್ಥಿತಿ, ಕೃಷ್ಣನ ತಂತ್ರ.. ಆಧುನಿಕ ಮನೋಭಾವನೆಗಳಿಗೆ ಸಮನ್ವಯಗೊಳಿಸಿದ ಪರಿ ನನ್ನನ್ನು ಆಕರ್ಷಿಸಿತು. ಹೌದು, ಕೆಲವೊಮ್ಮೆ ರೂಢಿಗತ ಮನಸ್ಸು ಕೆಲವೊಂದು ಆಧುನಿಕ ವಿಚಾರಗಳನ್ನು ಒಪ್ಪುವಲ್ಲಿ ಸ್ವಲ್ಪ ಮೊಂಡಾಟ ಹೂಡುವುದು ಸತ್ಯ. ಆದರೆ ಪುರ್ವಾಗ್ರಹಗಳನ್ನು ಪಕ್ಕಕ್ಕಿಟ್ಟು ಮಾನವೀಯ ನೆಲೆಯಲ್ಲಿ ನೋಡಿದಾಗ ದ್ವಾಪರದ ಪರವಾಗಿ ನಿಲ್ಲುತ್ತದೆ ಅದೇ ಮನಸ್ಸು.

ಇಂತಹ ಒಳ್ಳೆಯ ಪುಸ್ತಕವನ್ನು ನನಗಾಗಿ ಕಳಿಸಿಕೊಟ್ಟು ಓದುವ ಅವಕಾಶ ಮಾಡಿಕೊಟ್ಟ ನಾರಾಯಣರವರಿಗೆ ಧನ್ಯವಾದಗಳು. ಇವರ ಬಗ್ಗೆ, ಇವರ ಪುಸ್ತಕಗಳ ಬಗ್ಗೆ ಪರಿಚಯಿಸಿ ಆಸಕ್ತಿ ಮೂಡಿಸಿದ ಸುನಿತ ವೆಂಕಟೇಶ್ ದಂಪತಿಗಳಿಗೆ ಕೃತಜ್ಞತೆಗಳು. ತಡವಾದರೂ ಪರವಾಗಿಲ್ಲ ಬರೆಯಬಹುದು ಎಂದು ಧೈರ್ಯ ಮೂಡಿಸಿದ, ಬರೆಯಲು ಪ್ರೇರಣೆ ನೀಡಿದ ಕಂನಾರಿಗೆ ಮತ್ತೊಮ್ಮೆ ನಮನಗಳು.

‍ಲೇಖಕರು Admin

January 7, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. M A Sriranga

    ಎಸ್. ಎಲ್. ಭೈರಪ್ಪನವರ ‘ಪರ್ವ’ ಕಾದಂಬರಿಗೂ ‘ದ್ವಾಪರ’ ಕಾದಂಬರಿಗೂ ಇರುವ ವ್ಯತ್ಯಾಸ ಏನು ಎಂದು ತಿಳಿಸಿದ್ದರೆ ಈ ಪುಸ್ತಕ ಪರಿಚಯ ಪೂರ್ಣವಾಗುತ್ತಿತ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: