ಬರಗೂರು ರಾಮಚಂದ್ರಪ್ಪ ವಿಶೇಷ ಲೇಖನ: ವೈರುಧ್ಯಗಳ ಉರಿಯಲ್ಲಿ ಕೊರೊನ ಮತ್ತು ಸಂವಿಧಾನ

ಬರಗೂರು ರಾಮಚಂದ್ರಪ್ಪ

ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಅವರು ಮೇ ೫ ರಂದು ಮಾತನಾಡುತ್ತ ‘ಮೋದಿಯವರು ಕೊರೊನ ಕುರಿತು ಮೊದಲೇ ಎಚ್ಚರ ವಹಿಸಿದ್ದು ಸಂತೋಷ ತಂದಿತು’ ಎಂದರು. ಈ ಒಂದೇ ಸಾಲನ್ನು ಒಂದೆರಡು ಆಂಗ್ಲ ವಾಹಿನಿಗಳು ಮತ್ತೆ ಮತ್ತೆ ತೋರಿಸಿದವು.

ಅದಕ್ಕೆ ಕಾರಣವಿತ್ತು. ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ಹಿಂದೊಮ್ಮೆ ಅಮರ್ತ್ಯ ಸೇನ್ ಟೀಕಿಸಿದ್ದರು. ಇದಕ್ಕೆ ಬಹಿರಂಗ ಸಭೆಯಲ್ಲಿ ಪ್ರತಿಕ್ರಿಯಿಸಿದ ಮೋದಿಯವರು `ನಮಗೆ ಹಾರ್ವರ್ಡ್ ಬೇಡ ಫಾರ್ವರ್ಡ್ ಬೇಕು’ ಎಂಬರ್ಥದ ಮಾತುಗಳಿಂದ ಅಮರ್ತ್ಯ ಸೇನ್ ಅವರನ್ನು ಪರೋಕ್ಷವಾಗಿ ಚುಚ್ಚಿದ್ದರು. ಹಾರ್ವರ್ಡ್ ವಿಶ್ವವಿದ್ಯಾಲಯದ ಉತ್ಪನ್ನವೆಂಬ ನೆಲೆಯಲ್ಲಿ ಸೇನ್ ಅವರಿಗೆ ಟಾಂಗ್ ನೀಡಿದ್ದರು.

ಇಷ್ಟಾದರೂ ಅಮರ್ತ್ಯ ಸೇನ್ ಕೊರೊನ ಸಂದರ್ಭದಲ್ಲಿ ಮೋದಿಯವರನ್ನು ಒಂದು ಸಾಲಿನಲ್ಲಿ ಮೆಚ್ಚಿದರು. ಮುಂದುವರಿದು ಕೊರೊನ ತಡೆಗಟ್ಟುವಲ್ಲಿ ಕೇರಳ ರಾಜ್ಯ ಸರಕಾರ ಕೈಗೊಂಡ ಕ್ರಮಗಳನ್ನು ಪ್ರಶಂಸಿಸಿ ಅದೇ ಸರಿಯಾದ ಮಾದರಿ ಎಂದು ವಿವರಿಸಿದರು. ವಿಪರ್ಯಾಸವೆಂದರೆ ದೇಶ, ವಿದೇಶದ ಮುಖ್ಯ ಮಾಧ್ಯಮಗಳು ಹಾಡಿ ಹೊಗಳಿದ ಕೇರಳ ಮಾದರಿಯು ನಮ್ಮ ಕೇಂದ್ರ ಮಾದರಿಯಾಗಲಿಲ್ಲ.

ಅದೇ ಮೇ ೫ ರಂದು ಇನ್ನೊಬ್ಬ ನೊಬೆಲ್ ಪ್ರಶಸ್ತಿ ಪುರಸ್ಕೃತ ತಜ್ಞ ಅಭಿಜಿತ್ ಬ್ಯಾನರ್ಜಿ ಅವರು ಕೊರೊನ ಸಂದರ್ಭದ ಬಗ್ಗೆ ಮಾತನಾಡುತ್ತ ‘ಬಿಕ್ಕಟ್ಟಿನ ಸಂದರ್ಭದಲ್ಲಿ ಒಬ್ಬ ಸಮರ್ಥ ವ್ಯಕ್ತಿಯಿಂದಲೇ ಪರಿಹಾರ ಸಾಧ್ಯವೆಂಬ ನಿಲುವು ಬದಲಾಗಬೇಕು’ ಎಂಬರ್ಥದ ಅಭಿಪ್ರಾಯವನ್ನು ದೃಢವಾಗಿ ಹೇಳಿದರು. ಅಮೆರಿಕ ಮತ್ತು ಬ್ರೆಜಿಲ್‌ಗಳ ಉದಾಹರಣೆ ಮೂಲಕ ಪರೋಕ್ಷವಾಗಿ ಭಾರತದ ನಾಯಕತ್ವಕ್ಕೂ ಪ್ರತಿಕ್ರಿಯಿಸಿದರು. ಬಡವರ ಕೈಲಿ ಹಣ ಇರುವಂತೆ ನೋಡಿಕೊಳ್ಳದಿದ್ದರೆ, ಬೇಡಿಕೆ ಶಕ್ತಿಯನ್ನು ವಿಸ್ತರಿಸದಿದ್ದರೆ, ಯಾವುದೇ ಆರ್ಥಿಕ ಪುನಶ್ಚೇತನವೂ ಸೂಕ್ತವಾಗದು ಎಂದೂ ಹೇಳಿದರು.

ಇಬ್ಬರು ವಿಶ್ವವಿಖ್ಯಾತ ಭಾರತೀಯ ಆರ್ಥಿಕ ತಜ್ಞರ ಅಭಿಪ್ರಾಯಕ್ಕೆ ನಮ್ಮ ಸರ್ಕಾರಗಳು ಎಷ್ಟರಮಟ್ಟಿಗೆ ಮನ್ನಣೆ ನೀಡುತ್ತವೆಯೋ ಗೊತ್ತಿಲ್ಲ. ಆದರೆ ಇವರಿಬ್ಬರ ದೃಷ್ಟಿಕೋನದಲ್ಲಿ ವಾಸ್ತವ ಪ್ರಜ್ಞೆಯಿದೆಯೆಂದು ಸಾಮಾನ್ಯರಿಗೂ ಗೊತ್ತಾಗುತ್ತದೆ. ಇಂಥ ವೈರುಧ್ಯ ಕಮ್ ವಿಪರ್ಯಾಸಗಳ ಸರದಿ ಸಾಲಿಗೆ ಕೊರೊನ ಸಂದರ್ಭ ಸಾಕ್ಷಿಯಾಗಿದೆ.

ಈಗ ಗಮನಿಸಿ- ಮೇ ಒಂದರಂದು ಕೇಂದ್ರ ಸರ್ಕಾರವು ಮದ್ಯ ಮಾರಾಟ ಸಲ್ಲದು ಎಂದು ಹೇಳಿತು. ಇದೇ ಸರ್ಕಾರ ಮೇ ಎರಡರಂದು ಕೆಂಪು, ಕಿತ್ತಳೆ, ಹಸಿರು ಎಲ್ಲಾ ಝೋನ್‌ಗಳಲ್ಲೂ ಮದ್ಯ ಮಾರಾಟ ಮಾಡಬಹುದೆಂದು ಸೂಚಿಸಿತು. ಆದರೆ ಮದ್ಯಕ್ಕೆ ಇದ್ದ ಭಾಗ್ಯ ಇತರೆ ಅಂಗಡಿಗಳಿಗೆ ಇರಲಿಲ್ಲ. ಸಣ್ಣಪುಟ್ಟ ವ್ಯಾಪಾರಸ್ಥರು ಮತ್ತು ಗ್ರಾಹಕರು ಭಾಗ್ಯ ವಂಚಿತರಾದರು. ಸಮಾಧಾನದ ಸಂಗತಿಯೆಂದರೆ ಕೇಂದ್ರ ಸರ್ಕಾರದ ಆರೋಗ್ಯ ಸಚಿವರಾದ ಡಾ. ಹರ್ಷವರ್ಧನ್ ಅವರು ಮೇ ೯ ರಂದು `ವೈಯಕ್ತಿಕವಾಗಿ ನಾನು ಮದ್ಯ ಮಾರಾಟ ನಿಷೇಧವನ್ನು ಸಡಿಲಿಸಿದ್ದಕ್ಕೆ ವಿರೋಧಿ’ ಎಂದು ಕಳಕಳಿಯಿಂದ ಸಕಾರಣವಾಗಿ ವಿವರಿಸಿದರು. ಅವರೇ ಆರೋಗ್ಯ ಸಚಿವರಾಗಿರುವ ಸರ್ಕಾರದ ನೀತಿ ಬೇರೆಯೇ ಆಗಿದ್ದು ಒಂದು ವೈರುಧ್ಯ.

ಮದ್ಯವಿಲ್ಲದೆ ಕೆಲವರು ಆತ್ಮಹತ್ಯೆ ಮಾಡಿಕೊಂಡರು ಎಂಬ ಸುದ್ದಿಗಳಿದ್ದವು. ಮದ್ಯ ಮಾರಾಟ ಆರಂಭವಾದ ಮೇಲೆ ಕುಡಿದವರು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ, ಹತ್ಯೆ ಮಾಡಿದರು. ಒಬ್ಬ ಹೆಂಡತಿಯನ್ನು, ಇನ್ನೊಬ್ಬ ತನ್ನದೇ ಮಗುವನ್ನು, ಮತ್ತಿತರರು ಗೆಳೆಯರನ್ನು ಹೀಗೆ ನಡೆದ ಹತ್ಯೆಗಳ ವೈರುಧ್ಯವನ್ನೂ ಗಮನಿಸಬೇಕು. ದೆಹಲಿ ಸರ್ಕಾರವು ಮದ್ಯದ ಮೇಲೆ ಅತಿ ಹೆಚ್ಚು ತೆರಿಗೆ ಹಾಕಿದಾಗ ಕೆಲವರು ಕೈಯಲ್ಲಿ ಬಾಟಲ್ ಹಿಡಿದು “ನೂರಕ್ಕೆ ನೂರು ತೆರಿಗೆ ಹಾಕಿದರೂ ಚಿಂತೆಯಿಲ್ಲ. ಕೊಟ್ಟು ಕುಡಿಯುತ್ತೇವೆ. ಇದರ ಮೂಲಕ ದೇಶಸೇವೆ ಮಾಡುತ್ತೇವೆ” ಎಂದು ಘೋಷಿಸಿದರು. ಕುಡಿತದ ಅಮಲು ಕೂಡ ದೇಶಸೇವೆ ಎನ್ನುವಷ್ಟರ ಮಟ್ಟಿಗೆ ನಾಗರಿಕ ಪ್ರಜ್ಞೆ ಪಾತಾಳ ಸೇರಿಬಿಟ್ಟಿತು. !

ಇನ್ನೊಂದು ವೈರುಧ್ಯವನ್ನೂ ನಮ್ಮ ‘ನಾಗರಿಕ ಪ್ರಜ್ಞೆ’ ಕಣ್ತುಂಬಿಕೊಂಡಿದೆ. ಮದ್ಯಮಾರಾಟದಂಗಡಿಗಳ ಮುಂದೆ ಕಿಲೋಮೀಟರ್ ಗಟ್ಟಲೆ ಸರದಿ ಸಾಲು ಒಂದು ಕಡೆಗಿದ್ದರೆ, ಇನ್ನೊಂದು ಕಡೆ, ಕೆಲವು ನೇತಾರರು ಕೊಡುವ ಆಹಾರದ ಪೊಟ್ಟಣಗಳಿಗಾಗಿ ನಿಜ ನಾಗರಿಕರ ಸರದಿ ಸಾಲು. ಒಂದು ಅಮಲಿಗೆ ಇನ್ನೊಂದು ಹಸಿವಿಗೆ. ಇದು ಕೊರೊನ ಕರುಣಿಸಿದ ವ್ಯಂಗ್ಯ ರೂಪಕ !

ಹಸಿವು ನೀಗಿಸಲು ಸಾಲು ಸಾಲು ನಿಂತವರು, ಅವರಿಗೆ ಆಹಾರ ವಿತರಿಸಿದ ನೇತಾರರು – ನಮ್ಮ ದೇಶದ ಒಂದು ವಾಸ್ತವವನ್ನು ಬಯಲು ಮಾಡಿದರು. ಕೆಲವು ನೇತಾರರ ಖಜಾನೆಯಲ್ಲಿ ಸಾವಿರಾರು ಜನಕ್ಕೆ ಆಹಾರ ಹಂಚಲು ಹೆಚ್ಚುವರಿ ಹಣವಿದೆ. ಬಡ ನಾಗರಿಕರ ಕೈ ಖಾಲಿಯಾಗಿ ನೇತಾರರ ಮುಂದೆ ಒಡ್ಡುತ್ತಿದೆ ! ಇಂಥ ಸಂಕಷ್ಟ ಸಂದರ್ಭದಲ್ಲಿ ನೆರವಿಗೆ ಬಂದ ನೇತಾರರನ್ನು ಮೆಚ್ಚುತ್ತಲೇ ಕೊರೊನ ಬಯಲು ಮಾಡಿದ ಕಟು ವಾಸ್ತವವನ್ನೂ ಗಮನಿಸಲೇಬೇಕು. ಹೀಗೆ ಆಹಾರ ಕೊಟ್ಟವರ ಟಿ.ವಿ. ಕಾರ್ಯಕ್ರಮಗಳು, ಪತ್ರಿಕಾ ಜಾಹೀರಾತುಗಳು ಬಡವರ ದೈನ್ಯಕ್ಕೆ ಹಿಡಿದ ಕನ್ನಡಿಯಂತೆ ಕಂಗೊಳಿಸಿದವು ! ಈ ನಡುವೆ ತಮ್ಮ ಆಸ್ತಿ ಮಾರಿ ಅಥವಾ ಅಡವಿಟ್ಟು ಅದರಿಂದ ಬಂದ ಹಣದಲ್ಲಿ ಬಡಜನರಿಗೆ ಆಹಾರ ಕೊಟ್ಟು ನಿಜ ಸೇವೆ ಗೈದವರೂ ಇದ್ದಾರೆ. ಅವರಿಗೆ ನಮನಗಳು ಸಲ್ಲಲೇ ಬೇಕು.

ಮುಂದಿನ ಚಿತ್ರ ಹೀಗಿದೆ : ಲಾಕ್‌ಡೌನ್ ಸ್ವಲ್ಪ ಸಡಿಲಿಕೆಯಾದ ಕೂಡಲೇ ರಸ್ತೆಗಿಳಿದ ಕಾರುಗಳು, ಬೈಕುಗಳು ಸಂಭ್ರಮಿಸುತ್ತಿದ್ದರೆ, ಇನ್ನೊಂದು ಕಡೆ ರಸ್ತೆಯಲ್ಲಿ ನೂರಾರು ಕಿಲೋಮೀಟರ್ ದೂರಕ್ಕೆ ಹೋಗುತ್ತಿದ್ದ ವಲಸಿಗರ ಕಾಲ್ನಡಿಗೆ ಸಂಕಟ ತರುತ್ತಿತ್ತು. ಇವರ ಬದುಕಿನಲ್ಲಿ ಏನೆಲ್ಲ ನಡೆಯಿತು ! ಮೇ ೪ ರಂದು ಸುಸ್ತಾಗಿ ರೈಲು ಹಳಿಗೆ ತಲೆಕೊಟ್ಟು ಮಲಗಿದ ೧೬ ಜನ ಸತ್ತರು. ೧೪ ರಂದು ರಸ್ತೆ ಅಪಘಾತಕ್ಕೆ ಸಿಕ್ಕಿ ೧೪ ಜನ ಸತ್ತರು. ೧೬ ರಂದು ಉತ್ತರ ಪ್ರದೇಶದಲ್ಲಿ ೨೪ ಜನ, ಮಧ್ಯಪ್ರದೇಶದಲ್ಲಿ ೫ ಜನ ಅಪಘಾತದಲ್ಲಿ ಸತ್ತರು. ಒಟ್ಟು ೭೦ಕ್ಕೂ ಹೆಚ್ಚು ಜನ ಕಾಲ್ನಡಿಗೆ ವಲಸಿಗರು ಸತ್ತಿದ್ದಾರೆ. ದಾರಿಯಲ್ಲೇ ಹೆರಿಗೆ, ಸಾವು ! ಮಕ್ಕಳನ್ನು ಕಂಕುಳಲ್ಲಿ ಮತ್ತು ಗಂಟನ್ನು ನೆತ್ತಿಯಲ್ಲಿ ಹೊತ್ತ ತಾಯಂದಿರ ನೋವು ! ಅದೇ ರಸ್ತೆಯಲ್ಲಿ ರೊಯ್ಯನೆ ಹೋಗುವ ವಾಹನಗಳ ನಲಿವು ! ಎಂಥ ವೈರುಧ್ಯ ! ಮೇ ೧೩ ರಂದು ಕಾಂಗೈನ ಮನೀಶ್ ತಿವಾರಿಯವರು ಈ ವಲಸಿಗರ ಕಷ್ಟವನ್ನು ದೇಶ ವಿಭಜನೆ ಕಾಲದ ವಲಸೆಗೆ ಹೋಲಿಸಿದ್ದು ಇಲ್ಲಿ ಉಲ್ಲೇಖನೀಯ..

ಮೇ ೨ ರಂದು ಕರ್ನಾಟಕದ ಕೆಂಪೇಗೌಡ ಬಸ್ ನಿಲ್ದಾಣದಲ್ಲೊಂದು `ವಿಶಿಷ್ಟ ವಿಪರ್ಯಾಸ ಸರಣಿ’ ಸಂಭವಿಸಿತು. ಸರ್ಕಾರವು ತಂತಮ್ಮ ಊರುಗಳಿಗೆ ಹೋಗಲು ರಾಜ್ಯದ ಜನರಿಗೆ ಬಸ್ ವ್ಯವಸ್ಥೆ ಮಾಡಿತ್ತು. ಅದು ಹೇಗೆ ? ಹೋಗುವ ಬರುವ ಚಾರ್ಜನ್ನು ಪ್ರಯಾಣಿಕರೇ ಕೊಡಬೇಕು. ೩೦ ಜನರು ಸೇರಿ ಒಂದು ಬಸ್ ಬುಕ್ ಮಾಡಿಕೊಳ್ಳಬೇಕು. ಇದು ವಲಸೆ ಕಾರ್ಮಿಕರು ಭರಿಸಬೇಕಾದ ವೆಚ್ಚ ! ಕಾಂಗ್ರೆಸ್ ಈ ಸಂದರ್ಭವನ್ನು ಚೆನ್ನಾಗಿ ಬಳಸಿಕೊಂಡಿತು. ವಲಸೆ ಕಾರ್ಮಿಕರನ್ನು ಉಚಿತವಾಗಿ ಕಳಿಸಿ ಎಂದು ೩ನೇ ತಾರೀಕು ಒಂದು ಕೋಟಿ ರೂಪಾಯಿಗಳ ಚೆಕ್ ನೀಡಲು ಮುಂದಾಯಿತು. ಬಸ್ ನಿಲ್ದಾಣಕ್ಕೆ ಬಂದ ಕೈ ನಾಯಕರು ಜನರಿಗೆ ಭರವಸೆ ನೀಡಿ ಆಹಾರದ ವ್ಯವಸ್ಥೆಯನ್ನೂ ಮಾಡಿದರು. ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು ಕೂಡಲೇ ಎಚ್ಚೆತ್ತುಕೊಂಡು ಮೂರು ದಿನಗಳ ಕಾಲ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿದರು.

ಕೇಂದ್ರ ಸರಕಾರವೇನೂ ಕಡಿಮೆಯಲ್ಲ ! ಮೇ ಎರಡನೇ ತಾರೀಖು ವಲಸಿಗರ ರೈಲು ಪ್ರಯಾಣಕ್ಕೆ ಅಧಿಕೃತ ಲಿಖಿತ ನಿರ್ದೇಶನ ನೀಡಿ, ರಾಜ್ಯಗಳು ಪ್ರಯಾಣಿಕರಿಂದ ಹಣ ಸಂಗ್ರಹಿಸಿ ವೆಚ್ಚವನ್ನು ಭರಿಸಬೇಕೆಂದು ತಿಳಿಸಿತು. ಅದರಂತೆ ವಲಸೆ ಕಾರ್ಮಿಕರು ಪ್ರಯಾಣ ದರವನ್ನು ನೀಡಿಯೇ ಪ್ರಯಾಣ ಮಾಡಬೇಕಾಯಿತು. ಮೇ ನಾಲ್ಕರಂದು ಶ್ರೀಮತಿ ಸೋನಿಯಾ ಗಾಂಧಿಯವರು ದರ ವಸೂಲಾತಿಯನ್ನು ಖಂಡಿಸಿದರು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಗಳು ಪ್ರಯಾಣ ವೆಚ್ಚವನ್ನು ಭರಿಸಬೇಕೆಂದು ಹೇಳಿದ್ದಲ್ಲದೆ, ಕೇಂದ್ರ ಸರ್ಕಾರಕ್ಕೆ ಬೇಕಿದ್ದರೆ ಕಾಂಗ್ರೆಸ್ ಪಕ್ಷವೇ ವಲಸಿಗರ ಪ್ರಯಾಣ ವೆಚ್ಚ ನೀಡುವುದಾಗಿ ಘೋಷಿಸಿದರು. ಕೂಡಲೇ ಕೇಂದ್ರ ಸರ್ಕಾರವು ತಾನು ಶೇ. ೮೫ ರಷ್ಟು, ರಾಜ್ಯಗಳು ಶೇ. ೧೫ ರಷ್ಟು ವೆಚ್ಚ ಭರಿಸುವುದಾಗಿ ಹೇಳಿತು. ಆದರೂ ಮೇ ಎರಡರ ಲಿಖಿತ ನಿರ್ದೇಶನವನ್ನು ತೋರಿಸಿದರೂ ಒಪ್ಪದ ಪಕ್ಷದ ವಕ್ತಾರ ಶ್ರಿ ಸಂಬಿತ್ ಪಾತ್ರ ಅವರು ಶೇ. ೮೫ ಮತ್ತು ಶೇ. ೧೫ ರ ಪಾಲುದಾರಿಕೆ ಆದೇಶ ಮೊದಲೇ ಇತ್ತು ಎಂಬಂತೆ ಅದೇ ದಿನ ಆಂಗ್ಲ ವಾಹಿನಿಯೊಂದರಲ್ಲಿ ವಾದಿಸಿದರು. ಇಲ್ಲಿ ಎರಡು ಪಕ್ಷಗಳೂ ‘ರಾಡಿಕೀಯ’ಕ್ಕೆ ಸಾಕ್ಷಿಯಾದವು !

ವಲಸೆ ಕಾರ್ಮಿಕರು ಸ್ವಂತ ಊರುಗಳಿಗೆ ತಲುಪಲು ಮೊದಲು ಬಸ್ ವ್ಯವಸ್ಥೆ ಮಾಡಿದ್ದ ಕರ್ನಾಟಕ ಸರ್ಕಾರ, ಅರ್ಥಿಕ ಚಟುವಟಿಕೆಯ ಮುಂದುವರಿಕೆ ಮತ್ತು ದೃಢತೆಗಾಗಿ ವಲಸೆ ಕಾರ್ಮಿಕರು ಇಲ್ಲೇ ಇರಬೇಕೆಂದು ಮೇ ಆರರಂದು ಆದೇಶಿಸಿ, ಪ್ರಯಾಣ ಸೌಲಭ್ಯವನ್ನು ರದ್ದು ಮಾಡಿತು. ಇದಕ್ಕೆ ಪ್ರಬಲ ವಿರೋಧ ಬಂದ ಕೂಡಲೇ ಮತ್ತೆ ಪ್ರಯಾಣ ಸೌಲಭ್ಯವನ್ನು ಆರಂಭಿಸುವುದಾಗಿ ಏಳನೇ ತಾರೀಕಿನಂದು ಘೋಷಿಸಿತು. ಶ್ರೀ ಯಡಿಯೂರಪ್ಪನವರ ಶ್ರಮಕ್ಕೆ ಸರಿದೂಗುವ ಸಮನ್ವಯತೆಯ ಕೊರತೆ ಢಾಳಾಗಿ ಕಾಣಿಸಿತು.

ಹೀಗೆ ಇಬ್ಬಂದಿ ನಿಲುವು ತಾಳುವುದರಲ್ಲಿ ಕೇಂದ್ರ ಸರ್ಕಾರವೂ ಹಿಂದೆ ಬಿದ್ದಿಲ್ಲ. ಏಪ್ರಿಲ್ ೨೯ರಂದು ವಲಸೆ ಕಾರ್ಮಿಕರನ್ನು ಕರೆಸಿಕೊಳ್ಳಲು ಆದೇಶಿಸಿದ್ದ ಕೇಂದ್ರ ಸರ್ಕಾರವು ಮೇ ಆರರಂದು ಹೊರಹೋಗಲು ವಲಸೆ ಕಾರ್ಮಿಕರಿಗೆ ಸೌಲಭ್ಯ ಒದಗಿಸುವುದಿಲ್ಲವೆಂದಿತು. ಆದರೆ ಉತ್ತರ ಪ್ರದೇಶ ಸರ್ಕಾರವು ಏಪ್ರಿಲ್ ೨೯ಕ್ಕೆ ಮುಂಚೆಯೇ ಅಂದರೆ ಕೇಂದ್ರ ಸರ್ಕಾರದ ಸೂಚನೆಗೆ ಮುನ್ನವೇ ವಲಸಿಗ ಕಾರ್ಮಿಕರನ್ನು ಕರೆಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭಿಸಿತ್ತು. ಆನಂತರ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರೇ ಹತ್ತು ಸಾವಿರ ಬಸ್ಸುಗಳಲ್ಲಿ ಆರೂವರೆ ಲಕ್ಷ ಜನರನ್ನು ಕರೆಸಿಕೊಳ್ಳಲಾಗಿದೆಯೆಂದು ಹೇಳಿದರು.

ಈ ಎಲ್ಲ ವೈರುಧ್ಯಗಳ ನಡುವೆ ಮತ್ತೊಂದು ತೀರಾ ಅನಪೇಕ್ಷಿತ ಹಾಗೂ ಖಂಡನೀಯ ಘಟನೆ ನಡೆಯಿತು. ಮಾರ್ಚ್ ೧೩ ರಿಂದ ೧೫ ರವರೆಗೆ ದೆಹಲಿಯಲ್ಲಿ ಸಮಾವೇಶಗೊಂಡಿದ್ದ ತಬ್ಲೀಗ್ ಮುಸ್ಲಿಮರು ತಂತಮ್ಮ ಊರುಗಳಿಗೆ ಬಂದಿದ್ದಲ್ಲದೆ ಅವರಲ್ಲಿ ಕೆಲವರು ಆರೋಗ್ಯ ಪರೀಕ್ಷೆಗೆ ಸಹಕರಿಸಲಿಲ್ಲ. ಗಲಾಟೆ ಮಾಡಿದರು. ಬೆಂಗಳೂರಿನ ಪಾದರಾಯನಪುರದಲ್ಲಿ ದಾಂಧಲೆ ನಡೆಯಿತು. ಇದು ಖಂಡಿತ ಖಂಡನೀಯ. ಅದೇ ಸಂದರ್ಭದಲ್ಲಿ ಮುಸ್ಲಿಮರೆಲ್ಲ ಇಂಥವರೇ ಎಂದೂ, ಕೊರೊನ ಹೆಚ್ಚಾಗಲು ತಬ್ಲೀಗ್‌ಗಳೇ ಕಾರಣಕರ್ತರೆಂದೂ ದೂಷಿಸುತ್ತ, ಇಡೀ ಒಂದು ಸಮುದಾಯವನ್ನೇ ಕೆಟ್ಟ ಪಟ್ಟಿಗೆ ಸೇರಿಸುವ ಕೋಮುವಾದಿ ದೃಷ್ಟಿ ದೋಷ ಕಾಣಿಸಿದ್ದೂ ಖಂಡನೀಯ.

ಹೀಗೆ ಮಾತಾಡುವವರು ತಬ್ಲೀಗ್‌ಗಳ ವರ್ತನೆ ಕುರಿತು ಪ್ರಗತಿಪರರು ಯಾಕೆ ಟೀಕಿಸುತ್ತಿಲ್ಲ ಎಂದು ಈಗಲೂ ಪ್ರಶ್ನಿಸುತ್ತಿದ್ದಾರೆ. ಬಹುಶಃ ಇಂಥವರು ಪತ್ರಿಕೆಗಳಲ್ಲಿ ತಂತಮ್ಮ ಹೇಳಿಕೆಗಳನ್ನು ಮಾತ್ರ ನೋಡುತ್ತಾರೆಂಬ ಅನುಮಾನ ಹುಟ್ಟುತ್ತದೆ. ನನ್ನನ್ನೂ ಒಳಗೊಂಡಂತೆ ಕೆಲವರು ತಬ್ಲೀಗ್ ಗಳ ವರ್ತನೆಯನ್ನು ಖಂಡಿಸಿದ್ದೇವೆ. ಜೊತೆಗೆ ಕೋಮು ಭಾವನೆ ಕೆರಳಿಸುವುದನ್ನೂ ವಿರೋಧಿಸಿದ್ದೇವೆ. ಸ್ವತಃ ಮುಸ್ಲಿಂ ಮೂಲದ ಅನೇಕ ಲೇಖಕರು, ಚಿಂತಕರು, ತಬ್ಲೀಗ್ ವರ್ತನೆಯನ್ನು ವಿರೋಧಿಸಿದ್ದಾರೆ. ಇದು ಪತ್ರಿಕೆಗಳಲ್ಲಿ ವರದಿಯಾಗಿದೆ.

ಇಲ್ಲಿಯೇ ಒಂದು ವಿಷಯದತ್ತ ಗಮನ ಸೆಳೆಯಬೇಕು. ನಿಜ, ತಬ್ಲೀಗ್‌ಗಳು ತಪ್ಪು ಮಾಡಿದ್ದನ್ನು ವಿರೋಧಿಸಬೇಕು. ಆದರೆ ಇಂಥದೇ ಘಟನೆಗಳು ಬೇರೆ ಕಡೆ, ಬೇರೆ ಧರ್ಮ ಹಾಗೂ ಜನಾಂಗಗಳಿಂದ ನಡೆದಿರುವುದನ್ನೂ ಗಮನಿಸಬೇಕು. ಮಹಾರಾಷ್ಟ್ರದ ನಾಂದೇಡ್ನಿಂದ ಪಂಜಾಬಿಗೆ ಬಂದ ಯಾತ್ರಿಕರಿಂದ ರಾಜ್ಯದ ಶೇ. ೬೭ ಕೊರೊನಾ ಪ್ರಕರಣಗಳು ಸಂಭವಿಸಿವೆಯೆಂದು ಮುಖ್ಯಮಂತ್ರಿ ಶ್ರೀ ಅಮರೇಂದ್ರಸಿಂಗ್ ಅವರೇ ಸ್ವತಃ ಹೇಳಿದ್ದಾರೆ. ತಮಿಳುನಾಡಿನ ಕೋಯಂಬೇಡು ದೊಡ್ಡ ಮಾರ್ಕೆಟ್‌ಗೆ ಮೂರ್ನಾಲ್ಕು ದಿನ ಮುಕ್ತ ಪ್ರವೇಶ ಕಲ್ಪಿಸಿದ ಫಲವಾಗಿ ಆ ರಾಜ್ಯದಲ್ಲಿ ಸುಮಾರು ೨೦೦೦ಕ್ಕೂ ಮೀರಿ ಕೊರೊನ ಸೋಂಕಿತರು ಹೆಚ್ಚಾದರೆಂದು ಅಲ್ಲಿನ ಸರ್ಕಾರವೇ ಹೇಳಿದೆ. ಈ ಮಾರ್ಕೆಟ್ ಸೋಂಕು ಆಂಧ್ರಕ್ಕೂ ಹಬ್ಬಿದೆ. ಸದ್ಗುರು ಒಬ್ಬರು ಸಂಘಟಿಸಿದ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದವರಲ್ಲಿ ಸುಮಾರು ೧೫೦ ಜನರು ಕೊರೊನ ಸೋಂಕಿತರಾದರೆಂಬ ಸುದ್ದಿಯೂ ಬಂದಿತ್ತು. ಫೆಬ್ರವರಿ ೨೪-೨೫ರಂದು ಅಮೆರಿಕ ಅಧ್ಯಕ್ಷರ ಜೊತೆ ಬಂದಿದ್ದ ಸಾವಿರಾರು ಸಿಬ್ಬಂದಿಯಿಂದ ಕೊರೊನ ಬಂತೊ ಇಲ್ಲವೊ ಗೊತ್ತಿಲ್ಲವಾದರೂ ಅವರಾರನ್ನೂ ಪರೀಕ್ಷೆಗೆ ಒಳಪಡಿಸಿರಲಿಲ್ಲ ಎಂಬುದನ್ನೂ ಆ ವೇಳೆಗೆ ಅಮೆರಿಕದಲ್ಲಿ ೭೩ ಜನ ಸೋಂಕಿತರು ಪತ್ತೆಯಾಗಿದ್ದರೆಂಬುದನ್ನೂ ಮಾಹಿತಿಗಾಗಿ ಗಮನಿಸಬೇಕು.

ಜನವರಿಯಿಂದ ಮಾರ್ಚ್ ೨೩ರವರೆಗೆ ಭಾರತಕ್ಕೆ ಅಂತರರಾಷ್ಟ್ರೀಯ ವಿಮಾನಗಳಲ್ಲಿ ಬಂದ ಪ್ರಯಾಣಿಕರು ೭೮.೪ ಲಕ್ಷವಿದ್ದು, ಸಾಕೇತ್‌ ಗೋಖಲೆ ಎಂಬುವರು ಆರ್.ಟಿ.ಐ. ಮೂಲಕ ಪಡೆದ ಮಾಹಿತಿಯಂತೆ ಇವರಲ್ಲಿ ಮಾರ್ಚ್ ೨೩ ರವರೆಗೆ ೧೫, ೨೪, ೨೨೬ ಪ್ರಯಾಣಿಕರನ್ನು ಮಾತ್ರ ಸ್ಕ್ರೀನಿಂಗ್ ಮಾಡಲಾಗಿದೆ. ನಾನಿಲ್ಲಿ ಹೇಳಹೊರಟಿದ್ದು ತಬ್ಲೀಗ್‌ಗಳನ್ನೂ ಮುಸ್ಲಿಮರನ್ನೂ ವಿರೋಧಿಸುವವರು ಸಿಖ್ ಯಾತ್ರಾರ್ಥಿಗಳನ್ನೂ ತಮಿಳರನ್ನೂ ಇತರರನ್ನೂ ವಿರೋಧಿಸಿ ಎಂದು ಹೇಳಲಿಕ್ಕಲ್ಲ. ಕೊರೊನ ಹರಡುವಿಕೆಯ ವಿಷಯದಲ್ಲಿ ಜಾತಿ, ಧರ್ಮ, ಪ್ರದೇಶಗಳನ್ನು ಪರಿಗಣಿಸಿ, ವಿರೋಧಿಸಿ, ಸಾಮಾಜಿಕ ವಾತಾವರಣ ಕೆಡಿಸುವುದು ತಪ್ಪು – ಎಂದು ಹೇಳುವುದಕ್ಕಾಗಿ ಈ ನಿದರ್ಶನಗಳನ್ನು ನೀಡಿದೆ. ಅಷ್ಟೆ.

ಕೊರೊನ ಸೋಂಕಿನ ಸಂದರ್ಭವು ಕೆಲವು ಸಂವಿಧಾನಾತ್ಮಕ ಪ್ರಶ್ನೆಗಳಿಗೂ ಕಾರಣವಾಗಿದೆ.

ಲಾಕ್‌ಡೌನ್ ಅನ್ನು ಅಧಿಕೃತವಾಗಿ ಘೋಷಿಸಿದ್ದು ಕೇಂದ್ರ ಸರ್ಕಾರ. ಅದಕ್ಕನುಗುಣವಾಗಿ ಕೇಂದ್ರ ಸರ್ಕಾರವು ಸೂಕ್ತ ರಾಷ್ಟ್ರೀಯ ನೀತಿಯನ್ನು ರೂಪಿಸಿತ್ತೆ ? ರೂಪಿಸಿ ಘೋಷಣೆ ಮಾಡಿದ್ದರೆ ನೂರಾರು ಕಿಲೋಮೀಟರ್ ನಡೆದೇ ಹೋಗುತ್ತಿದ್ದ ವಲಸಿಗರ ಯಾತನಾಮಯ ಪ್ರಯಾಣವನ್ನು ತಪ್ಪಿಸಬಹುದಿತ್ತು. ಕೇಂದ್ರದ್ದೊಂದು ಕ್ರಮ, ರಾಜ್ಯಗಳದ್ದೊಂದು ಕ್ರಮ ಮತ್ತು ತಂತಮ್ಮ ಕ್ರಮಗಳನ್ನೇ ಒಂದೆರಡು ಗಂಟೆ ಹಾಗೂ ದಿನಗಳಲ್ಲಿ ಬದಲಾಯಿಸುವ ಗೊಂದಲಕ್ಕೆ ಕಾರಣವೆಂದರೆ ಲಾಕ್‌ಡೌನ್‌ಗಿಂತ ಮುಂಚೆ ಎಲ್ಲ ವಿಷಯಗಳನ್ನು ಪರಿಗಣಿಸಿದ ದೂರದೃಷ್ಟಿಯುಳ್ಳ ನೀತಿ ನಿರೂಪಣೆಯ ಗೈರು ಹಾಜರಿ. ಸುಮಾರು ಹದಿಮೂರು ಕೋಟಿಯಷ್ಟು ಇರುವ ವಲಸಿಗ ಶ್ರಮಜೀವಿಗಳು, ಹನ್ನೊಂದು ಕೋಟಿಯಷ್ಟಿರುವ ಅಲೆಮಾರಿ, ಅರೆ ಅಲೆಮಾರಿ, ಬುಡಕಟ್ಟು ಜನ ಮತ್ತು ಬಡವರ್ಗಗಳ ಬಗ್ಗೆ ಪೂರ್ವ ಚಿಂತನೆ ನಡೆಸುವುದು ಅಗತ್ಯವಿತ್ತು. ಪ್ರಜೆಗಳ ಬದುಕುವ ಹಕ್ಕನ್ನು ರಕ್ಷಿಸಬೇಕೆಂದು ಹೇಳುವ ಸಂವಿಧಾನದ ೨೧ನೇ ವಿಧಿ ನೆನಪಾಗಬೇಕಿತ್ತು. ಆಗ ಕೈ ಒಡ್ಡುವವರಿಗೆ ಕೈ ನೀಡುವವರ ಪ್ರದರ್ಶನವನ್ನಾದರೂ ಕಡಿಮೆ ಮಾಡಬಹುದಿತ್ತು. ಶ್ರಮಿಕಮೂಲ ದೂರದೃಷ್ಠಿಯ ಕೊರತೆಯಿಂದ ಕೊರೊನ ಸಂದರ್ಭದಲ್ಲಿ ಭಾರತದ ಬಡವರ ನಿಜ ಸ್ಥಿತಿ ಬಯಲಾಯಿತು. ಸಂವಿಧಾನಾತ್ಮಕವಾಗಿ ಬದುಕುವ ಹಕ್ಕಿನ ಉಲ್ಲಂಘನೆಯೂ ಆಯಿತು.

ಇನ್ನು, ಕೊರೊನ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯತೆಯಲ್ಲಿದ್ದ ಬಿರುಕುಗಳನ್ನು ಗಮನಿಸಬೇಕು. ಈ ಬಿರುಕುಗಳು ಕೂಡ ಸಂವಿಧಾನಾತ್ಮಕ ಪ್ರಶ್ನೆಗಳಿಗೆ ಕಾರಣವಾಗುತ್ತವೆ. ಈಗ ನೋಡಿ : ಮಾನ್ಯ ಶ್ರೀ ಮೋದಿಯವರು ಮಾರ್ಚ್ ೨೪ ರಂದು ರಾತ್ರಿ ಮೊದಲ ಹಂತದ ಲಾಕ್ ಡೌನ್ ಘೋಷಣೆ ಮಾಡಿದರು. ಆದರೆ ಇದಕ್ಕೆ ಮುಂಚೆಯೇ ಕರ್ನಾಟಕ ಸರ್ಕಾರವು ಮಾರ್ಚ್ ೨೧ಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಘೋಷಿಸಿತ್ತು. ಈ ಕ್ರಮಗಳು ಮೊದಲಿಗೆ ಮಾರ್ಚ್ ೩೧ ರವರೆಗೆ ಇರುತ್ತವೆ ಎಂದು ಹೇಳಲಾಗಿತ್ತು. ಶ್ರೀ ಮೋದಿಯವರು ಅರ್ಥಾತ್ ಕೇಂದ್ರ ಸರ್ಕಾರವು ಲಾಕ್ ಡೌನ್ ಘೋಷಿಸುವ ಮುಂಚೆಯೇ ಪಂಜಾಬ್, ಕೇರಳ, ಒರಿಸ್ಸಾ ಸರ್ಕಾರಗಳು ಇದೇ ಮಾದರಿಯ ಕ್ರಮಗಳನ್ನು ಕೈಗೊಂಡಿದ್ದವು. ಕೇಂದ್ರದ ನಿರ್ದೇಶನಕ್ಕೆ ರಾಜ್ಯಗಳು ಕಾದು ಕೂತಿರಲಿಲ್ಲ ಎಂಬುದು ರಾಜ್ಯದ ಸ್ವಾಯತ್ತತೆಯ ಸಂಕೇತವೂ ಆಗಬಹುದು, ಅನಿವಾರ್ಯ ಕ್ರಮವೂ ಆಗಬಹುದು.

ಇಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕು. ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಲಾಕ್‌ಡೌನ್ ಘೋಷಣೆ ಮಾಡಿದ ಮೇಲೆ ತಮಿಳುನಾಡು ಸರ್ಕಾರವು ಜನರು ತಂತಮ್ಮ ಸ್ಥಳಗಳತ್ತ ಸಾಗಲು ೩೬ ಗಂಟೆಗಳ ಕಾಲಾವಕಾಶ ಕೊಟ್ಟಿತು. ಲಾಕ್ ಡೌನ್ ಘೋಷಿಸುವ ಅರ್ಧ ದಿನ ಮುಂಚೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು ಈ ದಿನ ಮುಗಿಯುವುದರೊಳಗೆ ಇಚ್ಛೆಯಿದ್ದವರು ತಂತಮ್ಮ ಊರು ಸೇರಲು ಅವಕಾಶ ಕೊಟ್ಟರು. ಇವು ಯಾವುವೂ ಕೇಂದ್ರದ ಮಾರ್ಗಸೂಚಿಯಲ್ಲಿ ಇರಲಿಲ್ಲ ಎಂಬುದಿಲ್ಲಿ ಮುಖ್ಯ.

ಎರಡನೇ ಹಂತದ ಲಾಕ್ ಡೌನ್ ಏಪ್ರಿಲ್ ಮೇ ೩ರವರೆಗೆ ಇತ್ತು. ಆದರೆ ಆನಂತರದ ಕೇಂದ್ರ ಸರ್ಕಾರ ಅಥವಾ ಮೋದಿಯವರ ಮಾತಿಗೆ ಕಾಯದೆ, ಪಂಜಾಬ್ ಮುಖ್ಯಮಂತ್ರಿಯವರು ಏಪ್ರಿಲ್ ೨೯ ರಂದೇ ತಮ್ಮ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರಿಯುವುದೆಂದು ಘೋಷಿಸಿದರು. ಜೊತೆಗೆ ಕರ್ಫ್ಯೂ ಜಾರಿಗೊಳಿಸಿದ್ದರು. ಮತ್ತೆ ಮೂರನೇ ಹಂತದ ಲಾಕ್‌ಡೌನ್ ಮುಗಿದು ಕೇಂದ್ರದ ಮಾರ್ಗಸೂಚಿ ಬರುವುದಕ್ಕೆ ಮುಂಚೆಯೇ ಇವರು ಮೇ ೧೬ ರಂದೇ ತಮ್ಮ ರಾಜ್ಯದಲ್ಲಿ ೩೧ ರವರೆಗೆ ಲಾಕ್‌ಡೌನ್ ವಿಸ್ತರಿಸುವ ಘೋಷಣೆ ಮಾಡಿದರು. ಮಹಾರಾಷ್ಟ್ರ ಕೂಡ ಕೇಂದ್ರಕ್ಕೆ ಕಾಯದೆ ೩೧ ರವರೆಗೆ ಲಾಕ್‌ಡೌನ್ ಘೋಷಿಸಿತು. ಕೇಂದ್ರದ ಮಾರ್ಗಸೂಚಿಗೆ ಮುಂಚೆಯೇ ಕರ್ನಾಟಕ ಸರ್ಕಾರವು ೩ನೇ ಲಾಕ್‌ಡೌನ್ ಅನ್ನು ಎರಡು ದಿನ ವಿಸ್ತರಿಸಿತು. ಕೇಂದ್ರ ಸರ್ಕಾರವು ಮೂರನೇ ಹಂತದ ಲಾಕ್ ಡೌನ್ ಮೇ ೧೭ ರವರೆಗೆ ಎಂದಿದ್ದರೂ ತೆಲಂಗಾಣ ಮುಖ್ಯಮಂತ್ರಿ ಶ್ರೀ ಚಂದ್ರಶೇಖರ್ ರಾವ್ ತಮ್ಮ ರಾಜ್ಯದಲ್ಲಿ ಮೇ ೨೯ ರವರೆಗೆ ಲಾಕ್ ಡೌನ್ ಇರುತ್ತದೆ ಎಂದು ಮೇ ೫ರಂದು ಹೇಳಿಕೆ ಕೊಟ್ಟಿದ್ದರು. ಆರೋಗ್ಯ ಸಿಬ್ಬಂದಿಗೆ ತೊಂದರೆ ಕೊಡುವ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಕುರಿತು ಕೇಂದ್ರ ಸರ್ಕಾರವು ಏಪ್ರಿಲ್ ೨೨ ರಂದು ಸುಗ್ರೀವಾಜ್ಞೆ ತರಲು ನಿರ್ಧರಿಸಿದ್ದರೆ, ಕರ್ನಾಟಕವು ೨೦ ರಂದೇ ನಿರ್ಧಾರ ತೆಗೆದುಕೊಂಡಿತ್ತು. ಕೇರಳ ಸರ್ಕಾರ ಕೇಂದ್ರ ಸರ್ಕಾರಕ್ಕಿಂತ ತುಂಬಾ ಮುಂಚೆಯೇ ಸುಗ್ರೀವಾಜ್ಞೆ ಹೊರಡಿಸಿ ಜಾರಿ ಮಾಡಿಬಿಟ್ಟಿತ್ತು. ರಾಜ್ಯಗಳು ಕೇಂದ್ರ ಸರಕಾರದ ಸೂಚನೆಗಾಗಿ ಕಾಯಲಿಲ್ಲ ಎಂಬುದನ್ನಿಲ್ಲಿ ಗಮನಿಸಬೇಕು.

ಲಾಕ್‌ಡೌನ್ ಸಡಿಲಿಕೆಯ ಸ್ವರೂಪ ಕುರಿತಂತೆ ಪ್ರಧಾನಿ ಮೋದಿಯವರು ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ವಿಡಿಯೋ ಕಾನ್ಫರೆನ್ಸನ್ನು ಮೇ ೧೧ ರಂದು ನಡೆಸಿದರು. ಅದೊಂದು ಸುದೀರ್ಘ ಸಭೆ. ಹೀಗೆ ರಾಜ್ಯಗಳ ಅಭಿಪ್ರಾಯ ಕೇಳುವುದು ಸಂವಿಧಾನಾತ್ಮಕ ಒಕ್ಕೂಟ ವ್ಯವಸ್ಥೆಗೆ ತಕ್ಕ ನಡೆಯಾಗಿದ್ದು ಅಭಿನಂದನೀಯವಾದುದು. ಆದರೆ ವಿಪರ್ಯಾಸದ ಸಂಗತಿಯೆಂದರೆ, ಮುಖ್ಯಮಂತ್ರಿಗಳ ಸಭೆಗೆ ಮುಂಚೆಯೇ ಹಿಂದಿನ ದಿನ ಮೇ ೧೦ ರಂದು ಕೇಂದ್ರ ಸರ್ಕಾರವು ೧೨ ನೇ ತಾರೀಕಿನಿಂದ ರೈಲುಗಳ ಓಡಾಟ ಇರುತ್ತದೆಯೆಂದು ಪ್ರಕಟಿಸಿತು. ಆ ರೈಲುಗಳು ಸ್ವಂತ ಊರಿಗೆ ಮರಳುವವರಿಗೆ ಒದಗಿಸಿದ ಒಂದು ಅವಕಾಶ. ಆದರೆ ಮುಖ್ಯಮಂತ್ರಿಗಳ ಸಭೆಯ ನಂತರ ನಿರ್ಧಾರ ಪ್ರಕಟಿಸಿದ್ದರೆ ಆ ಸಭೆಗೊಂದು ವಿಶ್ವಾಸಾರ್ಹತೆ ಲಭ್ಯವಾಗುತ್ತಿತ್ತು.

ಈ ಸಭೆ ನಡೆಯುವುದಕ್ಕೆ ಕೆಲ ದಿನ ಮುಂಚೆಯೇ ಪ್ರಧಾನಿ ಸೂಚನೆಯಂತೆ ರಾಜ್ಯಗಳ ಎ.ಪಿ.ಎಂ.ಸಿ. ಕಾಯಿದೆಗೆ ತಿದ್ದುಪಡಿ ತರಲು ನಿರ್ದೇಶಿಸಲಾಗಿತ್ತು. ಮುಖ್ಯಮಂತ್ರಿಗಳ ಸಲಹೆ ಪಡೆಯದೆಯೇ ಖಾಸಗಿ ಕಾರ್ಪೊರೇಟ್ ಕಂಪೆನಿಗಳು ರೈತರ ಬೆಳೆ ಖರೀದಿಸುವ ಅವಕಾಶವನ್ನು ಒದಗಿಸುವ ಸುಗ್ರೀವಾಜ್ಞೆಯನ್ನು ರಾಜ್ಯ ಸರ್ಕಾರಗಳು ತರುವಂತೆ ನಿರ್ದೇಶನ ನೀಡುವುದು ಒಕ್ಕೂಟ ವ್ಯವಸ್ಥೆಗೆ ತಕ್ಕುದಲ್ಲ. ಅನೇಕರ ಪ್ರಕಾರ ಇದು ರೈತ ವಿರೋಧಿ ಕ್ರಮ.

ನೆಹರೂ ಅವರ ಕಾಲದಿಂದ ‘ಪ್ರಧಾನಿ ಪರಿಹಾರ ನಿಧಿ’ ಅಸ್ತಿತ್ವದಲ್ಲಿದ್ದರೂ ‘ಪಿ.ಎಂ. ಕೇರ್’ ನಿಧಿಯನ್ನು ಸ್ಥಾಪಿಸಲಾಯಿತು. ಪ್ರಧಾನಿ ಪರಿಹಾರ ನಿಧಿ ನಿರ್ವಹಣೆಯು ಕಾಂಗ್ರೆಸ್ ಪ್ರತಿನಿಧಿಯನ್ನೂ ಒಳಗೊಂಡಿದ್ದು ಚೆಕ್‌ಗಳಿಗೆ ಸೋನಿಯಾ ಅವರು ಸಹಿ ಮಾಡಬೇಕೆಂದು ಸುಳ್ಳು ಹೇಳಲಾಯಿತು. ಅದು ಹಾಗಿರಲಿಲ್ಲ. ಸಮಿತಿಯೊಂದು ಇದ್ದಾಗ ಒಬ್ಬರೇ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳಲಾಗದು. ‘ಪಿ.ಎಂ. ಕೇರ್’ ನಿಧಿಯಾದರೆ ಒಬ್ಬರದೇ ನಿರ್ಧಾರ. ಆದರೂ ರಾಜ್ಯಗಳಿಗೆ ಕೊಟ್ಟದ್ದು ಅಷ್ಟಕ್ಕಷ್ಟೆ. ಇದು ಕೂಡ ಕೇಂದ್ರೀಕರಣದ ಒಂದು ಭಾಗ. ಇಂಥ ಪೂರ್ವ ನಿಶ್ಚಿತ ಏಕಪಕ್ಷೀಯ ನಿರ್ಧಾರಗಳಿಂದ ಮುಖ್ಯಮಂತ್ರಿಗಳ ಸುದೀರ್ಘ ಸಭೆಯು ಸಾಂಕೇತಿಕವಾಗುತ್ತದೆ. ಜೊತೆಗೆ ಕಾರ್ಪೊರೇಟೀಕರಣಕ್ಕೆ ಅವಕಾಶ ಹೆಚ್ಚಿಸುತ್ತಲೇ ಇದ್ದ ಪ್ರಧಾನಿಯವರು ಮೇ ೧೨ ರಂದು ರಾತ್ರಿ ೮ ಗಂಟೆಯ ಭಾಷಣದಲ್ಲಿ ಸ್ಥಳೀಯ ಅಥವಾ ಸ್ವದೇಶಿ ಸ್ವಾವಲಂಬಿ ಭಾರತದ ಬಗ್ಗೆ ಎಡಬಿಡದೆ ಹೇಳಿದ್ದು ಒಂದು ವಿಪರ್ಯಾಸದಂತೆ ಕಾಣಿಸುತ್ತದೆ.

ಆನಂತರ ಘೋಷಿಸಿದ್ದ ೨೦ ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ಸ್ವಾವಲಂಬಿಯ ಜಾಗಕ್ಕೆ ‘ಸಾಲಾವಲಂಬಿ’ ಪರಿಕಲ್ಪನೆ ಪ್ರಧಾನವಾದದ್ದು ವಿವರವಾದ ಚರ್ಚಾ ವಿಷಯ. ಪ್ಯಾಕೇಜ್‌ನಿಂದ ಎಳ್ಳಷ್ಟೂ ಅನುಕೂಲವಾಗುವುದಿಲ್ಲವೆಂದು ಹೇಳುವುದು ಏಕಪಕ್ಷೀಯವಾಗುತ್ತದೆ. ಎಷ್ಟೇ ಭಿನ್ನಾಭಿಪ್ರಾಯವಿದ್ದರೂ ಒಂದಷ್ಟು ಅನುಕೂಲ ಕಲ್ಪಿಸಿದ್ದಕ್ಕೆ ಕೇಂದ್ರ ಸರ್ಕಾರವನ್ನು ಅಭಿನಂದಿಸಬೇಕು. ಆದರೆ ಇದರಲ್ಲಿ ಕೇಂದ್ರದ ನೇರ ಪಾಲು ಕಡಿಮೆಯಿದೆಯೆಂದು ಕೆಲವರ ಅಭಿಪ್ರಾಯ. ರಾಜಕೀಯ ಪಕ್ಷಗಳ ‘ರಾಡಿಕೀಯ’ ಇಲ್ಲಿ ಬೇಡವೆಂದರೂ ಆರ್ಥಿಕ ತಜ್ಞರ ಅಭಿಪ್ರಾಯಗಳನ್ನು ನಿರ್ಲಕ್ಷಿಸಲಾಗದು.

ಆರ್ಥಿಕ ತಜ್ಞ ರಾಹುಲ್ ಬಜೊರಿಯಾ ಪ್ರಕಾರ ಕೇಂದ್ರವು ನೇರವಾಗಿ ತೊಡಗಿಸುವ ಹಣ ಒಂದೂವರೆ ಲಕ್ಷ ಕೋಟಿ. ರಿಜರ್ವ್ ಬ್ಯಾಂಕ್ ಈಗಾಗಲೇ ಕೈಗೊಂಡ ಎಂಟು ಲಕ್ಷ ಕೋಟಿಯ ಕಾರ್ಯಕ್ರಮಗಳೂ ಈ ಪ್ಯಾಕೇಜ್‌ನಲ್ಲಿ ಸೇರಿದೆ. ಬಹುಪಾಲು ಕೊಡುಗೆಗಳು ಸಾಲ ಖಾತರಿ ಕೊಡುವುದಕ್ಕೆ ಸೀಮಿತವಾಗಿವೆ. ಈಗ ಅದರ ಚರ್ಚೆಗೆ ಹೋಗದೆ ರಾಜ್ಯಕ್ಕೆ ಸಂದದ್ದೆಷ್ಟು ಎಂಬ ಪ್ರಶ್ನೆಗಳನ್ನಷ್ಟೇ ಪರಿಶೀಲಿಸಿದರೆ ರಾಜ್ಯದ ಕೆಲವು ಮುಖ್ಯಮಂತ್ರಿಗಳ ಪ್ರಕಾರ ಆಶಾದಾಯಕವಲ್ಲ. ಪ್ಯಾಕೇಜ್ ವಿಷಯ ಬಿಡಿ, ಕೊರೊನ ಬಂದ ಕಾಲದಿಂದಲೂ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸೂಕ್ತ ಆರ್ಥಿಕ ಸಹಾಯ ತೋರಿಲ್ಲವೆಂಬ ಆಕ್ಷೇಪವಿದೆ. ಪ್ರಧಾನಿಗಳು ಕರೆದ ಸಭೆಯಲ್ಲಿ ಮುಖ್ಯಮಂತ್ರಿಗಳು ಆರ್ಥಿಕ ಸಹಾಯಕ್ಕೆ ಬೇಡಿಕೆ ಇಟ್ಟಾಗ ಪ್ರಧಾನಿಯವರು ಮೌನವಹಿಸಿದ್ದಾಗಿ ಪತ್ರಿಕೆಗಳು ವರದಿ ಮಾಡಿದ್ದನ್ನು ಇಲ್ಲಿ ನೆನೆಯಬಹುದು. ಪ್ಯಾಕೇಜ್‌ನ ೫ನೇ ಕಂತಿನಲ್ಲಿ ರಾಜ್ಯಗಳ ಸಾಲ ಮಾಡುವ ಮಿತಿಯನ್ನು ಹೆಚ್ಚಿಸಲಾಗಿದೆ. ಇದು ಕೂಡ ‘ಸಾಲಾವಲಂಬಿ’ ಕ್ರಮವೇ ಆಗಿದೆ.

ಹಿಂದೆ ಕೆಲವು ಮುಖ್ಯಮಂತ್ರಿಗಳು ನೇರವಾಗಿ ಆರೋಪಿಸಿದ್ದರು. ಮೇ ೨ ರಂದು ಪಂಜಾಬ್ ಮುಖ್ಯಮಂತ್ರಿ ಅಮರೇಂದ್ರ ಸಿಂಗ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ‘ಜಿ.ಎಸ್.ಟಿ.ಯ ಪಾಲು ಸರಿಯಾಗಿ ಬಂದಿಲ್ಲ. ಕೊರೊನ ತಡೆಗೆಂದು ಒಂದು ಪೈಸೆ ಸಹಾಯವನ್ನೂ ಮಾಡಿಲ್ಲ. ದೆಹಲಿಯಲ್ಲಿ ಕೂತು ಇಡೀ ದೇಶದ ಜಿಲ್ಲೆಗಳನ್ನು ರೆಡ್, ಕಿತ್ತಳೆ, ಹಸಿರು ಎಂಬ ಝೋನ್ ಗಳಾಗಿ ವಿಂಗಡಿಸುತ್ತಾರೆ. ಸ್ಥಳೀಯವಾಗಿ ಯಾವುದು ಏನು ಎಂಬುದು ನಮಗೆ ಗೊತ್ತು. ಅವರಿಗೇನು ಗೊತ್ತು ? ರಾಜ್ಯಗಳಿಗೆ ಬಿಟ್ಟು ತೆಪ್ಪಗಿದ್ದರೆ ಸಾಕು’ ಎಂದು ಕಟುವಾಗಿ ಟೀಕಿಸಿದ್ದರು. ಮೇ ೧೨ ರಂದು ಜಾರ್ಖಂಡ್ ಮುಖ್ಯಮಂತ್ರಿ ಸೋರೇನ್ ಅವರು ಇದೇ ರೀತಿಯ ಮಾತುಗಳನ್ನು ಸ್ವಲ್ಪ ಮೆದು ದನಿಯಲ್ಲಿ ಹೇಳಿದ್ದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕೇಂದ್ರ ಸರ್ಕಾರದೊಂದಿಗೆ ಕಾಳಗಕ್ಕೆ ನಿಂತಿದ್ದರು. ಅದಾಗಲೇ ತನ್ನಿಚ್ಛೆಯಂತೆ ಕಾರ್ಯಕ್ರಮ ರೂಪಿಸಿ ಹಕ್ಕು ಸ್ಥಾಪಿಸಿಕೊಂಡಿದ್ದ ಕೇರಳ ಸರ್ಕಾರದ ಅರ್ಥ ಸಚಿವರು ಏಪ್ರಿಲ್ ೨೭ರಂದೇ ‘ಒಕ್ಕೂಟ ಉದಾರತೆ’ (Federal flexibality) ಬಗ್ಗೆ ಮಾತಾಡಿದ್ದರು.

ಬಿ.ಜೆ.ಪಿ. ನೇತೃತ್ವ ಸರ್ಕಾರದ ರಾಜ್ಯಗಳೂ ಸೇರಿದಂತೆ ಬಹುಪಾಲು ರಾಜ್ಯಗಳು ಕೊರೊನ ವಿಷಯದಲ್ಲಿ ಹೆಚ್ಚು ಸ್ವಾತಂತ್ರ್ಯ ವಹಿಸಿ ಕ್ರಮಗಳನ್ನು ಕೈಗೊಳ್ಳುತ್ತ ಬಂದವು. ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ಕಾದವು. ಈ ಕಾಯುವಿಕೆಯೂ ಮುಖ್ಯವಾಗಿ ಔಪಚಾರಿಕ ಕ್ರಮದಂತೆ ನಡೆಯುತ್ತಿತ್ತು. ಬಿ.ಜೆ.ಪಿ. ರಾಜ್ಯ ಸರ್ಕಾರಗಳು ಸಹ ಪ್ರತಿ ಸಾರಿಯು ‘ಮೋದಿಯವರ ಮಾರ್ಗದರ್ಶನದಂತೆ’ ಎಂದು ಹೇಳಿ ತಕರಾರಿಗೆ ಅವಕಾಶವಾಗದಂತೆ ಸ್ಥಳೀಯವಾಗಿಯೇ ಅನುಷ್ಠಾನದ ಸ್ವರೂಪವನ್ನು ನಿರ್ಧರಿಸಿಕೊಂಡದ್ದು ಕಂಡು ಬರುತ್ತದೆ. ಇಲ್ಲದಿದ್ದರೆ ಕೇಂದ್ರ ಹೇಳುವುದಕ್ಕೆ ಮುಂಚೆಯೇ ಕೆಲವು ನಿರ್ಧಾರಗಳು ಹೊರ ಬೀಳುತ್ತಿರಲಿಲ್ಲ. ವಾಸ್ತವವೆಂದರೆ ಯಾವುದೇ ಪಕ್ಷದ ಸರ್ಕಾರವಿರಲಿ, ಕೊರೊನ ಸಂಕಷ್ಟವನ್ನು ಎದೆಗುಂದದೆ ಎದುರಿಸಿದ ನಿಜವಾದ ಕೀರ್ತಿಯ ಬಹುಪಾಲು ರಾಜ್ಯಗಳಿಗೇ ಸಲ್ಲಬೇಕು. ಆಗಿಂದಾಗ್ಗೆ ಮಾರ್ಗಸೂಚಿ ನೀಡಿದ ಮತ್ತು ವಿರೋಧ ಪಕ್ಷದ ನೇತಾರರನ್ನು ಒಳಗೊಂಡಂತೆ ಎಲ್ಲಾ ಪಕ್ಷದವರೊಂದಿಗೆ ಸಮಾಲೋಚನೆಗೆ ಮುಂದಾದ ಸಂವಿಧಾನಾತ್ಮಕ ಸಂಸದೀಯ ಕ್ರಮಗಳ ‘ಕೀರ್ತಿ’ ಕೇಂದ್ರ ಸರ್ಕಾರಕ್ಕೆ ಸಲ್ಲಬೇಕು.

ಕೊರೊನ ಸಂಕಷ್ಟದ ಸಂದರ್ಭವು ‘ಆರ್ಥಿಕ ಅಸಹಾಯಕತೆ’ಯನ್ನು ಅನುಮಾನಕ್ಕಾಸ್ಪದವಿಲ್ಲದಂತೆ ಅನಾವರಣಗೊಳಿಸಿದೆ. ಕೊರೊನ ಬರುವುದಕ್ಕೆ ಮುಂಚೆಯೇ ದೇಶದ ಆರ್ಥಿಕ ಶಕ್ತಿಯ ಅಧಃಪತನ ಆಗಿದ್ದರಿಂದಲೇ ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೇರವಾಗಿ ಅಗತ್ಯಾನುಸಾರ ಅನುದಾನ ಕೊಡಲು ಆಗಿಲ್ಲವೆಂದು ಅರ್ಥ ಮಾಡಿಕೊಳ್ಳಬಹುದಾಗಿದೆ. ಕೇಂದ್ರದ ಸಹಾಯಕ್ಕೆ ಕಾಯುವುದರಲ್ಲಿ ಪ್ರಯೋಜನವಿಲ್ಲವೆಂದರಿತ ರಾಜ್ಯಗಳು ತಮ್ಮಾರಕ್ಕೆ ತಾವು ನಿರ್ಧಾರಿತ ಕ್ರಮಗಳನ್ನು ಕೈಗೊಂಡಿವೆ. ಈ ಮಾತಿಗೆ ಪ್ರಸ್ತುತ ಲೇಖನದಲ್ಲಿರುವ ಕೆಲವು ನಿದರ್ಶನಗಳು ಸಾಕ್ಷಿ ಒದಗಿಸುತ್ತವೆ. ಆರ್ಥಿಕ ಅಸಹಾಯಕತೆಯ ಫಲವಾಗಿ ರಾಜ್ಯಗಳು ಅನಿವಾರ್ಯ ಹಕ್ಕು ಸ್ಥಾಪಿಸಿಕೊಂಡಿರುವುದು ಈಗಿನ ಒಂದು ಸಂವಿಧಾನಾತ್ಮಕ ವಾಸ್ತವ.

ಆದರೆ ರಾಜ್ಯಗಳ ಸಂವಿಧಾನದತ್ತ ಸ್ವಾಯತ್ತತೆಯನ್ನು ಕೊರೊನ ಅನಿವಾರ್ಯತೆ ಮತ್ತು ಆರ್ಥಿಕ ಅಸಹಾಯಕತೆಗಳ ಸನ್ನಿವೇಶ ಜಾಗೃತಗೊಳಿಸಿದ್ದು ಒಂದು ವಿಪರ್ಯಾಸ. ಹಿಂದೆ ಜಿ.ಎಸ್.ಟಿ. ಮೂಲಕ ತೆರಿಗೆ ಸಂಗ್ರಹವನ್ನು ಕೇಂದ್ರೀಕರಿಸಿಕೊಂಡು ರಾಜ್ಯದ ತೆರಿಗೆ ಹಕ್ಕನ್ನು ಕಸಿದಾಗ ಸುಮ್ಮನಿದ್ದ ರಾಜ್ಯಗಳು ಈಗ ಕೈ ಕೈ ಹಿಸುಕಿಕೊಳ್ಳುತ್ತಿವೆ. ಕೇಂದ್ರದ ಎದುರು ಕೈ ಒಡ್ಡಿ ಬೇಡಿ ಬರಡಾದ ರಾಜ್ಯಗಳು ಈಗಲಾದರೂ ತಮ್ಮ ಸ್ವಾಯತ್ತತೆಯು ಸಂವಿಧಾನಾತ್ಮಕ ಹಕ್ಕೆಂದು ದಿಟ್ಟವಾಗಿ ಹೇಳುತ್ತ ಎದುರಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಕ್ಕು ಮತ್ತು ಅಧಿಕಾರಗಳನ್ನು ಸಂವಿಧಾನದ ಆಧಾರದಲ್ಲಿ ಸ್ಪಷ್ಟಗೊಳಿಸಿಕೊಳ್ಳಬೇಕು. ಕೇಂದ್ರ ಸರ್ಕಾರವೂ ಸಹಕರಿಸಬೇಕು. ಇದು ಕೊರೊನ ಕಾರಣದ ‘ಸಂವಿಧಾನ ಪಾಠ’. ಸೋಂಕಿನ ಕರಾಳ ಕಾಯಿಲೆಯ ಸಂದರ್ಭವೊAದು ಇಂಥ ಪಾಠಕ್ಕೆ ಕಾರಣವಾದದ್ದು ಸಂಕಟದ ಸಂಗತಿ. ಆದ್ದರಿಂದ ಕೊರೊನ ತೊಲಗಬೇಕು. ಪಾಠ ಮಾತ್ರ ಉಳಿಯಬೇಕು.

ಕೊರೊನ ಸಂದರ್ಭದ ಇನ್ನೊಂದು ಮುಖ್ಯ ಸತ್ಯವೆಂದರೆ – ವಲಸೆ ಕಾರ್ಮಿಕರ ಅನಿವಾರ್ಯತೆ ಅಥವಾ ಒಟ್ಟಾರೆ ಶ್ರಮಿಕ ಶಕ್ತಿಯ ಮನವರಿಕೆ. ಕೋಟ್ಯಾಂತರ ಬಂಡವಾಳ ಹೂಡುವವರು ಇದ್ದರೂ ದುಡಿಯುವ ಶ್ರಮಿಕರೇ ಇಲ್ಲದಿದ್ದರೆ ಹೇಗೆ ? ಆದ್ದರಿಂದಲೇ ‘ಕಾರ್ಮಿಕರೇ ಇಲ್ಲೇ ಇರಿ’ ಎಂದು ಸರ್ಕಾರಗಳು ದಮ್ಮಯ್ಯ ಎಂದದ್ದು, ಕಳಿಸುವುದೊ ಉಳಿಸಿಕೊಳ್ಳುವುದೊ ಎಂಬ ಗೊಂದಲಕ್ಕೆ ಬಿದ್ದದ್ದು; ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಂದ ಮಾತ್ರವೇ ದೇಶ ನಡೆಯದು ಎಂದು ಗೊತ್ತಾದದ್ದು; ಶ್ರಮಿಕರೇ ಹೆಚ್ಚಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳತ್ತ ಆದ್ಯ ಗಮನ ಹರಿದದ್ದು; ಅಸಂಘಟಿತ ಶ್ರಮಿಕರಿಗೆ ಆಸರೆಯಾಗುವ ಆಸಕ್ತಿ ಬೆಳೆದದ್ದು, ವಿದೇಶಿ ಬಂಡವಾಳದ ಮಾತು ನುಂಗಿಕೊಂಡು ಸ್ವದೇಶಿ ಪೋಷಣೆಗಳ ಪ್ರಕಟಣೆಗೆ ಬಂದದ್ದು.

ಇಂಥ ವಾಸ್ತವಗಳ ಅರಿವಿದ್ದರೂ ಕಾರ್ಮಿಕ ಕಾಯಿದೆಗಳ ತಿದ್ದುಪಡಿಗೆ ಸರ್ಕಾರವು ಮುಂದಾಗಿದೆ. ಗಮನಿಸಲೇಬೇಕಾದ ಅಂಶವೆಂದರೆ ಪ್ರತಿಪಕ್ಷಗಳ ಕಾರ್ಮಿಕ ಸಂಘಟನೆಗಳು ಮಾತ್ರ ತಿದ್ದುಪಡಿಯನ್ನು ವಿರೋಧಿಸಿಲ್ಲ; ಆಡಳಿತಪಕ್ಷ ಬಿ.ಜೆ.ಪಿ.ಯ ಕಾರ್ಮಿಕ ಸಂಘಟನೆಯೂ ಕಟುವಾಗಿ ವಿರೋಧಿಸಿದೆ. ಈ ನಡುವೆ ೨೦ ಲಕ್ಷ ಕೋಟಿ ಪ್ಯಾಕೇಜ್‌ನ ೪ ಮತ್ತು ೫ ನೇ ಕಂತಿನ ಪ್ರಕಟಣೆಯಲ್ಲಿ ಖಾಸಗೀಕರಣಕ್ಕೆ ಒತ್ತುಕೊಡಲಾಗಿದೆ. ರಕ್ಷಣಾ ಇಲಾಖೆಗೆ ಖಾಸಗಿಯವರ ನೇರ ಬಂಡವಾಳ ಹೂಡಿಕೆಯನ್ನೂ ಹಿಂದಿದ್ದ ಶೇ. ೪೯ರಿಂದ ಶೇ. ೭೪ಕ್ಕೆ ಹೆಚ್ಚಿಸಿರುವುದು ಖಾಸಗೀಕರಣದ ಜ್ವಲಂತ ಉದಾಹರಣೆ. ಇಲ್ಲಿಯೇ ಪ್ರಶ್ನೆಗಳು ಹುಟ್ಟುವುದು ? ಶ್ರಮಿಕ ವರ್ಗಕ್ಕೆ ಆದ್ಯತೆಯೊ ಬಂಡವಾಳ ಶಾಹಿಗೊ ? ಸಾರ್ವಜನಿಕವಲಯದಿಂದ ಸ್ವಾವಲಂಬನೆಯೊ, ಖಾಸಗಿವಲಯದ ಸಾಲಾವಲಂಬಿಯೊ ? ಅಸ್ಪಷ್ಟತೆಯೊ ಸ್ಪಷ್ಟ ಜಾಣ ಸಂಯೋಜನೆಯೊ ?

ಅದೇನೇ ಇರಲಿ, ಕೊರೊನ ಕರಾಳತೆಯ ಪಾಠದಿಂದ ನಮ್ಮ ಆರ್ಥಿಕ ನೀತಿಯನ್ನು ಕುರಿತು ಮರುಚಿಂತನೆ, ಮರು ಸಂಯೋಜನೆ, ಸಂವಿಧಾನಾತ್ಮಕ ಸಮಾನತೆಯ ಸಂವೇದನೆಗಳಿಗೆ ಮೊಟ್ಟ ಮೊದಲ ಆದ್ಯತೆ ದೊರಕಬೇಕಾಗಿದೆ. ಕೇಂದ್ರದ ಅಧಿಕಾರ ಮತ್ತು ರಾಜ್ಯಗಳ ಸ್ವಾಯತ್ತತೆಯ ಹಕ್ಕು ಬಾಧ್ಯತೆಗಳು ಸ್ಪಷ್ಟ ರೂಪ ಪಡೆದು ಸಂಕೋಚವಿಲ್ಲದೆ ಸಂವಿಧಾನಕ್ಕೆ ಗೌರವ ಕೊಡಬೇಕಾಗಿದೆ. ನಾಲ್ಕನೇ ಲಾಕ್‌ಡೌನ್‌ನ ಮಾರ್ಗಸೂಚಿಯಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೇ ಹೆಚ್ಚು ಅಧಿಕಾರ ನೀಡಿರುವುದು, ಸಂವಿಧಾನಾತ್ಮಕ ಹಕ್ಕಿನ ಅನಿವಾರ್ಯವಾದ ಆಶಾದಾಯಕ ಅಂಶವಾಗಿದೆ.

ಈ ಲೇಖನ ಈ ಮೊದಲು ‘ಹೊಸತು’ವಿನಲ್ಲಿ ಪ್ರಕಟವಾಗಿದೆ 

‍ಲೇಖಕರು avadhi

June 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಪ್ರಕಾಶ್ ಕೊಡಗನೂರ್

    ಸಂಕಷ್ಟದ ನಡುವೆಯೂ ಸಂಕಟಿತರ ಬದುಕನ್ನು ಹಾಗೂ ಸಹಾಯ ನೀಡಿದವರ ಔದಾರ್ಯವನ್ನು ಸ್ಮರಿಸುತ್ತಲೇ ಎಲ್ಲೆಡೆ ವ್ಯಾಪಿಸುವ ಜಾಗೃತ ಲೇಖನ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: