ಕಾಸ್ಟ್ಲಿ ಖೈದಿ

ಶಿವಕುಮಾರ ಮಾವಲಿ 

ಇದು ಟಾಲ್‍ಸ್ಟಾಯ್ ನ “ Too dear”   ಕತೆಯ ಭಾವಾನುವಾದ

ಈ ಕಾಲಕ್ಕೂ ಪ್ರಸ್ತುತ 

ಫ್ರಾನ್ಸ್ ಮತ್ತು ಇಟಲಿ ದೇಶಗಳ ಗಡಿಯ ಬಳಿ, ಮೆಡಿಟರೇನಿಯನ್ ಸಮುದ್ರ ದಡದಲ್ಲಿ ‘ಮೊನಾಕೋ’ ಎಂಬ ಅತೀ ಚಿಕ್ಕದೊಂದು ‘ರಾಜ್ಯ’ವಿದೆ. ಅನೇಕ ಚಿಕ್ಕ ನಗರಗಳು ಇಲ್ಲಿನ ರಾಜ್ಯಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವುದರ ಬಗ್ಗೆ ಜಂಭ ಕೊಚ್ಚಿಕೊಳ್ಳಬಹುದು. ಇಲ್ಲಿನ ಜನಸಂಖ್ಯೆ ಆಸುಪಾಸು ಏಳು ಸಾವಿರ ಇರುಬಹುದು. ಇಡೀ ರಾಜ್ಯದ ಭೂ ಪ್ರದೇಶವನ್ನು ಅಲ್ಲಿನ ಜನಸಂಖ್ಯೆಗನುಗುಣವಾಗಿ ವಿಭಾಗಿಸಿದರೂ ಅಲ್ಲಿನ ಪ್ರತಿ ಪ್ರಜೆಗೆ ಒಂದು ಎಕರೆ ಪ್ರದೇಶವೂ ಸಿಗಲಾರದು. ಆದರೆ ಇಂತಿಪ್ಪ ಈ ಸಣ್ಣ ರಾಜ್ಯದಲ್ಲಿ ಓರ್ವ ನಿಜವಾದ ರಾಜನಿದ್ದಾನೆ ((Real Kinglet). ಅವನಿಗೆ ಒಂದು ಅರಮನೆಯೂ ಇದೆ. ಆಸ್ಥಾನಿಕರಿದ್ದಾರೆ, ಮಂತ್ರಿಗಳಿದ್ದಾರೆ. ಓರ್ವ ಧರ್ಮಗುರು ಇದ್ದಾನೆ. ಸೇನಾಧಿಪತಿಗಳು ಮತ್ತು ಒಂದು ಸೈನವೂ ಇದೆ.

ಆದರೆ ಅದೊಂದು ದೊಡ್ಡ ಸೇನೆಯೇನಲ್ಲ. ಕೇವಲ ಅರವತ್ತು ಮಂದಿ ಇದ್ದರೂ ಅದೊಂದು ಸೈನ್ಯವೇ. ಬೇರೆಲ್ಲ ಕಡೆಯಂತೆ ಇಲ್ಲೂ ತೆರಿಗೆಗಳಿವೆ. ತಂಬಾಕಿನ ಮೇಲೆ, ಸಾರಾಯಿ ಮೇಲೆ ತೆರಿಗೆಗಳಿವೆ. ವಿಶೇಷ ಅಂದ್ರೆ ಇಲ್ಲಿ ಪ್ರತಿಯೊಬ್ಬ ವಯಸ್ಕನ ಮೇಲೂ ತಲೆಗಂದಾಯ ವಿಧಿಸಲಾಗಿದೆ. ಆದರೆ ಅಲ್ಲಿನ ಜನರು ಇತರೆ ರಾಜ್ಯಗಳಲ್ಲಿರುವಂತೆಯೇ ಮದ್ಯಪಾನ, ಧೂಮಪಾನ ಮಾಡಿದರೂ ಅವರ ಸಂಖ್ಯೆ ಹೆಚ್ಚಿರಲಿಲ್ಲ. ಹೀಗಾಗಿ ಇದರಿಂದ ಬರುವ ಆದಾಯದಿಂದ ತನ್ನ ಆಸ್ಥಾನಿಕರು, ಅಧಿಕಾರಿಗಳು ಮತ್ತು ತನ್ನನ್ನು ತಾನು ‘ಸೊಂಪಾಗಿ’ ನೋಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಹಾಗಾಗಿ ಈ ರಾಜ ಒಂದು ‘ವಿಶೇಷ ಆದಾಯದ ಮೂಲವನ್ನು ಹುಡುಕಿಕೊಳ್ಳಲೇ ಬೇಕಿತ್ತು. ಈ ವಿಶೇಷ ಆದಾಯವು ‘ಜೂಜು ಅಡ್ಡೆ’ ಗಳಿಂದ ಬರುತ್ತಿತ್ತು. ಅಲ್ಲಿ ಜನ ‘ತಿರುಗುವ ಚೆಂಡಿನ’(ರೌಲೆಟ್) ಮೇಲೆ ಹಣ ಹೂಡಿ ಜೂಜಾಡುತ್ತಿದ್ದರು.ಜೂಜು ಅಡ್ಡೆಗಳಲ್ಲಿ ಜನ ಆಟ ಆಡುತ್ತಿದ್ದರು. ಅವರು ಗೆದ್ದರೇನು? ಸೋತರೇನು? ಜೂಜು ಅಡ್ಡೆಯ ಮಾಲೀಕನಿಗೆ ಮಾತ್ರ ಒಂದು ನಿರ್ದಿಷ್ಟ ಪ್ರಮಾಣದ ಹಣ ಸಿಕ್ಕೇ ಸಿಗುತ್ತದೆ. ಈ ವ್ಯವಹಾರದಲ್ಲಿ ಆತ ಗಳಿಸಿದ ಹಣದ ಲಾಭಾಂಶದಲ್ಲಿ ಒಂದು ಷೇರು ರಾಜನಿಗೆ ಹೋಗುತ್ತದೆ. ಇಂಥ ದೊಡ್ಡ ಮೊತ್ತದ ಹಣವನ್ನು ಈ ಮಾಲೀಕ ರಾಜನಿಗೆ ನೀಡುತ್ತಿರುವುದಕ್ಕೆ ಕಾರಣವೂ ಇದೆ.

ಇಡೀ ಯೂರೋಪ್‍ನಲ್ಲಿ ಇಂಥ ಜೂಜಡ್ಡೆಯನ್ನು ಇನ್ನೂ ಉಳಿಸಿಕೊಂಡಿರುವವನು ಇವನೊಬ್ಬ ರಾಜ ಮಾತ್ರ. ಈ ಮುನ್ನ ಜರ್ಮನಿಯ ಕೆಲವು ಸಣ್ಣ ರಾಜರುಗಳು ಇಂಥ ಜೂಜು ಮನೆಗಳನ್ನು ಹೊಂದಿದ್ದರು. ಆದರೆ ಕೆಲ ವರ್ಷಗಳ ಹಿಂದೆ ಅವುಗಳನ್ನೆಲ್ಲ ಮುಚ್ಚಿಸಿಲಾಯಿತು. ಏಕೆಂದರೆ ಈ ಜೂಜು ಮನೆಗಳು ಜರ್ಮನ್ನರ ಜೀವನಕ್ಕೆ ಸಾಕಷ್ಟು ಹಾನಿಯುಂಟು ಮಾಡುತ್ತಿದ್ದವು. ಇಲ್ಲಿಗೆ ಜೂಜುಕೋರ ಬಂದು ತನ್ನ ಅದೃಷ್ಟ ಪರೀಕ್ಷಿಸಿಕೊಂಡು ತನ್ನ ಬಳಿಯಿದ್ದದ್ದೆನ್ನೆಲ್ಲ ಕಳೆದುಕೊಳ್ಳುತ್ತಿದ್ದ, ನಂತರ ತನ್ನದಲ್ಲದ ಹಣವನ್ನೂ ಸಾಲ ಪಡೆದಾದರೂ ಜೂಜಿನಲ್ಲಿಟ್ಟು ಅದನ್ನೂ ಕಳೆದುಕೊಂಡು ಕೊನೆಗೆ ಖಿನ್ನನಾಗಿ, ಅಸಹಾಯಕನಾಗಿ ನದಿಗೆ ಹಾರಿಯೋ ಇಲ್ಲವೋ ಗುಂಡು ಹಾರಿಸಿಕೊಂಡೋ ಸತ್ತು ಹೋಗುತ್ತಿದ್ದ. ಆದ್ದರಿಂದಲೇ ಜರ್ಮನ್ನರು ತಮ್ಮನ್ನಾಳುವವರು ಈ ರೀತಿಯಲ್ಲಿ ಹಣ ಮಾಡುವುದಕ್ಕೆ ವಿರೋಧಿಸಿ ಜೂಜು ಮನೆಗಳನ್ನೆಲ್ಲಾ ಮುಚ್ಚಿಸಿಬಿಟ್ಟಿದ್ದರು. ಆದರೆ ಈ ಚಿಕ್ಕ ರಾಜ್ಯ ‘‘ಮೊನಾಕೋ’’ದಲ್ಲಿ ರಾಜನನ್ನು ಪ್ರಶ್ನಿಸುವವರು ಯಾರೂ ಇಲ್ಲದೆ ಈ ದಂಧೆಯ ಏಕಸ್ವಾಮ್ಯ ಸಾಧಿಸಿಬಿಟ್ಟಿದ್ದ.

ಹಾಗಾಗಿ ಈಗ ಯಾರೇ ಜೂಜು ಆಡಬೇಕಾದರೋ ‘ಮೊನಾಕೊ’ ಗೆ ಬರುತ್ತಿದ್ದರು. ಅವರು ಸೋತರೂ, ಗೆದ್ದರೂ ಮೊನಾಕೋದ ರಾಜ ಅದರಿಂದ ಲಾಭ ಪಡೆಯುತ್ತಾನೆ. “ಪ್ರಾಮಾಣಿಕ ಗಳಿಕೆಯಿಂದ ನೀವು ಅರಮನೆ / ಬಂಗಲೆಗಳನ್ನು ಗಳಿಸಲಾರಿರಿ” ( You cant earn stone palaces by honest labour) ಎಂಬ ಗಾದೆಯಂತೆ ಈ ರಾಜನಿಗೂ ಈ ರೀತಿ ಜೂಜಿನಿಂದ ಹಣ ಗಳಿಸಿ ರಾಜ ದರ್ಬಾರು ನಡೆಸುವುದು ಕೆಟ್ಟದ್ದು ಎಂದು ಗೊತ್ತಿದೆ. ಆದರೆ ಆತ ಏನು ಮಾಡಿಯಾನು? ಪಾಪ. ತಂಬಾಕು ಮತ್ತು ಸಾರಾಯಿಯಿಂದ ಆದಾಯ ಪಡೆಯುವುದು ಕೆಟ್ಟದ್ದೂ ಎಂದು ತಿಳಿದಿದೆ. ಆದರೆ ಆತ ಬದುಕಲೇ ಬೇಕು. ಹಾಗಾಗಿ ಅವನು ಇಂಥ ಆದಾಯದಿಂದಲೇ ತನ್ನ ರಾಜ ದರ್ಬಾರನ್ನು ಓರ್ವ ದೊಡ್ಡ ರಾಜನಂತೆ ಸಂಭ್ರಮ, ಗರ್ವದಿಂದಲೇ ನಡೆಸುತ್ತಾನೆ.
ಆತನಿಗೆ ಪಟ್ಟಾಭಿಷೇಕದ ಅದ್ದೂರಿಯಿದೆ. ಆತ ದರ್ಬಾರು ನಡೆಸುತ್ತಾನೆ. ಆತ ಬಿರುದು- ಬಾವಲಿಗಳನ್ನು ನೀಡುತ್ತಾನೆ. ದಂಡನೆಗೆ ಗುರಿಪಡಿಸುತ್ತಾನೆ. ಮತ್ತು ತಪ್ಪಿತಸ್ಥರಿಗೆ ಕ್ಷಮೆಯನ್ನು ನೀಡುತ್ತಾನೆ. ಅಲ್ಲದೆ ಆತನಿಗೆ ವಿಶ್ಲೇಷಕರಿದ್ದಾರೆ. ಪರಿಷತ್ತುಗಳಿವೆ, ಕಾನೂನುಗಳಿವೆ, ನ್ಯಾಯಾಲಯಗಳೂ ಇವೆ ಇತರೆ ರಾಜ್ಯಗಳಲ್ಲಿರುವಂತೆಯೇ. ಆದರೆ ಎಲ್ಲವೂ ಸಣ್ಣ ಪ್ರಮಾಣದಲ್ಲಿವೆ ಅಷ್ಟೆ.

ಇಂಥ ಈ ರಾಜ್ಯದಲ್ಲಿ ಈಗ್ಗೆ ಕೆಲ ವರ್ಷಗಳ ಹಿಂದೆ ಈ ರಾಜನ ಪರಿಮಿತಿಯಲ್ಲಿ ಒಂದು ಕೊಲೆ ಅಪರಾಧ ನಡೆದುಬಿಟ್ಟಿತು. ವಾಸ್ತವವಾಗಿ ಈ ರಾಜ್ಯದ ಜನ ಶಾಂತಿಪ್ರಿಯರು ಮತ್ತು ಸಾವಧಾನದಿಂದದ್ದವರು, ಹಾಗಾಗಿ ಈ ರೀತಿಯ ಅಪರಾಧ ಹಿಂದೆಂದೂ ಅಲ್ಲಿ ನಡೆದೇ ಇರಲಿಲ್ಲ. ನ್ಯಾಯಾಧೀಶರು ತೀವ್ರ ಆಸಕ್ತಿಯಿಂದ ಒಂದೆಡೆ ಸೇರಿ ಈ ಕೇಸನ್ನು ತುಂಬಾ ನ್ಯಾಯಯುತ ವಿಧಾನದಲ್ಲಿ ನಿಭಾಯಿಸಿದರು. ಅಲ್ಲಿ ನ್ಯಾಯಧೀಶರಿದ್ದರು, ಪ್ರಾಸಿಕ್ಯೂಟರ್‍ಗಳು ಜ್ಯೂರಿಮನ್‍ಗಳು ಮತ್ತು ಬ್ಯಾರಿಯಸ್ಟರ್ ಗಳಿದ್ದರು. ದೀರ್ಘ ವಾದ-ವಿವಾದ, ಚರ್ಚೆಗಳ ನಂತರ ಕಾನೂನಿಗನುಗುಣವಾಗಿ ಅಪರಾಧಿಯ ತಲೆ ಕತ್ತರಿಸಬೇಕು ಎಂಬ ಶಿಕ್ಷೆ ನೀಡಲು ನಿರ್ಧರಿಸಲಾಯಿತು. ಅಲ್ಲಿಯ ತನಕ ಎಲ್ಲವೂ ಚೆನ್ನಾಗಿತ್ತು. ನಂತರ ಈ ಶಿಕ್ಷೆಯನ್ನು ರಾಜನ ಮುಂದೆ ಮಂಡಿಸಿದರು. ರಾಜ ಶಿಕ್ಷೆಯನ್ನು ಓದಿ ಅದನ್ನೇ ದೃಡಪಡಿಸಿದ. “ ಅವನು ನೇಣಿಗೆ ಅರ್ಹನಾಗಿದ್ದರೆ, ಅದನ್ನೇ ಮಾಡಿ” ಎಂದು ರಾಜ ಪುನರುಚ್ಚರಿಸಿದನು.

ಈ ವಿಷಯದಲ್ಲಿ ಇದ್ದ ಒಂದು ಅಡ್ಡಿಯೆಂದರೆ, ಅವರ ರಾಜ್ಯದಲ್ಲಿ ತಲೆ ಕತ್ತರಿಸಲುಬೇಕಾದ ಒಂದು ‘ಗಿಲೋಟಿನ್’ ಯಂತ್ರವಾಗಲೀ ಮತ್ತು ಅದನ್ನು ಜಾರಿಗೊಳಿಸುವ ತಲೆಗಡಿಕ (ವಧಾಕಾರ) ನಾಗಲೀ ಇರಲಿಲ್ಲ. ಇದನ್ನು ಮನಗಂಡ ಮಂತ್ರಿಗಳು, ಒಂದು ಗಿಲೋಟಿನ್ ಯಂತ್ರ ಮತ್ತು ಅದನ್ನು ಬಳಸಲು ಗೊತ್ತಿರುವ ನಿಪುಣನೊಬ್ಬನನ್ನು ಒದಗಿಸಲು ಸಾಧ್ಯವಾಗಲೆಂದು ಕೇಳಿ ಫ್ರಾನ್ಸ್ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಿದರು. ಹಾಗೂ ಒದಗಿಸುವುದಾದರೋ ಯಂತ್ರ ಮತ್ತು ಆ ನಿಪುಣನನ್ನು ಸೇರಿ ಎಷ್ಟು ಹಣ ಭರಿಸಬೇಕು ಎಂಬುದನ್ನು ಕೇಳಿ ಪತ್ರ ಬರೆಯಿಲಾಯಿತು. ಒಂದು ವಾರದ ನಂತರ ಅವರಿಗ ಫ್ರಾನ್ಸ್‍ನಿಂದ ಉತ್ತರ ಬಂತು : “ನಾವು ಒಂದು ಯಂತ್ರ ಮತ್ತು ಓರ್ವ ನಿಪುಣ (ತಲೆಗಡುಕ)ನನ್ನು ಕಳುಹಿಸುತ್ತೇವೆ, ಮತ್ತು ಅದರ ವೆಚ್ಚ 16,000, ಫ್ರಾಂಕ್ಸ್‍ಗಳು”. ಈ ವಿಷಯವನ್ನು ರಾಜನ ಮುಂದೆ ಪ್ರಸ್ತಾಪಿಸಲಾಯಿತು. ದೀರ್ಘವಾಗಿ ಯೋಚಿಸಿದ ರಾಜ ಹೇಳಿದ” “ 16,000 ಫ್ರಾಂಕ್ಸ್!? ಈ ಪಾಪಿಗೆ ಅಷ್ಟು ಹಣ ವ್ಯಯಿಸುವ ಯೋಗ್ಯತೆಯಿಲ್ಲ. ಇದನ್ನು ಇನ್ನೂ ಸ್ವಲ್ಪ ಕಡಿಮೆ ಹಣದಲ್ಲಿ ಮಾಡಲು ಸಾಧ್ಯವೆ? ಯಾಕೆ 16000 ಫ್ರಾಂಕ್ಸ್ ಬೇಕು ? ಮತ್ತು ಇದನ್ನು ಕಾರ್ಯಗತ ಮಾಡಲು ಇಡೀ ಜನಸಂಖ್ಯೆಯ ಮೇಲೆ ಎರಡಕ್ಕಿಂತ ಹೆಚ್ಚಿನ ಫ್ರಾಂಕ್ಸ್‍ನಷ್ಟು ಹೆಚ್ಚುವರಿ ತೆರಿಗೆ ಹಾಕಬೇಕೆ? ಅದನ್ನು ಜನ ಖಂಡಿತ ಸಹಿಸುವುದಿಲ್ಲ. ಮತ್ತು ಇದರಿಂದ ಜನ ದಂಗೆ ಏಳಲೂಬಹುದು”.

ಇದರ ಬಗ್ಗೆ ನಿರ್ಧರಿಸಲು ಒಂದು ‘ಮಂತ್ರಾಲೋಚನ ಸಭೆ’ (ಕೌನ್ಸಿಲ್)ಯನ್ನು ಕರೆಯಲಾಯಿತು ಮತ್ತು ಅಲ್ಲಿ ಫ್ರಾನ್ಸ್‍ಗೆ ಕೇಳಿದ ರೀತಿಯಲ್ಲೇ ಇಟಲಿಯ ಮುಂದೆ ಇಂಥದ್ದೇ ಒಂದು ಬೇಡಿಕೆ ಇಡಬೇಕೆಂದು ನಿರ್ಧರಿಸಲಾಯಿತು. ಫ್ರೆಂಚ್ ಸರ್ಕಾರ ಗಣತಂತ್ರ ವ್ಯವಸ್ಥೆ ಹೊಂದಿದ್ದು, ಅದಕ್ಕೆ ರಾಜನ ಬಗ್ಗೆ ಸೂಕ್ತ ಗೌರವವಿಲ್ಲ ಆದರೆ ಇಟಲಿಯಲ್ಲಿ ಇನ್ನೂ ರಾಜ ಪ್ರಭುತ್ವವಿರುವುದರಿಂದ ಮತ್ತು ಇಟಲಿಯು ಮೊನಾಕೋಗೆ ಸಹೋದರ ರಾಜ್ಯವಾಗಿರುವುದರಿಂದ ಈ ಬೇಡಿಕೆಯನ್ನು ಇಟಲಿಯು ಕಡಿಮೆ ವೆಚ್ಚದಲ್ಲಿ ಈಡೇರಿಸಬಹುದುದೆಂದು ನಂಬಿ ಇಟಲಿಗೆ ಪತ್ರ ಬರೆಯಲಾಯಿತು. ಮತ್ತು ಇಟಲಿಯಿಂದ ಅಷ್ಟೇ ಪ್ರಮಾಣಿಕವಾದ ಉತ್ತರವೂ ಬಂತು.

‘ಇಟಲಿಯ ಸರ್ಕಾರ’ವು ಒಂದು ‘ಗಿಲೋಟಿನ್ ಮತ್ತು ಓರ್ವ ನಿಪುಣ’ನನ್ನು ಕಳಿಸಿಕೊಡಲು ತಾನು ಖುಷಿಯಿಂದ ಒಪ್ಪಿಕೊಂಡಿರುವುದಾಗಿಯೂ ಮತ್ತು (ಸಾಗಾಣಿಕೆ) ಪ್ರಯಾಣ ವೆಚ್ಚವನ್ನೂ ಸೇರಿ 12000 ಫ್ರಾಂಕ್‍ಗಳನ್ನು ಇದಕ್ಕಾಗಿ ಭರಿಸಬೇಕು’ ಎಂದು ಪತ್ರ ಬರೆಯಿತು. ಇದು ಅಗ್ಗವಾಗಿದ್ದರೂ ತುಂಬಾ ಹೆಚ್ಚೇ ಆಗಿರುವಂತೆ ಕಾಣಿಸಿತು. ಆದರೆ ಈ ರ್ಯಾಸ್ಕಲ್‍ಗೆ ಇಷ್ಟು ಹಣ ಖರ್ಚು ಮಾಡುವುದು ನಿಷ್ಪ್ರಯೋಜಕ. ಈ ಬೇಡಿಕೆ ಪ್ರಕಾರ ಹೋದರೂ ಮತ್ತೆ ಜನರ ಮೇಲೆ 2 ಫ್ರಾಂಕ್ಸ್ ಹೆಚ್ಚು ತೆರಿಗೆ ಹೇರಬೇಕು. ಹಾಗಾಗಿ ಇದನ್ನು ನಿರ್ಧರಿಸಲು ಮತ್ತೊಂದು ಮಂತ್ರಾಲೋಚನಾ ಸಭೆ ಕರೆಯಲಾಯಿತು. ಅಲ್ಲಿ ಚರ್ಚಿಸಲಾಯಿತು. ಮತ್ತು ಹೇಗೆ ಈ ಶಿಕ್ಷೆಯನ್ನು ಅತೀ ಕಡಿಮೆ ವೆಚ್ಚದಲ್ಲಿ ಜಾರಿಗೊಳಿಸುವುದು ಎಂದು ಪರಿಗಣಿಸಲಾಯಿತು.

 

ಯಾರಾದರೊಬ್ಬ ಸೈನಿಕ ಈ ತಲೆ ಕತ್ತರಿಸುವ ಕೆಲಸವನ್ನು ಅತೀ ಸರಳವಾಗಿ ಮತ್ತು ಕಠೋರವಾಗಿ ಮಾಡಬಲ್ಲನೆ? ತಿಳಿಯಲಿಕ್ಕಾಗಿ ಸೇನಾಧಿಪತಿನ್ನು ಕರೆಸಲಾಯಿತು. ಅವನನ್ನು ಕುರಿತು ಹೀಗೆ ಕೇಳಲಾಯಿತು: “ಓರ್ವ ಅಪರಾಧಿಯ ತಲೆಯನ್ನು ತುಂಡರಿಸುವ ಸೈನಿಕನೊಬ್ಬನನ್ನು ಪತ್ತೆ ಮಾಡಲು ನಿಮ್ಮಿಂದ ಸಾಧ್ಯವಿಲ್ಲವೇ? ಯುದ್ಧದಲ್ಲಿ ಜನರನ್ನು ಕೊಲ್ಲುವುದೇ ಅವರ ಕಾಯಕ ತಾನೆ? ಹಾಗೆ ನೋಡಿದರೆ ಅದಕ್ಕಾಗಿಯೇ ಅವರಿಗೆ ತರಬೇತಿಯನ್ನು ನೀಡಿಲ್ಲವೆ?” ಸೇನಾಧಿಪತಿ ತನ್ನ ಅರವತ್ತು ಜನರ ಸೈನ್ಯದೊಡನೆ ಸಮಾಲೋಚಿಸಿದ, ಯಾರಾದರೊಬ್ಬ ಇದನ್ನು ಮಾಡಬಲ್ಲನೆ ಎಂದು. ಆದರೆ ಸೈನಿಕರು ಹೇಳಿದರು. “ಸಾಧ್ಯವಿಲ್ಲ. ಈ ಕೆಲಸ ನಮ್ಮಿಂದ ಸಾಧ್ಯವಿಲ್ಲ. ಇದನ್ನು ಹೇಗೆ ಮಾಡುವುದೆಂದು ನಮಗೆ ತಿಳಿದಿಲ್ಲ. ಇಂಥ ಕೆಲಸ ಮಾಡಲು ನಮಗೆ ಯಾವುದೇ ತರಬೇತಿಯನ್ನು ನೀಡಿಲ್ಲ. ಈ ರೀತಿ ಕೊಲ್ಲುವುದು ನಮ್ಮ ಕರ್ತವ್ಯದ ಭಾಗವಂತು ಅಲ್ಲವೇ ಅಲ್ಲ.”
ಮುಂದೇನು ಮಾಡುವುದು? ಮತ್ತೆ ಮಂತ್ರಿಗಳು ಪರಿಶೀಲಿಸಿ,ಮರುಪರಿಶೀಲಿಸಿದರು. ಅದಕ್ಕಾಗಿ ಒಂದು ‘ಆಯೋಗ ರಚನೆಯಾಯಿತು’ ಸಮಿತಿ-ಉಪ-ಸಮಿತಿಗಳನ್ನು ರಚಿಸಲಾಯಿತು. ಎಲ್ಲರೂ ಸೇರಿ ಚರ್ಚೆ ಮಾಡಿ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸುವುದು ಒಳಿತೆಂದು ತೀರ್ಮಾನಿಸಲಾಯಿತು. ಇದರಿಂದ ಎರಡು ಪ್ರಯೋಜನಗಳನ್ನು ಆಯೋಗ ಗುರುತಿಸಿತ್ತು. ಒಂದು ರಾಜ ಕರುಣಾಮಯಿ ಎಂದು ಸಾರುವುದು ಮತ್ತೊಂದು ಕಡಿಮೆ ವೆಚ್ಚದಲ್ಲಿ ಶಿಕ್ಷೆಯನ್ನು ಜಾರಿಗೊಳಿಸುವುದು.

ಇದಕ್ಕೆ ರಾಜನು ಒಪ್ಪಿಯಾಯಿತು ಹಾಗಾಗಿ ವಿಷಯ ಸಮಾಪ್ತಿಯಾದಂತಾಯಿತು. ಈಗ ಬಂದ ಮತ್ತೊಂದು ಸಮಸ್ಯೆಯೆಂದರೆ, ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿಯೋರ್ವನನ್ನು ಬಂಧಿಸಿಡಲು ಸೂಕ್ತವಾದ ಸೆರೆಮನೆ ಇಡೀ ರಾಜ್ಯದಲ್ಲಿರಲಿಲ್ಲ. ತಾತ್ಕಾಲಿಕವಾಗಿ ಸಣ್ಣಪುಟ್ಟ ಅಪರಾಧಿಗಳನ್ನು ತಂದಿಡುವ ಒಂದು ಲಾಕಪ್ ಇತ್ತೇ ಹೊರತು ಶಾಶ್ವತವಾದ ಸೆರೆಮನೆಯಾಗಿ ಬಳಸಿಕೊಳ್ಳಬಹುದಾದ ಬಂದೀಖಾನೆ ಇರಲಿಲ್ಲ. ಅಂತೂ ಇಂತೂ ಇದಕ್ಕೆ ಸೂಕ್ತವಾದ ಸ್ಥಳವೊಂದನ್ನು ಪತ್ತೆ ಮಾಡಿ ಆ ಯುವ ಅಪರಾಧಿಯನ್ನು ಅದರಲ್ಲಿರಿಸಿ, ಅವನನ್ನು ಕಾಯಲು ಓರ್ವ ಗಾರ್ಡ್‍ನನ್ನು ನೇಮಿಸಿಲಾಯಿತು. ಅಪರಾಧಿಯನ್ನು ಕಾವಲು ಕಾಯುವುದು ಮತ್ತು ಅವನಿಗೆ ಅರಮನೆಯ ಅಡುಗೆ ಮನೆಯಿಂದ ಆಹಾರ ತಂದುಕೊಡುವುದು ಆ ಗಾರ್ಡ್‍ನ ಕೆಲಸವಾಗಿತ್ತು.

ಈ ಖೈದಿ ಬಂದೀಖಾನೆಯೊಳಗೆ ಕಾಲ ಕಳೆಯುತ್ತ ಒಂದು ವರ್ಷ ಮುಗಿದೇ ಹೋಯ್ತು. ತದನಂತರ ಒಂದು ದಿನ ರಾಜ ತನ್ನ ಬೊಕ್ಕಸದ ಆದಾಯ ಮತ್ತು ಖರ್ಚುಗಳ ವಿವರಗಳನ್ನು ಪರಿಶೀಲಿಸುತ್ತಿರುವಾಗ ಒಂದು ಹೊಸ ಖರ್ಚಿನ ಬಾಬ್ತು ಅದರಲ್ಲಿ ಕಾಣಿಸಿತು. ಮತ್ತು ಅದು ಆ ಖೈದಿಯನ್ನು ನೋಡಿಕೊಳ್ಳಲು ತಗುಲಿದ ವೆಚ್ಚಾಗಿತ್ತು ಹಾಗೂ ಉಪೇಕ್ಷೆ ಮಾಡುವಷ್ಟು ಚಿಕ್ಕದಾದ ಮೊತ್ತವೂ ಆದಾಗಿರಲಿಲ್ಲ. ಓರ್ವ ವಿಶೇಷ ಗಾರ್ಡ್, ಮತ್ತು ಖೈದಿಯ ಆಹಾರಕ್ಕಾಗಿ ವ್ಯಯಿಸಿದ ಮೊತ್ತ ಸೇರಿ ವಾರ್ಷಿಕ 600 ಫ್ರಾಂಕ್ಸ್‍ಗಳಿಗಿಂತ ಅಧಿಕವಾಗಿತ್ತು. ಅದಕ್ಕಿಂತ ದೊಡ್ಡ ಸಮಸ್ಯೆಯೆಂದರೆ ಆತ ಇನ್ನೂ ಚಿರಯುವಕನಾಗಿದ್ದು, ಆರೋಗ್ಯಯುತವಾಗಿದ್ದ ಮತ್ತು 50 ವರ್ಷಗಳವರೆಗೆ ನಿರಾಳವಾಗಿ ಬದುಕಿರುವವನಾಗಿದ್ದ. ಅಷ್ಟು ವರ್ಷಗಳವರೆಗೆ ಅವನಿಗೆ ವ್ಯಯಿಸಬೇಕಾದ ಹಣವನ್ನು ಲೆಕ್ಕಹಾಕಲಾಗಿ ಇದು ಅತೀ ಗಂಭೀರ ವಿಷಯ ಎಂಬುದು ತಿಳಿಯಿತು. ಹಾಗಾಗಿ ರಾಜ ತನ್ನ ಮಂತ್ರಿಗಳನ್ನು ಸಭೆ ಕರೆದು ಹೀಗೆ ಹೇಳಿದ: “ ಈ ರಾಸ್ಕಲ್‍ನನ್ನು ನಿಭಾಯಿಸುವ ಒಂದು ಕಡಿಮೆ ವೆಚ್ಚದ ವಿಧಾನವನ್ನು ನೀವು ಕೊಂಡಕೊಳ್ಳಲೇಬೇಕು”.

ಅದರಂತೆಯೇ ಮಂತ್ರಿಗಳು ಸಭೆ ಸೇರಿದರು. ಪರಿಶೀಲಿಸಿದರು. ಪುನರ್ ಪರಿಶೀಲಿಸಿದರು ಕೊನೆಗೊಬ್ಬ ಮಂತ್ರಿ ಹೇಳಿದ: “ಸಭ್ಯರೇ, ನನ್ನ ಅಭಿಪ್ರಾಯದಲ್ಲಿ ಆ ಗಾರ್ಡ್‍ನನ್ನು ನಾವು ವಜಾ ಮಾಡಬೇಕು” ಅದಕ್ಕೆ ತಕ್ಷಣ ಮತ್ತೊರ್ವ ಮಂತ್ರಿ ಹೇಳಿದ: “ ಆಗ ಅಪರಾಧಿ ಸುಲಭವಾಗಿ ಪರಾರಿಯಾಗುತ್ತಾನೆ”. ಇದಕ್ಕೆ ಮೊದಲನೆಯ ಮಂತ್ರಿ ಹೀಗೆ ಹೇಳಿದ; “ಹೌದು, ಅವನು ಓಡಿ ಹೋಗಲಿ, ಎಲ್ಲಾದರು ಹೋಗಿ ಸಾಯಲಿ ಬಿಡಿ!”. ಇದೇ ನಿರ್ಧಾರವನ್ನು ತಮ್ಮ ರಾಜನಿಗೂ ಅವರು ತಿಳಿಸಿದರು. ನಿಯೋಗದ ಈ ನಿರ್ಧಾರಕ್ಕೆ ರಾಜನೂ ಸಮ್ಮತಿಸಿದ. ಅಂತೆಯೇ ಗಾರ್ಡ್‍ನನ್ನು ಸೇವೆಯಿಂದ ವಜಾಗೊಳಿಸಲಾಯಿತು ಮತ್ತು ಎಲ್ಲರೂ ಕುತುಹೂಲದಿಂದ ಏನಾಗಬಹುದೆಂದು ನೋಡುತ್ತಾ ಕಾದು ಕುಳಿತರು.

ಆದರೆ ನಡೆದದ್ದೇನು? ರಾತ್ರಿ ಊಟದ ಸಮಯದಲ್ಲಿ ಆ ಖೈದಿ ಸೆರೆಮನೆಯಿಂದ ಹೊರಗೆ ಬಂದ. ಗಾರ್ಡ್ ಇಲ್ಲದ್ದನ್ನು ಮನಗಂಡು ತಾನೇ ನೇರವಾಗಿ ರಾಜನ ಅರಮನೆಯ ಅಡುಗೆಮನೆಗೆ ಹೋದ. ಆತನಿಗೆ ಮೀಸಲಾಗಿದ್ದಷ್ಟು ಆಹಾರವನ್ನು ಸೇವಿಸಿದ ಮತ್ತೆ ಸೆರೆಮನೆಗೆ ವಾಪಸ್ಸಾದ. ತನ್ನ ಬಂಧಿಸಿಟ್ಟಿದ್ದ ಕೊಠಡಿಯೊಳಗೆ ಹೋಗಿ ತಾನೇ ಬಾಗಿಲನ್ನು ಹಾಕಿಕೊಂಡ ಮತ್ತು ಎಂದಿನಂತೆ ಒಳಗೆ ಉಳಿದ. ಇದೇ ಮರುದಿನವೂ ಮುಂದುವರಿಯಿತು. ಕರಾರುವಕ್ಕಾದ ಸಮಯಕ್ಕೆ ಊಟಕ್ಕೆ ಹೋಗಿ ಬಂದು ಮತ್ತೆ ಜೈಲಿನೊಳಗೆ ಸೇರಿಕೊಂಡ. ಆದರೆ ಅಲ್ಲಿಂದ ಓಡಿ ಹೋಗುವ ಅಥವಾ ತಪ್ಪಿಸಿಕೊಳ್ಳುವಂತಹ ಯಾವ ಸಣ್ಣ ಸುಳಿವೊಂದನ್ನು ಆತ ನೀಡಲಿಲ್ಲ. ಮುಂದೇನು ಮಾಡಬಹುದಿತ್ತು ಅವರು ? ಈ ವಿಷಯವನ್ನು ಮತ್ತೆ ಪರಿಶೀಲಿಸಿದರು.

“ನಾವು ಅವನಿಗೆ ನೇರವಾಗಿ ಹೇಳಿಬಿಡಬೇಕು ಏನೆಂದರೆ: “ನಿನ್ನನ್ನು ಜೈಲಿನಲ್ಲಿಟ್ಟುಕೊಳ್ಳುವುದು ನಮಗೆ ಸುತರಾಂ ಬೇಕಿಲ್ಲ”. ಎಂದು ಅವರು ನಿರ್ಧರಿಸಿದರು. ಹಾಗೆಯೇ ನ್ಯಾಯದಾನ ಮಂತ್ರಿಯ ಮುಂದೆ ಆ ಅಪರಾಧಿಯನ್ನು ಹಾಜರುಪಡಿಸಲಾಯಿತು. ನ್ಯಾಯದಾನ (ಕಾನೂನು) ಮಂತ್ರಿ ಅವನನ್ನು ಕುರಿತು ಹೀಗೆ ಹೇಳಿದರು:-“ನೀನೇಕೆ ಈ ಜೈಲಿನಿಂದ ತಪ್ಪಿಸಿಕೊಳ್ಳುತ್ತಿಲ್ಲ? ನಿನ್ನನ್ನು ಕಾವಲು ಕಾಯಲು ಈಗ ಗಾರ್ಡ್ ಕೂಡ ಇಲ್ಲ. ನಿನಗೆ ಇಷ್ಟ ಬಂದಲ್ಲಿಗೆ ನೀನು ಓಡಿಹೋಗಬಹುದು. ಹಾಗೂ ರಾಜ ಕೂಡ ನೀನು ಓಡಿಹೋದರೆ ಖಂಡಿತ ತಲೆಕೆಡಿಸಿಕೊಳ್ಳವುದಿಲ್ಲ ಮತ್ತೆ ಹುಡುಕಿಸುವುದೂ ಇಲ್ಲ.”

ಇದಕ್ಕೆ ಆ ಅಪರಾಧಿ ನೀಡಿದ ಸುಧೀರ್ಘ ಉತ್ತರ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಆತ ಹೇಳಿದ:- “ ರಾಜ ನನ್ನ ನಾಪತ್ತೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದು ನನಗೆ ಧೈರ್ಯವನ್ನೇನೋ ನೀಡುತ್ತದೆ. ಆದರೆ ನನಗೆ ಹೋಗಲೇಬೇಕಾದ ಯಾವ ಸ್ಥಳಗಳು ಇಲ್ಲ. ಹೋಗಿ ನಾನು ಮಾಡುವುದಾದರೂ ಏನು? ನೀವು ನನಗೆ ವಿಧಿಸಿದ ಶಿಕ್ಷೆಯಿಂದಾಗಿ ನನ್ನ ವ್ಯಕ್ತಿತ್ವವೇ ಹಾಳಾಯ್ತು. ಹಾಗೂ ಈಗ ಎಲ್ಲರೂ ನನ್ನ ಕಂಡು ಮೂಗು ಮುರಿಯುತ್ತಾರೆಯೇ ಹೊರತು ಯಾರೂ ಸ್ವಾಗತಿಸುವುದಿಲ್ಲ. ಅಲ್ಲದೆ ನನಗೆ ಈಗ ಕೆಲಸ ಮಾಡುವುದೇ ಮರೆತು ಹೋದಂತಾಗಿದೆ. ನೀವು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದೀರಿ. ಇದು ಸರಿಯಲ್ಲ ಮೊದಲನೆಯದಾಗಿ ನೀವು ನನಗೆ ಮರಣದಂಡನೆ ವಿಧಿಸಿದ ಮೇಲೆ ನನ್ನನ್ನು ಸಾಯಿಸಬೇಕಿತ್ತು. ಆದರೆ ನೀವದನ್ನು ಮಾಡಲಿಲ್ಲ. ಆದರೆ ನಾನದರ ಬಗ್ಗೆ ನಿಮ್ಮನ್ನು ದೂರಲಿಲ್ಲ. ಆನಂತರ ನೀವೇನು ಮಾಡಿದಿರಿ? ನನ್ನನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಿದಿರಿ. ನನಗೆ ಊಟ ತಿಂಡಿ ತಂದುಕೊಡಲು ಓರ್ವ ಗಾರ್ಡ್‍ನನ್ನು ನೇಮಿಸಿದಿರಿ. ಆದರೆ ಕೆಲ ದಿನಗಳ ನಂತರ ಅವನನ್ನೂ ಕಿತ್ತುಕೊಂಡಿರಿ. ಆಗ ನಾನೇ ಅರಮನೆವರೆಗೆ ಹೋಗಿ ನನ್ನ ಊಟವನ್ನು ತಂದುಕೊಳ್ಳಬೇಕಾಯಿತು. ಆಗಲೂ ನಾನು ನಿಮ್ಮನ್ನು ದೂರಲಿಲ್ಲ. ಆದರೆ ಈಗ ನಾನು ಜೈಲಿಂದ ಹೊರಹೋಗಬೇಕೆಂದು ನೀವು ಬಯಸುತ್ತಿದ್ದೀರಲ್ಲವೇ? ಕ್ಷಮಿಸಿ ಇದನ್ನು ನಾನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ನಿಮ್ಮ ಮನಸ್ಸಿಗೆ ಬಂದದ್ದನ್ನು ಮಾಡಿ ನಾನು ಮಾತ್ರ ಇಲ್ಲಿಂದ ಹೋಗಲು ಸಾಧ್ಯವಿಲ್ಲ.”

ಆಗೇನು ಮಾಡುವುದು? ಮತ್ತೊಮ್ಮೆ ಮಂತ್ರಾಲೋಚನಾ ಸಭೆ ಕರೆಯಲಾಯಿತು. ಈ ಮನುಷ್ಯನನ್ನು ನಿಭಾಯಿಸಲು ಯಾವ ಕ್ರಮವನ್ನು ಅನುಸರಿಸಬೇಕಿತ್ತು. ಆತ ಜೈಲಿನಿಂದ ಓಡಿಹೋಗಲು ಸಿದ್ಧನಿಲ್ಲ ! ಇದನ್ನು ಪರಾಮರ್ಶಿಸಿ ಮತ್ತೆ ಪರಿಗಣಿಸಿದರು. ಈ ಖೈದಿಯನ್ನು ಇಲ್ಲಿಂದ ಹೊರಹಾಕಲು ಇರುವ ಒಂದೇ ಮಾರ್ಗವೆಂದರೆ ಅವನಿಗೆ ಪಿಂಚಣಿ ನೀಡುವುದು ಎಂದು ನಿರ್ಧರಿಸಿದರು. ಅದನ್ನೇ ತಮ್ಮ ರಾಜನಿಗೂ ತಿಳಿಸಿದರು. “ಇದಕ್ಕಿಂತ ಬೇರೆ ಯಾವ ವಿಧಾನವೂ ಇಲ್ಲ. ನಾವು ಈತನನ್ನು ಹೇಗಾದರೂ ಮಾಡಿ ಇಲ್ಲಿಂದ ಸಾಗ ಹಾಕಲೇಬೇಕು” ಎಂದು ಮಂತ್ರಿಗಳು ಹೇಳಿದರು. ಆತನಿಗೆ ಕೊಡಲು ನಿರ್ಧರಿಸಿದ ಪಿಂಚಣಿಯ ಮೊತ್ತ 600 ಫ್ರಾಂಕ್ಸ್ ಆಗಿತ್ತು. ಮತ್ತು ಈ ವಿಷಯವನ್ನು ಆ ಖೈದಿಗೆ ತಿಳಿಸಲಾಯಿತು.

ಇದಕ್ಕೆ ಆತ ಪ್ರತಿಕ್ರಿಯಿಸಿದ್ದು ಹೀಗೆ; “ಓಕೆ, ನೀವು ನಿಯಮಿತವಾಗಿ ತಪ್ಪದೇ ನನಗೆ ಪಿಂಚಣಿಯನ್ನು ಪಾವತಿಸುವುದಾದರೆ ನನ್ನದೇನು ಅಭ್ಯಂತರವಿಲ್ಲ. ಆ ಷರತ್ತಿನ ಮೇಲೆ ಇಲ್ಲಿಂದ ಹೊರ ಹೋಗಲು ನಾನು ತಯಾರಿದ್ದೇನೆ” ಎಂದ. ಅಲ್ಲಿಗೆ ಈ ಸಮಸ್ಯೆ ಬಗೆಹರಿದಂತಾಯಿತು. ಆ ಖೈದಿ ತನ್ನ ವಾರ್ಷಿಕ ಪಿಂಚಣಿ ಮೊತ್ತದ ಮೂರನೇ ಒಂದು ಭಾಗವನ್ನು ಮುಂಗಡವಾಗಿ ಪಡೆದು ರಾಜನ ಆಡಳಿತ ಪರಿಮಿತಿಯನ್ನು ಬಿಟ್ಟು ಹೊರಹೋಗುವುದಾಗಿ ಹೇಳಿದ. ಅಂತೆಯೇ ನಡೆದುಕೊಂಡ ರೈಲಿನಲ್ಲಿ ಹೋದರೆ ಕಾಲು ತಾಸು ಪ್ರಯಾಣ ಮಾಡಬೇಕಾದ ಜಾಗಕ್ಕೆ ಆತ ವಲಸೆ ಹೋದ. ತನ್ನ ರಾಜ್ಯದ ಗಡಿಭಾಗದಲ್ಲಿ ಒಂದಷ್ಟು ಜಮೀನು ಕೊಂಡು ತೋಟಗಾರಿಕೆ ಕೆಲಸ ಮಾಡಲಾರಂಭಿಸಿದ ಮತ್ತು ಈಗ ಆತ ಆರಾಮದ ಜೀವನ ನಡೆಸುತ್ತಿದ್ದಾನೆ. ಸರಿಯಾದ ಸಮಯಕ್ಕೆ ತನ್ನ ಪಿಂಚಣಿ ಹಣ ಪಡೆಯಲು ಅರಮನೆಗೆ ಹೋಗುತ್ತಾನೆ. ಹಣ ಪಡೆದು ನೇರವಾಗಿ ಜೂಜಿನ ಟೇಬಲ್‍ಗಳಿಗೆ ಹೋಗಿ ಎರಡು ಅಥವ ಮೂರು ಫ್ರಾಂಕ್ಸ್‍ಗಳನ್ನು ಪಣಕ್ಕಿಡುತ್ತಾನೆ. ಕೆಲವೊಮ್ಮೆ ಗೆಲ್ಲುತ್ತಾನೆ ಮತ್ತೆ ಕೆಲವೊಮ್ಮೆ ಸೋಲುತ್ತಾನೆ ಮತ್ತು ಮನೆಗೆ ಹಿಂತಿರುಗುತ್ತಾನೆ. ಶಾಂತಿಯುತ ಮತ್ತು ಸುಂದರವಾದ ಬದುಕು ನಡೆಸುತ್ತಿದ್ದಾನೆ.

ಈತನ ಕೇಸಿನಲ್ಲಿ ಸಮಾಧಾನದ ವಿಷಯವೆಂದರೆ, ಆತ ಅಪರಾಧಿಯೊಬ್ಬನ ತಲೆ ಕತ್ತರಿಸುವ ಅಥವಾ ಜೀವಾವಧಿ ಜೈಲಿನಲ್ಲಿಡಲು ತಗಲುವ ವೆಚ್ಚದ ಬಗ್ಗೆ ಲೆಕ್ಕಹಾಕದೇ ಇರುವ ದೇಶ (ರಾಜ್ಯ) ದಲ್ಲಿ ಹುಟ್ಟಲಿಲ್ಲ ಎಂಬುದು.

‍ಲೇಖಕರು admin

June 16, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Vaanee Suresh.

    ಎಷ್ಟು ಸರಳವಾದ ಚೆಂದದ ಕಥೆ! ಕನ್ನಡಿಸಿದಕ್ಕಾಗಿ ಥ್ಯಾಂಕ್ಸ್.
    ಓದಿ ತುಂಬಾ ಖುಷಿಯಾಯ್ತು!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: