ಜಿ ಕೃಷ್ಣಪ್ರಸಾದ್ ಕೊರೊನಾ ಪ್ರವಾಸ ಕಥನ: ‘ಕೊರೊನಾದ ಯಾವ ಲಕ್ಷಣವೂ ಕಾಣ್ತಿಲ್ಲ. ಹುಷಾರಾಗಿ ಇದಾರೆ’

ಜಿ ಕೃಷ್ಣಪ್ರಸಾದ್

ತೇಜಪುರ್ ಏರ್ ಪೋರ್ಟ್ ಕ್ರಾಸ್ ನಲ್ಲಿ ನನ್ನನ್ನು ಕೆಳದಬ್ಬಿದ ಬಸ್ ಮುಂದೋಡಿತು.

‘ಎರಡೇ ಘಂಟೆ. ನಿಮ್ಮನ್ನು ಏರ್ಪೋರ್ಟ್ ಬಳಿ ಬಿಡ್ತೀನಿ. ಚಿಂತೆ ಬೇಡ ಬನ್ನಿ’ ಎಂದು ಅಸ್ಸಾಂನ ವಿಶ್ವನಾಥ್ ಚರೋಲಿ ಪಟ್ಟಣದಲ್ಲಿ ನನ್ನನ್ನು  ಬಸ್ ಗೆ ಹತ್ತಿಸಿಕೊಂಡಿದ್ದ ಕಂಡಕ್ಟರ್ ಮೂರು ಘಂಟೆ ಐದು ನಿಮಿಷದ ನಂತರ ನನ್ನನ್ನು ಹೊರದಬ್ಬಿದ್ದ. ಗುವಾಹಟಿ ಹೋಗುವ ವಿಮಾನ ಹಿಡಿಯಲು ಕೇವಲ ನಲವತ್ತು ನಿಮಿಷ ಬಾಕಿ ಇತ್ತು!.

ಸುತ್ತ ಒಂದು ನರಪಿಳ್ಳೆಯೂ ಇಲ್ಲ. ಏರ್ಪೋರ್ಟ್ ಎದುರೇ ಇರುವಂತೆ  ಕಾಣುತ್ತಿದ್ದರೂ, ‘ವಿಮಾನ ನಿಲ್ದಾಣ 1.5 ಕಿಮೀ ‘ ಎಂಬ ಬೋರ್ಡ್ ಕಣ್ಣಿಗೆ ರಾಚುತ್ತಿತ್ತು. ಲಗೇಜ್ ಹೊತ್ತು ಅಷ್ಟು ದೂರ ನಡೆದು ಹೋಗುವುದು ಸಾಧ್ಯವೇ ಇರಲಿಲ್ಲ. ವಿಳಂಬವಾದರೇ ವಿಮಾನ ತಪ್ಪುವ ಆತಂಕ. ಬೇರೆ ದಾರಿ ಕಾಣದೆ, ಸೂಟ್ ಕೇಸ್  ಎಳೆಯುತ್ತಾ ನಡೆಯಲು ಶುರುಮಾಡಿದೆ. ಸ್ವಲ್ಪ ದೂರ ನಡೆದಿರಬೇಕು. ಮೋಟಾರ್ ಬೈಕೊಂದು ಅದೇ ರಸ್ತೆಯಲ್ಲಿ ಬಂತು. ಕೈ ಅಡ್ಡ ಹಿಡಿದು ಲಿಫ್ಟ್ ಕೇಳಿದೆ. ಪುಣ್ಯಕ್ಕೆ ಬೈಕ್ ಸವಾರ ನಿಲ್ಲಿಸಿ, ನನ್ನನ್ನು ಹತ್ತಿಸಿಕೊಂಡ. ಯಾವೂರು? ಎಲ್ಲಿಗೆ ಹೋಗ್ತಿದ್ದಿರಾ? ಎಂದೆಲ್ಲ ವಿಚಾರಿಸಿದ. ‘ ಚೆನ್ನೈ ಮೂಲಕ ಮೈಸೂರು ಹೋಗ್ತಿದ್ದಿನಿ’  ಎಂದೆ. ಹೊಂಡಗಳೇ ತುಂಬಿದ ಆ ರಸ್ತೆಯಲ್ಲಿ ನನ್ನ ಲಗೇಜಿನ ಸಮೇತ ಜೋಕಾಲಿಯಾಡುತ್ತಾ ಐದೇ ನಿಮಿಷಗಳೊಳಗೆ ಏರ್ಪೋರ್ಟ್ ತಲುಪಿದೆ. ಬೈಕ್ ಸವಾರನಿಗೆ ಥ್ಯಾಂಕ್ಸ್ ಹೇಳಿ  ನಿರ್ಗಮನ ಗೇಟ್ ನತ್ತ ದೌಡಾಯಿಸಿದೆ.

ಖಾಲಿ ಹೊಡೆಯುತ್ತಿದ್ದ ವಿಮಾನ ನಿಲ್ದಾಣದಲ್ಲಿ, ನಾನು ಬರುವುದನ್ನೇ ಕಾಯುತ್ತಿದ್ದ ಸ್ವಾಗತಕಾರಿಣಿ ನನ್ನ ಲಗೇಜ್ ಸಮೇತ ಸ್ಕ್ಯಾನಿಂಗ್ ಟೇಬಲ್ ಗೆ ಕರೆದೊಯ್ದಳು. ಅಲ್ಲಿ ಇದ್ದದ್ದೇ ಐದಾರು ಮಂದಿ ಪ್ರಯಾಣಿಕರು. ವಿಮಾನ ಹೊರಡುವ ಸಮಯ ಹತ್ತಿರವಾದರೂ ಯಾರಲ್ಲೂ ಧಾವಂತವಿಲ್ಲ. ನನ್ನ ಮುಂದಿದ್ದ ಕುಟುಂಬವೊಂದು ಇಡೀ ಮನೆಯನ್ನೇ ಖಾಲಿ ಮಾಡಿಕೊಂಡು ಬಂದಂತೆ ಹತ್ತಾರು ಸೂಟ್ ಕೇಸ್ ತಂದಿದ್ದರು. ಅವರ ಲಗೇಜ್ ಗಳನ್ನೆಲ್ಲಾ ತೂಗಿ, ಲೇಬಲ್ ಹಚ್ಚಿ , ಟಿಕೇಟ್ ಕೊಡಲು ಸಾಕಷ್ಟು  ಸಮಯ ಬೇಕಿತ್ತು. ನನ್ನ ಸರದಿ ಸದ್ಯಕ್ಕೆ ಬರುವಂತೆ ಕಾಣದ್ದರಿಂದ, ಅಲ್ಲೇ ಇದ್ದ ಚೇರ್ ಮೇಲೆ ಒರಗಿ ನಿರಾಳವಾದೆ. ಮೊಬೈಲ್ ನಲ್ಲಿ ಮುಳುಗಿದೆ.

‘ಚನ್ನೈ ಪ್ಯಾಸೆಂಜರ್ ‘, ‘ ಚನ್ನೈ ಪ್ಯಾಸೆಂಜರ್’ ಎಂದು ಕೂಗುತ್ತಾ  ವಿಮಾನ ನಿಲ್ದಾಣದ ಭದ್ರತಾ ಆಧಿಕಾರಿಗಳು ಚೆಕ್ ಇನ್ ಕೌಂಟರ್ ಗೆ ಬಂದರು. ತಲೆ ಎತ್ತಿ ನೋಡುತ್ತೇನೆ,  ನನ್ನ ಕರೆದುಕೊಂಡು ಬಂದಿದ್ದ ಬೈಕ್ ಸವಾರ ನನ್ನತ್ತಲ್ಲೇ ಕೈ ಮಾಡಿ ತೋರುತ್ತಿದ್ದಾನೆ. ಅವರ ಹಿಂದೆ ಇಬ್ಬರು ನರ್ಸ್.  ಒಂದು ಕ್ಷಣ ನಾನೂ ತಬ್ಬಿಬ್ಬಾಗಿ ಎದ್ದು ನಿಂತೆ. ನರ್ಸೊಬ್ಬರು ನನ್ನ ಬಳಿ ಬಂದು ತಲೆ ಬಳಿ ಥರ್ಮಲ್ ಗನ್  ಹಿಡಿದರು‌. ಅವಾಗಲೇ ಗೊತ್ತಾದದ್ದು ಇದು ಕೊರೊನಾ ಕೃಪಾಕಟಾಕ್ಷವೆಂದು. ನನ್ನನ್ನು ಇಳಿಸಿದ ಬೈಕ್ ಸವಾರ ‘ಚೆನ್ನೈ ಪ್ರಯಾಣಿಕ ಬಂದಿದ್ದಾನೆ. ಕೊರೊನಾ ತಂದಿದ್ದಾನೆ’ ಎಂದು ಭದ್ರತಾ ಸಿಬ್ಬಂದಿಗೆ ಹೇಳಿರಬೇಕು. ಅವರು ನನ್ನ ಹುಡುಕಿ ಬಂದಿದ್ದಾರೆ. ಈ ಪ್ರಹಸನದ ನಡುವೆ ವಿಮಾನ ಅರ್ಧ ಘಂಟೆ ನಿಧಾನವಾಗಿ ಹೊರಟಿತು.

* * * * *

ಮಾರ್ಚ್ ಎರಡನೆಯ ವಾರ ಕೊರೊನಾ ಸಂಕಟ ಆಗಷ್ಟೇ ಶುರುವಾಗುತ್ತಿತ್ತು. ರಾಜಸ್ತಾನದಲ್ಲಿ ಬೀಜ ಸಂರಕ್ಷಕರ ತರಬೇತಿ ಕಾರ್ಯಾಗಾರವೊಂದು ನಿಗದಿಯಾಗಿದ್ದರಿಂದ, ನಾನು ಹೋಗಲೇಬೇಕಿತ್ತು. ಅಹಮದಾಬಾದ್ ಗೆ ಹೋಗಲು ಮಾರ್ಚ 12ರಂದು ಬೆಂಗಳೂರಿನ ವಿಮಾನ ನಲ್ದಾಣಕ್ಕೆ ಬಂದೆ. ಯಾವ ವಿಶೇಷ ಮುನ್ನೆಚ್ಚರಿಕೆಯೂ ಇಲ್ಲ. ಎಂದಿನಂತೆ ಅದೇ ಗದ್ದಲ. ಅದೇ ತರಾತುರಿ. ತುಂಬಿ ತುಳುಕುವ ವಿಮಾನ. ಅಲ್ಲೊಂದು ಇಲ್ಲೊಂದು ಮುಖಗವಸು ತೊಟ್ಟ ಮುಖಗಳು!.

ಅಹಮದಾಬಾದನಲ್ಲೂ ಮಾಮೂಲಿ. ವಿಶೇಷ ತಪಾಸಣೆ ಇರಲಿಲ್ಲ. ರಾಜಸ್ತಾನ ಹೋಗುವ ಬಸ್ ಮಾತ್ರ ಖಾಲಿ‌ಹೊಡೆಯುತ್ತಿತ್ತು. ಮುಂದಿನ ನಾಲ್ಕು ದಿನ ಕಾಡುಹಳ್ಳಿಗಳ ಸುತ್ತಾಟ. ಭಯಕ್ಕೆ ಕಾರಣವೇ ಇಲ್ಲ.

ಜನವರಿ 17 ಕ್ಕೆ ಗುವಾಹಟಿಗೆ ಹೋಗಲು ಟಿಕೇಟ್ ಬುಕ್ ಆಗಿತ್ತು. ಉದಯಪುರ ಮೂಲಕ ಅಹಮದಾಬಾದ್ ಹೋಗಿ ಅಲ್ಲಿಂದ ಗುವಾಹಟಿ ಹಾರಲು ಸಿದ್ದತೆ ನಡೆಸಿದ್ದೆ.

ಈ ನಡುವೆ ಕರೊನೋ ಪ್ರಕರಣಗಳು ಹೆಚ್ಚುತ್ತಿರುವ ಸುದ್ದಿ  ಟಿವಿಗಳಲ್ಲಿ ಬರುತ್ತಿರುವುದನ್ನು ಕಂಡು ಆತಂಕಗೊಂಡ ಮಡದಿ ಮತ್ತು ಮಗ  ಮೈಸೂರಿಗೆ ವಾಪಸ್ ಬರಲು ಒತ್ತಾಯಿಸಿದರು.

ಕೋಸು, ಹೂಕೋಸು, ಬ್ರಕೋಲಿ, ಲೆಟ್ಯೂಸ್ ನಂತ ಅಪರೂಪದ ಬೀಜಗಳ ಉತ್ಪಾದನೆ ಮಾಡುವ ಬೀಜದ ಫಾರಂ ನೋಡಲೆಂದು ನಾನು ಅಸ್ಸಾಂನ ವಿಶ್ವನಾಥ್ ಚರೋಲಿಗೆ ಹೋಗಬೇಕಿತ್ತು. ಈ ತೋಟದ ಮಾಲೀಕ, ಯುವ ರೈತ ನೀಲಂ ನನ್ನನ್ನು ಭೂತಾನ್ ಗಡಿಯ ಅರುಣಾಲ ಪ್ರದೇಶದ ‘ತವಾಂಗ್’ ಮತ್ತು ನಾಗಾಲ್ಯಾಂಡಿನ ಕೊಯಿಮಾಗೆ ಕರೆದೊಯ್ಯುವ  ಆಮಿಷ ಒಡ್ಡಿದ್ದ!.

ಹಗಲು ಬಿಸಿಲು ,ರಾತ್ರಿ ಮೈಕೊರೆಯುವ ಚಳಿಯ ಈ ಪ್ರದೇಶಗಳು Winter Vegetable  ಬೀಜೋತ್ಪಾದನೆಗೆ ಹೇಳಿಮಾಡಿಸಿದ ತಾಣಗಳು. ಇಲ್ಲಿ ನಮ್ಮ ಬೀಜೊತ್ಪಾದಕರ ಗುಂಪೊಂದನ್ನು ಆರಂಭಿಸುವ ಸಿದ್ದತೆಗಳು ಕಳೆದ ಆರು ತಿಂಗಳಿಂದ ನಡೆಯುತ್ತಿದ್ದವು. ಈ ಚಳಿಗಾಲ ಮುಗಿದರೆ ,ಇನ್ನೊಂದು ವರ್ಷ ಕಾಯಬೇಕಿತ್ತು. ಹಾಗಾಗಿ ನಾ ಅಸ್ಸಾಂ ಹೋಗಲೇ ಬೇಕಿತ್ತು.

ಇಷ್ಟೊತ್ತಿಗಾಗಲೇ ಕೊರನಾ ಭಯ ಸಾಂಕ್ರಾಮಿಕವಾಗುತ್ತಿತ್ತು. ಉದಯಪುರ- ಅಹಮದಾಬಾದ್ ಬಸ್ ನಲ್ಲಿ ನಾಲ್ಕೇ ಮಂದಿ ಪ್ರಯಾಣಿಕರು; ನನ್ನನ್ನೂ ಸೇರಿಸಿ!.  ಅಹಮದಾಬಾದ್ ಏರ್ಪೋರ್ಟ್ ನಲ್ಲಿ ಥರ್ಮಲ್ ಸ್ಕ್ಯಾನಿಂಗ್ ಸೇವೆ ಶುರುವಾಗಿತ್ತು. ಮನೆಗೆ ಹಿಂತಿರುವ ಧಾವಂತದಲ್ಲಿದ್ದ ಜನರಿಂದ ಗುವಾಹಟಿ  ವಿಮಾನವೂ ತುಂಬಿ ತುಳುಕುತ್ತಿತ್ತು.

ಬೆಂಗಳೂರು, ಅಹಮದಾಬಾದ್ ನಲ್ಲಿಲ್ಲದ ಕಟ್ಟುನಿಟ್ಟಿನ ತಪಾಸಣೆ  ಗುವಾಹಟಿಯಲ್ಲಿ ಕಂಡೆ. ವೈದ್ಯರುಗಳೇ ಖುದ್ದಾಗಿ ನಿಂತು ಗನ್ ಹಿಡಿದು ಪರೀಕ್ಷಿಸಿ, ಸುತ್ತಾಟದ ಪೂರ್ವೋತ್ತರಗಳ ಮಾಹಿತಿ ಕಲೆಹಾಕುತ್ತಿದ್ದರು. ಐಸೋಲೇಷನ್ ವಾರ್ಡ್ ಕೂಡ ಸಿದ್ದವಾಗಿತ್ತು.

ವಿಶ್ವನಾಥ್ ಚರೋಲಿ ಹೋಗುವ ರೈಲು ಮರುದಿನ ಇದ್ದುದರಿಂದ ನಾನು ಒಂದು ದಿನ ಗುವಾಹಟಿಯಲ್ಲಿ ಉಳಿಯಬೇಕಿತ್ತು. ಪಾಲ್ಥಾನ್ ಬಜಾರ್ ನ ಗಿಜಿಗುಡುವ ಜನಜಂಗುಳಿಯ ನಡುವೆ ನನ್ನ ಹೋಟೆಲ್. ಭಯದಲ್ಲೇ ಓಡಾಡುವಂತಾಯಿತು.

ಮಗ ಮತ್ತು ಮಡದಿಯ ಒತ್ತಾಯಕ್ಕೆ ಕಟ್ಟು ಬಿದ್ದು ಮಾಸ್ಕ್ , ಸ್ಯಾನಿಟೈಸರ್ ಖರೀದಿಸಿ ಇಟ್ಟುಕೊಂಡೆ. ಇವರ ಪೋನ್ ಕರೆಗಳಿಂದಾಗೇ  ಕೊರೊನಾ ಸೊಂಕಿನ ತೀವ್ರತೆ ನನ್ನ ಅರಿವಿಗೆ ಬಂದದ್ದು. ನನ್ನ ಸುತ್ತಾಟಗಳಲ್ಲಿ ಕೊರೊನಾವ ಮರೆತೇ ಬಿಟ್ಟಿದ್ದಿ.

ಅಂದು ರಾತ್ರಿ  ಗೆಳೆಯ ಅಲಕೇಷ್ ‘ನಾಗಾ ಕಿಚನ್ ‘ಗೆ ಕರೆದೊಯ್ದ. ನಾಗಾಲ್ಯಾಂಡ್ ನ ಗುಡ್ಡುಗಾಡು ಜನ ನಡೆಸುವ ಈ ರೆಸ್ಟೋರೆಂಟ್ ನಲ್ಲಿ ಬಿದಿರಿನ ಬೊಂಬಲ್ಲಿ ಬೇಯಿಸಿದ ಮೀನು ಸಿಗುತ್ತದೆ. ಹೋಟೆಲನ ಒಳಾಂಗಣವನ್ನು ಬಿಲ್ಲು ಬಾಣ, ಭರ್ಜಿ ಮೊದಲಾದ ಆಯುಧ ಮತ್ತು ಮುಖವಾಡಗಳಿಂದ ಶೃಂಗರಿಸಿದ್ದರು. ಹೊಸರುಚಿಯ ಊಟ ಚಪ್ಪರಿಸುವ ಅವಕಾಶ ಸಿಕ್ಕಿತು.

ರಾತ್ರಿ ಊಟದ ನಂತರ ಗುವಾಹಟಿಯ ದೀಪದ ಬೆಳಕಿಗೆ ಪ್ರತಿಫಲಿಸುವ ಬ್ರಹ್ಮಪುತ್ರ ನದಿ ನೋಡಿ ಬಂದೆವು.

ಎಲ್ಲೆಲ್ಲೂ ಚೈನೀಯರು!

ಮರುದಿನ ಮಧ್ಯಾಹ್ನ ವಿಶ್ವನಾಥ್  ಚರೋಲಿ ಹೋಗಲು ಗೌಹತಿಯ ರೈಲು ನಿಲ್ದಾಣಕ್ಕೆ ಬಂದವನಿಗೆ ಅಚ್ಚರಿ ಕಾದಿತ್ತು. ನಿಲ್ದಾಣದ ಆರಂಭದಲ್ಲೇ ಅಲ್ಲಲ್ಲೇ ಗೋಡೆಗೊರಗಿ  ಕುಂತಿದ್ದ ಮಹಿಳೆಯರ ಕೈಯಲ್ಲಿ ಹತ್ತು- ಇಪ್ಪತ್ತರ  ಗರಿ ಗರಿ ಹೊಸ ನೋಟು!. ಚಿಲ್ಲರೆ ಬೇಕಾದವರು   ನೂರಕ್ಕೆ ಐದು ರೂಪಾಯಿ ಕಮೀಷನ್ ಕೊಟ್ಟರೆ, ಹತ್ತು- ಇಪ್ಪತ್ತರ ಹೊಸ ನೋಟು ಕೈ ಸೇರುತ್ತದೆ. ಅಲ್ಲೇ ಸುಳಿದಾಡುತ್ತಿದ್ದ  ಗಸ್ತು ಪೋಲೀಸ್ ಆ ಮಹಿಳೆಯೊಂದಿಗೆ ಕಷ್ಟ ಸುಖ ಮಾತಾಡುತ್ತಾ ನಿಂತರು. ಈ ಸಂಚಾರಿ ಚಿಲ್ಲರೆ ವ್ಯವಹಾರ ಸಾರ್ವಜನಿಕ ಸ್ಥಳಗಳಲ್ಲಿ  ಮಾಮೂಲಿಯಾದ್ದರಿಂದ, ಯಾವ ಕಾನೂನಿನ ತೊಡಕಿಲ್ಲ.

ಗೌಹಾಟಿಯಿಂದ ಅರುಣಾಚಲ ಪ್ರದೇಶದ ನಹರ್ ಲಗುನ್  ಹೋಗುವ ಶತಾಬ್ದಿ ರೈಲು ಸಿದ್ದವಾಗಿ ನಿಂತಿತ್ತು. ರೈಲಿನ ತುಂಬಾ ಬರೀ ಚೈನಾ ಮುಖಗಳೇ. ಅಕ್ಕ ಪಕ್ಕ ಹಿಂದೆ ಮುಂದೆ ಎಲ್ಲೆಲ್ಲೂ ಅವರೇ!.

ನನಗೆ ಇನ್ನಿಲ್ಲದ ದಿಗಿಲು ಶುರುವಾಯಿತು. ಮಾಸ್ಕ್ ಬಿಗಿಮಾಡಿಕೊಂಡು, ಸ್ಯಾನಿಟೈಸರ್ ಕೈಯಳತೆಯಲ್ಲಿ ಇಟ್ಟುಕೊಂಡು ಆತಂಕದಲ್ಲಿ ಕುಂತೆ. ಬರುವಾಗ ಹೋಟೆಲ್ ನಿಂದ ತಂದಿದ್ದ  The Sentinel ದಿನಪತ್ರಿಕೆ ಬಿಡಿಸಿ ಓದುವ ನೆಪದಲ್ಲಿ ನಿರಾಳವಾಗಲೆತ್ನಿಸಿದೆ.

Racial discrimination ಎಂಬ ಶೀರ್ಷಿಕೆಯಲ್ಲಿದ್ದ ಸಂಪಾದಕೀಯ ಗಮನ ಸೆಳೆಯಿತು. ‘The north-eastern region has by and large remained free from the global corona virus pandemic and the governments and the people deserve to be praised for that. But then, what has emerged as a serious issue is the reported racial discrimination of people from the region in different parts of the country in the backdrop of the corona virus outbreak.

Racial comments like ‘dekho dekho ye coronawala aaya hai’ (look the corona people are here). This is a conspiracy to cut off the Northeast from the rest of India through racial discrimination’.

ಸಂಪಾದಕೀಯ ಓದುತ್ತಾ ನಾಚಿಕೆಯಿಂದ ತಲೆತಗ್ಗಿಸಿದೆ. ‘ನಾವೆಲ್ಲ ಭಾರತಾಂಬೆಯ ಮಕ್ಕಳು. ನಾವೆಲ್ಲ ಒಂದು’ ಎಂಬ ತೋರಿಕೆಯ  ಮಾತುಗಳನ್ನಾಡುತ್ತಾ , ದೇಶಭಕ್ತಿ ಅಮಲಿನಲ್ಲಿ ತೇಲುವ ನಮಗೆ ಈಶಾನ್ಯ ರಾಜ್ಯಗಳ ಜನ ಪರಕೀಯರಂತೆ ಕಾಣಿಸುವುದು ವಿಪರ್ಯಾಸ.

‘ಭಾರತ ಸರ್ಕಾರ ನಮ್ಮನ್ನು ಮೂರನೇ ದರ್ಜೆ ಪ್ರಜೆಗಳಾಗಿ ನೋಡ್ತಿದೆ. ನಮಗೆ ಉತ್ತಮ ರಸ್ತೆ, ಮಾರುಕಟ್ಟೆ, ಶಿಕ್ಷಣ ಸಂಸ್ಥೆ, ಕಾರ್ಖಾನೆ ಸೌಲಭ್ಯವಿಲ್ಲ. ದೇಶಕ್ಕೆಲ್ಲಾ ಬೆಳಕು ಕೊಡಲು ನಮ್ಮಲ್ಲಿ ಅಣೆಕಟ್ಟು ಕಟ್ಟುತ್ತಿದ್ದಾರೆ. ನಮ್ಮನ್ನು ಮಾತ್ರ ಕತ್ತಲಲ್ಲಿ ಇಟ್ಟಿದ್ದಾರೆ’  ಫಾಸಿಘಾಟ್ ಮುಖ್ಯಸ್ಥ ಈಗುಲ್ ಫದುಂಗ್ ಆಕ್ರೋಶದಿಂದ ನುಡಿದದ್ದು ನೆನಪಿಗೆ ಬಂತು.

ಮಾಸ್ಕ್ ಬದಿಗಿಟ್ಟು  ಪಕ್ಕದ ಸಹ ಪ್ರಯಾಣಿಕನ ಜೊತೆ ಮಾತು ಶುರುಮಾಡಿದೆ. ಪೇಮಾ ದೋರ್ಜಿ ಅವರ ಹೆಸರು. ಇಟಾನಗರ್ ಸಮೀಪದ ಹಳ್ಳಿ. ಗೌಹಟಿಯ ಫಾಲ್ತನ್ ಬಜಾರ್ ನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಾರಂತೆ. ಕೊರೊನಾ ದೆಸೆಯಿಂದ ಊರಿಗೆ ವಾಪಸ್ ಆಗ್ತಿದಾರೆ. ಬೆಂಗಳೂರಲ್ಲಿ ಅವರ ತಮ್ಮ ಇದಾನಂತೆ. ‘ಬೆಂಗಳೂರು ಸುರಕ್ಷಿತ ಎಂಬ ಕಾರಣಕ್ಕೆ ಈಶಾನ್ಯ ರಾಜ್ಯಗಳ ಯುವಕ, ಯುವತಿಯರು ವಲಸೆ ಹೋಗಿದಾರೆ. ಈಗ ಅಲ್ಲೂ ಅವರನ್ನು ಸಂಶಯದಿಂದ ನೋಡುವ ಪ್ರವೃತ್ತಿ ಆರಂಭವಾಗಿದೆ’ ಎಂದು  ತಮ್ಮ ಆತಂಕ ತೋಡಿಕೊಂಡರು.

ಅವರ ಜೊತೆ ಮಾತಾಡುತ್ತ  ಸಮಯ ಕಳೆದದ್ದೇ ತಿಳಿಯಲಿಲ್ಲ. ವಿಶ್ವನಾಥ್ ಚರೋಲಿ ನಿಲ್ದಾಣ ಬಂತು. ಪೇಮಾ ಬಾಗಿಲಿನವರೆಗೆ ಲಗೇಜ್ ತಂದುಕೊಟ್ಟು ಬೀಳ್ಕೊಟ್ಟರು.

ನೀಲಂ ದತ್ತಾ ನನಗಾಗಿ ತಮ್ಮ ನಾಯಿ ಟ್ಟೀಟ್ ಜೊತೆ ಕಾಯುತ್ತಿದ್ದರು. ಟ್ಟೀಟ್ ಅತ್ಯಂತ ಬುದ್ದಿವಂತ ನಾಯಿ. ನೀಲಂನ್ನು ನೆರಳಿನಂತೆ ಹಿಂಬಾಲಿಸುವ ಸ್ವಾಮಿಭಕ್ತ.

ನೀಲಂ ದತ್ತ ಅಪ್ಪ ಡಾಕ್ಟರ್ ಆಗಿದ್ದರಂತೆ. ಹಳ್ಳಿಯಲ್ಲೇ ಕ್ಲಿನಿಕ್ ತೆರೆದು ಪ್ರಾಕ್ಟೀಸ್ ಮಾಡುವುದರ ಜೊತೆಗೆ, ಮೀನು ಸಾಕಣೆ ಮತ್ತು ಕೃಷಿಯಲ್ಲೂ ತೊಡಗಿದ್ದರು. ನೀಲಂ ತನ್ನ ಅಣ್ಣನ ಜೊತೆ ಗೌಹತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಹೃದಯಾಘಾತದಿಂದ ಅಕಾಲಿಕವಾಗಿ ತಂದೆ  ಮರಣಹೊಂದಿದ್ದರಿಂದ ಪಿಯುಸಿ ಓದುತ್ತಿದ್ದ ನೀಲಂ, ವಿದ್ಯಾಭ್ಯಾಸ ಮೊಟಕುಗೊಳಿಸಿ ಹಳ್ಳಿಗೆ ಬಂದರು. ತಾಯಿಯ ಜೊತೆಗೂಡಿ ಕೃಷಿಯಲ್ಲಿ ತೊಡಗಿಕೊಂಡರು.

ಮೀನಿನ ಸಾಕಣೆ ಜೊತೆ ಭತ್ತ, ತರಕಾರಿ, ಹಣ್ಣು ಹಂಪಲು ಬೆಳೆಸಲು ಶುರುಮಾಡಿದರು. ಅದೇಗೋ ಸ್ವಿಜರ್ಲ್ಯಾಂಡ್ ವಿಜ್ಞಾನಿಗಳ ಸ್ನೇಹ ಸಂಪಾದಿಸಿ ಸಾವಯವ  ತರಕಾರಿ ಬೀಜೋತ್ಪಾದನೆ ಆರಂಭಿಸಿದರು.

ದೆಹಲಿಯ ಸಾವಯವ ಮೇಳದಲ್ಲಿ ಪರಿಚಯವಾದ ನೀಲಂರ ತೋಟಕ್ಕೆ ಕಳೆದ ಅಕ್ಟೋಬರ್ ನಲ್ಲಿ ಹೋಗಿದ್ದೆ.ಅಪರೂಪದ ಬೀಜಗಳ ಉತ್ಪಾದನೆಯನ್ನು ಹಿಮಾಲಯದ ಮಡಿಲಿನ  ಹಳ್ಳಿಗರ ಜೊತೆ ಮಾಡುವುದೆಂದೂ, ಅದರ ಉಸ್ತುವಾರಿ ನೀಲಂ ನೋಡಿಕೊಳ್ಳುವುದೆಂದು ತೀರ್ಮಾನವಾಯ್ತು. ಅದರ ಪ್ರಗತಿ ನೋಡಲೆಂದೇ ನಾನು ಅಸ್ಸಾಂ ಗೆ ಬಂದಿದ್ದು.

‘ಹೊರಗಿನ ರಾಜ್ಯದವರಿಗೆ ಕೊಡುವ ಇನ್ ಲೈನ್ ಪರ್ಮಿಟ್ ನಿಲ್ಲಿಸಿದ್ದಾರೆ. ನಾವು ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ಹೋಗಲಾಗದು’ ನೀಲಂ ಸಣ್ಣದನಿಯಲ್ಲಿ ಹೇಳಿದರು. ನನಗೋ ಬಹಳ ನಿರಾಸೆ. ನೀಲಂನ ಬೊಲೇರೊ ಜೀಪ್ ನಲ್ಲಿ ಟ್ವೀಟ್ ಜೊತೆ ನಾಗಾಲ್ಯಾಂಡಿನ  ಬೆಟ್ಟಗುಡ್ಡಗಳ ಸುತ್ತುವ ಕನಸು ಕಂಡಿದ್ದೆ. ಭೂತಾನ್ ಗಡಿಯ ಹಳ್ಳಿಗಳಿಗೆ ಹೋಗುವ ಅವಕಾಶ ಕೂಡ ಕೈ ತಪ್ಪಿತ್ತು. ‘ಬೇಸರ ಬೇಡ. ಬ್ರಹ್ಮಪುತ್ರ ನದಿ ಬಯಲು ತೋರುತ್ತೇನೆ’ ಎಂದು ನೀಲಂ ಸಮಾಧಾನಿಸಿದರು.

ನೀಲಂರವರ ತೋಟವೇ ಒಂದು ರೆಸಾರ್ಟ್. ಮೀನಿನ ಹೊಂಡಗಳ ನಡುವೆ ಗದ್ದೆ, ಹಣ್ಣಿನ ಗಿಡ,ತರಕಾರಿ ತಾಕುಗಳು. 12 ನಾಯಿ, 4 ಬೆಕ್ಕುಗಳು, 25 ಕ್ಕೂ ಹೆಚ್ಚಿನ  ದನಕರುಗಳ ಅನಿಮಲ್ ಫಾರ್ಮ್. ಹೋದ ವರ್ಷ 25 ಕ್ಕೂ ಹೆಚ್ಚು ನಾಯಿ ಇದ್ದವಂತೆ. ‘ನಾನಿರಬೇಕು. ಇಲ್ಲ ನಾಯಿಗಳಿರಬೇಕು’ ಎಂದು ನೀಲಂ ತಾಯಿ ಹಠ ಮಾಡಿ, ಮರಿಗಳನ್ನೆಲ್ಲಾ ಪರಿಚಯದವರಿಗೆ ಹಂಚಿಬಿಟ್ಟರಂತೆ.

ಮೀನಿನ ಹೊಂಡದ ಅಂಚಿಗೆ ಬದುವಿನ ಮೇಲೆ ಕಟ್ಟಿದ ಬಿದಿರಿನ ಮನೆ. ಅದರಲ್ಲಿ ನನ್ನ ವಸತಿ.  ನಿಸರ್ಗದ ನಡುವೆ ರಾತ್ರಿ ಕಳೆವ ಅವಕಾಶ. ಯಾರಿಗುಂಟು ಯಾರಿಗಿಲ್ಲ.

ತೋಟದ ಅಡುಗೆ ಮನೆಯ ಮೆನು ವಿಭಿನ್ನ. ಕುಂಬಳ ಹೂವಿನ ಪಕೋಡ, ಹೊಂಡದಿಂದ ಹಿಡಿದು ತಂದ ತಾಜಾ ಮೀನು, ಶಂಕಪುಷ್ಪದ ಚಹಾ, ಕೋಮಲ್ ಚಾವಲ್ ಅಕ್ಕಿ, ಕೆಸುವಿನ ಪಲ್ಯ, ಬೋರೆ ಹಣ್ಣಿನ ಉಪ್ಪಿನಕಾಯಿ… ಹೊಂಡದ ನೀರಿನ ಮೇಲೆ ಕಟ್ಟಿದ   ಕುಟೀರದ ಡೈನಿಂಗ್ ಟೇಬಲ್ ಮೇಲೆ ಊಟ. ಊಟ ಮಾಡುವಾಗ ಚೆಲ್ಲಿದ್ದನ್ನು ತಿನ್ನಲು ಕಾಲ ಕೆಳಗೆ ಮೀನುಗಳ ನೆಗೆದಾಟ!

ನೀಲಂ, ಸ್ವಿಜರ್ಲ್ಯಾಂಡ್ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಟೊಮೊಟೋ ಬೆಳೆದಿದ್ದರು. ಆಳೆತ್ತರ ಮೀರಿ ಬೆಳೆದಿದ್ದ ಟೊಮೊಟೋ ಬಳ್ಳಿಗಳಿಂದ , ಗೊಂಚಲು ಗೊಂಚಲಾಗಿ ಟೊಮೊಟೋ ಇಳಿಬಿದ್ದಿದ್ದವು. ಅದರ ಚೆಲುವನ್ನು ನೋಡುವುದೇ ಹಬ್ಬವಾಗಿತ್ತು. ವಿವಿಧ ಬಗೆಯ ಹದಿನಲ್ಕು ಮೆಣಸಿನಕಾಯಿ, ಹದಿನಾರಕ್ಕೂ ಮಿಕ್ಕಿದ ಬದನೆ, ಬಗೆಬಗೆಯ ಹೂ ಮತ್ತು ಹಣ್ಣುಗಳು ಆಕರ್ಷಣೆಯ ಕೇಂದ್ರವಾಗಿದ್ದವು. ಅರ್ಧದಿನ  ತೋಟ ಸುತ್ತಾಡುತ್ತಾ, ಪೋಟೋ ತೆಗೆಯುತ್ತಾ ಕಾಲ ಕಳೆದೆ.

ಮಧ್ಯಾಹ್ನ ವಿಶ್ವನಾಥ್ ಚರೋಲಿಯಲ್ಲಿರುವ ಆಸ್ಸಾಂ ಕೃಷಿ ವಿಶ್ವವಿದ್ಯಾಲಯದ ಕಾಲೇಜ್ ಬಳಿ ಹೋಗಿಬಂದೆವು. ಕೊವಿಡ್ ಕಾರಣದಿಂದ ತರಗತಿಗಳು ರದ್ದಾಗಿದ್ದವು. ನೀಲಂ ಪರಿಚಯಿಸಿದ ಡಾ. ಪಲ್ಲವ್ ಶರ್ಮ ರೈತಪರ ವಿಜ್ಞಾನಿ. ನಮ್ಮಂತೆ ಅವರಿಗೂ ದೇಸಿ ಬೀಜಗಳ ಹುಚ್ಚು. ಬೀಜ ಸಂರಕ್ಷಣೆಯ ಕರ್ನಾಟಕದ ಅನುಭವ ಹಂಚಿಕೊಂಡೆ‌. ನನ್ನ ಮಾತು ಕೇಳಲು ಕಾಲೇಜಿನ ಅಧ್ಯಾಪಕ ವೃಂದ ಬಂದದ್ದು ವಿಶೇಷ.

ಅಸ್ಸಾಂ ಮೆಣಸಿನ ಕಾಯಿಯ ವಿವಿಧ ತಳಿಗಳಿಗೆ ಹೆಸರುವಾಸಿ. ಗಿನ್ನಿಸ್ ದಾಖಲೆಯ ಅತಿಖಾರದ ‘ಭೂತ್ ಜಲೋಕಿಯ’ ಮೆಣಸಿನ ಕಾಯಿ ತಳಿ ಇಲ್ಲಿಯದು. ಸಹಜ ಸಮೃದ್ದ ಮತ್ತು ಕೃಷಿ ಕಾಲೇಜಿನ ಸಹಯೋಗದಲ್ಲಿ ಮೆಣಸಿನ ತಳಿಗಳ ದಾಖಲಾತಿ, ಬೀಜ ಸಂಗ್ರಹ, ತಳಿ ಸಂರಕ್ಷಕರ ಗುಂಪುಗಳ ರಚನೆ ಮತ್ತು ಮೌಲ್ಯವರ್ಧನೆಯ ಮೂಲಕ ಮೂಲ ಮೆಣಸಿನ ತಳಿಗಳ ಸಂರಕ್ಷಣಾ ಕಾರ್ಯ ಆರಂಭಿಸಲು ತೀರ್ಮಾನಿಸಿದೆವು.

‘ಮುಂದಿನ ಬಾರಿ ಬರುವಾಗ ಕರ್ನಾಟಕದ ರೈತರ ಕರೆತನ್ನಿ. ನಮ್ಮ ರೈತರಿಗೂ ಸಿರಿಧಾನ್ಯದ ತರಬೇತಿ ಕೊಡಿಸೋಣ. ನಾವು ಎಲ್ಲ ವ್ಯವಸ್ಥೆ  ಮಾಡುತ್ತೇವೆ’ ಎಂದು ಬೀಳ್ಕೊಟ್ಟರು.

ಟ್ವೀಟ್ ಕೂಡ ನಮ್ಮೊಡನೆ ಬಂದಿದ್ದ. ನಾವು ಮಾತುಕತೆ ಮುಗಿಸಿ  ಬರುವವರೆಗೆ ಜೀಪಲ್ಲಿ ಸುಮ್ಮನೆ ಮಲಗಿದ್ದ. ನಮ್ಮನ್ನು ಕಂಡ ಕೂಡಲೆ  ಖುಷಿಯಿಂದ ನೆಗೆದು ನೀಲಂ ಮುಖಕ್ಕೆ ಮುತ್ತಿಟ್ಟು ಮುಂದಿನ ಸೀಟಲ್ಲಿ ಕೂತ. ಹಿಂದಿನ ಸೀಟಲ್ಲಿ ಕೂರುವ ನಾಯಿಪಾಡು ನನ್ನದಾಯಿತು!

ಮರುದಿನ ‌ಮುಂಜಾನೆ ನೀಲಂ ನನ್ನನ್ನು ಬ್ರಹ್ಮಪುತ್ರ ನದಿ ದಂಡೆಗೆ ಕರೆದೊಯ್ದರು. ‘ಗುಪ್ತ ಕಾಶಿ’ ಎಂದೇ ಹೆಸರಾದ ವಿಶ್ವನಾಥ ಗಾಟ್ ನಲ್ಲಿ ಅನೇಕ ದೇವಾಲಯಗಳಿವೆ. 19 ನೇ ಶತಮಾನದಲ್ಲಿ ಬ್ರಿಟಿಷರು ಆರಂಭಿಸಿದ ಒಳನಾಡು ಜಲಸಾರಿಗೆಯ ಬಂದರು  ಬ್ರಹ್ಮಪುತ್ರ ನದಿಯ ಫೆರ್ರಿ ಪ್ರಯಾಣದ ನಿಲ್ದಾಣ ಇದು.

ಬ್ರಹ್ಮಪುತ್ರ ನನಗೆ ಹೊಸದೇನೂ ಅಲ್ಲ.‌ ಆರು ವರ್ಷಗಳ ಹಿಂದೆ ಹತ್ತುದಿನಗಳ ಕಾಲ ಬ್ರಹ್ಮಪುತ್ರ ಯಾತ್ರೆಯ ಭಾಗವಾಗಿ ನದಿ ಪಾತ್ರದಲ್ಲಿ ಸುತ್ತಾಡಿದ್ದೆ.

ಮಳೆಗಾಲದಲ್ಲಿ ರುದ್ರ ನರ್ತನ ಮಾಡುತ್ತಾ ಅಬ್ಬರಿಸಿ ಹರಿವ ಬ್ರಹ್ಮಪುತ್ರ ಬೇಸಿಗೆಯಲ್ಲಿ ಶಾಂತವಾಗಿ ಹರಿಯುತ್ತದೆ. ಪ್ರವಾಹದ ಕಾಲಕ್ಕೆ ನದಿ ನುಂಗಿ ಹಾಕಿದ ಭೂಮಿ, ಸೃಷ್ಟಿಸಿದ ನಡುಗಡ್ಡೆಗಳನ್ನು ನೀಲಂ ತೋರಿಸಿದರು. ಅಲ್ಲಿನ ರೈತರ ಜೊತೆ ಮಾತನಾಡಿದೆವು. ‘ನಾವು ನಿಂತಿರುವ ಈ ನೆಲ ಮುಂದಿನ ಮಳೆಗಾಲಕ್ಕೆ ಇರುತ್ತದೆನ್ನುವ ನಂಬಿಕೆ ಇಲ್ಲ’ ರೈತ ದೇವೇಂದ್ರ ಚಂದ್ರರ ಮಾತಲ್ಲಿ ಆತಂಕ ಮನೆಮಾಡಿತ್ತು. ಬ್ರಹ್ಮಪುತ್ರ ನ ಅಬ್ಬರಕ್ಕೆ ನಾಮಾವಶೇಷವಾದ ಹಳ್ಳಿಗಳ ಪಟ್ಟಿಯನ್ನೇ ಅವರು ಕೊಟ್ಟರು!.

ಸಂಜೆ ತೋಟಕ್ಕೆ ಹಿಂತಿರುವ ಹೊತ್ತಿಗೆ ಮನೆಯಿಂದ ಹತ್ತಾರು ಬಾರಿ ಪೋನ್ ಬಂದಿತ್ತು. ಜನತಾ ಕರ್ಫ್ಯೂ ಇರುವುದರಿಂದ ಬೇಗ ಬರಲು ಒತ್ತಾಯ. ಮಾರ್ಚ್ ಮಧ್ಯಭಾಗದಲ್ಲಿ ಕೊರೊನೋ ಸೋಂಕಿನ ಪ್ರಕರಣಗಳು ಕೇರಳ, ಬೆಂಗಳೂರು ಮತ್ತು ಮುಂಬಯಿಯಲ್ಲಿ ಬೆಳಕಿಗೆ ಬಂದಿದ್ದರಿಂದ, ಬೆಂಗಳೂರು ಎಂದರೆ ಜನ ಬೆಚ್ವಿ ಬೀಳುತ್ತಿದ್ದರು. ಕೊನೆ ಕೊನೆಗೆ ಕೊರೊನಾ ಸುದ್ದಿಯೇ ಇರದಿದ್ದ ‘ಚನ್ನೈ’  ಎನ್ನಲು ಶುರುಮಾಡಿದೆ.

ಅಸ್ಸಾಂ ಪ್ರವಾಸ ಮುಗಿಸಿ ಕಲ್ಕತ್ತಾ ಹೋಗಬೇಕಿತ್ತು. ‘ಈಗ ಬರಬೇಡಿ. ಇಲ್ಲಿ ಯಾರನ್ನೂ ಭೇಟಿ ಮಾಡುವ ಸ್ಥಿತಿ ಇಲ್ಲ’ ಗೆಳೆಯ ಅನುಪಮ್ ಪಾಲ್ ಮೆಸೇಜ್ ಕಳಿಸಿದರು. ಕಲ್ಕತ್ತಾ ಭೇಟಿ ಕೈಬಿಟ್ಟು, ವಾಪಸ್ ಮನೆ ಸೇರಲು ವಿಮಾನದ ಟಿಕೇಟ್ ಹುಡುಕಾಡಿದೆ. ಆಗಲೇ ಸಾಕಷ್ಟು ವಿಮಾನಗಳು ರದ್ದಾಗಿದ್ದವು. ಬೆಂಗಳೂರು ಮತ್ರು ಹೈದರಾಬಾದ್ ಮೂಲಕ ವಾಪಸ್ ಬರುವುದು ಸುರಕ್ಷಿತವಲ್ಲ ಎನಿಸಿ ಗುವಾಹಟಿ- ಚೆನ್ನೈ- ಮೈಸೂರು ಮಾರ್ಗ ಆಯ್ದುಕೊಂಡೆ.

ಜನರಿಲ್ಲದೆ ಗುವಾಹಟಿ ಹೋಗುವ ಬಸ್ ಗಳು ಬೆರಳಣಿಕೆ ಸಂಖ್ಯೆಗೆ ಇಳಿದಿದ್ದವು. ಹೆಚ್ಚಿನ ಅಪಾಯ ಬೇಡವೆಂದು, ತೇಜಪುರಕ್ಕೆ ಬಸ್ ನಲ್ಲಿ ಹೋಗಿ ಅಲ್ಲಿಂದ ಗೌಹಟಿಗೆ  ವಿಮಾನದಲ್ಲಿ ಹಾರುವುದು ಎಂದು ತೀರ್ಮಾನಿಸಿದೆ.

ನೀಲಂ ನನ್ನನ್ನು  ತೇಜ್ ಪುರ್ ಬಸ್ ಹತ್ತಿಸಿ, ವಿಮಾನ ನಿಲ್ದಾಣದ ಕ್ರಾಸ್ ನಲ್ಲಿ ಇಳಿಸುವಂತೆ ಡ್ರೈವರ್ ಗೆ ತಿಳಿಸಿ ಬೀಳ್ಕೊಟ್ಟರು. ನೀಲಂ ಅಮ್ಮ ನೀರಲ್ಲಿ ನೆನೆಸಿಟ್ಟರೆ ಅನ್ನವಾಗುವ ‘ಕೋಮಲ್ ಚಾವಲ್’, ಜೀರಾ ಅಕ್ಕಿ, ಬೋರೆ ಹಣ್ಣಿನ ಉಪ್ಪಿನಕಾಯಿ ಕೊಟ್ಟು ಕಳಿಸಿದ್ದರು.

ತೇಜಪುರ್ ಭಾರತೀಯ ಸೈನ್ಯದ ಆಯಕಟ್ಟಿನ ತಾಣ. ಸೈನ್ಯದ ಅನೇಕ ತುಕಡಿಗಳು ಇಲ್ಲಿ ಬೀಡು ಬಿಟ್ಟಿವೆ.  ಸೈನಿಕರನ್ನು ಮತ್ತು ಸಾಮಾನು ಸರಂಜಾಮುಗಳನ್ನು ಸಾಗಿಸಲು ವಿಶೇಷ ರೈಲುಗಳು ಓಡಾಡುತ್ತಿರುತ್ತವೆ. ತೇಜ್ ಪುರ್ ಏರ್ಪೋರ್ಟ್ ಕೂಡ ಸೈನ್ಯದ ವಾಯುನೆಲೆ ಭಾಗವಾಗಿರುವುದರಿಂದ ಹೆಚ್ಚಿನ ಭದ್ರತೆ. ಸಣ್ಣ ವಿಮಾನಗಳು ವಾರದಲ್ಲಿ ಒಂದೆರೆಡು ದಿನ ಇಲ್ಲಿಂದ ಗುವಾಹಟಿ ,ಕಲ್ಕತ್ತಾ ,ದೆಹಲಿಗೆ ಹಾರುತ್ತವೆ.ಈ ನಿಲ್ದಾಣದಲ್ಲೇ ‘ ಚೆನ್ನೈ ಪ್ಯಾಸೆಂಜರ್’ ಅವಾಂತರ ನಡೆದದ್ದು.

 

ಮರಳಿ ಗೂಡಿಗೆ!

ಗೌಹಾಟಿ ವಿಮಾನ ನಿಲ್ದಾಣದಲ್ಲಿ ತಪಾಸಣೆ ಶುರುವಾಗಿತ್ತು. ಬರುವವರನ್ನೆಲ್ಲಾ ಥರ್ಮಲ್ ಸ್ಕ್ಯಾನಿಂಗ್ ಒಳಪಡಿಸಲು ಯುವ ಡಾಕ್ಟರ್ ಗಳ‌ ದೊಡ್ಡ ದಂಡೇ ನೆರೆದಿತ್ತು. ತೇಜಪುರ್ ನಲ್ಲಿ ಈಗಾಗಲೇ ನಾನು ಪರೀಕ್ಷೆಗೆ ಒಳಗಾಗಿ ಪಾಸಾಗಿದ್ದರಿಂದ, ಯಾವುದೇ ಆತಂಕ ಇರಲಿಲ್ಲ.

ಅಂದು ರಾತ್ರಿ ಗೌಹಟಿಯಲ್ಲಿ ತಂಗಿದ್ದು, ಮುಂಜಾನೆ ಚೆನ್ನೈ ವಿಮಾನ ಹಿಡಿದೆ. ಮತ್ತೊಮ್ಮೆ ಥರ್ಮಲ್ ಸ್ಕ್ಯಾನಿಂಗ್ ಭಾಗ್ಯ. ವಿಮಾನ ಪ್ರಯಾಣಿಕರಿಲ್ಲದೆ ಖಾಲಿ ಹೊಡೆಯುತ್ತಿತ್ತು. ನಿರಾಳವಾಗಿ ಕಾಲು ಚಾಚಿ  ನಿದ್ರಿಸಿದೆ.

ಚೆನ್ನೈ ವಿಮಾನ ನಿಲ್ದಾಣದಲ್ಲಿ ಮೂರು ಘಂಟೆ ಕಾಯುವ ಅನಿವಾರ್ಯತೆ. ನಿಲ್ದಾಣದ ಮೂಲೆಯ ಖಾಲಿ ಬೆಂಚಿನ ಮೇಲೆ ಕೂತು ಕಾಲ ಕಳೆದೆ. ‘ಕೆಲಸವೇ ಇಲ್ಲ ಅಯ್ಯ. ಬೆಳಿಗ್ಗೆಯಿಂದ ಕಾದರೂ ಒಂದು ಪ್ಯಾಸೆಂಜರ್ ಸಿಕ್ಕಿಲ್ಲ’ ಟ್ಯಾಕ್ಸಿ ಡ್ರೈವರ್ ಮುರುಗೇಷ್ ಅವಲತ್ತುಕೊಂಡರು.

ಮಾರ್ಚ್ 21 ರ ರಾತ್ರಿ ಚೆನ್ನೈನಿಂದ  ಕೊನೆಯ ವಿಮಾನದಲ್ಲಿ ಮೈಸೂರಿಗೆ ಬಂದೆ. ಅವತ್ತೇ ಮೈಸೂರಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾಗಿತ್ತು. ಮೈಸೂರು ವಿಮಾನ ನಿಲ್ದಾಣದಲ್ಲಿ ಇನ್ನಿಲ್ಲದ ಗಡಿಬಿಡಿ. ಹಲವಾರು ತಪಾಸಣೆ. ಇದೆಲ್ಲ ಮುಗಿಸಿ ಹೊರಬಂದರೆ ಒಂದೂ ಟ್ಯಾಕ್ಸಿ ಇಲ್ಲ. ಸೂಟ್ ಕೇಸ್ ಎಳೆದುಕೊಂಡೇ ನಂಜನಗೂಡು ಮುಖ್ಯರಸ್ತೆಗೆ ಬಂದೆ. ಮಗ-ಮಡದಿ ನನಗಾಗಿ ರಸ್ತೆಯಲ್ಲಿ ಕಾದಿದ್ದರು. ಅವರನ್ನು ನಿಲ್ದಾಣದ ಒಳಗೆ ಬರದಂತೆ ಪೋಲಿಸ್ ತಡೆದಿದ್ದರು.

ನಾನು ಮನೆಗೆ ಬರುವ ಮುನ್ನವೇ , ನನ್ನ ಮಗ  ಕ್ವಾರಂಟೈನ್ ನಿಯಮಾವಳಿಗಳನ್ಮು ರೂಪಿಸಿದ್ದ. ಒಂದು ವಾರ ಮೇಲಿನ ಮಹಡಿಯ ಹಜಾರದಲ್ಲಿ ನಾನೊಬ್ಬನೇ ಇರಬೇಕು. ಅಲ್ಲಿನ ಬಚ್ಚಲು ನನಗೊಬ್ಬನಿಗೆ ಮಾತ್ರ ಮೀಸಲು. ಊಟ- ತಿಂಡಿ ಅಲ್ಲಿಗೇ ಸರಬರಾಜು. ಪುಸ್ತಕದ ಲೈಬ್ರರಿ ಅಲ್ಲೇ ಇದ್ದಿದ್ದರಿಂದ, ಸಾಕೆನುವಷ್ಟು ಓದು, ಬೇಕೆನುವಷ್ಟು ನಿದ್ದೆಗೆ ಬರವಿರಲಿಲ್ಲ.

‘ಕೊರೊನಾದ ಯಾವ ಲಕ್ಷಣವೂ ಕಾಣ್ತಿಲ್ಲ. ಹುಷಾರಾಗಿ ಇದಾರೆ’ ನನ್ನ ಮಗ ತನ್ನ ಗೆಳೆಯನಿಗೆ ಪೋನ್ ಮಾಡಿದ್ದು ಕೇಳಿ ನಗು ಬಂತು. ಆದರೂ ಒಳಗೊಳಗೇ ಒಂದು ರೀತಿಯ ಭಯ, ಆತಂಕ. ಕಳೆದ ಹತ್ತು ದಿನಗಳ ಕಾಲ ಕೊರೊನಾ ಸೋಂಕಿನ ಪ್ರದೇಶಗಳಲ್ಲಿ ಸುತ್ತಾಡಿ ಬಂದಿದ್ದೆನು. ಅರ್ಥಾತ್ ಬಚಾವಾಗಿ ಬಂದಿದ್ದೆನು!

ಒಂದು ವಾರ ‘ ಮಹಡಿ ವಾಸ’ ಮುಗಿಸಿ ಮನೆಯೊಳಗೆ ಬಂದೆನು. ನಿರಾಶ್ರಿತರ ಶಿಬಿರದಿಂದ ಬಂದಂತ ನಿರಾಳತೆ.

ಒಂದೇ ಒಂದು ದಿನ ನಾನು ಬರುವುದು ನಿಧಾನವಾಗಿದ್ದರೆ, ಗುವಾಹಟಿಯಲ್ಲಿ ಗೃಹ ಬಂಧನದಲ್ಲಿರಬೇಕಿತ್ತು!. ಈಗಲೂ ಇದನ್ನು ನೆನೆದರೆ ಮೈ ಜುಮ್ ಎನ್ನುತ್ತದೆ.

 

 

‍ಲೇಖಕರು avadhi

June 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: