ನಮ್ಮೆಲ್ಲರ ಪ್ರೀತಿಯ ಮೇಷ್ಟ್ರಾದ ಐತಾಳರು..

ನನ್ನಂಥ ಅದೆಷ್ಟೋ ಜೀವಗಳಿಗೆ-ಬದುಕಿಗೆ ದಿವ್ಯಗ್ನಾನವಾದ, ನೀನಾಸಮ್ ರಂಗ ಶಿಕ್ಷಣ ಕೇಂದ್ರದ ನಮ್ಮೆಲ್ಲರ ರಂಗಗುರು, ವೆಂಕಟರಮಣ ಐತಾಳರು Official ಆಗಿ Retirement ಅಂತ ಕೆಲವರ್ಷಗಳ ಹಿಂದೆಯೇ ಶಾಲೆಯಲ್ಲಿ ತಮ್ಮ ಬೋಧನಾವಧಿ ಮುಗಿಸಿದ್ದರೂ, ತೆರವಾದ ಪ್ರಾಂಶುಪಾಲರ ಜವಾಬ್ದಾರಿಯನ್ನ ವಹಿಸಿಕೊಳ್ಳಬೇಕಿದ್ದ ಸೂಲಿಬೆಲೆ ಗಣೇಶ್ ಅವರು ಶಿವಮೊಗ್ಗ ರಂಗಾಯಣದ ನಿರ್ದೇಶಕರಾಗಿದ್ದರಿಂದ ಆ ‘ನಿವೃತ್ತಿ’ ಯೆಂಬ ನಿವೃತ್ತಿ, ಸಾಧ್ಯವಾಗಿರಲಿಲ್ಲ.

ನಿನ್ನೆಯಷ್ಟೇ ಪರಮಗುರುವೊಬ್ಬ ತಮ್ಮದೇ ಶಿಷ್ಯನೊಬ್ಬನಿಗೆ ತಮ್ಮ ಜವಾಬ್ದಾರಿಯನ್ನು ಒಪ್ಪಿಸುವ ಸಂದರ್ಭ ಘಟಿಸಿದೆ.

‘ಅಯ್ಯೋ ಐತಾಳ್ರು ರಿಟೈರ್ ಆಗ್ಬುಟ್ರಲ್ಲ… ‘ ಅನ್ನೋ subtext ಅಂತೂ ನನ್ನಂಥ ಅದೆಷ್ಟೋ ಶಿಷ್ಯಂದಿರಿಗೆ, ಖಂಡಿತವಾಗಿಯೂ ಇಲ್ಲ, ಬದಲಾಗಿ ಇಡೀ ನಮ್ಮ ಕನ್ನಡ ನಾಡು ಅಷ್ಟೇ ಏಕೆ, ಇಡೀ ನಮ್ಮ ಭಾರತದೆಲ್ಲೆಡೆ ಅವರ ರಂಗಕೃತಿಗಳು ಮೊಳಗುವ, ಆ ಮೂಲಕ ಎಲ್ಲವನ್ನ-ಎಲ್ಲರನ್ನ ಒಳಗೊಳ್ಳುವ ಕಾಲಕ್ಕೆ ಸುಮೂಹೂರ್ತವೊಂದು ಬಂದೊದಗಿದೆಯಲ್ಲ ಅಂತ ಇನ್ನಿಲ್ಲದ ಖುಷಿ.

ರಂಗಸಾಗರಕ್ಕೆ ಸ್ವಾಗತ ಸರ್, ಅನುರಣಿಸಿ ಅನಂತ ವರುಷ, ಬೆಳಗಿ ಕಾಲಾಂತರ, ನಾವೆಲ್ಲರೂ ಇದ್ದೇವೆ ನಿಮ್ಮೊಡನೆ ನಿರತ ನಿರಂತರ ……

ಈ ಸಂದರ್ಭದಲ್ಲಿ ಅವರ ನೆಚ್ಚಿನ ಶಿಷ್ಯರಲ್ಲೊಬ್ಬರಾದ, ಗೆಳೆಯ ಕಥೆಗಾರ-ನಿರ್ದೇಶಕ ಮೌನೇಶ್ ಬಡಿಗೇರ್, ಗುರುಗಳ ಕುರಿತೊಂದಿಷ್ಟು ಮಾತುಗಳನ್ನ ಬರೆದಿದ್ದಾರೆ, ಅಹಹಾ…..

ಇದೋ ಇಲ್ಲಿದೆ…

ನರೇಶ ಮಯ್ಯ
ನಟ-ನಿರ್ದೇಶಕ

ಮೌನೇಶ್ ಬಡಿಗೇರ್

ನಮ್ಮೆಲ್ಲರ ಪ್ರೀತಿಯ ಮೇಷ್ಟ್ರಾದ ಐತಾಳರು ಇತ್ತೀಚೆಗೆ ನೀನಾಸಮ್ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲರ ಹುದ್ದೆಯಿಂದ ನಿವೃತ್ತರಾಗಿದ್ದಾರೆ.

ನಮ್ಮೆಲ್ಲರಿಗೂ ಅವರು ರಂಗಭೂಮಿ ಇತಿಹಾಸ, ಪಾಶ್ಚಾತ್ಯ ರಂಗಭೂಮಿ, ಆಧುನಿಕ ರಂಗಭೂಮಿ ಹೀಗೆ ಹತ್ತು ಹಲವು ವಿಷಯಗಳನ್ನು ಪಾಠ ಮಾಡಿದ್ದಾರೆ.

ರಂಗಭೂಮಿ, ಸಾಹಿತ್ಯ, ಕಲಾಸಿದ್ಧಾಂತಗಳ ಕುರಿತು ಏನೇ ಸಂದೇಹಗಳಿದ್ದರೂ ಅವರು ಅದನ್ನು ಪರಿಹರಿಸುತ್ತಿದ್ದ ರೀತಿ ಅನನ್ಯವಾದದ್ದು.

ವಯಕ್ತಿಕವಾಗಿ ನನ್ನ ರಂಗಭೂಮಿಯ ಹಾದಿಯಲ್ಲಿ ಐತಾಳರ ಕೊಡುಗೆ ಬಹಳ ಮುಖ್ಯವಾದದ್ದು. ಅವರ ನಿರ್ದೇಶನದಲ್ಲಿ ನಾನು ಕಾಳಿದಾಸನ “ಅಭಿಜ್ಞಾನ ಶಾಕುಂತಲ” ಹಾಗೂ “ಕನ್ನಡ ರಾಮಾಯಣ” (ಕನ್ನಡದ ಹಲವು ರಾಮಾಯಣಗಳಿಂದ ಅವರೇ ಸಂಪಾದಿಸಿ ಸಂರಚಿಸಿದ್ದು) ಎಂಬ ಎರಡು ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಆ ಪ್ರಕ್ರಿಯೆಯಲ್ಲಿ ನನ್ನನ್ನು ನಾನು ಸಂಪೂರ್ಣ ಒಡ್ಡಿಕೊಂಡು ಕಲಿತದ್ದು ಅಮೂಲ್ಯವಾದದ್ದು. ಅವರು ನಾಟಕ ಕೃತಿಯನ್ನು ಆಯ್ದುಕೊಳ್ಳುವ ಕ್ರಮ, ಅದರ ರಂಗವಿನ್ಯಾಸ, ಪಾತ್ರಗಳ ಆಯ್ಕೆ, ಪಾತ್ರಗಳ ಚಲನ ವಿನ್ಯಾಸ, ಭಾಷೆ, ಕೃತಿಯನ್ನು ಸಂಕಲನ ಮಾಡುವ ರೀತಿ, ಹಾಗೂ ನಟರೊಂದಿಗೆ ಅವರು ನಡೆಸುವ ಅಭಿನಯ ಕಲಿಕೆಯ ಸಂವಹನ ಹೀಗೆ ಇಂಥ ಅನೇಕ ಸೂಕ್ಷ್ಮಗಳನ್ನು ನಾನು ಅವರಿಂದ ಕಲಿತಿದ್ದೇನೆ.

ಅವರ ಪ್ರಯೋಗಗಳ ವೈಶಿಷ್ಟ್ಯ ಇರುವುದೇ ಸರಳ ಹಾಗೂ ಸಹಜತೆಯಲ್ಲಿ. ಅವರ ಬಹುತೇಕ ರಂಗಕೃತಿಗಳು ಸರಳ, ಸುಂದರ, ಸಹಜತೆಯಿಂದ ಕೂಡಿರುತ್ತ ಕೃತಿನಿಷ್ಟವಾಗಿರುತ್ತವೆ, ಹಾಗೂ ಅದರ ವ್ಯಾಖ್ಯಾನವೂ ಸಹ ರಂಗಕೃತಿಯಿಂದ ಹೊರಗಿರದೆ ಅದರೊಳಗೇ ಅಡಕವಾಗಿರುವುದು ಮತ್ತೊಂದು ವಿಶೇಷ! ಒಂದು ಬಗೆಯಲ್ಲಿ ಕೃತಿಕಾರನ ವ್ಯಾಖ್ಯಾನವನ್ನು ಐತಾಳರು ಅದಕ್ಕೆ ಧಕ್ಕೆ ಬಾರದಂತೆ ತಮ್ಮದನ್ನೂ ಸೇರಿಸಿ ರಂಗದ ಮೇಲೆ ಅದನ್ನು ಇನ್ನೂ ಜ್ವಾಜಲ್ಯಮಾನ್ಯಗೊಳಿಸುತ್ತ ಮುಂದುವರೆಸುತ್ತಾರೆ;

ಯಾವ ಆರ್ಭಟಗಳೂ, ಬಾಹ್ಯ ಗಿಮಿಕ್ಕುಗಳೂ ಇಲ್ಲದೆ ಸಹಜವಾಗಿ ತಣ್ಣಗೆ ಶುರುವಾಗುವ ಅವರ ಪ್ರಯೋಗಗಳು ನೋಡ ನೋಡುತ್ತ ಪ್ರೇಕ್ಷಕರನ್ನು ತನ್ನೊಳಗೆ ಇಳಿಸಿಕೊಳ್ಳುತ್ತ ಕೊನೆಗೆ ಅವರಲ್ಲಿ ಒಂದು ವಿಶಿಷ್ಠವಾದ ಭಾವಶೋಧವನ್ನು ನಡೆಸುವಲ್ಲಿ ಯಶಸ್ವಿಯಾಗಿರುತ್ತವೆ. ಇದಕ್ಕೆ ಅವರ ಯಾವ ನಾಟಕವನ್ನು ಬೇಕಾದರೂ ಉದಾಹರಣೆಯಾಗಿ ನೋಡಬಹುದು.

“ಫಾರ್ಮ್” ಗೆ ಕಲೆಯಲ್ಲಿ ಬಹಳ ಮಹತ್ವದ ಸ್ಥಾನವಿದೆ. ಅದು ಚಿತ್ರಕಲೆಯಾಗಿರಬಹುದು, ಪ್ರದರ್ಶನ ಕಲೆಯಾಗಿರಬಹುದು, ಚಲನಚಿತ್ರಕಲೆಯಾಗಿರಬಹುದು. “ಫಾರ್ಮ್” ಅನ್ನೋದು ಯಾವುದೇ ಕಲಾವಿದ ತನ್ನದೇ ವಿಶಿಷ್ಟತೆಯಿಂದ ರೂಢಿಸಿಕೊಂಡ ಭಾಷಾಕ್ರಮವೇ ಅಗಿರುತ್ತದೆ. ಅದರಲ್ಲಿ ಮೂರ್ತವಾದ ರೇಖೆ, ಬಣ್ಣ, ಆಳ, ಅಗಲ, ಉದ್ದ, ದಪ್ಪ ಮೊದಲಾದವುಗಳಿದ್ದರೆ ಅಮೂರ್ತದ ನೆಲೆಯಲ್ಲಿ ಅದು ಈ ಮೂರ್ತ ವಸ್ತುಗಳಿಂದ ಹೊರಡಿಸುವ ವ್ಯಾಖ್ಯಾನವನ್ನು ಒಳಗೊಂಡಿರುತ್ತದೆ. ಇವು ಒಂದಕ್ಕೊಂದು ಪೂರಕವಾಗಿರುತ್ತವೆ.

ಇನ್ನೂ ರಂಗಭೂಮಿಯ ಪ್ರಯೋಗಗಳಲ್ಲೂ ಸಹ, ನಿರ್ದೇಶಕನೊಬ್ಬ ಪಠ್ಯ, ನಟ, ರಂಗಪರಿಕರ, ಸಜ್ಜಿಕೆ, ಬೆಳಕು, ನೃತ್ಯ, ಸಂಗೀತ ಮೊದಲಾದ ಮೂರ್ತ ಪರಿಕರಗಳನ್ನು ಬಳಸಿಕೊಂಡು ತನ್ನದೇ ವ್ಯಾಖ್ಯಾನಗಳನ್ನು ಹೊರಡಿಸಲು ಪ್ರಯತ್ನಿಸುತ್ತಿರುತ್ತಾನೆ. ಹೀಗೆ ಈ ಮೂರ್ತ ಪರಿಕರಗಳನ್ನು ಬಳಸುವಾಗ ಒಬ್ಬೊಬ್ಬ ನಿರ್ದೇಶಕರೂ ಒಂದೊಂದು ವಿಭಾಗದ ಮೇಲೆ ತಮ್ಮ ಸಹಜ ಆಸಕ್ತಿಯಿಂದ ಆದ್ಯತೆ ನೀಡುತ್ತ ಅದು ತಮ್ಮ ವ್ಯಾಖ್ಯಾನವನ್ನು ಪ್ರಭಾವಿಸುವಂತೆ ಕಟ್ಟುತ್ತಿರುತ್ತಾರೆ ಅಥವಾ ಅದರಿಂದಲೇ ತಮ್ಮ ಬಹುತೇಕ ವ್ಯಾಖ್ಯಾನಗಳು ಹೊಮ್ಮುತ್ತಿರುತ್ತವೆ‌. ಉದಾಹರಣೆಗೆ ನಾಟಕಕಾರನ ಪಠ್ಯವನ್ನೇ ತಿರುಚಿ ತನ್ನದೇ ಹೊಸ ವ್ಯಾಖ್ಯಾನವನ್ನು ನೀಡುವುದು, ಅಥವಾ ತಮ್ಮದೇ ವಿಶಿಷ್ಟವಾದ ಶೈಲೀಕೃತ ಅಭಿನಯ ವಿನ್ಯಾಸವನ್ನು ತನ್ನ ಎಲ್ಲಾ ನಾಟಕಗಳ ಪಾತ್ರಧಾರಿಗಳಿಗೂ ಒಗ್ಗಿಸುವುದು, ಅಥವಾ ರಂಗವಿನ್ಯಾಸದಲ್ಲಿ ಪ್ರಖರವಾದ, ಅದೇ ಎದ್ದು ಕಾಣುವಂತೆಯೋ ಅಥವಾ ಅದೇ, ಕೃತಿಯ ಬಹುಪಾಲು ವ್ಯಾಖ್ಯಾನವನ್ನು ಮಾಡುವಂತೆ ನಿರ್ಮಿಸುವುದೋ, ಅಥವಾ ವಸ್ತ್ರ, ಪರಿಕರಗಳಲ್ಲಿ ತೀರಾ ವೈರುದ್ಧ್ಯವಾದದ್ದನ್ನು ಬಳಸುವುದೋ…
ಹೀಗೆ.

ಇನ್ನೂ ನಿಖರವಾದ ಹಾಗೂ ಜನಪ್ರಿಯ ಉದಾಹರಣೆ ನೋಡುವುದಾದರೆ ಬಿ ವಿ ಕಾರಂತರ ನಾಟಕಗಳ “ಫಾರ್ಮ್” ಅನ್ನು ಅವರ ರಂಗಸಂಗೀತದ ಹಿನ್ನೆಲೆಯಲ್ಲಿ ಕಾಣಬಹುದಾಗಿದೆ. ಹೀಗೆ ಒಬ್ಬೊಬ್ಬರ “ಫಾರ್ಮ್” ಕೂಡ ಒಂದೊಂದು ಮೂರ್ತ ಪರಿಕರಗಳಿಂದ ಹೊಮ್ಮುತ್ತಿರುತ್ತದೆ.

ಈ ಹಿನ್ನೆಲೆಯಲ್ಲಿ ಐತಾಳರ ಪ್ರಯೋಗಗಳ “ಫಾರ್ಮ್” ಯಾವುದು? ಅಥವಾ ಎಂತದು? ಎಂಬ ವಿಷಯಕ್ಕೆ ಬರುವುದಾದರೆ ನಾವು ಹಿಂದೆ ನೋಡಿದಂತೆ ಅವರು ತಮ್ಮ ಪ್ರಯೋಗದ ಯಾವ ವಿಭಾಗವನ್ನೂ ಒತ್ತಿ ತನ್ನ ‘ಫಾರ್ಮ್’ಅನ್ನು ನಿರೂಪಿಸಲು ಬಳಸುವುದಿಲ್ಲ; ಮೇಲ್ನೋಟಕ್ಕೆ ಯಕ್ಷಗಾನ ಮಟ್ಟುಗಳು ಅವರ ಬಹುತೇಕ ಪ್ರಯೋಗಗಳಲ್ಲಿ ಪ್ರಧಾನವಾಗಿ ಹಾಗೂ ಹಿನ್ನೆಲೆಯಲ್ಲಿ ಕಂಡುಬಂದರೂ ಅದೇ ಅವರ “ಫಾರ್ಮ್” ಎಂದು ಧೃಡವಾಗಿ ಹೇಳಲು ಬರುವುದಿಲ್ಲ. ಪ್ರಯೋಗದ ಯಾವ ವಿಭಾಗದ ಮೇಲೂ ಅವರು ತಮ್ಮ ‘ಫಾರ್ಮ್’ ನ ಛಾಪನ್ನು ಒತ್ತುವುದೇ ಇಲ್ಲ; ಬದಲಾಗಿ ಅವರ ಪ್ರಯೋಗಗಳಲ್ಲಿ ಎಲ್ಲ ವಿಭಾಗಗಳೂ ಸಹಜವೆಂಬಂತೆ ಔಚಿತ್ಯಪೂರ್ಣವಾಗಿ ಏಕತ್ರಗೊಂಡಿರುತ್ತವೆ.

ಹಾಗಾದರೆ ನಿಜವಾಗಿಯೂ ಐತಾಳರ ಪ್ರಯೋಗಗಳಿಗೆ ತಮ್ಮದೇ ಆದ ‘ಫಾರ್ಮ್’ ಅನ್ನೋದೇ ಇಲ್ಲವೇ? ಎಂಬ ಪ್ರಶ್ನೆ ಮೂಡಬಹುದು. ನನ್ನ ಇದುವರೆಗಿನ ಅಭ್ಯಾಸದಿಂದ ಹೇಳುವುದಾದರೆ ಅಷ್ಟಕ್ಕೂ ಅವರ ‘ಫಾರ್ಮ್’ ಅನ್ನೋದು ಅವರ ಮೂರ್ತ ಪ್ರಯೋಗಗಳಲ್ಲಿ ಇಲ್ಲವೇ ಇಲ್ಲ! ಬದಲಾಗಿ ಅವರ ‘ಫಾರ್ಮ್’ ನಿಜವಾಗಿಯೂ ಇರುವುದು ಅದು ಕಟ್ಟ ಕಡೆಗೆ ಪ್ರೇಕ್ಷಕರಲ್ಲಿ ಬೀರುವ ಪರಿಣಾಮದಲ್ಲಿ!

ಹೌದು.
ನೀವು ಅವರ ಯಾವ ಪ್ರಯೋಗವನ್ನು ನೋಡಿದರೂ ನಿಮಗೆ ಅದರ ಮೂರ್ತತೆಯಲ್ಲಿ ಏನೇ ಏರುಪೇರುಗಳು ಕಂಡರೂ, ಏನೇ ಭಿನ್ನಾಭಿಪ್ರಾಯಗಳನ್ನು ತೋರಿದರೂ ಕಟ್ಟ ಕಡೆಗೆ ಅದು ನಮ್ಮೊಳಗೆ ಬೀರುವ ಪರಿಣಾಮದಲ್ಲಿ ಮಾತ್ರ ಯಾವ ಕೊರೆಯನ್ನೂ ಉಂಟುಮಾಡುವುದಿಲ್ಲ! ನನ್ನ ಪ್ರಕಾರ ಇದೇ ಐತಾಳರ ಪ್ರಯೋಗಗಳ ಒಂದು ದೊಡ್ಡ ಮ್ಯಾಜಿಕ್! ಮತ್ತು ಈ ಭಾವಶೋಧದ ಮ್ಯಾಜಿಕ್ಕೇ ಅವರ ಫಾರ್ಮ್!

(ಹಾಗಂತ ಅವರ ಮೂರ್ತ ಅಭಿವ್ಯಕ್ತಿಯಲ್ಲಿ ಸಾಮ್ಯತೆಗಳಾಗಲಿ, ನಿರ್ದಿಷ್ಟ ಸಂಯೋಜನೆಗಳಾಗಲಿ ಇಲ್ಲ ಎಂದಲ್ಲ. ಅವರ ಎಲ್ಲ ನಾಟಕಗಳ ‘ಗತಿ’ಯಲ್ಲೂ ಸಹ ಸೂಕ್ಷ್ಮವಾಗಿ ಈ ಸಾಮ್ಯತೆಯನ್ನು ಗಮನಿಸಬಹುದು. ಬಹುಶಃ ಅವರು ಸೃಷ್ಟಿಸುವ ಈ ‘ಗತಿ’ಯೇ ಅವರ ‘ಫಾರ್ಮ್’ಅನ್ನು ನಿರ್ಧರಿಸುವಲ್ಲಿ ಹೆಚ್ಚು ಕೆಲಸ ಮಾಡುತ್ತದೆ ಎನಿಸುತ್ತದೆ.)

ಇವಿಷ್ಟು, ತಮ್ಮ ದೀರ್ಘ ರಂಗಸೇವೆಯಿಂದ ನಿವೃತ್ತರಾದ ಐತಾಳರ ನಾಟಕ ಪ್ರಯೋಗಗಳನ್ನು ನೆನೆಸಿಕೊಂಡಾಗ ಥಟ್ಟನೆ ಹುಟ್ಟಿದ ಕೆಲವು ವಿಚಾರಗಳಷ್ಟೆ. ಆಸಕ್ತರು ಇನ್ನೂ ಹೆಚ್ಚಿನ ಅಧ್ಯಯನ ಮಾಡಬಹುದು. ಅವರ ಪ್ರಯೋಗಗಳ ಹೊರತಾಗಿ “ನೀನಾಸಮ್ ಮಾತುಕತೆ” ಎಂಬ ಸಾಹಿತ್ಯ- ಸಂಸ್ಕೃತಿ- ಭಾಷೆ- ಕಲೆ ಮೊದಲಾದವುಗಳ ಕೇಂದ್ರಿತವಾದ ತ್ರೈಮಾಸಿಕದ ಸಂಪಾದಕರಾಗಿ ಅವರು ಮಾಡುತ್ತಿರುವ ಕೆಲಸ ಮತ್ತೊಂದು ತೂಕದ್ದು. ಹೊರಗಿನ ಯಾವ ಪ್ರಚಾರವನ್ನೂ ಬಯಸದೆ ಐತಾಳರು ಮಾಡಿದ ಈ ಎಲ್ಲ ಕೆಲಸಗಳೂ ಅತ್ಯಮೂಲ್ಯವಾದದ್ದು.

ಇಂಥ ಒಂದು ಅಮೂಲ್ಯವಾದ ಸಂಪನ್ಮೂಲ ಮುಂದೆ ನೀನಾಸಮ್ ನಲ್ಲಿ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ಸಿಗುವುದಿಲ್ಲವಲ್ಲ ಎಂಬುದು ಒಂದು ಕೊರೆಯಾದರೆ, ಮತ್ತೊಂದು ಕಡೆಯಿಂದ ಯೋಚಿಸಿದಾಗ, ಅವರ ಅಮೂಲ್ಯವಾದ ರಂಗಭೂಮಿಯ ಜ್ಞಾನ, ಶಕ್ತಿ ಹಾಗೂ ಪ್ರತಿಭೆಯನ್ನು ಇಂದು ಇಡೀ ಕರ್ನಾಟಕದ ರಂಗಭೂಮಿ ಬಳಸಿಕೊಳ್ಳಬಹುದಾದ ಒಂದು ಸದವಕಾಶವು ಒದಗಿ ಬಂದಿದೆ. ಅದನ್ನು ಕರ್ನಾಟಕದ ಹವ್ಯಾಸಿ ರಂಗಭೂಮಿಯು ಸದುಪಯೋಪಡಿಸಿಕೊಳ್ಳಬೇಕು ಎಂಬುದು ನನ್ನ ಆಶಯ.

‍ಲೇಖಕರು avadhi

June 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: