ನಾಗಿಣಿ ಎ ಓದಿದ ʼಅಧಿಕಾರ ಮತ್ತು ಅಧೀನತೆʼ

ಕೇಟ್‌ ಮಿಲೆಟ್‌ ವಿಚಾರಗಳು: ವರ್ತಮಾನದ ತಲ್ಲಣಗಳು

ನಾಗಿಣಿ ಎ

ಘಟನೆ ಒಂದು. ಆಸ್ತಿ ವೈಷಮ್ಯದಿಂದ ಉತ್ತರ ಪ್ರದೇಶದ ಗಾಜಿಯಾಬಾದಿನ ಮಹಿಳೆಯ ಮೇಲೆ ಅತ್ಯಾಚಾರ. ಗುಪ್ತಾಂಗವನ್ನು ಕಬ್ಬಿಣದ ಸಲಾಕೆಯಿಂದ ಘಾಸಿಗೊಳಿಸಿ ಅವಳ ಕೈ ಕಾಲು ಕಟ್ಟಿ, ಕೆಲಸಕ್ಕೆ ಬಾರದ ಕಸದ ಹಾಗೆ ಗೋಣಿ ಚೀಲದಲ್ಲಿ ಸುತ್ತಿ ರಸ್ತೆಯ ಮೇಲೆ ಎಸೆದು ಹೋದದ್ದು. ಘಟನೆ ಎರಡು, ಇರಾನಿನಲ್ಲಿ ಯುವತಿಯೊಬ್ಬಳು ಹಿಜಾಬ್‌ ಸರಿಯಾಗಿ ಧರಿಸಿಲ್ಲವೆಂಬ ಕಾರಣಕ್ಕೆ ಪೋಲೀಸರೇ ಅವಳನ್ನು ಕೊಂದದ್ದು. ಮೊದಲ ಕೃತ್ಯಕ್ಕೆ ಆಸ್ತಿಯ ವೈಷಮ್ಯ, ಎರಡನೆಯ ಕೃತ್ಯಕ್ಕೆ ಧರ್ಮದ ಗಡಿಯನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಮೀರಿದ್ದು ಕಾರಣ. ಮೊದಲನೆಯದರಲ್ಲಿ ಮಹಿಳೆಯ ಆಸ್ತಿಯ ಒಡೆತನವನ್ನು ಸಹಿಸದ ಮನಃಸ್ಥಿತಿಗೆ ಅವಳನ್ನು ತುಳಿಯಲು ಹೊಳೆದದ್ದು ಅತ್ಯಾಚಾರವೆಂಬ ಪೈಶಾಚಿಕತೆ. ಯಾಕೆ ಹೆಣ್ಣೆಂದರೆ ಈ ದ್ವೇಷ? ಈ ದ್ವೇಷದ ಮೂಲ ಎಲ್ಲಿಯದು?

ಇತ್ತೀಚಿಗೆ ಎರಡು ಪುಸ್ತಕ ಓದಿದೆ. ಒಂದು ಎಚ್.‌ ಎಸ್‌. ಶ್ರೀಮತಿಯವರು ಅನುವಾದಿಸಿದ ʼಅಧಿಕಾರ ಮತ್ತು ಅಧೀನತೆ, ಕೇಟ್‌ ಮಿಲೆಟ್‌ ವಿಚಾರಗಳು. ಇನ್ನೊಂದು ತೆಲುಗು ಪುಸ್ತಕ, ಫೂಲನ್‌ ದೇವಿಯ ಆತ್ಮ ಚರಿತ್ರೆ. ಎರಡೂ ಪುಸ್ತಕಗಳ ಸಾಮ್ಯತೆಯನ್ನು ಕಂಡು ಬೆರಗಾಯಿತು. ಒಂದರಲ್ಲಿ ಸೈದ್ಧಾಂತಿಕ ವಿಚಾರಗಳು, ಮತ್ತೊಂದರಲ್ಲಿ ಅದನ್ನು ಭಟ್ಟಿ ಇಳಿಸಿದಂತಿದ್ದ ಥೇಟು ನಿಜ ಜೀವನದ ಅನುಭವಗಳು.

ಸ್ತ್ರೀ ದ್ವೇಷಕ್ಕೆ ಕಾರಣಗಳನ್ನು ಕೇಟ್‌ ಮಿಲೆಟ್‌, ಮಾನವ ಶಾಸ್ತ್ರ, ಸಮಾಜ ಶಾಸ್ತ್ರ, ಧಾರ್ಮಿಕ ಪಠ್ಯ, ಮಿಥ್‌ಗಳಲ್ಲಿ ಹುಡುಕುತ್ತಾಳೆ. ಗಂಡು ಮತ್ತು ಹೆಣ್ಣಿನ ನಡುವೆ ಇರುವ ಅಧಿಕಾರ ಮತ್ತು ಅಧೀನತೆಯ ಸಂಬಂಧದ ಮೂಲ ಇರುವುದು ವ್ಯವಸ್ಥೆಯು ನಿರ್ಧರಿಸಿದ ಅವರಿಬ್ಬರ ಲೈಂಗಿಕ ಸಂಬಂಧದ ಸ್ವರೂಪದಲ್ಲಿ. ಸಹಜವಾಗಿರಬೇಕಾದ ಈ ಸಂಬಂಧವು ಹೆಣ್ಣನ್ನು ʼಪಳಗಿʼಸಲು ಇರುವ ದಾರಿ ಎಂಬ ಭ್ರಮೆಯನ್ನು ಬಿತ್ತಿರುವುದು ವ್ಯವಸ್ಥೆ. ಸಮಾಜವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ವ್ಯವಸ್ಥೆಯು ರೂಪಿಸಿದ ತಂತ್ರವೇ ಲಿಂಗ, ವರ್ಗ, ಜಾತಿ ಶ್ರೇಣೀಕರಣ. ಈ ಎಲ್ಲಾ ಶ್ರೇಣಿಗಳಲ್ಲೂ ಗಂಡು, ಹೆಣ್ಣು ಇದ್ದೇ ಇರುವುದರಿಂದ ಕುಟುಂಬದ ಹಂತದಲ್ಲಿ ಗಂಡು, ಹೆಣ್ಣಿನ ನಡುವೆ ಶ್ರೇಣೀಕರಣ ಬಿತ್ತುವುದು ಯಶಸ್ವಿಯಾದಲ್ಲಿ ವ್ಯವಸ್ಥೆಗೆ ಬೇಕಾದ ಶ್ರೇಣೀಕೃತ ಸಮಾಜ ಸೃಷ್ಟಿಸುವುದು ಬಲು ಸುಲಭ.

ಗಂಡು ಹೆಣ್ಣಿನ ನಡುವಿನ ಜೈವಿಕ ವೈವಿಧ್ಯತೆಯನ್ನೇ ದಾಳವಾಗಿ ಬಳಸಿ ಹೆಣ್ಣನ್ನು ʼಅನ್ಯʼಳಾಗಿಸಿದಾಗ ಅಲ್ಲಿಗೆ ಇಬ್ಬರ ಒಗ್ಗಟ್ಟು ಒಡೆದ ಹಾಗಾಯಿತು. ಕೃಷಿಗೆ ಪೂರ್ವದಲ್ಲಿ ಸಹಜವಾಗಿದ್ದ ಲೈಂಗಿಕ ಸಂಬಂಧಗಳು ಕೃಷಿಯ ಹಂತದಲ್ಲಿ ಭೂಮಿಯ ಮೇಲಿನ ಒಡೆತನದ ಜತೆಗೆ ಮೂರ್ತವಾಗಿ ಕಾಣುತ್ತಿದ್ದ ಹೆಣ್ಣಿನ ಫಲವತ್ತತೆಯ ಮೇಲೆ ನಿಯಂತ್ರಣ ಹೇರಿ, ಅಧಿಕಾರ ಸಂಬಂಧವಾಗಿ ರೂಪುಗೊಂಡಿರುವುದನ್ನು ಮಿಲೆಟ್‌ ಗುರುತಿಸುತ್ತಾಳೆ. ಈ ಕಂದಕವನ್ನು ಪೋಷಿಸಲು ಧರ್ಮ, ಪುರಾಣ, ಮಿಥ್‌ಗಳೆಂಬ ಕಣ್ಕಟ್ಟನ್ನು ರೂಪಿಸಿದ ವ್ಯವಸ್ಥೆಯು ಹೆಣ್ಣಿನ ಅಧೀನತೆಯು ನಿರಂತರವಾಗಿರಲು ಪಿತೃ ಪ್ರಧಾನತೆಯ ಅಧಿಪತ್ಯವನ್ನು ದಾಳವಾಗಿ ಬಳಸುತ್ತದೆ. ಧಾರ್ಮಿಕವಾಗಿ ಹೆಣ್ಣಿಗೆ ವಿಧಿಸಿದ ಕಟ್ಟಳೆಗಳ ಮೂಲ ಇರುವುದು ಇಲ್ಲೇ.  

ಹೀಗೆ ವ್ಯಕ್ತಿ ಮಟ್ಟದಲ್ಲಿ ಸೃಷ್ಠಿಯಾದ ಅಸಮಾನತೆಯು ಸಂಪತ್ತಿನ ಒಡೆತನದ ಬಿಕ್ಕಟ್ಟನ್ನು ಸೃಷ್ಟಿಸಿ ಇಡೀ ಸಮಾಜವನ್ನೇ ಅಧಿಕಾರ ಮತ್ತು ಅಧೀನತೆಯ ಸಂಬಂಧವಾಗಿ ಮುಂದುವರೆಸುತ್ತದೆ. ಕೇಟ್‌ಳ ವಿಚಾರಗಳು ಮುಖ್ಯವಾಗುವುದು, ಅವಳ ಅಧ್ಯಯನವು ಕೇವಲ ಗಂಡು ಹೆಣ್ಣಿನ ನಡುವಿನ ಕಂದಕಕ್ಕೆ ಕಾರಣಗಳನ್ನು ಹುಡುಕುವುದಕ್ಕಷ್ಟೇ ಸೀಮಿತವಾಗದೆ, ಇವರಿಬ್ಬರ ನಡುವಿನ ಸಂಬಂಧವನ್ನು ಹತೋಟಿಗೆ ತೆಗೆದುಕೊಳ್ಳುವ ಮೂಲಕ ಇಡೀ ಮನುಕುಲವನ್ನೇ ತನಗೆ ಬೇಕಾದಂತೆ ವ್ಯವಸ್ಥೆ ಕುಣಿಸುತ್ತಿದೆ ಎನ್ನುವ ವಾಸ್ತವವನ್ನು ತೆರೆದಿಡುವಲ್ಲಿ.

ಫೂಲನ್‌ ದೇವಿಯ ಆತ್ಮಚರಿತ್ರೆಯನ್ನು ಓದುವಾಗ ಕೇಟಳ ಈ ವಿಚಾರಗಳು ಮತ್ತಷ್ಟು ಸ್ಪಷ್ಟವಾಗದೊಡಗಿದವು. ಉತ್ತರ ಪ್ರದೇಶದ ಕಡುಬಡ ಕುಟುಂಬಕ್ಕೆ ಸೇರಿದ ಹತ್ತರ ವಯಸಿನ ಹುಡುಗಿ ನ್ಯಾಯವಾಗಿ ತನ್ನ ಅಪ್ಪನಿಗೆ ಬರಬೇಕಾದ ಭೂಮಿಯಲ್ಲಿ ಬೆಳೆದ ಕಾಳು ತೆಗೆದುಕೊಂಡು ತೋರಿದ ಪ್ರತಿರೋಧವನ್ನು ನ್ಯಾಯವೆಂದು ಊರಿನ ಹಿರಿಯರು ಕೊಟ್ಟ ತೀರ್ಪು ಅವಳ ಮೊದಲ ಗೆಲುವು. ಹುಡುಗಿಯ ಈ ವಿಜಯವನ್ನು ತನ್ನ ವಿನಾಶವೆಂದೇ ತಿಳಿದ ಅವಳ ಅಣ್ಣ, ಮದುವೆ ಒಂದೇ ಅವಳನ್ನು ನಿಯಂತ್ರಿಸುವ ತಂತ್ರವೆಂದು ತಿಳಿದು ಮೂವತ್ತರ ವಯಸಿನ ಗಂಡಿಗೆ ಗಂಟು ಹಾಕುತ್ತಾನೆ. ಗಂಡನ ಲೈಂಗಿಕ ದೌರ್ಜನ್ಯಕ್ಕೆ ತತ್ತರಿಸಿ ಹೋದ ಎಳೆಯ ಹುಡುಗಿ ತವರು ಸೇರಿ ಅಪ್ಪನ ಭೂಮಿ ದಕ್ಕಿಸಿಕೊಳ್ಳಲು ಮಾಡಿದ  ಹೋರಾಟವನ್ನು ಹತ್ತಿಕ್ಕಲು ಗಂಡು ಮನಃಸ್ಥಿತಿಗೆ ಹೊಳೆದದ್ದು ಆಕೆಯ ಮೇಲೆ ನಿರಂತರ ಅತ್ಯಾಚಾರ. ಇಡೀ ಪಿತೃ ಪ್ರಧಾನ ಅಧಿಕಾರ ವ್ಯವಸ್ಥೆಯ ವಿರುದ್ಧವೇ ತಿರುಗಿಬಿದ್ದ ಅವಳ ಮೇಲೆ ಹೆಣ್ಣು, ಕೆಳ ಜಾತಿಯವಳು ಎನ್ನುವ ಕಾರಣಕ್ಕೆ ಆ ಸುತ್ತಲಿನ ಹಳ್ಳಿಯ ಎಲ್ಲ ಮೇಲ್ಜಾತಿಯ ಗಂಡಸರು ಎಸಗುವ ಅತ್ಯಾಚಾರವು ಹೆಣ್ಣಿಗೆ ಭೂಮಿಯ ಒಡೆತನವನ್ನು ನಿರಾಕರಿಸಿ ಅವಳ ಪ್ರತಿರೋಧವನ್ನು ಅಡಗಿಸಲು ಅವಳ ಲಿಂಗವನ್ನೇ ʼಅನ್ಯʼವಾಗಿಸಿ ಅಧಿಕಾರ ಚಲಾಯಿಸುವುದರ ತುಚ್ಛ ಮನಃಸ್ಥಿತಿಯ ಸಂಕೇತ. ಗಂಡನಿಂದ, ನ್ಯಾಯ ಒದಗಿಸಬೇಕಾದ ಪೋಲೀಸರಿಂದ, ಅವಳ ಅಣ್ಣನ ಸೂಚನೆಯಂತೆ ಅವಳನ್ನು ಅಪಹರಿಸಿದ ದರೋಡೆಕೋರಿಂದ, ಮುಂದೆ ದರೋಡೆಕೋರರ ಗುಂಪಿನ ನಾಯಕಿಯಾಗಿದ್ದರೂ ಅವಳ ನಾಯಕತ್ವವನ್ನು ಸಹಿಸದ ಒಳಪಂಗಡದವರ ನಿರಂತರ ಅತ್ಯಾಚಾರಗಳಿಂದ ಬಸವಳಿದು ಸಾವಿನ ಅಂಚಿಗೆ ಸೇರಿದಾಗಲೂ ಬದುಕುವ ಅವಳ ಛಲ ಓದುಗರನ್ನು ದಂಗು ಬಡಿಸುತ್ತದೆ. ದರೋಡೆಕೋರರ ರಾಣಿಯಾಗಿ ಜನರ ದೃಷ್ಟಿಯಲ್ಲಿ ಅವಳು ʼಫೂಲನ್‌ ದೇವಿʼ. ಸಮಾಜದ ಮುಖ್ಯ ವಾಹಿನಿಗೆ ಸೇರಿ ರಾಜಕೀಯ ಪ್ರವೇಶ ಮಾಡಿದ ಫೂಲನ್‌ ದೇವಿಯದು ಹೋರಾಟದ ಬದುಕು. ಈ ಹೋರಾಟದ ಹಾದಿಯಲ್ಲಿ ಬಹುತೇಕರ ವಿರೋಧವನ್ನು ಕಟ್ಟಿಕೊಂಡವಳು. ಕೊನೆಗೆ ಅಧಿಕಾರದಲ್ಲಿರುವಾಗಲೇ ತನ್ನ ಮನೆಯ ಎದುರೇ ಶತೃಗಳ ಗುಂಡಿನೇಟಿಗೆ ಬಲಿಯಾದಳು. ದರೋಡೆಕೋರರ ರಾಣಿ ಅನ್ನುವುದಕಿಂತ ಹೆಚ್ಚಾಗಿ  ಸ್ತ್ರೀವಾದದ  ಯಾವುದೇ ಸಿದ್ಧಾಂತದ ಸುಳಿವೂ ಇಲ್ಲದ ಒಬ್ಬ ಅನಕ್ಷರಸ್ಥ ಬಡ ಹೆಣ್ಣು ಮಗಳ ಹೋರಾಟದ ಬದುಕಿನ ಚಿತ್ರಣವಾಗಿ ಈ ಪುಸ್ತಕ ಮುಖ್ಯವೆನಿಸುತ್ತದೆ.

ಸ್ತ್ರೀವಾದಿ ಹೋರಾಟಗಳ ಫಲವಾಗಿ ಹೆಣ್ಣಿನ ಸ್ಥಾನಮಾನ ತಕ್ಕಮಟ್ಟಿಗೆ ಬದಲಾಗುತ್ತದಾದರೂ ಹೇಗೆ ವ್ಯವಸ್ಥೆಯು ಹೆಣ್ಣಿನ ಅಧೀನತೆಯನ್ನು ಪೋಷಿಸಲು ಒಳ ತಂತ್ರಗಳನ್ನು ಹೆಣೆಯುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ವ್ಯವಸ್ಥೆಯ ರಾಜಕೀಯ ಮತ್ತು ನ್ಯಾಯದ ವಿರೋದಾಭಾಸವನ್ನು ಮಿಲೆಟ್ ಉದಾಹರಿಸುತ್ತಾಳೆ. ರಾಜಕೀಯವಾಗಿ ಹೆಣ್ಣಿಗೆ ಸವಲತ್ತುಗಳನ್ನು ಕೊಡುತ್ತಾ, ನ್ಯಾಯ ಒದಗಿಸಬೇಕಾದಾಗ ಪಿತೃ ಪ್ರಧಾನ ಮನಃಸ್ಥಿತಿಯೇ  ಮುನ್ನೆಲೆಗೆ ಬಂದು ಅಸಮಾನತೆಯನ್ನು ಕಾಪಿಡುವ ಅಥವಾ ಹೆಚ್ಚಿಸುವ ವ್ಯವಸ್ಥೆಯ ನಡೆಯನ್ನು ಆಕೆಯ ಅಧ್ಯಯನ ತಿಳಿಸುತ್ತದೆ. ಹೆಣ್ಣಿನ ರಕ್ಷಣೆಯೇ ನಮ್ಮ ಪ್ರಮುಖ ಆದ್ಯತೆ ಎಂದು ಬೊಗಳೆ ಬಿಡುತ್ತಾ ಇನ್ನೊಂದೆಡೆ ಅದೇ ಹೆಣ್ಣಿನ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿದ ದುರುಳರನ್ನು ನಿರಪರಾಧಿಗಳೆಂದು ಬಿಡುಗಡೆಗೊಳಿಸುವ ಬಿಲ್ಗಿಸ್‌ ಬಾನುವಿನ ಪ್ರಕರಣವೇ ಇದಕ್ಕೆ ಜ್ವಲಂತ ಸಾಕ್ಷಿ. ವ್ಯವಸ್ಥೆಯ ಇಂಥಾ ನಡೆಗಳು ಸ್ತ್ರೀ ದ್ವೇಷವನ್ನು ಸಜೀವವಾಗಿರಿಸುವ ತಂತ್ರ ಎಂಬುದು ಮಿಲೆಟಳ ಈ ಅಧ್ಯಯನವನ್ನು ಓದಿದವರಿಗೆ ಅರ್ಥವಾಗುತ್ತದೆ. ಮುಂಚೆ ಉಲ್ಲೇಖಿಸಿದ  ಘಟನೆಗಳು ಇಂದು ಸ್ತ್ರೀ ದ್ವೇಷ ಪರಾಕಾಷ್ಠತೆಗೆ ತಲುಪಿದೆ ಎಂಬುದಕ್ಕೆ ಜೀವಂತ ಉದಾಹರಣೆಗಳು. ಅಂದರೆ ಈಗ ನಾವು ಬದುಕುತ್ತಿರುವ ವ್ಯವಸ್ಥೆಯು ಸ್ತ್ರೀ ದ್ವೇಷವನ್ನು ಹೆಚ್ಚಿಸಿ, ಸಮಾಜವನ್ನು ಮತ್ತಷ್ಟು ಶ್ರೇಣೀಕರಣಗೊಳಿಸುವ ಇರಾದೆಯಲ್ಲಿದೆಯೇ ಎಂಬ ಅನುಮಾನ ಬಾರದಿರದು.

ಕೇಟ್‌ ಮಿಲೆಟಳ ಈ ವಿಸ್ಕೃತ ಅಧ್ಯಯನವನ್ನು ಕನ್ನಡ ಓದುಗರಿಗೆ ತಲುಪಿಸಿದ ಮಹದುಪಕಾರವನ್ನು ಎಚ್. ಎಸ್.‌ ಶ್ರೀಮತಿಯವರು ಮಾಡಿದ್ದಾರೆ. ಅದೊಂದು ಅನುವಾದವೆಂಬ ಭಾವ ಓದಿನ ಓಘದಲ್ಲಿ ಎಲ್ಲೂ ನನಗನಿಸಲಿಲ್ಲ. ಅವರು ಬಳಸಿದ ಒಂದೊಂದು ಪದ, ಆ ಪದದ ಜೋಡಣೆ, ಅದರಿಂದ ಹೊರಡುವ ಅರ್ಥ ಅವರು ಬಳಸಿದ ʼಕನ್ನಡ ನಿರೂಪಣೆʼ ಪದಕ್ಕೆ ಅತ್ಯಂತ ಹತ್ತಿರವೆನಿಸಿತು. ಬರಹಗಾರರು, ಅನುವಾದಕರಿಗೆ ಈ ಪುಸ್ತಕದ ಓದು ಒಂದು ತಾಲೀಮು ಎಂದು ನನಗನಿಸಿದೆ.

‍ಲೇಖಕರು Admin

November 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: