ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಕಾಗದದ ದೋಣಿ..

ಅಲಕಾ ಜಿತೇಂದ್ರ

ತವರೂರಲ್ಲಿ ಮುಂಗಾರಿನ ಆರ್ಭಟ. ಈ ಕೊಲ್ಲಿ ರಾಷ್ಟ್ರದಲ್ಲಿ ಕೊಲ್ಲುವಂಥ ಬಿಸಿಲು. ಆದರೂ ಇಳೆಯ ತಣಿಸುವ ಮಳೆಯ ನೆನಪೇ ಸಾಕು ನನ್ನೊಳಗಿನ ಮಧುರ ನೆನಪುಗಳ ಎಳೆ ಎಳೆಯಾಗಿ ಬಿಡಿಸಲು.

ಮಳೆಗೂ, ನೆನಪುಗಳಿಗೂ ಅದೇನು ಬಾಂಧವ್ಯವೋ ?

ಅಮ್ಮನೂ ಪ್ರತಿ ಮಳೆಗಾಲಕ್ಕೆ ತವರೂರ ನೆನಪಿಸಿಕೊಂಡು ಕಣ್ಣಂಚಲಿ ಬಂದ ಹನಿಯನ್ನು ಕಾಣದಂತೆ ಮರೆಮಾಚಿದ್ದು ನನಗಿನ್ನೂ ನೆನಪಿದೆ.

ಈಗ ನನ್ನದೂ ಅದೇ ಪರಿಸ್ಥಿತಿ.

ಈ ಮರುಭೂಮಿಯ ಬಿಸಿಲಧಗೆಯಿಂದ ತಪ್ಪಿಸಿಕೊಂಡು ಒಂದೇ ಒಂದು ಸಲ ಮಳೆಗೆ ಮೈಯೊಡ್ಡಿ ’ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ….’ ಅಂತ ಹಾಡುವ ಮನಸ್ಸಾಗಿದೆ. ಮನಸ್ಸಿಗೆ ಮುದ ನೀಡುವ ಮಳೆಗಾಲದ ಮಧುರ ನೆನಪುಗಳು ಮತ್ತೆ ಮತ್ತೆ ಕಣ್ಣೆದುರಿಗೆ ಬರುತ್ತಿವೆ.

ಸುರಿವ ಮಳೆಯಲ್ಲಿ ಕೊಡೆ ಹಿಡಿದುಕೊಂಡು, ರಸ್ತೆಯ ಹೊಂಡಗಳಲ್ಲಿ ತುಂಬಿದ ನೀರಿನೊಳಗೆ ಹಾರಿ, ಕುಪ್ಪಳಿಸುತ್ತಾ ಶಾಲೆಗೆ ಹೋಗುತ್ತಿದ್ದ ಖುಷಿ ಉಪ್ಪಿನಕಾಯಿ ಭರಣಿಯಂತೆ ತುಂಬಿದ ಸ್ಕೂಲ್ ಬಸ್ ಗಳಲ್ಲಿ ಪ್ರಯಾಣಿಸುವ ಈಗಿನ ಮಕ್ಕಳಿಗೇನು ಗೊತ್ತು?

ತುಂಬಿ ಹರಿಯುವ ತೋಡಿನಲ್ಲಿ ಕಾಗದದ ದೋಣಿಯನ್ನು ತೇಲಿಸಿ ಅದನ್ನು ಹಿಂಬಾಲಿಸುತ್ತಾ ಎಲ್ಲೆಲ್ಲೋ ಹೋದದ್ದು, ರೈನ್ ಕೋಟ್, ಕೊಡೆ ಎಲ್ಲಾ ಇದ್ದರೂ ಮೈಪೂರ್ತಿ ಒದ್ದೆಯಾಗಿ ಅಮ್ಮನಿಂದ ಬೈಸಿಕೊಂಡದ್ದು, ಸಂಗೀತ ಕ್ಲಾಸಿಗಾಗಿ ಗದ್ದೆಯಲ್ಲಿ ನಡೆಯುವಾಗ ಮಳೆ ಗಾಳಿಗೆ ಹೆದರಿ ತಂಗಿಯೊಂದಿಗೆ ಗದ್ದೆಮಧ್ಯೆದಲ್ಲಿ ಅಳುತ್ತಾ ನಿಂತದ್ದು, ಮಳೆರಾಯನ ಆರ್ಭಟ ಹೆಚ್ಚಿ ಶಾಲೆಗೆ ರಜೆ ಸಾರಿದಾಗ ಖುಶಿಯಿಂದ ಕುಣಿದಾಡಿದ್ದು, ಗುಡುಗು, ಮಿಂಚಿನ ಅಬ್ಬರಕ್ಕೆ, ಕರೆಂಟು ಕೂಡ ಇಲ್ಲದ ರಾತ್ರಿಗಳಲ್ಲಿ ಹೆದರಿದ ಗುಬ್ಬಚ್ಚಿಯಂತೆ ಅಮ್ಮನನ್ನು ತಬ್ಬಿ ಬೆಚ್ಚಗೆ ಮಲಗಿದ್ದು… ಬಾಲ್ಯದ ನೆನಪುಗಳೇ ಹೀಗೆ ಎಂದಿಗೂ ಹಚ್ಚ ಹಸಿರು.


ಮೊನ್ನೆ ಮಕ್ಕಳು ಒಂದಿಷ್ಟು ಕಾಗದಗಳನ್ನು ತಂದು ’ಬೋಟ್ ಮಾಡಿ ಕೊಡಮ್ಮಾ’, ಎಂದಾಗ ಇಲ್ಲಿ ಬಿಸಿಲಿಗೆ ಮನೆಯಿಂದ ಹೊರಗೆ ಕಾಲಿಡುವುದೇ ಅಸಾಧ್ಯವಾಗಿರುವಾಗ, ’ಇಲ್ಲಿ ಎಲ್ಲಿ ದೋಣಿ ಆಟ ಆಡ್ತೀರಪ್ಪಾ?’ ಆಶ್ಚರ್ಯದಿಂದ ಕೇಳಿದೆ. ’ಬಾತ್ ಟಬ್ ನಲ್ಲಿ ನೀರು ತುಂಬಿಸಿ ದೋಣಿ ಆಟ ಆಡ್ತೀವಮ್ಮಾ?’ ಎಂದಾಗ, ’ಛೆ, ನನ್ನ ಮಕ್ಕಳ ದೌರ್ಭಾಗ್ಯವೇ’ ಅಂತ ಮರುಕಪಟ್ಟು ಒಂದಷ್ಟು ದೋಣಿಗಳನ್ನು ಮಾಡಿಕೊಟ್ಟೆ.

ಬಾತ್ ಟಬ್ ನಲ್ಲಿ ತೇಲುತ್ತಿದ್ದ ನನ್ನ ಕಾಗದದ ದೋಣಿಗಳು ನೋಡುನೋಡುತ್ತಿದ್ದಂತೇ ಅಗೋ ಅದೇ ನನ್ನೂರ ತೋಡಿನಲ್ಲಿ, ಹರಿಯುವ ಮಳೆಯ ನೀರಿನಲ್ಲಿ ಸಾಗುತ್ತಿವೆ. ತಮ್ಮೊಳಗೆ ನನ್ನ ನೆನಪುಗಳನ್ನೂ ಹೇರಿಕೊಂಡು..

ಹೌದು, ಅಲ್ಲಿವೆ ಅಮ್ಮ ಮಳೆಗಾಲದಲ್ಲಿ ಮಾಡುವ ಪತ್ರೊಡೆ, ಹಲಸಿನ ಗಟ್ಟಿಗಳು. ಮಳೆಗೆ ಒದ್ದೆಯಾಗಿ ಒಣಗದೇ ಮುಗ್ಗಲು ವಾಸನೆ ಬರುತ್ತಿರುವ ಶಾಲಾ ಸಮವಸ್ತ್ರಗಳು, ನೀರಿನೊಂದಿಗೆ ನೀರಾಗುತ್ತಿರುವ ಇಂಕ್ ಪೆನ್ನಿನಲ್ಲಿ ಬರೆದ ಅಕ್ಷರಗಳನ್ನು ಹೊತ್ತ ಪುಸ್ತಕಗಳು, ಕೆಸರು ಮೆತ್ತಿದ ಜೋಡು ಚಪ್ಪಲಿಗಳು, ಗಾಳಿಗೆ ಹಾರಿಹೋಗುತ್ತಿರುವ ಕಪ್ಪು ಕೊಡೆಗಳು, ಮಳೆಯ ನೀರನ್ನು ಜಗುಲಿಯ ಮೂಲೆಯಲ್ಲಿ ಮೆಲ್ಲನೆ ಇಳಿಸುತ್ತಿರುವ ರೈನ್ ಕೋಟ್ ಗಳು.

ಎಲ್ಲವನ್ನೂ ಹೊತ್ತುಕೊಂಡು ನೀರಿನ ರಭಸಕ್ಕೆ ನನ್ನಿಂದ ಬಲು ದೂರ, ದೂರ, ಅಲ್ಲಿ ಏರಿ, ಇಲ್ಲಿ ಹಾರಿ, ಎಲ್ಲಾ ತಡೆಗಳನ್ನೂ ದಾಟಿ, ದೇಶ ಕಾಲಗಳನ್ನೂ ಮೀರಿ ಸಾಗುತ್ತಲೇ ಇವೆ. ಕಾಗದದ ದೋಣಿಗಳನ್ನು ನೋಡುತ್ತಾ ಯಾವುದೋ ಮಳೆಗಾಲದಲ್ಲಿ ಸಂಗೀತ ಮೇಷ್ತ್ರು ಕಲಿಸಿದ ಪಿಳ್ಳಾರಿ ಗೀತೆಗಳನ್ನು ನನಗರಿವಿಲ್ಲದೆಯೇ ನನ್ನ ತುಟಿಗಳು ಗುನುಗತೊಡಗಿದವು.

‍ಲೇಖಕರು admin

15 June, 2017

4 Comments

  1. shama nandibetta

    Beautiful write up Alaka. Loved it

  2. Praveen Shetty Shankat

    Superb

  3. Ganapati Hegde

    Beautiful expression of real feelings

  4. mahalaxmi

    Very good alka ….savi balyada nenapu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading