ನನ್ನ ಗಡ್ಡ ಮತ್ತು ಆ ಸಿನೆಮಾಗಳು..

ಮ ಶ್ರೀ ಮುರಳಿ ಕೃಷ್ಣ

**

ʼಬ್ಲಿಂಕ್‌ʼ ಮತ್ತು ʼ ಕಿಲ್ಲರ್ಸ್‌ ಆಫ್‌ ದಿ ಫ್ಲವರ್‌ ಮೂನ್‌ ʼ ಸಿನಿಮಾ ಎರಡು ಅನುಭವಗಳು.

ಪ್ರಿಯ ಓದುಗರೇ……ಖಂಡಿತ…ನಾನು ʼ ಕಿಲ್ಲರ್ಸ್‌ ಆಫ್‌ ದಿ ಫ್ಲವರ್‌ ಮೂನ್‌ ʼ ಮತ್ತು ʼ ಬ್ಲಿಂಕ್‌ (ಒಂದು ಯುವ ತಂಡ, ಕನ್ನಡ ಸಿನಿಮಾರಂಗದಲ್ಲಿ ಟೈಂ ಟ್ರಾವಲ್‌/ Sci̲-fi ಜಾನರ್ನಲ್ಲಿ ಗಮನಾರ್ಹ ಪ್ರಯತ್ನವನ್ನು ಮಾಡಿದೆ) ಸಿನಿಮಾಗಳ ಬಗೆಗೆ ನನ್ನ ಅನಿಸಿಕೆಗಳನ್ನು ಇಲ್ಲಿ ಬರೆಯುತ್ತಿಲ್ಲ ಆದರೆ ಈ ಸಿನಿಮಾಗಳನ್ನು ನೋಡಲು ಹೋದಾಗ ಜರುಗಿದ ಎರಡು ಪ್ರಸಂಗಗಳ ಬಗೆಗೆ ನಾನು ಪ್ರಸ್ತಾಪವನ್ನು ಮಾಡುತ್ತಿದ್ದೇನೆ, ಅಷ್ಟೇ. ಅಂದ ಹಾಗೆ ಮಲ್ಟಿಪ್ಲೆಕ್ಸ್‌ ಇರುವ ಒಂದೇ ಮಾಲ್ನಲ್ಲಿ ಈ ಎರಡೂ ಪ್ರಸಂಗಗಳು ಜರುಗಿದವು! ಲೇಟೆಸ್ಟ್‌ ಅನುಭವವನ್ನು ಮೊದಲು ತಿಳಿಸಿಬಿಡುತ್ತೇನೆ.

ʼಬ್ಲಿಂಕ್‌ ʼ ಕನ್ನಡ ಸಿನಿಮಾವನ್ನು ನೋಡಲು ಹೋದೆ. ಇಂಟರ್ವೆಲ್ನಲ್ಲಿ ವಾಶ್ರೂಂಗೆ ಹೋದಾಗ, ಉದ್ದ ಕೂದಲು, ಗಡ್ಡ ಬಿಟ್ಟಿರುವ ನನ್ನನ್ನು ಒಬ್ಬ ಯುವಕ ದಿಟ್ಟಿಸುತ್ತಿದ್ದ. ಆಗ ನಡೆದ ಸಂಭಾಷಣೆ:
“ಸಾರ್…. ನೀವು ʼ ಬ್ಲಿಂಕ್‌ ʼ ಸಿನಿಮಾದ ಸ್ಕ್ರೀನ್‌ನಲ್ಲಿ ಇದ್ರಲ್ಲ್ವಾ?!
“ಹೌದು“ ನಾನೆಂದೆ.
“ನೀವು ಈ ಸಿನಿಮಾದಲ್ಲಿ ಪಾರ್ಟ್‌ ಮಾಡಿದ್ದೀರಲ್ಲ್ವಾ?!
“ಇಲ್ಲ“
ಆತನಿಗೆ ನಾನು ಸುಳ್ಳು ಹೇಳುತ್ತಿದ್ದೇನೆ ಎಂದೆನಿಸಿರಬೇಕು!
“ಅದೇ ಸಾರ್…. ಕೊಳಲನ್ನು ಊದುತ್ತಿದ್ದ ವ್ಯಕ್ತಿ…..”
“ಇಲ್ಲಾರಿ…” ಎಂದು ಜೋರಾಗಿ ನಗುತ್ತ ಜಾಗ ಖಾಲಿ ಮಾಡಿದೆ.

ಇಂಟರ್ವೆಲ್ ನಂತರವೇ ಕೊಳಲನ್ನು ಊದುತ್ತಿದ್ದ ಉದ್ದ ಕೂದಲು, ಗಡ್ಡ ಬಿಟ್ಟಿರುವ ವಯಸ್ಸಾದ ʼ ಮಾಸ್ಟರ್‌ ʼ ಎಂಬ ಪಾತ್ರ ವಿಸ್ತರಣೆಯಾಗುತ್ತದೆ. ಆತ ತುಂಬ ಓದಿಕೊಂಡಿರುತ್ತಾರೆ, ಜ್ಞಾನಿಯೂ ಆಗಿರುತ್ತಾರೆ, ಆದರೆ ಒಂದು ಮಾತನ್ನೂ ಆಡುವುದಿಲ್ಲ. ಅವರು ಏನು ಕೆಲಸವನ್ನು ಮಾಡುತ್ತಾರೆ?ಎಲ್ಲಿ ಊಟ ಮಾಡುತ್ತಾರೆ? ಎಂಬ ಮಾಹಿತಿಯು ಪ್ರೊಟೊಗನಿಸ್ಟ್‌ ಅಪೂರ್ವ ಇರುವ ಡ್ರಾಮ ತಂಡದ ಯಾರಿಗೂ ತಿಳಿದಿರುವುದಿಲ್ಲ!

ಒಂದು ರಾತ್ರಿ ಅಪೂರ್ವ ಮಾಸ್ಟರನ್ನು ತನ್ನ ಮನೆಗೆ ಕರೆತರುತ್ತಾನೆ. ಎಲ್ಲ ತರಹದ ಸೇವನೆಯಾದ ನಂತರ, ಅಪೂರ್ವ ಎಷ್ಟೇ ವಿನಂತಿಸಿದರೂ, ಮಾಸ್ಟರ್‌ ರೂಫ್‌ ಮೇಲೆ ಮಲಗುತ್ತೀನಿ ಎಂದು ತಿಳಿಸುತ್ತಾರೆ! ಬೆಳಿಗ್ಗೆ ಅಪೂರ್ವ ಎದ್ದು, ಮಾಸ್ಟರನ್ನು ಕರೆಯುತ್ತಾನೆ. ಉತ್ತರ ಬರುವುದಿಲ್ಲ. ಎಬ್ಬಿಸಲು ಪ್ರಯತ್ನಿಸುತ್ತಾನೆ. ಉಹುಂ, ಚಲನೆಯೇ ಇರುವುದಿಲ್ಲ! ಅಂಗೈಯನ್ನು ಮುಟ್ಟುತ್ತಾನೆ. ಆಗ ಅವನಿಗೆ ಸಂಶಯ ಬರುತ್ತದೆ. ಮೂಗಿನ ಬಳಿ ಬೆರಳನ್ನು ಆಡಿಸುತ್ತಾನೆ. ಮಾಸ್ಟರ್‌ ತನ್ನ ಪಾತ್ರವನ್ನು ಮುಗಿಸಿರುವುದು ಅಪೂರ್ವನಿಗೆ ತಿಳಿಯುತ್ತದೆ.

ನನಗೆ ವಾಶ್ರೂಂನಲ್ಲಿ ಜರುಗಿದ ಸಂಭಾಷಣೆ ನೆನಪಿಗೆ ಬಂದಿತು. ನನ್ನನ್ನೇ ಆ ಮಾಸ್ಟರ್‌ ಎಂದು ತಿಳಿದ ಯುವಕನ ವರ್ತನೆಯನ್ನು ಮೆಲುಕು ಹಾಕಿದಾಗ ಮುಗುಳ್ನಗೆ ಮೂಡಿತು. ಸಿನಿಮಾದಲ್ಲಿ ಗೊಟಕ್‌ ಎಂದರೂ ನೈಜ ಜೀವನದಲ್ಲಿ ಮಾಸ್ಟರ್‌ ಪಾತ್ರ ಮಾಡಿದ ವ್ಯಕ್ತಿ ತಮ್ಮ ಜೀವನವನ್ನು ಮುಂದುವರೆಸುತ್ತಾರೆ! ಆದರೂ ಎಲ್ಲರೂ ಒಂದು ದಿನ ವಿಝಲ್‌ ಹೊಡೆಯಲೇಬೇಕಲ್ಲವೇ ಎಂಬ ಭಾವವೂ ನನ್ನಲ್ಲಿ ಮೂಡಿತು!

2
ಇನ್ನು ಮಾರ್ಟಿನ್‌ ಸ್ಕೋರ್‌ಸೇಝೆ ನಿರ್ದೇಶನದ ʼಕಿಲ್ಲರ್ಸ್‌ ಆಫ್‌ ದಿ ಫ್ಲವರ್‌ ಮೂನ್‌ ʼ(ಆಂಗ್ಲ) ಸಿನಿಮಾದ ವಿಷಯ. ಈ ಸಿನಿಮಾವನ್ನು ನೋಡಿ, ಹೊರಬಂದು ಪಾರ್ಕಿಂಗ್‌ ಜಾಗವನ್ನು ಪ್ರವೇಶಿಸುತ್ತಿದ್ದಾಗ, ಒಬ್ಬ ಸ್ಪುರದ್ರೂಪಿ ಯುವಕ, “ಸಾರ್ ನೀವು ಈ ಸಿನಿಮಾ ನೋಡಿದ್ರಲ್ಲ, ನನಗೆ ಖಂಡಿತ ಅನಿಸಿತ್ತು. ನೀವು ಈ ಸಿನಿಮಾ ಆಧರಿಸಿದ ಕಾದಂಬರಿ ಓದಿರುತ್ತೀರಿ….!! ಎಂದು ಉಸಿರು ಬಿಡದೆ ಹೇಳಿದರು.

ಬರೀ ನನ್ನ ಮನಸ್ಸಿನಲ್ಲಿ ಮಾತ್ರ ಅಲ್ಲ, ಮುಖದಲ್ಲೂ ಪ್ರಶ್ನೆ ಮೂಡಿತು! ನನ್ನ ಕೇಶ(ತಲೆ ಮತ್ತು ಗದ್ದ)ದ ಅವತಾರವನ್ನು ಕಂಡು ಇದು ಯಾವುದೋ ದೊಡ್ಡ ಓದುಗ ಎಂದು ಆ ಯುವಕ ಭಾವಿಸಿರಬೇಕು! ನಾನೊಬ್ಬ ಅಡ್ಡಕಸುಬಿ ಓದುಗ ಎಂದು ಅವರಿಗೆ ಹೇಗೆ ತಿಳಿದಿರಬೇಕು. ಅಲ್ಲವೇ? ನಾನು “ಇಲ್ಲಾರಿ……ಓದಿಲ್ಲ ….” ಎಂದೆ ಅವರ ಮುಖ ಸಣ್ಣಗಾಗಲಿಲ್ಲ! “ನಿಮಗೆ ಏನೆನಿಸಿತು ಈ ಸಿನಿಮಾ ಬಗೆಗೆ? ಕೊಶ್ಚೆನಿಸಿದರು. ನನ್ನ ಅಭಿಪ್ರಾಯವನ್ನು ತಿಳಿಸಿದೆ.

ನಂತರ ಅವರು ಉತ್ತರ ಕರ್ನಾಟಕದ ಒಂದು ಊರಿನಿಂದ ಇಲ್ಲಿ ಅಂದರೆ ಬೆಂಗಳೂರಿಗೆ ಬಂದು, ರಂಗಭೂಮಿ ಮತ್ತು ಕೆಲವು ಟಿವಿ ಸೀರಿಯಲ್‌ಗಳಲ್ಲಿ ಪೂರ್ಣಾವಧಿ ನಟರಾಗಿ ಕೆಲಸವನ್ನು ಮಾಡುತ್ತಿರುವುದಾಗಿ ತಿಳಿಸಿದರು. ಅವರ ಬಳಿ ಲೋಕಾಭಿರಾಮವಾಗಿ (ಹೆಚ್ಚಾಗಿ ಕಲೆ ಕುರಿತಂತೆ) ಸುಮಾರು 20 ನಿಮಿಷಗಳ ಕಾಲ ಮಾತನಾಡಿ, ಎರಡೂ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸುವಂತಾಗಲಿ ಎಂದು ಅವರನ್ನು ಹಾರೈಸಿ ಹೊರಟೆ.

ಮೇಲಿನ ಎರಡೂ ಪ್ರಸಂಗಗಳಲ್ಲಿ ನನ್ನ ಅಸ್ಮಿತೆ ನನ್ನ ಕೇಶ ಭೂಷಣದ ಜೊತೆ ಸಮೀಕರಣಗೊಂಡದ್ದು ತಮಾಷೆಯ ವಿಷಯವಾಗಿತ್ತು! ಇದರ ಮುಂದೆ ನನ್ನ ಇತರ ಕೆಲವು ಅಸ್ಮಿತೆಗಳು ಸೊನ್ನೆಯಾಗಿದ್ದವು! ಮುಂದೆಯಾದರೂ ನಾನು ನೈಜವಾಗಿ ಗುರುತಿಸಲ್ಪಡುವೆನೇ? ‌ ದಿಸ್‌ ಈಸ್‌ ಎ ಮಿಲಿಯನ್‌ ಡಾಲರ್‌ ಕ್ವಶ್ಚನ್!

‍ಲೇಖಕರು Admin MM

April 9, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: