ಯಕ್ಷಗಾನ ಮತ್ತು ನಾಟಕ ಎನ್ನುವ ಶೀರ್ಷಿಕೆ ಕಾಣುವಾಗ..

ಮೂರ್ತಿ ದೇರಾಜೆ, ವಿಟ್ಲ 

ಸಾಣೆಹಳ್ಳಿಯಲ್ಲಿ ನಡೆದ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನದಲ್ಲಿ ಓದಿದ ಪ್ರಬಂಧ
ಬ್ರಾಕೆಟ್ ನಲ್ಲಿರುವುದು ಅಲ್ಲೇ ನೆನಪಾದ ವಿಷಯ, ಉಳಿದದ್ದು ಪ್ರಬಂಧ 

 

{ನಾನು ನಾಟಕ ತಜ್ಞನೂ ಅಲ್ಲ, ಯಕ್ಷಗಾನ ತಜ್ಞನೂ ಅಲ್ಲ

ನಾಟಕದ ನೆಪದಲ್ಲಿ ಮಕ್ಕಳೊಂದಿಗೆ ಒಡನಾಡ್ತಾ ಆಟ ಆಡ್ತಾ ಕಲೀತಾ ಇರುವವನು

ಈ ನಾಟಕ, ಯಕ್ಷಗಾನ, ಕಲೆ ಇತ್ಯಾದಿಗಳ ಕುರಿತು ನನ್ನನ್ನು ಕಾಡ್ತಾ ಇರುವ ಕೆಲವು ಸಂಗತಿಗಳಿವೆ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಷ್ಟೆ ನನ್ನ ಉದ್ದೇಶ.

ಆದರೆ ನನ್ನ ಉದ್ದೇಶವನ್ನು ನಿಮಗೆ ತಲುಪಿಸುವುದಕ್ಕೆ ಎಷ್ಟರ ಮಟ್ಟಿಗೆ ಸಾದ್ಯ!! ಎನ್ನುವ ಸಂದೇಹವೂ ನನಗಿದೆ
ಇರ್ಲಿ “ಪ್ರಬಂಧ ಮಂಡನೆ” ಆದ್ದರಿಂದ  ಒಂದಷ್ಟು ಬರೆದಿದ್ದೇನೆ ಓದಿ ಬಿಡ್ತೇನೆ }

‘ಯಕ್ಷಗಾನ’ ಮತ್ತು ‘ನಾಟಕ’ ಎನ್ನುವ ಶೀರ್ಷಿಕೆ ಕಾಣುವಾಗ ಸಾಮಾನ್ಯವಾಗಿ
ಅವೆರಡೂ ಬೇರೆ ಬೇರೆ ಒಂದಕ್ಕೊಂದು ಸಂಬಂಧವಿಲ್ಲ ಎಂದೇ ಭಾವಿಸುತ್ತೇವೆ. ಆದರೆ ಅದು ಹೌದೇ..??

ನಾಟಕ ಎಂದರೆ ಇಂದು ಬಹಳ ಸೀಮಿತವಾದ ಅರ್ಥದಲ್ಲಿ ಬಳಕೆಯಾಗ್ತಾ ಇದೆ. ಹೇಗೆಂದರೆ “ಕೆಲವು ಜನ ಸೇರಿ, ಸರಿಯಾದ ವೇಷಭೂಷಣಗಳೊಂದಿಗೆ, ಒಂದಿಷ್ಟು ಪರಿಕರ ಮತ್ತು ಸಂಗೀತ ದೊಂದಿಗೆ ಸ್ವರಗಳ ಏರಿಳಿತ ಮತ್ತು
ಸೂಕ್ತ ಹಾವಭಾವಗಳೊಂದಿಗೆ ಕಂಠಪಾಟದ ಮಾತುಗಳ ಮೂಲಕ ಪ್ರೇಕ್ಷಕರು ರಂಜಿಸುವ ಒಂದು ಪ್ರದರ್ಶನ ಅಷ್ಟೆ
ಎನ್ನುವ ನಂಬಿಕೆ ಇದೆ. ಅದರಲ್ಲಿ ಏನಾದರೂ ನೀತಿ, ಸಂದೇಶಗಳು ಇದ್ದರೆ ಆಯ್ತು ಎನ್ನುವ ಭಾವನೆಯೂ ಇದೆ
ಇವೆಲ್ಲಾ ತಪ್ಪೇನೂ ಅಲ್ಲ. ಆದರೆ ಅಷ್ಟೇ ಹೌದೇ….!!

ಬಹಳಷ್ಟು ಯಕ್ಷಗಾನ ಪ್ರಿಯರು ಮಾತಾಡುವುದನ್ನು ಕೇಳಿದ್ದೇನೆ  ಏನೆಂದ್ರೆ  “..ಈ ನಾಟಕ ಬಿಡಿ …!! ಅದು ಅಷ್ಟೆ ….!!
ಅದಕ್ಕೆ ಸಂಪ್ರದಾಯ ಅಂತ ಇಲ್ಲ. ಶಾಸ್ತ್ರೀಯ ಕಲಿಕೆ ಇಲ್ಲ ಯಾರೂ ನಾಟಕ ಮಾಡಬಹುದು ದೊಡ್ಡ ಪ್ರತಿಭೆಯೇ ಬೇಡಾ.. ಆದ್ದರಿಂದ ಅದು ಮೊದಲನೇ ದರ್ಜೆಯದ್ದು ಅಲ್ಲ..”ಹೀಗೆಲ್ಲಾ ಮಾತಾಡುವುದಿದೆ

{ಕೇವಲ …. ವಾರ್ಷಿಕೋತ್ಸವದ ಮಟ್ಟದ ನಾಟಕ ಪ್ರದರ್ಶನಗಳನ್ನು ಮಾತ್ರ ನೋಡಿ ..ಹೆಚ್ಚಿನವರಿಗೆ ….
‘ನಾಟಕ ಎಂದರೆ ಹೀಗೇ …!! ಇಷ್ಟೆ ….!! ‘ ಎನ್ನುವ ಅಭಿಪ್ರಾಯ ಬಂದಿರಬಹುದೋ ಏನೋ … …!!
ಆದರೆ ………… ಅದು ಹಾಗೆ ಅಲ್ವಲ್ಲಾ ….}

ನಾಟಕ ಎಂದರೆ ಒಂದು ಕಲೆ ಹೌದು ….ಅಷ್ಟು ಮಾತ್ರ ಅಲ್ಲ ……. ಜೊತೆಗೆ ನಾಟಕ ಒಂದು ಭಾಷೆಯೂ ಹೌದು….ಶಿಕ್ಷಣವೂ ಹೌದು….
ಮನಶಾಸ್ತ್ರವೂ ಹೌದು…… ವ್ಯಕ್ತಿತ್ವ ವಿಕಸನವೂ ಹೌದು…… ನಾಟಕ ಎಂದರೆ ನಮ್ಮ ಬದುಕೂ ಹೌದು …. ನಾಟಕ ಎಂದರೆ ಅದ್ಯಾತ್ಮವೂ ಹೌದು ….. ಹೀಗೆ ಏನು ಹೇಳಿದರೂ, ಪೂರ್ತಿ ಹೇಳಿದ ಹಾಗೆ ಆಗಲಾರದು.

ನಾಟಕ ಎನ್ನುವಂತಾದ್ದು ಮನುಷ್ಯನ ಮೂಲಭೂತ ಪ್ರವೃತ್ತಿ …. ಅಂದರೆ ಅದು ಮನುಷ್ಯನ ಹುಟ್ಟಿನೊಂದಿಗೇ ಇರುವಂತಾದ್ದು.
ಹಸಿವು, ನಿದ್ರೆಗಳಂತೆ … ಆಟದಂತೆ …. ಅದನ್ನು ಯಾರೂ ಕಲಿಸ ಬೇಕಾಗಿಲ್ಲ. …..

{ನಾವು …. ಶಾಲಾ ಪೂರ್ವ ಮಕ್ಕಳ ಚಟುವಟಿಕೆಗಳನ್ನು ನೋಡಿದರೆ ಗೊತ್ತಾಗ್ತದೆ ..}

ಈ … ‘ನಾಟಕ’ ಎನ್ನುವುದರಲ್ಲಿ ಎಲ್ಲವೂ ಸೇರಿಕೊಂಡಿದೆ……

{ಪ್ರಾಯಷಃ ,`ನಾಟಕ’ ಎನ್ನುವುದಕ್ಕಿಂತ `ರಂಗಭೂಮಿ’ ಅಂತ ಹೇಳಿದ್ರೆ ಹೆಚ್ಚು ಸ್ಪಷ್ಟವಾದೀತೋ ಏನೋ ….!!}

ಈ ‘ರಂಗಭೂಮಿ’ ಅಂದ್ರೆ ಅದರಲ್ಲಿ …….. ಸಾಹಿತ್ಯ, ಸಂಗೀತ, ನೃತ್ಯ, ಚಿತ್ರ, ಆಟ, ಪಾಟ, ಹುಡುಕಾಟ ಎಲ್ಲಾ ಸೇರಿಕೊಂಡಿದೆ. ……
ಶಾಸ್ತ್ರೀಯವಾದದ್ದು, ಅಶಾಸ್ತ್ರೀಯವಾದದ್ದು ಎರಡೂ ಇದೆ.

{ನಮ್ಮ ..ಅಂದ್ರೆ ಮನುಷ್ಯರ ಬದುಕಿನ ರೀತಿ ನೀತಿ ಎಲ್ಲಾ,…. ಬದುಕ್ತಾ ಬದುಕ್ತಾ .. ರೂಪುಗೊಂಡದ್ದು. ….
ಆ ಮೇಲೆ ಅದಕ್ಕೊಂದು ಶಾಸ್ತ್ರ …. ನಿಯಮ …. ನಿಬಂಧನೆ ಅಂತ ಆಚರಣೆಗೆ ಬಂದದ್ದು.}

ಹಾಗೆಯೇ …. ಯಾವುದೇ ಕಲೆಗಳಿಗೆ ಒಂದು ಶಾಸ್ತ್ರ ಅಂತ ಮೊದಲೇ ಇದ್ದು….. ನಂತರ ಕಲೆಗಳು ಹುಟ್ಟಿದ್ದು ಖಂಡಿತಾ ಆಗಿರಲಾರದು.
ಜನಪದದಲ್ಲಿ … ಅಂದ್ರೆ ಜನಗಳ ಗುಂಪಿನಲ್ಲಿ …. ಅಲ್ಲಲ್ಲಿ ಪ್ರಕಟಗೊಂಡ ಅಭಿವ್ಯಕ್ತಿಗಳನ್ನು ,ಅಭಿನಯಗಳನ್ನು … ಮಹಾನುಭಾವನೊಬ್ಬ …..
ಅಥವಾ …… ಒಂದಷ್ಟು ಜನ ಸೇರಿ …… ಕ್ರೋಢೀಕರಿಸಿ….. ಅದಕ್ಕೊಂದು ಶಾಸ್ತ್ರ ಅಂತ ರೂಪಿಸಿರಬಹುದು.
ಹಾಗೆ ರೂಪಿತವಾಗಿರಬಹುದಾದ … “ ಭರತನ ನಾಟ್ಯ ಶಾಸ್ತ್ರ ”… ಎನ್ನುವುದು …. ಇದೆಯಲ್ಲಾ … ಅದು …..
ಎಷ್ಟೋ ಜನರ ನಂಬಿಕೆಯಂತೆ … ಭರತ ನೃತ್ಯಕ್ಕಾಗಲೀ… ಯಕ್ಷಗಾನಕ್ಕಾಗಲೀ ಮಾತ್ರ ಸಂಬಂಧಪಟ್ಟದ್ದೇ ….. ??

{ಭರತನ ನಾಟ್ಯ ಶಾಸ್ತ್ರ …. ಎನ್ನುವುದು ಸಮಗ್ರ ರಂಗಭೂಮಿಗೆ ಸಂಬಂಧ ಪಟ್ಟದ್ದಲ್ಲವೇ…….ಅಂದ್ರೆ ಇಡೀ ನಾಟಕಕ್ಕೇ ಸಂಬಂಧ ಪಟ್ಟದ್ದು.}

ನಿಮಗೆಲ್ಲಾ ಗೊತ್ತಿರಬಹುದು ……. ಮನೋವಿಜ್ಞಾನzಲ್ಲಿ ಒಂದು ಹೇಳಿಕೆಯಿದೆ ….
“ ಅದ್ಭುತ ರಮ್ಯ ಕಥಾನಕಗಳು ಮಕ್ಕಳ ಭಾವ ಪ್ರಪಂಚವನ್ನು ಶ್ರೀಮಂತಗೊಳಿಸುತ್ತವೆ…. ಮಿದುಳಿನ ಕಲ್ಪನಾ ಸಾಮರ್ಥ್ಯವನ್ನು ಬೆಳೆಸುತ್ತದೆ….. ಮಾತ್ರವಲ್ಲ … ಮಗುವಾಗಿದ್ದಾಗ ವಾಸ್ತವವೂ ಕಲ್ಪನೆಯೂ ಒಂದೇ ಆಗಿದ್ದು …. ಬೆಳೆಯುತ್ತಾ ಬಂದಂತೆ ಅವುಗಳ ನಡುವಿನ ವೆತ್ಯಾಸ ಗೊತ್ತಾಗುವುದಾದರೂ ….
ಬಾಲ್ಯದಲ್ಲಿ ಅನುಭವಿಸಿದ ಫ್ಯಾಂಟೆಸಿಗಳು, ವಿಸ್ಮಯಗಳು…. ಆತನನ್ನು ಸದಾ ಉಲ್ಲಸಿತನನ್ನಾಗಿಸಲು ಸಹಕಾರಿಯಾಗುತ್ತವೆ…”…… ಅಂತ.

ನಮ್ಮ ಕರಾವಳಿ- ಮಲೆನಾಡು ಪ್ರಾಂತ್ಯದ ಜನರಿಗೆ ಇಂತಹ ಅದ್ಭುತ ರಮ್ಯ ಲೋಕವನ್ನು ಪ್ರವೇಶಿಸಲು ಸಹಕಾರಿಯಾದದ್ದು ಯಕ್ಷಗಾನ.

{ನಾವೆಲ್ಲ .. ಚಿಕ್ಕಂದಿನಲ್ಲಿ ಯಕ್ಷಗಾನ ನೋಡುತ್ತಾ …ಮರುದಿನ …ಬೂದಿಯೋ ಮಸಿಯೋ ಬಳ್ಕೊಂಡು ….ಬಾಯಲ್ಲೇ ಚೆಂಡೆ ಭಾರಿಸುತ್ತಾ …
ನಾವೇ ರಾಮ, ರಾವಣ …. ಕೃಷ್ಣ ಕೌರವರಾಗಿ …. ಕುಣಿದ ‘ಥ್ರಿಲ್’ ಇವತ್ತಿಗೂ ನೆನಪುಂಟು. ಇದು ನಾಟಕ …
ಆದ್ರೆ ಯಕ್ಷಗಾನ ಅಲ್ಲವೇ … ಅಂದ್ರೆ …. ಯಕ್ಷಗಾನ ಹೌದು ಮಕ್ಕಳ ಯಕ್ಷಗಾನ.}

ಈ ‘ಯಕ್ಷಗಾನ’ ಎನ್ನುವುದು ಕೂಡಾ ‘ನಾಟಕ’ ದ ಒಳಗೇ ಸೇರಿರುವಂತಾದ್ದು …. ಯಕ್ಷಗಾನವೂ ನಾಟಕವೇ …!! ಒಂದು ಶೈಲೀಕೃತ ನಾಟಕ….
ದಯವಿಟ್ಟು ಗಮನಿಸಬೇಕು …“ರಂಗಭೂಮಿ” ಅಥವಾ ‘ನಾಟಕ’ ಎನ್ನುವ ಸಾವಿರಾರು ಪುಟದ ಒಂದು ಗ್ರಂಥದಲ್ಲಿ …ಯಕ್ಷಗಾನವೂ ಒಂದು ಪುಟ ಅಷ್ಟೆ……!!

{ಆದ್ದರಿಂದ … ಮೇಲಿಂದ ಮೇಲೆ ನೋಡುವಾಗ … ‘ಯಕ್ಷಗಾನ’ ಮತ್ತು ‘ನಾಟಕ’ ….. ಸರಿಯಾಗಿ ನೋಡಿದಾಗ ‘ಯಕ್ಷಗಾನ ಎಂಬ ನಾಟಕ’}

ಹಾಗೆ ….. ಯಕ್ಷಗಾನ ಒಂದು ಶೈಲೀಕೃತ ನಾಟಕ ಆಗಿರುವುದರಿಂದ …
ಅದರ ಚೌಕಟ್ಟನ್ನು ಮೀರಿದ ಸಂಗತಿಗಳು ಅಸಂಗತ, ಅಸಂಬದ್ದ ಅಂತ ಅನಿಸಿ ಬಿಡುವುದು ಸಹಜ.
ಆದರೆ ಎಷ್ಟೋ ವಿಷಯಗಳನ್ನು ಒಂದು ರೀತಿಯ ಪೂರ್ವಗ್ರಹಿಕೆಯಿಂದಲೇ ….. ಅಸಂಗತ ಎಂದು ಭಾವಿಸುತ್ತಿದ್ದೇವೋ …. ಹೇಗೆ…. !!
ಉದಾಹರಣೆಗೆ … ಯಕ್ಷಗಾನದಲ್ಲಿ ತಮ್ಮ ತಮ್ಮ ಪದಕ್ಕೆ ….. ಬಹಳ ಚೆನ್ನಾಗಿ ಅಭಿನಯ ಮಾಡುವವರಿದ್ದಾರೆ….. ತುಂಬಾ ಅಭಿನಯ ಮಾಡುವವರಿದ್ದಾರೆ…
ವಿಪರೀತ ಅಭಿನಯ ಮಾಡುವವರೂ ಇದ್ದಾರೆ … …..ಆದರೆ ..
ಎದುರು ಪಾತ್ರದ ಪದ ಬಂದಾಗ … ಇಂತವರ ಮುಖದಲ್ಲಿ ಕೂಡಾ …. ಯಾವ ಪ್ರತಿಕ್ರಿಯೆ ಕಾಣುವುದಿಲ್ಲ… ಎನ್ನುವುದನ್ನು ನೀವೂ ಗಮನಿಸಿರಬಹುದು.
ವೇಧಿಕೆಯಲ್ಲಿ ಎರಡಕ್ಕಿಂತ ಹೆಚ್ಚು ಪಾತ್ರಗಳಿದ್ದರಂತೂ … ಕೇವಲ ಉತ್ಸವ ಮೂರ್ತಿಗಳೇ….!!
ಹೀಗೆ ಹೇಳಿದರೆ …..“ಅದೂ ….. ನೀವು ಹೇಳುವುದು ಯಕ್ಷಗಾನ ಆಗುವುದಿಲ್ಲ …..ಅದು ನಾಟಕ ಆಯ್ತು ….” ಎಂದು ಹೇಳುವುದು … ಸರಿಯೇ…!!
ಅದು …. ಒಂದು ರೀತಿಯ ಜಡವಾದ, ಪೂರ್ವಗ್ರಹೀತ ನಂಬಿಕೆ ಅಲ್ಲವೇ …!!

{ಅಂದ್ರೆ ….. ಯಕ್ಷಗಾನ ಎನ್ನುವುದು ಒಂದು ಸಮೂಹ ಮಾದ್ಯಮ,……
ಸ್ವಗತ,ಪೀಠಿಕೆ ಹೊರತು ಪಡಿಸಿ … ಅಲ್ಲಿನ ‘ಮಾತು’ ಎನ್ನುವುದು…… ‘ಎರಡು ಪಾತ್ರಗಳೊಳಗಿನ ಸಂವಾದ’ ….
ಈ ಅರಿವು ಇಲ್ಲದೇ ಇರುವುದೇ …… ಇದಕ್ಕೆ ಕಾರಣ ಇರಬಹುದು. }

ಇವತ್ತು ಬಹು ಚರ್ಚಿತವಾಗುತ್ತಿರುವ …. “ಮೈ ಬಿಟ್ಟು ಮಾಡುವ ವೇಷಗಳು …. ಯಕ್ಷಗಾನ ಚೌಕಟ್ಟಿನ ಒಳಗೆ ಬರುವುದಿಲ್ಲ …” ಎನ್ನುವುದು
ಬಹಳಷ್ಟು ಜನ ಕಲಾವಿದರೂ, ಪ್ರೇಕ್ಷಕರೂ ಒಪ್ಪಿರುವ ವಿಚಾರ ಆದರೂ …. ಅದು ಯಕ್ಷಗಾನದ್ದೇ ಅಂತ ಸಮರ್ಥಿಸಿ ಕೊಳ್ಳುವವರೂ ಅನೇಕರಿದ್ದಾರೆ.
ಆಗ ಸಹಜವಾಗಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ…… ನಮ್ಮ ತೆಂಕು ತಿಟ್ಟಿನ ಮಟ್ಟಿಗೆ ಹೇಳುವುದಾದರೆ ……
ವನವಾಸದ ರಾಮ ಲಕ್ಷಣರದ್ದು … “ಮೈ ಬಿಟ್ಟ ವೇಷ “ವೇ ಸರಿ ಎಂದಾದರೆ… ಪಾಂಡವರ ವನವಾಸದ ಸಂದರ್ಭ ಯಾಕೆ ಹಾಗಿಲ್ಲ….!!

{ಇವತ್ತಿನ ಈ ಪ್ರಖರವಾದ ಬೆಳಕಿನಲ್ಲಿ ಅಂತೂ …. ಈ ಮೈ ಬಿಟ್ಟ ವೇಷಗಳು ತೀರಾ ಅಸಹ್ಯವಾಗಿ ಕಾಣ್ತವೆ.
ಕಲೆಯಲ್ಲಿ ಸೌಂದರ್ಯ ಪ್ರಜ್ಞೆ ಎನ್ನುವುದು ಬಹಳ ಮುಖ್ಯ}.

ಮತ್ತೆ …ಕೃಷ್ಣನಿಗೆ ನೀಲಿ ಬಣ್ಣವನ್ನು ಬಳಿಯುವುದೇ ಸರಿ ಎಂದಾದರೆ ……….. ದ್ರೌಪತಿಗೆ ನೀಲಿ ಯಾಕಿಲ್ಲ…!!

{ಅವಳು ಕೃಷ್ಣೆ ಅಲ್ವಾ ..? …………ಬಲರಾಮನಿಗೂ ನೀಲಿ ಬಣ್ಣ ಬಳಿದವರಿದ್ದಾರೆ …ಅದೂ ಹೇಗಿರ್ತದೆ ಅಂದ್ರೆ …
ಆಗಷ್ಟೇ ಅಡಿಕೆ ತೋಟದಲ್ಲಿ ಮೈಲುತುತ್ತು ಸ್ಪ್ರೇ ಮಾಡಿ ಬಂದವನ ಹಾಗೆ.}

ಮತ್ತೆ ….. ನಳದಮಯಂತಿಯ ಬಾಹುಕನನ್ನು ಅಷ್ಟೂ ವಿಕಾರವಾಗಿ ಚಿತ್ರಿಸಬೇಕೇ …!! …ಇವೆಲ್ಲಾ ಕೆಲವು ಉದಾಹರಣೆಗಳು ಅಷ್ಟೆ.

ಇಂತಾದ್ದನ್ನೆಲ್ಲಾ ….. ‘ಸಹಜತೆ’ ಅಂತ ಹೇಳಿ ಸಮರ್ಥಿಸಿಕೊಳ್ಳುವುದು ಉಂಟಲ್ಲಾ ….. ಅದು ತೀರಾ ಅಸಹಜ.
ಯಕ್ಷಗಾನ ಎನ್ನುವ ಈ ನಾಟ್ಯಧರ್ಮೀ ನಾಟಕದಲ್ಲಿ ಮಾತ್ರ ಅಲ್ಲ…. ‘ಸಾಮಾಜಿಕ ನಾಟಕ’ ಎನ್ನುವ ಲೋಕಧರ್ಮೀ ನಾಟಕದಲ್ಲೂ … ಹಾಗೇ ….
ಸಹಜತೆಗೆ ಒತ್ತುಕೊಡುತ್ತಾ ಹೋದ ಹಾಗೇ … ಪ್ರಶ್ನೆಗಳು ಹೆಚ್ಚೆಚ್ಚು ಹುಟ್ಟಿಕೊಳ್ತಾ ಹೋಗ್ತವೆ.
ಈ “ಸಹಜತೆ ” ಎನ್ನುವುದು ಒಂದು ರೀತಿಯಲ್ಲಿ … ಯಕ್ಷಗಾನ ಮಾತ್ರ ಅಲ್ಲ… ಇಡೀ ರಂಗಭೂಮಿಗೇ ಸಂಬಂಧ ಪಟ್ಟದ್ದಲ್ಲ.
ಅದು ಕ್ಯಾಮರಾ ಮಾದ್ಯಮಗಳಾದ ಸಿನೇಮಾ, ಟಿ.ವಿ.ಗಳಿಗೆ ಸಂಬಂಧ ಪಟ್ಟದ್ದು.

ಸಹಜತೆ ಬೇಕಾದದ್ದು ಅಭಿನಯದಲ್ಲಿ … ಅಯಾಯ ಶೈಲಿಯ ಚೌಕಟ್ಟಿನ ಮಿತಿಯಲ್ಲಿ.
ನಾಟ್ಯಧರ್ಮಿಯೇ ಇರಲಿ … ಲೋಕ ಧರ್ಮಿಯೇ ಇರಲಿ ….
ಅಭಿನಯ ಸಹಜತೆಯನ್ನು ಪಡೆಯುವುದು …. ಯಾವಾಗ ಅಂದ್ರೆ …..
ಆ ನಟನ ವಾಚಿಕ ಮತ್ತು ಆಂಗಿಕಗಳು ಅವನದೇ ಸಾತ್ವಿಕದ ಹಂಗಿನಲ್ಲಿದ್ದಾಗ.
ಆದ್ದರಿಂದಲೇ ಅಲ್ಲವೇ “ತಂ ವಂದೇ …. ಸಾತ್ವಿಕಂ ಶಿವಂ …” ಅಂತ ಪ್ರಾರ್ಥನೆ ಮಾಡುವುದು.

ಮಾತು, ಕುಣಿತ, ಅಭಿನಯ, ಚಲನೆ …ಎಲ್ಲಾ ಎಷ್ಟೇ ಚೆನ್ನಾಗಿದ್ದರೂ … ಕೆಲವೊಮ್ಮೆ ನಮಗೇ ಗೊತ್ತಾಗ್ತದೆ ….

{“ಎಲ್ಲಾ ಇದೆ ……… ಜೀವ ಒಂದು ಇರ್ಲಿಲ್ಲಾ …” ಅಂತ. ….. ಅಂದ್ರೆ ಸಾತ್ವಿಕಾಭಿನಯ ಸಾಕಾಗಲಿಲ್ಲ ಅಂತ.
ಕೆರೆಮನೆ ಮಾಬ್ಲ ಹೆಗ್ಡೆಯವರು ಹೇಳ್ತಿದ್ರು … “ಪ್ರಾಣ ಪ್ರತಿಷ್ಠೆ ಆಗ್ಲಿಲ್ಲಾ …” ಅಂತ.
ದೇವಸ್ಥಾನದಲ್ಲಿ …ಪ್ರಾಣ ಪ್ರತಿಷ್ಠೆ ಆದಮೇಲೆ ಅಲ್ವಾ … “ ದೇವರು “ ಅಂತ ಆಗೋದು. …ಇಲ್ಲದಿದ್ರೆ ..ಒಂದು ಕಲ್ಲಿನ ವಿಗ್ರಹ ಅಷ್ಟೆ.}

{ಮತ್ತೆ … ಇದು … ಕಲೆಯಲ್ಲಿ ಮಾತ್ರ ಅಲ್ಲ…. … ಬದುಕಿನಲ್ಲೂ ಹಾಗೇ ….
“ಮನುಷ್ಯನ ನಡೆ …. ನುಡಿ …. ಮತ್ತು ಮನಸ್ಸು …. ಒಂದೇ ಆಗಿರಬೇಕು …ಅಂತಲೇ ಅಲ್ವೇ ಶಿವಶರಣರು ಹೇಳಿದ್ದು.}

ಮತ್ತೆ …. ಈ “ಪರಂಪರೆ” ಮತ್ತು “ಸಂಪ್ರದಾಯ” ಎನ್ನುವ ಎರಡು ಪದಗಳನ್ನು ….
ಒಂದೇ ಅರ್ಥದಲ್ಲಿ …. ಬಳಸುತ್ತಿದ್ದಾರೇನೋ ಎನ್ನುವ ಸಂದೇಹ ಇದೆ. …… ನಾನೂ ಸೇರಿದಂತೆ .. ಅನೇಕರಿಗೆ ಇದರಲ್ಲಿ ಗೊಂದಲ ಇದೆ.
ಪ್ರಾಯಷಃ ….. ಪರಂಪರೆ ಎನ್ನುವುದು ಒಂದು ಹರಿವು … ಸಂಪ್ರದಾಯ ಎನ್ನುವುದು ಜಡ…. ಹಾಗಾಗಿ ಪರಂಪರೆ ಬೇಕು …ಸಂಪ್ರದಾಯ ಬೇಡ.
ಹೇಗೆ … ನಮ್ಮ ಬದುಕು ಬದಲಾವಣೆ ಗೊಳ್ಳುತ್ತಾ ಹೋಗ್ತದೋ ….. ಹಾಗೆ … ಕಲೆಯ ಸ್ವರೂಪವೂ ಬದಲಾವಣೆ ಆಗ್ತಾ ಹೋಗ್ತದೆ…..
ಬದಲಾವಣೆಯನ್ನು “ತರುವುದು” ಅಲ್ಲ … ಅದಾಗಿ “ಆಗುವುದು”…… ಅದೂ …. ತೀರಾ ಸಹಜವಾಗಿ.

{“ನಾನು ಬದಲಾವಣೆ ತಂದೆ….” ಎನ್ನುವುದು ಅಹಂಕಾರದ ಮಾತಾದೀತು…. “ ಕಲೆ ಅಥವಾ ಪ್ರಕೃತಿ ನನ್ನಿಂದ ಈ ಬದಲಾವಣೆ ಮಾಡಿಸಿತು…” ಎನುವುದೇ ಸರಿ}

“ಕಲೆ ಬೆಳೆಯುವುದೇ….ತನ್ನ ಸಮಕಾಲೀನತೆಯೊಂದಿಗೆ ಸ್ಪಂದಿಸಿದಾಗ…” ಎನ್ನುವ ಮಾತಿದೆ…. ಅಂದರೆ ಕೊಡು ಕೊಳ್ಳುವಿಕೆಯಿಂದ …
ಆದರೆ….. ಈ ಮಾತು ಇಂದು ಎಷ್ಟು ಕೆಟ್ಟದಾಗಿ… ಬಳಕೆಯಾಗುತ್ತಿದೆ ಎನ್ನುವುದನ್ನು… ಹೆಚ್ಚು ವಿವರಿಸಬೇಕಾಗಿಲ್ಲ.

ಇನ್ನು … ಇವತ್ತು ಯಕ್ಷಗಾನದಲ್ಲಿ ಅನೇಕರ ಭಾಗವತಿಕೆ ಎನ್ನುವುದು ಬಹು ಜನ ಪ್ರಿಯವಾಗಿದೆ…..
ಆದರೆ … ನಿಜವಾದ ಕಲಾಸಕ್ತರಿಗೆ ಅಸಹ್ಯವೂ ಆಗಿದೆ ಎನ್ನುವುದನ್ನೂ ನಾವು ಗಮನದಲ್ಲಿಟ್ಟುಕೊಳ್ಳಬೇಕು.

ಯಕ್ಷಗಾನದ ಭಾಗವತಿಕೆ ಎಂದರೆ ಅದು ರಂಗ ಸಂಗೀತ. ಅದು ರಾಗ ಸಂಗೀತ ಅಲ್ಲ… ಅದು ಭಾವಕ್ಕೆ ಸಂಬಂಧ ಪಟ್ಟದ್ದು.
ಸಾಮಾನ್ಯವಾಗಿ ಒಂದೊಂದು ಭಾವಕ್ಕೆ ಒಂದೊಂದು ರಾಗ ಹೊಂದಿಕೊಳ್ಳುತ್ತದೆ ..ಎನ್ನುವ ನಂಬಿಕೆ ಸಾಮಾನ್ಯವಾಗಿ ಇದೆ. ….
ಆ ನಂಬಿಕೆ ರಾಗ ಸಂಗೀತದ ಮೂಲಕ ಬಂದಂತಾದ್ದು…. ದುಃಖಕ್ಕೆ ಒಂದು ರಾಗ …ಸಂತೋಷಕ್ಕೆ ಒಂದು ರಾಗ .. ಭಕ್ತಿಗೆ ಒಂದು ರಾಗ …ಹೀಗೆ….

{ಈಗ … ಒಂದು ಉದಾಹರಣೆಯಾಗಿ … ಗದಾ ಯುದ್ದದ … “ಕಪಟನಾಟಕ ರಂಗ … …” ಪದ್ಯ ಇದೆ….
ನಾನು …ಕೆಲವು ಲೈವ್ ಮತ್ತೆ ಕೆಲವು ವಿಡಿಯೋ ಅಂತ ಹತ್ತು ಹನ್ನೆರಡು ಭಾಗವತರ ಮತ್ತು ಕೌರವ ವೇಷಧಾರಿಗಳ ಜೋಡಿ ನೋಡಿದ್ದೇನೆ ….
ಹೆಚ್ಚಿನ ಎಲ್ಲಾ ಭಾಗವತರೂ …ಹಿಂದೋಳ ..ಇಲ್ಲವೇ ಮೋಹನದಲ್ಲಿ ಹಾಡ್ತಾರೆ … 15 -20 ನಿಮಿಷ ಕೌರವ ಕುಣಿತಾನೆ .. ವಿಪರೀತ ಚಪ್ಪಾಳೆಯೂ ಬೀಳ್ತದೆ.
ಎಲ್ಲಾ ಸರಿ … ಆದರೆ …ಕೌರವನಿಗಿರಬೇಕಾದ ವ್ಯಂಗ್ಯ ಹೋಗಿ …. ಭಕ್ತಿ ಬಂದಂತೆ ಕಾಣ್ತದೆ…. ಭೀಷ್ಮನ “ ಶ್ರೀ ಮನೋಹರ ಸ್ವಾಮಿ ಪರಾಕು …” ಕೇಳಿದ ಹಾಗೆ ಆಗ್ತದೆ.
ನೆಬ್ಬೂರು ಭಾಗವತರು ಮತ್ತು ಕೆರೆಮನೆ ಶಂಭು ಹೆಗ್ಡೆಯವರ ಜೋಡಿ ಮಾತ್ರ …ನನ್ನಲ್ಲಿ ನಿಜವಾದ ಪರಿಣಾಮ ಉಂಟು ಮಾಡಿದ್ದು….
ಅವರು ಕಮಾಚ್ ನಲ್ಲಿ ಹಾಡ್ತಿದ್ದದ್ದಂತೆ…… ಹಾಗಾಗಿ ಈ ಪದಕ್ಕೆ ನನ್ನ ಆಕ್ಷೇಪ ಇತ್ತು. ಹಿಂದೋಳ ಮತ್ತು ಮೋಹನ ಸರಿಯಲ್ಲ …ಅಂತ….
ನಾನೇನೂ ಸಂಗೀತ ತಿಳಿದವ ಅಲ್ಲ….
ಬಲಿಪ ಭಾಗವತರಲ್ಲಿ ನನ್ನ ಆಕ್ಷೇಪ ತೋಡಿಕೊಂಡಾಗ …. “ ಸಂಪ್ರದಾಯದಲ್ಲಿ …. ಮೋಹನದಲ್ಲೇ ಹಾಡುವುದು…” ಅಂತ ಹೇಳಿದ್ರು…. ನನಗೆ ಗಲಿಬಿಲಿ ಆಯ್ತು.
ಆ ಮೇಲೆ ಒಂದ್ಸಾರಿ ಹವ್ಯಾಸಿ ಭಾಗವತರಾದ ಪುತ್ತೂರು ರಮೇಶ ಭಟ್ಟರು … ಮನೆಯಲ್ಲಿ ಹಾಡಿ ತೋರಿಸಿದರು. ….
ಮೋಹನ ರಾಗದಲ್ಲೇ ಅದ್ಭುತವಾಗಿ ವ್ಯಂಗ್ಯಭಾವವನ್ನು ತೋರಿಸಿಕೊಟ್ಟಿದ್ರು. …. ಆಗ ಬಲಿಪ ಭಾಗವತರ ಇಂಗಿತ ಅರ್ಥ ಆಯ್ತು. ನಾನೆಲ್ಲಿ ತಪ್ಪಿದ್ದೆ ಅಂತಲೂ ಗೊತ್ತಾಯ್ತು. …. ಅದೇನು ಅಂದ್ರೆ }

ಯಕ್ಷಗಾನ ಭಾಗವತಿಕೆ ಅಂದರೆ ರಂಗ ಗೀತೆ …. ಸಂದರ್ಭಕ್ಕೆ ಸರಿಯಾಗಿ, ಭಾವಕ್ಕೆ ಅನುಗುಣವಾಗಿ ಬರುವಂತಾದ್ದು….
ರಾಗ ಯಾವುದೂ ಆದೀತು….. ಭಾಗವತ ಭಾವ ದೊಂದಿಗೆ ಇರ್ಬೇಕು…..ಅಷ್ಟೆ ….. ಆಗ ಮಾತ್ರ ಕಲೆ ಸೃಷ್ಟಿಯಾದೀತು….
ಆದ್ರೆ ಅದಕ್ಕೆ … ಕಲೆಯಲ್ಲಿ ಮಾತ್ರ ನಿಜವಾದ ಪ್ರೀತಿ ಇರಬೇಕು.
ಸೆಲ್ಫ್ ಕಾನ್ಷಿಯಸ್ ನೆಸ್ ಇಲ್ಲದ ….ಅಂದರೆ .. ಸ್ವ ಕೇಂದ್ರಿತ ಪ್ರಜ್ಞೆ ಇಲ್ಲದ… ಅಂದರೆ .. “ನಾನು” ಎನ್ನುವ ಅಹಂ ಇಲ್ಲದ ….
ಒಬ್ಬ ನಿಜವಾದ ಭಾಗವತ ಮಾತ್ರ ಕಲೆಯನ್ನು ಸೃಷ್ಟಿಸಬಲ್ಲ.
ಮೆರೆಯಬೇಕು … ಗೆಲ್ಲಬೇಕು ಎನ್ನುವ ಹಠವೇ … ಕಲೆಯ ದೃಷ್ಟಿಯಿಂದ ಕಲಾವಿದನನ್ನು ಸೋಲಿಸುತ್ತದೆ. ….
ಚಪ್ಪಾಳೆ ಮಾನದಂಡ ಅಲ್ಲ.. ಎನ್ನುವುದು ಅರ್ಥ ಆದರೆ ಸಾಕು.

ಇಂದು…. ಯಾವನೇ ಒಬ್ಬ ಕಲಾವಿದ.. ತನ್ನದಲ್ಲದ ಇನ್ನೊಂದು ಕಲೆಯನ್ನು ನೋಡುವ, ಕೇಳುವ ಮನಸ್ತಿತಿಯಲ್ಲೇ ಇದ್ದಂತಿಲ್ಲ….
ತನ್ನ ಕ್ಷೇತ್ರದಲ್ಲೂ ….. ತನ್ನದು ಮಾತ್ರ ಸರಿ ..ಎನ್ನುವ ಗಟ್ಟಿ ನಂಬಿಕೆ.
ತನ್ನ ಖಚಿತತೆಯನ್ನೇ ಸಂಪೂರ್ಣವಾಗಿ ನಂಬಿಬಿಟ್ಟರೆ… ಸೃಷ್ಟಿಶೀಲತೆಯೇ ಉಂಟಾಗಲಾರದು.
ಈ ಅರಿವು ಇರುವ ಕಲಾವಿದರೂ ವಿರಳ…. ಕೇಳುಗರು, ನೋಡುಗರೂ ವಿರಳ.
ಖಚಿತವಾಗಿ … ಗೊತ್ತಾದರೆ ಆಯ್ತಲ್ಲ … ಮತ್ತೆ ಬೆಳೆಯುವುದಕ್ಕೆ ಏನುಂಟು…!! …
ಆದ್ರೆ ಖಚಿತವಾಗಿ ಗೊತ್ತಾಗುವುದು ಅಂತ ಒಂದು ಸಂಗತಿ ಇದೆಯೇ….?
ಮನುಷ್ಯನ ಬದುಕು ಅಂದರೆ … ಬ್ರಹ್ಮಾಂಡದ ಹಾಗೆ … ನಿರಂತರ ಬೆಳಿತಾ ಇರುವುದು.

“ಈ ಪ್ರಕೃತಿಯಲ್ಲಿ “ಎಲ್ಲವೂ” ಒಂದಕ್ಕೊಂದು ಕೊಂಡಿಯಾಗಿ ಪರಸ್ಪರ ಬೆರೆತುಕೊಂಡಿವೆ…”.
ಎನ್ನುವ ಹಿರಿಯರ ಮಾತು ನಮಗೆ ಅರ್ಥವಾದಹಾಗೆ ಇಲ್ಲ… ಒಟ್ಟಾಗಿ ನೋಡುವ ಸ್ವಭಾವವೇ ಹೊರಟು ಹೋಗಿದೆ.

ಎಲ್ಲರೂ ಒಂದೊಂದು ದ್ವೀಪವನ್ನು ಕಟ್ಟಿಕೊಳ್ಳುತ್ತಿದ್ದಾರೆ……ಅಭಿಮಾನಿ ಸಂಘಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ.
ಯಕ್ಷಗಾನದ ನಿಜವಾದ ಪ್ರೇಕ್ಷಕ ಹಿಂದೆ ಸರಿದು …ತಮ್ಮ ತಮ್ಮ ಅಭಿಮಾನಿ ದೇವತೆಗಳನ್ನು ಪೂಜಿಸುವ ಪ್ರೇಕ್ಷಕವರ್ಗವೇ…. ಹೆಚ್ಚಾಯ್ತು.
ಕಲಾವಿದರು ಚಪ್ಪಾಳೆಗೆ ಒಲಿದು, ಹೊಗಳಿಕೆಗೆ ಬಲಿಯಾದರೆ …… ಕಲೆಗೆ ನಮ್ಮ ಕಾಲ ಘಟ್ಟದ ಕೊಡುಗೆ ಏನು ….!!

ಯಕ್ಷಗಾನ ಒಂದು ಸಮೂಹ ಮಾದ್ಯಮ. …..
ಅಲ್ಲಿ ಮಾತೇ ಇರಲಿ,…. ಕುಣಿತವೇ ಇರಲಿ ….ಭಾಗವತಿಕೆಯೇ ಇರಲಿ ..ಅಥವಾ ಹಿಮ್ಮೇಳವೇ ಇರಲಿ….
ಜೊತೆಗೆ ಈ ಬೆಳಕು ಮತ್ತು ದ್ವನಿವರ್ಧಕವೂ ಸೇರಿ …….. ಎಲ್ಲವೂ ಒಂದು ಸಮತೂಕದಲ್ಲಿದ್ದು …ಒಂದು ಪಾಕ ಆಗಬೇಕು…..
ಎಲ್ಲರಲ್ಲೂ …. ಔಚಿತ್ಯ ಪ್ರಜ್ಞೆ ಎನ್ನುವುದೊಂದು ಇರಲೇ ಬೇಕು. ….

ಹಿಂದೆ ನನ್ನ ತೀರ್ಥರೂಪರಾದ ದೇರಾಜೆ ಸೀತಾರಾಮಯ್ಯನವರೂ, ಶೇಣಿ ಗೋಪಾಲಕೃಷ್ಣ ಭಟ್ಟರೂ …ಹೇಳ್ತಾ ಇದ್ದದ್ದು ನೆನಪಿದೆ. ..ಏನಂದ್ರೆ …
“ಯಕ್ಷಗಾನದ ಸಮಗ್ರ ಅನುಭವ, ಜ್ಞಾನ ಇರುವ … ನಿರ್ದೇಶಕನೊಬ್ಬ ಯಕ್ಷಗಾನಕ್ಕೆ ಬೇಕು…
ಕನಿಷ್ಠ ದೊಡ್ಡ ಬಲಿಪರ ಅಥವಾ ಅಗರಿ ಭಾಗವತರ ಹಾಗೆ ಆದ್ರೂ ಇರಬೇಕು ” ಅಂತ.
ಆಗ ನನಗೆ ಅದು ಅಷ್ಟು ಸರಿ ಅಂತ ಕಂಡಿರ್ಲಿಲ್ಲ್ಲ….. ಯಾಕೆ ಅಂದ್ರೆ ಎಷ್ಟಾದರೂ ಆಶು ನಾಟಕ ಅಲ್ವೋ…!! …..
ಆದ್ರೆ ಇವತ್ತು ಏನು ಕಾಣ್ತಾ ಇದೆ ಅಂದ್ರೆ …..
ಯಕ್ಷಗಾನದ ತಜ್ಞತೆ ಮಾತ್ರ ಅಲ್ಲ ….. ಜೊತೆಗೆ … ಇತರ ಕಲೆಗ¼ ಬಗ್ಗೆಯೂ ತಕ್ಕಮಟ್ಟಿಗೆ ಗೊತ್ತಿರುವ ಮತ್ತು
ವಿವಿಧ ಸಾಹಿತ್ಯ ಕೃತಿಗಳ ಕುರಿತೂ ತಿಳುವಳಿಕೆ ಇರುವ …. ಮಾತ್ರವಲ್ಲ….
ಈ ಅಧುನಿಕ ತಂತ್ರಜ್ಞಾನಗಳಾದ ದ್ವನಿವರ್ಧಕ ಹಾಗೂ ಬೆಳಕಿನ ವಿನ್ಯಾಸ ಗಳ ಕುರಿತೂ ಎಚ್ಚರ ಇರುವ …..
ಸಮರ್ಥ ನಿರ್ದೇಶಕ ಒಬ್ಬ ಯಕ್ಷಗಾನಕ್ಕೆ ಬೇಕೇ ಬೇಕು…. ಅಂತ…..

ನಿರ್ದೇಶಕ ಅಂತ ಒಬ್ಬ ಬಂದ ಮೇಲೆಯೇ ನಾಟಕ ರಂಗ ಬೆಳೆದದ್ದು … ಆಧುನಿಕ ರಂಗಭೂಮಿ ರೂಪುಗೊಂಡದ್ದು.
ಮೊದಲು ನಾಟಕದಲ್ಲಿ ಹಾಡು ಅಂದ್ರೆ …ಎರಡು ಗಂಟೆಗಳ ಸಂಗೀತ ಕಚೇರಿಯೇ ಆಗ್ತಿತ್ತಂತೆ….. ಬೇರೆ ಬೇರೆ ಅದ್ವಾನಗಳೆಲ್ಲಾ ಇದ್ದುವಂತೆ.

{ಈ ‘ನಿರ್ದೇಶಕ’ ಅಂತ ಒಬ್ಬ ಬಂದು…… ನಟರೆಲ್ಲಾ ….. ಕೀಲುಗೊಂಬೆಗಳಾದ್ರು … ನಿರ್ದೇಶಕ ಹೇಳಿದ ಹಾಗೆ ಕುಣಿಯುವುದು ಮಾತ್ರ ಎನ್ನುವ ವಾದವೂ ಇದೆ….
ಆದರೆ ….. ಬಿ.ವಿ.ಕಾರಂತರಂತಾ ಸಮರ್ಥ ನಿರ್ದೇಶಕ ನಟರನ್ನು ಬೆಳೆಸಿದ್ದೂ ಧಾರಾಳ ಇದೆ.}

“ಪಾತ್ರಧಾರಿಗೂ ಪ್ರೇಕ್ಷಕನಿಗೂ… ‘ತಲ್ಲೀನತೆ’ ಎನ್ನುವುದು ಇರಬಾರದು … ಒಂದು ಎಚ್ಚರ ಸದಾ ಇರಬೇಕು….”
ಎನ್ನುವ ಮಾತನ್ನು ಬ್ರೆಕ್ಟ್ ಎನ್ನುವ ಪಾಶ್ಚಾತ್ಯ ನಾಟಕಕಾರ ಹೇಳಿದ ಮೇಲೆ …..
ಆಧುನಿಕ ನಾಟಕದ ಚಿಂತನೆಯೇ ಬದಲಾಗಿದೆ……
ಆದರೆ ಬ್ರೆಕ್ಟ್ … ಇದನ್ನು ತಾನು ಪೌರ್ವಾತ್ಯ ರಂಗಭೂಮಿಯಿಂದ ಕಲಿತೆ ಎಂದನಂತೆ.

{ಪ್ರಾಯಷಃ ಆತ ಕಲಿತ ರಂಗಭೂಮಿ ‘ಯಕ್ಷಗಾನ’ವೇ ಇರಬಹುದೋ ಏನೋ … !! ಅನ್ನುವ ಸಂದೇಹ ಅನೇಕರಿಗೆ ಇದೆ.}

ತಲ್ಲೀನತೆ ಎನ್ನುವುದೂ ದೊಡ್ಡ ಸಂಗತಿಯೇ … ಸುಲಭ ಅಲ್ಲ ಅದು….
ಆದರೆ ನಟನಾದವ ತಲ್ಲೀನತೆಯನ್ನು ಅಭ್ಯಾಸ ಮಾಡಿ ನಂತರ ಅದನ್ನು ಮೀರ ಬೇಕು….
ಅಂದರೆ ……… ತಾನು ನಟಿಸುತ್ತಿದ್ದೇನೆ ಎನ್ನುವ ಎಚ್ಚರ ಸದಾ ಇರಬೇಕು.
ಅಭಿನಯವು ವಾಸ್ತವ ಅಲ್ಲ …ಅದು …ರಸ ಆಗಬೇಕು ….
ಪ್ರೇಕ್ಷಕನನ್ನು ಮೆಲೋಡ್ರಾಮಾದಲ್ಲಿ …ಅಂದರೆ …ಭಾವಾತಿರೇಕದಲ್ಲಿ ಮುಳುಗಿಸದೇ ಅವನನ್ನು ಬೆಳೆಸಬೇಕು.

ಈ ‘ಎಚ್ಚರ’ ಎನ್ನುವಂತಾದ್ದು ನಿಜವಾಗಿ .. ನಮ್ಮ ಯಕ್ಷಗಾನದ ಸ್ವರೂಪದಲ್ಲೇ ಇದೆ.
ಆದ್ದರಿಂದಲೇ ಯಕ್ಷಗಾನವು ಒಂದು “ ಸಂಪದ್ಭರಿತ ರಂಗಭೂಮಿ” ಅಂತ ಕರೆಸಿಕೊಳ್ತಾ ಇರುವುದು.

{ಶಿವರಾಮ ಕಾರಂತರು ತಮ್ಮ ಯಕ್ಷರಂಗ ತಂಡದೊಂದಿಗೆ ಜಪಾನಿಗೆ ಹೋದಾಗ…
ಯುದ್ದದಲ್ಲಿ ರಕ್ಕಸ ಸತ್ತ ದೃಷ್ಯದಲ್ಲಿ … ನಟ ಎದ್ದು ಒಳಗೆ ಹೋಗುವಾಗ …
ಪಕ್ಕ ಆ ದೇಶದವರಿಗೆ ಅರ್ಥ ಆಗದಿದ್ರೆ ಎನ್ನುವ ಕಾರಣಕ್ಕೆ…. ಒಂದು ತೆರೆ ಅಡ್ಡ ಹಿಡ್ದರಂತೆ. …
ಅಲ್ಲಿಯ ಪ್ರೇಕ್ಷಕರು …. “ಅಯ್ಯೋ ಯಾಕೆ ತೆರೆ ಅಡ್ಡ ಹಿಡ್ದಿರಿ … ನಿಮ್ಮ ರಂಗತಂತ್ರ ಎಷ್ಟೊಂದು ಶ್ರೀಮಂತ ಆಗಿದೆ ..” ಅಂತ ಹೇಳಿದ್ರಂತೆ.}

ಹಾಗೆ ಯಕ್ಷಗಾನಕ್ಕಿರುವ ಈ ಕೀರ್ತಿ ನಮ್ಮ ಅಹಂಕಾರಕ್ಕೆ ಕಾರಣವಾಗದೇ …
ಅದ್ಯಯನಕ್ಕೆ ಕಾರಣವಾಗಲಿ ….. ನಮ್ಮೊಳಗಿನ ಹುಡುಕಾಟಕ್ಕೂ ಕಾರಣವಾಗಲಿ …
ನಮ್ಮಲ್ಲಿನ ಸಹಜ ವಿನಯಕ್ಕೂ ಕಾರಣವಾಗಲಿ ಎನ್ನುವ ಹಾರೈಕೆ ನನ್ನದು…..

‍ಲೇಖಕರು admin

June 15, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. .ಮಹೇಶ್ವರಿ.ಯು

    ತುಂಬಾ ಚಿಂತನಯೋಗ್ಯವಿಚಾರಗಳನ್ನು ಮಂಡಿಸಿದ್ದೀರಿ.ಯಕ್ಷಗಾನದಲ್ಲಿ ಮೈಬಿಟ್ಟ ವೇಷಗಳನ್ನು ನೋಡಿ ನಾನೂ ಅಸಹ್ಯ ಪಟ್ಟದ್ದಿದೆ.ನಾಟಕದ ಪ್ರಭಾವದಿಂದ ಮೈಬಿಟ್ಟ ವೇಷಗಳು ತೆಂಕುತಿಟ್ಟಿನ ಯಕ್ಷಗಾನದಲ್ಲಿ ಪ್ರಯೋಗವಾಯಿತೆಂದು ಓದಿದ ನೆನಪು. ಮುಕ್ತ ಚಿಂತನೆಯ ಈ ಬರಹಕ್ಕೆ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: