ಎಸ್ ಬಿ ರವಿಕುಮಾರ್ ಕಥೆ- ಸಹಾಯ…

ಡಾ ಎಸ್ ಬಿ ರವಿಕುಮಾರ್

ಮ್ಯಾನೇಜರು ಮಗ್ಗಿನಲ್ಲಿ ತುಂಬಿ ತುಂಬಿ ಬಕೆಟಿಗೆ ಹಾಕಿಕೊಂಡು  ಮತ್ತೊಮ್ಮೆ ಕಾಂಪೌಂಡಿನಿಂದ ನೀರನ್ನು ಹೊರಗೆ ಹಾಕಿದರು. ಯಾರಿಗೆ ಗೊತ್ತಿತ್ತು ಅಪಾರ್ಟಮೆಂಟಿನವರು ರಾಜಕಾಲುವೆ ಒತ್ತುವರಿ ಮಾಡಿದಾರೆ ಅಂತ? ಖರೀದಿ ಮಾಡುವ ಮೊದಲೇ ಲೀಗಲ್‌ ಒಪಿನಿಯನ್‌ ಪಡೆಯಲಾಗಿತ್ತು. ೧೦ ಸಾವಿರ ಫೀಸು ತೆಗೆದುಕೊಂಡ ಲಾಯರು ರೈಟಿಂಗಿನಲ್ಲಿಯೇ ಕೊಟ್ಟಿದ್ದಾರಲ್ಲ? ಕಾಂಪೌಂಡಿನ ಗಲೀಜು ನೀರನ್ನು ಹೊರಹಾಕಿ ಹೊರಹಾಕಿ ಬೇಸರದಿಂದ ನಿಟ್ಟುಸಿರಿಟ್ಟರು ಮ್ಯಾನೇಜರು.

ಬಹಳ ಕಟ್ಟುನಿಟ್ಟಿನ ಮನುಷ್ಯ ಮ್ಯಾನೇಜರು. ಬ್ಯಾಂಕಿನ ವಿಧಿ ವಿಧಾನಗಳನ್ನು ಚಾಚು ತಪ್ಪದೆ ಪಾಲಿಸುತ್ತಿದ್ದರು. ಒಬ್ಬ ಕಸ್ಟಮರ್‌ಗೆ ಸಾಲ ಮುಂಜೂರು ಮಾಡಬೇಕಾದರೆ ಪ್ಯಾನೆಲ್ ಲಾಯರ್‌ನಿಂದ ಅಭಿಪ್ರಾಯವಿದ್ದರೂ ಅಮೂಲಾಗ್ರವಾಗಿ ಶೋಧಿಸಿ ಮುಂದುವರೆಯುತ್ತಿದ್ದರು. ಯಾರು ಶಿಫಾರಸು ಮಾಡಿದರೂ  ಕೇಳುತ್ತಿರಲಿಲ್ಲ.  “ಶಿಫಾರಸು ಮಾಡುವವರು ಮಾಡುತ್ತಾರೆ. ನಾಳೆ ಏನಾದರೂ ಆದರೆ ಬರುತ್ತಾರಾ ಅವರು?“ ಎಂದು ಎಲ್ಲರ, ಕೆಲವೊಮ್ಮೆ ಸಿಬ್ಬಂದಿಯ ಬಾಯನ್ನೂ ಮುಚ್ದಿಸುತ್ತಿದ್ದರು. ಅವರು ಹೇಳುವುದರಲ್ಲೂ ಸತ್ಯವಿತ್ತು. ಅಂಥದ್ದರಲ್ಲಿ ತಾನೇ ಸ್ವತಃ ಅಪಾರ್ಟ್ಮೆಂಟ್‌  ತೆಗೆದುಕೊಳ್ಳಬೇಕಾದರೆ ಸರಿಯಾಗಿ ಪರಿಶೀಲಿಸುವುದಿಲ್ಲವೇ?   ಪ್ಯಾನೆಲ್‌ ಲಾಯರೊಂದಿಗೆ  ಮಾತನಾಡಿದ್ದರು. “ಇದು ನಾನೇ ಖರೀದಿ ಮಾಡುವುದು ಮಾರಾಯ್ರೆ. ಸ್ವಲ್ಪ ಸರಿಯಾಗಿ ನೋಡಿ ಆಯ್ತಾ?“ ಅವರು ವಿವರವಾಗಿ ಪರಿಶೀಲನೆ ಮಾಡಿ  ಭರವಸೆ ಕೊಟ್ಟಿದ್ದರೂ  ಖಾಸಗಿಯಾಗಿ ಮತ್ತೊಬ್ಬ ಲಾಯರಿಂದಲೂ  ಸಹ  ಅಭಿಪ್ರಾಯ ಪಡೆದಿದ್ದರು. 

ಸ್ವಲ್ಪ ಸುಧಾರಿಸಿಕೊಂಡು ಮತ್ತೆ ನೀರನ್ನು ಹೊರಹಾಕಲು ಪ್ರಾರಂಭಿಸಿದರು. ಲಾಯರುಗಳೇನು ಮಾಡುತ್ತಾರೆ? ದಾಖಲೆ ಸರಿ ಇದೆಯೇ ಎಂದು ನೋಡಿದ್ದಾರೆ ಹೊರತು ದಾಖಲೆ ಕೊಡುವವನು ಲಂಚ ತಿಂದು ಒತ್ತುವರಿ ನಿರ್ಲಕ್ಷಿಸಿ  ಅನುಮತಿ ಕೊಟ್ಟಿದ್ದಾನೆ ಎನ್ನುವುದನ್ನು ಅವರು ತಾನೆ ಹೇಗೆ ಕಂಡು ಹಿಡಿಯಲು ಸಾಧ್ಯ ಎನಿಸಿತು. ನೀರನ್ನು ಎಷ್ಟು ಹೊರ ಹಾಕಿದರೂ ಕಡಿಮೆಯಾಗಿದೆ ಎಂದನ್ನಿಸಲಿಲ್ಲ.  ಇದು ನೀಗುವ ಕೆಲಸವಲ್ಲ ಎಂದು ಕೈಚೆಲ್ಲಿ ಸುಮ್ಮನಾದರು. ಈಕಡೆ ಎಂಟು ಎದುರಿಗೆ ಎಂಟು ಒಟ್ಟು ೧೬ ವಿಲ್ಲಾಗಳು. ಪಶ್ಚಿಮಕ್ಕೆ ಹೋದಂತೆಲ್ಲಾ ಜಾಗ ಸ್ವಲ್ಪ ಎತ್ತರವಿರುವುದರಿಂದ ಅವುಗಳಿಗೆ ಅಷ್ಟು ಬಾಧೆಯಾಗಿಲ್ಲ. ನಾರ್ತ್‌ ಫೇಸಿಂಗ್‌, ಪೂರ್ವ ಉತ್ತರ ಮೂಲೆ ಎಂದು ಆಸೆಯಿಂದ ಕೊಂಡದ್ದು ಹೀಗಾಗುತ್ತದೆ ಎಂದು ಯಾರಿಗೆ ಗೊತ್ತಿತ್ತು?

ಮುಂಗಾರು ಮಳೆ  ಒಂದು ದಿನ  ಬಂದು ನಿಲ್ಲಬಹುದು ಎಂದುಕೊಂಡರೆ  ಜಡಿಮಳೆ ಮೂರು ದಿನವಾದರೂ ನಿಲ್ಲಲಿಲ್ಲ. ಮೊದಲೇ ನೀರು ಇಂಗಲು ಜಾಗವಿಲ್ಲದಂತೆ ಎಲ್ಲ ಕಡೆ ಕಾಂಕ್ರೀಟ್‌ ಮಾಡಿಬಿಟ್ಟಿದ್ದಾರೆ.  ಈ ವಿಲ್ಲಾಗಳ ಗುಂಪಿನ ಹಿಂದೆ  ಕೆರೆಯ ಆಚೆ, ಗುಂಪು ಗುಂಪಾಗಿ ಐಟಿ ಕಂಪನಿಗಳಿವೆ. ರಾತ್ರಿಯಂತೂ ಎಲ್ಲ ಕಟ್ಟಡಗಳಲ್ಲಿನ ಲೈಟುಗಳು ಉರಿಯುತ್ತಿದ್ದಾಗ  ಬಾಲ್ಕನಿಗೆ ಬಂದರೆ ನಂದನಲೋಕದಂಥ  ಅದ್ಭುತ ದೃಶ್ಯ.  ಯಾವುದೋ ಸ್ಟಾರ್‌ ಹೋಟಲಿನಲ್ಲಿದ್ದೇವೆ ಎನಿಸುತ್ತಿತ್ತು.  ಮಾರನೆಯ ದಿನ ನೀರು ಏರುತ್ತಲೇ ಹೋಯಿತು. ಕಾಂಪೌಂಡಿನಿಂದ ಮೆಲ್ಲಗೆ ವರಾಂಡಕ್ಕೂ ನೀರು ಹರಿಯಲು ಪ್ರಾರಂಭಿಸಿತು. ಅಲ್ಲಲ್ಲಿ ಜೆಸಿಬಿಯಿಂದ ದಾರಿ ಮಾಡಿಕೊಟ್ಟು ನೀರನ್ನು ಮುಂದೆ ಸಾಗಿಸಲು ಪಾಲಿಕೆ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದರು.

ನೀರು ನುಗ್ಗಿರುವುದಕ್ಕೆ ಒತ್ತುವರಿ  ಕಾರಣವೆಂಬ ವಿಷಯ ವಿಧಾನಸಭೆಯಲ್ಲಿ ಚರ್ಚೆಗೆ ಬಂದಿತು. ಎಂದಿನಂತೆ  ದೊಡ್ಡ  ಬಿಲ್ಡರ್ಸ್‌ಗಳು ರಾಜಕಾಲುವೆ ಅತಿಕ್ರಮಿಸಿರುವುದನ್ನೂ ನೋಡದೆ, ಭ್ರಷ್ಟಾಚಾರವೆಸಗಿ ಅನುಮತಿ ಕೊಟಿರುವ ಹಿಂದಿನ ಸರ್ಕಾರವೇ  ಕಾರಣ ಎಂದು ಆಳುವವರು; ಮೂರು ವರ್ಷವಾಯಿತು ಅಕ್ರಮ ಕಟ್ಟಡ ತೆರವುಗೊಳಿಸಲು ನಿಮಗೆ ಅಧಿಕಾವಿದೆಯಲ್ಲ ಯಾಕೆ ಮಾಡಲಿಲ್ಲ ಎಂದು  ವಿರೋಧಪಕ್ಷದವರು, ಒಟ್ಟಾರೆ  ಜನರ ಬಗ್ಗೆ  ಬಹಳ ಕಾಳಜಿಯಿಂದ ಎನ್ನುವಂತೆ ಪರಸ್ಪರ ಬೈದುಕೊಳ್ಳುವ ನಾಟಕವಾಡುತ್ತಿದ್ದರು.

ಮಳೆ ನಿಲ್ಲುತ್ತಲೇ ಇಲ್ಲ.  ನೀರಿನ ಮಟ್ಟ ಏರಿ  ಕೆಲವು ಮನೆಗಳ ಹಾಲಿಗೂ ನುಗ್ಗಿದ್ದರಿಂದ ಇನ್ನು ಅಲ್ಲಿಯೇ ಇರುವುದು ಅಸಾಧ್ಯವಾಯಿತು. ರೆವೆನ್ಯೂ ಇಲಾಖೆಯವರು ಮನೆಗಳನ್ನು ಖಾಲಿ ಮಾಡಲು  ಹೇಳುತಿದ್ದಾರೆ. ಕೆಲವರು ನೀರು ನುಗ್ಗಲಾರದು ಎನಿಸಿದ ಒಂದು ರೂಮಿನಲ್ಲಿ  ಎಲ್ಲ ಸಾಮಾನುಗಳನ್ನು ಒಟ್ಟಿ ಬೀಗ ಹಾಕಿ ದೇವರ ಮೇಲೆ ಭಾರ ಹಾಕಿ ಜೀವ ಉಳಿದರೆ ಮುಂದೆ ನೋಡುವ ಎಂದು ಜಾಗ ಖಾಲಿ ಮಾಡಿದರು. ರಸ್ತೆಯಲ್ಲಿ ನೀರೋ ನೀರು. ಜೀಪಿನಲ್ಲಿ ಓಡಾಡುತ್ತ ಜನರನ್ನು ಸಾಗಿಸುತ್ತಿದ್ದ ಸಿಬ್ಬಂದಿ

ಇಂದು ನೀರು ಹೆಚ್ಚಾದದ್ದರಿಂದ ಜೀಪಿನಲ್ಲಿ ಓಡಾಡಲೂ ಸಾಧ್ಯವಾಗದೆ  ಪರದಾಡುತ್ತಿದ್ದಾರೆ. ಅನಿವಾರ್ಯವಾಗಿ  ಹೋಗಬೇಕಾದವರನ್ನು ಮತ್ತು ಮಕ್ಕಳನ್ನು ಶಾಲೆಯಿಂದ ಕರೆತರಲು  ಜೀಪು ಬಿಟ್ಟು ಟ್ರಾಕ್ಟರ್‌ ಉಪಯೋಗಿಸುತ್ತಿದ್ದಾರೆ.

ಹಾಲಿಗೂ ಗಲೀಜು ನೀರು  ನುಗ್ಗಿದ್ದು ಕಂಡು ಅಸಹ್ಯವಾಗಿ ಮೊದಲು ಇಲ್ಲಿಂದ  ಹೋಗೋಣ ಎನ್ನತೊಡಗಿದಳು ಪತ್ನಿ.  ಜಯನಗರದಲ್ಲಿರುವ ಮಗಳ ಮನೆಗೆ ಹೋಗಿ ಅಲ್ಲಿಂದಲೇ ಬ್ಯಾಂಕಿಗೆ ಓಡಾಡುವುದು ಎಂದು ನಿರ್ಧರಿಸಲಾಯಿತು. ಬ್ಯಾಂಕು ಇರುವ ಹಳೆಯ ಬಡಾವಣೆಗಳಲ್ಲಿ ಯಾವುದೇ ಸಮಸ್ಯೆಯಿಲ್ಲವಲ್ಲ? ತಮಗೆ ಅತ್ಯಾವಶ್ಯಕವಾಗಿ ಬೇಕಾದ ಬಟ್ಟೆಬರೆಗಳನ್ನು ಮಾತ್ರ ಎರಡು ಸೂಟುಕೇಸಿನಲ್ಲಿ ತುಂಬಿಸಿ, ಉಳಿದ ಎಲ್ಲ ಸಾಮಾನುಗಳನ್ನು ಹಿಂದಿನ ರೂಮಿಗೆ ಸೇರಿಸಿ ಧರ್ಮಸ್ಥಳದ ಮಂಜುನಾಥನ ಮೇಲೆ ಭಾರ ಹಾಕಿ ಸಿದ್ಧರಾದರು. ರೆವೆನ್ಯೂ ಸಿಬ್ಬಂದಿ ಕಳಿಸಿದ ಟ್ರಾಕ್ಟರ್‌ ಡ್ರೈವರನ ಕೈಲಿ ಸೂಟುಕೇಸು ಕೊಟ್ಟು ಇನ್ನೊಂದನ್ನು ಕೊಡಲು ಈ ಕಡೆ ತಿರುಗಿದಾಗ ಈ ಟ್ರಾಕ್ಟರಿನ ಡ್ರೈವರನನ್ನು ಎಲ್ಲೋ ನೋಡಿದ್ದೇನೆ ಅನಿಸಿತು. ಮತ್ತೊಂದು ಸೂಟುಕೇಸನ್ನು ಕೊಡುವಾಗ ಛಕ್ಕನೆ ಹೊಳೆಯಿತು.  ಮತ್ತೆ ಅವನನ್ನು ನೋಡಲು ಧೈರ್ಯವಾಗದೆ  ಹೆಂಡತಿಯನ್ನು ಹತ್ತಿಸಲು ಸಹಾಯ ಮಾಡಿ ತಾವೂ ಹತ್ತಿ ಒಂದು ಕಡೆ ಕುಳಿತರು. ಪ್ರತಿ ದಿನ ಕಾರಿನಲ್ಲಿ ಓಡಾಡುತ್ತಿದ್ದವರು ಇಂದು ಟ್ರಾಕ್ಟರಿನಲ್ಲಿ! ಅವನೂ ನನ್ನನ್ನು ಗಮನಿಸಿ ಗುರುತಿಸಿರಬಹುದೇ ಎಂಬ ಅನುಮಾನವಾಯಿತು. ಉಳಿದವರೂ ಹತ್ತಿದ ಮೇಲೆ “ಹೊರಡೋಣವೇ ಸ್ವಾಮಿ?” ಎಂದವನು ಯಾರ ಉತ್ತರಕ್ಕೂ ಕಾಯದೆ ಇಂಜಿನ್‌ ಚಾಲೂ ಮಾಡಿದ.

                                                                       ***

ಅಂದು  ವಿಪರೀತ ರಷ್‌  ಇತ್ತು ಬ್ಯಾಂಕಿನಲ್ಲಿ. ರೈತನೊಬ್ಬ ಟ್ರಾಕ್ಟರ್‌ ಲೋನು ಮಂಜೂರಾಗಿದೆ ರಿಲೀಸ್‌ ಮಾಡಿ ಎಂದು ಬೇಡಿಕೊಳ್ಳುತ್ತಿದ್ದ. ಸಿಬ್ಬಂದಿ, “ಇಲ್ಲ ಮಾರಾಯ ಅದು ಸರದಿಯ ಪ್ರಕಾರ ಆಗಬೇಕು. ಹಿಂದೆ ಮಂಜೂರಾದವರಿಗೆ ಡೇಟು ಕೊಟ್ಟಿದ್ದೇವೆ. ನಿನ್ನ ಸರದಿ ಬರುವ ದಿನಾಂಕ ಹೇಳಿದ್ದೇವೆಲ್ಲ ಲೋನ್‌ ರೆಕಾರ್ಡ್‌ ಮಾಡಲು ಅಂದೇ ಬರಬೇಕು,” ಎಂದು ಹೇಳಿದರೂ ಕೇಳದ ಅವನನ್ನು ನನ್ನ ಚೇಂಬರಿಗೆ ಕಳಿಸಿದ್ದರು. “ಸಾಲ ಮುಂಜೂರಾಗಿದೆ. ಮುಂದಿನವಾರ ಮಗಳ ಮದುವೆ ನಿರ್ಧಾರವಾಗಿರುವುದರಿಂದ ಬೇಗ ಕೊಡಿ. ಓಡಾಡಲು ಬಹಳ ಅನುಕೂಲವಾಗುತ್ತದೆ  ಸಿಟಿಗೆ ಹತ್ತಿರವಿದ್ದರೂ ನಮ್ಮ ಹಳ್ಳಿಯಲ್ಲಿ ಬೇರಾರದೂ ಟ್ರಾಕ್ಟರ್‌ ಇಲ್ಲ. ಮದುವೆ ಸಾಮಾನು ಸಾಗಿಸಲು ಬಹಳ ಅನುಕೂಲವಾಗುತ್ತದೆ,” ಎಂದು ಗೋಗೆರೆದ. ಆದರೆ ಲೋನು ರೆಕಾರ್ಡ್ ಮಾಡುವುದು ಅಷ್ಟು ಸುಲಭವವೇ? ಸಿಬ್ಬಂದಿ ಪ್ರತಿದಿನ ತಾವು ಮಾಡಬಲ್ಲಷ್ಟು ಜನರಿಗೆ ಹೇಳಿರುತ್ತಾರೆ. ಇವನಿಗೆ ಮೊದಲೇ ಮಾಡಿಕೊಡುವುದು ಹೇಗೆ? “ಅವೆಲ್ಲಾ ಆಗುವುದಿಲ್ಲ ನಿನ್ನ ಮದುವೆ ತಾಪತ್ರಯ ಎಲ್ಲ ಹೇಳಬ್ಯಾಡ ಮಾರಾಯ. ನಿನಗೆ ಕೊಟ್ಟಿರುವ ದಿನಾಂಕಕ್ಕೆ ಲೋನು ಬೇಕಾದರೆ ಬಾ. ಇಲ್ಲದಿದ್ದರೆ ಬಿಡು,” ಎಂದು ಕಡ್ಡಿ ಮುರಿದಂತೆ ಹೇಳಿ ಎದ್ದು ಚೇಂಬರಿನಿಂದ ಹೊರಗೆ ಹೊರಡುವಾಗ ಅಸಹಾಯಕತೆಯಿಂದ ಮುಖ ಚಿಕ್ಕದು ಮಾಡಿದವನ ಕಣ್ಣಲ್ಲಿ ನೀರಾಡಿತ್ತೇ ಎಂಬ ಅನುಮಾನ ಕಾಡಿತ್ತು. ನಂತರ ಅವರ ಹಳ್ಳಿಬಳಿ ಟೆಕ್‌ ಪಾರ್ಕ್‌ ಪ್ರಾರಂಭವಾಗಿ ಭೂಮಿಗೆ ಚಿನ್ನದ ಬೆಲೆ ಬಂದಿದ್ದರಿಂದ ಮತ್ತೆಂದೂ ಆತ  ಬೇರೆ ಸಾಲಕ್ಕೆ ಬಂದಿರಲಿಲ್ಲ. ಅದೇ ವ್ಯಕ್ತಿ ಅಲ್ಲವೇ?
                                                            ******

ನೀರಿಲ್ಲದ ಜಾಗಕ್ಕೆ  ಬಂದ ನಂತರ ಹೆಂಡತಿಯನ್ನು ಇಳಿಸಿಕೊಂಡು, ಸೂಟುಕೇಸುಗಳನ್ನು ತೆಗೆದುಕೊಂಡರು. ಜೀಪುಗಳೂ ಬಾರದ ಸಮಯದಲ್ಲಿ ಇಲ್ಲಿಗೆ ಬರಲು ಸಹಾಯ ಮಾಡಿದ ವ್ಯಕ್ತಿಗೆ  ಐನೂರರ ನೋಟೊಂದನ್ನು ಕೊಡಲು ಹೋದರು, “ಸ್ವಾಮಿ ನಾನು ಮೂರು ದಿನದಿಂದ ಇದನ್ನು ಸೇವೆ ಅಂತ ಮಾಡುತ್ತಿದ್ದೇನೆ. ಬಾಡಿಗೆಗಲ್ಲ. ಇಲ್ಲೇ ಹತ್ತು ಕಿಲೋಮೀಟರ್‌ ದೂರವೇ ನನ್ನ ಹಳ್ಳಿ. ಕಷ್ಟ ಸುಖ ಬಂದಾಗ ಮನುಷ್ಯ ಮನುಷ್ಯನಿಗೆ ಸಹಾಯ ಮಾಡಬೇಲ್ಲವೇ ಸ್ವಾಮಿ?” ಎಂದು  ದಿಟ್ಟಿಸಿ ನೋಡಿ ತುಟಿಯ ಒಂದು ಮೂಲೆಯಲ್ಲಿ ನಗುತ್ತ  ಟ್ರಾಕ್ಟರ್‌ ಚಾಲೂ ಮಾಡಿದವನು ತಮ್ಮನ್ನು  ಮುಜುಗರದಿಂದ ಪಾರುಮಾಡಲೆಂದೇ  ಗುರುತಿಸದವನಂತೆ  ನಟಿಸಿದ ಎಂದು ಮ್ಯಾನೇಜರಿಗೆ ಸ್ಪಷ್ಟವಾಗಿ ಗೊತ್ತಾಗಿ ತಲೆ ತಗ್ಗಿಸಿದರು.

‍ಲೇಖಕರು Admin

November 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: