ನನಗೆ ಈ ವಿಚಾರ ಕುರಿತು ಬರೆಯಲು ಇಷ್ಟವಿಲ್ಲ…!

ವಾಸುದೇವ ಶರ್ಮ 

ಖಂಡಿತಾ ನನಗೆ ಇಷ್ಟವಿಲ್ಲ. ಆದರೂ ಬರೆದುಬಿಟ್ಟರೆ ನನ್ನೊಳಗಿನಿಂದ ಅದು ಹೊರಬಿದ್ದು ಹೋಗಿಬಿಡುತ್ತದೆ ಎಂದುಕೊಂಡು ಬರೆಯುತ್ತಿದ್ದೇನೆ.

ಇದನ್ನು ಯಾರ ಮೇಲೂ ಆಪಾದಿಸಲು ಖಂಡಿತಾ ಅಲ್ಲ. ಯಾರನ್ನೂ ಅವರ ಸ್ಥಾನಮಾನ, ಬೆಳೆದುಬಂದ ರೀತಿ, ಅವರ ನಿಲುವುಗಳನ್ನು ಟೀಕಿಸಲು ಅಲ್ಲ. ಮತ್ತು ಆ ಒಂದಷ್ಟು ಜನರನ್ನು ಎದುರಿಟ್ಟುಕೊಂಡು ಅವರಂತಹ ಎಲ್ಲರನ್ನೂ ಸಾಮಾನ್ಯೀಕರಿಸಿ ಒಂದೇ ಗುಂಪಿಗೆ ಹಾಕಿ ಹೀಗೆಳೆಯಲೂ ಅಲ್ಲ.

ಆದರೆ ಇದು ಯಾಕೆ ಹೀಗೆ ಎಂದು ಮತ್ತೆ ಮತ್ತೆ ನನ್ನನ್ನೇ ಪ್ರಶ್ನಿಸಿಕೊಳ್ಳುವಂತಾಗುತ್ತಿದೆ. ಒಂದು ರೀತಿ ನನಗೇ ನಾಚಿಕೆಯಾಗುತ್ತದೆ.

ಈ ಬೆಂಗಳೂರು ಬೇಡವೆಂದು ಸಾವಿರಾರು ಜನ ತಮ್ಮ ಮೂಲನೆಲೆಗಳಿಗೆ ಹೊರಟುಹೋಗಿದ್ದಾರೆ, ಇನ್ನೂ ಹೋಗುತ್ತಿದ್ದಾರೆ. ಮೊದಮೊದಲು ಹೋಗುವವರಿಗೆ ರೈಲು ಬಸ್ಸು ವ್ಯವಸ್ಥೆ ಮಾಡುವ ನೆಪದಲ್ಲಿ ಸುಲಿಯುವಂತಹ ವ್ಯವಸ್ಥೆ ಇದ್ದು, ಏನಾದರಾಗಲೀ ನಾವು ನಡೆದಾದರೂ ಹೋಗುತ್ತೇವೆ ಎಂದವರ ಮೇಲೆ ದಾಳಿ ಮಾಡಿ, ಜೊತೆಗೆ ಹೋಗಬಾರದೆಂದು ನಿರ್ಬಂಧ ಹೇರಿ, ಆಮೇಲೆ ಅದನ್ನು ಹಿಂದಕ್ಕೆ ತೆಗೆದುಕೊಂಡು, ಈಗ ನ್ಯಾಯಾಲಯ ಮಾನವೀಯತೆಯನ್ನು ಬಲವಂತವಾಗಿ ಹೇರಿದ್ದರಿಂದಲೋ ಏನೋ ಸರ್ಕಾರಗಳು ಮುಂದೆ ನಿಂತು ಉಚಿತವಾಗಿ ಬಸ್ ರೈಲು ವ್ಯವಸ್ಥೆ ಮಾಡುತ್ತಿದೆ. ಹೋಗಬೇಕೆ, ಆಯಿತು ಗೌರವದಿಂದಲೇ ಕಳುಹಿಸೋಣ ಎನ್ನುವಂತಹ ವಾತಾವರಣ ಈಗ ಮೂಡಿದೆ.

ಕಳುಹಿಸುವ ವ್ಯವಸ್ಥೆ ಸಿದ್ಧವಾಗುತ್ತಿದೆ ಎಂದಾಗ ಸಹಜವಾಗಿಯೇ ಏನೋ ಎಂತೋ ಕಷ್ಟವೋ ನಷ್ಟವೋ, ಸುಮ್ಮನೆ ಹೊಡೆತ ತಿಂದು ಕಷ್ಟ ಅನುಭವಿಸುವುದು ಯಾಕೆ ಎಂದೋ, ಸಂಸಾರವನ್ನೆಲ್ಲಾ ಕಿತ್ತುಕೊಂಡು ಹೋಗಲು ಆಗುವ ಖರ್ಚು ಸುಧಾರಿಸುವುದು ಹೇಗೆ ಎಂಬ ಪ್ರಶ್ನೆಯಿದ್ದು, ಹೇಗೋ ಬದುಕಿದರಾಯಿತು ಎಂದುಕೊಂಡಿದ್ದವರೂ ಒಂದಷ್ಟು ಜನ ಗಂಟು ಮೂಟೆ ಕಟ್ಟಿಕೊಂಡು ಬೆಂಗಳೂರಿನ ಸುತ್ತಮುತ್ತಲಿನಿಂದ ಎದ್ದು ಹೊರಟು ಬಿಟ್ಟಿದ್ದಾರೆ.

ಹಾಗೆ ಹೋಗುವವರಿಗಾಗಿ ತಡವಾಗಿಯಾದರೂ ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದೆ. ಹೋಗುವ ಇಚ್ಛೆ ಇರುವವರು ಬೆಂಗಳೂರಿನ ಅರಮನೆ ಮೈದಾನಕ್ಕೆ ಬಂದು ಸೇರಬೇಕು. ಅಲ್ಲಿ ಜನ ತಾವು ಹೋಗ ಬಯಸುವ ಊರಿನ ಗುಂಪುಗಳಲ್ಲಿ ಸೇರಬೇಕು. ಅವರ ವಿವರಗಳನ್ನು ಪಡೆದುಕೊಂಡು, ನಿರ್ದಿಷ್ಟ ಸಮಯಕ್ಕೆ ಹೊರಡುವ ರೈಲುಗಳನ್ನು ಹತ್ತಿಸಲು ಬಸ್‌ಗಳಲ್ಲಿ ಕರೆತರಲಾಗುತ್ತದೆ. ಅರಮನೆ ಮೈದಾನದಲ್ಲಿ ಇರುವ ಸಮಯದಲ್ಲಿ ಅವರಿಗೆ ನೀರು, ಆಹಾರದ ವ್ಯವಸ್ಥೆ ಮಾಡಲಾಗಿದೆ. ಒಂದಷ್ಟು ಸ್ವಯಂಸೇವಾ ಸಂಘಟನೆಗಳು ಜನರಿಗೆ ಬೇಕಾದ ಆಹಾರ ಮತ್ತಿತರ ಸೌಲಭ್ಯಗಳನ್ನು ಮಾಡಿಕೊಡುತ್ತಿದ್ದಾರೆ. ಬಸ್ ಹತ್ತುವಾಗ ಬಿಎಂಟಿಸಿ ಮೂಲಕ ಅವರಿಗೆಲ್ಲಾ ಒಂದು ಟಿಕೆಟ್ ಕೊಡಲಾಗುತ್ತಿದೆ. ಅದು ಉಚಿತ.

ಒಮ್ಮೆ ರೈಲ್ವೆ ನಿಲ್ದಾಣಕ್ಕೆ ಬಂದು ಸೇರಿದಾಗ [ಚಿಕ್ಕಬಾಣಾವರ ಅಥವಾ ನಗರ ಕೇಂದ್ರದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ರೈಲ್ವೆ ನಿಲ್ದಾಣ] ಅವರನ್ನು ಸಾಲಿನಲ್ಲಿ ರೈಲಿನ ತನಕ ಕರೆತರಲಾಗುತ್ತಿದೆ. ರೈಲ್ವೆ ನಿಲ್ದಾಣದ ಪ್ರವೇಶ ದ್ವಾರದಲ್ಲೇ ಎಲ್ಲರನ್ನೂ ಜ್ವರ ಪರೀಕ್ಷೆ ಮಾಡಿಯೇ ಒಳಬಿಡಲಾಗುತ್ತಿದೆ. ಮತ್ತೆ ಸ್ವಯಂಸೇವಾ ಸಂಘಟನೆಗಳ ಸಂಯೋಜನೆಯಲ್ಲಿ ಹಾಗೂ ರೈಲ್ವೆ ನಿಲ್ದಾಣದ ಸಿಬ್ಬಂದಿಯ ನೆರವಿನಲ್ಲಿ ಹೊರಟಿರುವ ಜನರಿಗೆ ಆಹಾರ ಮತ್ತು ಕೆಲವು ಆರೋಗ್ಯ ಸಾಧನಗಳನ್ನು ನೀಡಲಾಗುತ್ತಿದೆ. ಇವೆಲ್ಲವೂ ಮಾನವೀಯತೆಯ ಹಿನ್ನೆಲೆಯಲ್ಲಿ ನಡೆಯುತ್ತಿದೆ.

ರೈಲು ನಿಲ್ದಾಣಕ್ಕೆ ಬಂದವರಿಗೆ ರೈಲ್ವೆ ಇಲಾಖೆಯು ವ್ಯವಸ್ಥಿತವಾಗಿ ಯಾವ ಭೋಗಿಯಲ್ಲಿ ಯಾವ ಆಸನ ಎಂದು ನಿರ್ದಿಷ್ಟಪಡಿಸಿ ಬರೆದು ಉಚಿತ ಟಿಕೆಟ್ ನೀಡಿ ಒಳಬಿಟ್ಟುಕೊಳ್ಳುತ್ತಿದ್ದಾರೆ. ಮತ್ತೆ ರೈಲ್ವೆ ಇಲಾಖೆಯ ಸಿಬ್ಬಂದಿ ಪ್ರತಿಯೊಬ್ಬರಿಂದಲೂ ಅವರ ಗುರುತು ಪರಿಚಯ [ಆಧಾರ್ ಅಥವಾ ಮತದಾರರ ಚೀಟಿ ಅಥವಾ ಚಾಲನಾ ಪರವಾನಗಿ ಸಂಖ್ಯೆ, ಇತ್ಯಾದಿ] ನೋಡಿ ಅವರು ಯಾವ ಊರಿಗೆ ಹೋಗಬೇಕು ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದು ಆಯಾ ನಿಲುದಾಣದಲ್ಲಿ ಈ ಪ್ರಯಾಣಿಕರನ್ನು ಇಳಿಸಿಕೊಂಡು ಮತ್ತೊಮ್ಮೆ ಅವರು ಒಳಪಡಲೇಬೇಕಾದ ಪ್ರಕ್ರಿಯೆಗಳನ್ನು ಮುಂದುವರೆಸಲು ಇರಬಹುದು. ಪ್ರತಿ ರೈಲ್ವೆ ಭೋಗಿಯಲ್ಲಿ ಸಿಬ್ಬಂದಿ ಇದ್ದು, ಜನರ ಆವಶ್ಯಕತೆಗಳನ್ನು ನೋಡಿಕೊಳ್ಳುವ (ನೀರು, ಆಹಾರ, ವೈದ್ಯಕೀಯ ನೆರವಿನ ಅಗತ್ಯತೆ, ಭೋಗಿಗಳಲ್ಲಿ ನೀರು, ಶೌಚಾಲಯದ ನಿರ್ವಹಣೆ, ಇತ್ಯಾದಿಗಳಿಗೆ) ವ್ಯವಸ್ಥೆಯನ್ನೂ ಮಾಡಲಾಗಿದೆ ಎನ್ನಲಾಗಿದೆ. ಇಷ್ಟಲ್ಲದೆ ಈಗ ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಉಚಿತವಾಗಿ ಆಹಾರ ವ್ಯವಸ್ಥೆ ಮಾಡಲಾಗುತ್ತದೆಂದೂ ಹೇಳಲಾಗಿದೆ.

ಒಳ್ಳೆಯದು.

ನಾನು ನೋಡಿದಂತೆ ಈ ರೈಲುಗಳಿಗೆ ಬರುತ್ತಿರುವವರಲ್ಲಿ ಪುರುಷರೇ ಅತ್ಯಧಿಕ. ಪುರುಷರಲ್ಲೂ ಸುಮಾರು ೧೮ರಿಂದ ೨೫-೩೦ ವರ್ಷದೊಳಗಿನವರೇ ಅಧಿಕ. ಅವರು ಒಂದು ಬ್ಯಾಕ್‌ಪಾಕ್ ಅಥವಾ ಒಂದು ಸೂಟ್‌ಕೇಸ್ನಲ್ಲಿ ಒಂದಷ್ಟು ತುಂಬಿಕೊಂಡು ಹೊರಟಿರುವವರು. ಕುಟುಂಬಗಳನ್ನು ಹೊಂದಿರುವವರ ಸಂಖ್ಯೆ ಅಷ್ಟೊಂದಿಲ್ಲ. ಹಾಗೆಯೇ ಮಹಿಳೆಯರೂ, ಮಕ್ಕಳೂ ಸಾಕಷ್ಟು ಇಲ್ಲ ಎನ್ನಬಹುದು. ಸುಮಾರು ೨೫ರಿಂದ ೩೦ ಪ್ರತಿಶತ ಮಹಿಳೆಯರು ಎಂದರೂ ಅದು ಜಾಸ್ತಿ ಎನಿಸುತ್ತದೆ. ತೀರಾ ಬಡತನದಲ್ಲಿರುವವರಲ್ಲದೆ ಪರವಾಗಿಲ್ಲ ಎನ್ನುವ ಕೆಳ ಮಧ್ಯಮ ವರ್ಗದವರೂ ಹೊರಟುಬಿಟ್ಟಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಬಹುತೇಕರು ದಿನದ ಸಂಪಾದನೆಯಲ್ಲಿರುವವರೇ. ಅಥವಾ ಚಿಕ್ಕಪುಟ್ಟ ವ್ಯಾಪಾರ, ಸ್ವಯಂ ಉದ್ಯೋಗದವರೂ ಆಗಿದ್ದಾರೆ. ವಿದ್ಯಾರ್ಥಿಗಳೂ ಅಧಿಕ ಸಂಖ್ಯೆಯಲ್ಲಿರುವುದು ಕಂಡುಬಂದಿತು.

ಆ ಗಡಿಬಿಡಿಯಲ್ಲೂ ಕೆಲವರೊಡನೆ ಚಿಕ್ಕಪುಟ್ಟ ಮಾತುಗಳಿಗೆ ಸಿಕ್ಕವರನ್ನು ಹೊರಟುಬಿಟ್ಟಿರಲ್ಲಾ ಯಾಕೆ, ಎಂದರೆ ಅವರಲ್ಲಿ ಬಹುತೇಕರು ಮಾತನಾಡಲಿಲ್ಲ. ಸುಮ್ಮನೆ ನಕ್ಕವರು ಹೆಚ್ಚಿನವರು. ಮಾತನಾಡಿದವರು ಎಲ್ಲರೂ ಹೇಳಿದ್ದು, ‘ಭಯವಾಗುತ್ತಿದೆ!’

ಇದೊಂದು ಪದದಲ್ಲೇ ಪ್ರಾಯಶಃ ಅವರು ದೊಡ್ಡ ಕತೆ ಹೇಳುತ್ತಿದ್ದಾರೆ. ಭಯ ಯಾರಿಂದ, ಯಾವುದರಿಂದ, ಯಾಕೆ ಎಲ್ಲವೂ ಇದೆ. ರೋಗದ ಭಯಕ್ಕಿಂತಲೂ ಇಲ್ಲಿ ಬದುಕು ನಡೆಸುವುದು ಹೇಗೆ ಎನ್ನುವ ಭಯವೇ ದೊಡ್ಡದಾಗಿದೆ. ಅನೇಕರಿಗೆ ಕೂಲಿ/ಸಂಬಳ ಸಿಕ್ಕಿಲ್ಲ. ಕೆಲಸವಿಲ್ಲ. ಕೆಲಸಕ್ಕಿಟ್ಟುಕೊಂಡಿದ್ದವರೂ ಕೆಲಸದಿಂದ ತೆಗೆಯಲಾಗಿದೆ ಎಂದು ನೇರವಾಗಿ ಹೇಳಿಯೇಬಿಟ್ಟಿದ್ದಾರೆ. ತಾವೇ ಯಾವುದಾವುದೋ ವ್ಯಾಪಾರ ನಡೆಸಿದ್ದವರಿಗೆ ಎರಡು ತಿಂಗಳುಗಳ ಕಾಲ ಬಿಡಿಗಾಸು ಹುಟ್ಟಿಲ್ಲ. ನಾಳೆ ಹೇಗೆ ಎಂಬ ಯಾವ ಭರವಸೆಯೂ ಕಾಣುತ್ತಿಲ್ಲ. ಇಲ್ಲಿ ಬೇಡ. ನಮ್ಮವರೊಂದಿಗೆ ಹೇಗೋ ಏನೋ ಇದ್ದುಬಿಡುವುದು ಎಂದುಕೊಂಡು ಹೊರಟಿರುವವರೇ ಎಲ್ಲರೂ.

ಈಗ ಆದಾಯವೇ ಇಲ್ಲ, ಮನೆ ಬಾಡಿಗೆ ಕೊಡಲಿಲ್ಲ ಎಂದು ಹೋಗು ಎಂದರು, ಕೆಲಸ ಇಲ್ಲ ಏನು ಬೇಕಾದರೂ ಮಾಡಿಕೋ ಎಂದರು, ನಿಮ್ಮಂತಹವರಿಂದಲೇ ಈ ರೋಗ ಎಂದು ಕೂಗಾಡಿದರು, ನಾಳೆಗಳು ಇಲ್ಲಿ ಕಷ್ಟ ಎಂದು ಹೆದರಿಸಿದರು, ಇನ್ನೆಷ್ಟು ದಿನ ಅಂತ ಅವರಿವರ ಹತ್ತಿರ ಬೇಡಿ ತಿನ್ನುವುದು ಅದಕ್ಕೆ ಬೇಡ ಹೊರಟುಹೋಗೋಣ ಎಂದು ನಿರ್ಧರಿಸಿದ್ದೇವೆ ಎಂದರು. ಮತ್ತೆ ಬರುತ್ತೀರಾ ಎಂದು ಕೇಳುವ ಧೈರ್ಯ ಒಂದಿಬ್ಬರ ಹತ್ತಿರ ಮಾಡಿದೆ. ಒಬ್ಬಾತ ಓಹೋ ಖಂಡಿತ. ಎಲ್ಲ ಸರಿ ಹೋಗಲಿ ಎಂದರೆ ಇನ್ನೊಬ್ಬ, ಇಲ್ಲ. ಸತ್ತರೂ ಬರಲ್ಲ ಎಂದುಬಿಟ್ಟ. ಯಾಕೆ ಎಂದು ಕೇಳುವ ಎರಡನೇ ಧೈರ್ಯ ಮಾಡಲಿಲ್ಲ.

ರೈಲು ನಿಲ್ದಾಣಕ್ಕೆ ಬರುತ್ತಿರುವವರಲ್ಲಿ ಕೆಲವರು ವೃದ್ಧರೂ ಇದ್ದರು. ಅಂಗವಿಕಲತೆಯುಳ್ಳವರೂ ಇದ್ದರು. ಅಂತಹವರನ್ನು ಗಾಲಿಕುರ್ಚಿಯಲ್ಲಿ ಕರೆತರುವ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಮಾಡಿತ್ತು ಅಭಿನಂದನೀಯ.
ಈ ಮಧ್ಯ ಒಂದು ಪುಟ್ಟ ಹುಡುಗಿ ಭಾರವಾದ ಸೂಟ್‌ಕೇಸ್ ಎಳೆದುಕೊಂಡು ಬರುತ್ತಿದ್ದಳು. ಅವಳ ಬೆನ್ನಮೇಲೆ ಸ್ಕೂಲ್ ಬ್ಯಾಗ್. ಅವಳ ಕೈಗೆ ನಾವು ಇರಿಸಿದ್ದ ಆಹಾರದ ಚೀಲ ಕೊಡುವಾಗ ನನಗೇ ಕೊಂಚ ಕಸಿವಿಸಿಯಾಯಿತು.

ಆ ಭಾರದ ಜೊತೆಗೆ ನಮ್ಮ ಭಾರ. ಆ ಹೊತ್ತಿಗೆ ಅವಳ ಕೈಯಿಂದ ಸೂಟ್‌ಕೇಸ್‌ನ ಹಿಡಿ ಜಾರಿ ಕೆಳಗೆ ಬಿತ್ತು. ನಾನು ಅದನ್ನು ಎತ್ತಿ ನಿಲ್ದಾಣದ ಒಳಗಿನ ತನಕ ತರಲಾ ಎಂದು ಕೇಳಿದೆ. ಆಕೆ ಕನ್ನಡದಲ್ಲೇ ಆಯ್ತು ಅಂಕಲ್ ಎಂದಳು. ಒಂದೆರೆಡು ನಿಮಿಷದ ಮಾತುಕತೆಗೊಂದು ಅವಕಾಶ. ಅವಳು ಆರನೇ ಕ್ಲಾಸ್‌ನಲ್ಲಿ ಬೆಂಗಳೂರಿನ ಹೊರವಲಯದ ಬಡಾವಣೆಯೊಂದರಲ್ಲಿನ ಶಾಲೆಯಲ್ಲಿ ಓದುತ್ತಿದ್ದಾಳೆ. ತನ್ನೂರಿಗೆ ಹೋಗಿ ಅಲ್ಲಿಯೇ ಓದು ಮುಂದುವರೆಸುವುದೆಂದು ನಿರ್ಧಾರವಾಗಿದೆಯಂತೆ. ಕೆಲಸ ಮತ್ತೆ ಇಲ್ಲಿ ಸಿಗುವುದಾದರೆ ಅಪ್ಪ ಬರಬಹುದೇನೋ ಎಂದೂ ಹೇಳಿದಳು. ಅಷ್ಟೆ. ಅವಳನ್ನು ಅವಳ ಕುಟುಂಬದ ಗುಂಪಿನ ತನಕ ಸೇರಿಸಿದೆ.

‘ಥಾಂಕ್ಯೂ ಅಂಕಲ್’ ಎಂದ ಅವಳ ಕಣ್ಣುಗಳಲ್ಲಿ ಬೆಳಕು ಕಾಣಿಸಿತು. ಪ್ರಾಯಶಃ ಮುಖಗವುಸಿನ ಹಿಂದೆ ಅವಳದೊಂದು ಮುಗುಳ್ನಗು ಇತ್ತು.

ಇಷ್ಟೆಲ್ಲಾ ಹೇಳಿದ ಮೇಲೆ ‘ನನಗೆ ಈ ವಿಚಾರ ಕುರಿತು ಬರೆಯಲು ಇಷ್ಟವಿಲ್ಲ…!’

ಎಂದೇಕೆ ಹೆಸರು ಕೊಟ್ಟೆ ಎಂದು ನಿಮಗೆ ಆಶ್ಚರ್ಯವಾಗಿರಬಹುದಲ್ಲವೆ?

ತಮ್ಮ ನೆಲೆಗಳಿಗೆ ಹೊರಟಿರುವವರಿಗೆ ಸಹಾಯವಾಗಲೆಂದು ಒಂದಷ್ಟು ಆಹಾರ ಸಾಮಗ್ರಿಗಳು, ನೀರು, ಮುಖಗವಸು, ಇತ್ಯಾದಿಗಳನ್ನು ಸೇರಿಸಿ ಒಂದು ಚೀಲವನ್ನು ನಾವೊಂದಷ್ಟು ಜನ ಸಿದ್ಧಪಡಿಸುತ್ತಿದ್ದೇವೆ. ಒಂದಷ್ಟು ವ್ಯಕ್ತಿಗಳು, ಸಂಸ್ಥೆಗಳು, ಕಂಪನಿಗಳು ದೇಣಿಗೆ ನೀಡಿವೆ. ಅವುಗಳನ್ನೆಲ್ಲಾ ಚೀಲಕ್ಕೆ ಹಾಕಲು ಒಂದಷ್ಟು ಉತ್ಸಾಹೀ ಯುವಕರು, ಸ್ವಯಸೇವಾ ಸಂಸ್ಥೆಗಳ ಸಿಬ್ಬಂದಿ ಮುಂದಾಗಿದ್ದಾರೆ. ಸರ್ಕಾರದ ಹಿರಿಯ ಅಧಿಕಾರಿಗಳೂ ಕೂಡಾ ಜೊತೆಗೆ ಸೇರಿರುವುದು ಮತ್ತು ವ್ಯವಸ್ಥೆಗಳನ್ನು ಮಾಡುವುದಕ್ಕೆ ಯೋಜನೆಗಳನ್ನು ನಿರ್ಮಿಸಿರುವುದು, ಸರ್ಕಾರದ ಸಿಬ್ಬಂದಿಗಳನ್ನು ನೇಮಿಸಿರುವುದು, ವಾಹನಗಳನ್ನು ಒದಗಿಸಿರುವುದು, ಪ್ರಶಂಸನೀಯ.

ಇಂದಿನ ಅದ್ಭುತವಾಗಿರುವ ಮೊಬೈಲು ಫೋನು, ವಾಟ್ಸಅಪ್ ಮೊದಲಾದ ಸಂಪರ್ಕವನ್ನು ಮಾನವೀಯ ಕಾರ್ಯಕ್ಕೆ ದುಡಿಯಲು ಹಚ್ಚಿರುವುದೂ ಅಭಿನಂದನಾರ್ಹ. ನೂರಾರು ಜನರ ಜಾಲಕ್ಕೆ ಮಾಹಿತಿ ಒದಗಿಸುವುದು, ಬೇಡಿಕೆ ಸಲ್ಲಿಸುವುದು, ಪೂರೈಕೆಗಳನ್ನು ತಿಳಿಸುವುದು, ವಸ್ತುಗಳನ್ನು ತಲುಪಿಸಿರುವುದನ್ನು ಕುರಿತು ತಕ್ಷಣವೇ ದಾಖಲೆಗಳನ್ನು ಒದಗಿಸುವುದು ವ್ಯವಸ್ಥಿತಿವಾಗಿ ನಡೆದಿದೆ. ನನಗೆ ಕಂಡಂತೆ ಎಲ್ಲಿಯೂ ದುರುಪಯೋಗವಾಗಿಲ್ಲ.

ಇಂತಹ ವ್ಯವಸ್ಥೆ ಕೇವಲ ರೈಲ್ವೆ ನಿಲ್ದಾಣಗಳಿಗೆ ಮಾತ್ರ ಸೀಮಿತವಾಗಿಲ್ಲ. ಜನ ಎಲ್ಲೆಲ್ಲಿ ಆಹಾರ ದೊರಕದೆ ಕಷ್ಟದಲ್ಲಿದ್ದಾರೋ ಅಲ್ಲಿಗೆಲ್ಲಾ ಒದಗಿಸುವ ಕೆಲಸ ನಡೆದಿದೆ. ಬೆಂಗಳೂರು ಬೃಹತ್‌ ನಗರ ಪಾಲಿಕೆ ಇದರ ಮುಂಚೂಣಿಯಲ್ಲಿದೆ. ಆಹಾರ ಸಾಮಗ್ರಿಯನ್ನು ಒದಗಿಸುವುದೇ ಅಲ್ಲದೆ, ಸರ್ಕಾರದ ಕೆಲವು ಅಧಿಕಾರಿಗಳ ಉಮೇದಿನಿಂದಾಗಿ ಅನೇಕ ಕಂಪನಿಗಳಿಂದಲೂ ಆಹಾರ ವಸ್ತುಗಳನ್ನು ಪಡೆದು ನಗರದ ವಿವಿಧ ಭಾಗಗಳಲ್ಲಿರುವ ಸಂತ್ರಸ್ತರಿಗೆ ತಲುಪಿಸಲಾಗುತ್ತಿದೆ. ಹತ್ತಾರು ಸ್ವಯಂಸೇವಾ ಸಂಘಟನೆಗಳು ಎರೆಡು ತಿಂಗಳುಗಳಿಂದಲೂ ಅವಿರತವಾಗಿ ಶ್ರಮಿಸುತ್ತಿವೆ.
ಸರಿ. ಯಾವುದನ್ನು ಬರೆಯಲು ಇಷ್ಟವಿಲ್ಲ!

ಇಷ್ಟವಾಗಲಿಲ್ಲ… ಒಂದು ತರಹದಲ್ಲಿ ಬೇಸರವಾಯಿತು.

ರೈಲು ನಿಲ್ದಾಣದಲ್ಲಿ ನಾವೂ ನೂರಾರು ಚೀಲಗಳಲ್ಲಿ ಊರು ಬಿಟ್ಟು ಹೋಗುವವರಿಗೆ ಸಾಂತ್ವನ ನೀಡಲೋ ಎಂಬಂತೆ ಒಂದಷ್ಟು ವಸ್ತುಗಳನ್ನು ಇಟ್ಟುಕೊಂಡು ಇದ್ದೆವು. ರೈಲು ಹತ್ತುವ ಮೊದಲು ಅವುಗಳನ್ನು ಅವರಿಗೆ ಹಸ್ತಾಂತರಿಸುತ್ತಿದ್ದೆವು. ಬರುವ ಜನರನ್ನು ಅತ್ತ ಇತ್ತ ಹೋಗದೆ ನೇರವಾಗಿ ರೈಲಿನ ಹತ್ತಿರವೇ ಹೋಗಿ ಎಂದು ನಿಯಂತ್ರಿಸುತ್ತಿರುವವರು ಖಾಕಿಧಾರಿಗಳೇ. ಒಳ್ಳೆಯದು. ಆದರೆ ಬೇಗ ಬೇಗ ಎಂದು ಅವಸರಿಸುವುದು, ಆಗಾಗ್ಗೆ ಕೋಲಿನಿಂದ ನೆಲ ಕುಟ್ಟುವುದು ನನಗೆ ಕಸಿವಿಸಿಯಾಯಿತು. ಹೇಳಿಯೇಬಿಟ್ಟೆ. ಹಾಗೆ ಮಾಡಬೇಡಿ, ನಿಧಾನವೆಂದರೆ ಎಷ್ಟು ಮಹಾ ಒಂದೆರೆಡು ನಿಮಿಷಗಳಷ್ಟೆ ತಾನೆ. ಬರಲಿ. ಕೋಲು ಕುಟ್ಟಬೇಡಿ ಎಂದು ಗಟ್ಟಿಯಾಗಿಯೇ ಹೇಳಬೇಕಾಯಿತು.

ಇಷ್ಟರ ಮೇಲೆ ಕೆಲವು ಸಿಬ್ಬಂದಿಗಳು ಬಂದು ತಮಗೂ ನಾವು ಕೊಡುತ್ತಿದ್ದ ಚೀಲ ಬೇಕೆಂದು ಕೇಳಲಾರಂಭಿಸಿದರು. ಇಲ್ಲ ಇವು ಈ ಜನರಿಗೆಂದೇ ತಂದಿರುವುದು, ಅವರ ಸ್ಥಿತಿಯಲ್ಲಿ ನಾವಿಲ್ಲ. ನಾವು ಕೇಳಬಾರದು ಎಂದು ಒಂದಷ್ಟು ಜನರಿಗೆ ನವಿರಾಗಿ ಹೇಳಿದೆವು. ಆದರೂ ಬಿಡಲಿಲ್ಲ. ಆಯಿತೆಂದು ಒಬ್ಬರಿಗೆ ಕೊಟ್ಟದ್ದೇ ತಪ್ಪಾಯಿತು. ದಿಢೀರ್ ಎಂದು ಒಂದಷ್ಟು ಸಿಬ್ಬಂದಿಗಳು ಬಂದು ಗುಂಪುಗೂಡುವುದೇ. ನಮಗೂ ತಾನೆ ಎಂದು ಚೀಲಗಳಿಗೆ ಕೈ ಹಾಕುವುದೇ.

ಆಗ ನನ್ನ ಸಹನೆ ಕೊಂಚ ಒಡೆಯಿತು. ‘ನನಗೆ ನಾಚಿಕೆಯಾಗುತ್ತಿದೆ. ನೀವೆಲ್ಲರೂ ಸರ್ಕಾರದ ಸಿಬ್ಬಂದಿ. ನಿಮಗೂ ಸಂಬಳ ಬರುತ್ತದೆ. ಈ ಚಿಕ್ಕಪುಟ್ಟ ವಸ್ತುಗಳಿಗೆ ಏಕೆ ಆಸೆ ಪಡುತ್ತೀರಿ. ಕಷ್ಟದಲ್ಲಿರುವವರಿಗೆ ಆತಂಕದಲ್ಲಿರುವವರಿಗೆ ಕೊಡಲು ತಂದಿರುವುದು ಕಡಿಮೆಯಾದರೆ ನಮಗೆ ಇನ್ನಷ್ಟು ನಾಚಿಕೆಯಾಗುತ್ತದೆ. ಬೇಡ ಎಂದು ಕೇಳಿಕೊಳ್ಳುತ್ತೇನೆ’ ಎಂದು ಹೇಳಬೇಕಾಯಿತು. ಸುಮ್ಮನಾದರು. ಆದರೂ ಅವರಿವರಿಂದ ವಶೀಲಿ ಹಚ್ಚುವುದು, ಕೊನೆಗೆ ನಾವು ಹೊರಟಾಗ, ಏನೂ ಕೊಡದೆ ಹೋಗ್ತಿದ್ದೀರಾ, ಎಷ್ಟು ಜನರಿಗೆ ಬೇಜಾರಾಗಿದೆ ಗೊತ್ತಾ, ನಾಳೆ ಬನ್ನಿ, ಎಂದು ಒಂದು ಯಾವುದೋ ಸಂದೇಶ ಕೊಡುವ ಧಾಟಿಯಲ್ಲಿ ಹೇಳಿದ್ದು, ಬೇಸರವಾಯಿತು.

ಬರೆಯಬಾರದೆಂದುಕೊಂಡಿದ್ದೆ. ಕ್ಷಮಿಸಿ ಬರೆದು ಬಿಟ್ಟೆ.

‍ಲೇಖಕರು avadhi

June 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: