“ಅಪ್ಪ'' ಪ್ರಸಾದ್ ನಾಯ್ಕ್

ಜೂನ್ 18 ರಂದು ಬರಲಿರುವ ಅಪ್ಪಂದಿರ ದಿನಕ್ಕಾಗಿ..

ಪ್ರಸಾದ್ ನಾಯ್ಕ್

ಕೆಲ ದಿನಗಳ ಹಿಂದೆಯಷ್ಟೇ ಸದ್ಗುರು ಎಂದೇ ಖ್ಯಾತರಾದ ಯೋಗಿ ಜಗ್ಗಿ ವಾಸುದೇವರ ಉಪನ್ಯಾಸವೊಂದನ್ನು ಕೇಳುತ್ತಿದ್ದೆ.

“ಅಪ್ಪ ಮತ್ತು ಮಗನ ನಡುವೆ ಯಾವಾಗಲೂ ಒಂದು ಮುಗಿಯದ ತಿಕ್ಕಾಟ, ಅಸಮಾಧಾನ ಯಾಕಿರುತ್ತದೆ?”, ಎಂಬ ಪ್ರಶ್ನೆಯೊಂದು ನೆರೆದಿದ್ದ ಸಭಿಕರ ಕಡೆಯಿಂದ ಬಂದಿತ್ತು. ಜಗ್ಗಿ ವಾಸುದೇವರ ಹಲವು ಉಪನ್ಯಾಸಗಳನ್ನು ಈ ಹಿಂದೆ ಕೇಳಿದ್ದರೂ ಯಾರಿಂದಲೂ ಇಂಥಾ ಪ್ರಶ್ನೆಯೊಂದು ಕೇಳಿ ಬರದ ಪರಿಣಾಮವಾಗಿ ಪ್ರಶ್ನೆಯನ್ನು ಕೇಳಿದಾತ ಭಲೇ ಬುದ್ಧಿವಂತ ಎಂದು ನನಗನ್ನಿಸಿತ್ತು. ಏಕೆಂದರೆ ಆಧ್ಯಾತ್ಮ ಎಂದರೆ ಜೀವಾತ್ಮ, ಪರಮಾತ್ಮ, ಮುಕ್ತಿ, ಮೋಕ್ಷ ಎಂದಷ್ಟೇ ತಿಳಿದುಕೊಂಡ ಹಲವರು ಈ ಭಾರೀ ಶಬ್ದಗಳ ಸುತ್ತಲೇ ಪ್ರಶ್ನೆಗಳನ್ನು ಕೇಳುವುದನ್ನು ನಾನು ಸಾಮಾನ್ಯವಾಗಿ ಕಂಡಿದ್ದೇನೆ. ಕೊನೆಗೂ ಸಿಗುವ ಉತ್ತರಗಳು ಅದೆಷ್ಟು ಅರ್ಥವಾಗುತ್ತವೋ ಇಲ್ಲವೋ ಎಂಬುದನ್ನು ಅವರ ಬಳಿಯೇ ಕೇಳಬೇಕು. ಇರಲಿ!

ಪ್ರಶ್ನೆ ಕೇಳಿದಾತನನ್ನು ಸಂಬೋಧಿಸುತ್ತಾ ಉತ್ತರಿಸಲಾರಂಭಿಸಿದ್ದರು ಸದ್ಗುರು.

“ಅಸಲಿಗೆ ಇದು ತಂದೆ ಮತ್ತು ಮಗನ ನಡುವಿನ ಸಂಘರ್ಷ ಅಥವಾ ತಿಕ್ಕಾಟಗಳೇ ಅಲ್ಲ. ಇದು ಹಟಕ್ಕೆ ಬಿದ್ದ ಇಬ್ಬರು ಪುರುಷರ ಕಾಳಗ. ನೀವು ಐದೋ ಆರೋ ಪ್ರಾಯದವರಾಗಿದ್ದಾಗ ಅಪ್ಪ ನಿಮಗೆ ಎಲ್ಲವೂ ಆಗಿರುತ್ತಾನೆ, ಸಿಕ್ಕಾಪಟ್ಟೆ ಇಷ್ಟವಾಗುತ್ತಾನೆ, ಸಾಕ್ಷಾತ್ ಹೀರೋನಂತೆ ಸರ್ವಶಕ್ತನಂತೆ ಕಾಣುತ್ತಾನೆ. ಆದರೆ ಹದಿನೈದು-ಹದಿನಾರಕ್ಕೆ ಬಂದಂತೆಲ್ಲಾ ನಿಮ್ಮೊಳಗಿದ್ದ ಮಗು ಮಾಯವಾಗಿ ಆ ಜಾಗವನ್ನು ಕಿಶೋರಾವಸ್ಥೆಯ ಗಂಡಸು ಆಕ್ರಮಿಸಿಕೊಂಡಾಗಿರುತ್ತದೆ. ಅದು ಬಾಲ್ಯದಿಂದ ಕಿಶೋರಾವಸ್ಥೆಗೆ ಕಾಲಿಡುತ್ತಿರುವ ಚಿಗುರುಮೀಸೆಯನ್ನು ಹೊತ್ತಿರುವ ಗಂಡಸು. ಅಪ್ಪನೊಂದಿಗೆ ನಿಜವಾದ ಸಮಸ್ಯೆಗಳು ಶುರುವಾಗುವುದು ಆವಾಗಲೇ! ಅಲ್ಲಿಂದ ಶುರುವಾಗುವ ಆ ತಿಕ್ಕಾಟ ಹಲವು ವರ್ಷಗಳವರೆಗೂ ಮುಂದುವರೆಯಬಹುದು.

ಅಷ್ಟಕ್ಕೂ ಆಗುವುದೇನೆಂದರೆ ಮನೆಗೊಬ್ಬನೇ ಗಂಡಸು ಎಂಬಂತಿದ್ದ ಆ ಪುಟ್ಟ ಮನೆಯಲ್ಲಿ ಅಪ್ಪನಿಗೆ ಎದುರಾಗಿ ಈಗ ಮತ್ತೊಬ್ಬ ಗಂಡಸು ತಲೆಯೆತ್ತಿದ್ದಾನೆ. ಚಿಗುರುಮೀಸೆಯ ತರುಣನಿಗೆ ಆಗಷ್ಟೇ ಕೈಗೆ ತಾಕುತ್ತಿರುವ ಗಂಡಸ್ತನದ ಸ್ಯಾಂಪಲ್ಲು. ಇನ್ನು ತಂದೆಗೋ, ಮನೆಯಲ್ಲಿ ತನಗೊಬ್ಬ ಪ್ರತಿಸ್ಪರ್ಧಿ ಹುಟ್ಟಿಕೊಂಡ ಎಂಬ ಫಜೀತಿ. ಅಂತೂ ತಮ್ಮ ಪ್ರಾಬಲ್ಯವಿರುವ ಆ ಪುಟ್ಟ ಗೂಡಿನಲ್ಲೇ ಇಬ್ಬರದ್ದೂ ಪುರುಷಾಹಂಕಾರ, ನಿರಂತರ ಜಟಾಪಟಿ. ಇಬ್ಬರಿಗೂ ತಮ್ಮತನಗಳನ್ನು ಉಳಿಸಿಕೊಳ್ಳಲೇಬೇಕಾದ ಹಟ. ಕೆಲವು ಮನೆಗಳಲ್ಲಿ ಇದು ತೀರಾ ಕಾಣುವಂತಿರಬಹುದು. ಇನ್ನು ಕೆಲವು ಮನೆಗಳಲ್ಲಿ ಇದ್ದರೂ ಅಗೋಚರವಾಗಿರಬಹುದು. ಆದರೆ ಇವುಗಳು ಇಲ್ಲವೇ ಇಲ್ಲ ಎಂದು ಹೇಳುವುದು ಕಷ್ಟ”, ಎಂದಿದ್ದರು ಆ ಯೋಗಿ.

ಅಪ್ಪ-ಮಗನ ಜೋಡಿಯೆಂಬ ಒಗಟನ್ನು ಇಷ್ಟು ಸರಳವಾಗಿ ಮನಮುಟ್ಟುವಂತೆ ಬಿಡಿಸಿಟ್ಟಿದ್ದು ನನ್ನ ಮಟ್ಟಿಗಂತೂ ಇದೇ ಮೊದಲು.

ಈ ದೇಶದ ಬಹುಪಾಲು ಮಕ್ಕಳು ಅಪ್ಪನೊಂದಿಗೆ ಒಂದು ಸುರಕ್ಷಿತ ದೂರವನ್ನು ಕಾಯ್ದುಕೊಂಡೇ ಬೆಳೆದವರು. ಅಪ್ಪ ಎಂದರೆ ಸಾಕ್ಷಾತ್ ಹಿಟ್ಲರ್ ಎಂಬಂತೆ. ಆತ ನಿಯಮಾವಳಿಗಳ ಪಟ್ಟಿ. ಎದುರು ಮಾತಾಡಿದರೆ, ಅಂಕಗಳು ಕಮ್ಮಿ ಬಂದರೆ, ನಿಯಮಗಳ ಲಕ್ಷ್ಮಣರೇಖೆಯನ್ನು ದಾಟಿದರೆ ಬೆತ್ತದ ಸಮಾರಾಧನೆಯನ್ನು ಮಾಡುತ್ತಿದ್ದ ಸರ್ವಾಧಿಕಾರಿ. ಅಕ್ಕಪಕ್ಕದಲ್ಲಿ ಸದಾಕಾಲ ಇರದಿದ್ದರೂ ಮನೆಯ ಮಕ್ಕಳ ಮೇಲೆ ಒಂದು ಕಣ್ಣು ಇಟ್ಟೇ ಇಟ್ಟಿರುತ್ತಿದ್ದ `ಬಿಗ್ ಬಾಸ್’.

ಅಪ್ಪನೆಂಬ ವ್ಯಕ್ತಿತ್ವವು ಭಯದ ನೆರಳಿನಲ್ಲೇ ರೂಪುಗೊಂಡಿದ್ದಕ್ಕೋ ಏನೋ, ಆತ ಬಹುತೇಕ ಮಕ್ಕಳಿಗೆ ಅಷ್ಟೇನೂ ಹತ್ತಿರವಾಗಲಿಲ್ಲ. ಭಯವು ಮುಂದೆ ಗೌರವವಾಗಿ ರೂಪಾಂತರಗೊಂಡ ನಂತರವೂ ಕೂಡ. ನಾವು ನಮ್ಮ ಅಪ್ಪಂದಿರನ್ನು ಅದೆಷ್ಟು ಪ್ರೀತಿಸುತ್ತೇವೆ ಎಂದು ಬಾಯಿಬಿಟ್ಟು ಹೇಳುವುದೇ ಇಲ್ಲವಲ್ಲವೇ ಎಂದು ಖ್ಯಾತ ನಟಿ ಸಿಮಿ ಗರೆವಾಲ್ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ರನ್ನು ಸಂದರ್ಶನವೊಂದರಲ್ಲಿ ಕೇಳುತ್ತಿದ್ದರು. ಕರಣ್ ಜೋಹರ್ ತನ್ನ ಮತ್ತು ತನ್ನ ತಂದೆಯ ನಡುವಿನ ಸಂಬಂಧದ ಬಗ್ಗೆ ಹೇಳುತ್ತಾ ನಾವಿಬ್ಬರೂ ಮನಬಿಚ್ಚಿ ಮಾತನಾಡಿದ್ದು ಎಂದರೆ ನನ್ನ ತಂದೆ ಕ್ಯಾನ್ಸರಿಗೆ ತುತ್ತಾಗಿ ಸಾವು-ಬದುಕುಗಳ ನಡುವೆ ಒದ್ದಾಡುತ್ತಿದ್ದಾಗ ಎನ್ನುತ್ತಾರೆ. ಯಶ್ ಜೋಹರ್ ತನ್ನ ಜೀವನದ ಕೊನೆಯ ಹತ್ತು ತಿಂಗಳುಗಳಲ್ಲಿ ಮಗನಾದ ಕರಣ್ ಜೋಹರ್ ನೊಂದಿಗೆ ಆತ್ಮೀಯ ತಂದೆಯಂತೆ ಮಾತನಾಡಿದ್ದರಂತೆ. ಎಂದೂ ಕಾಣದಿದ್ದ ನಗು, ಕಣ್ಣೀರು, ಕ್ಷಮೆಗಳು ಈ ಹತ್ತು ತಿಂಗಳ ಅವಧಿಯಲ್ಲೇ ಅಪ್ಪ ಮತ್ತು ಮಗನ ಮಧ್ಯೆ ವಿನಿಮಯವಾಗಿದ್ದವು. ನಿಜವಾದ ಆಪ್ತ ಸಂಭಾಷಣೆಗಳು ಸಾಧ್ಯವಾಗಿದ್ದವು.

“ನಾನು ನನ್ನ ತಂದೆಯನ್ನು ಪ್ರೀತಿಸುತ್ತೇನೆ ಆದರೆ ಆತ ನಿಜಕ್ಕೂ ಏನು ಎಂಬುದು ನನಗೆ ಅರ್ಥವಾಗಲೇ ಇಲ್ಲ”, ಎಂದಿದ್ದು ಪಾಪ್ ತಾರೆ ಮೈಕಲ್ ಜಾಕ್ಸನ್. ಜೋ ಜಾಕ್ಸನ್ ತನ್ನ ವಿಪರೀತ ಎಂಬ ಮಟ್ಟಿಗಿನ ಶಿಸ್ತಿನಿಂದ ಅರಿತೋ ಅರಿಯದೆಯೋ ತನ್ನ ಪುಟ್ಟ ಮಗನ ಅಮೂಲ್ಯವಾದ ಬಾಲ್ಯವನ್ನೇ ಕಿತ್ತುಕೊಂಡಿದ್ದ. ಕಳೆದುಹೋದ ತನ್ನ ಬಾಲ್ಯದ ತಲಾಶೆಯೇ ಮುಂದೆ ಮೈಕಲ್ ನ ಜೀವನದ ಮುಖ್ಯ ಭಾಗವಾಗಿ ಹೋಯಿತು. ಜಗತ್ತು ಮೈಕಲ್ ನನ್ನು ಮಾನಸಿಕ ರೋಗಿ ಎಂದಿತು, ಪೀಡೋಫೈಲ್ ಎಂದು ಮೂದಲಿಸಿತು, ಸೈಕೋ ಎಂದು ವ್ಯಂಗ್ಯವಾಡಿತು.

ತನ್ನ ತಂದೆ ಯಾರೆಂದೇ ಗೊತ್ತಿರದಿದ್ದ ಹಾಲಿವುಡ್ ದಂತಕಥೆ ಮರ್ಲಿನ್ ಮನ್ರೋ ತಂದೆಯಾಗಿ ಆರಿಸಿಕೊಂಡಿದ್ದು ಅಮೆರಿಕಾದ ರಾಷ್ಟ್ರಾಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರನ್ನು. ಲಿಂಕನ್ ಅವರ ಚಿತ್ರವೊಂದು ಮನ್ರೋಳ ಬಳಿ ಸದಾ ಇರುತ್ತಿತ್ತು. ಅಬ್ರಹಾಂ ಲಿಂಕನ್ ಮತ್ತು ಮರ್ಲಿನ್ ಮನ್ರೋರ ಜೀವಿತಾವಧಿಗಳು ಬೇರೆಯೇ ಆಗಿದ್ದವು. ಲಿಂಕನ್ ಹತ್ತೊಂಬತ್ತನೇ ಶತಮಾನದ ಮುತ್ಸದ್ದಿಯಾಗಿದ್ದರೆ ಮರ್ಲಿನ್ ಮನ್ರೋ ಇಪ್ಪತ್ತನೇ ಶತಮಾನದಲ್ಲಿ ನಟಿಯಾಗಿ ಮಿಂಚಿದವಳು. ಆದರೂ ಲಿಂಕನ್ ಆಕೆಗೆ ಮಾನಸಿಕ ನೆಲೆಯಲ್ಲಿ ತಂದೆ, ರೋಲ್ ಮಾಡೆಲ್ ಎಲ್ಲವೂ ಆಗಿದ್ದ.

ಅಪ್ಪನನ್ನು ನಾನು ಕ್ಷಮಿಸಿಬಿಟ್ಟೆ ಎಂದು ಮೈಕಲ್ ಜಾಕ್ಸನ್ ಕ್ಯಾಮೆರಾದ ಮುಂದೆ ಹಲವು ವರ್ಷಗಳ ಬಳಿಕ ಹೇಳಿರಬಹುದು. ಸೊಂಟಕ್ಕೆ ಬಿಗಿಯುವ ಬೆಲ್ಟಿನಿಂದ ಮಗನ ಬೆನ್ನ ಮೇಲೆ ಬಾಸುಂಡೆ ಬರುವಂತೆ ನಿರ್ದಯವಾಗಿ ಬಾರಿಸುತ್ತಿದ್ದ ಜೋ ಜಾಕ್ಸನ್ ನಿಗೆ ಮುಂದೆ ತಾನು ಎಸಗಿದ ಅವಾಂತರಗಳ ತೀವ್ರತೆಯು ಅರಿವಾಗಿರಲೂಬಹುದು. ಆದರೆ ನಿಜಕ್ಕೂ ಅಪ್ಪ ಮತ್ತು ಮಗನ ಎದೆಯ ನಡುವಿನ ತಂತುಗಳು ಕೊನೆಗೂ ಬೆಸೆದವೇ? ಜೀವನದುದ್ದಕ್ಕೂ ಪ್ರೀತಿಯ ತಲಾಶೆಯಲ್ಲೇ ಇದ್ದ ಮರ್ಲಿನ್ ಮನ್ರೋ ತನ್ನ ಖ್ಯಾತಿಯ ಉತ್ತುಂಗದಲ್ಲಿದ್ದಾಗಲೂ ತನಗೆ ಅಪ್ಪ ಅನ್ನುವವನೊಬ್ಬನಿದ್ದರೆ ಇಂದಲ್ಲಾ ನಾಳೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಳೇ?

ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ಟರ ಮಗ ರಾಹುಲ್ ಭಟ್ ಎಲ್ಲಿಂದಲೋ ಆಗಂತುಕನ ಸೋಗಿನಲ್ಲಿ ಬಂದ ಡೇವಿಡ್ ಹೆಡ್ಲಿ ಎಂಬ ಹೆಸರಿನ ಬಿಳಿಯ ಭಯೋತ್ಪಾದಕನೊಬ್ಬನನ್ನು, ಅದಕ್ಕಿಂತಲೂ ಹೆಚ್ಚಾಗಿ ಹಿಂದುಮುಂದುಗಳ ಅರಿವಿಲ್ಲದ ಯಕಶ್ಚಿತ್ ಆಗಂತುಕನೊಬ್ಬನನ್ನು ಪಿತೃಸಮಾನನೆಂದು ಏಕೆ ಮನದಲ್ಲೇ ಆರಿಸಿಕೊಂಡ? ಅಪ್ಪ ಮತ್ತು ಮಕ್ಕಳ ಸಂಬಂಧಗಳು ತಿಳಿಯಾಗಬೇಕಾದರೆ ಸಾವು ಬಂದು ಕದ ತಟ್ಟುವವರೆಗೂ ಕಾಯಲೇಬೇಕೇ?

ಇದು ಐಷಾರಾಮಿ ಮಹಲುಗಳಲ್ಲಿ ವಾಸಿಸುತ್ತಿರುವವರ ಕಥೆಗಳು ಮಾತ್ರವಲ್ಲ. ಬಹುತೇಕ ಎಲ್ಲರ ಮನೆಗಳ ಕಥೆಯೇ ಇದು. ಅಪ್ಪ ನಮ್ಮೆಲ್ಲರ ಜೊತೆಯಲ್ಲೇ ಇದ್ದರೂ, ಬದುಕಿನ ಭಾಗವಾಗಿದ್ದರೂ ಕೂಡ ಆತ ಮಾನಸಿಕವಾಗಿ ಬಲು ದೂರವೇ ಉಳಿದುಹೋಗುವುದು ಮಾತ್ರ ವಿಪರ್ಯಾಸ. ಅಪ್ಪ ಕರ್ಮಯೋಗಿ. ಅಮ್ಮನಂತೆ ಆತ ಪ್ರೀತಿಯನ್ನು ಕಲಿಸಿದನೋ ಬಿಟ್ಟನೋ… ಆದರೆ ಬದುಕನ್ನು ಮಾತ್ರ ತನ್ನದೇ ಶೈಲಿಯಲ್ಲಿ ತನ್ನ ಕರುಳಕುಡಿಗಳಿಗೆ ಕಲಿಸುತ್ತಾ ಬಂದವನು.

ಅಪ್ಪನ ಶೈಲಿ ಮಕ್ಕಳಿಗೆ ಗೋಜಲಾದರೆ ಮಕ್ಕಳ ಭಾಷೆ ಅಪ್ಪನಿಗೆ ಅರಗಿಸಿಕೊಳ್ಳಲಾಗುವುದಿಲ್ಲ. ಈ ಎರಡೂ ಬಣಗಳ ಹಗ್ಗಜಗ್ಗಾಟದಲ್ಲಿ ಕೊನೆಗೆ ಸೋಲಬೇಕಾಗಿರುವುದು ಮಾತ್ರ ಅಮ್ಮಂದಿರು. ಇನ್ನು ಅಮ್ಮ ಕಣ್ಣೀರಾದರೂ ಹಾಕಬಲ್ಲಳು. ಆದರೆ ಬಡಪಾಯಿ ಅಪ್ಪನಿಗೆ ಆ ಸ್ವಾತಂತ್ರ್ಯವೂ ಇಲ್ಲ. ಮೀಸೆ ಹೊತ್ತ ಗಂಡಸು ಕಣ್ಣೀರು ಹಾಕಬಾರದು ಎಂಬ ಅಲಿಖಿತ ನಿಯಮವನ್ನು ತಂದು ಜನಪ್ರಿಯಗೊಳಿಸಿದ ದಡ್ಡಶಿಖಾಮಣಿಗೊಂದು ಈ ಸಂದರ್ಭದಲ್ಲಿ ಧಿಕ್ಕಾರವಿರಲಿ.

ಹಾಗೆಂದು ಅಪ್ಪನಿಗೆ ಇವೆಲ್ಲಾ ತಿಳಿಯದ ವಿಷಯಗಳೇನೂ ಅಲ್ಲ. ಅಷ್ಟಕ್ಕೂ ಆತನೂ ಕೂಡ ಒಂದಾನೊಂದು ಕಾಲದಲ್ಲಿ ಕಿಶೋರಾವಸ್ಥೆಯ `ರೆಬೆಲ್’ ಹಂತವನ್ನು ದಾಟಿಯೇ ಪ್ರಬುದ್ಧನಾದವನಲ್ಲವೇ? ಆದರೆ ಇಂಥಾ ಚಿಕ್ಕಪುಟ್ಟ ವಿಷಯಕ್ಕೆಲ್ಲಾ ತಲೆಕೆಡಿಸಿಕೊಂಡರೆ ಸಂಸಾರದ ಹಳಿಯು ತಪ್ಪುವ ಸಂಭವವೇ ಹೆಚ್ಚು ಎಂಬುದರ ಬಗ್ಗೆ ಆತನಿಗೆ ಚೆನ್ನಾಗಿ ಗೊತ್ತು. ಹೊರಗಿನ ಜಂಜಾಟದ ಜಗತ್ತನ್ನೂ, ತನ್ನ ಕೌಟುಂಬಿಕ ಜಗತ್ತನ್ನೂ ಯಾವುದೇ ವೃಥಾ ಗೊಣಗಾಟಗಳಿಲ್ಲದೆ ಸಲೀಸಾಗಿ ನಿಭಾಯಿಸುವ ಶಕ್ತಿಯನ್ನು ಹೆಣ್ಣಿಗೆ ಕೊಟ್ಟಷ್ಟು ಧಾರಾಳವಾಗಿ ಪ್ರಕೃತಿಯು ಅವನಿಗೆ ಕೊಟ್ಟಿಲ್ಲವಲ್ಲವೇ! ಹೀಗಾಗಿ ಈ ದೌರ್ಬಲ್ಯದ ಅರಿವು ಅವನಿಗೂ ಇದೆ.

ಆದ್ದರಿಂದಲೇ ಆತ ಬುದ್ಧನಂತೆ ನಿರ್ಲಿಪ್ತ. ತನಗೇನಿದ್ದರೂ `ಕರ್ಮಣ್ಯೇ ವಾಧಿಕಾರಸ್ತೇ’ ಎಂಬ ಸೂತ್ರವೇ ಸರಿ ಎಂಬ ಭಾವನೆ. ನಿರೀಕ್ಷೆಗಳು ನೆಲಕಚ್ಚುವುದು ಅಪ್ಪನಿಗೆ ಹೊಸ ಸಂಗತಿಗಳೇನಲ್ಲ. ಆತ ಯುದ್ಧಭೂಮಿಗಿಳಿದ ಸೈನಿಕನಂತೆ. ಎಲ್ಲದಕ್ಕೂ ಸೈ! ಆದರೇನು ಮಾಡುವುದು? ಇಷ್ಟೆಲ್ಲಾ ತಿಳಿಯುವ ಹೊತ್ತಿಗೆ ಗಂಡುಮಕ್ಕಳು ಸ್ವತಃ ಅಪ್ಪಂದಿರಾಗಿರುತ್ತಾರೆ. ಗೊಣಗುತ್ತಾ ತಮ್ಮ ಹಸುಳೆಗಳ ಒದ್ದೆ ಚಡ್ಡಿಯನ್ನು ಬದಲಿಸುತ್ತಿರುತ್ತಾರೆ. ಅದ್ಹೇಗಾದರೂ ನಮ್ಮನ್ನೆಲ್ಲಾ ಬೆಳೆಸಿದೆಯೋ ತಂದೆ ಎಂದು ಮನದಲ್ಲೇ ಅಚ್ಚರಿಪಡುತ್ತಿರುತ್ತಾರೆ.

ಕಳೆದ ವಾರವಷ್ಟೇ ಗೆಳೆಯನೊಬ್ಬ ತಂದೆಯಾದ ಎಂಬ ಶುಭಸುದ್ದಿಯೊಂದು ಬಂದು ನನ್ನನ್ನು ತಲುಪಿತ್ತು. ಹೇಗನ್ನಿಸುತ್ತಿದೆ ಎಂದು ಟಿವಿ ವರದಿಗಾರನೊಬ್ಬನ ಶೈಲಿಯಲ್ಲೇ ಆತನಿಗೆ ಕೇಳಿದೆ. ವಂಡರ್ ಫುಲ್ ಮಾರಾಯ ಅಂದಿದ್ದ. ಕಾಂಡೋಮ್ ಗಳ ಪ್ರಸಿದ್ಧ ಕಂಪೆನಿಯಾದ ಡ್ಯೂರೆಕ್ಸ್ “ನಮ್ಮ ಪ್ರತಿಸ್ಪರ್ಧಿಗಳ ಉತ್ಪನ್ನವನ್ನು ಬಳಸುತ್ತಿರುವ ಎಲ್ಲಾ ಗ್ರಾಹಕರಿಗೂ ಅಪ್ಪಂದಿರ ದಿನದ ಹಾರ್ದಿಕ ಶುಭಾಶಯಗಳು” ಎಂಬ ಜಾಹೀರಾತನ್ನು ಹಿಂದೊಮ್ಮೆ ಪ್ರಕಟಿಸಿತ್ತು.

ಅದ್ಯಾಕೋ ಆ ಜಾಹೀರಾತಿನ ನೆನಪಾಗಿ ಇಬ್ಬರೂ ನಗೆಯಾಡಿದೆವು. ಮಾತಿನಲ್ಲೇ ಪರಸ್ಪರರ ಕಾಲೆಳೆದೆವು. ಥಟ್ಟನೆ “ಯಾಕೋ ಲೈಫು ಏಕಾಏಕಿ ಸೀರಿಯಸ್ಸಾಗಿ ಬಿಟ್ಟಿದೆ ಎಂದನ್ನಿಸುತ್ತಿದೆ ಮಾರಾಯ” ಎಂದ ಅವನ ಮಾತಿಗೆ “ಮತ್ತೆ… ಜೀವನದ ಪ್ರಾಜೆಕ್ಟ್ ಅಂದ್ರೆ ಸುಮ್ನೇನಾ?” ಎಂದು ನಾನು ಉತ್ತರಿಸಿದ್ದೆ. ಯೋಜನೆ? ಯಾವ ಯೋಜನೆ? ಎಂದು ಆತ ಕೇಳಿಯೇ ಕೇಳುತ್ತಾನೆಂಬುದೂ ನನಗೆ ತಿಳಿದಿತ್ತು. ಕೊನೆಗೂ ಆತ ಕೇಳಿಯೇ ಬಿಟ್ಟಾಗ ಜಗ್ಗಿ ವಾಸುದೇವರ ಸೂಕ್ತಿಯೊಂದನ್ನು ಬರೆದು ಅವನಿಗೆ ಕಳಿಸಿದೆ.

ಅದು ಹೀಗಿತ್ತು:

“ಮಕ್ಕಳನ್ನು ಬೆಳೆಸುವುದು ಎಂದರೆ ಅದೊಂದು ಬರೋಬ್ಬರಿ ಇಪ್ಪತ್ತು ವರ್ಷದ ಯೋಜನೆ. ಇದನ್ನು ಇನ್ನೂ ವಿವರವಾಗಿ ಹೇಳುವುದಾದರೆ ಈ ದೀರ್ಘಾವಧಿಯ ಯೋಜನೆಯಲ್ಲಿ ನೀವು ಯಶಸ್ವಿಯಾದಿರಿ ಎಂದಾದರೆ ಇದು ಇಪ್ಪತ್ತು ವರ್ಷದ ಯೋಜನೆ. ಯಶಸ್ವಿಯಾಗಲಿಲ್ಲ ಅಂತಾದರೆ ಅದು ಎಂದೂ ಮುಗಿಯದ ಲೈಫ್ ಟೈಮ್ ಯೋಜನೆ”.

ಅಪ್ಪಂದಿರೆಲ್ಲರಿಗೂ ಹ್ಯಾಪೀ ಫಾದರ್ಸ್ ಡೇ!

 

‍ಲೇಖಕರು admin

June 15, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. shama nandibetta

    “ಅಪ್ಪ ಮತ್ತು ಮಕ್ಕಳ ಸಂಬಂಧಗಳು ತಿಳಿಯಾಗಬೇಕಾದರೆ ಸಾವು ಬಂದು ಕದ ತಟ್ಟುವವರೆಗೂ ಕಾಯಲೇಬೇಕೇ?”
    ವಾಹ್ ಎಂಥ ಮಾತು!! ಅನ್ನುತ್ತನ್ನುತ್ತಲೇ ಕಣ್ಣು ತೇವವಾಯ್ತು ಪ್ರಸಾದ್.. ತುಂಬ ಚೆಂದದ ಬರಹ.

    ಪ್ರತಿಕ್ರಿಯೆ
    • Prasad

      ಅಪ್ಪ ಅನ್ನುವಾತ ಬಿಡಿಸಿದಷ್ಟೂ ಒಗಟೇ… ಓದಿ ಪ್ರತಿಕ್ರಯಿಸಿದ್ದಕ್ಕಾಗಿ ಥ್ಯಾಂಕ್ಯೂ ಶಮಾ ಅವರೇ…

      ಪ್ರತಿಕ್ರಿಯೆ
  2. Anonymous

    ಅಪ್ಪನ ಕುರಿತು ಬರೆದ ಲೇಖನಗಳಲ್ಲಿ ಪ್ರಸಾದರ ಬರಹ ಅತ್ಯುತ್ತಮವಾದುದು. ಆಲೋಚನಾ ಕ್ರಮದಲ್ಲಿ ಇರುವ
    ಸ್ಪಷ್ಟತೆ ಬಹಳ ಹಿಡಿಸಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: