ನಾಗರೇಖಾ ಗಾಂವಕರ ಕಥೆ: ದೊಂಗ

 ನಾಗರೇಖಾ ಗಾಂವಕರ

“ಪಾಪ! ದೊಂಗಣ್ಣಗೆ ಅರ್ಮಳ್ಳು ಕಣಾ! ಯಾರ ಅಂವನ ಕಡಿಗೆ ಬಂದ್ರು ಹೆದ್ರಕಂತಿನ ಕಣಾ! ಏನಾಯ್ತೇನಾ? ಬರೀ ಹುಳ.. ಹುಳ.. ಮೈಮ್ಯಾನೇ ಹುಳ ಹರಿದಾಡ್ತಿದು ಅಂತೇ ಕೆರಕಂತೇ ಇರುದೇ ಕಣಾ! ಏನೇನ ಆತೀದೇನ! ಈಗೀಗೇ. ಕಲಿಗಾಲ!” ಎನ್ನುತ್ತಾ ರುಕ್ಕು ಹೆಂಡತಿ ಮಮ್ಮಲ ಮರಗುತ್ತಾ ಸೋಮಿಗೆ ಹೇಳುತ್ತಾ ಬರುತ್ತಿದ್ದಳು. ಅವರಿಬ್ಬರೂ ಸೋಸೈಯಿಟಿಯಿಂದ ರೇಷನ್ ಹೊತ್ತು ಮನೆಹಾದಿ ಹಿಡಿದು ಹತ್ತುಹೆಜ್ಜೆ ಬಂದಿದ್ದರಷ್ಟೇ. ದೊಂಗನ ಹಿರಿಮಗ ರೇಷನ್ ಅಂಗಡಿಯಲ್ಲಿ ಕಾಣುತ್ತಲೇ ರುಕ್ಕು ಹೆಂಡತಿಗೆ ದೊಂಗನ ನೆನಪಾಗಿತ್ತು. ರುಕ್ಕು ಬಡವ, ರೈತ. ಎಂಟು ಮಕ್ಕಳ ದೊಡ್ಡಸಂಸಾರ ಅವರದು. ಆದರೆ ರುಕ್ಕು ಹೆಂಡತಿ ಇದ್ದದ್ದರಲ್ಲಿಯೇ  ಅಚ್ಚುಕಟ್ಟು. ಹಾಗಾಗಿ ಅವರಿಗೆ ತೊಂದರೆಯಿಲ್ಲ. ರುಕ್ಕು ಹೆಂಡತಿಗೆ ಇಂದಿರ ಎಂಬ ಚೆಂದದ ಹೆಸರಿದ್ರೂ ಆಕೆ ತನ್ನನ್ನು ಗಂಡನ ಹೆಸರಿಂದ ಕರೆಯುವ ಜನರಿಗೆ ಎಂದೂ ತನ್ನ ಹೆಸರು ಹೇಳಿ, ‘ಹೀಗೆ ಕರೆಯಿರಿ’ ಎಂದಿದ್ದಿಲ್ಲ.

“ಕೇಳ್ಸಕಂತೇ ಇಂವೇ ಏನೆ? ಗುತ್ತಾಗಿದೇ ನಿಂಗಿದು?” ರುಕ್ಕು ಹೆಂಡತಿ ಮತ್ತೊಮ್ಮೆ ಒತ್ತಿ ಹೇಳಿದಳು. ಅಷ್ಟೊತ್ತೂ ದಾರಿಯಲ್ಲಿ ರಸ್ತೆಯ ಉದ್ದಕ್ಕೂ ಓಡಿಓಡಿ ಹೋಗುವ ಬಿಸಿಲು, ಹಾಗೇ ಅದರ ಹಿಂದೆ ಹಿಂದೆ ನಡೆಯುವ ನೆರಳು ನೋಡುತ್ತಾ ಬರುತ್ತಿದ್ದ ವೆಂಕಮ್ಮನ ದಡಕ್ಕನೇ ಯಾರೋ ದೂಡಿದಂತಾಯ್ತು. “ಹಾಂ. ದೊಡ್ಡವ್ವಿ, ಕೇಳ್ಸಕಂತಿವೆ.. ಪಾಪ ದೊಂಗಣ್ಣ! ಮಾದೇವಕ್ಕ ಹಿಂಗೇ ಮಾಡುಕಿಲ್ಲಾಗಿತು. ನಾಮೇಲ್ಲಾ ಇಲ್ವೇ? ಇಂವ ನನ್ನ ಗಂಡಾ ಏನ ತಂದ ಹಾಕ್ತಿನೇ. ಆದ್ರೂ ನಾನೇ ಒಡೆದಿರ ಮನೀಗೇ ಹೋಗಿ ದುಡಿದೇ, ಕೆಲಸ ಮಾಡೇ ಸಾಂಕ್ತಿವೇ ಮಕ್ಕಳ್ನಾ! ಪಾಪ ಅನ್ಸತಿದು ಅಲ್ವೇನೇ? ದೊಂಗಣ್ಣಗೇ ಈಗೇ ಯಾರ ಬೇಯ್ಸಿ ಹಾಕ್ತಿರೇ? “ಅಣ್ಣನೊಬ್ಬನ ಕುಟುಂಬ ಹಳ್ಳ ಹಿಡಿದಾಗ ಪರಿತಪಿಸುವ ತಂಗಿಯ ಕಳಕಳಿ ದ್ವನಿಯಲ್ಲಿತ್ತು. ಅಷ್ಟೊತ್ತಿಗೆ ದೊಂಗನೇ ಅವರಿಗೆ ಎದುರಾಗಿದ್ದ. ಇವರನ್ನು ಗುರುತಿಸಲೂ ಇಲ್ಲ. ತನ್ನದೇ ಗೊಣಗಾಟದಲ್ಲಿ ಮೈ ಪರಚಿಕೊಳ್ಳುತ್ತಾ ಹಿಂದೆ ಒಮ್ಮೆ ತಿರುಗಿ, ತನ್ನ ಬೆನ್ನು ನೋಡಲು ಪ್ರಯತ್ನಿಸುವವನಂತೆ ಮಾಡಿದ. ಆಗದೇ ಇದ್ದಾಗ ಸಮೀಪದ ಸಂಕದಕಟ್ಟೆಗೆ ಬೆನ್ನನ್ನು ಒಮ್ಮೆ ಜೋರಾಗಿ ತಿಕ್ಕಿದ. ಮೈಮೇಲಿದ್ದ ಎಂದೋ ಒಗೆದ ಪಂಚೆಯನ್ನು ಎರಡೂ ಕೈಯಲ್ಲಿ ಬೆನ್ನಿಗೆ ಹಿಂಬದಿಯಿಂದ ಹಿಡಿದು ಒರೆಸಿಕೊಂಡಂತೆ ಮಾಡಿದ.  ಮತ್ತೆ ಮುಂದೆ ನಡೆದ. ಆತ ಮನೆ ಬಿಟ್ಟು ಹೀಗೆ ಎಲ್ಲೆಲ್ಲೋ ತಿರುಗುತ್ತಿದ್ದರೆ ಮೂವರು ಗಂಡು ಮಕ್ಕಳು ಆಗಾಗ ಹಿಡಿದು ಕರೆತಂದು  ಗಡ್ಡ ತೆಗೆದು ಕೂದಲು ಕತ್ತರಿಸಿ, ಸ್ನಾನ ಮಾಡಿಸುತ್ತಿದ್ದರು. ಗಂಡು ಮಕ್ಕಳೇ ಕೈ ಸುಟ್ಟುಕೊಂಡು ಅಡಿಗೆ ಮಾಡಿ ಉಣ್ಣುತ್ತಿದ್ದರೆ, ಕೇರಿಯ ಹೆಣ್ಣು ಮಕ್ಕಳು ಹಳಹಳಿಸಿಕೊಂಡು ಹೊತ್ತಲ್ಲದ ಹೊತ್ತಿಗೂ ಆ ಮನೆಯ ಸುದ್ದಿ ಶುರುವಾದರೆ ಬಿಟ್ಟ ಬಾಯ್ ಬಿಟ್ಟು ಕೇಳುತ್ತಿದ್ದರು.

ಮೊದಲೆಲ್ಲಾ ದೊಂಗ ಬಹಳ ಖುಷಿಖುಷಿಯಲ್ಲಿ ಇರುವ ಮನುಷ್ಯ. ಕೆಲಸವಿಲ್ಲದ ದಿನಗಳಲ್ಲಿ ಅಂಗಡಿಯ ಚಿಟ್ಟಿ [ಕಟ್ಟೆ]ಮ್ಯಾಲೆ ಕೂತು  ಸಂಜೆಯಾಗುವುದನ್ನೆ ಕಾಯ್ತಿದ್ದ ದೊಂಗ ಒಂದೇ ಕೊಟ್ಟೆ [ಪಾಕೀಟು] ಬಾಯಿಗೆ ಹಾಕಿಕೊಳ್ಳುವವ. ಅವನಿಗೆ ಬೇಕು.. ಆದರೆ ತಲೆಗೇರುವತನಕ ಕುಡಿಯುತ್ತಿರಲಿಲ್ಲ. ಒಂದಿಷ್ಟು ನಶೆಯೇರಿ ಹುಚ್ಚುಹುಚ್ಚು ಮಾತನಾಡಲು ಆಗುವಷ್ಟು. ಬೆಳಗ್ಗೆಯಿಂದ ಸಂಜೆವರೆಗೂ ಬೊಂಡ [ಎಳನೀರು] ಕೀಳುವ ಕೆಲಸಕ್ಕೆ ಹೋಗ್ತಾ ಅಂವ. ತೆಂಗಿನಮರ ಹತ್ತಲು ಕಾಲಿಗೆ ಹೊಸ ನಮೂನೆಯ ಕಬ್ಬಿಣದ ಸಲಕರಣೆ ಸರಕಾರ ಕೊಟ್ಟರೂ ಅದು ಅವನಿಗೆ ಆಗಿ ಬಂದಿರಲಿಲ್ಲ. ತಾನೇ ಸ್ವತಃ ಹೆಣೆದ ತೆಂಗಿನ ನಾರಿನ ಕತ್ತದಬಳ್ಳಿಯೇ ಅವನಿಗೆ ಸರಿ. ಮರ ಹತ್ತಿಹತ್ತಿ ಅವನ ಕಾಲುಗಳು ದುಂಕ [ಸೊಟ್ಟ] ಆಗಿದ್ದು, ದೊಂಗ ಎಂಬ ಹೆಸರಿಗೂ ಸರಿ ಆಯ್ತು ಅನ್ನುವವರಿಗೆಲ್ಲ ಅವನದು ಒಂದೇ ಉತ್ತರವಾಗಿತ್ತು, “ಹೌದ್ರಾ ನಮ್ಮಪ್ಪನ ಕಾಲೂ ಹಿಂಗೇ ಇತ್ತ ಕಣ್ರಾ. ಮರ ಹತ್ತಿ ಆದದ್ದಲ್ಲಾ ಅದು. ನಮ್ಮವ್ವಿ ಹೇಳ್ತಿತ್ತು” ಎನ್ನುತ್ತಿದ್ದ. ತೀರಾ ಸಾವಧಾನಿಯೂ ಅಲ್ಲದ, ಹಾಗೆಂದು ಬಹಳ ಚಾಲಾಕಿಯೂ ಅಲ್ಲದ ಅವನಿಗೆ ಸಾಲಾಗಿ ಗಂಡು ಮೂರು ಹುಟ್ಟಿದಾಗ ಹೆಣ್ಣು ಮಗಳಿಗಾಗಿ ಆಸೆ ಪಟ್ಟಿದ್ದ. ಅವನ ಹೆಂಡತಿ ಮಾದೇವಿ. ಆಕೆ ಕೇರಿಗೆಲ್ಲ ಸ್ವಲ್ಪ ಜಾಸ್ತಿ ಎನ್ನುವಷ್ಟು ಸುಂದರಿ. ಒಂದಿಷ್ಟು ಗ್ಲಾಮರಾಗಿ ಕಂಡಾಗಲೆಲ್ಲಾ ಹತ್ತಿರ ಹೋದರೆ ಹಾವು ಮೆಟ್ಟಿದಂತೆ ದೂರ ಹೋಗುತ್ತಿದ್ದಳು ಇತ್ತಿತ್ತಲಾಗಿ. ಅದು ಅವನಿಗೆ ಬಿಸಿತುಪ್ಪ ಆಗಿತ್ತು. ಒಂದಿಷ್ಟು ಹೆಚ್ಚೆ ಕುಡಿದು ಇವಳಿಗೆ ಬುದ್ಧಿ ಕಲಿಸಬೇಕು ಎಂದುಕೊಂಡಿದ್ದ. ಆದರೆ ಕುಡಿದಾಗಲೂ ಅವನಿಗೆ ಧೈರ್ಯವಿರಲಿಲ್ಲ. ಯಾಕೆಂದರೆ ಆಕೆ ನಾಲ್ಕನೇ ಕ್ಲಾಸು ಕಲಿತಿದ್ಲು. ಓದುಬರಹ ಬಲ್ಲಿದಳು.

ಮಾದೇವಿ ಗಂಡನ ನಿತ್ಯ ಕಾಟಕ್ಕೆ ಬೇಸತ್ತೋ, ಅವನ ಡೊಂಕು ಕಾಲುಗಳಿಗೆ ಬೇಸತ್ತೋ, ಏನಾದರೊಂದು ನೆವ ಹೇಳುತ್ತಲೇ ಇರುತ್ತಿದ್ದಳು. ಮೂರು ಗಂಡುಮಕ್ಕಳು ಕೈಗೆ ಬರುವಂತಾದರೂ ದೊಂಗನಿಗೆ ಮಗಳ ಪಡೆಯುವ ಆಸೆ ಬಿಟ್ಟಿರಲಿಲ್ಲ. ಯಾಕೋ ಆಕೆಗೆ ಇತ್ತೀಚೆಗೆ ಯಾವುದರಲ್ಲೂ ಆಸಕ್ತಿಯಿಲ್ಲ. ಅದು ಪ್ರಾಯದ ಕಾರಣಕ್ಕಲ್ಲವೆಂಬುದು ಆಕೆಗೆ ಗೊತ್ತು. ದೊಂಗನ ಡೊಂಕಾದ ಕಾಲು ಮಾತ್ರ ಆಕೆಯನ್ನು ಕನಸಿನಲ್ಲೂ ಬಚ್ಚಿ ಬೀಳಿಸುತ್ತದೆ. ಬೇಡಬೇಡವೆಂದರೂ ಅವಳ ಮಾತು ಕೇಳದೇ ಮುದ್ದಾಮಾಗಿ ಅವ ತೆಂಗಿನಗಿಡ ಹತ್ತಲೂ ಹೋಗುವುದು ಮದುವೆಯಾದ ಹೊಸತಿನಿಂದ ಅವಳಲ್ಲಿ ಅವನ ಬಗ್ಗೆ ಒಂದು ಬಗೆಯ ತಿರಸ್ಕಾರಕ್ಕೆ ಕಾರಣವಾಯಿತೋ ಏನೋ? ದೇಹದ ಬಿಸಿಗೆ ಹೇಗೋ ಮೂವರು ಗಂಡು ಹುಟ್ಟುತ್ತಲೂ ಆಕೆ ಸುಸ್ತಾಗಿದ್ದಳು. ಆದರೂ ಮಾಸದ ಚೆಲುವಿನ ಆಕೆ ಇನ್ನೂ ಯೌವನಿಗಳಾಗಿ ಕಾಣುತ್ತಿದ್ದರೆ ದೊಂಗ ಆಗಲೆ ಮುಪ್ಪಡರಿದಂತಿದ್ದ. ಆದರೂ ಅವನಿಗೆ ಮಗಳ ಪಡೆಯುವ ಹುಕಿ ಹೋಗಿರಲಿಲ್ಲ. ಅವನ ಕಾಟದಿಂದ ತಪ್ಪಿಸಿಕೊಳ್ಳುವುದಕ್ಕೆ ಮಾದೇವಿಗೆ ಏನಾದರೂ ಉಪಾಯ ಬೇಕಿತ್ತೋ..

ಒಂದಿನ ಮುಂಜಾನೆ ಏಳುತ್ತಲೇ ಗಾಬರಿಗೊಂಡವಳಂತೆ ಓಡಿ ಬಂದಿದ್ದಳು. ಹಾಸಿಗೆ ಮೇಲೆ ಇನ್ನೂ ನಿದ್ದೆ ಮಂಪರಿನಲ್ಲಿದ್ದ ದೊಂಗನಿಗೆ ತಲೆಕೂದಲು ತನ್ನಷ್ಟಕ್ಕೆ ಜಡೆ ಹಾಕಿಕೊಂಡಿದ್ದನ್ನು ತೋರಿಸಿ “ದೇವಿ ಜಡೆ ಹೆಣೆದು ಬಿಟ್ಟಿದ್ದಾಳೆ, ಆಕೆಯ ಅಪ್ಪಣೆ ಆಗಿದೆ” ಎಂದು ಕಾರಣ ನೀಡಿ ಕೂದಲು ಹಣೆದದ್ದನ್ನು ತೋರಿಸಿ, ದೊಂಗ ಪರಿತಪಿಸುವಂತೆ ಮಾಡಿಬಿಟ್ಟಳು. ಹತ್ತಾರು ದಿನ ಬಾಚದೇ ಅದು ಗಂಟುಕಟ್ಟಿದೆ ಎಂಬುದನ್ನು ಮುಚ್ಚಿಟ್ಟಳು. ‘ಅಯ್ಯೋ, ದೇವತೆಯೇ ಮೈಯೇರಿದ ಮೇಲೆ ತನ್ನ ಗತಿಯೇನು?’ ದೊಂಗ ಹಲಬಿದ.

ಮಾದೇವಿಗೆ ಈಗ ಹೊಸತೊಂದು ಬಲಬಂದಂತಾಗಿತ್ತು. ಆಕೆ ಸ್ನಾನ ಮಾಡಿದಳು. ಮೈಗೆಲ್ಲ ಭಂಡಾರ ಬಳಿದುಕೊಂಡು ಹಸಿರು ಸೀರೆ ಉಟ್ಟಳು, ಬಳೆ ತೊಟ್ಟಳು. ಹೊಸ ಶಕ್ತಿಯೊಂದು ತನ್ನೊಳಗೆ ಆವಾಹನೆಗೊಂಡಂತೆ ಒಂದು ಕಲಶದಲ್ಲಿ ನೀರು ತುಂಬಿ ತೆಂಗಿನಕಾಯಿಟ್ಟು, ದೇವಿಯನ್ನಾಗಿ ಅಲಂಕರಿಸಿದಳು. ಕೆಂಪು ಬಟ್ಟೆಯಿಂದ ಸಾಲಂಕೃತಗೊಂಡ ದೇವಿಗೆ ಹೂಬಳೆ ಕುಂಕುಮ ಇಟ್ಟು, ತಾನೂ ಹಾಗೇ ಅಲಂಕರಿಸಿಕೊಂಡಳು. ಪ್ರತಿ ಮಂಗಳವಾರ, ಶುಕ್ರವಾರ ಮೈಮೇಲೆ ದೇವಿ ಆವಾಹನೆಯಾಗತೊಡಗಿದಳು. ಮಾದೇವಿ ಗಾಡಗತನದಲ್ಲಿ ಜನಪ್ರಿಯಳಾಗುತ್ತಾ ಹೋದಳು. ನೂರಾರು ಕಿ. ಮೀ. ಗಳಿಂದ ಜನರು ಬರತೊಡಗಿದರು. ತಮ್ಮ ಮನೆಯ ಸಮಸ್ಯೆ, ಮಕ್ಕಳ ಸಮಸ್ಯೆ, ವಿವಾಹ, ನೌಕರಿ, ಒಂದೇ ಎರಡೇ ಮಂಡದ ಮಾರಮ್ಮ ಬಗೆಹರಿಸದ ಸಮಸ್ಯೆಗಳೇ ಇರಲಿಲ್ಲ.

ಏಳನೇ ತರಗತಿ ಓದುತ್ತಿದ್ದ ಖಾರ್ವಿ ಹುಡುಗ ಸಂದೀಪ ಏಕಾಏಕಿ ಶಾಲೆಗೆ ಹೋಗದೆ ಮೈಯಲ್ಲಿ ದೆವ್ವ ಬಡಿದವನಂತೆ ಆಡತೊಡಗಿದ. ತಂದೆತಾಯಿಗೆ ದೊಡ್ಡ ತಲೆನೋವಾಗ ತೊಡಗಿದ. ಹಿರಿಯರು ಶಿಕ್ಷಕರು ಯಾರ ಮಾತಿಗೂ ಬಗ್ಗದೇ, ವಿಚಿತ್ರವಾಗಿ ಆಡತೊಡಗಿದ. ಅವನನ್ನು ಶಾಲೆಗೆ ಹೋಗುವಂತೆ ಒತ್ತಾಯ ಮಾಡಿದಾಗಲೆಲ್ಲ ಅವನ ಮೆಟ್ಟಿಕೊಂಡ ದೆವ್ವ ಸರಕ್ಕನೇ ಎದ್ದೇಳುತ್ತಿತ್ತು. ಒಂದು ದಿನ ತಾಯಿ ಒತ್ತಾಯ ಮಾಡಿದಳೆಂದು ಮನೆಯಲ್ಲಿ ಬಟ್ಟೆ ಒಗೆಯಲು ತಂದಿಟ್ಟ ಸೋಪಿನ ಪುಡಿಯನ್ನೇ ನುಂಗಿಬಿಟ್ಟ. ಇಷ್ಟಾಗುತ್ತಲೂ ಹೆದರಿದ ಅವನ ಪಾಲಕರು ಮಾದೇವಿಯಲ್ಲಿಗೆ ಅವನನ್ನು ಕರೆತಂದರು. ಒಂದೇ ವಾರದಲ್ಲಿ ಸಂದೀಪ ನಗುನಗುತ್ತಾ ಶಾಲೆಗೆ ಹೋಗ ತೊಡಗುತಲೂ ಜನರಿಗೆ ದೇವಿಯ ಮೇಲೆ ನಂಬಿಕೆ ಮೂಡಿತ್ತು. ಮಾದೇವಿಯ ಕುತ್ತಿಗೆಗೆ ಚಿನ್ನದ ತಾಳಿಯೂ ಬಂದಿತ್ತು.

ಇನ್ನು ಮಾದೇವಿ ಗಾಡಗತನದ ಹತ್ತು ಹಲವು ವಿಧಾನಗಳಲ್ಲಿ ಪರಿಣಿತಳಾಗುತ್ತ ದೊಂಗನ ಮನೆಗೆ ಕರೆಂಟು, ಟಿ. ವ್ಹಿ, ಫೋನು ಎಲ್ಲ ಐಶಾರಾಮಿಗಳೆಲ್ಲ ಬಂದು ತಳವೂರಿದವು. ಮಾದೇವಿಯನ್ನು ದೇವಿಯ ಅಪರಾವತಾರ ಎನ್ನುವಂತೆ ಜನ ನಂಬಿದ್ದರು. ಭಕ್ತಗಣ ಉಸಿರಿ ಬಿಗಿಹಿಡಿದು ನಿಲ್ಲುವಂತೆ ಕೆಲವೊಮ್ಮೆ ಭಯಂಕರ ಉಗ್ರರೂಪವನ್ನು, ಮತ್ತೆ ಕೆಲವೊಮ್ಮೆ ಪ್ರಶಾಂತ ಮುಖಮುದ್ರೆಯಲ್ಲೂ ಆಕೆ ಮಿಂಚುತ್ತಿದ್ದಳು.

ಆಕೆ “ದೊಂಗ” ಎಂದು ಒಂದು ಕೂಗು ಹಾಕಿದರೆ ಸಾಕು. ದೊಂಗ ‘ತಾಯೇ! ಅಡ್ಡಬಿದ್ದೆ!” ಎನ್ನುತ್ತಾ ದೇವಿಯ ಪೂಜೆ, ಉಪಾಸನೆಗೆ ಏನೇನೋ ಬೇಕೋ ಅದನ್ನೆಲ್ಲಾ ಚಾಚೂ ತಪ್ಪದೇ ಪೂರೈಸುವ ದೇವಿಯ ಉಪಾಸಕನಾದ. ಅವನಿಗೆ ಹೆಣ್ಣು ಮಗಳನ್ನು ಪಡೆಯುವ ಹೆಬ್ಬಯಕೆ ಹಾಗೇ ಇಂಗಿ ಹೋಗಿತ್ತು. ದಾರಿಯಲ್ಲಿ ಅಪರೂಪಕ್ಕೆ ಗೆಳೆಯ ಬಲಿಂದ್ರ ಸಿಕ್ಕು “ಏನಾ,ದೊಂಗ! ಮಗಳ ಬ್ಯಾಡ್ವೇನಾ! ಯಾವಾಗೇ ನೀನು ಜೀಲೇಬಿ ಕುಡುದು!” ಎಂದು ಮುದ್ದಾಮಾಗಿ ತಮಾಷೆ ಮಾಡಿದರೆ, “ಎಂತದಿಲ್ಲ. ಮನೀಗೆ ದ್ಯಾವಮ್ಮನೇ ಬಂದಾಗಿದು, ಮತ್ತೆಂತಕೆ ಮಗಳು. ಅದೇ ನಂಗೆ ಅವ್ವಿ, ಮಗಳು ಎಲ್ಲ, ಇಂವಂದೊಂದು” ಎಂದು ತಾನೂ ಆ ವಿಷಯ ಅಲ್ಲಿಯೇ ಬಂದು ಮಾಡುತ್ತಿದ್ದ.

ಆದರೆ ವಿಷಯಾಸಕ್ತಿ ಅವನಲ್ಲಿ ಹೊರಟು ಹೋದರೂ, ಮಾದೇವಿಗೆ ಇನ್ನೂ ಮುಟ್ಟಿನ ಭಾರದ ದಿನಗಳಿನ್ನೂ ಕೊನೆಯಾಗಿರಲಿಲ್ಲ. ಆದರೂ ಮಡಿಯ ದಿನಗಳಲ್ಲಿ ಮೈಯೇರುವ ದೇವರನ್ನು ನಿಭಾಯಿಸುತ್ತ, ಹ್ರಾಂ… ಹ್ರೀಂ…  ಎನ್ನುತ್ತಾ ಭಕ್ತಾಧಿಗಳ ಮನಸ್ಸನ್ನು  ಸೆರೆಹಿಡಿಯುವಲ್ಲಿ ಆಕೆಗೆ ತೊಂದರೆ ಇರಲಿಲ್ಲ.

ಮಾದೇವಿಯ ಪ್ರಸಿದ್ಧಿ ಹೆಚ್ಚುತ್ತಲೇ ಪಟ್ಟಣದ ಜನರು ಬರತೊಡಗಿದರು. ಪೇಟೆಯಲ್ಲಿ ರಿಕ್ಷಾ ಓಡಿಸಿಕೊಂಡಿದ್ದ ಗಿರಿಧರನ ಹೆಂಡತಿಗೆ ಪದೇಪದೇ ಕಾಯಿಲೆ. ಇದು ಹತ್ತಾರು ಡಾಕ್ಟರುಗಳ ಕಡೆ ಹೋದರೂ ಗುಣಕಾಣದೇ ತೊಳಲಾಡಿದ ಗಿರಿಧರ. ಆಗಲೇ ಯಾರದೋ ಸಲಹೆಯ ಮೇರೆಗೆ ದೇವಿ ಮಂಡಲಕ್ಕೆ ಬಂದಿದ್ದ. ಅವನ ಹೆಂಡತಿ ಹುಷಾರೇನೋ ಆಗಿದ್ದಳು. ಆದರೆ ಗಿರಿಧರ ಹೊಸ ಮಾನಸಿಕ ಕಾಯಿಲೆಗೆ ಬಿದ್ದಿದ್ದ. ಅದಕ್ಕೆ ಮಾದೇವಿಯೇ ಔಷದಿಯೂ, ದೇವರ ಪ್ರಸಾದವೂ ಆಗಿದ್ದಳು. ತಿಂಗಳುಗಟ್ಟಲೆ ವಾರವಾರವೂ ಆತ ದೇವಿಯ ಕಾಣಲು ಆಕೆಯ ಕೃಪೆಗೆ ಪಾತ್ರನಾಗಲು ಬರುತ್ತಲೂ, ದೊಂಗನಿಗೆ ಒಂದು ದಿನ ಆಕಸ್ಮಾತ್ತಾಗಿ ಮಾದೇವಿ “ನಾ ದ್ಯಾವ್ರ ಮಾಡುದಿಲ್ಲ ಇನ್ನೇ. ಸಾಕಾಯ್ತು. ದ್ಯಾವರಿಂದೇ ಎಲ್ಲ ಆಗುದಿದ್ದರೆ ನಿನ್ನ ಕಾಲ ಯಾಕೇ ದುಂಕಾಗೇ ಇದು ಇನ್ನುವೇ? ಇಟ್ ದಿನೇ ನಾನು ಆ ದ್ಯಾವ್ರಿಗೆ ಹರ್ಕಿ ಹೊತ್ತೆ. ಆದ್ರೂ ನಿನ್ನ ಕಾಲು ಹಂಗೇ ಇತು. ನಾ ಈ ದ್ಯಾವ್ರ ಇಟ್ಟಕಂಬುದಿಲ್ಲ ಇನ್ನೇ!” ಎಂದವಳೇ ಒಂದು ಮಂಗಳವಾರ ಮಾದೇವಿ ದೇವಿಯನ್ನ ವಿಸರ್ಜಿಸಿಯೇ ಬಿಟ್ಟಳು.

ದೊಂಗ ಅಂಗಲಾಚಿದ. “ಅದು ನನ್ನ ಅವ್ವಿ.. ನನ್ನ ಮಗಳು.. ಎಲ್ಲನೂವೆ. ಅದು ಬಂದ ಮ್ಯಾನೇ ನಾ ಖುಷಿಯಾಗ್ವಿನೇ ಮಾದೇವಿ,  ಬ್ಯಾಡ್ವೇ ಹೇಳ್ತಿನೇ ಕೇಳು. ನಿಂಕಲಿ ಆಗದಿದ್ದರೆ ನಾ ಯಾರ ಕಡಿಗಾದ್ರು ಪೂಜೆ ಮಾಡಸ್ವೆ. ನೀ ದ್ಯಾವ್ರ ಭಾರ ಹೊರುದೇನೂ ಬ್ಯಾಡ. ಆದರೆ ದ್ಯಾವ್ರ ತೇಗಿಬ್ಯಾಡ್ವೆ!! ಅಂಗಲಾಚಿದ.. ಬೇಡಿದ.. ಆಕೆ ಸುತಾರಾಂ ಒಪ್ಪದೇ ತೆಗೆದೇ ಬಿಟ್ಟಳು.

ದೊಂಗ ಹುಮ್ಮಸ್ಸು ಕಳೆದುಕೊಂಡವನಂತೆ ಉಮ್ಮಳಿಸಿದ. ರಾತ್ರಿ ನಿದ್ದೆ ಬರದೇ ಇದ್ದುದ್ದಕ್ಕೆ ಫರ್ಲಾಂಗು ದೂರದಲ್ಲಿ ಗೇರ ಗಿಡದ ಬುಡದಲ್ಲಿ ಮಂಕಾಳು ತೆಗೆತಿದ್ದ ಕಳ್ಳಭಟ್ಟಿ ಸಾರಾಯಿ ಮಾಡುವಲ್ಲಿಗೆ ಬಂದ. ಎಷ್ಟು ಕುಡಿದಿದ್ದನೋ? ಆಟದ ಪದ ತುಟಿಯಲ್ಲಿ ಕುಣಿಯತೊಡಗಿತು. “ಸೋತೆನು ನಿನ್ನಯ ಈ ಪರಿ ಸೊಬಗಿನ ರೀತಿಗಾಗಿ ಚೆಲುವೆ, ದಿತ್ತೊಂತ.. ದಿತ್ತೊಂತ್.. ದಿನ್.. ತಾದಿನ್..”  ಎನ್ನುತ್ತ ದುಂಕುಕಾಲನ್ನು ನೆಗೆನೆಗೆದು ಹಾಕುತ್ತ, ಪದ ಹಾಡುತ್ತ ಮನೆಗೆ ಬಂದ. ಮತ್ತೆ ಹೆಣ್ಣುಮಗಳ ಚಿತ್ರ ಅವನ ಮನಸ್ಸಿನಲ್ಲಿ ಕುಣಿಯುತ್ತಿತ್ತು. ಮಾದೇವಿ.. ಮಾದೇವಿ.. ಕೂಗಿದ.. ಕಿರುಚಿದ. ಕೋಣೆ ಕೋಣೆ ತಿರುಗಿದ. ಎಲ್ಲೂ ಮಾದೇವಿ ಕಾಣಲಿಲ್ಲ. ಆದರೆ ದೇವಿ ಭಕ್ತ ಗಿರಿಧರ ಬಂದಾಗಲೆಲ್ಲಾ ತನ್ನ ಕುತ್ತಿಗೆಗೆ ಸುತ್ತಿಕೊಳ್ಳುತ್ತಿದ್ದ ಟವಲ್ಲು ಬಿದ್ದಿತ್ತು.

ದೊಂಗ ಒಮ್ಮಿಂದೊಮ್ಮೇಲೆ ಮಾನಸಿಕ ಸ್ಥಿಮಿತ ಕಳಕೊಂಡ. ಆ ಟವೆಲ್ಲನ್ನು ತೆಗೆದು ಒಮ್ಮೇಲೆ ದೂರಕ್ಕೆಸೆದ. ಹುಳ ಹತ್ತಿದು! ಅಯ್ಯೋ ಹುಳ ಹತ್ತಿದು! ಎನ್ನುತ್ತಾ ಅರಚತೊಡಗಿದ. ಎದ್ದು ಬಂದ ಗಂಡುಮಕ್ಕಳು ಸಮಾಧಾನಿಸಿದರೂ ಕೂಗುತ್ತಾ, ಅರಚುತ್ತಾ, ಮೈಕೈ ಕೆರೆದುಕೊಳ್ಳುತ್ತಾ ಡೊಂಕಾದ ಕಾಲನ್ನು ಇನ್ನಷ್ಟು ಡೊಂಕಾಗಿಸಿಕೊಂಡು ಅಗಲಿಸಿ ನಡೆಯುತ್ತಾ, ಹುಳ ಕೆಡವುವವನಂತೆ ಮಾಡುತ್ತಾ, ನಡುರಾತ್ರಿಯೇ ಮನೆಜಗಲಿಯಿಂದ ಹೊರಬಿದ್ದಿದ್ದ.

‍ಲೇಖಕರು nalike

June 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. T S SHRAVANA KUMARI

    ಕತೆ ತುಂಬಾ ಚೆನ್ನಾಗಿದೆ. ಇಷ್ಟವಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: