“ವುಹಾನ್ ವೈರಸ್” ಬಗೆಗಿನ ಊಹಾಪೋಹಗಳು ಮತ್ತು ಸತ್ಯಾಸತ್ಯತೆಗಳು

 ಡಾ. ಶ್ಯಾಮ ಪ್ರಸಾದ್ ಸಜಂಕಿಲ

ನವೆಂಬರ್ 17, 2019, ವುಹಾನ್, ಚೈನಾ: 55 ವರ್ಷದ ವ್ಯಕ್ತಿಯಲ್ಲಿ ಈ ಹಿಂದೆ ಕಂಡಿರದ ಶ್ವಾಸಕೋಶಕ್ಕೆ ಸಂಬಂಧಿಸಿದ ತೀವ್ರ ಉಸಿರಾಟದ ಸಮಸ್ಯೆ, ನಿಗೂಢ ಕಾರಣಗಳಿಂದ ಕಾಣಿಸಿಕೊಳ್ಳುತ್ತದೆ.   ಆ ಘಟನೆಯ ಬಳಿಕ, ಪ್ರತಿ ದಿನವೂ ಇದೇ ತರದ ಆರೋಗ್ಯ ಸಮಸ್ಯೆ ಇರುವ, ಹೊಸ ರೋಗಿಗಳ ಸೇರ್ಪಡೆ ಆಗುತ್ತಲೇ ಹೋಯಿತು, ಜೊತೆಗೆ ಸಂಖ್ಯೆಯೂ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು. ಸುಮಾರು ಒಂದೂವರೆ ತಿಂಗಳ ಬಳಿಕ ಅಂದರೆ ಡಿಸೆಂಬರ್ 27 ರಂದು, ಹ್ಯೂಬೀ ಪ್ರಾಂತ್ಯ ಆಸ್ಪತ್ರೆಯ ವೈದ್ಯರಾದ ಡಾ. ಝಾಂಗ್ ಶಿಯಾನ್, ಈ ನಿಗೂಢ ನ್ಯೂಮೋನಿಯಕ್ಕೆ ಕೊರೋನ ವೈರಸ್ ಗಳೇ ಕಾರಣ ಎಂದು ಅಲ್ಲಿನ ಆರೋಗ್ಯಾಧಿಕಾರಿಗಳಿಗೆ ಮನವರಿಕೆ ಮಾಡುತ್ತಾರೆ. ಅಲ್ಲಿಯ ತನಕ ರೋಗಲಕ್ಷಣ ಪತ್ತೆಯಾಗಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಸುಮಾರು 180 ದಾಟಿತ್ತು – ಈಗಾಗಲೇ ಸೋಂಕು ತಗಲಿರುವವರ ಸಂಖೆಯ ಬಗ್ಗೆ ನಿಖರವಾದ ಮಾಹಿತಿ ಇಲ್ಲ – ಅದರ ಸಾಧ್ಯತೆ ಕೂಡಾ ಕಮ್ಮಿ. ಯಾಕೆಂದರೆ, ಈ ರೋಗದ ಭೀಕರತೆಯ ಬಗ್ಗೆ ಪ್ರಪಂಚಕ್ಕೆ ಇನ್ನೂ ಅರಿವಿರಲಿಲ್ಲ. ಈ ಹೊಸ ನ್ಯೂಮೋನಿಯ ರೋಗದ ಗಂಭೀರತೆಯ ಬಗ್ಗೆ ಮೊದಲ ಬಾರಿಗೆ ಸೋಶಿಯಲ್ ಮೀಡೀಯಾದ ಮೂಲಕ ಸರಕಾರದ ಗಮನ ಸೆಳೆದಿದ್ದ ಡಾ. ಲಿ ವೆನ್ಲಿಯಾಂಗ್ ಅವರನ್ನು ಸರಕಾರ ತರಾಟೆಗೆ ತೆಗೆದುಕೊಳ್ಳುತ್ತದೆ. ವಿಪರ್ಯಾಸ ಎಂದರೆ, ಡಾ. ವೆನ್ಲಿಯಾಂಗ್ ಅವರನ್ನು ಇದೇ ರೋಗ ಬಲಿ ಪಡೆಯುತ್ತದೆ. ಮುಂದಿನ ಘಟನೆಗಳು ಇಡೀ ಪ್ರಪಂಚವನ್ನು ಬೆಚ್ಚಿ ಬೀಳಿಸಿದವು.  ಜೊತೆಗೆ, ಜನರ ನಂಬಿಕೆಗಳನ್ನು, ಸಿದ್ಧಾಂತಗಳನ್ನು, ದೃಷ್ಟಿಕೋನಗಳನ್ನು ಪ್ರಾಯಶಃ ಆಮೂಲಾಗ್ರವಾಗಿ ಬದಲಾಯಿಸಿತು. ಆರು ತಿಂಗಳ ಹಿಂದಿನ ತನಕ, ಮೈಕ್ರೋಬಯಾಲಜಿ ಪುಸ್ತಕಗಳಲ್ಲಿ ಅರ್ಧ ಪುಟಕ್ಕೆ ಸೀಮಿತವಾಗಿದ್ದ ಕೊರೊನ, ಇಂದು ಇಡೀ ಪ್ರಪಂಚವನ್ನು ತನ್ನ ಕಬಂಧ ಬಾಹುವಿನಲ್ಲಿ ಬಂಧಿಸಿದೆ.

ಕೊರೋನ ಹಿನ್ನೆಲೆ: ಸ್ಕಾಟ್‌ಲ್ಯಾಂಡ್ ಮೂಲದ ವೈರಸ್ ತಜ್ಞೆ ಜೂನ್ ಆಲ್ಮೆಡ, ಮೊದಲಿಗೆ ಈ ವೈರಾಣುವನ್ನು ಕಂಡುಹಿಡಿದಾಕೆ. ಖಗ್ರಾಸ ಸೂರ್ಯಗ್ರಹಣದ ಸಮಯದಲ್ಲಿ ಕಂಡು ಬರುವ ಪ್ರಭಾವಳಿ ಸಹಿತ ಸೂರ್ಯನ ಆಕೃತಿಯನ್ನು ಹೋಲುವ ಕಾರಣಕ್ಕಾಗಿ ಈ ವೈರಸ್ ಅನ್ನು ‘”ಕೊರೋನ ವೈರಸ್” ಎಂದು  ಕರೆಯಲಾಗುತ್ತದೆ. ಕೊರೋನ RNA ವೈರಸ್ ನ ಗುಂಪಿಗೆ ಸೇರುತ್ತದೆ. ಈ ವೈರಸ್ ಗಳಲ್ಲಿ ಒಂದು ಎಳೆಯ RNA  ಜೀವತಂತು ಇದೆ. 29,891 ರೈಬೋ ನ್ಯೂಕ್ಲಿಯಟೈಡ್ ಗಳನ್ನು ಹೊಂದಿದ ಕೋವಿಡ್ RNA ಯು ಸುಮಾರು 9,860 ಅಮೀನೊ ಆಮ್ಲಗಳನ್ನು ಉತ್ಪಾದಿಸಬಲ್ಲದು.  ಈ ವೈರಸ್ ನ ವ್ಯಾಸ ಸುಮಾರು 120 ನ್ಯಾನೋಮೀಟರ್ ಗಳಷ್ಟು. ಅವುಗಳ RNA ವೈವಿಧ್ಯತೆ ಹಾಗೂ ಸಾಮ್ಯತೆಗಳ ಆಧಾರದಲ್ಲಿ ಕರೋನ ವೈರಸ್ ಗಳಲ್ಲಿ ಆಲ್ಫಾ, ಬೀಟಾ, ಗಾಮಾ ಮತ್ತು ಡೆಲ್ಟಾ ಎಂಬ ನಾಲ್ಕು ವಿವಿಧ ಪಂಗಡಗಳಿವೆ.

ಈ ವೈರಸ್ ಗಳು  E, M, S ಮತ್ತು N ಎಂಬ ನಾಲ್ಕು ಪ್ರಮುಖ ಪ್ರೋಟೀನ್ ಗಳನ್ನು ಹೊಂದಿವೆ. ಇವುಗಳ ಪೈಕಿ, S, M, ಮತ್ತು E ಪ್ರೋಟೀನ್ ಗಳು ವೈರಸ್ ನ ಹೊರಕವಚದಲ್ಲಿ ಕಾಣಬರುತ್ತವೆ.  ಇವುಗಳಲ್ಲಿ M ಪ್ರೋಟೀನ್ ವೈರಸ್ ಗೆ ಗೋಲಾಕಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. M ಮತ್ತು S ಪ್ರೋಟೀನ್ ಗಳು, ವೈರಸ್ ನ ವಿವಿಧ ಕಣಗಳನ್ನು ಒಟ್ಟುಗೂಡಿಸಿ ಚೆಂಡಿನ ಆಕಾರಕ್ಕೆ  ಬರಲು ಸಹಾಯ ಮಾಡುತ್ತವೆ. ಪ್ರೋಟೀನ್ N ಹೆಚ್ಚಾಗಿ RNA ಯ ಜೊತೆಗೆ  ಕಂಡುಬರುತ್ತದೆ. ಜೊತೆಗೆ ಇದು ವೈರಸ್ ನ ಜೀವನ ಚಕ್ರದಲ್ಲಿ (Life Cycle) ಪ್ರಮುಖ ಪಾತ್ರ ವಹಿಸುತ್ತದೆ.

ಅವುಗಳ ಜೀವತಂತುಗಳು (RNA) ನಿರಂತರ ಬದಲಾವಣೆ (Mutation) ಹೊಂದುವ ಸಾಮರ್ಥ್ಯದಿಂದ ಕೂಡಿವೆ, ಹಾಗೂ ಈವರೆಗೆ ಸುಮಾರು 40 ವಿವಿಧ ರೀತಿಯ ಕೊರೋನ ವೈರಸ್ ಗಳನ್ನು ಗುರುತಿಸಲಾಗಿದೆ. ಕೊರೋನ ವೈರಸ್ ಗಳು ಮುಖ್ಯವಾಗಿ ಮನುಷ್ಯರು, ಸಸ್ತನಿಗಳು ಹಾಗೂ ಕೆಲವು ಪಕ್ಷಿಗಳಲ್ಲಿ ಸೋಂಕು ಉಂಟುಮಾಡುತ್ತವೆ. ಈ ವೈರಸ್ ಗಳು ಸಾಮಾನ್ಯ ಶೀತದಿಂದ ಮೊದಲುಗೊಂಡು ಪ್ರಾಣಘಾತಕ ಶ್ವಾಸಕೋಶದ ತೊಂದರೆ ಮತ್ತು ಪ್ರಮುಖ ಅಂಗ ವೈಫಲ್ಯ ಉಂಟುಮಾಡುವ ಸಾಮರ್ಥ್ಯ ಹೊಂದಿವೆ.

ಅಂತಾರಾಷ್ಟ್ರೀಯ ವೈರಸ್ ವರ್ಗೀಕರಣ ಸಂಸ್ಥೆ (International Committee on Taxonomy of Virus) ಯ ಪ್ರಕಾರ ಈ ವೈರಸ್ ಅನ್ನು “Severe Acute Respiratory Syndrome – Coronavirus 2 (SARS-CoV-2)” ಎಂದು ಕರೆಯಲಾಗುತ್ತಿದೆ. ಈ ಹೆಸರಿಗೆ ಕಾರಣವೆಂದರೆ, 2003 ರಲ್ಲಿ ಕಂಡುಬಂದ SARS ವೈರಸ್ ಗೂ ಹೊಸ ಕೋವಿಡ್ ವೈರಸ್ ಗೂ ಅನುವಂಶೀಯವಾಗಿ ಸಾಮ್ಯತೆಗಳಿವೆ. ಸಾಮ್ಯತೆಗಳಿದ್ದರೂ ಈ ಎರಡೂ ವೈರಸ್ ಗಳು ಹಲವಾರು ರೀತಿಯಲ್ಲಿ ವಿಭಿನ್ನವಾಗಿವೆ. ವಿಶ್ವಸಂಸ್ಥೆಯು ಈ SARS-CoV-2  ವೈರಸ್ ನಿಂದ ಉಂಟುಮಾಡುವ ರೋಗವನ್ನು ಕೋವಿಡ್-19 ಎಂದು ಹೆಸರಿಸಿದೆ (COVID-19 = Corona Virus Disease of 2019).


ಚಿತ್ರ ಕೃಪೆ: Center for Evidence Based Medicine

ಗ್ರಹಣ ಸಮಯದ ಸೂರ್ಯನ ಹೊರಕವಚ                                      SARS-CoV-2 ನ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಚಿತ್ರ

ರೋಗ ಹರಡುವಿಕೆ: ಮನುಷ್ಯನಲ್ಲಿ ರೋಗ ಉಂಟುಮಾಡುವ ಮೊದಲು ನಡೆಯಬೇಕಾದ ಪ್ರಕ್ರಿಯೆ ಎಂದರೆ ವೈರಸ್ ಗಳ ಜೀವಕೋಶಗಳ ಒಳಗೆ ಪ್ರವೇಶ. S ಪ್ರೋಟೀನ್ ಗಳು ಈ ಕ್ರಿಯೆಗೆ ಸಹಾಯ ಮಾಡುತ್ತವೆ. ನಮ್ಮ ಶ್ವಾಸ ನಾಳಗಳ ಜೀವಕೋಶದ ಮೇಲ್ಮೈ ಯಲ್ಲಿ ACE-2 ಎಂಬ ಪ್ರೋಟೀನ್ ಗಳು ಇರುತ್ತವೆ. ನಮ್ಮ ದೇಹವನ್ನು ಮನೆಗೆ ಹಾಗೂ, ಕೊರೋನ ವೈರಸರ್ ಅನ್ನು ಒಬ್ಬ ಕಳ್ಳನಿಗೆ ಹೋಲಿಸಿದರೆ, ACE-2 ಪ್ರೋಟೀನ್, ಆ ಮನೆಯ ಕೀಲಿಕೈ ಗೆ ಹೋಲಿಸಬಹುದು. ಹೇಗೆ ಕೀಲಿ ಕೈ ಸಿಕ್ಕ ಕಳ್ಳ ಸುಲಭವಾಗಿ ಮನೆಯನ್ನು ಪ್ರವೇಶಿಸಲು ಸಾಧ್ಯವೋ ಹಾಗೇ S ಪ್ರೋಟೀನ್ ಗೆ ACE-2 ಪ್ರೋಟೀನ್ ಪರಸ್ಪರ ಸಂಧಿಸಿ ಸಂಪರ್ಕ ಏರ್ಪಟ್ಟಾಗ ವೈರಸ್ ಸುಲಭವಾಗಿ ಜೀವಕೋಶಗಳ ಒಳಗೆ ಪ್ರವೇಶ ಮಾಡಬಲ್ಲದು.

ಚೀನಾದ ವಿತ್ತೀಯ ನಗರವಾಗಿ ವಿಕಸನ ಹೊಂದುತ್ತಿರುವ ವುಹಾನ್ ನಗರದಲ್ಲಿ, ಅಧಿಕೃತ ಮೂಲಗಳ ಪ್ರಕಾರ ಮೊದಲ 50 ದಿನದಲ್ಲಿ 1,800 ಜನರು ಮೃತಪಟ್ಟಿದ್ದು, 80,000 ಜನರಿಗೆ ಸೋಂಕು ತಗುಲಿತ್ತು ಹಾಗೂ ಅದು ಬೀಟಾ ಪ್ರಬೇಧಕ್ಕೆ ಸೇರಿದ ವೈರಸ್ ನಿಂದ ಉಟಾದದ್ದು ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಡಿಸೆಂಬರ್ ಅಂತ್ಯಕ್ಕೆ ಚೀನಾ, ವಿಶ್ವಸಂಸ್ಥೆಗೆ ನಿಗೂಢ ಮೂಲದ ನ್ಯೂಮೋನಿಯ ತ್ವರಿತಗತಿಯಲ್ಲಿ ಹಲವಾರು ಜನರಿಗೆ ಒಂದೆರಡು ದಿನಗಳ ಒಳಗಾಗಿ ಹರಡಿರುವ ವರದಿ ನೀಡುತ್ತದೆ. ಈ ರೋಗದ ಮೂಲ ಮಾತ್ರ ತುಂಬಾ ಕುತೂಹಲಕರವಾಗಿದೆ. ಹುನಾನ್ ಮತ್ಸ್ಯ ಮಾರುಕಟ್ಟೆಯಲ್ಲಿ ಜಲಚರಗಳ ಜೊತೆಗೆ ಬಾವಲಿ, ಹೆಬ್ಬಾವು, ನಾಯಿ,  ಹಕ್ಕಿಗಳು, ಪ್ಯಾಂಗೋಲಿನ್,  ಹಲವಾರು ರೀತಿಯ ಕಾಡು ಪ್ರಾಣಿ, ಪಕ್ಷಿಗಳನ್ನೂ ಸಹ ಮಾರಲಾಗುತ್ತದೆ. ಜನವರಿ 15ರ ಸುಮಾರಿಗೆ, ಚೀನಾದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಇದನ್ನು ವೈರಲ್ ನ್ಯೂಮೋನಿಯ ಎಂದು ವರದಿ ಮಾಡಿತು. ವಂಶವಾಹಕಗಳ ಕೂಲಂಕುಷ ಸಂಶೋಧನೆಯಿಂದ ತಿಳಿದು ಬಂದ ವಿಷಯವೆಂದರೆ – ಇದು ಒಂದು ಹೊಸ ತಳಿಯ ಕೊರೋನ ವೈರಸ್. ಕೆಲವು ರೋಗಿಗಳಿಂದ ತಿಳಿದುಬಂದ ಅಂಶವೆಂದರೆ, ಅವರು ಹುನಾನ್ ನ ಮತ್ಸ್ಯ ಮಾರ್ಕೆಟ್ ಸಂಪರ್ಕ ಹೊಂದಿದ್ದರು. ಹಾಗಾಗಿ  ವೈರಸ್ ಹೊಂದಿದ ಪ್ರಾಣಿ ಪಕ್ಷಿಗಳೇ ಈ ರೋಗಕ್ಕೆ ಮೂಲ, ಜೊತೆಗೆ ಹೊಸ ಕೊರೋನ ವೈರಸ್, ಪ್ರಾಣಿ ಮೂಲದಿಂದ ಮನುಷ್ಯರಿಗೆ ಹರಡಲು ಸಾಮರ್ಥ್ಯ ಹೊಂದಿದೆ ಎಂಬ ತೀರ್ಮಾನಕ್ಕೆ ಬರಲಾಯಿತು. ಆದರೆ ಸಮಸ್ಯೆ ಜಟಿಲಗೊಂಡದ್ದು ಇನ್ನೂ ಕೆಲವು ರೋಗಿಗಳ ಹೇಳಿಕೆ – ಅವರು ಆ ನಿರ್ದಿಷ್ಟ ಸಮಯದಲ್ಲಿ ಎಂದೂ ಹುನಾನ್ ಮಾರ್ಕೆಟ್ ಗೆ ಭೇಟಿ ನೀಡಿರುವುದಿಲ್ಲ. ಇದರ ಅರ್ಥ ಈ ವೈರಸ್ ಗೆ ಮನುಷ್ಯನಿಂದ ಮನುಷ್ಯನಿಗೆ ಹರಡಲು ಸಾಮರ್ಥ್ಯ ಇದೆ. ಮನುಷ್ಯರ ಪರಸ್ಪರ ಹತ್ತಿರದ ಸಂಪರ್ಕ, ಸ್ಪರ್ಶ, ಕೆಮ್ಮು, ಸೀನುವಿಕೆ ಹಾಗೂ ಇದರಿಂದ ಹೊರಹೊಮ್ಮುವ ಸೂಕ್ಷ್ಮಾತಿಸೂಕ್ಷ್ಮ ಹನಿಗಳು, ಈ ರೋಗ ಹರಡಲು ಸಹಾಯ ಮಾಡುತ್ತದೆ ಎಂದು ಸೂಕ್ತ ವೈಜ್ಞಾನಿಕ ಆಧಾರಗಳ ಮೇರೆಗೆ ನಿರ್ಧರಿಸಲಾಯಿತು. ಅತ್ಯಂತ ಕಡಿಮೆ ಸಮಯದಲ್ಲಿ ನೂರಾರು ದೇಶಗಳಿಗೆ ಹರಡಿದ ರೀತಿ, ಈ ಹೊಸ ವೈರಸ್ ನ ಗಂಭೀರತೆಗೆ ಜ್ವಲಂತ ಸಾಕ್ಷಿ.

ವೈರಸ್ ಒಮ್ಮೆ ನಮ್ಮ ಜೀವಕೋಶಗಳ ಹೊರಮೈ ಗೆ ಸಂಪರ್ಕ ಹೊಂದಿದ ಬಳಿಕ ವೈರಸ್ ನ RNA ಸುಲಭವಾಗಿ ಒಳಹೊಕ್ಕುತ್ತವೆ. ಆದರೆ ಆ ಪ್ರಕ್ರಿಯೆ ಹಲವಾರು ಹಂತಗಳು ಮತ್ತು ಪ್ರೋಟೀನ್ ಗಳನ್ನು ಒಳಗೊಂಡಿರುತ್ತದೆ. ಒಮ್ಮೆ ಒಳ ಹೊಕ್ಕ RNA, ತಾನು ಜೀವಂತವಾಗಿರಲು ಬೇಕಾದ ಮತ್ತು ರೋಗ ಉಲ್ಬಣಗೊಳಿಸಲು ಅಗತ್ಯವಿರುವ ಪ್ರೋಟೀನ್ ಗಳನ್ನು ಉತ್ಪಾದಿಸಲು ಸನ್ನದ್ಧವಿರುತ್ತದೆ. ವೈರಸ್ ನ ಇರುವಿಕೆ, ದೇಹದ ರಕ್ಷಣಾ ವ್ಯವಸ್ಥೆಯನ್ನು ಜಾಗೃತಗೊಳಿಸಿ, ಪ್ರತಿಕಾಯಗಳನ್ನು (Antibody) ಉತ್ಪಾದಿಸುತ್ತದೆ. COVID-19 ನ ಸಾಮಾನ್ಯ ಗುಣಲಕ್ಷಣಗಳು ಎಂದರೆ ಜ್ವರ, ಒಣ ಕೆಮ್ಮು ಹಾಗೂ ವಿಪರೀತ ಸುಸ್ತು. ಕೆಲವರಲ್ಲಿ ಮೈಕೈ ನೋವು, ಮೂಗು ಕಟ್ಟುವಿಕೆ, ಗಂಟಲ ಬೇನೆ ಹಾಗೂ ಬೇಧಿ ಕಾಣಿಸಿಕೊಳ್ಳಬಹುದು. ಆರಂಭದಲ್ಲಿ ಈ ಗುಣ ಲಕ್ಷಣಗಳು ತುಂಬಾ ಸಾಧಾರಣವಾಗಿರುತ್ತದೆ. ವೈಜ್ಞಾನಿಕ ಆಧಾರಗಳ ಪ್ರಕಾರ ಪ್ರತೀ ಐದು ರೋಗಿಗಳಲ್ಲಿ ಒಬ್ಬನ ಸ್ಥಿತಿ ತುಂಬಾ ಗಂಭೀರಗೊಂಡು ಉಸಿರಾಡಲೂ ಕಷ್ಟ ಪಡಬೇಕಾಗುತ್ತದೆ.  ಹಿರಿಯ ನಾಗರೀಕರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು, ಮಧುಮೇಹಿಗಳು, ಧೂಮಪಾನಿಗಳು ಇವರಲ್ಲಿ ಈ ರೋಗ ತೀವ್ರ ಲಕ್ಷಣ ಪಡೆಯುವ ಸಾಧ್ಯತೆಗಳು ಅಧಿಕ. ಸೌಮ್ಯ ಲಕ್ಷಣ ತೋರುವ ರೋಗಿಗಳು ಕೂಡಾ ವೈರಸ್ ಅನ್ನು ತಮಗೇ ಅರಿವಿಲ್ಲದೆ ಬೇರೆಯವರಿಗೆ ಪಸರಿಸುವ ಎಲ್ಲಾ ಸಾಧ್ಯತೆಗಳು ಇರುತ್ತದೆ.

ವುಹಾನ್ ವೈರಸ್ ನ ಬಗೆಗಿನ ಊಹಾಪೋಹಗಳು ಮತ್ತು ಸತ್ಯಾಸತ್ಯತೆ: ಇತಿಹಾಸದುದ್ದಕ್ಕೂ ಈ ಮಹಾಮಾರಿ ಪಿಡುಗುಗಳು ಸುಳ್ಳು ಸುದ್ದಿಗಳ, ಊಹಾಪೋಹಗಳ ದೊಡ್ಡ ಕಣಜ. ಅಂತೆಯೇ,  ವುಹಾನ್ ವೈರಸ್ ನ ಪಿಡುಗು ಆರಂಭಗೊಂಡ ಬಳಿಕ, ಈ ವೈರಸ್ ನ ಬಗೆಗೆ ಸಾಕಷ್ಟು ಪ್ರಶ್ನೆಗಳು, ಊಹಾಪೋಹಗಳು ಹುಟ್ಟಿಕೊಂಡಿವೆ. AIDS ಉಂಟುಮಾಡುವ HIV ವೈರಸ್ ಕಂಡುಹಿಡಿದ ನೊಬೆಲ್ ಪುರಸ್ಕೃತ ಫ್ರ್ಯಾನ್ಸ್ ನ ವಿಜ್ಞಾನಿ ಡಾ. ಲೂಕ್ ಮೋಂಟನಿಯರ್ ಪ್ರಕಾರ SARS-CoV-2, ಒಂದು ಅಸಹಜ ವೈರಸ್. ಇನ್ನೊಂದು ಕಡೆಯಲ್ಲಿ, ಡಾ. ಮೋಂಟನಿಯರ್ ಅವರ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದು ವಿಶ್ವದ ಗಣ್ಯ ವಿಜ್ಞಾನಿಗಳ ಅಭಿಪ್ರಾಯವೂ  ಇದೆ.

ಬಾವಲಿಗಳಲ್ಲಿ ಕಂಡುಬಂದ ಕೊರೋನ ವೈರಸ್ ನ E ಪ್ರೋಟೀನ್ ಮತ್ತು SARS-CoV-2 ಗಳಲ್ಲಿ ಕಂಡುಬರುವ E ಪ್ರೋಟೀನ್ ಗಳು ಶತ ಪ್ರತಿಶತ ಸಾಮ್ಯತೆ ಹೊಂದಿದೆ. ಅಮೆರಿಕಾದ  National Cancer Institute ನ ಪೂರ್ವ ನಿರ್ದೇಶಕಿ ಆಗಿದ್ದ ಡಾ. ಜೂಡೀ ಮಿಕೊವಿಟ್ಸ್ ತಮ್ಮ 40 ವರ್ಷಕ್ಕೂ ಅಧಿಕ ವೈರಸ್ ಸಂಶೋಧನಾ ಅನುಭವದ ಆಧಾರದ ಪ್ರಕಾರ “ಪ್ರಾಣಿಯಿಂದ ಮನುಷ್ಯನಿಗೆ ಹರಡುವ ವೈರಸ್ ನ  ಪ್ರಮುಖ ಪ್ರೋಟೀನ್ ಗಳಲ್ಲಿ ಶತ ಪ್ರತಿಶತ ಸಾಮ್ಯತೆ ಇರುವುದು ಸಾಧ್ಯವಿಲ್ಲ” ಎನ್ನುತ್ತಾರೆ.  ಇಂತಹ ಹಲವಾರು ಅಂಶಗಳ ಬಗ್ಗೆ ಇನ್ನೂ ಗುಮಾನಿಗಳಿವೆ. ಕಮ್ಯುನಿಸ್ಟ್ ದೇಶವಾದ ಚೀನಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಎಲ್ಲರಿಗೂ ತಿಳಿದದ್ದೇ. ಅಮೆರಿಕಾದ ಗುಪ್ತಚರ ಇಲಾಖೆಯ ವರದಿಗಳ ಪ್ರಕಾರ ಮಾರ್ಚ್ ನ ಬಳಿಕ ಚೀನಾದಲ್ಲಿ ಸುಮಾರು 8-10 ಮಿಲಿಯನ್ ಟೆಲಿಫೋನ್ ಗಳು ಸಂಪರ್ಕ ಕಡಿತಗೊಂಡಿವೆ. ಕಾರಣ ಏನಿರಬಹುದು ಎಂದು ಎಲ್ಲರ ಊಹೆಗೆ ಬಿಟ್ಟದ್ದು.

ವಾಶಿಂಗ್ಟನ್  ಪೋಸ್ಟ್ ನ ಇತ್ತೀಚಿನ ಒಂದು ವರದಿಯ ಪ್ರಕಾರ, ಚೀನಾದಲ್ಲಿರುವ ಅಮೆರಿಕಾದ ರಾಯಭಾರಿ ಕಚೇರಿ, ವುಹಾನ್ ನ ವೈರಸ್ ಸಂಶೋಧನಾ ಕೇಂದ್ರದಲ್ಲಿನ ಸುರಕ್ಷತಾ ಕ್ರಮದ ಲೋಪದೋಷಗಳ ಬಗ್ಗೆ ಸುಮಾರು 2 ವರ್ಷಗಳ ಹಿಂದೆಯೇ ಅಮೆರಿಕಾವನ್ನು ಎಚ್ಚರಿಸಿತ್ತು ಎನ್ನಲಾಗಿದೆ. ಆದರೆ ಚೀನಾ ಸರಕಾರ ಮತ್ತು ವುಹಾನ್ ವೈರಸ್ ಸಂಸ್ಥೆಯ ಮುಖ್ಯಸ್ಥರ ಪ್ರಕಾರ, ಈ ಸಂಸ್ಥೆಯ ಪ್ರಯೋಗಾಲಯಗಳಲ್ಲಿ ಬಯೋ ಸೇಫ್ಟಿ-4ನೆಯ ಮಟ್ಟದ ಸುರಕ್ಷತೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ. ಪ್ರಸ್ತುತ, ವಿಶ್ವ ಮಟ್ಟದಲ್ಲಿ ಅಮೆರಿಕ ಎದುರಿಸುತ್ತಿರುವ ಮುಖಭಂಗ, ತನ್ನ ನಿರ್ಧಾರಗಳ ವೈಫಲ್ಯ, ಕೊರೋನ ನಿಯಂತ್ರಿಸುವಲ್ಲಿನ ಅಸಹಾಯಕತೆ ಹಾಗೂ ಹೇಗಾದರೂ ಅದರಿಂದ ಹೊರಬರುವ ನಿಟ್ಟಿನಲ್ಲಿ ಅಲ್ಲಿನ ಅಧ್ಯಕ್ಷರು, ಚೀನಾ ದೇಶದ ಮೇಲೆ ಗೂಬೆ ಕೂರಿಸುವ ಎಲ್ಲಾ ಸಾಹಸವನ್ನು ಮಾಡುತ್ತಿದ್ದಾರೆ.

ವಿಜ್ಞಾನ ಪ್ರಪಂಚ ಸಾರ್ವತ್ರಿಕವಾಗಿ ಒಪ್ಪಿದ ವಿಷಯವೆಂದರೆ SARS-CoV-2 ಒಂದು ನೈಸರ್ಗಿಕವಾದ ವಿಕಾಸ ಹೊಂದಿದ ಒಂದು ವೈರಸ್ ಎಂದು. “ನೇಚರ್ ಮೆಡಿಸಿನ್” ಎಂಬ ಖ್ಯಾತ ವೈಜ್ಞಾನಿಕ ನಿಯತಕಾಲಿಕದ ಪ್ರಕಾರ, ಪ್ರಪಂಚದ ವೈವಿಧ್ಯಮಯ ಕೊರೋನ ವೈರಸ್ ಗಳ RNA ಯ ಹೋಲಿಕೆ ಮತ್ತು ಅಧ್ಯಯನದಿಂದ SARS-CoV-2 ಒಂದು ಸೈಸರ್ಗಿಕವಾಗಿ ರೂಪಾಂತರಗೊಂಡ ವೈರಸ್. ಈ ವಿಜ್ಞಾನಿಗಳ ಪ್ರಕಾರ, SARS-CoV-2 ನ ಅತೀ ಸಮೀಪದ ಸಂಬಂಧಿ ವೈರಸ್ ಬಾವಲಿಗಳನ್ನು ಕಾಡುವ RaTG13 ಬಗ್ಗೆ ಕೂಡಾ ವುಹಾನ್ ನ ವೈರಸ್ ಸಂಶೋಧನಾ ಕೇಂದ್ರದಲ್ಲಿ  ಸಂಶೋಧನೆ ನಡೆಸಲಾಗುತ್ತಿದೆ ಹಾಗೂ ಇದೇ SARS-CoV-2 ನ ಮೂಲ ಎಂದು ನಂಬಲಾಗುತ್ತಿದೆ.

ಸದ್ಯದ ಪರಿಸ್ಥಿತಿಯಲ್ಲಿ ಕೊರೋನ ವೈರಸ್ ಅನ್ನು ಸಮರ್ಥವಾಗಿ ಎದುರಿಸಲು, ನಾಶಪಡಿಸಲು ಯಾವುದೇ ಔಷಧ ಸಿದ್ಧವಿಲ್ಲ. ಆದರೆ ಈ ನಿಟ್ಟಿನಲ್ಲಿ ಸಂಶೋಧನೆಗಳು ತ್ವರಿತಗತಿಯಲ್ಲಿ ಸಾಗುತ್ತಿವೆ.  ವಿಶ್ವದಾದ್ಯಂತ 100ಕ್ಕೂ ಅಧಿಕ ರೀತಿಯ ಲಸಿಕೆಗಳು Covid-19 ವಿರುದ್ಧ ಹೋರಾಡಲು ತಯಾರುಗೊಳ್ಳುತ್ತಿದೆ. ಇವುಗಳಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ತಯಾರಿಸಿದ  ‘ChAdOx1 nCoV-19’ ಎಂಬ ಲಸಿಕೆ ಕ್ಲಿನಿಕಲ್ ಟ್ರೈಯಲ್ ಗೆ ಒಳಪಡುತ್ತಿದೆ. ಸುಮಾರು 1200 ಸ್ವಯಂಸೇವಕರ ಮೇಲೆ ChAdOx1 nCoV-19 ಲಸಿಕೆಯ ಕ್ಲಿನಿಕಲ್ ಟ್ರೈಯಲ್ ನಡೆಯುತ್ತಿದೆ.  ನಮ್ಮ ದೇಶದ Serum Institute of India ದಲ್ಲಿ ಈ ಲಸಿಕೆಯ ದೊಡ್ಡಮಟ್ಟದ ಉತ್ಪಾದನೆಯೂ ಆಗುತ್ತಿದೆ. ಮನುಷ್ಯ ಯಾವತ್ತೂ ಆಶಾವಾದಿ. ಈ ಎಲ್ಲಾ ಪ್ರಯತ್ನಗಳಿಗೆ ಸೂಕ್ತ ಫಲ ಸಿಗಬಹುದು ಎಂಬ ಆಸೆ, ಹಾರೈಕೆ ಮತ್ತು ನಂಬಿಕೆ. ಅತ್ಯಂತ ಕ್ಲಿಷ್ಟಕರ ಸಮಯದಲ್ಲಿ ನಮ್ಮ ಪ್ರಯತ್ನಗಳು ಫಲಪ್ರದವಾಗಿವೆ. Covid-19 ಅನ್ನು ನಿಯಂತ್ರಿಸಲು, ನಿವಾರಿಸಲು, ಮತ್ತು ನಿಃಶೇಷ ಗೊಳಿಸಲು ಮನುಷ್ಯನ ಪ್ರಯತ್ನಗಳು ಫಲಪ್ರದವಾಗಲಿ, ಆಗಿಯೇ ಆಗುತ್ತದೆ ಎಂಬ ದೃಢ ವಿಶ್ವಾಸ ನಮಗಿದೆ.

ಉಪಸಂಹಾರ: “ನಾನೇ” ಎಂಬ ಅಹಂಕಾರದಲ್ಲಿ ಇದ್ದ ಮನುಷ್ಯನನ್ನು ಕೇವಲ ಒಂದು ವೈರಸ್ ಸಂಪೂರ್ಣವಾಗಿ ಭ್ರಮನಿರಸನಗೊಳಿಸಿದೆ. ನಮ್ಮ ನಂಬಿಕೆಗಳು, ಆಚಾರ ವಿಚಾರಗಳು ಸಾಕಷ್ಟು ಬದಲಾಗಿವೆ. ಜೀವನಶೈಲಿಯೂ ನಂಬಲು ಅಸಾಧ್ಯ ಎಂಬಂತೆ ಮಾರ್ಪಾಡು ಹೊಂದಿದೆ. ಕೆಲವೊಂದು ಅಹಿತಕರ ಘಟನೆಗಳ ಹೊರತು ಪಡಿಸಿ, ಮಾನವೀಯತೆಯ ಮುಖದ ಹೊಸ ಪರಿಚಯವಾಗುತ್ತಿದೆ. ಕಷ್ಟಕಾಲದಲ್ಲಿ ಪರಸ್ಪರರಿಗೆ ಒದಗಿಬರುವ ನಮ್ಮ ಹೊಸ ಮಗ್ಗುಲಿನ ನೋಟ ಈ ಸಂಕಷ್ಟದ ಸಮಯದಲ್ಲಿ ಕಾಣ ಸಿಗುತ್ತಿದೆ. ಸ್ವಚ್ಛತೆ ಮತ್ತು ಆರೋಗ್ಯ ಕರ್ಮಚಾರಿಗಳು, ಡಾಕ್ಟರ್ ಗಳು, ದಾದಿಯರು,  ಪೊಲೀಸರು ಇವರ ಸೇವೆಗಳು, ಸೇವಾ ಮಹತ್ವ ಹಿಂದೆಂದಿಗಿಂತಲೂ ಹೆಚ್ಚಾಗಿರುವುದು ನಮ್ಮ ಅರಿವಿಗೆ ಬಂದಿದೆ. ತಮ್ಮ ಸ್ವಂತ ಮಕ್ಕಳು, ಮನೆಯವರನ್ನೂ ಮರೆತು, ಜೀವದ ಹಂಗು ತೊರೆದು ಜನಸೇವೆಗೆ ತೊಡಗಿಸಿಕೊಂಡಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ, ಈ ಕೊರೋನ ವೈರಸ್ ನಮ್ಮೊಳಗಿನ ಅನೇಕ ಹೊಸ ಆಯಾಮಗಳನ್ನು ತೆರೆದಿಡುತ್ತಿದೆ. ಹೋಟೆಲ್ ಆಹಾರ ತಿನ್ನದೇ, ಮಾಲ್ ಗಳಿಗೆ ಹೋಗದೇ, ಜನಜಂಗುಳಿಯ ಚಿಂತೆ ಇಲ್ಲದೇ, ಅಮೆಝಾನ್ ಶಾಪಿಂಗ್ ಮಾಡದೇ, ಆಲ್ಕೊಹಾಲ್ ಸೇವಿಸದೇ, ನಮ್ಮದೇ ಮನೆಯಲ್ಲಿ ಹೆಚ್ಚೇನೂ ಕೆಲಸವಿಲ್ಲದೇ ತಿಂಗಳ ಕಾಲಕ್ಕೂ ಹೆಚ್ಚು ಇರಬಲ್ಲೆ ಎಂಬ ನಂಬಲು ಕಷ್ಟವಾದ ಸತ್ಯವನ್ನು “ಸಾಧ್ಯಪಡಿಸಿದ್ದು” ಇದೇ  ಕೊರೋನ.

‍ಲೇಖಕರು nalike

June 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Ranjitha Pandit

    Very detailed and informative article. It cleared many doubts about vaccine and it’s testing. Thank you so much for the information. Looking forward for many such articles !

    ಪ್ರತಿಕ್ರಿಯೆ
  2. Prashantha Naik, Mangalore

    ಕೊರೋನಾವೈರಸ್ ಬಗ್ಗೆ ಡಾ. ಶ್ಯಾಮಪ್ರಸಾದ್ ಅವರು ವಿಸ್ತ್ರತವಾಗಿ ಸುಲಭವಾಗಿ ಆರ್ಥವಾಗುವಂತೆ ಬರೆದಿದ್ದಾರೆ. ಮನಸ್ಸಲ್ಲಿದ್ದ ಅನೇಕ ಊಹಾಪೋಹಗಳನ್ನು ಹೊಡೆದೋಡಿಸಿದ್ದಾರೆ.

    ಪ್ರತಿಕ್ರಿಯೆ
  3. Dr.Ananda Kulal

    This article gives every details of covid-19 and views about its origin, its effect, structure, responses from different groups of people like scientific and non-scientific communities. I thank my friend and classmate Dr. Shayamaprasad for writing this beautiful article which is very clear and easy for a common reader. Wish you good luck and request everyone to read this.

    ಪ್ರತಿಕ್ರಿಯೆ
  4. ಚಂದ್ರಪ್ರಭ ಕಠಾರಿ

    ಸೂಕ್ಷ ವೈದ್ಯಕೀಯ ವಿವರಗಳೊಂದಿಗೆ, ಲೇಖನ ಮಾಹಿತಿ ಪೂರ್ಣವಾಗಿದೆ. ಲೇಖನ ಬರೆದ ವೈದ್ಯರಿಗೆ, ಪ್ರಕಟಿಸಿದ ಅವಧಿಗೆ ಧನ್ಯವಾದಗಳು.

    ಪ್ರತಿಕ್ರಿಯೆ
  5. Durga Prasad

    Dear Sir,
    Very informative arricle..Keep writing…Upsanhara also is bery true and close to our heart…
    Thank you

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: