ಇಂಟರ್ನ್‌ಶಿಪ್‌ ಎನ್ನುವ ಕಲಿಕೆಯ ದಿನಗಳು…

ಡಾ ಮೇಘನಾ ಎನ್‌

ಇಂಟರ್ನ್‌ಶಿಪ್ ಮಾಡೋ ಸಮಯದಲ್ಲಿನ ಹಲವು ಸಂಗತಿಗಳು ಹೊಸ ಬದುಕನ್ನು ತೋರಿಸಿದವು. ದಾವಣಗೆರೆ, ಹರಿಹರ, ಚಿತ್ರದುರ್ಗದ ಸುತ್ತಮುತ್ತಲ ಊರಿಗೆಲ್ಲ ದಾವಣಗೆರೆಯ ಚಿತ್ತಗಿರಿ ಆಸ್ಪತ್ರೆಯೇ ದೊಡ್ಡ ಆಸ್ಪತ್ರೆ. ಒಪಿಡಿ ಸದಾ ರೋಗಿಗಳಿಂದ ತುಂಬಿ ತುಳುಕುತ್ತಿತ್ತು. ಕಲಿಕೆಗೆ ಸೂಕ್ತವಾದ ಜಾಗವಾಗಿತ್ತು. ಅಲ್ಲಿ ನನಗೆ ಎದುರಾದ ಮೊದಲ ಸಮಸ್ಯೆ ಭಾಷೆ. ಅಲ್ಲಿನ ಕನ್ನಡ ಅರ್ಥಮಾಡಿಕೊಳ್ಳಲು ಮೊದಮೊದಲು ಕಷ್ಟವಾಯಿತು. ಭಾಷೆ ಅರ್ಥವಾಗದೆ ಉತ್ತರಕೊಟ್ಟಾಗ ಮುಜುಗರದ ತಮಾಷೆಯ ಸನ್ನಿವೇಶಗಳು ಸೃಷ್ಟಿಯಾದವು.

ಒಪಿಡಿಯಲ್ಲಿದ್ದಾಗ ಬಂದ ಅಜ್ಜಿಯೊಬ್ಬರು “ಕಾಲುಮಡಿ ಚೆಕ್‌ ಮಾಡಿಸ್ಕೊಬೇಕು ಬರೆದುಕೊಡಿ” ಅಂದರು. “ಮಂಡಿ ನೋವಿಗೆ ಮೂಳೆ ಡಾಕ್ಟರ್‌ಗೆ ತೋರಿಸಬೇಕು. ಅಲ್ಲಿಗೆ ಹೋಗಿ” ಅಂತ ವಾಪಸ್ಸು ಕಳಿಸಿದೆ. ಅಜ್ಜಿ ಹೊರಗೆ ಹೋಗಿ ಮತ್ತೆ ಬಂದು ಅದನ್ನೇ ಹೇಳಿದರು. ಆವಾಗ ಅಲ್ಲೇ ಕೆಲಸ ಮಾಡುತ್ತಿದ್ದಾಕೆ ಬಂದು “ಅವರು ಯೂರಿನ್‌ ಟೆಸ್ಟ್‌ ಮಾಡಿಸೋಕೆ ಬರೆದುಕೊಡಿ ಅಂತಿದಾರೆ. ಈ ಕಡೆ ಕಾಲುಮಡಿ ಅಂದರೆ ಮೂತ್ರ” ಅಂತ ಹೇಳಿದರು.

ಇನ್ನೊಮ್ಮೆ ಚರ್ಮರೋಗ ವಿಭಾಗದಲ್ಲಿದ್ದಾಗ ಬೆಳ್‌ಬೆಳಿಗ್ಗೆ ಸುಮಾರು ೪೫ ವಯಸ್ಸಿನ ವ್ಯಕ್ತಿಯೊಬ್ಬರು ಬಂದು ತಿಂಡಿ ಆಯ್ತಾ ಅಂತೇನೋ ಹೇಳಿದಂಗೆ ಅನ್ನಿಸಿತು. ನಾನು ಪರವಾಗಿಲ್ವೇ ತಿಂಡಿ ಆಯ್ತಾ ಅಂತ ವಿಚಾರಿಸೋಷ್ಟು ಸೌಜನ್ಯ ತೋರಿದರಲ್ಲ ಅಂತ “ಆಯ್ತು. ಹೇಳಿ ಏನು ತೊಂದರೆ?” ಅಂತ ಕೇಳಿದೆ. ಅವರು “ತಿಂಡಿ ಆಗ್ತಿದೆ” ಅಂದರು. ನಂಗೆ ಏನೋ ತಪ್ಪಾಗಿ ಅರ್ಥಮಾಡಿಕೊಂಡಿದಿನಿ ಅಂತ ಹೊಳೀತು. ಪಕ್ಕದಲ್ಲಿದ್ದ ಇನ್ನೊಬ್ಬ ಡಾಕ್ಟರ್‌ ಹತ್ರ ಕೇಳಿದೆ. “ಅವರಿಗೆ ಮೈಯೆಲ್ಲ ಕಡಿತ ಆಗ್ತಿದೆಯಂತೆ. ನಿಮ್ಮ ತಿಂಡಿ ಆಯ್ತಾ ಅಂತ ವಿಚಾರಿಸಲಿಲ್ಲ” ಅಂದರು ನಗುತ್ತಾ. ಆವತ್ತಿಡಿ ದಿನ ಒಪಿಡಿಯಲ್ಲಿ ಇದೇ ವಿಷಯ. ನಗು.

ಇವು ನಗು ಅರಳಿಸೋ ನೆನಪುಗಳಾದರೆ ಇನ್ನೂ ಕೆಲವು ಬೇಸರದ, ನೋವಿನ ನೆನಪುಗಳು. ಆ ಸಣ್ಣ ಊರುಗಳಲ್ಲಿ ಹೆಣ್ಣುಮಕ್ಕಳು ಮೈನೆರೆಯುವುದೇ ತಡ ಮದುವೆ ಮಾಡಿಬಿಡುತ್ತಿದ್ದರು. ಅವರಿಗೇನು ಆಗ್ತಿದೆ ಅಂತ ಗೊತ್ತಾಗುವಷ್ಟರಲ್ಲಿ ಒಂದೆರಡು ಮಕ್ಕಳು ಆಗಿಬಿಟ್ಟಿರುತ್ತಿತ್ತು. ಗರ್ಭಿಣಿಯೇ ಅಂತ ಗೊತ್ತುಮಾಡಿಕೊಳ್ಳೋಕೆ ಆಸ್ಪತ್ರೆಗೆ ಬಂದರೆ ಮತ್ತೆ ಬರುತ್ತಿದ್ದುದ್ದು ಪ್ರಸವಕ್ಕೆ. ಹೀಗೆ ಸಣ್ಣ ವಯಸ್ಸಿಗೆ ತಾಯಿಯಾಗಿದ್ದರಿಂದ, ಗರ್ಭಾವಸ್ಥೆಯಲ್ಲಿ ಸರಿಯಾದ ಪೋಷಣೆ ಸಿಗದೆ ಇರೋದ್ರಿಂದ ತಾಯಿ ಮಗು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ಎಷ್ಟೋ ಸಲ ತಾಯಿ ಮಗು ಇಬ್ಬರ ಜೀವಕ್ಕೂ ಕುತ್ತು ತರುತ್ತಿತ್ತು.

ತಾಯಿ ಜೀವ ಉಳಿದು ಮಗುವನ್ನು ಉಳಿಸಿಕೊಳ್ಳಲಾಗದ ಎಷ್ಟೋ ಪರಿಸ್ಥಿತಿಗಳು ಎದುರಾಗುತ್ತಿತ್ತು. ಜೀವ ಇರುವಾಗಷ್ಟೇ ಅಲ್ಲ ಸತ್ತ ಮಗುವಿನಲ್ಲೂ ಲಿಂಗ ತಾರತಮ್ಯ ಕಾಣುತ್ತಿದ್ದು ವಿಪರ್ಯಾಸ. ಸತ್ತ ಮಗು ಹೆಣ್ಣಾಗಿದ್ದರೆ ಹೋಗಲಿ ಬಿಡು ಇನ್ನೊಂದು ಮಗುವಾಗುತ್ತೆ ಅನ್ನುತ್ತಿದ್ದರು. ಅದೇ ಗಂಡು ಮಗುವಾದರೆ ತಲೆಮೇಲೆ ಆಕಾಶ ಬಿದ್ದೋರಂಗೆ ಗೋಳಾಡ್ತಾ ಎಲ್ಲ ಆರೋಪ ಆ ತಾಯಿ ಮೇಲೆ ಹಾಕಿಬಿಡೋರು. ಗಂಡು ಮಗು ಬೇಕೇ ಬೇಕು ಅನ್ನೋ ಹಠಕ್ಕೆ ಬೀಳುತ್ತಿದ್ದರು. ಅದಕ್ಕೆ ಬಲಿಪಶು ಆಗುತ್ತಿದ್ದದ್ದು ಹೆಣ್ಣುಜೀವವೇ. ಒಂದು ಗರ್ಭಕ್ಕೂ ಮತ್ತೊಂದಕ್ಕೂ ಕನಿಷ್ಠ ಅಂತರ ಕೂಡ ಕೊಡದೆ ಪದೇ ಪದೇ ಗರ್ಭ ಧರಿಸುವಂತಾಗುತ್ತಿತ್ತು. ಆ ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.

ಇಂತಹ ಜನರಲ್ಲಿ ಅರಿವು ಮೂಡಿಸಲು ಮೆಡಿಕಲ್‌ ಕ್ಯಾಂಪು ಮೊದಲಾದ ಹಲವು ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ತುರ್ತಿದೆ. ಹೆಣ್ಣುಮಕ್ಕಳಿಗೆ ಮೈನೆರೆದಾಗ ಕಾಪಾಡಿಕೊಳ್ಳಬೇಕಾದ ದೇಹದ ಸ್ವಚ್ಛತೆ, ಗರ್ಭಧಾರಣೆ, ಗರ್ಭನಿರೋಧಕ ವಿಧಾನಗಳ ಬಗ್ಗೆ ಮಾಹಿತಿ ನೀಡಿ ಅವರನ್ನು ಈ ವಿಷಯದಲ್ಲಿ ಶಿಕ್ಷಿತರಾಗಿಸಬೇಕು. ಗಂಡುಮಕ್ಕಳಿಗೂ ಇದರ ಕುರಿತು ಅರಿವು ಮೂಡಿಸುವ ಪ್ರಯತ್ನಗಳಾಗಬೇಕು. ಗರ್ಭಿಣಿಯಾದಾಗ ತಮ್ಮ ಹಾಗೂ ಮಗುವಿನ ಆರೋಗ್ಯದ ಬಗ್ಗೆ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು, ಪೌಷ್ಟಿಕ ಆಹಾರ ಇವುಗಳ ತಿಳಿವಳಿಕೆ, ತಪ್ಪದೇ ಮಾಡಿಸಿಕೊಳ್ಳಬೇಕಾದ ಪರೀಕ್ಷೆಗಳ ಕುರಿತು ಅರಿವು ಮೂಡಿದರೆ ಸ್ವಲ್ಪಮಟ್ಟಿಗಾದರೂ ಹೆರಿಗೆ ಸಮಯದಲ್ಲಿ ನವಜಾತ ಶಿಶು ಮರಣ ಪ್ರಮಾಣ ಕಡಿಮೆಯಾಗುತ್ತದೆ.

ಹೆರಿಗೆಯ ಸಮಯ ಹಾಗೂ ನಂತರದ್ದು ಮತ್ತೊಂದೇ ಕತೆ. ಆ ಸಣ್ಣವಯಸ್ಸಿನ ತಾಯಂದಿರ ಕೈಯಲ್ಲಿ ಮಗುವಿಗೆ ಹಾಲೂಡಿಸಲು ಹೇಳಿಕೊಡಲು ಹರಸಾಹಸ ಪಡಬೇಕಿತ್ತು. ಒಂದು ಕಡೆ ಡಾಕ್ಟರ್‌ ಒಂದು ಹೇಳಿದರೆ ಮತ್ತೊಂದೆಡೆ ಮನೆಯವರು ತಮ್ಮ ಅನುಭವ ಪ್ರದರ್ಶನಕ್ಕೆ ಮುಂದಾಗುತ್ತಿದ್ದರು.

ಮಕ್ಕಳಿಗೆ ತಾಯಿ ಹಾಲು ಕಮ್ಮಿಯಾದಾಗ ಅವರಿಗೆ ನಿರ್ಜಲೀಕರಣವಾಗಿ ಜ್ವರ ಬರುತ್ತಿತ್ತು. ಹೀಗೆ ಮಗು ಹುಷಾರು ತಪ್ಪಿದಾಗ ಅವರಿಗೆ ಗಾಜಿನ ಬಳೆಯಲ್ಲಿ ಸುಡುತ್ತಿದ್ದರು, ತಾಯತ ಕೊಡಿಸೋರು ಆಮೇಲೆ ಡಾಕ್ಟರ್‌ ಹತ್ರ ಬರೋರು. ನಾವು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ನ್ಯೂಟ್ರಿಶನ್‌ ರಿಹ್ಯಾಬಿಲಿಟೇಶನ್‌ ಸೆಂಟರ್‌ ಇತ್ತು. ಅಲ್ಲಿ ಅಪೌಷ್ಟಿಕತೆ ಇದ್ದ ಮಕ್ಕಳಿಗೆ ವಿಶೇಷ ಅಡುಗೆ ಮಾಡುತ್ತಿದ್ದರು. ಉದ್ದಿನಬೇಳೆ, ಗೋಧಿ, ಕಡಲೆಬೀಜ, ಬೆಲ್ಲ ಹಾಕಿ ದಾವಣಗೆರೆ ಮಿಕ್ಸ್‌ ಅನ್ನೋ ಪೌಷ್ಟಿಕ ಆಹಾರ ಬಹಳ ಹೆಸರುವಾಸಿಯಾದದ್ದು, ನಾವು ಕೂಡ ಒಂದೆರೆಡು ಸಲ ಅದರ ರುಚಿ ಸವಿದದ್ದುಂಟು.

ಆ ಊರಿನಲ್ಲಿನ ನೀರಿನ ಅಭಾವದಿಂದಲೋ ಅಥವ ಸ್ವಚ್ಛತಾ ಅಭ್ಯಾಸಗಳ ಕೊರತೆಯಿಂದಲೋ ಆ ಊರುಗಳಲ್ಲಿ ಚರ್ಮದ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿತ್ತು. ಅದನ್ನೆಲ್ಲ ನೋಡಿದಾಗ ಇವರಿಗೆ ಜಾಗೃತಿ ಮೂಡಿಸಲು ರೇಡಿಯೋ, ಟಿವಿ, ನ್ಯೂಸ್‌ ಪೇಪರ್‌ ಸಾಕಾಗಲ್ಲ ಮೂರು ತಿಂಗಳಿಗೊಮ್ಮೆ ಹೆಲ್ತ್‌ ಚೆಕ್‌ ಅಪ್‌ ಕ್ಯಾಂಪುಗಳನ್ನು ನಿರಂತರವಾಗಿ ಮಾಡಿ ಜನರಿಗೆ ಇದರ ಬಗ್ಗೆ ಮಾಹಿತಿ ಕೊಡಬೇಕು ಅನ್ನಿಸುತ್ತಿತ್ತು.

ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಲೇಬರ್‌ ರೂಂ ಬೇರೆಯದೇ ಪ್ರಪಂಚ. ಆ ಆಸ್ಪತ್ರೆಯಲ್ಲಿ ದಿನಕ್ಕೆ ಕಡಿಮೆ ಅಂದರೂ ೨೦-೨೫ ಡೆಲಿವರಿಗಳು ಆಗುತ್ತಿತ್ತು. ಡಾಕ್ಟರುಗಳು, ನರ್ಸುಗಳ ʼಮುಕ್ಕಮ್ಮ, ಮುಕ್ಕುʼ ಅಂತ ಕಿರುಚೋದು ಒಂದು ಕಡೆಯಾದರೆ ಆ ಡೆಲಿವರಿಗೆ ಬಂದಿರೋರ ಅಳು, ಕಿರುಚಾಟ ಇನ್ನೊಂದು ಕಡೆ. ರಾತ್ರಿ ಕನಸಲ್ಲೂ ಇದೇ ದನಿಗಳು ಎಷ್ಟೋ ಸಲ ಬಂದಿದ್ದುಂಟು.

ಇಂತಹ ಹಳ್ಳಿಗಳ ಜನರಲ್ಲಿ ಮಾಹಿತಿಯ ಕೊರತೆಯಿರುತ್ತದೆ. ಗರ್ಭ ಧರಿಸಿದ ನಂತರ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು, ಒಂಬತ್ತು ತಿಂಗಳಲ್ಲಿ ೩ ಸ್ಕ್ಯಾನಿಂಗ್‌ ಮಾಡಿಸಬೇಕು ಅನ್ನುವುದೆಲ್ಲ ತಿಳಿದಿರುವುದಿಲ್ಲ. ಎಷ್ಟೋ ವೇಳೆ ಇವರ ಎಡವಟ್ಟುಗಳಿಂದಾಗಿ ದಾರಿಯಲ್ಲೇ ಹೆರಿಗೆ ಆಗಿಬಿಟ್ಟಿರುತ್ತದೆ. ಹೀಗೆ ನಾನೇ ಒಮ್ಮೆ ಆಟೊದಲ್ಲಿ ಡೆಲಿವರಿ ಮಾಡಿಸಬೇಕಾಯಿತು. ಮತ್ತೊಮ್ಮೆ ಶೌಚಾಲಯಕ್ಕೆ ಹೋದವಳಿಗೆ ಅಲ್ಲೇ ಮಗು ಹೊರಗೆ ಬಂದು ನಾವೆಲ್ಲ ಅಲ್ಲಿಗೆ ದೌಡಾಯಿಸಿ ಹೆರಿಗೆ ಮಾಡಿಸಬೇಕಾಯಿತು.

ಒಳಗೆ ತಾಯಿ ನೋವು ತಿನ್ನುತ್ತಿದ್ದಾಗ ಹೊರಗಿನವರ ಚಿಂತೆಯೇ ಬೇರೆ. ಹೋಗಿ ಬಂದು ಹೋಗಿ ಬಂದು “ಮೇಡಂ ಡೆಲಿವರಿ ಆಯ್ತಾ? ಯಾವ ಮಗು?” ಅನ್ನೋರು. ಒಳಗಿರೋ ನಮಗೆ ಸುಸೂತ್ರವಾಗಿ ಹೆರಿಗೆಯಾಗಿ ತಾಯಿ ಮಗು ಉಳಿದರೆ ಸಾಕಪ್ಪ ಅನ್ನೋ ಆತಂಕವಿದ್ದರೆ ಹೊರಗಿರುವವರಿಗೆ ಅವರು ತಂದಿರೋ ಕಾಫಿ, ಬ್ರೆಡ್ಡು ತಿನ್ನಿಸೋ ಕಾತರ. ಅಂಥದ್ದೇನು ಆ ಬ್ರೆಡ್‌, ಕಾಫಿಯಲ್ಲಿ ಎನರ್ಜಿ ಬೂಸ್ಟರ್‌ ಇರುತ್ತೆ ಅನ್ನೋದು ಇದುವರೆಗೂ ನನಗೆ ಗೊತ್ತಾಗಿಲ್ಲ. ಇಷ್ಟೆಲ್ಲ ಸವಾಲು, ಆತಂಕಗಳ ನಡುವೆಯೂ ಹುಟ್ಟಿದ ತಕ್ಷಣ ಮಗುವನ್ನೆತ್ತಿಕೊಂಡು ಅದರ ಮೊದಲ ಅಳು ಕೇಳುವುದಿರುತ್ತಲ್ಲ ಅದೊಂದು ಅದ್ವಿತೀಯ ಅನುಭವ. ಆ ಪುಟ್ಟ ಜೀವವನ್ನು ನೋಡುತ್ತಿದ್ದಂತೆ ಅಷ್ಟು ಹೊತ್ತು ಪಟ್ಟಕಷ್ಟ, ಆಯಾಸ ಎಲ್ಲ ಮರೆಯಾಗಿಬಿಡುತ್ತೆ.

ಲೇಬರ್‌ ರೂಂ ಅನ್ನೋದು ಎಂತಹ ಶಾಂತಮನಸ್ಥಿತಿಯವರಿಗೂ ಪಿತ್ತ ನೆತ್ತಿಗೇರಿಸಿಬಿಡುತ್ತೆ. ಅಲ್ಲಿ ಕೆಲಸ ಮಾಡಲು ಎಷ್ಟು ತಾಳ್ಮೆಯಿದ್ದರೂ ಸಾಲದು. ಒಮ್ಮೊಮ್ಮೆ ಹೆರಿಗೆಯ ನೋವಿನಲ್ಲಿರೋರ ಮೇಲೂ ಕೂಗಾಡುವುದುಂಟು. ಮರುದಿನ ಬೆಳಿಗ್ಗೆ ವಾರ್ಡಿಗೆ ರೌಂಡ್ಸ್‌ ಹೋದಾಗ ಬಾಣಂತಿಯರು ನಗುತ್ತ ನಮ್ಮನ್ನು ಮಾತಾಡಿಸಿ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಕ್ಕೆ ಧನ್ಯವಾದ ಹೇಳೋರು. ಅಮ್ಮಂದಿರ ಮಗ್ಗುಲಲ್ಲಿ ಆಗತಾನೇ ಅರಳಿದ ಹೂಗಳಂತೆ ಮಲಗಿದ ಎಳೆಕಂದಗಳನ್ನು ನೋಡುತ್ತಿದ್ದಂತೆ ದಣಿದ ಮೈ-ಮನಸುಗಳಿಗೆ ತಂಗಾಳಿ ತೀಡಿದಂತಾಗಿ, ಮತ್ತೆ ಲೇಬರ್ ವಾರ್ಡಿನಲ್ಲಿ ಮಾಡಬೇಕಾದ ಕೆಲಸಕ್ಕೆ ಶಕ್ತಿ ಸಂಚಯವಾಗುತ್ತಿತ್ತು.

‍ಲೇಖಕರು Admin

November 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: