ಉಗಾದಿಯೂ… ಮಂಟೇಸ್ವಾಮಿಯೂ…

-ಗೋಳೂರ ನಾರಾಯಣಸ್ವಾಮಿ

**

ಮಂಟೇಸ್ವಾಮಿ ಕಾವ್ಯ ಈ ದೇಶದ ಬೌದ್ಧಿಕ ಪರಂಪರೆಗೆ ಬಹಳ ದೊಡ್ಡ ಕೊಡುಗೆ. ಜನಪದೀಯನೊಬ್ಬ ಸೃಷ್ಟಿಸಿದ ಈ ಕಾವ್ಯದ ಭಾಷೆ ಹೃದಯದ ಭಾಷೆಯಾಗಿದೆ. ಹಾಗಾಗಿಯೇ ಈ ಕಾವ್ಯದ ಚೆಲುವು ಮನಸೂರೆಗೊಂಡು, ಜನಮಾನಸದಲ್ಲಿ ಇಂದಿಗೂ ಉಳಿದುಕೊಂಡು ಬಂದಿದೆ.

ಮಂಟೇಸ್ವಾಮಿಯಾದರೂ ಬಂಡವಾಳಶಾಯಿಗಳ ವಿರುದ್ಧ ಹೋರಾಡಿದ ಅಹಿಂದ ಸಾಂಸ್ಕೃತಿಕ ನಾಯಕ. ಸಿರಿವಂತಿಕೆಯ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿದ್ದ ಜನ ಸಾಮಾನ್ಯರ ಬಿಡುಗಡೆಗೆ ಹೋರಾಡಿದ ಘನಗುರು. ಇವರ ಕಂಡಾಯದ ಚಳುವಳಿ ದೇಶಕಾಲವನ್ನು ಮೀರಿದ್ದು.

ಎಲ್ಲಾ ಕಾಲಕ್ಕೂ ಆಳುವವರು ಹಾಗೂ ದುಡಿಯುವವರ ಮಧ್ಯೆ ದೊಡ್ಡ ಅಂತರ-ಹೋರಾಟ ಇದ್ದದ್ದೇ. ಅಂದು ಪಾಳೇಗಾರಿಕೆ, ರಾಜ ಪ್ರಭುತ್ವದಲ್ಲಿ ಒಂದಿಲ್ಲೊಂದು ಕಾರಣಕ್ಕೆ ಹೋರಾಟ, ಯುದ್ಧ ಕಡ್ಡಾಯವಾಗಿತ್ತು. ಇಂದು ಪ್ರಜಾಪ್ರಭುತ್ವದಲ್ಲಿ ಕಾನೂನಿನ ದುರುಪಯೋಗದಿಂದ ಜನಸಾಮಾನ್ಯರು, ಬಡವರು-ಶ್ರೀಮಂತರ ನಡುವೆ ಅಂತರ ಹೆಚ್ಚಾಗಿದೆ. ಹೀಗೆ ಯಾವಾಗ ಸಮಾಜದಲ್ಲಿ ಮೇಲು-ಕೀಳು, ಬಡತನ-ಸಿರಿತನದ ಅಂತರ ಹೆಚ್ಚಾಗುತ್ತದೆಯೋ ಆವಾಗೆಲ್ಲ ಚಳುವಳಿಗಳು, ಕರತಾಳಗಳು ನಡೆಯುವುದು ಸಹಜ. 

ಹನ್ನೆರಡನೇ ಶತಮಾನದ ಬಸವಣ್ಣನ ಕಾಲದಲ್ಲೂ ಮೇಲು-ಕೀಳು, ಜಾತಿ ವ್ಯವಸ್ಥೆ ಹಾಗೂ ಕಾಯಕ ಸಮುದಾಯಗಳ ಕಡೆಗಣನೆ ಹೆಚ್ಚಾದಾಗ ತಳವರ್ಗಕ್ಕೆ ಸೇರಿದ ಅಕ್ಷರ ಬಲ್ಲವರನ್ನು ಒಂದು ಕಡೆ ಸೇರಿಸಿ ಲಿಂಗವಂತರನ್ನಾಗಿ ಮಾಡಿ ವಚನ ಚಳುವಳಿ ಮಾಡುವ ಮೂಲಕ ಅನುಭವ ಮಂಟಪವೆಂಬ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದರು. ಹೀಗೆ ಪದ್ಯ ಬರೆಯುವ ಮಂದಿಯ ದೊಡ್ಡ ಗುಂಪು ಕಟ್ಟಿಕೊಂಡು ಸಾಂಸ್ಕೃತಿಕ ಚಳುವಳಿಯನ್ನು ಮಾಡುವ ಮೂಲಕ ಲಿಂಗಾಯತ ಧರ್ಮವನ್ನು ಹುಟ್ಟು ಹಾಕಿದರು.

ತನ್ನ ಧರ್ಮದ ಆಶಯಗಳನ್ನು ಅನುಸರಣೆ ಮಾಡಲು ಮುಂದಾದಾಗ ವಿರೋಧ ಉಂಟಾಯಿತು. ಇಂದಿಗೂ ಜಾರಿಯಲ್ಲಿರುವ ಕಠಿಣ ಜಾತಿ ವ್ಯವಸ್ಥೆ ವಿರುದ್ಧ ಅಂತರ್ಜಾತಿ ವಿವಾಹ ಮಾಡುವ ಮೂಲಕ ಕಾರ್ಯಾಚರಣೆಗೆ ಇಳಿದಾಗ ಬಸವಣ್ಣನವರ ಕೊಲೆಯಾಯಿತು. ಅವರ ಧರ್ಮವೂ ಅವನತಿ ಹೊಂದಿತು. ಆದರೆ ಮಂಟೇಸ್ವಾಮಿ ಆಗಲ್ಲ.

ಮಂಟೇಸ್ವಾಮಿಯವರು ಬಯಲನ್ನೇ ವಿಶ್ವ ವಿದ್ಯಾಲಯ ಮಾಡಿಕೊಂಡರು. ದೇಶ-ಕಾಡು ತಿರುಗಾಡಿ ಜ್ಞಾನಾರ್ಜನೆ ಮಾಡಿದರು. ಜನ ಸಾಮಾನ್ಯರೊಡನೆ ಬೆರೆತು ಮನುಷ್ಯ ನಡವಳಿಕೆ ಅಧ್ಯಯನ ಮಾಡಿ, ಆತನ ದುಷ್ಟಗುಣಗಳ ವಿರುದ್ಧ ಹೋರಾಟ ಮಾಡಿದರು. 

ಮಂಟೇದಯ್ಯನವರು ‘ಮನುಷ್ಯನ ಜಾತಿ ಶ್ರೇಷ್ಠತೆ, ಹಣದ ಅಹಂಕಾರ, ಧರ್ಮದ ಅಮಲು, ಗದ್ದುಗೆಯ ಕಿತ್ತಾಟದ ವಿರುದ್ಧ ಹೋರಾಡಿದ ಬಂಡಾಯಗಾರ’. ಇವರು ಸಮಾಜ ಪರಿವರ್ತನೆ ಮಾಡಲು ತನ್ನದೇ ಆದ ಕಠಿಣ ಹಾದಿ ತುಳಿದವರು. ಮಕ್ಕಳನ್ನೇ ದಾನ ಪಡೆದು ಶಿಶುಮಕ್ಕಳಾಗಿ ಪರಿವರ್ತಿಸಿದವರು. ಈ ಮೂಲಕ ಬಲಿಷ್ಠವಾದ ನೀಲಗಾರ ಪಡೆಯನ್ನು ಕಟ್ಟಿದರು. ಇದಕ್ಕೊಬ್ಬ ಸಿದ್ದಪ್ಪಾಜಿ ಎಂಬ ಮಹಾದಂಡನಾಯಕನನ್ನು ನೇಮಿಸಿದರು. ಈ ಪರಂಪರೆಗೆ ಭಿಕ್ಷಾಟನೆಯನ್ನು ಕಡ್ಡಾಯಗೊಳಿಸಿದರು. ಉಳ್ಳವರಿಂದ ಪಡೆದು ಇಲ್ಲದವರಿಗೆ ಹಂಚುವ ಮೂಲಕ ದಾಸೋಹವನ್ನು ನಡೆಸಿದರು. ಅದು ಭೂ ದಾಸೋಹ, ಅನ್ನದಾಸೋಹ, ಧಾನ್ಯ ದಾಸೋಹ, ಕಬ್ಬಿನ ದಾಸೋಹ, ಮನೆ-ಮಠಗಳ ದಾಸೋಹವೆ ಆಗಿತ್ತು.  ಆ ಮುಖಾಂತರ ಸಮ-ಸಮಾಜದ ಕನಸನ್ನು ಕಂಡಿದ್ದ ಧರೆಗೆ ದೊಡ್ಡವರು ಎಲ್ಲಾ ಜಾತಿ ಜನರನ್ನು ಒಂದುಗೂಡಿಸಿ ಪಂಕ್ತಿಸೇವೆಯನ್ನು ಮಾಡಿದರು. ಮುಟ್ಟು-ತಟ್ಟು, ಮಡಿ-ಮೈಲಿಗೆ, ಮಾಟ-ಮಂತ್ರದಂತಹ ಮೌಢ್ಯಾಚರಣೆಗಳಿಗೆ ಅಂತ್ಯವಾಡಿದರು. 

ಕಿಡುಗಣ್ಣ ರಾಚಪ್ಪಾಜಿ, ಚೆನ್ನಾಜಮ್ಮ, ದೊಡ್ಡಮ್ಮತಾಯಿ, ಘನನೀಲಿ ಸಿದ್ದಪ್ಪಾಜಿ, ಫಲಹಾರದಯ್ಯ, ಚೆನ್ನಯ್ಯ, ಲಿಂಗಯ್ಯ, ಸಕ್ಕರಾಯಪಟ್ಟಣದ ರಾಜರ ಮಕ್ಕಳನ್ನು ಶಿಶು ಮಕ್ಕಳಾಗಿಯೂ ಹಾಗೂ ಅಸಂಖ್ಯಾತ ನೀಲಗಾರರನ್ನು  ಪಡೆದು ಮಹಾ ಜಂಗಮರೆನಿಸಿದರು.

ಎಳೆಗುಂದೂರಿನ ಮಾರಿ ಸಾಮಾನ್ಯದವಳಲ್ಲವಾಗಿ, ಅವಳಿಗಾದರೂ ಗೋಡೆ ಗಾತ್ರ ಹೊಟ್ಟೆ, ಮೂಡೆ ಗಾತ್ರ ಮೂಗು, ವಂದರಿ ಅಗಲ ಕಣ್ಣು, ಮೂಲಂಗಿ ಗಾತ್ರ ಹಲ್ಲು, ತೆಂಗಿನಮರ ಕಿತ್ತುಕೊಂಡು ಊರುದೊಣ್ಣೆ ಮಾಡಿಕೊಂಡು, ಅಡಿಕೆ ಮರ ಕಿತ್ಕಂಡು ಹಲ್ಲುಕಡ್ಡಿ ಮಾಡಿಕೊಂಡು, ಬೇವಿನಮರವ ಕಿತ್ತುಕೊಂಡು ಗಸಗಸನೇ ಅಗಿಯುವಂತಹ ಮಾರಿ.  ಇಂತಹ ನೂರಾರು ಮಾರಿಯರು ಈ ಕತ್ತಲ ರಾಜ್ಯದೊಳಗೆ ಜನರನ್ನು ಗೋಳಾಡಿಸುತ್ತಿದ್ದರು. ಇವರೆಲ್ಲ ಶ್ರೀಮಂತರು, ಪಾಳೇಗಾರರನ್ನು ಅವರ ಊರನ್ನೂ ಕಾಯುತ್ತಿದ್ದರು. ಇಂತಹ ನೂರಾರು ಮಾರಿಯರಿಗೆ ಬುದ್ದಿ ಕಲಿಸಿ ಮಾರಿ-ಮಸಣಿಯರ ಗಂಡ ಎನಿಸಿಕೊಂಡರು. ಮಂಟೇಸ್ವಾಮಿಯವರು ಸಿರಿಸಂಪತ್ತನ್ನೆಲ್ಲ ತಮ್ಮ ಬಳಿ ಶೇಖರಣೆ ಮಾಡಿಕೊಂಡು ಅಹಂಕಾರದಿಂದ ಮೆರೆಯುತ್ತಿದ್ದ ಪಾಂಚಾಳದವರ ಅಹಂಕಾರ ನಾಶಮಾಡಿ ಅವರಿಂದ ಕಬ್ಬಿಣದ ಭಿಕ್ಷೆಯನ್ನು ಪಡೆದು ಮಠಗಳನ್ನು ಕಟ್ಟಿಸಿದರು. ಉಳ್ಳವರಲ್ಲಿದ್ದ ಭೂಮಿಯನ್ನು ಪಡೆದು ಕೃಷಿ ಭೂಮಿಯನ್ನಾಗಿಸಿ ಇಲ್ಲದವರಿಗೆ ಹಂಚಿದರು. ಬೇಸಾಯಕ್ಕಾಗಿ ಕಬ್ಬಿಣದ ಕೃಷಿ ಸಲಕರಣೆಗಳನ್ನು ಒದಗಿಸಿದರು. ತಮ್ಮ ಅನ್ನವನ್ನು ತಾವೇ ಉತ್ಪಾದಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರು.

ಹೀಗೆ ಬಸವಣ್ಣನವರಿಗಿಂತ ಭಿನ್ನವಾದ ಮಾರ್ಗದಲ್ಲಿ ತಾವು ಅಂದುಕೊಂಡಿದ್ದನ್ನು ಸಾಧಿಸಿದರೂ, ಮುಂದೆ ತಮ್ಮ ಕೈ ಮೀರಿ ನಡೆಯಬಹುದಾಗಿದ್ದ ಕಲಿಯನ್ನು ನೆನೆದುಕೊಂಡು ಅದನ್ನು ಜಗತ್ತಿಗೆ ಸಾರಿದರು. ತಾನು ಸಾರಿದ ಕಲಿ ತನ್ನ ಕಣ್ಣ ಮುಂದೆಯೇ ನಡೆದರೆ ನಾನು ಅದನ್ನು ನೋಡಲಾರೆನೆಂದು ತಾನು ಕಟ್ಟಿಸಿದ ಬೊಪ್ಪೇಗೌಡನಪುರದ ಮಠದಲ್ಲಿ ಮುಕ್ಕಾಲು ಮಂಚದ ಮೇಲೆ ಹೊರಗಿ ಹನ್ನೆರಡು ಹಾಳುದ್ದ ಬಾವಿಯೊಳಗೆ ಜಲಸಮಾಧಿಯಾದರು.

ಅಂದಿನಿಂದ ಬೊಪ್ಪೇಗೌಡನಪುರದಲ್ಲಿ ಪ್ರತಿ ಯುಗಾದಿಯ ಅಮಾವಾಸ್ಯೆಯ ದಿನ ವರ್ಷಕ್ಕೆ ಒಮ್ಮೆ ಮಾತ್ರ ಪೂಜೆಗೆ ಜರಗುತ್ತದೆ. ಆಗ ಅಲ್ಲಿ ದೊಡ್ಡ ಜಾತ್ರೆಯೇ ನಡೆಯುತ್ತದೆ.

ಇಲ್ಲಿಗೆ ಬರುವ ಭಕ್ತರು, ನೀಲಗಾರರು, ಕೃಷಿಕರು ತಾವು ಬೆಳೆದ ಬೆಳೆಗಳನ್ನು ತಂದು ಅರ್ಪಿಸುತ್ತಾರೆ. ಆಗ ಕತ್ತಲೆ ರಾಜ್ಯವು ಫಲವತ್ತಾದ ಹೆಗ್ಗಾಡಿನಿಂದ ಕೂಡಿದ್ದರು, ಅಧಿಕವಾಗಿ ಮಳೆ ಸುರಿದರೂ ಕೂಡ ತೆಂಗು, ಅಡಿಕೆ, ಕಬ್ಬು, ಬಾಳೆಯಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರಲಿಲ್ಲ. ಜನಸಾಮಾನ್ಯರ ಆಹಾರ ಪದಾರ್ಥಗಳಾದ ರಾಗಿ, ಜೋಳ, ಹುರಳಿ, ಉದ್ದು, ಅಲಸಂದೆ, ಹತ್ತಿ, ಹರಳು, ಹಸರು, ಎಳ್ಳು, ನವಣ, ಸಜ್ಜೆ, ಕಮ್ಮು ಬೆಳೆಯುತ್ತಿದ್ದರು.  ಬಹು ಆಹಾರ ಸಂಸ್ಕೃತಿಯನ್ನು ಬೆಳೆಸಿದರು. ಮಂಟೇಸ್ವಾಮಿಯವರು ಹಣ ತಂದುಕೊಡುವ ಬೆಳೆಗಳನ್ನು ಬಿಟ್ಟು, ಜನರ ಹೊಟ್ಟೆ ತುಂಬಿಸುವ ಬೆಳೆಗಳನ್ನು ಬೆಳೆಯಲು ಆದೇಶಿಸಿದರು.

ಈ ಜಾತ್ರೆಗೆ ಮಳವಳ್ಳಿ, ಟಿ.ನರಸೀಪುರ, ನಂಜನಗೂಡು, ಚಾಮರಾಜನಗರ, ಕೊಳ್ಳೇಗಾಲ, ಕನಕಪುರ, ಮಂಡ್ಯ ಮದ್ದೂರು ಸೇರಿದಂತೆ ಚಾಮರಾಜನಗರ, ಮೈಸೂರು, ಬೆಂಗಳೂರು, ಹಾಸನ ಜಿಲ್ಲೆಗಳಿಂದಲೂ ಜನ ಸಾಗರವೇ ಬಂದು ಸೇರುತ್ತದೆ.

ಮಂಟೇಸ್ವಾಮಿ ಪರಂಪರೆಗೆ ಬರುವ ಜಾತ್ರೆಗಳು ಸಾಮಾನ್ಯವಾಗಿ ಸಂಕ್ರಾಂತಿ ನಂತರ ಶುರುವಾಗುತ್ತವೆ. ಸಿದ್ದಪ್ಪಾಜಿ ನೆಲಗೊಂಡ ಚಿಕ್ಕಲೂರಿನಲ್ಲಿ ಏಳು ದಿನಗಳ ಜಾತ್ರೆ, ಶಿವರಾತ್ರಿಯಿಂದ ಯುಗಾದಿವರೆಗೆ ನಡೆಯುವ ಕಪ್ಪಡಿ ಜಾತ್ರೆ ಹಾಗೂ ಹಳ್ಳಿ-ಹಳ್ಳಿಗಳಲ್ಲಿ ಮಾರಿ-ಮಸಣಿಯರ ಜಾತ್ರೆಗಳು, ಲೆಕ್ಕವಿಲ್ಲದಷ್ಟು ಕಂಡಾಯದ ಪೂಜೆ- ಕೊಂಡೋತ್ಸವಗಳು ನಡೆಯುತ್ತವೆ.

ಮನುಷ್ಯ ಪ್ರೇಮಿ ಮಂಟೇಸ್ವಾಮಿಯವರನ್ನು ನಾವಾದರೂ ಕೂಡ ವರ್ಸ್ತೊಡಕಿನಲ್ಲಿ ನೆನೆದುಕೊಳ್ಳುವುದು ನಮ್ಮ ಪುಣ್ಯ.

‍ಲೇಖಕರು avadhi

April 9, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: