ಗೊರೂರು ಶಿವೇಶ್ ಕಂಡಂತೆ ‘ಕಾಲೇಜು ರಂಗೋತ್ಸವ’

ಗೊರೂರು ಶಿವೇಶ್

**

ರಂಜನೆ, ವೈವಿಧ್ಯತೆಯ ಜೊತೆಗೆ ಚಿಂತನೆಗೆ ಹಚ್ಚಿದ ಕಾಲೇಜು ರಂಗೋತ್ಸವ.

**

ಮಾರ್ಚ್ 27 ವಿಶ್ವ ರಂಗಭೂಮಿ ದಿನ. ಈ ದಿನದ ಅಂಗವಾಗಿ ಗತಿಸಿದ ರಂಗಸಿರಿಯ ಕಲಾವಿದರ ನೆನಪಿನಲ್ಲಿ ಹಾಸನದ ‘ರಂಗಸಿರಿ ಕಲಾತಂಡ’ ರಾಜ್ಯದ ಪ್ರಸಿದ್ಧ ‘ನೀನಾಸಂ’ ‘ರಂಗಾಯಣ’ ಹಾಗೂ  ಇತರೆ ರಂಗ ತಂಡಗಳ 20ಕ್ಕೂ ಹೆಚ್ಚು ರಂಗಕರ್ಮಿಗಳನ್ನು ಕರೆಯಿಸಿ ಇಲ್ಲಿನ ಸ್ಥಳಿಯ  ಐದು ಕಾಲೇಜುಗಳ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ 20 ದಿನಗಳ ರಂಗ ತರಬೇತಿ ನೀಡಿ ಐದು ನಾಟಕಗಳನ್ನು ನಗರದ ಕಲಾಭವನದಲ್ಲಿ ಪ್ರದರ್ಶಿಸಲಾಯಿತು. ಆ ನಾಟಕಗಳೆಂದರೆ ಜನಪದ ಮಹಾಕಾವ್ಯ ‘ಸಂಕವ್ವನ ಸಾಲು’, ಬರ್ಟೋಲ್ಟ್  ಬ್ರೆಕ್ಟ್ ನಾಟಕ ಆಧರಿಸಿದ ‘ಸುಣ್ಣದ ಸುತ್ತು’ ಸಂತ ಶಿಶುನಾಳ ಶರೀಫರ ಜೀವನ ಆಧರಿಸಿದ ‘ಶರೀಫ’ ಹಾಗೂ ಸಂಸರ ‘ವಿಗಡ ವಿಕ್ರಮರಾಯ’.

ವಿಶ್ವ ರಂಗಭೂಮಿಯಲ್ಲಿ ಪ್ರಖ್ಯಾತ ಹಾಗೂ ಎಪಿಕ್ ಥಿಯೇಟರ್ ನ ನಿರ್ಮಾತೃ ಬರ್ಟೋಲ್ಟ್ ಬ್ರೆಕ್ಟ್, ಗೆಲಿಲಿಯೋ, ‘ಮೂರು ಕಾಸಿನ ಸಂಗೀತ ನಾಟಕ’ (ತ್ರಿ ಪೆನ್ನಿ ಒಪೇರಾ ), ‘ಮದರ್ ಕರೆಜ್’ ಹಾಗೂ ‘ಕಕೆಶಿಯನ್ ಚಾಕ್ ಸರ್ಕಲ್’ ಮುಂತಾದ ನಾಟಕಗಳಿಂದ ವಿಶ್ವ ರಂಗಭೂಮಿಯಲ್ಲಿ ಅಷ್ಟೇ ಅಲ್ಲದೆ ಕನ್ನಡ ರಂಗಭೂಮಿಯಲ್ಲಿ ಅಚ್ಚಳಿಯದೆಉಳಿದಿವೆ. ಸಮಕಾಲಿನ ಸಂದರ್ಭಗಳಿಗೆ ಸ್ಪಂದಿಸುವ ಮತ್ತು ವೀಕ್ಷಕರನ್ನು ಭಾವನಾತ್ಮಕ ಗಿಂತ ವಿಚಾರಾತ್ಮಕವಾಗಿ ಪ್ರಚೋದಿಸುವ ನಾಟಕಗಳು ಕನ್ನಡದಲ್ಲಷ್ಟೇ ಅಲ್ಲದೆ ವಿಶ್ವದ ಎಲ್ಲ ಭಾಷೆಗಳಲ್ಲೂ ಅನುವಾದಗೊಂಡು ಪ್ರದರ್ಶಿತವಾಗಿ ಜನಪ್ರಿಯವಾಗಿವೆ.

ತನ್ನ ಜೀವಿತಾವಧಿಯಲ್ಲಿ ಎರಡು ವಿಶ್ವ ಮಹಾಯುದ್ಧಗಳನ್ನು ಕಂಡ ಬರ್ಟೋಲ್ಟ್ ಬ್ರೆಕ್ಟ್ ಯುದ್ಧದ ಪರಿಣಾಮಗಳನ್ನು ತನ್ನ ನಾಟಕಗಳಲ್ಲಿ  ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ. ‘ಕಕೆಶಿಯನ್ ಚಾಕ್ ಸರ್ಕಲ್’ ನಾಟಕವನ್ನು ಈ ಹಿಂದೆ ಜಿ ಎನ್ ರಂಗನಾಥ ರಾವ್ ಕನ್ನಡಕ್ಕೆ ತಂದಿದ್ದರು. ಈಗ ಹೆಚ್ ಎಸ್ ವೆಂಕಟೇಶಮೂರ್ತಿಯವರು ‘ಸುಣ್ಣದ ಸುತ್ತು’ ಹೆಸರಿನಲ್ಲಿ ಅತ್ಯಂತ ಸರಳವಾಗಿ ಅನುವಾದಿಸಿದ್ದು ಓದುಗರಿಗೆ ನೋಡುಗರಿಗೆ ಸುಲಭವಾಗಿ ತಲುಪುತ್ತದೆ.  ಮೇಲ್ನೋಟಕ್ಕೆ ಈ ನಾಟಕ ಜೈವಿಕ ತಾಯಿ ಮತ್ತು ಪೋಷಿಸುವ ತಾಯಿ ನಡುವಿನ ಸ್ವಾಮಿತ್ವದ ಹಕ್ಕಿನ ಚಿತ್ರಣದಂತೆ ಕಂಡರೂ ಮೂಲತಃ ಆ ಕಾಲಕ್ಕೆ ಜರ್ಮನಿಯಲ್ಲಿ ವ್ಯಾಪಕ  ಹೋರಾಟಕ್ಕೆ ಕಾರಣವಾಗಿದ್ದ ಭೂಮಿಯ ಒಡೆತನತ್ವದ ಕುರಿತಾಗಿ ಹೇಳುತ್ತದೆ. ಭೂಮಿಯ ಹಕ್ಕು ಪತ್ರ ಹೊಂದಿರುವವನು ಅದರ ಯಜಮಾನನು ಇಲ್ಲವೇ ಅದನ್ನು ಉಳುಮೆ ಮಾಡುವವನು ಯಜಮಾನನು ಎಂಬ ಚರ್ಚೆಯ ಹಿನ್ನೆಲೆಯಲ್ಲಿ ಈ ನಾಟಕ ಅನಾವರಣಗೊಂಡಿದೆ.

ಮೈಕಲ್ ಎಂಬ ಮುದ್ದು ಮಗುವಿನ ತಾಯಿ ನಟೇಲ ಐಷಾರಾಮಿ ಜೀವನ ಬಯಸುವ ಹೆಣ್ಣು, ಊರಿನಲ್ಲಿ ದಂಗೆ ಎದ್ದಾಗ ಆಕೆ ಮಗುವನ್ನು ಬಿಟ್ಟು  ಹೋದಾಗ ಅದನ್ನು ಸಾಕಿ ಬೆಳೆಸುವ ಹೊಣೆ ಆಕೆಯ ಸೇವಕಿ ಗ್ರುಶಾ ಮೇಲೆ ಬೀಳುತ್ತದೆ. ಆಕೆ ಆ ಮಗುವನ್ನು ಸಾಕಲು ಪಡುವ ಬವಣೆ ಇಡೀ ನಾಟಕವನ್ನು ಆವರಿಸಿದೆ. ಅಂತ್ಯದಲ್ಲಿ ಮಗುವಿನ ತಾಯ್ತನದ ಹಕ್ಕನ್ನು ನಿರ್ಧರಿಸುವ ಹೊಣೆ ನ್ಯಾಯಮೂರ್ತಿ ಹಸ್ದಾಕ್ ನದು. ಕುಡುಕನು ಭ್ರಷ್ಟನೂ ಆದ ಆತ ಮಗುವಿನ ಸ್ವಾಮಿತ್ವವನ್ನು ನಿರ್ಧರಿಸಲು ಸುಣ್ಣದಲ್ಲಿ ಸುತ್ತನ್ನು ಹಾಕಿ ಮಗುವನ್ನು ಕೇಂದ್ರದಲ್ಲಿ ನಿಲ್ಲಿಸಿ ಇಬ್ಬರು ತಾಯಂದಿರನ್ನು ಅವರೆಡೆಗೆ ಸೆಳೆಯಲು ಸೂಚಿಸುತ್ತಾನೆ. ಮುಂದೆ ನಡೆಯುವ ಘಟನೆಗಳು ಹಾಗೂ ಆತ ತೆಗೆದುಕೊಳ್ಳುವ ನಿರ್ಧಾರ ಇಡೀ ನಾಟಕದ ಕ್ಲೈಮಾಕ್ಸ್.

ಮಗುವನ್ನು ಸಲಹಲು ಗ್ರುಷಾ ಪಡುವ ಪಾಡು, ಮಗುವಿನ ಹಾಲಿಗಾಗಿ ತನ್ನೆಲ್ಲ ಹಣವನ್ನು ನೀಡುವ, ಪ್ರವಾಹ ಲೆಕ್ಕಿಸದೆ ನದಿಯನ್ನು ದಾಟುವ, ಪರ್ವತದ ಗುಹೆಯಲ್ಲಿ ಮಗುವನ್ನು ಬಚ್ಚಿಡುವ, ಮಗುವಿನ ತಂದೆ ಗುರುತಿಸಲು ಸಾವಿನಂಚಿನಲ್ಲಿರುವ ರೋಗಿಯನ್ನು ಮದುವೆಯಾಗಲು ಒಪ್ಪುವ ಗ್ರುಷಾಳ ತ್ಯಾಗ ಹಾಗೂ ಮಗುವಿಗೆ ಜನ್ಮ ಕೊಟ್ಟ ಕಾರಣದಿಂದ ತನ್ನ ಹಕ್ಕನ್ನು ಪ್ರತಿಪಾದಿಸುವ ತಾಯಿ ಕುರಿತಾಗಿ ನಾಟಕದಲ್ಲಿ ನಿರೂಪಿತವಾಗಿದ್ದರೂ ಎರಡರ ಹಿನ್ನೆಲೆಯಲ್ಲಿ ಭೂಮಿಯ ಉಳುಮೆಯನ್ನು ಮಾಡುವ ಸಮಯದಲ್ಲಿ ರೈತನ ಸಂಕಷ್ಟ ಹಾಗೂ ಭೂಮಿಯ ಹಕ್ಕು ಪತ್ರ ಹೊಂದಿದ ಕಾರಣಕ್ಕಾಗಿ ದಬ್ಬಾಳಿಕೆ ನಡೆಸುವ ಒಡೆಯನ ಒಡೆತನದ ಕುರಿತಾದ ಈ ನಾಟಕ ದೇವರಾಜ ಅರಸರ ಕಾಲದಲ್ಲಿ ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿಗೆ ತಂದದ್ದನ್ನು ನೆನಪಿಸುತ್ತದೆ. ಸರ್ಕಾರಿ ಕಲಾ ಮತ್ತು ವಾಣಿಜ್ಯ ಸ್ನಾತಕೋತರ ಕಾಲೇಜು (ಸ್ವಾಯತ್ತ,) ಹಾಸನ ಇವರನ್ನು ರಂಗ ಪ್ರಯೋಗಕ್ಕೆ ಅಣಿಗೊಳಿಸಿ ನಿರ್ದೇಶಿಸಿದವರು ಶಿವಮೊಗ್ಗದ ಮಹೇಶ ಆಚಾರಿ. ಕುತೂಹಲ ಭರಿತವಾಗಿ ಸಾಗುವ ಕಥೆ, ಮೇಳ, ಬೆಳಕಿನ ಸಂಯೋಜನೆ ಇರುವ ಅವಕಾಶದಲ್ಲೇ  ವಸ್ತ್ರ ವಿನ್ಯಾಸ ರಂಗ ಸಜ್ಜಿಕ್ಕೆಯನ್ನು ವಿನ್ಯಾಸಗೊಳಿಸಿ  ಪ್ರದರ್ಶಿಸಿದ್ದು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

15ನೇ ಶತಮಾನದಲ್ಲಿದ್ದ ಶರಣ ಮಲೆ ಮಹದೇಶ್ವರರ ಮಹಿಮೆಗಳನ್ನು ಕುರಿತಾದ ಕಂಸಾಳೆ ಕಾವ್ಯವನ್ನು ಕಂಸಾಳೆ ಕಲಾವಿದರು ಅನಾದಿ ಕಾಲದಿಂದಲೂ ಹಾಡುತ್ತಾಬರುತ್ತಿದ್ದಾರೆ. ಈ ಕಾವ್ಯ ಕನ್ನಡ ಜನಪದ ಕಾವ್ಯಗಳಲ್ಲೇ ದೊಡ್ಡದೆಂದು ಗುರುತಿಸಿಕೊಂಡಿದೆ. ಇದು ಏಳು ವಿಭಾಗಗಳಲ್ಲಿ ವಿಂಗಡಣೆಯಾಗಿದ್ದು ಇವುಗಳನ್ನು ಸಾಲು ಎಂದು ಕರೆಯುತ್ತಾರೆ. ತಾಳುಗತೆ, ಶ್ರವಣದೊರೆ ಸಾಲು, ಜುಂಜೇಗೌಡನ ಸಾಲು, ಸಂಕಮ್ಮನ ಸಾಲು, ಇಕ್ಕೇರಿ ದೇವಮ್ಮನ ಸಾಲು, ಸರಗೂರಯ್ಯನ ಸಾಲು. ಹೀಗೆ ಈ ಸಾಲುಗಳಿಗೆ ಪ್ರತ್ಯೇಕವಾಗಿರುವ ಸ್ವತಂತ್ರ ಹೆಸರುಗಳೇ ಇವೆ.

ಸಂಕಮ್ಮನ ಸಾಲು ಜನಪದ ಕಥೆಯಲ್ಲಿ ಬರುವಂತೆ ಬಹಳ ಸುಂದರವಾದ ಹೆಣ್ಣುಮಗಳು ಸಂಕವ್ವ. ಆತನ ಗಂಡ ಸೋಲಿಗರ ನೀಲೇ ಗೌಡ ಒಂದು ದಿನ ನೀಲೇ ಗೌಡ ಬೇಟೆಗೆ ಹೋಗುವ ಸಮಯದಲ್ಲಿ ತನ್ನ ಹೆಂಡತಿಯನ್ನು ಕರೆದು ಆಕೆಯ ಬಳಿ ತಾನು ತನ್ನವರೊಂದಿಗೆ ಬೇಟೆಗೆ ಹೋಗುತ್ತಿರುವ ವಿಚಾರವನ್ನು ಹೇಳುತ್ತಾನೆ. ಬೇಟೆಗೆ ಹೋಗಿ ಬರುವ ಒಂಬತ್ತು ತಿಂಗಳ ಅವಧಿಯಲ್ಲಿ ಶುದ್ಧಶೀಲೆಯಾಗಿರುತ್ತೇನೆ ಎಂದು ಬಲಗೈ ಮುಟ್ಟಿ ಮಾತು ಕೊಡು ಎನ್ನುತ್ತಾನೆ ಗಂಡನ ಈ ಸಂಶಯದ ಮಾತಿಗೆ ಬೇಸರಪಟ್ಟುಕೊಳ್ಳುವ ಸಂಕವ್ವ, ನಾನು ಶುದ್ಧ ಶೀಲೆಯಾಗಿಯೇ ಇರ್ತೇನೆ. ಆದರೆ ಈಗ ನಾನು ಹಾಗೆಂದು ಭಾಷೆ ಕೊಟ್ಟರೆ, ಭಾಷೆ ಕೊಟ್ಟ ಕಾರಣದಿಂದ ಈಕೆ ಶೀಲವಂತೆಯಾಗಿ ಇದ್ಲು ಇಲ್ಲದೇ ಇದ್ರೆ ಕೆಟ್ಟು ಹೋಗ್ತಾ ಇದ್ಲು ಅಂತ ನಾಲ್ಕು ಜನ ಮಾತನಾಡಲು ಅವಕಾಶ ಮಾಡಿಕೊಟ್ಟ ಹಾಗೆ ಆಗುತ್ತಲ್ವಾ ಅಂತ ಪತಿಗೆ ಹೇಳುತ್ತಾಳೆ. ಹಾಗಾಗಿ ನಾನು ಭಾಷೆ ಕೊಡದೇ ಇದ್ರೂ ಶೀಲವಂತೆಯಾಗೇ ಇರುತ್ತೇನೆ, ನೀನು ನನ್ನನ್ನು ನಂಬಬೇಕು ಅಷ್ಟೇ ಎಂದು ಖಡಕ್ಕಾಗಿ ಹೇಳ್ತಾಳೆ.

ಆದ್ರೆ ನೀಲೇ ಗೌಡ ತನ್ನ ಹೆಂಡತಿಯ ಮಾತನ್ನು ಒಪ್ಪೋದಿಲ್ಲ ಬದಲಾಗಿ ಭಾಷೆ ಕೊಡುವಂತೆ ಒತ್ತಾಯಪಡಿಸುತ್ತಾನೆ ಮತ್ತು ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯುತ್ತದೆ. ಸಂಕವ್ವ ಗಂಡನಿಗೆ ತಿಳಿಹೇಳುವ ಪ್ರಯತ್ನದಲ್ಲಿ ವಿಫಲಳಾಗುತ್ತಾಳೆ. ಸಂಕಮ್ಮನಿಗೆ ಆಕೆಯ ಗಂಡ ದೈಹಿಕ ಹಿಂಸೆ ನೀಡಿ ಆಕೆಯನ್ನು ಮನೆಯಲ್ಲೇ ಅಮಾನುಷವಾಗಿ ಕೂಡಿಹಾಕಿ ಬೇಟೆಗೆಂದು ಹೊರಟು ಹೋಗ್ತಾನೆ. ಗಂಡನ ಚಿತ್ರ ಹಿಂಸೆಯಿಂದ ಬೇಸತ್ತ ಸಂಕಮ್ಮ ತನ್ನ ಮನೆದೇವರಾದ ಮಲೆ ಮಹದೇಶ್ವರನನ್ನು ಪ್ರಾರ್ಥಿಸುತ್ತಾಳೆ. ಮತ್ತು ಈಕೆಯ ನಿಷ್ಕಲ್ಮಶ ಭಕ್ತಿಗೆ ಒಲಿದ ಮಹದೇವ ಆಕೆಯ ಸಂಕಷ್ಟವನ್ನೆಲ್ಲಾ ಪರಿಹರಿಸುತ್ತಾನೆ. ಬುದ್ಧಿ ತಿಳಿದ ನೀಲೇ ಗೌಡ ಮಾದೇಶ್ವರ ರಿಗೆ ಶರಣಾಗುತ್ತಾನೆ.  ಸಂಕಮ್ಮನ ಸಾಲು ನಾಟಕವನ್ನು ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಸಂತೋಷ್ ದಿಂಡಗೂರು ಮತ್ತು ನಂದಿನಿ ಡಿಎಲ್ ರವರ ನಿರ್ದೇಶನ ಹಾಗೂ ಸಂಗೀತ ನಿರ್ದೇಶನದಲ್ಲಿ ಸೊಗಸಾಗಿ ಅಭಿನಯಿಸಿದರು. ಆರಂಭದಲ್ಲಿ ಜನಪದ ಮಹಾಕಾವ್ಯವಾಗಿ ಮೂಡಿ ಬರುವ ನಾಟಕ ಅಂತ್ಯದಲ್ಲಿ ಸಂದೇಶಾತ್ಮಕವಾಗಿ ಪ್ರಸ್ತುತ ಸಮಾಜದಲ್ಲಿ ಸ್ತ್ರೀ ಸಮಾನತೆ ಕುರಿತಾಗಿ ಶೋಧಿಸುತ್ತಾ ಇತ್ತೀಚಿಗೆ ಮಂಗಳೂರಿನ ಕಾಲೇಜಿನಲ್ಲಿ ಪರೀಕ್ಷೆಯ ಸಮಯದಲ್ಲಿ ನಡೆದ ಆಸಿಡ್ ದಾಳಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ಸ್ತ್ರೀಯರನ್ನು ವಿರೂಪಗೊಳಿಸಬೇಕೆಂಬ ತನ್ಮೂಲಕ ಸೇಡು ತೀರಿಸಿಕೊಳ್ಳಲು ಹೊರಟ ವಿಕೃತರ ಕುರಿತಾಗಿ ಪುರುಷ ಸಮುದಾಯದ  ಗಮನ ಸೆಳೆಯುತ್ತಾ ಮಹಿಳೆಯರಿಗೆ ಸ್ತ್ರೀ ಜಾಗೃತಿಯ ಅವಶ್ಯಕತೆಯ ಕುರಿತಾಗಿ ಮನವರಿಕೆ ಮೂಡಿಸಲು ಯತ್ನಿಸಿದ್ದು ಜನಪದ ಹಿನ್ನೆಲೆಯ ಕಥೆಯನ್ನು ಸಮಕಾಲೀನ ಸ್ಪಂದನೆಗೆ ಒಳಮಾಡುವ ನಿರ್ದೇಶಕರ ಪ್ರಯತ್ನ ಶ್ಲಾಘನೆಗೆ ಒಳಗಾಯಿತು.

ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಕಟ್ಟಿಕೊಟ್ಟ ನಾಟಕ ಭಗವದ್ಜಜಕಿಯಂ. ಏಳನೇ ಶತಮಾನದಲ್ಲಿದ್ದ ಬೋಧಯಾನ ಈ ಕೃತಿಯನ್ನು ಸಂಸ್ಕೃತದಲ್ಲಿ ರಚಿಸಿದನೆಂದು ಈ ಮೊದಲು ಹೇಳಲಾಗುತ್ತಿತ್ತು. ನಂತರ ಈ ಕೃತಿಯನ್ನು ಪಲ್ಲವ ಸಾಮ್ರಾಜ್ಯದಲ್ಲಿ ಇದ್ದ ಮಹೇಂದ್ರವರ್ಮನ್  ರಚಿಸಿದ್ದಾನೆ ಎಂದು ವಿದ್ವಾಂಸರ ಅಭಿಪ್ರಾಯ. ಈ ನಾಟಕವನ್ನು ಕೆ ವಿ ಸುಬ್ಬಣ್ಣ ಕನ್ನಡಕ್ಕೆ ತಂದಿದ್ದು ರಂಗನಾಥ ಶಿವಮೊಗ್ಗ ಇವರ ನಿರ್ದೇಶನದಲ್ಲಿ ಸರಳ ರಂಗ ಸಜ್ಜಿಕೆಯಲ್ಲಿ ಪ್ರದರ್ಶನವಾಯಿತು. ಪ್ರಹಸನವೆಂದು ಕರೆಯಲಾಗುವ ಈ ನಾಟಕದ ಪ್ರಕಾರ ಜೀವನದ ಸಂಕೀರ್ಣ ಸಮಸ್ಯೆಗಳಿಗೆ ಸರಳ ಪರಿಹಾರಗಳನ್ನು ಬೋಧಿಸುತ್ತದೆ. ಈ ನಾಟಕ ಬಹಳ ಮುಖ್ಯವಾಗಿ ಆ ಕಾಲಘಟ್ಟದಲ್ಲಿನ ಧಾರ್ಮಿಕ ನಂಬಿಕೆಗಳ ವೈರುಧ್ಯದ ಬಗ್ಗೆ ಶೋದಿಸುತ್ತಾ ಆತ್ಮದ ಇರುವಿಕೆಯ ಬಗ್ಗೆ ಚಿಂತಿಸುತ್ತದೆ. ನಾಟಕದ ಭಗವದ್ಜಜುಕಿಯಂ ಶೀರ್ಷಿಕೆ ಅರ್ಥ ಸನ್ಯಾಸಿ ಮತ್ತು  ವೇಶ್ಯೆ ಎಂಬುದಾಗಿದೆ.

ಶಾಂಡಿಲ್ಯ ಬ್ರಾಹ್ಮಣ ವಟು ಆತ ಇತ್ತ ವಿದ್ಯೆಯು ಕಲಿಯದೆ ಅತ್ತ ತಪಸ್ಸನ್ನು ಮಾಡದೆ ಕಾಗೆಗಳಿಗಿಡುವ ಪಿಂಡವನ್ನು ತಿನ್ನಲು ಹೇಸಿ ಬೌದ್ಧ ಧರ್ಮಕ್ಕೆ ಬದಲಾಗುತ್ತಾನೆ.ಅಲ್ಲಿಯೂ ಕೂಡ ಭಿಕ್ಷಾಟನೆಯ ಮೂಲಕ ಕೇವಲ ಒಂದು ಹೊತ್ತಿನ ಊಟ ಎಂದಾಗ ನಿರಾಶನಾಗಿದ್ದಾನೆ. ಅವನನ್ನು ಅರಸುತ್ತಾ ಬರುವ ಗುರು ಪರಿಮ್ರಾಜಕ ಮತ್ತು ಶಿಷ್ಯನ ನಡುವೆ ನಡೆಯುವ ಸಂಭಾಷಣೆ  ಆಧ್ಯಾತ್ಮದ ಚಿಂತನೆ ನಡೆಸುತ್ತದೆ. ಆಸೆಯನ್ನು ತೊರೆಯುವುದು. ಕೋಪವನ್ನು ಬಿಡುವುದು ಆಧ್ಯಾತ್ಮದ ಹಾದಿ ಎಂದು ವಿವರಿಸುತ್ತಿರುವ ಸಂದರ್ಭದಲ್ಲಿ, ಆ ಉದ್ಯಾನವನ್ನು ಪ್ರವೇಶಿಸುವ ವೇಶ್ಯೆ ವಸಂತ ಸೇನೆ ತನ್ನ ತಾಯಿ ಮತ್ತು ಸಖಿಯೊಂದಿಗೆ ಸಂವಾದದಲ್ಲಿರುವ ಸಂದರ್ಭದಲ್ಲಿ ಯಮಕಿಂಕರನ ಪ್ರವೇಶವಾಗುತ್ತದೆ. ಅವಳ ಆಯಸ್ಸು ಮುಗಿದಿದೆ ಎಂದು ಭಾವಿಸುವ ಯಮದೂತ ತಕ್ಷಕ ಸರ್ಪದ ರೂಪದಲ್ಲಿ ಬಂದು ಆಕೆಯನ್ನು ಕಚ್ಚಿ ಸಾಯಿಸುತ್ತಾನೆ. ತನ್ನ ಎದುರಿಗೆ ಇದ್ದ ಅಪೂರ್ವ ಸೌಂದರ್ಯ ರಾಶಿಯ ಯುವತಿ ತನ್ನ ಕಣ್ಣೆದುರಿಗೆ ಸಾವಿಗೀಡಾದನ್ನು ಕಂಡ ಆತ ತನ್ನ ಗುರುಗಳಿಗೆ ಆಕೆಯನ್ನು ಉಳಿಸಿಕೊಡಬೇಕೆಂದು ಪ್ರಾರ್ಥಿಸುತ್ತಾನೆ. ಆರಂಭದಲ್ಲಿ ನಿರಾಕರಿಸುವ ಗುರು ಕೊನೆಗೂ ಅವನ ಬಲವಂತಕ್ಕೆ ಒಳಗಾಗಿ ತನ್ನ ಆತ್ಮವನ್ನು ದೇಹದಿಂದ ತ್ಯಜಿಸಿ ಆಕೆಯಲ್ಲಿ ನೆಲೆಗೊಳ್ಳುವಂತೆ ಮಾಡುತ್ತಾನೆ.

ಆದರೆ ಈಗ ವಸಂತ ಸೇನೆಯ ವರ್ತನೆಗಳೆಲ್ಲವೂ ಸಾಧುವಿನಂತೆ ಬದಲಾಗಿದೆ ಆಕೆಯ ನಡೆ-ನುಡಿಯಲ್ಲಾದ ವ್ಯತ್ಯಾಸವನ್ನು ಕಂಡು  ತಾಯಿ ಸಖಿ ಜೊತೆಗೆ ಆಕೆಯ ಪ್ರಿಯಕರ ಅಚ್ಚರಿ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಬೇರೊಬ್ಬರ ಪ್ರಾಣವನ್ನು ತೆಗೆದುಕೊಂಡು ಹೋಗಲು ಬಂದಿದ್ದ ರಕ್ಷಕ ಅಚಾತುರ್ಯದಿಂದ ವಸಂತ ಸೇನೆಯ ಪ್ರಾಣವನ್ನ ತೆಗೆದಿದ್ದೇನೆ ಎಂದು ಅರಿವಿಗೆ ಬಂದು ಆಕೆಗೆ ಮರು ಜೀವ ಕೊಡುವ ಕೊಡಲು ನೋಡಿದರೆ ಈಗಾಗಲೇ ಆಕೆ ಜೀವಂತವಾಗಿದ್ದಾಳೆ. ಸನ್ನಿವೇಶವನ್ನು ಗಮನಿಸಿದ ಆತ ಅವಳ ಪ್ರಾಣವನ್ನು ಗುರುವಿನ ದೇಹಕ್ಕೆ ಸೇರಿಸುತ್ತಾನೆ. ಈಗ ಗುರುವಿನ ವರ್ತನೆ ವಸಂತ ಸೇನೆಯ ರೀತಿಯಲ್ಲಿ ಇರುತ್ತದೆ. ಹೀಗೆ ಪರಸ್ಪರ ಆತ್ಮಗಳ ಬದಲಾವಣೆ ಜೊತೆಗೆ ಅವರ ವರ್ತನೆಗಳ ಬದಲಾವಣೆ ಆ ನಾಟಕದಲ್ಲಿ ಪಾತ್ರಗಳಿಗೆ ಗೊಂದಲವನ್ನು ಮೂಡಿಸಿದರೂ ಪ್ರೇಕ್ಷಕರಲ್ಲಿ ನಗೆಯ ಹೊನಲನ್ನು ಹಬ್ಬಿಸುತ್ತದೆ. ಇಡೀ ನಾಟಕ ಗೊಂದಲದಿಂದ ಮೂಡುವ ಹಾಸ್ಯ ಪ್ರಧಾನವಾದ ಈ ನಾಟಕ  ಪ್ರಧಾನ ಪಾತ್ರಧಾರಿಗಳ ಉತ್ತಮ ಅಭಿನಯದಿಂದಾಗಿ ಪ್ರೇಕ್ಷಕರಿಗೆ ಮುದ ನೀಡಿದಂತೂ ನಿಜ.

ನೂರು ವರ್ಷಗಳ ಹಿಂದೆ ರಚಿತವಾದ ‘ವಿಗಡ ವಿಕ್ರಮರಾಯ’ ಮೈಸೂರು ಒಡೆಯರ ಕುರಿತಾದ ರೋಚಕ ನಾಟಕ. ಕನ್ನಡದ ಚಾರಿತ್ರಿಕ ನಾಟಕಗಳ ಪಿತಾಮಹ ಎಂದು ಕರೆಯಲಾಗುವ ಸಂಸರ ವಿಗಡ ವಿಕ್ರಮರಾಯ. ಅವರು ರಚಿಸಿರುವ ಐತಿಹಾಸಿಕ ನಾಟಕದಲ್ಲಿ ಅತ್ಯಂತ ಮಹತ್ವದ ನಾಟಕ. ಇವರ 36 ವರ್ಷಗಳ ಜೀವಿತದ ಅವಧಿಯಲ್ಲಿ ಸಂಸ ಬರೆದ ಅನೇಕ ನಾಟಕಗಳಲ್ಲಿ ಲಭ್ಯ ಇರುವಂತವು ಕೇವಲ ಆರು ನಾಟಕಗಳು ಅವುಗಳಲ್ಲಿ ಅತ್ಯಂತ ಪ್ರಮುಖ ನಾಟಕ ವಿಗಡ ವಿಕ್ರಮರಾಯ. ರಾಜಕೀಯ ಚದುರಂಗದಾಟದ ಈ ನಾಟಕ ಡಾ. ರಾಜಕುಮಾರ್ ತಮ್ಮ ಗೆಳೆಯರೊಂದಿಗೆ ನಿರ್ಮಿಸಿ ನಟಿಸಿದ ರಣಧೀರ ಕಂಠೀರವ ಚಿತ್ರದ ಮೂಲ ದ್ರವ್ಯವೂ ಹೌದು. ಆ ಕಾಲದ  ದ್ವೇಷ ಪಿತೂರಿ ಮತ್ತು ಭ್ರಷ್ಟಾಚಾರ ಇವುಗಳ ಸುತ್ತ ರೋಚಕವಾಗಿ ನಾಟಕ ಬೆಳೆಯುತ್ತದೆ. ಮಧ್ಯಮಾನಿನಿಯರಿಗೆ ವಶನಾದ ಇಮ್ಮಡಿ ಒಡೆಯರನ್ನು ತನ್ನ ವಶದಲ್ಲಿಟ್ಟುಕೊಂಡಿದ್ದ ದಳವಾಯಿ ವಿಕ್ರಮ ರಾಯ ತನ್ನ ಭ್ರಷ್ಟಾಚಾರ ಬಯಲಾಗಲು ಅರಮನೆ ವೈದ್ಯ ಬೊಮ್ಮರಸನ ನೆರವಿನಿಂದ ವಿಷ ವಿಕ್ಕಿ  ಕೊಲ್ಲುತ್ತಾನೆ. ಮುಂದೆ ರಣಧೀರ ಕಂಠೀರವ ನರಸಿಂಹರಾಜ ಒಡೆಯರ್ ಅವರನ್ನು ಪಟ್ಟದಲ್ಲಿರಿಸಿ ಅಧಿಕಾರ ಚಲಾಯಿಸುವ ಅವನ ಯತ್ನ ರಣಧೀರ ಕಂಠೀರವರಿಗೆ ಸಂಚಿನ ಅರಿವಾಗಿ ತನ್ನ ಗೆಳೆಯರ ನೆರವಿನಿಂದ ಆ ಸಂಚನ್ನು ವಿಫಲಗೊಳಿಸಿ ವಿಕ್ರಮರಾಯನನ್ನು ಮುಗಿಸುವುದರೊಂದಿಗೆ ನಾಟಕ ಮುಕ್ತಾಯವಾಗುತ್ತದೆ.

ಪ್ರಭುತ್ವ ಹಾಗೂ ಪ್ರಭುತ್ವದ ವಿರುದ್ಧದ ಸಂಚು ಇದಕ್ಕಾಗಿ  ಹೆಣೆಯುವ ನೂರೆಂಟು ತಂತ್ರಗಳು ಪ್ರತಿ ತಂತ್ರಗಳು ಇಂದಿಗೂ ಪ್ರಸ್ತುತವಾಗಿದ್ದು ಅಂತಹ ಹತ್ತು ಹಲವು ಘಟನೆಗಳನ್ನು ನಾಟಕ ನೆನಪಿಸುತ್ತದೆ. ನಾಟಕದಲ್ಲಿ ಆ ಕಾಲಘಟ್ಟದ ಹಳೆಗನ್ನಡವೂ ಅಲ್ಲದ ಹೊಸಗನ್ನಡವೂ ಅಲ್ಲದ ನಡುಗನ್ನಡದ ವಿಶಿಷ್ಟ ಭಾಷಾ ಶೈಲಿಯನ್ನು ವಿದ್ಯಾರ್ಥಿಗಳ ಕೈಯಲ್ಲಿ ಚೆನ್ನಾಗಿ ತರಬೇತುಗೊಳಿಸಿ ಪ್ರದರ್ಶಿಸಿದ್ದು ವಿಶೇಷ. ಆದರೆ ಮೂಕ ಇಲ್ಲವೇ ಮೈಮ್ ತಂತ್ರದ ಎಲ್ಲ ಪಾತ್ರಧಾರಿಗಳಿಗೂ ಒಂದೇ ರೀತಿಯ ಉಡುಪಿನ ಮೂಲಕ ರಂಗಕ್ಕೆ ತಂದಾಗ ಪ್ರೇಕ್ಷಕರಲ್ಲಿ ಪಾತ್ರಧಾರಿಗಳ ಬಗ್ಗೆ ಗೊಂದಲ ಮೂಡುವುದು ಸಹಜ. ವರ್ತಮಾನ ಪತ್ರಿಕೆಯ ಹಿನ್ನೆಲೆಯನಿಟ್ಟುಕೊಂಡು ಕಥಾವಸ್ತು ಸದಾ ಪ್ರಸ್ತುತ ಎಂದು ಹೇಳುತ್ತಲೇ ಆ ವರ್ತಮಾನ ಪತ್ರಿಕೆಯ ಪರದೆಯನ್ನು ಸೀಳಿ ವಿಕ್ರಮರಾಯನನ್ನು ಕೊಲ್ಲುವುದು ಒಂದು ವಿಶಿಷ್ಟ ತಂತ್ರವಾಗಿ ಮೂಡಿ ಬಂತು. ಕಡಿಮೆ ಅವಧಿಯಲ್ಲಿ  ನೌ ಕಿಸ್ ಇಂಜಿನಿಯರಿಂಗ್ ಕಾಲೇಜ್ ನ ವಿದ್ಯಾರ್ಥಿಗಳ ಕೈಯಲ್ಲಿ ಈ ಕಠಿಣ ನಾಟಕವನ್ನು ಆಡಿಸಿದ ನಿರ್ದೇಶಕ  ವಿನೀತ ಕುಮಾರ ಪ್ರಶಂಸೆಗೆ ಪಾತ್ರರಾದರು.

ರಂಗೋತ್ಸವದ ಕೊನೆಯ ದಿನ ಪ್ರದರ್ಶನಕ್ಕೆ ಬಂದ ನಾಟಕ ಮಂಜುನಾಥ ಬೆಳಕರೆ ರವರ ಶರೀಫ. ಸರ್ವಧರ್ವ ಸಮನ್ವಯದ ಪ್ರತೀಕ. ಸಂತ ಶಿಶುನಾಳ ಶರೀಫರ ಮತ್ತು ಗುರು ಗೋವಿಂದ ಭಟ್ಟರ ಅನನ್ಯ ಹಾಗೂ ಅಪರೂಪದ ಗುರು-ಶಿಷ್ಯ ಸಂಬಂಧದ ನಾಟಕ . ರೂಪಕ ಪರಪಂಚದ ಸುತ್ತ ಸುತ್ತುವ, ತತ್ವಪದಗಳ ಮೂಲಕ ಗ್ರಹಣವಾದ, ಅಧ್ಯಾತ್ಮದ ಪರಿಚಯ ಮಾಡುವ ಈ ಪ್ರಯೋಗ ಸಂಕೀರ್ಣವು ಹೌದು. ಹಾಡು ಹಗಲಿನಲ್ಲಿ ದೀಪ ಹಚ್ಚಿಕೊಂಡು ಬೆಳಕನ್ನು ಹುಡುಕುತ್ತಿರುವ ಗುರು ಗೋವಿಂದ ಭಟ್ಟನ ಚಿತ್ರಣವಾಗಲಿ, ಇವರ ಜೀವಿತಾವಧಿಯಲ್ಲಿ ಇವರ ಒಡನಾಡಿಗಳಾಗಿ ಇದ್ದವರಲ್ಲಿ ನವಲಗುಂದದ ನಾಗಲಿಂಗಪ್ಪನವರು, ಗರಗದ ಮಡಿವಾಳಪ್ಪನವರು,  ಪ್ರಮುಖರ ಪರಿಚಯ, ಆ ಕಾಲದಲ್ಲಿ ಪ್ರಸಿದ್ಧವಾಗಿದ್ದ ಕಾರಣೀಕ, ಎಲ್ಲವನ್ನು ರಂಗದ ಮೇಲೆ ತಂದಿರುವ ನಿರ್ದೇಶಕರು ನಾಟಕವನ್ನು ಜನರಿಗೆ ತಲುಪಿಸಲು, ಬಳಸಿಕೊಂಡಿರುವ ಶಿಶುನಾಳ ಶರೀಫರ ತತ್ವ ಪದಗಳ ಮೂಲಕವೇ ಅವರ ಜೀವನವನ್ನು ಕಟ್ಟಿ ಕೊಡುವ ವಿಧಾನ ವಿಶೇಷವಾಗಿ ಗಮನ ಸೆಳೆಯುತ್ತದೆ. ಜ್ಞಾನಧಾರೆ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಈ ನಾಟಕವನ್ನು ಅಭಿನಯಿಸಿದ್ದು, ಎಲ್ಲಾ ಪಾತ್ರಧಾರಿಗಳ ಔಚಿತ್ಯಪೂರ್ಣ ಅಭಿನಯ ಮನಮುಟ್ಟುವಂತಿತ್ತು. ಮುಖ್ಯವಾಗಿ ಗುರು ಗೋವಿಂದ ಭಟ್ಟನ ಪಾತ್ರದಲ್ಲಿ ಮಧುಸೂದನ್ ಗಮನಸೆಳೆದರು. 

ಈ ರಂಗ ಪ್ರಯೋಗಗಳು ಕೇವಲ ನಾಟಕೋತ್ಸವದ ಭಾಗ ಅಷ್ಟೇ ಆಗದೆ ಐತಿಹಾಸಿಕ, ಜಾನಪದ, ಸಂಸ್ಕೃತ ಜೊತೆಗೆ ಸಂಸ್ಕೃತ ನಾಟಕಗಳ ಅನುವಾದ, ಅಂತಯೇ ವಿಭಿನ್ನ ರಂಗ ಪ್ರಸ್ತುತಿಯ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಪ್ರೇಕ್ಷಕರಿಗೆ ರಂಗಪ್ರಯೋಗದ ವೈವಿಧ್ಯ ವನ್ನು ಪರಿಚಯ ಮಾಡಿಸಿತು. ಎಲ್ಲ ನಾಟಕಗಳಿಗೂ ಉಮೇಶ್ ಪತ್ತಾರ, ಪ್ರಕಾಶ್ ಬಡಿಗೇರ, ಬಾಬಾ ಸಾಹೇಬ ಕಾಂಬಳೆ, ಇವರ ಸಂಗೀತ ಹಾಗೂ ಹಾಡುಗಾರಿಕೆ ಇದ್ದು. ಸೊಗಸಾದ ರಂಗಸಜ್ಜಿಕೆಯನ್ನು ಕಟ್ಟಿಕೊಟ್ಟವರು ರಾಮಚಂದ್ರ ಸಯಶೇರಿಕಾರ್, ಸಾಗರ ಘಾಳೇನೂರ. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭಿನಯಿಸಿದ್ದ ಈ ನಾಟಕಗಳಲ್ಲಿ ಭವಿಷ್ಯದಲ್ಲಿ ಕೆಲವರಾದರು ತಮ್ಮ ಪ್ರತಿಭೆಯಿಂದ ರಾಜ್ಯಮಟ್ಟದಲ್ಲಿ ಹೆಸರು ಮಾಡುವ ಸೂಚನೆ ನೀಡಿದ್ದಾರೆ. ಇದು ರಂಗ ಸಿರಿಯ ಹೆಗ್ಗಳಿಕೆ ಎಂದೇ ಹೇಳಬಹುದು.

ಅಹಮದ್ ಹಗರೆ ಕಂಡಂತೆ-

Feminism ಅಂದ್ರೆ ಇದು, ಇದೇ.
ಮಲೆಮಹದೇಶ್ವರನ ಜಾನಪದ ಹಾಡಿನ ತುಣುಕೊಂದನ್ನು ಹಿಡಿದು ಮಹಿಳಾ ಶೋಷಣೆಯ ನೆಲೆಯನ್ನು ಆ ಶೋಷಣೆಯಿಂದ ಹೊರಬರುವ ವೈಜ್ಞಾನಿಕ ಹಾದಿಯನ್ನು ಬಹಳ ಕಾವ್ಯಾತ್ಮಕವಾಗಿ ಹಾಸನದ ಮಹಿಳಾ ಪದವಿ ಕಾಲೇಜಿನ ಹೆಣ್ಣುಮಕ್ಕಳು ತಮ್ಮ ಚೊಚ್ಚಲ ಅಭಿನಯದಲ್ಲೇ ಮೈ ಬೆವರುವಂತೆ ಪ್ರದರ್ಶಿಸಿದರು, ರೋಮ ನೆಟ್ಟಗೆ ನಿಲ್ಲುವಂತೆ ಅಭಿನಯ‌ಚಾತುರ್ಯ ತೋರಿದರು. ಇಡಿ ಸಭಾಂಗಣವೇ ಹತ್ತಿರತ್ತಿರ ಒಂದುಚಿಲ್ಲರೆ ಗಂಟೆಗಳಕಾಲ ನಿಶಬ್ದದ ಅಲೆಯೊಳಗೆ ತೇಲಿಸಿ ಬಿಟ್ಟರು. ತೊದಲದ ಸಂಭಾಷಣೆ, ಲಯ ತಪ್ಪದ ವಾದ ಸರಣಿ, ಹೆಜ್ಜೆ ತಪ್ಪದೆ ಇರುವೆಂಯತೆ ಗೆಜ್ಜೆ ಕಟ್ಟಿಕೊಟ್ಟ ಕುಣಿತ, ರಾಗತಪ್ಪದ ಕಂಠ ಮಾಧುರ್ಯ, ಹದ್ದುಮೀರದ ತಿಳಿಹಾಸ್ಯ, ಕರಗಿ ಹೋಗಿಬಿಡುವ ಭಾವಾಭಿನಯ, ಪರವಶಗೊಳಿಸುವ ಆಂಗಿಕ ಬಳಕೆ, ಕಣ್ಣು ಕೋರೈಸುವ ವಸ್ತ್ರವಿನ್ಯಾಸ,
ಅಬ್ಬಬ್ಬಾ ಕಿವಿಗಡಚಿಕ್ಕುವ ಸರಣಿ ಕರತಾಡನ…. ಆ ಮಕ್ಕಳು ರಸಗವಳದಂತೆ ಎಲ್ಲರ‌ಹೃನ್ಮನಗಳಲ್ಲಿ ನಿಂತುಬಿಟ್ಟರು….

ಸ್ತ್ರೀ ಸಂವೇದನೆಯ ಸೂಕ್ಷತೆಯ ಎಳೆಯೊಂದನ್ನು ರಂಗಕ್ಕೆ ತರುವುದು ಸುಲಭ. ಆದರೆ ಇಡಿ ಬದುಕಿನ ನೆಲೆಯನ್ನೇ ಸ್ತ್ರೀ ನೆಲೆಯ ತಂದು ಮನುಷ್ಯನನ್ನು ಸ್ರೀಸಂವೇದನಾ ಚಿಂತನೆಗೆ ಹಚ್ಚಿ ನಿರ್ದೇಶಿಸಲು ನಿರ್ದೇಶಕನಿಗೆ ಹೆಣ್ಣೆದೆ ಇರಲೇಬೇಕು.
ನಿರ್ದೇಶಕ ಸಂತೋಷ್ ದಿಂಡಿಗನೂರು ಮತ್ತವರ ಶ್ರೀಮತಿ ಅವರಿಗೆ ಆ ಹೆಣ್ಣೆದೆ ಇತ್ತು ಅದಕ್ಕೇ ಕೇವಲ ಹೆಣ್ಣುಮಕ್ಕಳನ್ನು ಸ್ರ್ತೀವಾದಿ ಹೆಣ್ಣು ಮಕ್ಕಳಾಗಿ ಪರಿವರ್ತಿಸಿದ ಕಾರಣ ಈ ಲೀಲಾಜಾಲ ದೃಶ್ಯಕಾವ್ಯ…

ಇಂತಹ ದೃಶ್ಯಕಾವ್ಯಕಟ್ಟಿದ ಸಂತೋಶ್ ತಂಡಕ್ಕೆ, ಅಷ್ಟೇ ದಿಟ್ಟತನದಿಂದ ಪ್ರದರ್ಶಿಸಿದ ಮಹಿಳಾ ಕಾಲೇಜಿನ ಹೆಣ್ಣುಮಕ್ಕಳಿಗೆ, ಅದನ್ನು ಆಗುಮಾಡಲು ತಿಂಗಳುಗಟ್ಟಲೆ ತಿರುಗಾಡಿದ ರಂಗಸಿರಿಗೂ ಎಷ್ಟು ಧನ್ಯವಾದ ಹೇಳಿದರೂ ಸಾಲದು.

ನಾನೆಷ್ಟು ಅಂತ ವಿಡಿಯೋ‌ ತುಣುಕು ಮಾಡಲಿ? ಗತ್ಯಂತರವಿಲ್ಲದೆ 10ವಿಡಿಯೋ ತುಣುಕು ಹಾಕಿದ್ದೇನೆ ನೋಡಿ. ಇನ್ನೂ 4ದಿನ ಬೇರೆ ಬೇರೆ ಕಾಲೇಜಿನ ಮಕ್ಕಳು ಬೇರೆ ಬೇರೆ ನಾಟಕ ಮಾಡುತ್ತವೆ ಮರೆಯದೇ ಸಂಜೆ ಕಲಾಭವನಕ್ಕೆ ಬನ್ನಿ ಆನಂದಿಸಿ, ಬೆನ್ನುತಟ್ಟಿ…

  • ಅಹಮದ್ ಹಗರೆ,‌ ಬಿಜಿವಿಎಸ್ ಹಾಸನ

‍ಲೇಖಕರು Admin MM

April 9, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: