ಸಮಕಾಲೀನ ಪಯಣದ ನಡುವೆ ಒಂದು ‘ಯಾತ್ರೆ’

ಚಾರಿತ್ರಿಕ ದುರಂತಗಳನ್ನು ವರ್ತಮಾನದಲ್ಲಿಟ್ಟು ನೋಡುವ ಒಂದು ವಿಶಿಷ್ಟ ಪ್ರಯೋಗ

ನಾ ದಿವಾಕರ

ಸಮಕಾಲೀನ ಸಾಮಾಜಿಕ-ಸಾಂಸ್ಕೃತಿಕ ಹಾಗೂ ರಾಜಕೀಯ ಸನ್ನಿವೇಶದಲ್ಲಿ ಭಾರತೀಯ ಸಮಾಜವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಲ್ಲಿ ಬಹುಮುಖ್ಯವಾದುದು ಮನುಜ ಸಂವೇದನೆ ಮತ್ತು ಸೂಕ್ಷ್ಮತೆಯ ಕೊರತೆ. ದಿನದಿಂದ ದಿನಕ್ಕೆ ಸಮಾಜದ ಎಲ್ಲ ವಲಯಗಳಲ್ಲೂ ಅಪರಾಧೀಕರಣ ಹೆಚ್ಚಾಗುತ್ತಿರುವುದರ ಜೊತೆಗೇ ಅಪರಾಧಗಳಿಗೆ ಮನ್ನಣೆ, ಪ್ರೋತ್ಸಾಹ, ಉತ್ತೇಜನ ನೀಡುವ ಒಂದು ವಿಕೃತ ವ್ಯವಸ್ಥೆಗೆ 21ನೆಯ ಶತಮಾನದ ಭಾರತದ ವೇದಿಕೆಯಾಗುತ್ತಿದೆ. ಮನುಷ್ಯರ ಪರಸ್ಪರ ಸಂಬಂಧಗಳು ಯಾವುದೋ ಒಂದು ಅಮೂರ್ತವಾದ ಅಸ್ಮಿತೆಗಳ ನೆಲೆಯಲ್ಲೇ ನಿಷ್ಕರ್ಷೆಯಾಗುತ್ತಿರುವ ಸಂದರ್ಭದಲ್ಲಿ, ಸಮಾಜದ ಅತ್ಯುನ್ನತ ಸ್ತರದಿಂದ ಕೆಳಸ್ತರದವರೆಗೂ ʼನಾವುಗಳುʼ ಮತ್ತು ʼಅವರುಗಳುʼ ಸೃಷ್ಟಿಯಾಗುತ್ತಿದ್ದಾರೆ. ಈ ಬೆಳವಣಿಗೆ ಶೂನ್ಯದಿಂದ ಉದಯಿಸಿದ್ದಲ್ಲ, ಸಮಾಜದ ಗರ್ಭದಲ್ಲೇ ಶತಮಾನಗಳಿಂದ ಹುದುಗಿದ್ದ ಆಲೋಚನಾ ಅಕ್ರಮಗಳ ಮರು ಉದ್ಧೀಪನದಿಂದ ಉಗಮಿಸಿದೆ. ಇದಕ್ಕೆ ಕಾರಣಗಳು ನೂರಾರು. ಕಾರಣಕರ್ತರೂ ನೂರಾರು.

ಇಂತಹ ಒಂದು ಕಾಲಘಟ್ಟದಲ್ಲಿ ಸಮಾಜದ ಸಾಂಸ್ಕೃತಿಕ ಏಕತೆ ಮತ್ತು ಸಾಮಾಜಿಕ ಐಕಮತ್ಯವನ್ನು ಕಾಪಾಡಲು, ಭಾರತೀಯರಾದ ನಮಗೆ ಚರಿತ್ರೆಯ ಪುಟಗಳೇ ಹಲವಾರು ನಿದರ್ಶನಗಳನ್ನು ಒದಗಿಸುತ್ತವೆ. ಚಾರಿತ್ರಿಕ ದುರಂತಗಳು ಎಷ್ಟೇ ಅಮಾನುಷ ಎಂದು ತೋರುವಾಗಲೂ, ಈ ವಿಕೃತ ದ್ವೇಷಾಗ್ನಿಗಳ ನಡುವೆ ಒಂದು ಮಾನವೀಯ ಕಿಡಿ ಹೊಳೆಯುವುದನ್ನು ಭಾರತದ ಇತಿಹಾಸದುದ್ದಕ್ಕೂ ನೋಡಬಹುದು. ಇಂತಹ ಒಂದು ವಾತಾವರಣವನ್ನು ಭಾರತದ ವಿಭಜನೆಯ ಇತಿಹಾಸದಲ್ಲೂ, ಇಂದಿಗೂ ಸಹ ಗುರುತಿಸಬಹುದು. ಶತಮಾನಗಳ ಭಾರತೀಯ ಇತಿಹಾಸದಲ್ಲಿ ವಿಭಜನೆ ಒಂದು ಕರಾಳ ಅಧ್ಯಾಯ ಆದರೆ ಇದೂ ಸಹ ಶೂನ್ಯದಲ್ಲಿ ಉದಯಿಸಿದ್ದಲ್ಲ. 20ನೆಯ ಶತಮಾನದ ರಾಜಕೀಯ-ಆರ್ಥಿಕ ಹಾಗೂ ಸಾಂಸ್ಕೃತಿಕ ರಾಜಕಾರಣದೊಟ್ಟಿಗೇ, ಬದಲಾದ ಸಂದರ್ಭದಲ್ಲಿ ಹುಟ್ಟಿಕೊಂಡ ಮತಧರ್ಮಗಳ ಪಾರಮ್ಯ ಮತ್ತು ಮೇಲರಿಮೆಗಳೂ ಸಹ ಇದಕ್ಕೆ ಕಾರಣ ಎನ್ನುವುದು ಸ್ಪಷ್ಟ.

ಈ ವಿಷಮ ಘಟ್ಟದ ಘಟನಾವಳಿಗಳನ್ನು, ಚಾರಿತ್ರಿಕ ಹಿನ್ನೆಲೆಯೊಂದಿಗೇ ಕೆದಕಿ ನೋಡುತ್ತಾ, ವಿಭಜನೆಯ ದುರಂತಮಯ ಘಟನೆಗಳಲ್ಲಿ ಕಾಣಲಾಗಿದ್ದ ಮತಾಂಧತೆ, ಮತೀಯ ದ್ವೇಷ, ಅಮಾನುಷತೆ ಮತ್ತು ಮನುಜ ವಿರೋಧಿ ಚಿಂತನಾ ಕ್ರಮಗಳನ್ನು ಮರುಶೋಧನೆಗೊಳಪಡಿಸಿ, ಇದರ ನಡುವೆಯೇ ಇಂದಿಗೂ ಗುರುತಿಸಬಹುದಾದ ಇಂತಹುದೇ ಆಲೋಚನೆಗಳನ್ನು ಒರೆಹಚ್ಚಿನೋಡಿ, ಹಾಗೆಯೇ ಹೊತ್ತಿ ಉರಿದು ವ್ಯಾಪಿಸಿದ್ದ ದ್ವೇಷಾಗ್ನಿಯ ನಡುವೆಯೇ ಮನುಜ ಪ್ರೀತಿಯ ತಂತುಗಳೂ ಜೀವಂತವಾಗಿದ್ದುದನ್ನು ಗುರುತಿಸುವ ಸಣ್ಣ ಪ್ರಯತ್ನವನ್ನು ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್‌ನ ರೂವಾರಿ, ಕೃಷ್ಣ ಜನಮನ ಮತ್ತು ಬಿ ಎಸ್‌ ದಿನಮಣಿ ತಮ್ಮ “ಯಾತ್ರೆ” ನಾಟಕದ ಮೂಲಕ ಮಾಡಿದ್ದಾರೆ. ಮೈಸೂರಿನ ಕಿರು ರಂಗಮಂದಿರದಲ್ಲಿ ಇದೇ 23ರಂದು ಪ್ರದರ್ಶಿಸಲಾದ ʼಯಾತ್ರೆʼ, ಸಮಕಾಲೀನ ಸಂದರ್ಭದಲ್ಲಿ ಒಂದು ವಿಶಿಷ್ಟ ಪ್ರಯೋಗ ಎಂದೇ ಹೇಳಬಹುದು. ದಾಖಲಿತ ಚಾರಿತ್ರಿಕ ಹೆಜ್ಜೆಗಳನ್ನು ಅಳಿಸಿಹಾಕಿ, ಕಲ್ಪಿತ ಇತಿಹಾಸದ ತುಣುಕುಗಳನ್ನು ಜನಸಾಮಾನ್ಯರ ನಡುವೆ ಬಿತ್ತಲಾಗುತ್ತಿರುವ ಈ ಸಂದರ್ಭದಲ್ಲಿ, ಗತ ಚರಿತೆಯ ದುರಂತ ವಾಸ್ತವಗಳನ್ನು ವಸ್ತುನಿಷ್ಠತೆಯಿಂದ ಪ್ರೇಕ್ಷಕರ ಮುಂದಿಡುವ ಈ ಪ್ರಯತ್ನ ಸ್ತುತ್ಯಾರ್ಹವೂ ಹೌದು.

ದೇಶದ ವಿಭಜನೆಯ ಸಂದರ್ಭ ಮತ್ತು ಆ ನಂತರದಲ್ಲಿ ನಡೆದ ಕೆಲವು ಘಟನೆಗಳ ಸುತ್ತ ಹೆಣೆಯಲಾಗಿರುವ ಕಥಾಹಂದರದ ಮೂಲಕ ಕೃಷ್ಣ ಜನಮನ, ಭಾರತೀಯ ಸಮಾಜವನ್ನು ಇಂದಿಗೂ ಕಾಡುತ್ತಿರುವ ಮತೀಯವಾದ, ಮತಾಂಧತೆ, ಧಾರ್ಮಿಕ ದ್ವೇಷಾಸೂಯೆಗಳು ಹಾಗೂ ಆಳುವ ವರ್ಗಗಳ ಅಸೂಕ್ಷ್ಮ ನಡೆಗಳನ್ನು ತೆರೆದಿಡುತ್ತಾ ಹೋಗುತ್ತಾರೆ. ಮನುಷ್ಯನನ್ನು ಜಾತಿ ಅಥವಾ ಧರ್ಮದ ನೆಲೆಯಿಂದಲೇ ಗುರುತಿಸುವುದು, ಮಾನವ ಸಂಬಂಧಗಳನ್ನು ಇದೇ ನೆಲೆಯಲ್ಲೇ ರೂಪಿಸುವುದು ಅಥವಾ ಭಂಜಿಸುವುದು ಭಾರತೀಯ ಸಮಾಜದಲ್ಲಿ ಅಂತರ್ಗತವಾಗಿರುವ ಒಂದು ಬೇನೆ. ರಾಜಕೀಯ ಆಧಿಪತ್ಯ ಮತ್ತು ಸಾಂಸ್ಕೃತಿಕ ಮೇಲರಿಮೆಯನ್ನು ಸಾಧಿಸಲು ಈ ಬೇನೆಯನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಾಗ ಅದು ವ್ಯಾಧಿಯಾಗಿ ಪರಿಣಮಿಸುತ್ತದೆ. ಈ ವ್ಯಾಧಿಯೇ ವ್ಯಸನವಾಗಿ ಪರಿವರ್ತನೆಯಾದಾಗ ವಿಭಜನೆಯ ಸಂದರ್ಭದಲ್ಲಿ ನಡೆದಂತಹ ದುರಂತಗಳು ನಮ್ಮ ಕಣ್ಣೆದುರಿನಲ್ಲೇ ನಡೆಯುತ್ತವೆ.

20 ಕಲಾವಿದರೊಂದಿಗೆ, 15 ಪಾತ್ರಗಳನ್ನು ಸೃಷ್ಟಿಸಿ, ದೇಶದ ವಿಭಜನೆಯ ಸಂದರ್ಭದ ಹಿಂಸಾತ್ಮಕ ಘಟನೆಗಳನ್ನೂ ಮತ್ತು ಇದರಿಂದ ಸೃಷ್ಟಿಯಾದ ವ್ಯಕ್ತಿಗತ, ಕೌಟುಂಬಿಕ, ಸಾಮಾಜಿಕ ತುಮುಲ ಮತ್ತು ಹತಾಶೆಗಳನ್ನು ಎಳೆಎಳೆಯಾಗಿ ಬಿಡಿಸಿಡುವ ಮೂಲಕ ಕೃಷ್ಣ ಜನಮನ ತಮ್ಮ ʼಯಾತ್ರೆʼಯನ್ನು ರಂಗಭೂಮಿಯ ಪ್ರಯೋಗಕ್ಕೊಳಪಡಿಸಿದ್ದಾರೆ. ಪ್ರಥಮ ಪದಾರ್ಪಣೆಯಾದರೂ ತಮ್ಮ ಅಂಗಿಕ/ಭಾವುಕ ಅಭಿನಯ ಕೌಶಲ್ಯವನ್ನು ಎಲ್ಲ ಎಳೆಯ, ಹಿರಿಯ, ಬಾಲ ಕಲಾವಿದರೂ ಮೆರೆದಿರುವುದು ಮೆಚ್ಚುವಂತಹ ಅಂಶ. ಎಲ್ಲ ಕಲಾವಿದರೂ ತಮ್ಮ ಸಹಜಾಭಿನಯದ ಮೂಲಕ ʼ ಯಾತ್ರೆ ʼಯ ಪಯಣಿಗರಾಗಿ ಪ್ರೇಕ್ಷಕರ ಕಂಗಳಲ್ಲಿ ಕಂಬನಿ ಮೂಡಿಸುತ್ತಾರೆ. ದಕ್ಷ ನಿರ್ದೇಶನ, ಸರಳ ವಸ್ತ್ರ ವಿನ್ಯಾಸ ಮತ್ತು ರಂಗ ಸಜ್ಜಿಕೆಯ ನಡುವೆಯೇ ಪ್ರಬುದ್ಧ ಸಂಭಾಷಣೆ ಮತ್ತು ಅಭಿನಯ ನಾಟಕವನ್ನು ಮತ್ತಷ್ಟು ಪ್ರೇಕ್ಷಣೀಯವಾಗಿ ಮಾಡುತ್ತದೆ.

ಕೃಷ್ಣ ಜನಮನ ಅವರೇ ಹೇಳಿದಂತೆ ಕೇವಲ ಹತ್ತು ದಿನಗಳ ರಂಗ ತರಬೇತಿಯನ್ನು ಪಡೆದು ಈ ಕಲಾವಿದರು ಪ್ರೇಕ್ಷಕರ ಮುಂದೆ ಇಂತಹ ಒಂದು ಸೂಕ್ಷ್ಮ ಕಥಾ ಹಂದರವನ್ನು ಪರಿಣಾಮಕಾರಿಯಾಗಿ ಮೂಡಿಸಿರುವುದು ಪ್ರಶಂಸೆಗೊಳಗಾಗಬೇಕಾದ ಸಂಗತಿ. ಗತ ಚರಿತ್ರೆಯ ಆಗುಹೋಗುಗಳನ್ನು ಮತ್ತು ದುರಂತಗಳನ್ನು ವರ್ತಮಾನದಲ್ಲಿಟ್ಟು ನೋಡುವಾಗ, ಸಮಕಾಲೀನ ಸಂದರ್ಭದ ರಾಜಕೀಯ-ಸಾಮಾಜಿಕ ವಾತಾವರಣವನ್ನೂ ಗಮನದಲ್ಲಿಟ್ಟುಕೊಳ್ಳುವ ಅವಶ್ಯಕತೆ ಖಂಡಿತವಾಗಿಯೂ ಇರುತ್ತದೆ. ಇದನ್ನು ನಿರ್ದೇಶಕರು ಶಿಸ್ತಿನಿಂದ ಮಾಡಿದ್ದಾರೆ.

ಹಾಗೆಯೇ ವರ್ತಮಾನದ ಹತ್ತು ಹಲವಾರು ಆತಂಕಗಳ ನಡುವೆಯೇ ಭವಿಷ್ಯದ ದಿಕ್ಸೂಚಿಯಾಗಿ ನಮ್ಮ ನಡುವೆ ಜೀವಂತವಾಗಿರುವ ಗಾಂಧಿ, ಅಂಬೇಡ್ಕರ್‌ ಅವರ ಚಿಂತನೆಗಳನ್ನು, ಕಥಾ ಹಂದರದ ಒಂದು ಭಾಗವನ್ನಾಗಿ ಮಾಡುವ ಮೂಲಕ ಕೃಷ್ಣ ಜನಮನ ಅವರು ತಮ್ಮ ʼ ಯಾತ್ರೆ ʼಗೆ ಒಂದು ಮಾನವೀಯ ಹೊದಿಕೆಯನ್ನು ಹೊದಿಸಿದ್ದಾರೆ. ಈ ʼ ಯಾತ್ರೆ ʼ ಮುಗಿಯುವುದಲ್ಲ, ಜೀವನದ ಪಯಣದೊಂದಿಗೇ ಸಾಗುವಂತಹುದು. ಆದರೆ ಹಾದಿಯಲ್ಲಿ ಎದುರಾದಂತಹ ಮನುಜ ವಿರೋಧಿ ಚಿಂತನೆಗಳನ್ನು, ಅಸೂಕ್ಷ್ಮತೆಯ ನೆಲೆಗಳನ್ನು, ಅಸಂವೇದನೆಯ ಭೂಮಿಕೆಗಳನ್ನು ಹಾಗು ಮನುಷ್ಯ ಸಹಜವಾದ ಅವಗುಣಗಳನ್ನು ಮೀರಿ ʼಪಯಣʼ ವನ್ನು ಮುಂದುವರೆಸಲು ಸಾಧ್ಯವಿದೆ ಎನ್ನುವುದನ್ನು ಕೃಷ್ಣಜನಮನ ಅವರ ʼ ಯಾತ್ರೆ ʼ ಬಿಂಬಿಸುತ್ತದೆ.

ನಮ್ಮ ಸುತ್ತಲೂ ಕವಿದಿರುವ ಸಾಂಸ್ಕೃತಿಕ ಕಾರ್ಮೋಡದ ನಡುವೆ ಬೆಳ್ಳಿಗೆರೆಗಳು ಮೂಡುವುದನ್ನೇ ಕಾತರದಿಂದ ನಿರೀಕ್ಷಿಸುತ್ತಿರುವ ಸಂವೇದನಾಶೀಲ ಮನಸುಗಳಿಗೆ ಇಂತಹ ನಾಟಕಗಳು ಮುದ ನೀಡುತ್ತವೆ. ದೇಸೀರಂಗ ಸಾಂಸ್ಕೃತಿಕ ಟ್ರಸ್ಟ್‌, ನಿರ್ದೇಶಕ ಕೃಷ್ಣ ಜನಮನ, ಸಹ ನಿರ್ದೇಶಕಿ ಬಿ ಎಸ್‌ ದಿನಮಣಿ, ಎಲ್ಲ ಕಲಾವಿದರು ಮತ್ತು ನೇಪಥ್ಯದಲ್ಲಿದ್ದು ನಾಟಕವನ್ನು ಪ್ರೇಕ್ಷಣೀಯವಾಗಿಸಿದ ಸಮಸ್ತ ಕಲಾವಿದರೂ ಅಭಿನಂದನಾರ್ಹರು. ಎಲ್ಲರೂ ನೋಡಬೇಕಾದ ಒಂದು ಪ್ರಯೋಗ ʼ ಯಾತ್ರೆ ʼ ಇನ್ನೂ ಹಲವು ಪ್ರದರ್ಶನಗಳನ್ನು ಕಂಡು ಕಳೆದುಹೋಗುತ್ತಿರುವ ಸೂಕ್ಷ್ಮತೆಯ ಕೊಂಡಿಗಳನ್ನು ಬೆಸೆಯಲು ನೆರವಾಗುತ್ತದೆ ಎಂಬ ಆಶಯವಂತೂ ಇದ್ದೇ ಇದೆ.

‍ಲೇಖಕರು Admin

November 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: