ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಸತ್ತ ಸೈನಿಕನ ಮನೆಯಲ್ಲಿ

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

8

ವೋಝ್‌ದ್ವಿಶೆನ್ಸ್‌ಕ್‌ನ ಆಸ್ಪತ್ರೆಯಲ್ಲಿ ಪೀಟರ್ ಅವ್ದೀವ್ ಸತ್ತ ದಿನ ಅವನ ಮುದಿ ತಂದೆ, ಅವ್ದೀವ್‌ನ ಅಣ್ಣನ ಹೆಂಡತಿ (ಆ ಅಣ್ಣನ ಬದಲಿಗೆಂದೇ ಅವ್ದೀವ್ ಸೈನ್ಯಕ್ಕೆ ಬಂದಿದ್ದ) ಮದುವೆ ವಯಸ್ಸಿಗೆ ಬರುತಿದ್ದ ಅಣ್ಣನ ಮಗಳು ಎಲ್ಲರೂ ಸೇರಿ ಕಣದಲ್ಲಿ ಹಿಮ ಹೆಪ್ಪುಗಟ್ಟಿದ್ದ ನೆಲದ ಮೇಲೆ  ಓಟ್ಸ್ ಬಡಿಯುತಿದ್ದರು. ಎರಡು ದಿನದ ಹಿಂದೆ ಭಾರೀ ಹಿಮ ಬಿದ್ದಿತ್ತು, ಅವತ್ತು ಬೆಳಗಿನ ಜಾವ ಹಳುಕು ಹಿಮ ಜೋರಾಗಿ ಸುರಿದಿತ್ತು. ಮೂರನೆಯ ಬಾರಿ ಕೋಳಿ ಕೂಗುವ ಹೊತ್ತಿಗೆ ಮುದುಕ ಎದ್ದು, ಹಿಮ ಬಿದ್ದ ಕಿಟಕಿಯ ಗಾಜಿನಲ್ಲಿ ಕಂಡ ಪ್ರಖರ ಬೆಳುದಿಂಗಳು ನೋಡಿ, ಒಲೆಗೂಡಿನ ಹತ್ತಿರ ಹೋಗಿ, ಕುರಿಯ ಚರ್ಮದ ಕೋಟು, ಕ್ಯಾಪು ತೊಟ್ಟು ತೆನೆ ಬಡಿಯುವ ಕಣಕ್ಕೆ ಹೊರಟ. ಅಲ್ಲೊಂದೆರಡು ಗಂಟೆ ಕೆಲಸ ಮಾಡಿ ಮತ್ತೆ ಮನೆಗೆ ಬಂದು ಮಗನನ್ನೂ ಹೆಂಗಸರನ್ನೂ ಎಬ್ಬಿಸಿದ. ಹೆಂಗಸರು ಕಣಕ್ಕೆ ಬಂದಾಗ ಆಗಲೇ ನೆಲವನ್ನು ಗುಡಿಸಿ ಸಿದ್ಧಮಾಡಲಾಗಿತ್ತು. ಒಣಗಿದ ಹಿಮದ ರಾಶಿಯಲ್ಲಿ ಸನಿಕೆ ಸಿಕ್ಕಿಸಿತ್ತು, ಪಕ್ಕದಲ್ಲಿ ಬರ್ಚ್ ಮರದ ಬರಲು ಇದ್ದವು. ಸ್ವಚ್ಛವಾಗಿದ್ದ ಬಡಿಯುವ ಕಣದ ಉದ್ದಕ್ಕೂ ಓಟ್ಸ್ ತೆನೆಗಳನ್ನು ಸಾಲಾಗಿ ಜೋಡಿಸಿಡಲಾಗಿತ್ತು. ಎಲ್ಲರೂ ತಮ್ಮ ತಮ್ಮ ಬಡಿಗೋಲು ಎತ್ತಿಕೊಂಡು ತೆನೆಗಳಿಗೆ ಲಯಬದ್ಧವಾಗಿ ಒಮ್ಮೆಗೆ ಮೂರು ಮೂರರಂತೆ ಏಟು ಹಾಕಿದರು. ಮುದುಕ ತನ್ನ ಭಾರವಾದ ಬಡಿಗೆಯಲ್ಲಿ ತೆನೆ ಬಿರಿದು ಕಾಳು ಸಡಿಲವಾಗುವ ಹಾಗೆ ಪೆಟ್ಟು ಹಾಕುತಿದ್ದ. ಹುಡುಗಿ ತೆನೆಗಳಿಗೆ ಏಟು ಹಾಕುತಿದ್ದಳು, ಸೊಸೆ ತೆನೆಗಳನ್ನು ತಿರುವಿ ಹಾಕುತಿದ್ದಳು.

ಚಂದ್ರ ಮುಳುಗಿದ್ದ. ಮುಂಜಾವದ ನಸು ಬೆಳಕಿತ್ತು. ತೆನೆಗಳನ್ನು ಬಡಿಯುವ ಕೆಲಸ ಮುಗಿಯುತ್ತ ಬಂದಿತ್ತು. ಆಗ ದೊಡ್ಡ ಮಗ ಅಕೀಮ್ ಬಂದ. ಕುರಿಯ ಚರ್ಮದ ಕೋಟು, ಕ್ಯಾಪು ತೊಟ್ಟಿದ್ದ. ಬಡಿಯುತಿದ್ದವರ ಜೊತೆ ತಾನೂ ಸೇರಿದ.  

’ಯಾಕೆ ಹೀಗೆ ಸುತ್ತಾಡತಾ ಇದೀಯ?’ ಅಪ್ಪ ಕೆಲಸ ನಿಲ್ಲಿಸಿ ಬಡಿಗೆಗೆ ಒರಗಿ ನಿಂತು ಕೇಳಿದ. 

’ಕುದುರೆಗಳಿಗೆ ಮೈತೊಳೆಯಬೇಕಾಗಿತ್ತು.’

’ಕುದುರೆಗಳಿಗೆ ಮೈತೊಳೆಯಬೇಕಾಗಿತ್ತು!’ ಅನ್ನುತ್ತ ಅಪ್ಪ ಅವನನ್ನು ಅಣಕಿಸಿ, ’ಆ ಕೆಲಸಾನ ನಿಮ್ಮಮ್ಮ ನೋಡಿಕೊಳ್ಳತಾಳೆ, ಬಡಿಕೋಲು ತಗೋ ನೀನು! ಹೊಟ್ಟೆ ಬರತಾ ಇದೆ, ಸೋಮಾರಿ ಕುಡುಕಾ!’ ಅಂದ. 

’ಮಹಾ, ನನಗೆ ಮೂಗಿನ ಮಟಾ ಕುಡಿಸಿದ್ದೆ ನೋಡು ನೀನು!’ ಮಗ ಗೊಣಗಿದ.

’ಏನಂದೇ?’ ಮುದುಕ ಹುಬ್ಬು ಗಂಟಿಕ್ಕಿ ಗಟ್ಟಿಸಿ ಕೇಳಿದ. ತೆನೆಗೆ ಬಡಿಯುವ ಅವನ ಲಯ ತಪ್ಪಿತ್ತು.

ಮಗ ಮಾತಾಡದೆ ಕೋಲೆತ್ತಿದ, ನಾಲ್ಕು ಜನರೂ ಈಗ ತೆನೆ ಬಡಿಯುತಿದ್ದರು.

’ಧಪ್, ದಪಾ ದಪಾ ದಪಾ ಧಪ್ಧಪ್, ದಪಾ ದಪಾ ದಪಾ ಧಪ್’ ಪ್ರತಿ ನಾಲ್ಕನೆಯ ಪೆಟ್ಟು ಮುದುಕನ ಭಾರೀ ಬಡಿಗೆಯಿಂದ ಬೀಳುತಿತ್ತು. 

’ನಿನ್ನ ಕತ್ತು ನೋಡು, ಜಮೀನ್ದಾರರ ಕತ್ತಿನ ಥರ ಕೊಬ್ಬಿದೆ. ನನ್ನ ಪ್ಯಾಂಟು ನೋಡು ಸಿಕ್ಕಿಸುವುದಕ್ಕೆ ಸೊಂಟವೇ ಇಲ್ಲ ಅನ್ನುವ ಹಾಗೆ ಉದುರಿ ಹೋಗತಿದೆ!’ ಅನ್ನುತ್ತ ಮುದುಕನ ಸರದಿ ತಪ್ಪಿ, ಲಯ ತಪ್ಪ ಬಾರದೆಂದು ಅವನು ಒಂದು ಪೆಟ್ಟಿನ ಬದಲು ಬಡಿಗೆಯನ್ನು ಗಾಳಿಯಲ್ಲಿ ಆಡಿಸುತ್ತ ಹೇಳಿದ. 

ತೆನೆಗಳ ಸಾಲು ಮುಗಿದಿತ್ತು. ಹೆಂಗಸರು ಹುಲ್ಲನ್ನು ಗೋರಿ ಗುಡ್ಡೆ ಹಾಕುವುದಕ್ಕೆ ಶುರು ಮಾಡಿದರು. 

’ನಿನ್ನ ಬದಲಾಗಿ ಸೈನ್ಯಕ್ಕೆ ಸೇರಿದನಲ್ಲ ಪೀಟರ್… ಪೆದ್ದ ಅವನು. ನೀನು ಸೈನ್ಯಕ್ಕೆ ಸೇರಿದ್ದರೆ ನಿನ್ನ ತಲೆಯಲ್ಲಿರುವ ಮಂಕುತನವನ್ನ ಒಂದಷ್ಟು ಕೊಡವಿ ಬುದ್ಧಿ ತುಂಬಿರತಿದ್ದರು. ಅವನು ಮನೆಯಲ್ಲಿದ್ದಿದ್ದರೆ ನಿನ್ನಂಥ ಐದು ಜನಕ್ಕೆ ಸಮ ಆಗಿರತಿದ್ದ!’

’ಸಾಕು ಮಾವಾ…’ ಅನ್ನುತ್ತಾ ಸೊಸೆ ಕಟ್ಟು ಹರಿದಿದ್ದ ತೆನೆಗಳನ್ನು ಪಕ್ಕಕ್ಕೆ ಎಸೆದಳು.

’ಹ್ಞೂಂ, ಆರು ಜನರ ಹೊಟ್ಟೆಗೆ ಹಾಕಬೇಕು, ಕೆಲಸ ಮಾಡುವವರು ಮಾತ್ರ ಒಬ್ಬರೂ ಇಲ್ಲ! ಇಬ್ಬರ ಕೆಲಸ ಪೀಟರ್ ಒಬ್ಬನೇ ಮಾಡತಿದ್ದ. ಅವನು ಮಿಕ್ಕವರ ಹಾಗೆ…’

ಮನೆಯಿಂದ ಬರುವ ಸವೆದ ಕಾಲು ಹಾದಿಯಲ್ಲಿ ಮುದುಕನ ಹೆಂಡತಿ ಬರುತಿದ್ದಳು. ಉಣ್ಣೆಯ ಪಟ್ಟಿಯನ್ನು ಮೊಳಕಾಲವರೆಗೆ ಬಿಗಿಯಾಗಿ ಸುತ್ತಿ ಅದರ ಮೇಲೆ ಮರದ ತೊಗಟೆಯ ಹೊಸ ಶೂ ತೊಟ್ಟಿದ್ದಳು. ಹೆಜ್ಜೆ ಇಟ್ಟ ಹಾಗೆಲ್ಲ ಹೆಪ್ಪುಗಟ್ಟಿದ ಹಿಮ ಸದ್ದು ಮಾಡುತ್ತ ಪುಡಿಯಾಗುತಿತ್ತು. ಇನ್ನೂ ತೂರಬೇಕಾದ ಕಾಳನ್ನು ಗಂಡಸರು ಅಲ್ಲೇ ರಾಶಿ ಮಾಡುತಿದ್ದರು. ಹುಡುಗಿ ನೆಲ ಗುಡಿಸುತಿದ್ದಳು. 

’ಹಳ್ಳಿಯ ಹಿರಿಯ ಬಂದಿದ್ದ. ಎಲ್ಲಾರೂ ದಣಿಗಳ ಮನೆಗೆ ಹೋಗಬೇಕಂತೆ, ಗಾಡಿಗೆ ಇಟ್ಟಿಗೆ ಪೇರಿಸಬೇಕಂತೆ, ನಾಶ್ತಾ ತಯಾರು ಮಾಡಿದೇನೆ, ಬರಲ್ಲವಾ ನೀವು?’ ಅಂದಳು ಮುದುಕಿ. 

’ಸರಿ, ಆ ಬೂದು ಬಣ್ಣದ ಕುದುರೆ ಇದೆಯಲ್ಲ ಅದನ್ನ ಗಾಡಿಗೆ ಕಟ್ಟು, ಹೊರಡು, ಹುಷಾರು. ಹೋದ ಸಾರಿ ಮಾಡಿದ ಹಾಗೆ ನನಗೆ ತೊಂದರೆ ತಂದಿಡಬೇಡ. ಪೀಟರ್ ಇದ್ದಿದ್ದರೆ ಎಷ್ಟು ಚೆನ್ನಾಗಿರತಿತ್ತು…’ ಎಂದು ಮುದುಕ ಅಕೀಮ್‌ಗೆ ಹೇಳಿದ.

’ಅವನು ಮನೇಲ್ಲಿದ್ದಾಗ ಯಾವಾಗಲೂ ಬೈಯುತ್ತಾ ಇದ್ದೆ, ಈಗ ಅವನಿಲ್ಲ, ನನ್ನ ಗೋಳು ಹೊಯ್ದುಕೊಳ್ಳುತ್ತೀ,’ ಎಂದು ಅಕೀಮ್‌ ಎದುರುತ್ತರ ಕೊಟ್ಟ. 

’ನೀನು ಬೈಯಿಸಿಕೊಳ್ಳೋದಕ್ಕೇ ಲಾಯಕ್ಕು. ನೀನು ಯಾವತ್ತೂ ಪೀಟರ್‌ಗೆ ಸಮ ಆಗಲೇ ಇಲ್ಲ,’ ಅಂದಳು ಮುದುಕಿ. 

’ಸರಿ, ಬಿಡು,’ ಅಂದ ಮಗ. 

’ಇರಲಿ ಬಿಡು ಅಂತೆ! ನಾವು ಹಿಟ್ಟಿಗೆ ಅಂತ ಎತ್ತಿಟ್ಟಿದ್ದ ದುಡ್ಡೆಲ್ಲ ಹೆಂಡ ಕುಡಿದು ಮುಗಿಸಿದೆ. ಈಗ ಇರಲಿ ಬಿಡು ಅನ್ನುತೀಯಲ್ಲಾ!’

’ಆಗಿದ್ದೆಲ್ಲ ಆಗಿ ಹೋಯಿತು, ಬಿಡಿ!’ ಅಂದಳು ಸೊಸೆ. 

ಅಪ್ಪ ಮಗನ ಮುನಿಸು ಹಳೆಯದು. ಪೀಟರ್ ದಂಡು ಸೇರುವುದಕ್ಕೆ ಹೋದಾಗಿನಿಂದಲೂ ಇದ್ದದ್ದು. ‘ಬೇಟೆ ಆಡುವ ಹದ್ದನ್ನು ಬಿಟ್ಟು ಹಾಡು ಹೇಳುವ ಕೋಗಿಲೆ ಉಳಿಸಿಕೊಂಡೆ!’ ಅನ್ನಿಸುತಿತ್ತು ಮುದುಕನಿಗೆ. ಮುದುಕ ಅರ್ಥಮಾಡಿಕೊಂಡ ಹಾಗೆ ಒಂದು ಕುಟುಂಬದಲ್ಲಿ ಮಕ್ಕಳಿರುವ ಗಂಡಸಿನ ಬದಲಾಗಿ ಮಕ್ಕಳಿರದ ಮಗ ದಂಡು ಸೇರಬೇಕಾಗಿತ್ತು. ಅಕೀಮ್‌ಗೆ ನಾಲ್ಕು ಮಕ್ಕಳು, ಪೀಟರ್ ಅವ್ದೀವ್‌ಗೆ ಒಂದೂ ಇಲ್ಲ. ಪೀಟರ್ ಅವ್ದೀವ್ ಎಲ್ಲಾ ಅವರಪ್ಪನ ಹಾಗೆ. ಎಲ್ಲ ವಿಚಾರಕ್ಕೂ ಗಮನ ಕೊಡುತ್ತ, ಎಷ್ಟು ಕಷ್ಟ ಬಂದರೂ ಸಹಿಸುತ, ಜಾಣನ ಹಾಗೆ ದುಡಿಯುತಿದ್ದ. ಮೈಗಳ್ಳ ಅಲ್ಲ. ಯಾವಾಗಲೂ ಏನಾದರೂ ಮಾಡುತ್ತಲೇ ಇದ್ದ. ಜನ ಏನೋ ಮಾಡುತಿರುವುದು ಕಂಡರೆ ಇವನೂ, ಅಪ್ಪನ ಹಾಗೇ, ಹೋಗಿ ಸಹಾಯ ಮಾಡುತಿದ್ದ. ಹುಲ್ಲು ಕೊಯ್ಯುತಿದ್ದ, ಗಾಡಿಗೆ ಮೂಟೆ ಹೇರುತಿದ್ದ, ಮರ ಕಡಿಯುತಿದ್ದ, ಇಲ್ಲಾ ಸೌದೆ ಸೀಳುತಿದ್ದ. ಮಗ ದಂಡಿಗೆ ಹೋಗಿದ್ದಕ್ಕೆ ಅಪ್ಪನಿಗೆ ಬಹಳ ದುಃಖವಾಗಿತ್ತು. ಏನೂ ಮಾಡುವ ಹಾಗಿರಲಿಲ್ಲ. ಆ ಕಾಲದಲ್ಲಿ ಸೈನ್ಯದ ಸೇವೆ ಕಡ್ಡಾಯವಾಗಿತ್ತು. ಸೈನ್ಯಕ್ಕೆ ಸೇರುವುದು ಅಂದರೆ ಮರಣದಂಡನೆಗೆ ಗುರಿಯಾದ ಹಾಗೆ. ದಂಡಿಗೆ ಹೋದ ಮಗ ಕತ್ತರಿಸಿ ಎಸೆದ ಮರದ ಕೊಂಬೆಯ ಹಾಗೆ. ಎಷ್ಟು ನೋವುಪಟ್ಟರೂ ಫಲವಿಲ್ಲ. ದೊಡ್ಡ ಮಗನನ್ನು ಚುಚ್ಚಿ ಆಡಿಕೊಳ್ಳುವುದಕ್ಕೆ ಅಂತಲೇ ಮುದುಕ ತನ್ನ ಚಿಕ್ಕ ಮಗನನ್ನು ನೆನೆಯುತಿದ್ದ ಅಷ್ಟೇ. ತಾಯಿಗೆ ಮಾತ್ರ ಕಿರಿಯ ಮಗ ಆಗಾಗ ನೆನಪಾಗುತಿದ್ದ. ಸುಮಾರು ಒಂದು ವರ್ಷದಿಂದ ಪೀಟರ್‌ಗೆ ಸ್ವಲ್ಪ ದುಡ್ಡು ಕಳಿಸು ಎಂದು ಗಂಡನಿಗೆ ಹೇಳುತ್ತಲೇ ಇದ್ದಳು. ಅವನು ಅದಕ್ಕೆ ಮಾತೇ ಆಡುತಿರಲಿಲ್ಲ. 

ಅವ್ದೀವ್‌ನ ಮನೆಯವರು ಸ್ಥಿತಿವಂತರು. ಮುದುಕ ಒಂದಷ್ಟು ದುಡ್ಡು ಉಳಿಸಿದ್ದ. ಯಾವ ಕಾರಣಕ್ಕೂ ಅದನ್ನು ಮುಟ್ಟುವುದಕ್ಕೆ ಒಪ್ಪುತ್ತಲೇ ಇರಲಿಲ್ಲ. ಈಗ, ಹೇಗಿದ್ದರೂ ಕಿರಿಯ ಮಗನ ಪ್ರಸ್ತಾಪವನ್ನು ಗಂಡನೇ ಮಾಡಿದ್ದರಿಂದ, ಅವಳು ಮತ್ತೆ ಮನಸ್ಸು ಮಾಡಿ ಕೇಳಿದಳು. ಓಟ್ಸ್ ಮಾರಿದ ಮೇಲೆ ಒಂದು ರೂಬಲ್ ದುಡ್ಡಾದರೂ ಮಗನಿಗೆ ಕಳಿಸು ಅನ್ನಬೇಕು ಅಂದುಕೊಂಡಳು.. ಹುಡುಗರು ದಣಿಯ ಮನೆಯ ಕೆಲಸಕ್ಕೆ ಹೋಗಿ ಅವರಿಬ್ಬರೇ ಉಳಿದಾಗ ಓಟ್ಸ್ ದುಡ್ಡಿನಲ್ಲಿ ಪೀಟರ್‌ಗೆ ಒಂದೆರಡು ರೂಬಲ್ ಕಳಿಸು ಎಂದು ಗಂಡನನ್ನು ಒಪ್ಪಿಸಿದಳು. ಅರುವತ್ತೊಂಬತ್ತು ಖಂಡುಗ ಓಟ್ಸ್ ಚೀಲಕ್ಕೆ ತುಂಬಿ, ಮೂರು ಸ್ಲೆಜ್ ಗಾಡಿಗಳಿಗೆ ಏರಿಸಿ, ಬಿಗಿದು ಕಟ್ಟಿದ್ದಾಯಿತು.  ಮುದುಕಿ ಚರ್ಚಿನ ಗುಮಾಸ್ತನಿಗೆ ಹೇಳಿ ಬರೆಸಿದ್ದ ಕಾಗದವನ್ನು ಗಂಡನ ಕೈಗೆ ಕೊಟ್ಟಳು. ಮುದುಕ ಪಟ್ಟಣಕ್ಕೆ ಹೋದಮೇಲೆ ಪತ್ರದ ಜೊತೆ ಒಂದು ರೂಬಲ್ ಇಟ್ಟು ಸರಿಯಾದ ವಿಳಾಸಕ್ಕೆ ಕಳಿಸುತೇನೆ ಎಂದು ಮಾತು ಕೊಟ್ಟ. 

ಮುದುಕ ಕುರಿಯ ಚರ್ಮದ ಹೊಸ ಕೋಟು, ಮನೆಯಲ್ಲೇ ನೂಲು ತೆಗೆದು ಹೊಲಿದ ಹತ್ತಿಯ ನಿಲುವಂಗಿ ತೊಟ್ಟು, ಕಾಲಿಗೆ ಬಿಳಿಯ ಉಣ್ಣೆಯ ಪಟ್ಟೆ ಸುತ್ತಿಕೊಂಡು, ಪತ್ರವನ್ನು ಪರ್ಸಿನಲ್ಲಿಟ್ಟು, ಪ್ರಾರ್ಥನೆ ಹೇಳಿ, ಮುಂದಿನ ಸ್ಲೆಜ್‌ನಲ್ಲಿ ಕೂತು ಪಟ್ಟಣಕ್ಕೆ ಹೊರಟ. ಅವನ ಮೊಮ್ಮಗ ಕೊನೆಯ ಸ್ಲೆಜ್‌ನಲ್ಲಿದ್ದ. ಪಟ್ಟಣ ತಲುಪಿದ ತಕ್ಷಣ ಛತ್ರದ ಒಡೆಯನ್ನು ಕಂಡು ಪತ್ರವನ್ನು ಓದುವಂತೆ ಕೇಳಿಕೊಂಡ. ಅವನು ಬರೆದದ್ದನ್ನು ಗಮನವಿಟ್ಟು ಕೇಳಿ ಒಪ್ಪಿ ತಲೆದೂಗಿದ. 

ಪೀಟರ್ ಅವ್ದೀವ್‌ಗೆ ಬರೆಸಿದ್ದ ಪತ್ರದಲ್ಲಿ ತಾಯಿ ಮೊದಲು ಅವನಿಗೆ ಆಶೀರ್ವಾದ ಹೇಳಿದ್ದಳು, ಆಮೇಲೆ ಮನೆಯವರೆಲ್ಲರ ಹಾರೈಕೆ ತಿಳಿಸಿದ್ದಳು, ಅವನ ಗಾಡ್‌ಫಾದರ್ ತೀರಿಕೊಂಡ ಸುದ್ದಿ ಹೇಳಿದ್ದಳು, ಅಕ್ಸಿನ್ಯಾ (ಪೀಟರ್ ಅವ್ದೀವ್‌ನ ಹೆಂಡತಿ) ತಮ್ಮ ಜೊತೆಯಲ್ಲಿ ಮನೆಯಲ್ಲಿ ಇರಲು ಒಲ್ಲದೆ ಕೆಲಸಕ್ಕೆ ಸೇರಿದ್ದಾಳೆ, ಪ್ರಾಮಾಣಿಕಳಾಗಿ ಚೆನ್ನಾಗಿ ಬದುಕಿದ್ದಾಳೆ ಅನ್ನುವ ಮಾತು ಸೇರಿಸಿದ್ದಳು. ಆಮೇಲೆ ಸದ್ಯ ಕಳಿಸುತ್ತಿರುವ ಒಂದು ರೂಬಲ್‌ನ ಪ್ರಸ್ತಾಪವಿತ್ತು. ಕಣ್ಣಿನಲ್ಲಿ ನೀರು ತುಂಬಿಕೊಂಡು, ದುಃಖಕ್ಕೆ ವಶಳಾಗಿ ಹೇಳಿದ್ದನ್ನು ಕೊನೆಯಲ್ಲಿ ಚರ್ಚಿನ ಗುಮಾಸ್ತ ಯಥಾವತ್ತಾಗಿ ಅವಳದೇ ಮಾತಿನಲ್ಲಿ ಬರೆದಿದ್ದ: 

’ಇನ್ನೊಂದು ಮಾತು, ಮುದ್ದೂ, ನನ್ನ ಪಾರಿವಾಳಾ, ನನ್ನ ಪುಟ್ಟಾಣಿ ಪೀಟ್ಯಾ! ಕಣ್ಣು ಬಿದ್ದೋಗೋಷ್ಟು ಅತ್ತಿದೀನಿ ನಿನಗೋಸ್ಕರಾ, ನನ್ನ ಕಣ್ಣು ನೀನೇಪ್ಪಾ. ನನ್ನ ಯಾಕಪ್ಪಾ ಬಿಟ್ಟು ಹೋದೇ? ನಿನಗೆ ಯಾರಪ್ಪಾ ಸಿಕ್ಕರು ಅಲ್ಲೀ..?’ ಇದನ್ನು ಹೇಳುವಾಗ ಮುದುಕಿ ಬಿಕ್ಕಳಿಸಿ ಅತ್ತಳು. ಆಮೇಲೆ, ’ಅಷ್ಟೇನೇ, ಸಾಕು!’ ಅಂದಳು.  ಪತ್ರದಲ್ಲಿ ಹೀಗೆ ಬರೆದಿತ್ತು. 

ಆದರೆ ಪೀಟರ್‌ಗೆ ತನ್ನ ಹೆಂಡತಿ ಮನೆ ಬಿಟ್ಟು ಹೋದ ಸುದ್ದಿ, ಅಮ್ಮನ ಕೊನೆಯ ಮಾತು, ಕಳಿಸಿದ್ದ ರೂಬಲ್ ಯಾವುದೂ ತಲುಪಲಿಲ್ಲ. ದುಡ್ಡಿನೊಂದಿಗೆ ಪತ್ರ ವಾಪಸ್ಸು ಬಂದಿತು. ತನ್ನ ಚಕ್ರವರ್ತಿಯನ್ನು ರಕ್ಷಿಸುತ್ತಾ ತನ್ನ ಮಾತೃಭೂಮಿಯನ್ನು ರಕ್ಷಿಸುತ್ತಾ ಆರ್ಥಡಾಕ್ಸ್ ಧರ್ಮವನ್ನು ರಕ್ಷಿಸುತ್ತಾ ಪೀಟರ್‌ಯುದ್ಧದಲ್ಲಿ ಸತ್ತ ಎಂದು ಸೈನ್ಯವು ಪತ್ರದಲ್ಲಿ ತಿಳಿಸಿತ್ತು. 

ಈ ಸುದ್ದಿ ಕಿವಿಗೆ ಬಿದ್ದಾಗ ಮುದುಕಿ ತನಗೆಷ್ಟು ಬಿಡುವಿನ ಸಮಯವಿತ್ತೋ ಅಷ್ಟು ಹೊತ್ತೂ ಅತ್ತಳು. ಮತ್ತೆ ಕೆಲಸಕ್ಕೆ ತೊಡಗಿದಳು. ಮುಂದಿನ ವಾರ ಚರ್ಚಿಗೆ ಹೋದಳು. ಯಾರ ಸದ್ಗತಿಗೆ ಪ್ರಾರ್ಥನೆ ಮಾಡಬೇಕು ಅನ್ನುವ ಪಟ್ಟಿಯಲ್ಲಿ ಪೀಟರ್‌ನ ಹೆಸರು ಸೇರಿಸಿದಳು. ದೇವರ ಸೇವಕ ಪೀಟರ್‌ನ ನೆನಪಿನಲ್ಲಿ ಪವಿತ್ರ ಬ್ರೆಡ್ಡನ್ನು ಒಳ್ಳೆಯವರಿಗೆಲ್ಲ ಹಂಚಿದಳು. 

ಸುದ್ದಿ ಕೇಳಿ ಸೈನಿಕನ ವಿಧವೆ ಹೆಂಡತಿ ಅಕ್ಸಿನ್ಯಾ ಒಂದು ವರ್ಷ  ಒಡನಾಟ ನಡೆಸಿದ್ದ ಗಂಡನಿಗಾಗಿ ಜೋರಾಗಿ ಅತ್ತಳು,  ನನ್ನ ಬದುಕು ಹಾಳಾಯಿತೆಂದು ಅಳುತ್ತಾ ಪೀಟರ್‌ನ ಕಂದು ಗುಂಗುರು ಕೂದಲು, ಅವನು ತೋರಿದ ಪ್ರೀತಿ, ಪುಟ್ಟ ಅನಾಥ ಮಗು ವಾಂಕಾ ಎಲ್ಲ ನೆನೆದು ಅತ್ತಳು. ಅಣ್ಣನ ಮೇಲೆ ಮರುಕ ತೋರಿಸಿದ ನನ್ನ ಗಂಡ ನನ್ನ ಮೇಲೆ ಮರುಕ ತೋರಿಸದೆ ಗೊತ್ತಿಲ್ಲದವರ ಜೊತೆ ಅಲೆಯುವುದಕ್ಕೆ ಹೋದ ಎಂದು ಬೈದಳು. 

ಗಂಡ ಸತ್ತದ್ದಕ್ಕೆ ಅಕ್ಸಿನ್ಯಾಳ ಮನಸಿನ ಆಳದಲ್ಲಿ ಸಂತೋಷವಿತ್ತು. ಅವಳೀಗ ಮತ್ತೆ ಬಸುರಿಯಾಗಿದ್ದಳು. ಅಂಗಡಿಯವನ ಜೊತೆಯಲ್ಲಿ ಬದುಕುತಿದ್ದಳು. ಈಗ ಯಾರೂ ಅವಳನ್ನು ಬೈಯುವ ಹಾಗಿಲ್ಲ. ಅಂಗಡಿಯವನು ಅವಳನ್ನು ಪುಸಲಾಯಿಸಿ ಒಲಿಸಿಕೊಳ್ಳುವಾಗ ಹೇಳಿದ್ದ ಹಾಗೆ ಅವಳನ್ನು ಮದುವೆಯಾದರೂ ಆಗಬಹುದು.

| ಮುಂದುವರೆಯುವುದು |

ಮುದುಕ: ಸತ್ತು ಹೋದ ಸೈನಿಕ ಪೀಟರ್ ಅವ್ದೀವ್‍ನ ತಂದೆ
ಮುದುಕಿ: ಅವನ ಹೆಂಡತಿ
ಅಕೀಮ್: ಸತ್ತು ಹೋದ ಸೈನಿಕ ಪೀಟರ್ ಅವ್ದೀವ್‍ನ ಅಣ್ಣ
ಅಕೀಮ್‍ನ ಹೆಂಡತಿ
ಅಕ್ಸಿನ್ಯಾ: ಸತ್ತು ಹೋದ ಸೈನಿಕ ಪೀಟರ್ ಅವ್ದೀವ್‍ನ ಹೆಂಡತಿ
ಚಿತ್ರಗಳು

‍ಲೇಖಕರು Admin

November 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: